ಅಪ್ಪು ಅಮರ

ಯಾರು ಸಹ ಊಹಿಸಲಾಗದ ಆಘಾತಕಾರಿ ಸುದ್ಧಿಯೊಂದು ಸಿಡಿಲಿನಂತೆ ಜಗತ್ತಿಗೆ ಅಪ್ಪಳಿಸಿತು. ಯಾವುದೇ ಸಿನಿಮಾ ವ್ಯಕ್ತಿಗಳ ಬಗ್ಗೆ ಅಷ್ಟೊಂದು ಹಚ್ಚಿಕೊಳ್ಳುವ ಮನಸ್ಸು ನನ್ನದಲ್ಲ. ಆದರೂ ನಿನ್ನೆ ಮೊದಲ ಬಾರಿ ಟ್ವಿಟ್ಟರ್ ಅಲ್ಲಿ ಪುನೀತ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದಾಗಲಿಂದ ಮೊಬೈಲ್ ಕೈಯಲ್ಲಿ ಹಿಡಿದು, ಕಂಪ್ಯೂಟರ್ ಅಲ್ಲಿ ನಾಲ್ಕೈದು ಟ್ಯಾಬ್ ಅಲ್ಲಿ ಲೈವ್ ಅಪ್ಡೇಟ್ಗಳಿಗಾಗಿ ನೋಡುತ್ತಲೇ ಇದ್ದೆ. ಕೊನೆಗೂ ದೇವರು ಕರುಣೆ ತೋರಿಸಲೇ ಇಲ್ಲ. ಮಾಧ್ಯಮಗಳಲ್ಲಿ ಅವರು ತೀರಿಕೊಂಡ ಸುದ್ಧಿ ಎಲ್ಲರಿಗು ತಿಳಿಯುತ್ತಿದ್ದಂತೆ ಅಪ್ಪುವಿನ ಹೆಸರು ಕೇಳಿದ್ದವರ ಮನಸ್ಸಿನಲ್ಲಿ ಸಹ ಅರಗಿಸಿಕೊಳ್ಳಲು ಸಾಧ್ಯವಾಗದ ನೋವು ಉಂಟಾಯಿತು. ಇದು ಅವರ ವ್ಯಕ್ತಿತ್ವ. ಬಹಳ ಚಿಕ್ಕ ವಯಸ್ಸಿನಿಂದ ಸಿನಿಮಾ ರಂಗದಲ್ಲಿ ತೊಡಗಿಕೊಂಡು, ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದು, ಎಂದಿಗೂ ಮರೆಯಲಾಗದ ಸೂಪರ್ ಹಿಟ್ ಚಲನಚಿತ್ರಗಳನ್ನು ಕೊಟ್ಟಂತಹ ಅದ್ಭುತ ಪ್ರತಿಭೆಯೊಂದನ್ನು ಇಷ್ಟು ಎಳೆಯ ವಯಸ್ಸಿನಲ್ಲಿ ಕಳೆದುಕೊಂಡಿದ್ದು ಮನೆಯ ಮಕ್ಕಳನ್ನು ಕಳೆದುಕೊಂಡಂತಾಗಿದೆ. 


ಸಿನಿಮಾ ಎಂದರೆ ಏನೆಂದು ಸರಿಯಾಗಿ ಗೊತ್ತಿಲ್ಲದ ವಯಸ್ಸಿನಿಂದಲೂ ಅಪ್ಪುವನ್ನು ನೋಡಿಕೊಂಡು ಅವರು ಬೆಳೆದು ಬಂದ ರೀತಿಯನ್ನು ಕಂಡಿರುವುದೇ ಅವರನ್ನು ನಮ್ಮವನಾಗಿಸಿದ್ದು. ಎಂತಹ ಮೇರು ವ್ಯಕ್ತಿತ್ವ ಅಪ್ಪುದು, ತಂದೆ ಅಷ್ಟು ದೊಡ್ಡ ನಟರಾಗಿದ್ದರು ಸಹ ಅವರ ಹೆಸರು ಹಾಗು ಜೀವನದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಕಷ್ಟು ಯುವ ಪ್ರತಿಭೆಗಳಿಗೆ, ಹೊಸ ರೀತಿಯ ಪ್ರಯೋಗಾತ್ಮಕ ಪ್ರಯತ್ನಗಳಿಗೆ ಯಾವುದೇ ಹಿಂಜರಿಕೆಯಿಲ್ಲದೆ ಸೂಕ್ತ ಮಾರ್ಗದರ್ಶನ ಹಾಗು ಬೆಂಬಲ ನೀಡಿ ಅಂದಿನಿಂದ ಇಂದಿನವರೆಗೂ ಕನ್ನಡ ಸಿನಿಮಾ ಲೋಕಕ್ಕೆ ಮಾತ್ರವಲ್ಲದೆ ಸಮಾಜದ ಸಾಕಷ್ಟು ವರ್ಗಗಳಿಗೆ ಸಹಾಯ ಮಾಡಿದ ಮರೆಯಲಾಗದ ನೆನಪುಗಳನ್ನು ಬಿಟ್ಟು ಹೋಗಿರುವ ಮರೆಯಲಾಗದ ಮಾಣಿಕ್ಯ ನಮ್ಮ ಅಪ್ಪು. 


ವೃದ್ಧಾಶ್ರಮ, ಗೋಶಾಲೆ, ಬಡ ಮಕ್ಕಳಿಗೆ ಶಿಕ್ಷಣ, ಸಾಮಾಜಿಕ ಕಳಕಳಿಯ ಜಾಹೀರಾತುಗಳಲ್ಲಿ ಯಾವುದೇ ಹಣ ಪಡೆಯದೆ ಮಾಡಿರುವ ಉತ್ತಮ ಕೆಲಸಗಳು ಸಾವಿರಾರು. ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದ ಹಿರಿಯರಿಗೆ ಕೂಡ ಪುನೀತ್ ರಾಜಕುಮಾರ್ ಎಂದರೆ ಪ್ರೀತಿಯ ಮಗು ಅಪ್ಪು. ಕೇವಲ ಸಿನೆಮಾ ರಂಗಕ್ಕೆ ಮಾತ್ರವಲ್ಲದೆ ಯೂಟ್ಯೂಬ್ ಅಲ್ಲಿ ಹೊಸತಾಗಿ ಬೆಳೆಯಲು ಪ್ರಯತ್ನಿಸುತ್ತಿದ್ದ ಅದೆಷ್ಟೋ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಮೆಚ್ಚುಗೆಯ ಮಾತುಗಳನ್ನು ಆಡಿ, ಎಲ್ಲರು ನಮ್ಮವರು ಎಂಬ ನಿಷ್ಕಲ್ಮಶ ಪ್ರೀತಿ ನೀಡುತ್ತಿದ್ದ ಅಪ್ಪುವಿನ ಅಪ್ಪುಗೆಯಲ್ಲಿ ಜೀವನಕ್ಕೊಂದು ಗುರಿ ಕಂಡುಕೊಂಡವರು ಲಕ್ಷಾಂತರ ಮಂದಿಯಿದ್ದಾರೆ. ಓಟಿಟಿಯಂತಹ ಡಿಜಿಟಲ್ ಪ್ಲಾಟ್ಫಾರ್ಮ್ ಅಲ್ಲಿ ಸಹ ಹೊಸತನದಿಂದ ಕೂಡಿದ, ಅಲ್ಲಿನ ಪ್ರೇಕ್ಷಕ ವರ್ಗಕ್ಕೆ ಸರಿಹೊಂದುವ ಉತ್ತಮ ಸಿನೆಮಾಗಳಿಗೆ ಪ್ರೊಡ್ಯೂಸರ್ ಆಗಿ ಸಹ ಬೆಂಬಲ ನೀಡಿದ್ದು ಪುನೀತ್ ಅವರು ಎಂತಹ ಮುಂದಾಲೋಚನೆ ಇರುವ ವ್ಯಕ್ತಿ ಎಂಬುದನ್ನು ಸಾರಿ ಹೇಳುತ್ತದೆ. 


ಯಾವುದೇ ರಾಜಕೀಯ ನಿಲುವಿನ ಕಡೆಗೆ ವಾಲದೆ, ಜನರು ನಮಗೆ ನೀಡಿರುವ ಪ್ರೀತಿ ಅಭಿಮಾನಕ್ಕೆ ಸರಿಯಾಗಿ ನಮ್ಮಿಂದಲೂ ಕೈಲಾದಷ್ಟು ಪ್ರೀತಿ ಹಾಗು ಬಾಂಧವ್ಯ ಹಂಚೋಣ ಎಂಬ ನಿಲುವು ಹೊಂದಿದ್ದವರು ನಮ್ಮ ಅಪ್ಪು. ಎಲ್ಲಿಯೇ ಹೋದರು ಸಹ, ಯಾವುದೇ ಅಂಜಿಕೆಯಿಲ್ಲದೆ ಎಲ್ಲರೊಳಗೊಂದಾಗಿ ಖುಷಿ ಹಂಚುತ್ತಿದ್ದ ಮುದ್ದು ಮನಸ್ಸಿನ ಮಗು ಅಪ್ಪು. ಒಂದೇ ಒಂದು ಸಣ್ಣ ಕೋಪ ಮನಸ್ತಾಪಗಳ ಉದಾಹರಣೆ ಕೂಡ ಇಲ್ಲವೆಂದೇ ಅನಿಸುತ್ತದೆ. ಸಾಮಾನ್ಯ ವ್ಯಕ್ತಿಗಳ ಜೊತೆಗೂ ಸಹ ಅಣ್ಣ ತಮ್ಮಂದರಂತೆ ನಡೆದುಕೊಳ್ಳುವ ಮನಸ್ಸನ್ನು ಮರೆಯಲು ಎಂದಿಗೂ ಸಾಧ್ಯವಿಲ್ಲ. 


ಅಪ್ಪುವಿನ ಸಿನಿಮಾಗಳನ್ನು ಕಪ್ಪು ಬಿಳುಪು ಟಿವಿಯಲ್ಲಿ, ಡಿವಿಡಿ ಪ್ಲೇಯರ್ ಮೂಲಕ, ನಂತರ ಕಲರ್ ಟಿವಿಯಲ್ಲಿ, ಇತ್ತೀಚಿಗೆ ಮೊಬೈಲ್ ಅಲ್ಲಿ ನೋಡಿ ಖುಷಿ ಪಟ್ಟ ಮನಸ್ಸು ನಂದು. ಪೃಥ್ವಿ ಸಿನಿಮಾ ನೋಡಿದಾಗ ನನಗೆ ಬಹಳ ಖುಷಿಯಾಗಿತ್ತು. ಸಾಮಾನ್ಯ ಜ್ಞಾನದ ಬಗ್ಗೆ ಒಲವು ಇನ್ನಷ್ಟು ಹೆಚ್ಚಾಗಿದ್ದು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನೋಡಲು ಆರಂಭಿಸಿದಾಗ. ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಬರುತ್ತಿದ್ದಾಗ, ನಾನೂ ಕೂಡ ಈ ರೀತಿ ಒಮ್ಮೆಯಾದರೂ ಅವರು ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂಬ ಅಸೆ ಕೂಡ ಬಹಳಷ್ಟಿತ್ತು. ಆ ಆಸೆ ಇಂದು ನನ್ನ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಕುಳಿತು ಅಳುತ್ತಿದೆ. ಒಂದು ಬಾರಿಯಾದರು ಭೇಟಿಯಾಗಬೇಕು ಎನ್ನುವ ಆಸೆ ನನಗೆ ಇದ್ದಿದ್ದು ಪುನೀತ್ ಅವರ ಮೇಲೆ ಮಾತ್ರ. ಈ ಬಾರಿಯ ಹುಟ್ಟುಹಬ್ಬಕ್ಕೆ ಇನ್ಸ್ಟಾಗ್ರಾಮ್ ಅಲ್ಲಿ ಅವರಿಗೆ ಇನ್ಬಾಕ್ಸ್ ಅಲ್ಲಿ ಶುಭಾಶಯ ಕಳುಹಿಸಿದ್ದೆ. ಕಳೆದ ಒಂದು ತಿಂಗಳಲ್ಲಿ ಪರಮಾತ್ಮ ಸಿನೆಮಾವನ್ನು ಎರಡು ಬಾರಿ ನೋಡಿದ್ದೆ. ಒಬ್ಬ ವ್ಯಕ್ತಿಯ ಮೇಲೆ ಯಾಕಿಷ್ಟು ಪ್ರೀತಿ ಗೌರವ ಮೂಡುತ್ತಿದೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಒಮ್ಮೊಮ್ಮೆ ಬರುತ್ತಿತ್ತು. ಇತ್ತೀಚಿಗೆ ರಾಜಕುಮಾರ್ ಬಗ್ಗೆ ಹಾಡಿದ್ದ ಹಾಡನ್ನು ಅದೆಷ್ಟು ಬಾರಿ ಕೇಳಿದ್ದೆ ನನ್ನ ಅರಿವಿಗೆ ಬಾರದೆ. 

ಸಿನೆಮಾ ಲೋಕದ ಹೊರತಾಗಿ ಅವರು ತಮ್ಮ ಜೀವನವನ್ನು ಸಾಗಿಸಿದ ರೀತಿ ಪ್ರತಿಯೊಬ್ಬರಿಗೂ ಮಾದರಿ. ಎಲ್ಲ ಹೊಸ ಕನ್ನಡ ಸಿನಿಮಾಗಳಿಗೆ ಶುಭ ಹಾರೈಸಿ, ಜೊತೆಯಾಗಿ ನಿಂತು, ತಮ್ಮ ವರ್ಕೌಟ್ ವಿಡಿಯೋಗಳ ಮೂಲಕ ಜನರನ್ನು ಹುರಿದುಂಬಿಸುತ್ತಿದ್ದ ಗುಣವನ್ನು ಯಾರು ಸಹ ಮರೆಯಲು ಸಾಧ್ಯವಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೆಲ್ಲಾ ಸಾಧನೆ ಮಾಡಿ, ತಮ್ಮ ಜೀವನದಲ್ಲಿ ಬಂದವರಿಗೆ ಪ್ರೀತಿಯ ಮಳೆ ಸುರಿದು, ನಾಡಿಗೆ ನೀಡಿದ ಕೊಡುಗೆ ಅಜರಾಮರ. ಮನೆ ಮಕ್ಕಳನ್ನು ಕಳೆದುಕೊಂಡಂತೆ ದುಃಖ ಎಲ್ಲರನ್ನು ಆವರಿಸಿದೆ, ಊಟ ಸೇರಲ್ಲ, ನಿದ್ದೆ ಬರ್ತಿಲ್ಲ, ಈ ಸುದ್ಧಿಯನ್ನು ಅರಗಿಸಿಕೊಳ್ಳುವ ಶಕ್ತಿ ಆ ದಿವ್ಯ ಚೇತನವಾದ ಅಪ್ಪುವೇ ನಮಗೆ ನೀಡಬೇಕು. ಇಂತಹ ಕಠಿಣ ಸಂದರ್ಭದಲ್ಲಿಯೂ ರಾಘಣ್ಣ ಆಡಿದ ಮಾತುಗಳು ಕರುಳು ಕಿವುಚಿದಂತಿವೆ. 


ಇದು ಬದುಕಿಗೆ ಒಂದು ಪಾಠ, ಇರುವಷ್ಟು ದಿನ ಒಳ್ಳೆಯದನ್ನೇ ಮಾಡಿ, ಸರ್ವರಿಗೂ ಒಳ್ಳೆಯದನ್ನೇ ಬಯಸಿ, ಪ್ರೀತಿಯಿಂದ ಜಗತ್ತನ್ನು ಅಪ್ಪಿಕೊಂಡರೆ ಜಗತ್ತು ನಮ್ಮನ್ನು ಸಹ ಹಾಗೆಯೇ ಬೆಳೆಸಿ ಹರಸುತ್ತದೆ. ಇನ್ನೆಂದು ಸಹ ನನ್ನ ಜಗತ್ತು ಮೊದಲಿನಂತಿರುವುದಿಲ್ಲ. ಬೆಟ್ಟದ ಹೂವನ್ನು ಕಳೆದುಕೊಂಡು ಜಗತ್ತು ತನ್ನ ಸೊಬಗನ್ನು ಕಳೆದುಕೊಂಡಿದೆ. ಹೆಚ್ಚೇನು ಬರೆಯಬೇಕೆಂದು ಪದಗಳು ಹೊಳೆಯುತ್ತಿಲ್ಲ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕರುನಾಡಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ. ನೆನಪುಗಳಲ್ಲಿ ನಮ್ಮ ಅಪ್ಪು ಎಂದೆಂದಿಗೂ ಜೀವಂತ.  

ಕಾಮೆಂಟ್‌ಗಳು

- Follow us on

- Google Search