ಬದಲಾಗುವ ಮುನ್ನ

ನಾನು ಹತ್ತಾರು ವರ್ಷ ಕಳೆದ ಹಳ್ಳಿ ಬದಿಯ ಊರನ್ನು ಬಹಳ ಇಷ್ಟಪಡಲು ಆರಂಭಿಸಿದ್ದು ಇಲ್ಲಿಂದ ದೂರದ ಊರಿಗೆ ಓದಲು ಹೋದಾಗ. ಅಲ್ಲಿಯವರೆಗೆ ಈ ಊರಿಗೆ ಇರುವ ಚೆಲುವು, ಏಕಾಂಗಿತನ ಮುಂತಾದ ಯಾವ ಲಕ್ಷಣವೂ ನನಗೆ ಹಿಡಿಸಿರಲಿಲ್ಲ. ಬಹುಷಃ ನನ್ನ ಅಮ್ಮನಿಗೂ ಈ ಊರನ್ನು ಬಿಟ್ಟು ಪೇಟೆ ಬದಿಯ ಹೊಸ ಊರಿಗೆ ಹೋಗಿ ಸ್ವಂತ ಉದ್ಯಮದಿಂದ ನೆಮ್ಮದಿಯಾಗಿ ಬದುಕುವ ಯೋಚನೆಯು ಇರಬಹುದು. ಹೌದು, ಊರು ಅಷ್ಟೇನೂ ಅಭಿವೃದ್ಧಿ ಕಂಡಿಲ್ಲ, ಒಂದಷ್ಟು ಕಾಫಿ, ಅಡಿಕೆ, ಟೀ ತೋಟ ಹೊಂದಿರುವ ಶ್ರೀಮಂತರನ್ನು ಬಿಟ್ಟರೆ ಉಳಿದವರದ್ದು ಅಂತಹ ಸುಲಭ ಜೀವನವಲ್ಲ. ಸಮಾಜದಲ್ಲಿ ಬೆಳೆದು ಬಂದಿರುವ ಸಂಸ್ಕೃತಿ, ಸಂಪ್ರದಾಯ, ನೀತಿ ನಿಯಮ ಇವುಗಳನ್ನೆಲ್ಲ ತಮ್ಮ ಶಕ್ತಿ ಮೀರಿ ಆಚರಿಸಲು ಮುಂದಾಗುವ ಸಾಹಸ ಬಹಳಷ್ಟು ಜನ ತೋರುತ್ತಾರೆ. ಇದೆ ಕಾರಣಕ್ಕೆ ಇರಬೇಕು, ಸಾಕಷ್ಟು  ಮನೆಗಳಲ್ಲಿ ಕಡಿಮೆಯೆಂದರೂ ಎರಡು ಮೂರು ಲಕ್ಷದವರೆಗೆ ಸಾಲವಿದೆ. ಇದು ಕೇಳುವುದಕ್ಕೆ ಬಹಳ ಕಡಿಮೆ ಮೊತ್ತ ಅನ್ನಿಸಬಹುದು, ಆದರೆ ಇಲ್ಲಿಯ ಜನರ ದುಡಿಮೆಯು ಕಡಿಮೆ. ತಿಂಗಳಿಗೆ ಅಂದಾಜು ಹತ್ತು ಸಾವಿರ ದುಡಿಯಬಹುದು, ಅದರಲ್ಲಿ ಮನೆ ಖರ್ಚೆಲ್ಲಾ ಕಳೆದರೆ ಕೊನೆಗೆ ಉಳಿಯುವುದು ಬಹಳ ಕಡಿಮೆ. ಅದರಲ್ಲೂ ಒಬ್ಬರೇ ದುಡಿಯುವ ಮನೆಗಳಲ್ಲಿ ಇನ್ನು ಸಹ ಕಷ್ಟ. 

Photo by Darcey Beau on Unsplash

ಹೀಗಿರುವಾಗ ಈ ಊರಿಗೆ ರಸ್ತೆ ಕೂಡ ಸಮರ್ಪಕವಾಗಿಲ್ಲ. ಅದಕ್ಕಾಗಿ ಸಾಕಷ್ಟು ಹೋರಾಟಗಳು, ಮನವಿಗಳು, ಚುನಾವಣೆ ಬಹಿಷ್ಕಾರ ಮಾಡುವ ಬೆದರಿಕೆಗಳು ಹೀಗೆ ಹತ್ತು ಹಲವಾರು ಪ್ರಯತ್ನಗಳು ನಡೆದಿವೆ. ರಸ್ತೆಯೇ ಸರಿಯಿಲ್ಲದ ಮೇಲೆ ಬಸ್ಸುಗಳ ಓಡಾಟ ಕೇಳಬೇಕೆ ? ಇಲ್ಲವೇ ಇಲ್ಲ. ಕೆಲವು ವರ್ಷಗಳ ಹಿಂದೆ ಭಾನುವಾರ ಸಂತೆಗೆ  ಹೋಗಲು ಹೆಚ್ಚಿನ ಜನ ಸೇರುವುದರಿಂದ ಒಂದು ಬಸ್ಸು ಬಿಟ್ಟಿದ್ದರು. ಅಲ್ಲಿಯೂ ಸಹ ಏನೋ ಗಲಾಟೆ ನಡೆದು ಅದು ಅಲ್ಲಿಗೆ ನಿಂತು ಹೋಯಿತು. ನಂತರ ಸಾರಿಗೆ ಸಂಪರ್ಕಕ್ಕೆ ಆಟೋ ಚಾಲಕರದ್ದೇ ದರ್ಬಾರು. ಅವರ ಸಂಘಗಳಲ್ಲಿ ನಿರ್ಧರಿಸಿದ್ದೆ ಬೆಲೆ, ಅದರಲ್ಲಿಯೂ ರಾತ್ರಿ ಅಥವಾ ಬೆಳಗ್ಗಿನ ಜಾವದ ಹೊತ್ತಾದರೆ ಇನ್ನು ಹೆಚ್ಚಿನ ಬೆಲೆ ಬಾಡಿಗೆಗೆ. ಇದನ್ನೆಲ್ಲಾ ಊರಿನವರು ಕಂಡು, ಕೆಲವರು ನಡೆದುಕೊಂಡೇ ದಾರಿಯಲ್ಲಿ ಸಾಗುತ್ತಿರುತ್ತಾರೆ. ಒಂದು ಆರೇಳು ಕಿಲೋಮೀಟರು ನಡೆದರೆ ಬಸ್ಸಿನ ನಿಲ್ದಾಣ ಸಿಗುತ್ತದೆ ಅಥವಾ ದಾರಿಯಲ್ಲಿ ಪೇಟೆಗೆ ಹೋಗುವ ಪರಿಚಯದ ಜನರು ಸಿಕ್ಕಿದರೆ ಅವರ ವಾಹನದಲ್ಲಿ ಕರೆದುಕೊಂಡು ಹೋಗುತ್ತಾರೆ. 

ಒಂದು ಅಂಗನವಾಡಿ, ಸರ್ಕಾರೀ ಕಿರಿಯ ಪ್ರಾಥಮಿಕ ಶಾಲೆ, ಒಂದು ಸಭಾಮಂಟಪ ಇಷ್ಟನ್ನು ಬಿಟ್ಟರೆ ಹೇಳಿಕೊಳ್ಳುವ ಸಾರ್ವಜನಿಕ ಆಸ್ತಿಗಳು ಇಲ್ಲ. ಕಳೆದ ವರ್ಷ ನಮ್ಮ ಹಳ್ಳಿಯ ಹತ್ತಿರದ ಪೇಟೆ ತಾಲ್ಲೂಕಾಗಿ ಘೋಷಣೆಯಾಗಿದೆ. ತಾಲ್ಲೂಕು ಆದಮೇಲೆ ಪೇಟೆಯಲ್ಲಿ ವಹಿವಾಟು ಹೆಚ್ಚುವುದು ಸಹಜ. ಇದರಿಂದಾಗಿ ಸುತ್ತಲಿನ ಊರುಗಳ ಜಾಗಗಳಿಗೂ ಬೆಲೆ ಹೆಚ್ಚುತ್ತಾ ಹೋಗುತ್ತಿದೆ. ಇದನ್ನೆಲ್ಲಾ ಗಮನಿಸಿದ ರಾಜಕಾರಣಿಗಳು, ಊರಿಗೆ ಹೈವೇ ಮಾದರಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಸುಮಾರು ಎಂಟರಿಂದ ಹತ್ತು ಕೋಟಿ ರೂಪಾಯಿಗಳ ಯೋಜನೆ ತಯಾರಿಸಿದ್ದಾರೆ. ಕಾಮಗಾರಿ ಕೂಡ ಆರಂಭವಾಗಿದೆ. ಸಧ್ಯಕ್ಕೆ ಅರಣ್ಯ ಇಲಾಖೆಯ ಅಧೀನದಲ್ಲಿರುವ ಕಾಡುಗಳಲ್ಲಿ ಸಮಯ ಕಳೆದಂತೆ ಶ್ರೀಮಂತರ ಎಷ್ಟು ಹೋಂ ಸ್ಟೇಗಳು ಆರಂಭವಾಗುತ್ತವೆ ಎಂದು ಕಾದು ನೋಡಬೇಕು. 

ಪೇಟೆಗೆ ಕೆಲಸದ ಮೇಲೆ ಬರುವ ಅಧಿಕಾರಿಗಳು, ರಾಜಕಾರಣಿಗಳಿಗೆ ಮಜಾ ಉಡಾಯಿಸಲು ಈ ಊರು ಯಾಕೋ ಕೈಬೀಸಿ ಕರೆಯುತ್ತದೇನೋ ಎನ್ನುವ ಯೋಚನೆಗಳು ನನಗೆ ಬರುತ್ತಿವೆ. ಊರಿನಲ್ಲಿ ಸರ್ಕಾರೀ ಸೌಲಭ್ಯಗಳು ಇಲ್ಲದೆ ಹೋದರು ಸಹ, ಎಲ್ಲಿಯೂ ಕಸ ಎಸೆದಿರುವ ಗಲೀಜು ಪ್ರದೇಶಗಳನ್ನು ಇದುವರೆಗೆ ನೋಡಿಲ್ಲ. ಊರಿನಲ್ಲಿ ಇರುವುದು ಒಂದು ಅಂಗಡಿ ಮತ್ತು ಇನ್ನೊಂದು ನ್ಯಾಯಬೆಲೆ ಅಂಗಡಿ ಇದೆ. ಹೆಚ್ಚು ಜನರಿಗೆ ಉದ್ಯೋಗ ನೀಡಿರುವುದು ಸುತ್ತಲಿನ ತೋಟಗಳು. ಊರಿಗೆ ರಸ್ತೆಯಾಗಿ ಹೆಚ್ಚು ಜನರು ಇಲ್ಲಿಗೆ ಬರಲು ಆರಂಭಿಸಿದ ನಂತರ ಈ ಊರು ಹೇಗೆ ಬದಲಾಗುತ್ತದೆ ಎನ್ನುವ ಕುತೂಹಲ ನನಗಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಪೇಟೆಗೆ ಹೋಗುವ ರಸ್ತೆಯಲ್ಲಿ ಮರದ ನೆರಳು ಸದಾ ಬಿದ್ದು ತಂಪಾಗಿರುತಿತ್ತು, ರಸ್ತೆ ಕಾಮಗಾರಿ ಆರಂಭವಾಗುತ್ತಿದ್ದಂತೆ ಬದಿಯಿದ್ದ ಮರಗಳೆಲ್ಲ ನೆಲಸೇರಿವೆ. ದೊಡ್ಡ ಗಾತ್ರದ ಜಲ್ಲಿಕಲ್ಲಿನ ರಾಶಿಗಳು ರಸ್ತೆಯ ಬದಿಯಲ್ಲಿ ಬಂದು ಬಿದ್ದಿವೆ. ರಸ್ತೆ ಅಗಲ ಮಾಡಲು ಮಣ್ಣಿನ ಧರೆಯನ್ನು ಜೆಸಿಬಿಯಿಂದ ಕೊರೆದಿರುವ ಗುರುತುಗಳು ಎದ್ದು ಕಾಣುತ್ತಿವೆ. ಮಳೆಗಾಲದಲ್ಲಿ ಎಲ್ಲೆಲ್ಲಿ ಜರಿಯುವುದೋ ಎಂದು ಊಹಿಸಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ನೀರು ಹರಿದುಹೋಗಲು ಸೂಕ್ತ ಒಳಚರಂಡಿ ವ್ಯವಸ್ಥೆ ಮಾಡದೇ ಹೋದರೆ ರಸ್ತೆ ಒಂದೆರಡು ವರ್ಷಕ್ಕೆ ಹಾಳುಬೀಳುವುದು ಖಂಡಿತ. 

ಊರಿನ ಜನರು ಖುಷಿಯಾಗಿದ್ದಾರೆ, ರಸ್ತೆಯೊಂದು ಆದರೆ ಮುಂದಿನ ದಿನಗಳಲ್ಲಿ ಆ ದಾರಿಯಲ್ಲಿ ಬರುವ ಅಭಿವೃದ್ಧಿಯ ಯೋಜನೆಗಳ ಕನಸ್ಸು ಕಾಣುತ್ತಿದ್ದಾರೆ. ಜನರಿಗೆ ಒಂದಂತೂ ಗೊತ್ತಿಲ್ಲ, ಈಗ ತಾವಿರುವ ಹಚ್ಚ ಹಸುರಿನ ಪರಿಸರ, ಉಸಿರಾಡಲು ದೊರೆಯುತ್ತಿರುವ ಶುದ್ಧ ಗಾಳಿ, ಕುಡಿಯಲು ಎಲ್ಲೆಂದರಲ್ಲಿ ಸಿಗುತ್ತಿರುವ ನೀರು ಈ ಊರಿನ ನಿಜವಾದ ಸೌಂದರ್ಯ ಎಂದು. ಈ ಊರು ಬದಲಾಯಿತು ಎಂದರೆ ಮತ್ತೆ ಶಾಲೆಯ ದಿನಗಳಲ್ಲಿ ಓಡಾಡಿದ ರಸ್ತೆ ನೆನಪು ಮಾತ್ರ. ವಾಹನಗಳ ಸದ್ಧು ಈ ಊರಿನಲ್ಲಿ ಆಗೊಂದು ಈಗೊಂದು ಬಿಟ್ಟರೆ, ಪಶು ಪಕ್ಷಿ ಜನರ ಕೆಲಸಗಳ ಶಬ್ದವೇ ಊರನ್ನು ಆವರಿಸಿದೆ. ಚಿಂತೆಯ ಮಡುವಿನಲ್ಲಿ ಮುಳುಗಿಹೋದ ಮನಸ್ಸನ್ನು ಇಲ್ಲಿನ ಪರಿಸರ ಅದೆಷ್ಟೋ ಬಾರಿ ಶಾಂತಗೊಳಿಸಿ ಹೊಸ ಚೈತನ್ಯ ತುಂಬಿಸಿವೆ. 

ನಾನು ಸಹ ಶಾಲೆಯ ದಿನಗಳಲ್ಲಿ ಇದೇನು ಊರೆಂದು ಇಲ್ಲಿನ ಸೌಲಭ್ಯಗಳ ಕೊರತೆಯನ್ನು ಕಂಡು ಬೇಸರಗೊಂಡ ಸಾಕಷ್ಟು ದಿನಗಳು ಆಗಾಗ ನೆನಪಾಗುತ್ತವೆ. ಒಂದು ಒಳ್ಳೆಯ ಶಾಲೆ ಹಾಗು ಆಸ್ಪತ್ರೆ ಈ ಊರಿನಲ್ಲಿ ಆದರೆ ಅದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಶಾಲೆಗೆ ಉತ್ತಮ ಶಿಕ್ಷಕರು ಬರಬೇಕು, ಆಸ್ಪತ್ರೆಗೆ ಒಳ್ಳೆಯ ವೈದ್ಯರು ಬರಬೇಕು, ಇಲ್ಲದೆ ಹೋದರೆ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಈ ಊರಿನ ಬದಲಾವಣೆ ರಸ್ತೆಯಾದ ನಂತರ ಬಹಳ ವೇಗ ಪಡೆದುಕೊಳ್ಳುತ್ತದೆ. ಊರಿನ ಸುತ್ತಮುತ್ತ ಹಬ್ಬಿರುವ ಕಾಡು ಹಾಗೆಯೆ ಉಳಿದರೆ ಸಾಕು, ಅದು ಹಣ ಮತ್ತು ಅಧಿಕಾರದ ಬಲವಿರುವ ಜನರ ಆಸೆಗೆ ಬಲಿಯಾಗದಿರಲಿ. 

ಈ ಊರಿನಲ್ಲಿ ಬೀಸುವ ತಂಗಾಳಿ, ಬೆಳಿಗ್ಗೆ ಮುಂಚೆಯ ಮಂಜು ಕವಿದ ವಾತಾವರಣ, ಚಳಿ, ಮಳೆ, ನೈಸರ್ಗಿಕವಾಗಿ ಹರಿಯುವ ನೀರಿನ ಸೆಲೆಗಳು ಎಂದಿಗೂ ಹಾಗೆಯೆ ಇರಲಿ ಎಂಬುದು ನನ್ನ ಆಸೆ. ಪೇಟೆಯ ವ್ಯಾಪಾರಿಗಳು ಆ ಊರಿನಲ್ಲಿ ತಮ್ಮ ಜಾತಿಯ ಜನರೇ ಸಾಮ್ರಾಜ್ಯ ಸ್ಥಾಪಿಸಿರುವಂತೆ ಇಲ್ಲಿಯೂ ವ್ಯಾಪಾರದ ಮೂಲಕ ಲಾಭಗಳಿಸಲು ಹಾತೊರೆಯುತ್ತಿದ್ದಾರೆ. ಇಲ್ಲಿನ ಜನರ ಬಳಿ ಹಣವಿಲ್ಲ, ಪೇಟೆಯಲ್ಲಿ ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡಿರುವವರ ಬಳಿ ಕೋಟಿಗಟ್ಟಲೆ ಹಣವಿದೆ. ಇಷ್ಟು ವರ್ಷ ಈ ಊರಿನ ಜನರ ಬಗ್ಗೆ ತಲೆಯೇ ಕೆಡಿಸಿಕೊಳ್ಳದ ನಾಯಿ ನರಿಗಳೆಲ್ಲ ಊರಿನ ಸಂಪತ್ತನ್ನು ಕೊಳ್ಳೆ ಹೊಡೆಯಲು ಮುಂದೆ ಬರುವುದಂತೂ ಖಂಡಿತ. ಈ ಊರು ಬದಲಾದಂತೆ ಈ ಊರಿನ ಜನರ ಜೀವನಮಟ್ಟವು ಸಹ ಅಭಿವೃದ್ಧಿಯಾದರೆ ಅದು ಕೂಡ ಒಳ್ಳೆಯದೆ.   

ನೋಡೋಣ ಈ ಮಲೆನಾಡಿನ ಕುಗ್ರಾಮ ಹೇಗೆಲ್ಲ ಬದಲಾವಣೆಯಾಗುತ್ತದ್ದೆ ಒಂದಷ್ಟು ವರ್ಷಗಳ ನಂತರ.

"ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು
ಕೋಟಿ ಧನವಿದ್ದರೂ ಪಟ್ಟಣವು ಗೋಳು,
ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು."
-- ಕುವೆಂಪು

ಕಾಮೆಂಟ್‌ಗಳು

- Follow us on

- Google Search