ಡಿಜಿಟಲ್ ಲೋಕದಲ್ಲಿ ಮಾತುಕತೆ.

ಮೊದಲು ನಮ್ಮಿಂದ ದೂರವಿರುವ ಯಾರಿಗಾದರೂ ಏನಾದರೂ ಹೇಳಬೇಕೆಂದರೆ ಪತ್ರ ಅಥವಾ ಟೆಲಿಗ್ರಾಂ ಮೊರೆ ಹೋಗುತ್ತಿದ್ದೆವು. ನಾವು ಹೇಳಬೇಕಾದ ವಿಷಯಕ್ಕೆ ಕೆಲವು ಪುಟಗಳಲ್ಲಿ ಬರಹದ ರೂಪ ಕೊಟ್ಟು ಅದನ್ನು ಹೇಳಬೇಕಾದವರ ವಿಳಾಸಕ್ಕೆ ತಲುಪಿಸಿ, ಅವರ ಪ್ರತ್ಯುತ್ತರಕ್ಕೆ ಕಾಯುತ್ತಿದ್ದೆವು. ಇದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದ ಪ್ರಕ್ರಿಯೆ ಆಗಿತ್ತು, ಏನೇ ಬರೆಯಬೇಕಾದರೂ ಸಾಕಷ್ಟು ಸಮಯ ಯೋಚಿಸಿ ಬರೆಯುತ್ತಿದ್ದೆವು. ಇಲ್ಲಿ ನಮಗೆ ಬಹಳ ದೊಡ್ಡ ಸಮಸ್ಯೆ ಎಂದರೆ ಪತ್ರ ವ್ಯವಹಾರದಲ್ಲಿ ತಕ್ಷಣಕ್ಕೆ ಯಾರಿಗಾದರೂ ಏನಾದರೂ ಹೇಳಬೇಕೆಂದರೆ ಏನು ಮಾಡಿದರೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ.

ವಿಜ್ಞಾನ ತಂತ್ರಜ್ಞಾನ ಇಂಟರ್ನೆಟ್ ಹೊಂದಿದವರೆಲ್ಲರನ್ನು ಬೆರಳ ತುದಿಯಲ್ಲಿ ಹಿಡಿದಿಟ್ಟುಕೊಂಡಿದೆ. ಮನಸ್ಸಿನಲ್ಲಿ ಏನು ಹೇಳಬೇಕೆಂದು ಯೋಚನೆ ಮಾಡುತ್ತಿದ್ದಂತೆಯೇ ಬೆರಳುಗಳು ಅವುಗಳನ್ನು ಬರಹದ ರೂಪಕ್ಕೆ ಇಳಿಸಿಬಿಟ್ಟಿರುತ್ತವೆ. ಸ್ವಲ್ಪ ಭಾವನಾತ್ಮಕವಾಗಿ ಆಲೋಚಿಸುತ್ತಿದ್ದರಂತೂ ಆ ಕ್ಷಣಕ್ಕೆ ಕೋಪ ಅಥವಾ ಬೇಸರದಲ್ಲಿ ಏನು ಬರೆಯುತ್ತೇವೆ ಎನ್ನುವ ಕನಿಷ್ಟ ಪ್ರಜ್ಞೆ ಕೂಡ ನಮಗೆ ಇರುವುದಿಲ್ಲ. ದಿನ ಕಳೆದಂತೆ ದೂರದಲ್ಲಿರುವ ನಮಗೆ ಬೇಕಾದವರನ್ನು ಆದಷ್ಟು ಹತ್ತಿರಕ್ಕೆ ತರುವ ಸೌಲಭ್ಯಗಳನ್ನು ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ. ಬಹಳ ವೇಗವಾಗಿ ಸುದ್ಧಿಯನ್ನು ತಲುಪಿಸಲು, ಸಹಾಯಕ್ಕಾಗಿ ತಕ್ಷಣ ಕರೆ ಮಾಡಲು, ನಮಗೆ ಬೇಕಾಗಿದ್ದನ್ನು ಬೇಕಾದಾಗ ಹುಡುಕಲು ಮಾಹಿತಿ ತಂತ್ರಜ್ಞಾನ ಸಾಕಷ್ಟು ಸಹಾಯ ಮಾಡಿದೆ. ಯಾವುದೇ ಒಂದು ವರ, ಕೆಲವು ಶಾಪಗಳೊಂದಿಗೆ ಬರುತ್ತದೆ. ಹೊಸತೇನೋ ತಂತ್ರಜ್ಞಾನ ಬಂದಾಗ, ಅದನ್ನು ಉಪಯೋಗಿಸಿ ಸಂತೋಷಪಟ್ಟಾಗ ನಾವಿರುವ ಜಗತ್ತು ಅದೆಷ್ಟು ಸುಂದರವಾಗಿದೆ ಎನ್ನುವ ಅನುಭವ ನಮಗಾಗುತ್ತದೆ. ಯಾವಾಗ ನಾವು ಅದರಿಂದ ಉಂಟಾಗಿರುವ ಸಮಸ್ಯೆಗಳಿಗೆ ನಮ್ಮ ಜೀವನದಲ್ಲಿ ಬೆಲೆ ತೆರಲು ಆರಂಭಿಸುತ್ತೇವೋ ಆಗಲೇ ನಮಗೆ ತಂತ್ರಜ್ಞಾನದ ಹುಳುಕುಗಳ ಬಗ್ಗೆ ಅರಿವಾಗುತ್ತದೆ. 


ಡಿಜಿಟಲ್ ಮಾತುಕತೆಯಲ್ಲಿ ಬಹಳ ಮುಖ್ಯ ಕೊರತೆ ಎಂದರೆ ಭಾವನೆಗಳು ಸರಿಯಾಗಿ ವ್ಯಕ್ತವಾಗುವುದಿಲ್ಲ. ನಾವು ಏನೇ ಹೇಳಿದರು ಸಹ ಅದನ್ನು ಓದುವವರ ಮನಸ್ಥಿತಿ ಹೇಗಿರುತ್ತದೆ ಎನ್ನುವ ಆಧಾರದ ಮೇಲೆ ನಮ್ಮ ಮಾತಿನ ಅರ್ಥ ನಿರ್ಧಾರವಾಗುತ್ತದೆ. ಇದು ಪೂರ್ತಿ ತಪ್ಪು ಎಂದು ಸಹ ಹೇಳಲು ಸಾಧ್ಯವಿಲ್ಲ, ಆದರೆ ಒಟ್ಟಿಗೆ ಇದ್ದಾಗ ಮಾತಿನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಸಹ ನಮ್ಮ ಧ್ವನಿ ಮತ್ತು ಹಾವಭಾವಗಳು ನಮ್ಮ ಮಾತಿನ ಅರ್ಥವನ್ನು ಇನ್ನೊಬ್ಬರಿಗೆ ಮನದಟ್ಟು ಮಾಡುತ್ತವೆ. ಹೀಗಾಗಿ ಇನ್ನೊಬ್ಬರಿಗೆ ಟೆಕ್ಸ್ಟ್ ಮಾಡುವಾಗ ಅದರ ತೊಡಕುಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದಾಗಲಿ ಅಥವಾ ನಮ್ಮ ಮನಸ್ಸಿನ ತಳಮಳವಾಗಲಿ ನಾವಾಗಿಯೇ ಪೂರ್ತಿ ಬಿಡಿಸಿ ಹೇಳದೇ ಹೋದರೆ ಅದು ಹೆಚ್ಚಿನ ಜನರಿಗೆ ಟೆಕ್ಸ್ಟ್ ಮಾಡಿದಷ್ಟು ವೇಗವಾಗಿ ಅರ್ಥವಾಗುವುದಿಲ್ಲ. ಬಹಳ ಉತ್ತಮ ಸಂಭಾಷಣೆ ನಡೆಸುವ ಕಲೆ ಇರುವವರಿಗೆ ಇದು ಹೆಚ್ಚಿನ ತೊಂದರೆ ಕೊಡದೆ ಇರಬಹುದು ಆದರೆ ಭಾವನಾತ್ಮಕವಾಗಿ ಎಲ್ಲವನ್ನು ಯೋಚಿಸುವ ಅಭ್ಯಾಸ ಇರುವವರಿಗೆ ಇದು ಸ್ನೇಹ ಸಂಬಂಧಗಳಲ್ಲಿ ಸಾಕಷ್ಟು ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಯಿರುತ್ತದೆ. 

ಏನೋ ಅರ್ಥ ಮಾಡಿಸುವ ಭರದಲ್ಲಿ, ಕೋಪ, ಬೇಸರ ಅಥವಾ ಹತಾಶೆಯಲ್ಲಿ ಹೇಳಿದ ಮಾತುಗಳು ಇನ್ನೊಬ್ಬರಿಗೆ ಸಾಕಷ್ಟು ನೋವು ಕೊಡುವ ಸಾಧ್ಯತೆಯಿರುತ್ತದೆ. ಆದರೆ, ಆ ಮಾತುಗಳನ್ನು ಆಡುವಾಗ ನಮ್ಮ ಮನಸ್ಸಿನಲ್ಲಿಯೂ ಸಾಕಷ್ಟು ನೋವಿರುತ್ತದೆ ಎನ್ನುವ ವಿಚಾರ ಯಾರಿಗೂ ಸಹ ಅರ್ಥವಾಗುವುದಿಲ್ಲ. ಇದೆ ತಪ್ಪನ್ನು ನಾವು ಪತ್ರಗಳನ್ನು ಬರೆಯುವಾಗ ಅಥವಾ ನೇರವಾಗಿ ಸಿಕ್ಕಿ ಮಾತನಾಡುವಾಗ ಮಾಡುವುದಿಲ್ಲ. ಏಕೆಂದರೆ, ಆ ವ್ಯಕ್ತಿ ನಮ್ಮ ಕಣ್ಣ ಮುಂದೆಯೇ ಇರುತ್ತಾರೆ ಮತ್ತು ನಮ್ಮ ಮನಸ್ಥಿತಿ ಮತ್ತು ಮಾತುಗಳು ಸಹ ಅವರಿಗೆ ಚೆನ್ನಾಗಿ ಅರ್ಥವಾಗುತ್ತದೆ. ಇದರ ಅರಿವಿಲ್ಲದೆ ಸಣ್ಣ ಪುಟ್ಟ ವಿಷಯಗಳಿಗೂ ತಲೆ ಕೆಡಿಸಿಕೊಂಡು, ಇನ್ನೊಬ್ಬರ ಮಾತುಗಳಿಗೆ ನಮ್ಮದೇ ಆಲೋಚನೆಗಳ ಮೂಲಕ ಬೇರೆಯದೇ ಅರ್ಥ ಕಲ್ಪಿಸಿಕೊಂಡರೆ ಅದರಿಂದ ಆಗುವ ಅನಾಹುತಗಳು ಒಂದೆರಡಲ್ಲ. ಹೆಚ್ಚು ಏಕಾಂಗಿಯಾಗಿ ಇರಲು ಬಯಸುವವರೆ ಟೆಕ್ಸ್ಟ್ ಮಾಡಲು ಬಹಳ ಇಷ್ಟಪಡುವುದು, ಅದರಲ್ಲಿಯೂ ತಮಗೆ ಬಹಳ ಇಷ್ಟವಾಗುವವರೊಂದಿಗೆ ಹೆಚ್ಚು ಟೆಕ್ಸ್ಟ್ ಮಾಡುವುದು. ಅಂತಹದರಲ್ಲಿ, ಈ ರೀತಿಯ ಉದ್ದೇಶಪೂರ್ವಕವಲ್ಲದ ಮನಸ್ಥಾಪಗಳು ಉಂಟಾದಾಗ ಅದನ್ನು ಸರಿಪಡಿಸಿಕೊಳ್ಳುವುದು ಸಹ ಬಹಳ ಕಷ್ಟದ ಕೆಲಸ. ಅದೆಷ್ಟೇ ಪದಗಳಲ್ಲಿ ಹೇಳಿದರು ಸಹ ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇನ್ನೊಬ್ಬರಿಗೆ ಇಲ್ಲದೆ ಹೋದರೆ ನರಕಯಾತನೆ ಅನುಭವಿಸುವಂತಾಗುತ್ತದೆ. 

ಹಾಗಾದರೆ ಯಾರೇನು ಬಾಯಿಗೆ ಬಂದ ಹಾಗೆ ಮಾತನಾಡಿದರೂ ಅವುಗಳನ್ನೆಲ್ಲ ಸಹಿಸಿಕೊಂಡು ಸುಮ್ಮನೆ ಇರಬೇಕಾ ಎನ್ನುವ ಆಲೋಚನೆಯು ಸಹ ಬರುತ್ತದೆ. ಹಾಗಲ್ಲ, ಆ ವ್ಯಕ್ತಿ ಯಾರು ಏನೆಂಬುದು ನಮಗೆ ಅರಿವಿರಬೇಕು. ಭಾವನೆಗಳು ಬುದ್ಧಿಯನ್ನು ಹಿಡಿತಕ್ಕೆ ತೆಗೆದುಕೊಳ್ಳದಂತೆ ನಮ್ಮ ಮನಸ್ಸನ್ನು ಸರಿಪಡಿಸಿಕೊಳ್ಳಬೇಕು. ನಮಗೆ ಬಹಳ ಇಷ್ಟವಾದವರ ಒಂದು ತಪ್ಪು ನಮಗೆ ಬೇರೆಯವರ ಸಾಕಷ್ಟು ತಪ್ಪುಗಳಿಗಿಂತ ಸಾಕಷ್ಟು ಬೇಸರ ಉಂಟುಮಾಡುತ್ತದೆ. ನಾವು ಎಷ್ಟೇ ಒಳ್ಳೆಯವರು ಆಗಿದ್ದರು, ನಮ್ಮ ಮನಸ್ಸಿನಲ್ಲಿ ಇನ್ನೊಬ್ಬರ ಮೇಲೆ ಎಷ್ಟೇ ಪ್ರೀತಿಯಿದ್ದರು ಸಹ ಭಾವನೆಗಳ ಕ್ಷಣಿಕ ಅಸಮತೋಲನಕ್ಕೆ ಅವುಗಳನ್ನೇ ಮತ್ತೊಬ್ಬರು ಪ್ರಶ್ನಿಸುವಂತೆ ನಡೆದುಕೊಂಡು ಬಿಡುತ್ತೇವೆ. ಅದಕ್ಕಾಗಿಯೇ ಯಾವಾಗಲೂ ಒಳ್ಳೆಯ ದೃಷ್ಟಿಕೋನದಲ್ಲಿ ಜಗತ್ತನ್ನು ಕಾಣುವ ಅಭ್ಯಾಸವನ್ನು ನಾವು ಪ್ರತಿದಿನ ಮಾಡಬೇಕು. ನಮ್ಮ ಭಾವನೆಗಳನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡಬೇಕು, ಭಾವನೆಗಳ ತಳಮಳವನ್ನು ತಡೆದುಕೊಳ್ಳಲು ಸಾಧ್ಯವೇ ಆಗದಿದ್ದಾಗ ಸ್ವಲ್ಪ ಸಮಯ ಸುಮ್ಮನಾಗಿಬಿಡಬೇಕು. ಸ್ವಲ್ಪ ಸಮಯದ ನಂತರ ತಾನಾಗಿಯೇ ಕೋಪ, ಬೇಸರ, ನೋವು, ಹತಾಶೆ, ಕೋಪ ಮುಂತಾದವುಗಳು ನಿಧಾನವಾಗಿ ಕಡಿಮೆಯಾಗುತ್ತವೆ, ನಂತರ ಟೆಕ್ಸ್ಟ್ ಮಾಡಬೇಕು. ಈ ಅಭ್ಯಾಸ ಇಲ್ಲದೆ ಹೋದರೆ ಸಿಕ್ಕ ಸಿಕ್ಕವರ ಜೊತೆಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಜಗಳವಾಡಿಕೊಂಡು ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ. ನಿಮ್ಮ ಜೀವನದಲ್ಲಿ ನೀವು ಎಂದಿಗೂ ಮಾಡದೆ ಇರುವ ಕೆಟ್ಟ ಕೆಲಸಗಳನ್ನು ಕೆಲವು ಭಾವನೆಗಳು ಮಾಡಿಸಿಬಿಡುತ್ತವೆ. ಇದನ್ನೆಲ್ಲ ಅರ್ಥ ಮಾಡಿಕೊಳ್ಳುವ ಗೆಳೆತನ ಅಥವಾ ಸಂಬಂಧ ನಿಮ್ಮದಾಗಿದ್ದರೆ ಮತ್ತೆ ಮೊದಲಿನಂತೆ ಎಲ್ಲವೂ ಸರಿದಾರಿಗೆ ಬರುತ್ತದೆ, ಇಲ್ಲದೆ ಹೋದರೆ ಜೀವನದಲ್ಲಿ ಒಂದು ಕೊರಗಾಗಿ ಉಳಿದುಬಿಡುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹೆಚ್ಚು ಸಮಯ ಕಳೆದಂತೆ ನಮ್ಮ ತಾಳ್ಮೆ ಕಡಿಮೆಯಾಗುತ್ತ ಹೋಗುತ್ತದೆ. ಇದರೊಂದಿಗೆ ಬದುಕಿನ ಇನ್ನಷ್ಟು ಸಮಸ್ಯೆಗಳು ನಮ್ಮನ್ನು ಪೀಡಿಸಲು ಆರಂಭಿಸಿದರೆ ತಲೆ ಕೆಟ್ಟುಹೋಗುತ್ತದೆ. ಹೀಗಾಗಿ ನಮ್ಮ ತಾಳ್ಮೆಯನ್ನು ಹೆಚ್ಚಿಸಿಕೊಳ್ಳುವ ಮತ್ತು ಸಮಸ್ಯೆಗಳು ಎದುರಾದಾಗ ಭಾವನಾತ್ಮಕವಾಗಿ ಅಥವಾ ನಮ್ಮದೇ ಹಳೆಯ ತಪ್ಪು ದೃಷ್ಟಿಕೋನದಿಂದ ನಿರ್ಧಾರ ತೆಗೆದುಕೊಳ್ಳದ ಗುಣವನ್ನು ನಾವು ಬೆಳೆಸಿಕೊಳ್ಳುವ ಅಗತ್ಯ ಪ್ರಸ್ತುತ ಜಗತ್ತಿಗೆ ಇದೆ. ಡಿಜಿಟಲ್ ಮಾತುಕತೆಯಲ್ಲಿ ಮಾತುಗಳು ನಮ್ಮಿಂದಲೇ ಬಂದರು ಸಹ ಅವು ನಮ್ಮನ್ನಾಗಲಿ ಅಥವಾ ನಮ್ಮ ಸಂಪೂರ್ಣ ವ್ಯಕ್ತಿತ್ವದ ಚಿತ್ರಣವಾಗಲಿ ಕೊಡುವುದಿಲ್ಲ ಎಂಬ ಕನಿಷ್ಟ ಅರಿವು ನಮಗೆ ಇರಬೇಕು. ಯಾರೊಂದಿಗೆ ನಾವು ನಿಜ ಜೀವನದಲ್ಲಿ ಹೆಚ್ಚು ಸಮಯ ಕಳೆಯಲು ಆರಂಭಿಸುತ್ತೇವೆಯೋ ಆಗ ನಮಗೆ ಅವರ ಬಗ್ಗೆ ಹೆಚ್ಚು ಹೆಚ್ಚು ತಿಳಿಯುವ ಅವಕಾಶ ಸಿಗುತ್ತದೆ. ಇದರಿಂದಾಗಿಯೇ ಸಾಕಷ್ಟು ದೂರದ ವ್ಯಕ್ತಿಗಳೊಂದಿಗಿನ ಸಂಬಂಧ ಹದಗೆಡುತ್ತದೆ, ಎಲ್ಲವನ್ನೂ ಸರಿಪಡಿಸಬಹುದು ಆದರೆ ಆ ಕೆಲಸ ಮೊದಲು ನಾವು ಸರಿಯಾಗುವ ಮೂಲಕ ಶುರುವಾಗಬೇಕು. ಜಗತ್ತಿನಲ್ಲಿ ಯಾರು ಸಹ ಎಲ್ಲವನ್ನು ತಿಳಿದುಕೊಂಡು ಸದಾಕಾಲ ಸರಿಯಾಗಿ ಇರುವವರು ಇರುವುದಿಲ್ಲ, ಎಲ್ಲರೂ ಸಹ ತಮ್ಮ ಜೀವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡುತ್ತಾರೆ. ತಪ್ಪುಗಳನ್ನು ಆದಷ್ಟು ಬೇಗ ಗುರುತಿಸಿ ಸಮಯ ಕೊಟ್ಟು ಸರಿಪಡಿಸಿಕೊಂಡು ಮುಂದೆ ಹಾಗಾಗದಂತೆ ಜೀವನ ರೂಪಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.      

ಎಲ್ಲಾ ಭಾವನೆಗಳು ಸಹ ನಮ್ಮ ಮನಸ್ಸಿಗೆ ಬಹಳ ಅವಶ್ಯಕ, ಭಾವನೆಗಳು ಇಲ್ಲದೆ ಮನಸ್ಸು ಜೀವಂತವಾಗಿರುವುದೇ ಇಲ್ಲ. ಆದರೆ ನಮ್ಮ ಎಲ್ಲಾ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ತಾಳ್ಮೆ ಹಾಗೂ ಜಾಣ್ಮೆ ಈಗಿನ ಜನಜೀವನದಲ್ಲಿ ಕಡಿಮೆಯಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಉಪಯೋಗಿಸುವ ಇಂಟರ್ನೆಟ್ ವೇಗ ಹೆಚ್ಚಾದಂತೆ ನಮ್ಮ ಸಾಮಾಜಿಕ ಜೀವನದ ಗುಣಮಟ್ಟ ಕಡಿಮೆಯಾಗುತ್ತಿದೆ. ಕೇವಲ ಹೆಸರಿಗೆ ಸಾವಿರಾರು ಜನ ಪರಿಚಿತರ ಗೆಳೆತನ ಇದ್ದರೆ ಸಾಕಾಗುವುದಿಲ್ಲ, ನಮ್ಮ ಮೇಲೆ ನಿಜವಾಗಿಯೂ ಕಾಳಜಿ ಇರುವ ಅರ್ಥಪೂರ್ಣ ಸಂಬಂಧಗಳು ಬದುಕಿಗೆ ಬಹಳ ಅವಶ್ಯಕ. ಡಿಜಿಟಲ್ ಯುಗದಲ್ಲಿ ಹೊಸ ಗೆಳೆಯರನ್ನು ಸಂಪಾದಿಸುವುದು ಸಮಯ ಕೊಟ್ಟರೆ ಬಹಳ ಸುಲಭ ಆದರೆ, ಅರ್ಥಪೂರ್ಣ ಮತ್ತು ಜೀವನಕ್ಕೆ ಅತಿ ಅವಶ್ಯಕವಾದ ಪ್ರಾಮಾಣಿಕ ಸ್ನೇಹ ಸಂಬಂಧಗಳನ್ನು ಕಾಪಾಡಿಕೊಳ್ಳಲು ಕಷ್ಟಕರವಾದ ಪರಿಸ್ಥಿತಿ ಸಾಕಷ್ಟು ಜನರ ಜೀವನದಲ್ಲಿ ಎದುರಾಗಿದೆ. ಯಾವುದಕ್ಕೂ ಇದೆ ಪರಿಹಾರ ಎಂದು ಸುಲಭವಾಗಿ ಹೇಳಿಬಿಡುವಷ್ಟು ಸರಳವಾಗಿ ಇಂದಿನ ಜೀವನದ ಸಮಸ್ಯೆಗಳು ಇಲ್ಲ, ಇಂತಹ ಕ್ಲಿಷ್ಟ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಮ್ಮ ಜೊತೆಗಿದ್ದು ನಮ್ಮ ಗೆಲುವಿನಲ್ಲಿ ಪಾಲುದಾರರಾಗುವ ಮತ್ತು ಜೀವನವನ್ನು ಅರ್ಥಪೂರ್ಣವಾಗಿಸುವ ಪರಿಹಾರಗಳನ್ನು ನಾವು ಕಂಡುಕೊಳ್ಳಬೇಕಿದೆ.        

ಕಾಮೆಂಟ್‌ಗಳು

- Follow us on

- Google Search