ಬಹಳ ಕಷ್ಟ ಈಗಿನ ಜೀವನ, ಒಂದೋ ಕೆಲಸದ ವಿಷಯಕ್ಕೆ ಏನು ಮಾಡಬೇಕು ಎಂದು ಕಾಲ ಕಳೆದರೆ ಉಳಿದ ಸಮಯದಲ್ಲಿ ಮೊಬೈಲ್ ಒಳಗೆ ಜೀವನ. ಯಾವುದಕ್ಕೂ ಬರವಿಲ್ಲ, ಎಲ್ಲವು ಬೇಕಾದಷ್ಟು ಇದೆ. ಕೆಲವು ವರ್ಷಗಳ ಹಿಂದೆ ಟೈಮ್ ಪಾಸ್ ಮಾಡಲು ಶುರುವಾದ ಹವ್ಯಾಸಗಳು ಈಗ ಕೆಲವರ ಜೀವನ ಕಟ್ಟಿಕೊಟ್ಟಿವೆ. ಆದರೆ ಇದನ್ನು ಮಾಡಲು ಹೋಗಿ ಸಾಕಷ್ಟು ಕಳೆದುಕೊಂಡವರು ಸಹ ಇದ್ದಾರೆ. ಯಾವುದನ್ನೂ ಹೀಗೆಯೇ ಆಗುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ, ಮೊದಲೆಲ್ಲ ವರ್ಷಗಟ್ಟಲೆ ಪ್ರಚಾರ, ಭಾಷಣ, ಓದು ಹೀಗೆ ಸಾಕಷ್ಟು ಮೂಲಗಳಿಂದ ಮಾಹಿತಿ ಕಲೆಹಾಕುವ ಅವಶ್ಯಕತೆ ಇತ್ತು. ಆದರೆ ಈಗ ಎಲ್ಲ ಮಾಹಿತಿಗೂ ಮೊಬೈಲ್ ಒಳಗೆ ಬರುವ ಅವಶ್ಯಕತೆ ಇದೆ. ಇದರಿಂದ ಮಾಹಿತಿ ಜಗತ್ತನ್ನು ಕೆಲವೇ ಕೆಲವು ಸಂಸ್ಥೆಗಳು ನಿಯಂತ್ರಿಸಿ, ನಿಮಷಕ್ಕೆ ಕೋಟ್ಯಂತರ ರೂಪಾಯಿಗಳ ಸಂಪಾದನೆ ಆಗುತ್ತಿದೆ. ಆದರೆ, ಸೇವೆಗಳ ಬಳಕೆದಾರರಿಗೆ ಇದರ ಬಗ್ಗೆ ಪೂರ್ತಿ ಮಾಹಿತಿ ಇಲ್ಲ. ಹೆಚ್ಚಿನ ಜನರಿಗೆ ತಮ್ಮ ಮಾಹಿತಿ ಹೇಗೆಲ್ಲಾ ಮಾರಾಟವಾಗುತ್ತಿದೆ ಎನ್ನುವ ಅರಿವು ಇಲ್ಲ. ನಮ್ಮ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ನಮಗೆ ಸಹ ಏನೆಂದು ಅರ್ಥವಾಗದ ಕ್ಲಿಷ್ಟ ಮಾಹಿತಿಯನ್ನು ನಮ್ಮ ಮೊಬೈಲ್ ಹೇಗೆ ಬಳಸುತ್ತೇವೆ ಎನ್ನುವ ಆಧಾರದ ಮೇಲೆ ಕಲೆಹಾಕಲಾಗುತ್ತದೆ.
ತಂತ್ರಜ್ಞಾನ ಸಾಗುತ್ತಿರುವ ಹಾದಿಯೇ ಅದು, ಜನರ ಜೀವನ ಸುಖಮಯವಾಗಿಸುವ ಯಾವುದೇ ಸೇವೆ ಹೆಚ್ಚು ಜನರನ್ನು ಆಕರ್ಷಿಸುತ್ತದೆ. ಅದರ ಮೂಲಕ ಜಾಹಿರಾತು ನೀಡಿ ಹಣ ಸಂಪಾದನೆ ಮಾಡುವುದು, ಹಣ ಪಡೆದು ಅವರಿಗೆ ಬೇಕಾದ ಸೇವೆಗಳನ್ನು ನೀಡುವುದು, ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಬೇಕಾದವರಿಗೆ ಮಾರಾಟ ಮಾಡುವುದು ಹೀಗೆ ಹತ್ತು ಹಲವಾರು ದಾರಿಗಳಿವೆ. ಈ ಜಗತ್ತಿನಲ್ಲಿ ಯಾವುದು ಕೂಡ ಉಚಿತವಾಗಿ ಸಿಗುತ್ತಿಲ್ಲ, ಪ್ರತಿಯೊಂದಕ್ಕೂ ನಾವು ಒಂದಲ್ಲ ಒಂದು ರೀತಿಯಲ್ಲಿ ಬೆಲೆ ಪಾವತಿಸಿದ್ದೇವೆ. ನಮಗೆ ಉಚಿತ ಎಂದು ಸಿಗುವ ಸೇವೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಅರಿವಿನ ಕೊರತೆ ಹೆಚ್ಚಿನ ಜನರಿಗಿದೆ ಎಂದು ಹೇಳಬಹುದು. ಯಾವುದೇ ಒಂದು ಅಪ್ಲಿಕೇಶನ್, ವೆಬ್ಸೈಟ್ ಅಥವಾ ಸಾಫ್ಟ್ವೇರ್ ಆಗಲಿ ಅದು ಜನರಿಂದಲೇ ಬೆಳೆಯುವುದು. ಒಂದು ಹಂತದಲ್ಲಿ ಉದ್ಯಮಿಗಳ ಬಂಡವಾಳದ ಸಹಾಯದ ಅವಶ್ಯಕತೆ ಇರುತ್ತದೆ, ಆದರೆ ಜನರಿಗೆ ಉಪಯೋಗವಿಲ್ಲದೆ ಯಾವುದರಿಂದಲೂ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ದಿನದಿಂದ ದಿನಕ್ಕೆ ನಾವು ಇಂಟರ್ನೆಟ್ ಉಪಯೋಗಿಸುವ ಬದಲು, ಇಂಟರ್ನೆಟ್ ನಮ್ಮನ್ನು ಉಪಯೋಗಿಸಿಕೊಳ್ಳುತ್ತಾ ಹೋಗುತ್ತಿದೆ.
ಇದು ಸಾಕಷ್ಟು ಸಮಸ್ಯೆಗಳನ್ನು ದಿನನಿತ್ಯದ ಜೀವನಕ್ಕೆ ತಂದೊಡ್ಡಿದೆ. ಮಾನಸಿಕ ನೆಮ್ಮದಿ ಒಂದೆಡೆ ಹಾಳಾಗುತ್ತಿದ್ದರೆ, ಇನ್ನೊಂದೆಡೆ ಹೊರ ಜಗತ್ತನ್ನು ಸಂಪೂರ್ಣವಾಗಿ ಕೈಬಿಟ್ಟು ನಮ್ಮದೇ ಲೋಕ ಮಾಡಿಕೊಂಡು ಕಾಲ ಕಳೆಯಬಹುದು. ಹೀಗಾಗಿ ಮೊಬೈಲ್/ಲ್ಯಾಪ್ಟಾಪ್/ಟ್ಯಾಬ್ ಒಂದು ರೀತಿಯ ನಮ್ಮ ದಿನದ ೫೦% ಸಮಯ ತೆಗೆದುಕೊಳ್ಳುತ್ತಿದೆ ಎಂದರೆ ನಾವೆಷ್ಟು ಅವುಗಳಿಗೆ ಒಗ್ಗಿ ಹೋಗಿದ್ದೇವೆ ಎಂದೆನಿಸುತ್ತದೆ. ಸಮಯಕ್ಕೆ ಸರಿಯಾಗಿ ಹಸಿವಾಗುವಂತೆ ಮೊಬೈಲ್ ಅಲ್ಲಿ ದಿನವೂ ನೋಡುವಂತಹದ್ದು ಏನೋ ನೋಡಿಲ್ಲ ಎಂದರೆ ಕಸಿವಿಸಿ ಆರಂಭವಾಗುತ್ತದೆ. ಕೆಲವೊಮ್ಮೆ ನಾವು ಯಾವುದನ್ನೂ ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂಬಂತಹ ಯೋಚನೆಗಳು ಬರುತ್ತವೆ. ನಮ್ಮ ನಿಜ ಜೀವನದಲ್ಲಿ ಇಲ್ಲದ ಯಾವುದೊ ಒಂದು ಅಂಶವನ್ನು ಸಾಮಾಜಿಕ ಜಾಲತಾಣಗಳು ನಮಗೆ ನೀಡುತ್ತವೆ. ಕೆಲವೊಮ್ಮೆ ಜೀವನ ಬೇಸರವಾಗಿ ಆ ಜಗತ್ತೇ ಚೆನ್ನಾಗಿದೆ ಅನ್ನಿಸುತ್ತದೆ. ಕೆಲವೊಮ್ಮೆ ಇಂತಹ ವಿಚಿತ್ರ ಹಾಗು ಕೆಟ್ಟ ಮನಸ್ಥಿತಿಯ ಜನರು ಇದ್ದಾರಲ್ಲ ಎಂದು ಅನಿಸುತ್ತದೆ. ಸಾಮಾಜಿಕ ಜಾಲತಾಣಗಳನ್ನು ಸೃಷ್ಠಿ ಮಾಡಿರುವ ಉದ್ದೇಶವೇ ಹೆಚ್ಚು ಜನರನ್ನು ಸೆಳೆಯುವುದಾದಾಗ ಇತರೆ ಅಪ್ಲಿಕೇಶನ್ಗಳಿಗೆ ಅದೇ ಮಟ್ಟದ ಪೈಪೋಟಿ ನೀಡುವ ಅಗತ್ಯವಿರುತ್ತದೆ.
ಹೆಚ್ಚು ಸಫಲವಾಗುವ ಸೇವೆಗಳನ್ನು ಗಮನಿಸಿದರೆ ಅವುಗಳಲ್ಲಿ ಹೆಚ್ಚಿನವು ನಮ್ಮ ಜೀವನಕ್ಕೆ ಅವಶ್ಯಕವಾದ ಕೆಲಸವನ್ನು ಸುಲಭಗೊಳಿಸುವ ಸೇವೆಗಳು ಆಗಿರುತ್ತವೆ. ಜನರ ಆಲಸ್ಯ ಸಹ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳ ಬಂಡವಾಳವಾಗುತ್ತಿದೆ. ಇವುಗಳನ್ನು ನಿಯಂತ್ರಿಸುವ ಆದರೆ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕದ ಬಲಿಷ್ಠ ಕಾನೂನುಗಳನ್ನು ಜಾರಿಗೆ ತರುವ ಅವಶ್ಯಕತೆ ಪ್ರಸ್ತುತ ಜಗತ್ತಿಗೆ ಇದೆ. ನಾವು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ಇತರೆ ವೆಬ್ಸೈಟ್ಗಳಲ್ಲಿ ನಮ್ಮ ಅನುಮತಿಯಿಲ್ಲದೆ ಬಳಸುತ್ತಿರುವುದು ಬಹಳ ತೊಂದರೆಗೆ ಗುರಿಮಾಡಿದೆ. ನಮ್ಮ ವೈಯಕ್ತಿಕ ಜೀವನದ ಚಿತ್ರಗಳನ್ನು ಹಾಕುವ ಮುಂಚೆ ನೂರಾರು ಬಾರಿ ಯೋಚಿಸುವಂತಾಗಿದೆ. ನಮ್ಮ ಯಾವುದೊ ಚಿತ್ರ ನಮಗೆ ಗೊತ್ತಿಲ್ಲದೇ ಎಲ್ಲಿಯೋ ಬಳಕೆಯಾಗುವುದು ಎಂದರೆ ಅದು ಯಾವೆಲ್ಲ ರೀತಿಯಲ್ಲಿ ಬಳಕೆಯಾಗಬಹುದು ಎನ್ನುವುದು ನಮಗೆ ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ.
ದಿನ ಕಳೆದಂತೆ ಗುಂಪುಗಾರಿಕೆ ಸಹ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಜನರನ್ನು ಒಂದುಗೂಡಿಸಲು ಇನ್ನೊಂದು ಗುಂಪಿನ ಬಗ್ಗೆ ಭಯವನ್ನು ಮನಸ್ಸಿನಲ್ಲಿ ಬಿತ್ತಲಾಗುತ್ತಿದೆ. ಸರಿ ತಪ್ಪು ಎನ್ನುವ ಯೋಚನೆಗಳಿಗಿಂತ ನಮ್ಮವರು, ನಮ್ಮನ್ನು ವಿರೋಧಿಸುವವರು ಎನ್ನುವ ನಂಬಿಕೆ ದಿನಕಳೆದಂತೆ ಗುಂಪುಗಾರಿಕೆಯನ್ನು ಬೆಳೆಸುತ್ತಿದೆ. ರಾಜಕೀಯದ ಫಲಿತಾಂಶದ ಮೇಲೆ ಪ್ರಭಾವ ಬೀರುವ ಮತ್ತು ನಮ್ಮ ಸಮಾಜದ ಜನರಲ್ಲಿಯೇ ಒಡಕನ್ನು ಮೂಡಿಸುವ ಲೇಖನಗಳು, ವಿಡಿಯೋಗಳು, ಭಾಷಣಗಳು ಹೆಚ್ಚು ಪ್ರಚಾರ ಪಡೆಯುತ್ತಿರುವುದು ಸಮಾಜಕ್ಕೆ ಇನ್ನಿಲ್ಲದ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಸಾಮಾನ್ಯ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ನೀಯತ್ತಿನಿಂದ ಜೀವನ ನಡೆಸುವ ಸಾಮಾನ್ಯ ಜನರು ಸಾಮಾಜಿಕ ಜಾಲತಾಣಗಳಿಂದ ಆರಂಭವಾಗುವ ತೊಂದರೆಗಳಿಂದ ಕಷ್ಟ ಎದುರಿಸುವಂತಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವು ಕಳೆದುಕೊಂಡಿರುವವರನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಹಲವು ಸಂದರ್ಭಗಳಲ್ಲಿ ತಮ್ಮ ಬಗ್ಗೆ ತಮಗೆ ತಿಳಿದಿರುವುದು ಸಹ ಕಷ್ಟ. ಎಲ್ಲವನ್ನು ಒಂದೇ ಬಾರಿಗೆ ಸರಿಪಡಿಸಲು ಸಾಧ್ಯವಿಲ್ಲ, ಅದಕ್ಕೆ ಜೀವನದಲ್ಲಿ ಸಾಕಷ್ಟು ತಾಳ್ಮೆ ಮತ್ತು ಪರಿಶ್ರಮದ ಅವಶ್ಯಕತೆ ಇದೆ. ಇದನ್ನು ನಾವು ಮರೆಯಬಾರದು.
***
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ