ಕಥೆ: ಮದುವೆ

ಮನೆಯವರ ನಿರ್ಧಾರದ ಪ್ರಕಾರ ಗಮನ ಈಗ ಮದುವೆಯ ವಯಸ್ಸಿಗೆ ಬಂದಿದ್ದಾಳೆ. ಕೂತಲ್ಲಿ ನಿಂತಲ್ಲಿ ಮನೆಯವರು ಅದನ್ನೇ ಮಾತನಾಡುತ್ತಿದ್ದಾರೆ. ಮನೆಯವರ ಮೌನವೂ ಸಹ ಮದುವೆಯ ಓಲಗವನ್ನು ಕೇಳುವಂತೆ ಮಾಡುತ್ತಿದೆ. ಮದುವೆಯಾಗಲು ಗಮನಾಳಿಗೂ ಇಷ್ಟವಿದೆ, ರೂಪವತಿಯು ಹೌದು, ಆದರೆ ಹಿರಿಯರು ಹೇಳಿದಂತೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಈ ಕಾಲ ಕೂಡಿಬಂದು ಮದುವೆಯೊಂದು ಆಗುವ ತನಕ ಮನೆಯವರೆಲ್ಲರೂ ಅದೇನೋ ಭಾರ ಹೊತ್ತಂತೆ ಸದಾ ಚಿಂತೆಯಲ್ಲಿ ಮುಳುಗಿರುತ್ತಾರೆ. ಹುಡುಗಿ ನೋಡಲು ಬಂದವರ ಆತಿಥ್ಯ ಮಾಡುವುದರಲ್ಲೇ ವಾರಗಳು ಕಳೆದು ಹೋಗುತ್ತಿವೆ. 

ಗಮನಾಳ ಅಕ್ಕ ನಮನ ಪ್ರೀತಿಸಿ ಮದುವೆಯಾಗಿ ಹಾಯಾಗಿದ್ದಾಳೆ. ಅವಳ ಮೇಲಿನ ಕೋಪವನ್ನೆಲ್ಲ ಗಮನಾಳ ಮದುವೆ ಅದ್ಧೂರಿಯಾಗಿ ಮಾಡಿ ಕಡಿಮೆ ಮಾಡಿಕೊಳ್ಳುವ ಕಿಚ್ಚು ಅಪ್ಪ ಅಮ್ಮನಲ್ಲಿ ಎಂದೋ ಮೂಡಿದೆ. ಕಾಮರ್ಸ್ ಅಲ್ಲಿ ಡಿಗ್ರಿ ಮುಗಿಸಿರುವ ಗಮನ ಸ್ವಲ್ಪ ಸಮಯ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಳು. ಆ ಬ್ಯಾಂಕಿನ ಉದ್ಯೋಗಿಯೊಬ್ಬ ಗ್ರಾಹಕರ ಹಣದೊಂದಿಗೆ ಪರಾರಿಯಾದಾಗ, ಗ್ರಾಹಕರು ಬ್ಯಾಂಕಿನ ಮೇಲೆ ದಾಳಿ ಮಾಡಲು ಮುಂದಾದಾಗ ಮನೆಯವರೇ ಬುದ್ಧಿ ಹೇಳಿ ಕೆಲಸ ಬಿಡಿಸಿದ್ದರು. ಬಹುಷಃ ಆ ಕೆಲಸದಲ್ಲೇ ಇದ್ದಿದ್ದರೆ ಇಷ್ಟು ಹೊತ್ತಿಗೆ ಮದುವೆಯಾಗಿರುತಿತ್ತು ಎಂಬ ಆಲೋಚನೆಯು ಸಹ ಒಮ್ಮೊಮ್ಮೆ ಮೂಡುತ್ತದೆ. ಬ್ಯಾಂಕಿನಲ್ಲಿ ಕೆಲಸ ಮಾಡುವುದರಿಂದ ಅಲ್ಲಿಗೆ ಬರುವ ಗ್ರಾಹಕರ ಆರ್ಥಿಕ ಪರಿಸ್ಥಿತಿಯ ಪಕ್ಷಿನೋಟ ಸಿಗುತ್ತದೆ. ಇದರೊಂದಿಗೆ ಬ್ಯಾಂಕಿಗೆ ಬರುವವರು ಸಾಕಷ್ಟು ಹಿರಿಯರೇ ಆಗಿರುವುದರಿಂದ ಇತರರ ಮಕ್ಕಳ ಮದುವೆಯ ಬಗ್ಗೆ ಎಲ್ಲಿಲ್ಲದ ಕಾಳಜಿ ಅವರಿಗಿರುತ್ತದೆ. 


ಗಮನಾಳ ಅಕ್ಕ ನಮನ ಪ್ರೀತಿಸಿ ಮದುವೆಯಾದ ಸುದ್ಧಿ ಮಾತ್ರ ಇಡೀ ಊರಿಗೆ ಸಿಡಿಲು ಬಡಿದಂತೆ ಅಪ್ಪಳಿಸಿತ್ತು. ಸಿನೆಮಾಗಳಲ್ಲಿ, ಧಾರಾವಾಹಿಗಳಲ್ಲಿ ಪ್ರೇಮಿಗಳನ್ನು ಬೆಂಬಲಿಸುವ ಜನರು ತಮ್ಮ ಮನೆಯ ಮಕ್ಕಳೇ ಪ್ರೀತಿಸುವ ಸುದ್ಧಿ ತಿಳಿದಾಗ ಏನೋ ಅನಾಹುತವೇ ಆಗಿಹೋಯ್ತು ಎಂಬಂತೆ ಬದುಕಲು ಆರಂಭಿಸುತ್ತಾರೆ. ನಮನ ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೆ, ಹುಡುಗ ಇಷ್ಟವಾಗುತ್ತಿದ್ದಂತೆ ಮದುವೆ ಆಗುವುದಾದರೆ ಮಾತ್ರ ಪ್ರೀತಿ ಎಂದಾಗ ಇಬ್ಬರು ಒಪ್ಪಿ ಮದುವೆಯೇ ಆಗಿಬಿಟ್ಟರು. ಕೆಲವರು ಹುಡುಗ ನಮನಾಳ ತಲೆ ಕೆಡಿಸಿದ್ದಾನೆ, ಮಾಟ ಮಾಡಿಸಿದ್ದಾನೆ ಎಂದೆಲ್ಲ ಮಾತಾಡಿಕೊಂಡರು ಸಹ ಆ ರೀತಿಯ ಯಾವ ವರ್ತನೆಯನ್ನು ಅವಳು ತೋರಿಸಲಿಲ್ಲ. ನಮನಾಳ ಗಂಡ ನವೀನ ಕೂಡ ಹೆಚ್ಚು ಚಿಂತಿಸದ ಆಸಾಮಿ. ಕೆಲಸ ಮಾಡಿ ಸಂಪಾದಿಸುವ ಸಾಮರ್ಥ್ಯವಿರುವ ಪ್ರೇಮಿಗಳನ್ನು ಯಾರು ತಾನೇ ತಡೆಯಲು ಸಾಧ್ಯ. ಆದರೆ ಈ ಎಲ್ಲಾ ಘಟನೆಗಳ ಪರಿಣಾಮ ಅನುಭವಿಸಿದ್ದು ಮಾತ್ರ ನಮನಾಳ ತಂಗಿ ಗಮನ. 

ಮೊದಲೇ ಹೆಣ್ಣು ಮಕ್ಕಳ ಸ್ವಾತಂತ್ರ್ಯ ಹತ್ತಿಕ್ಕಲು ಪ್ರಯತ್ನ ನಡೆಯುತ್ತಲೇ ಇರುವಾಗ ಪ್ರೀತಿಸಿ ಮದುವೆಯಾಗುವಂತಹ ಸಹಜ ಘಟನೆಗಳು ಮದುವೆಯಾಗದ ಹೆಣ್ಣು ಮಕ್ಕಳನ್ನು ಇನ್ನಷ್ಟು ಬಾಧಿಸಲು ಶುರು ಮಾಡುತ್ತವೆ. ಮದುವೆಯಾದವರು ಸಂತೋಷವಾಗಿ ಜೀವನ ಮಾಡುತ್ತಿದ್ದಾರಾ ಎಂಬುದರ ಬದಲಾಗಿ ಹುಡುಗ ಯಾವ ಜಾತಿ, ಹುಡುಗಿ ಯಾವ ಜಾತಿ ಎಂಬ ಅರ್ಥವಿಲ್ಲದ ಪ್ರಶ್ನೆಗಳೇ ಪೋಷಕರ ಕಿವಿಗೆ ಬೀಳುತ್ತವೆ. 

ಮದುವೆಯಾದ ಮೇಲೆ ನಾಲ್ಕೈದು ಬಾರಿ ಅಕ್ಕನನ್ನು ಭೇಟಿಯಾದಾಗಲೂ ಸಹ ಈ ಮದುವೆಯ ವಿಷಯವನ್ನೇ ಹೇಳಿಕೊಂಡು ಇಬ್ಬರು ಸಹ ಅತ್ತಿದ್ದಾರೆ. ಅವರಿಬ್ಬರು ಯಾವ ವಿಷಯಕ್ಕೆ ಅತ್ತರೆಂಬುದು ಮಾತ್ರ ಅವರಿಬ್ಬರಿಗೂ ಸಹ ಸರಿಯಾಗಿ ಗೊತ್ತಿಲ್ಲ. ಒಟ್ಟಿನಲ್ಲಿ ವಾರಕ್ಕೆ ಒಬ್ಬರಾದರು ಸಹ ಹುಡುಗಿ ನೋಡಲು ಗಮನ ಮನೆಗೆ ಬರುತ್ತಿದ್ದಾರೆ. ಗಮನಾಳಿಗೂ ಹೆಚ್ಚೇನೂ ವಯಸ್ಸಾಗಿಲ್ಲ, ಮದುವೆ ಬೇಡವೆಂದರೂ ಕೇಳುವ ಪರಿಸ್ಥಿತಿಯಲ್ಲಿ ಮನೆಯವರ ಮನಸ್ಥಿತಿ ಇಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಬಂದವರಿಗೆಲ್ಲ ಕಾಫಿ, ಶರಬತ್ತು, ಉಪ್ಪಿಟ್ಟು, ಕೇಸರಿಬಾತು ಹೀಗೆ ಕೊಟ್ಟು ಕೊಟ್ಟು ಸಾಕಾಗಿ ಹೋಗಿದೆ ಅವಳಿಗೆ. 

ಈ ಪರಿಸ್ಥಿತಿಯಲ್ಲಿ ಸಾಕಷ್ಟು ಹುಡುಗರು ಸಹ ಇರುತ್ತಾರೆ ಎಂಬುದು ಇತ್ತೀಚಿಗೆ ಅವಳನ್ನು ನೋಡಲು ಬಂದ ಸಂದೇಶ ಎಂಬ ಹುಡುಗನಿಂದ ಅರಿವಿಗೆ ಬಂದಿದೆ. ಐದು ನಿಮಿಷ ಹುಡುಗ ಹುಡುಗಿ ಇಬ್ಬರು ಮಾತನಾಡಲು  ಒಪ್ಪಿ ಮಾತಿಗೆ ನಿಂತಾಗ ಅವನು ನೇರವಾಗಿ ಇಷ್ಟ ಇಲ್ಲ ಅಂತ ಹೇಳ್ಬಿಡಿ ಪ್ಲೀಸ್ ಅಂದಿದ್ದ. ಗಮನ ಯಾಕೆಂದು ಕೇಳಿದಾಗ, "ಇಷ್ಟು ವರ್ಷ ಕೆಲಸ ಮಾಡಿ ಈಗ ತಾನೇ ಓದಲು ಮಾಡಿದ ಸಾಲ, ಮನೆ ಕಟ್ಟಲು ಮಡಿದ ಸಾಲ ತೀರಿಸಿ ಆಗಿದೆ ಮತ್ತೊಮ್ಮೆ ಮದುವೆಗೆ ಸಾಲ ಮಾಡಲು ಇಷ್ಟವಿಲ್ಲ" ಎಂದು ಹೇಳಿದ್ದ. ಅವನನ್ನು ಅಣಕಿಸಲೋ ಏನೋ ಗಮನ ಅವನಿಗೆ "ನಾವಿಬ್ರು ಯಾಕೆ ಲವ್ ಮಾಡಿ ಓಡಿಹೋಗಿ ಮದುವೆ ಆಗಬಾರದು?" ಎಂದು ಕೇಳಿದಾಗ ಇಬ್ಬರು ಸಹ ಒಂದೆರಡು ನಿಮಿಷ ನಕ್ಕಿದ್ದರು. ಅದೆಲ್ಲಾ ಆಮೇಲೆ ನೋಡೋಣ ಎಂದು ತಮಾಷೆ ಮಾಡುತ್ತಲೇ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡರು. ಅವರಿಬ್ಬರ ಮಾತಿಗೂ ಹೆಚ್ಚಿನ ಮಹತ್ವ ಮನೆಯವರು ನೀಡುತ್ತಿರಲಿಲ್ಲ, ಪ್ರೀತಿಸಿ ಮದುವೆಯಾಗುವುದು ಹೆಚ್ಚಿನ ಜನರ ಕನಸೇ ಆಗಿರುತ್ತದೆ. ಸಮಾಜ ಹಾಗು ಕುಟುಂಬದವರ ಮುಲಾಜಿಗೆ ಅಂಜಿ ಸುಮ್ಮನಾಗುತ್ತಾರೆ ಅಷ್ಟೇ. ಹುಡುಗನ ಮನೆಯವರು ವಾಪಸ್ಸಾದ ನಂತರವೂ ಗಮನಾಳ ಗಮನವೆಲ್ಲ ಬೇರೆಡೆಯೆ ಇತ್ತು. 

ರಾತ್ರಿ ಮೊಬೈಲ್ ಅಲ್ಲಿ ತನ್ನ ಗೆಳೆಯರು ಹಾಕಿದ್ದ ಇನ್ಸ್ಟಾಗ್ರಾಮ್ ಸ್ಟೋರಿಯನ್ನೆಲ್ಲ ನೋಡುತ್ತಾ ಮಲಗಿದ್ದಳು. ಆಗೊಂದು ಸಂದೇಶ ಸಂದೇಶನಿಂದ ಬಂತು. ಇವಳು ಹಾಯ್ ಎಂದಳು. ಊಟ ಕಾಫಿ ಹಾಳು ಮೂಳು ಎಲ್ಲಾ ವಿಚಾರಿಸಿದ ಮೇಲೆ ಸಂದೇಶ ಕೇಳಿದ ಮನೆಯವರಿಗೆ ಹೇಳಿದ್ರ ಅಂತ?. ಗಮನ ಹೌದು ಹೇಳಿದೆ, ನಾಳೆ ಮತ್ತೊಬ್ಬ ಹುಡುಗನ ಮನೆಯವರು ಬರುತ್ತಾರೆ ಎಂದು ಹೇಳಿದಳು. ಸಂದೇಶನಿಂದ "ಸರಿ ಹಾಗಾದ್ರೆ, ಬೈ" ಎನ್ನುವ ಸಂದೇಶವಷ್ಟೇ ಬಂತು. ಅವಾಗ ಗಮನ "ಇಲ್ಲ, ನಾನು ಹೇಳಿಲ್ಲ" ಅಂತ ರಿಪ್ಲೈ ಮಾಡಿದಳು. ಸಂದೇಶ ಹಾಗಾದ್ರೆ "ನಾನೆ ಹೇಳ್ತಿನಿ, ಪರ್ವಾಗಿಲ್ಲ" ಎಂದನು. ಮನಸ್ಸಿನ ಮೂಲೆಯಲ್ಲಿ ಇಬ್ಬರಿಗೂ ಇನ್ನೊಬ್ಬರ ವ್ಯಕ್ತಿತ್ವದ ಮೇಲೆ ಒಲವಾಗಿದೆ. 

ಈ ಮದುವೆ ಮುಂದೂಡುವ ಕೆಲಸವನ್ನೇ ಒಂದೆರಡು ವರ್ಷದಿಂದ ಇಬ್ಬರಿಗೂ ಮಾಡಿ ಮಾಡಿ ಅಭ್ಯಾಸವಾಗಿದೆ. ಜಗತ್ತಿನ ಕಷ್ಟಗಳು ಏನೇ ಆಗಿದ್ದರು ಸಹ ಜೀವನ ಸಾಗಿಸಲು ಜೊತೆಯಾಗಿ ಒಬ್ಬರಿದ್ದಾಗ ಮನದಲ್ಲಿ ಮೂಡುವ ಛಲ ಹಾಗು ಜವಾಬ್ದಾರಿ ಒಬ್ಬರೇ ಇದ್ದಾಗ ಯಾವಾಗಲು ಸಹ ಇರುವುದಿಲ್ಲ ಎಂಬ ಅನುಭವ ಇಬ್ಬರಿಗೂ ಇದೆ. ಇದಕ್ಕೆ ಅವರ ಜೀವನದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ, ಮದುವೆ ಆಗುವುದೇ ಇಲ್ಲ ಎಂದು ದೃಢವಾಗಿ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ ಆದರೆ ನೋಡೋಣ ಏನಾಗುತ್ತದೆ ಎಂಬ ಉಡಾಫೆಯ ನಿರ್ಧಾರಗಳು ಹೀಗೆ ಒಟ್ಟಿನಲ್ಲಿ ಕಾಣದ ಕೈಗಳ ಕೈವಾಡದಂತೆ ತಮ್ಮ ಜೀವನದ ಮೇಲಿನ ಹತೋಟಿಯನ್ನೇ ಕಳೆದುಕೊಂಡಿದ್ದಾರೆ. ಜೀವನದ ಒಂದು ಭಾಗವಾಗಬೇಕಿದ್ದ ಮದುವೆ, ಹುಟ್ಟಿರುವುದೇ ಮದುವೆ ಆಗಲು ಎಂಬಂತಾಗಿದೆ.    

ರಾತ್ರಿ ಸಮಯ ಎರಡು ಗಂಟೆಯಾದರೂ ಗಮನಾಳಿಗೆ ನಿದ್ಧೆ ಬರುತ್ತಿಲ್ಲ. ಈಗಲೇ ಎದ್ದು ಮನೆಬಿಟ್ಟು ದೂರದ ಊರಿನಲ್ಲಿರುವ ಗೆಳತಿಯರ ಮನೆಗೋ ಅಥವಾ ಯಾರು ಪರಿಚಯವಿಲ್ಲದ ತನಗೇ ಗೊತ್ತಿಲ್ಲದ ಊರಿಗೋ ಹೊರಟು ಹೋಗುವ ಯೋಚನೆಯು ಸಹ ಮನದಲ್ಲಿ ಮೂಡುತ್ತದೆ. ಇನ್ಸ್ಟಾಗ್ರಾಮ್ ಲೋಕದಲ್ಲಿರುವ ಸ್ವಾತಂತ್ರ್ಯ ಕಂಡು ಅಸೂಯೆಯಾಗುತ್ತದೆ. ಅಕ್ಕನ ನೆನಪು ಬಂದಾಗ ಅಳು ಬಂದಂತಾಗುತ್ತದೆ. ಅವಳಿಂದಲೇ ಇಷ್ಟು ಕಷ್ಟ ನನಗೆ ಬಂತೆಂದು ಅವಳ ಮೇಲೆ ಕೋಪವೂ ಬರುತ್ತದೆ. ನಾಳೆ ಏನಾದರು ಆಗಲಿ, ನನ್ನನ್ನು ನೋಡಲು ಬರುವವರ ಮುಂದೆ ರಂಪಾಟ ಮಾಡಿ ಮರ್ಯಾದೆ ಕಳೆದೇ ಕಳೆಯುತ್ತೇನೆ ಎಂಬ ದೃಢ ನಿರ್ಧಾರವು ಸಹ ಗಮನಾಳ ಮನದಲ್ಲಿ ಮೂಡುತ್ತಿದೆ. 

ಮೊಬೈಲ್ ನೋಡುತ್ತಲೇ ಗಮನ ನಿದ್ದೆ ಹೋದಳು. ಬೆಳಿಗ್ಗೆ ಅಮ್ಮ ಏಳಿಸಿದರು. ತನಗೆ ಬಹಳ ಇಷ್ಟವಾದ ಪೂರಿ ಸಾಗು ಬೆಳಿಗ್ಗೆಯೇ ಮಾಡಿದ್ದರು. ಬೆಳಿಗ್ಗೆ ಗಂಟೆ ಎಂಟೂವರೆ ಆದರೂ ಸಹ ತನ್ನನ್ನು ಏಳಿಸಿರಲಿಲ್ಲ. ತಿಂಡಿ ತಿನ್ನುವಾಗಲು ತನ್ನನ್ನೇ ನೋಡುತಿದ್ದ ಅಮ್ಮನ ಕಡೆಗೆ ಅವಳ ಗಮನ ಹೋಯಿತು. ಏನೆಂದು ಕೇಳಿದಾಗ ಹುಡುಗನ ಮನೆಯವರು ಒಪ್ಪಿರುವುದಾಗಿ ಹೇಳಿದರು. ನಂಗಿಷ್ಟ ಇಲ್ಲಮ್ಮ ಅವ್ನು ಅಂದರು ಸಹ ತಿಂಡಿ ತಿಂದು ಹಾಲು ಕುಡಿಯಲು ಹೇಳಿ ಅಮ್ಮ ಕೆಲಸದಲ್ಲಿ ನಿರತರಾಗಿದ್ದನ್ನು ಕಂಡು ಗಮನಾಳಿಗೆ ಕೋಪ ನೆತ್ತಿಗೇರಿತು. ತಿನ್ನುತಿದ್ದ ತಿಂಡಿಯನ್ನು ಅಲ್ಲಿಗೆ ನಿಲ್ಲಿಸಿ ಕೋಣೆಗೆ ಬಂದು ಮೊಬೈಲ್ ಎತ್ತಿಕೊಂಡು ಸಂದೇಶನಿಗೆ ಮೆಸೇಜ್ ಮಾಡಿದಳು "ನನ್ನ ಮದುವೆ ಆಗಬೇಕೆಂದರೆ ನನ್ನ ಪ್ರೀತಿಸಿ ಮನೆಯಲ್ಲಿ ಗೊತ್ತಿಲ್ಲದೆಯೇ ಮದುವೆಯಾಗಬೇಕು, ಇಲ್ಲವೆಂದರೆ ನಾನೆ ಯಾರನ್ನಾದರೂ ಪ್ರೀತಿಸಿ ಓಡಿ ಹೋಗುತ್ತೇನೆ " ಎಂದು. ಸ್ವಲ್ಪ ಹೊತ್ತಿನ ನಂತರ ಸಂದೇಶನ ಸಂದೇಶವೂ ಬಂತು "ಹಾಗೆ ಮಾಡಿ, ಬಹಳ ಒಳ್ಳೆಯ ಕೆಲಸ".  

ಕಾಮೆಂಟ್‌ಗಳು

- Follow us on

- Google Search