ಮನೆ ಮನಗಳ ಬೆಳಗುವವರು

ಕಳೆದ ಒಂದು ತಿಂಗಳ ಕಾಲದಲ್ಲಿ ಒಂದಷ್ಟು ನೋವುಂಟುಮಾಡವ ಘಟನೆಗಳು ನಡೆದಿವೆ. ಅಪ್ಪು ನಿಧನದ ಸುದ್ಧಿ ಕೇಳಿ ಸಾಕಷ್ಟು ಬೇಜಾರು ಹಾಗು ದುಃಖ ಮನಸ್ಸಿನಲ್ಲಿ ಮನೆಯವರಿಗೆ ಎಲ್ಲರಿಗು ಇತ್ತು. ಆದರೆ, ಮನೆಯವರಿಗೆ ಎಲ್ಲರಿಗು ಜ್ವರ, ಮೈ ಕೈ ನೋವು, ಕೆಮ್ಮು, ತಲೆನೋವು, ಸುಸ್ತು ಮುಂತಾದ ಲಕ್ಷಣಗಳು ಆರಂಭವಾದಾಗ ಆ ನೋವಿನೊಂದಿಗೆ ಇವುಗಳು ಸಹ ಸೇರಿ ಕಾಡಲಾರಂಭಿಸಿದವು. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆತ ಫಲವಾಗಿ ಮನೆಯವರೆಲ್ಲರೂ ಒಂದೆರಡು ವಾರಗಳಲ್ಲಿ ಮತ್ತೆ ಮರಳಿ ಆರೋಗ್ಯವಂತರಾಗಿದ್ದರೆ. 

ಮನೆಯಲ್ಲಿ ಅಮ್ಮನಿಗೆ ಹುಷಾರಿಲ್ಲದೆ ಇದ್ದಾಗ ಅಮ್ಮ ಮನೆಯಲ್ಲಿ ದಿನನಿತ್ಯ ಎಷ್ಟು ಕೆಲಸಗಳನ್ನು ಮಾಡುತ್ತಾರೆ ಎಂಬ ಅರಿವಾಗುತ್ತದೆ. ಮನೆ ಸ್ವಚ್ಛವಾಗಿ, ಇರಬೇಕಾದ ವಸ್ತುಗಳು ಆಯಾ ಜಾಗಗಳಲ್ಲಿ ಅಚ್ಚುಕಟ್ಟಾಗಿ ಇರುವುದು ಬಹಳ ಸರ್ವೇ ಸಾಮಾನ್ಯ ಎನ್ನುವ ಜಾಣಕುರುಡು ನಮ್ಮಲ್ಲಿ ಇರಬಹುದೇನೋ. ಆದರೆ ಒಂದು ಮನೆಯ ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಬಹಳ ಜವಾಬ್ದಾರಿಯಿಂದ ಹೆಚ್ಚು ದೂರದೆ ಸರಿಯಾಗಿ ಉಪಯೋಗಿಸಿಕೊಂಡು ಸಂಸಾರ ಮುನ್ನಡೆಸುವ ಕಲೆ ಅಮ್ಮನನ್ನು ಬಿಟ್ಟರೆ ಬೇರೆಯವರಿಗೆ ಬರುವುದು ಬಹಳ ಕಷ್ಟ ಅನ್ನಿಸುತ್ತದೆ. 

ಬೇರೆಯವರು ಆ ಕೆಲಸಗಳನ್ನು ಮಾಡಲು ಸಾಧ್ಯವಾದರೂ ಸಹ, ಅದೇನೋ ಜಗತ್ತಿಗೆ ಬಹಳ ಸೇವೆ ಮಾಡಿರುವ ಹಾಗೆ ಗೊಣಗಲು ಆರಂಭಿಸಿ ಬಿಡುತ್ತಾರೆ. ಮನೆಕೆಲಸ ಮಾಡಿಕೊಂಡಿರುವ ಗೃಹಿಣಿಯರಿಗೆ ಅವರ ಸೇವೆಗೆ ಸಂಬಳವಾಗಲಿ ಅಥವಾ ಪ್ರಶಸ್ತಿಯಾಗಲಿ ದೊರೆಯುವುದಿಲ್ಲ. ಆದರೆ, ತನ್ನ ಗಂಡ, ಮಕ್ಕಳು ಮುಂತಾದವರ ಜೀವನ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಬಹಳ ಪ್ರಮುಖವಾದುದು. ಅವರ ಕೆಲಸ ಮಾಡುವ ಉದ್ದೇಶ ಪ್ರೀತಿಯಿಂದ ಆರಂಭವಾಗುವುದರಿಂದಲೋ ಏನೋ ಅಷ್ಟು ಶಕ್ತಿ ಅವರಿಗೆ ಬರುತ್ತದೆ ಅನ್ನಿಸುತ್ತದೆ. ಪ್ರೀತಿಯ ಶಕ್ತಿ ಏನೆಂಬುದನ್ನು ಮನೆಯವರನ್ನು ಸಾಕಿ ಸಲಹುವ ಹಿರಿಯರನ್ನು ಕಂಡಾಗ ಅರಿವಾಗುತ್ತದೆ. 

ಸಣ್ಣ ಪುಟ್ಟ ಕೆಲಸಗಳೇ ಆದರೂ ಸಹ ಅವುಗಳನ್ನು ಮಾಡಲು ಮನಸ್ಸು ಸಿದ್ಧವಿಲ್ಲದಿದ್ದರೆ ಮಾಡುವುದು ಸಾಧ್ಯವೇ ಇಲ್ಲ. ಮನೆಯಲ್ಲಿ ಪ್ರೀತಿ ಸ್ನೇಹ ಸಂಬಂಧಗಳು ಗಟ್ಟಿಯಾಗಿ ಇಲ್ಲದಿದ್ದರೆ ಕಷ್ಟ ಕಾಲದಲ್ಲಿ ಇನ್ನೊಬ್ಬರನ್ನು ಸರಿದಾರಿಗೆ ತರುವುದು ಬಹಳ ಕಷ್ಟದ ಕೆಲಸ. ಅದಕ್ಕೆ ಸ್ವಾರ್ಥವನ್ನು ಮೀರಿದ ಪ್ರೀತಿ ನಮ್ಮ ಮನಸ್ಸಿನಲ್ಲಿ ಇರಬೇಕು. ಆ ಪ್ರೀತಿಯನ್ನು ತಾಯಿ ತಂದೆಯಲ್ಲಿ ನಿಸರ್ಗವೇ ತುಂಬಿರುತ್ತದೆ. ಜೀವನದಲ್ಲಿ ಉಚಿತವಾಗಿ ಸಿಗುವ ಅದೆಷ್ಟೋ ವಿಷಯಗಳ ಬೆಲೆ ಅವು ನಮ್ಮ ಜೀವನದಿಂದ ದೂರವಾಗುವ ತನಕ ನಮಗೆ ಅರ್ಥವಾಗುವುದೇ ಇಲ್ಲ. ಅವುಗಳನ್ನೆಲ್ಲ ಗುರುತಿಸಿ ಗೌರವಿಸುವುದು ಅವುಗಳು ನಮಗೆ ವಯಸ್ಸಾದಂತೆ ನಮಗೆ ಅರಿವಾದಂತಲೋ ಏನೋ ಗೊತ್ತಿಲ್ಲ!  

ಕಾಮೆಂಟ್‌ಗಳು

- Follow us on

- Google Search