ಗರುಡ ಗಮನ ವೃಷಭ ವಾಹನ.

ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಸುದ್ಧಿ ಮಾಡಿದ ಕನ್ನಡ ಸಿನಿಮಾ ಗರುಡ ಗಮನ ವೃಷಭ ವಾಹನ. ರಾಜ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಅವರು ಅಭಿನಯಿಸಿರುವ ಸಿನಿಮಾ ಇದಾಗಿದೆ. ಟ್ರೈಲರ್ ಬಿಟ್ಟಾಗ ಸಹ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ರಿಷಬ್ ಹಾಗು ರಾಜ್ ಶೆಟ್ಟಿ ಅವರು ಸಿನಿಮಾ ಲೋಕದಲ್ಲಿ ಒಂದಿಲ್ಲೊಂದು ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಹೀಗಾಗಿ ಒಂದು ಸಿನೆಮಾದಿಂದ ಇನ್ನೊಂದು ಸಿನಿಮಾಕ್ಕೆ ನಿರೀಕ್ಷೆಗಳು ಹೆಚ್ಚುತ್ತಲೇ ಹೋಗುತ್ತವೆ. ಅದರಲ್ಲೂ ಹೆಚ್ಚು ಹೆಚ್ಚು ಸಮಯ ತೆಗೆದುಕೊಂಡರಂತೂ ಕಾತರ ಕುತೂಹಲಗಳು ಇನ್ನೂ ಹೆಚ್ಚುತ್ತವೆ. 

ಇವರ ಸಿನೆಮಾಗಳಲ್ಲಿ ಎದ್ದು ಕಾಣುವ ಒಂದು ಅಂಶವೆಂದರೆ ದಕ್ಷಿಣ ಕನ್ನಡದ ಸ್ಥಳೀಯ ಜೀವನಶೈಲಿ ಮತ್ತು ಅಲ್ಲಿನ ಸಂಸ್ಕೃತಿಯನ್ನು ಸಿನಿಮಾದಲ್ಲಿ ಬಹಳ ಸಹಜವಾಗಿ ತೋರಿಸುವುದು. ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ, ಅಲ್ಲಿನ ಜನಜೀವನದ ಬಗ್ಗೆ ನಮಗೆ ಸ್ವಲ್ಪವೂ ಅನುಭವ ಇಲ್ಲದೆ ಹೋದರೆ ಏನಿದೆ ಇದರಲ್ಲಿ ಎನ್ನುವ ಗೊಂದಲಕ್ಕೆ ಕೆಲವು ನೋಡುಗರು ಒಳಗಾಗುತ್ತಾರೆ. ಹೆಚ್ಚಿನ ಸಿನಿಮಾ ಪ್ರೇಮಿಗಳು, ಆ ಕಥೆಯ ಲೋಕದಲ್ಲಿ ಮುಳುಗಿ ಹೋಗುತ್ತಾರೆ. ಅಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶಗಳು ಸೋಜಿಗವೆನ್ನಿಸುತ್ತವೆ. ಈ ಸಿನಿಮಾ ಹರಿ ಮತ್ತು ಶಿವ ಎಂಬ ಇಬ್ಬರು ಹುಡುಗರ ಜೀವನದ ಕಥೆ. ಕೊನೆಯ ತನಕವೂ ಮುಂದೇನಾಗುತ್ತದೆ ಎನ್ನುವ ಸಣ್ಣ ಕುತೂಹಲ ನೋಡುಗರಿಗೆ ಇದ್ದೆ ಇರುತ್ತದೆ. ನೀವು ನೋಡಿಲ್ಲವೆಂದರೆ ನೋಡಬಹುದಾದ ಉತ್ತಮ ಸಿನಿಮಾ ಇದಾಗಿದೆ. 
ಸಿನಿಮಾದ ಪಾತ್ರಗಳ ಬಗ್ಗೆ ಮತ್ತು ಕತೆಯ ಬಗ್ಗೆ ಸ್ವಲ್ಪ ಮಾತನಾಡೋಣ. ಹರಿ ಬಾಲ್ಯದಲ್ಲಿ ತನ್ನ ಅಮ್ಮನೊಂದಿಗೆ ಗುಡಿಸಲಿನಂತಹ ಮನೆಯಲ್ಲಿ ಇದ್ದವನು. ಒಂದು ದಿನ ತಮ್ಮ ಮನೆಯ ಬಾವಿಯಲ್ಲಿ ಮೂಟೆಕಟ್ಟಿ ಹಾಕಿದ್ದ ಹುಡುಗನ ಹೆಣದಂತಹ ದೇಹ ಸಿಕ್ಕುತ್ತದೆ. ಶಿವ ಎನ್ನುವ ಸಣ್ಣ ವಯಸ್ಸಿನ ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬಾವಿಗೆ ಮೂಟೆಕಟ್ಟಿ ಹಾಕಿದ್ದರು, ಆದರೂ ಶಿವ ಅದೃಷ್ಟ ಎಂಬಂತೆ ಜೀವಂತವಾಗಿದ್ದ. ಆಸ್ಪತ್ರೆಗೆ ಸೇರಿಸಿ, ಹಲವಾರು ದಿನಗಳ ಚಿಕಿತ್ಸೆಯ ನಂತರ ಶಿವ ಬದುಕುಳಿದ. ಸಣ್ಣ ವಯಸ್ಸಿನ ಹುಡುಗ, ಯಾರು ಸಹ ಆ ಊರಿನಲ್ಲಿ ಗುರುತು ಪರಿಚಯವಿಲ್ಲ. ನನ್ನ ಪ್ರಕಾರ ಬೇರೆ ಊರಿಗೆ ಹೋಗಬೇಕಾಗಿದ್ದ ಶಿವನ ತಾಯಿಯನ್ನು ಯಾರೋ ಕೊಲೆ ಮಾಡಿ ರೈಲು ಗುದ್ದಿ ಸತ್ತಿದ್ದು ಎನ್ನುವ ಹಾಗೆ ಮಾಡಿದ್ದಾರೆ, ಸತ್ಯ ಹೊರಬರದಂತೆ ಶಿವನಿಗೂ ಹಾಗೆ ಮಾಡಲು ಪ್ರಯತ್ನ ಮಾಡಿದ್ದಾರೆ. ಈಗ ಶಿವ ತಬ್ಬಲಿ. ಬೀದಿ ಬೀದಿಯಲ್ಲಿ ಸುತ್ತಿ ಜನರು ಕೊಡುವ ಚಿಲ್ಲರೆ ಕಾಸನ್ನು ಒಟ್ಟು ಮಾಡಿ ಜೀವನ ಸಾಗಿಸುವ ಪ್ರಯತ್ನವನ್ನು ಸಣ್ಣ ಹುಡುಗ ಶಿವ ಮಾಡುತ್ತಿರುತ್ತಾನೆ. ಇದನ್ನು ನೋಡಿ ಪಾಪ ಅನ್ನಿಸಿ, ಹರಿಯ ತಾಯಿ ಶಿವನನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಹರಿಯೊಂದಿಗೆ ಸಾಕುತ್ತಾಳೆ.
ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಶಿವನ ಮನಸ್ಥಿತಿ. ಶಿವ ಅಷ್ಟು ಸಣ್ಣ ವಯಸ್ಸಿನಲ್ಲಿ ಕೊಲೆಯಾಗುವ ಭೀಕರ ದುರಂತಕ್ಕೆ ಒಳಗಾಗಿರುತ್ತಾನೆ, ತನ್ನ ತಾಯಿಯನ್ನು ಸಹ ಯಾರೋ ಕೊಲೆ ಮಾಡಿದ್ದಾರೆ. ಅಷ್ಟು ಸಣ್ಣ ವಯಸ್ಸಿನಲ್ಲಿ ಶಿವ ಒಳಗಾದ ಮಾನಸಿಕ ಆಘಾತಕ್ಕೆ ಯಾವುದೇ ಚಿಕಿತ್ಸೆ ಅಥವಾ ಅದನ್ನು ಗುರುತಿಸಿ ಸರಿಪಡಿಸುವ ಪ್ರಯತ್ನ ಕೂಡ ನಡೆಯುವುದಿಲ್ಲ. ಶಿವ ಬಾಲ್ಯದಲ್ಲಿ ಅನುಭವಿಸಿದ ಈ ಮಾನಸಿಕ ಹಾಗೂ ದೈಹಿಕ ಆಘಾತದ ನೋವು ತನ್ನ ಉಳಿದೆಲ್ಲ ನೋವಿನ ಭಾವನೆಗಳನ್ನು ಹೊಸಕಿ ಹಾಕಿರುತ್ತದೆ. ಹೀಗಾಗಿ ಶಿವನಿಗೆ ಹಲವಾರು ವರ್ಷಗಳ ಕಾಲ ಯಾರು ಅದೆಷ್ಟೇ ನೋವು ಕೊಟ್ಟರೂ ಸಹ ಆತ ಎಂದಿಗೂ ನೋವನ್ನು ತೋರ್ಪಡಿಸಿಕೊಂಡಿಲ್ಲ ಹಾಗೂ ನೋವುಂಟು ಮಾಡಿದವರಿಗೆ ಎದುರಾಗಿ ಹೊಡೆದಿಲ್ಲ. ಶಿವನಿಗೆ ನಿರಂತರವಾಗಿ ನೋವು ಕೊಡುತ್ತಿದ್ದಾರೆ, ಆದರೆ ಶಿವನ ಒಳಗಡೆ ಈ ಎಲ್ಲಾ ನೋವುಗಳಿಗಿಂತ ದೊಡ್ಡದಾದ ನೋವು ಬಾಲ್ಯದಿಂದ ಕೂತಿದೆ. ಶಿವನಿಗೆ ಪ್ರೀತಿ ತೋರಿದ ಜನರೆಂದರೆ ಹರಿ ಮತ್ತು ಅವನ ಅಮ್ಮ. ಜೀವ ಉಳಿಯಲು ಕಾರಣ ಸಹ ಅವರೇ, ಸಾಕಿ ಬೆಳೆಸಿದ್ದು ಸಹ ಅವರೇ. ಹೀಗಾಗಿ ಶಿವನಿಗೆ ಹರಿಯೆಂದರೆ ಪ್ರೀತಿ, ಹರಿಗಾಗಿ ಏನು ಮಾಡಲು ಸಹ ಸಿದ್ಧ. 

ಹರಿಗೆ ಗನ್ ತೋರಿಸಿ ಹೆದರಿಸಿದಾಗ ತನಗೇ ಗೊತ್ತಿಲ್ಲದೆ ಶಿವ ನೇರವಾಗಿ ನುಗ್ಗಿ ಅವನನ್ನು ಚಚ್ಚಿ ಹೊಡೆದು ಸಾಯಿಸಿಬಿಡುತ್ತಾನೆ. ಅದುವರೆಗೂ ಯಾರಿಗೂ ನೋವು ಮಾಡದ ಶಿವ, ಹರಿಗೆ ಯಾರಾದರೂ ಅಪಾಯ ತರುತ್ತಾರೆ ಎಂದೆನಿಸಿದರೆ ಅವರನ್ನು ಕೊನೆಗಾಣಿಸಲು ಹಿಂದುಮುಂದು ನೋಡುವುದಿಲ್ಲ. ಹರಿಗೆ ಶಿವನಿಂದ ಊರಿನ ಜನರಲ್ಲಿ ಭಯ ಭಕ್ತಿ ಹೆಚ್ಚಿ ಸಾಕಷ್ಟು ಕಾಸು ಹಾಗೂ ದೊಡ್ಡ ದೊಡ್ಡ ವ್ಯಕ್ತಿಗಳ ಪರಿಚಯವಾಗುತ್ತದೆ. ಇದರ ಸಂಪೂರ್ಣ ಲಾಭವನ್ನು ಹರಿ ಪಡೆಯುತ್ತಾನೆ. ಶಿವನಿಗೆ ಇಂತಹ ಯಾವುದೇ ಆಸೆಗಳಾಗಲಿ ಅಥವಾ ಗುರಿಯಾಗಲಿ ಜೀವನದಲ್ಲಿ ಇಲ್ಲ. ಶಿವನಿಗೆ ಅರ್ಥವಾಗುವುದು ಇಷ್ಟೇ, ತನ್ನನ್ನು ಪ್ರೀತಿಸುವವರಿಗೆ ಯಾರೇ ನೋವು ಮಾಡಿದರೂ ಸಹ ಅವರಿಗೆ ಒಂದು ಗತಿ ಕಾಣಿಸುವುದು. ಹರಿಗೆ ದೊಡ್ಡ ಜನರು ಪರಿಚಯವಾಗುತ್ತಿದ್ದಂತೆ ಶಿವನನ್ನು ದೂರವಿಡುವ ಚಾಳಿ ಶುರುವಾಯಿತು. ಶಿವನನ್ನು ಬೇಕಾದ ಕೆಲಸಗಳಿಗೆ ಮಾತ್ರ ಉಪಯೋಗಿಸಿಕೊಂಡು ಹರಿ ಮನೆ, ಕಾರು, ಸಂಪತ್ತು ಸಂಪಾದನೆ ಮಾಡುತ್ತಾ ಹೋದ. ಶಿವನಿಗೆ ಇವು ಯಾವುದರ ಬಗ್ಗೆಯೂ ಗಮನವಿಲ್ಲ. ಸಮಯ ಸಿಕ್ಕಿದಾಗ ಕ್ರಿಕೆಟ್ ಆಡುವುದು, ತನ್ನವರಿಗೆ ಯಾರಾದರೂ ಎದುರಾದರೆ ಅವರಿಗೊಂದು ಗತಿ ಕಾಣಿಸುವುದು ಇದೆ ಶಿವನ ಜೀವನ. ಆಗಾಗ ಜೈಲಿಗೆ ಹೋಗಿ ಬರುವುದು. 
ಶಿವನ ಹುಚ್ಚಾಟಗಳಿಂದ ಬೇಸತ್ತು ಹರಿ ಅವನನ್ನು ದೂರ ಮಾಡಿದ್ದು ಸಹ ಅಲ್ಲದೆ ಶಿವನನ್ನೇ ಕೊಲ್ಲುವುದಾಗಿ ಹೇಳಿದ ಮಾತು ಆತನಿಗೆ ತೀವ್ರ ಆಘಾತ ಉಂಟುಮಾಡಿತು. ಶಿವನಿಗೆ ಹರಿ ತನ್ನ ಜೊತೆಗಾರರನ್ನು ಕೊಂದಿದ್ದರು ಸಹ ಹರಿಯ ಮೇಲಿನ ಪ್ರೀತಿ ಅವನನ್ನು ಕೊಲ್ಲದಂತೆ ತಡೆದಿತ್ತು. ಆದರೆ ಹರಿಗೆ ಹೆಚ್ಚು ಪ್ರೀತಿ ಶಿವನ ಮೇಲಿರಲಿಲ್ಲ, ಹರಿಗೆ ಯಾರು ಬೆಳೆಯಲು ಸಹಾಯ ಮಾಡುವರೊ ಅವರ ಮೇಲೆಯೇ ಹೆಚ್ಚು ಒಲವು. ಶಿವ ಹರಿಯೊಂದಿಗೆ ಇರುವ ತನಕ ಹರಿಗೆ ಯಾರೇನು ಮಾಡಲು ಸಹ ಸಾಧ್ಯವಿಲ್ಲ, ಆದರೆ ಹರಿಗೆ ಶಿವ ದೊಡ್ಡ ತೊಡಕಾಗಿದ್ದಾನೆ. ಹರಿ ತನ್ನೊಂದಿಗೆ ಇದ್ದವರನ್ನು ಉಪಯೋಗಿಸಿಕೊಂಡು ಬೆಳೆದಿದ್ದೇ ಹೊರತು, ಹರಿ ಶಿವನಂತೆ ಕೊಲೆ ಮಾಡುವ ಮನಸ್ಥಿತಿಯವನಲ್ಲ. ಆದರೆ ಕೊಲೆ ಮಾಡಿಸಲು ಹರಿ ಹಿಂದುಮುಂದು ನೋಡುವುದಿಲ್ಲ. 
ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಹರಿ ಮತ್ತು ಶಿವನನ್ನು ಮಟ್ಟ ಹಾಕಲು ಪುಕ್ಕಲು ಪೊಲೀಸ್ ಅಧಿಕಾರಿಯೊಬ್ಬನನ್ನು ನೇಮಿಸಲಾಗುತ್ತದೆ. ಆತನಿಗೆ ಒಂದೆಡೆ ಕುಟುಂಬದ ಚಿಂತೆ, ಇನ್ನೊಂದೆಡೆ ರಾಜಕಾರಣಿಯ ಒತ್ತಡ. ತಾನಾಗಿಯೇ ಏನು ಸಹ ಮಾಡಲಾಗದ ಪರಿಸ್ಥಿತಿ. ಇವರಿಬ್ಬರನ್ನು ಮುಗಿಸಲು ಮಾಡಬೇಕಾದ ಬಹಳ ಸುಲಭ ಮತ್ತು ಸುರಕ್ಷತೆಯ ಆಯ್ಕೆಯನ್ನು ಪೊಲೀಸ್ ಮಾಡುತ್ತಾನೆ. ಶಿವ ಮತ್ತು ಹರಿಯನ್ನು ದೂರವಾಗಿಸಿ, ಶಿವನಿಂದಲೇ ಹರಿಯನ್ನು ಹೊಡೆಸಿ, ನಂತರ ಶಿವನನ್ನು ಮುಗಿಸುವ ಯೋಚನೆಯನ್ನು ಪೊಲೀಸ್ ಮಾಡುತ್ತಿರುತ್ತಾನೆ. ಇದಕ್ಕೆ ಸಾಕಷ್ಟು ಪ್ರಯತ್ನ ಸಹ ಮಾಡುತ್ತಾನೆ. ಇದಾಗಿದೆ ಇದ್ದಾಗ ಹರಿಯಿಂದ ಶಿವನ ಕೊಲೆಯಾಗುವಂತಹ ಅವಕಾಶವನ್ನು ಪೊಲೀಸ್ ಕರೆಗಳನ್ನು ಕದ್ದು ಕೇಳಿ ಪ್ರಯೋಗಿಸುತ್ತಾನೆ. ಈ ಬಾರಿ ಶಿವನ ಅಂತ್ಯವಾಗುತ್ತದೆ. ಇಲ್ಲಿಯತನಕ ಕತೆ ಬಹಳ ಚೆನ್ನಾಗಿ ಅನ್ನಿಸಿತು. ಕೋವಿಯ ಗುಂಡುಗಳು ದೇಹವನ್ನು ಹೊಕ್ಕಿದ್ದರು ಸಹ ಶಿವ ತನಗೇನು ನೋವಾಗಿಲ್ಲ ಎಂದೇ ಹೇಳುತ್ತಾನೆ, ಆದರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳುಯುತ್ತಾನೆ. 
ಹರಿಯನ್ನು ಶಿವನ ಕ್ರಿಕೆಟ್ ಆಡುವ ಸ್ನೇಹಿತರು ಅಡ್ಡ ಹಾಕಿ ಮುಗಿಸಿದ ಸಿನೆಮಾದ ಅಂತ್ಯ ನನಗೆ ಅಷ್ಟು ಸರಿ ಅನ್ನಿಸಲಿಲ್ಲ. ಮೊದಲನೆಯದಾಗಿ, ಅವರೆಲ್ಲರೂ ಎಳೆ ಹುಡುಗರು, ಎರಡನೆಯದಾಗಿ ಶಿವನನ್ನು ಮುಗಿಸುವ ಯೋಚನೆಯನ್ನು ಮಾಡುವ ಸಾಧ್ಯತೆ ಇದ್ದಂತಹ ಜನರೆಂದರೆ ಶಿವನ ಆತ್ಮೀಯ ಗೆಳೆಯ ಮತ್ತು ತನ್ನ ಭಾವನನ್ನು ಕಳೆದುಕೊಂಡಿದ್ದ ಹರಿಗೆ ಪರಿಚಯವಾಗಿದ್ದ ವ್ಯಕ್ತಿ. ಇವರಿಬ್ಬರೂ ಒಂದಾಗಿ ಹರಿಯನ್ನು ಮುಗಿಸುವ ಯೋಜನೆ ಮಾಡಿದ್ದರೆ ಅಥವಾ ಶಿವನ ಜೊತೆಗಿದ್ದ ಅವನ ಆತ್ಮೀಯ ಗೆಳೆಯ ಆ ಕೆಲಸ ಮಾಡಿದ್ದರೆ ಕತೆಯ ಅಂತ್ಯ ಇನ್ನೂ ಚೆನ್ನಾಗಿರುತ್ತಿತ್ತು. ಹರಿ ಕೊಲೆ ಮಾಡಿಸುತ್ತಿದ್ದನೇ ಹೊರತು ಎಂದೂ ಸಹ ತಾನಾಗಿಯೇ ಒಂದು ಕೊಲೆ ಸಹ ಮಾಡಿರಲಿಲ್ಲ. ಹರಿಯ ಮಾತು, ಗತ್ತು, ದವಲತ್ತು ಜೋರು ಆದರೆ ಹರಿಗೆ ಶಕ್ತಿ ತುಂಬಿ ಜೀವನ ಕಟ್ಟಿಕೊಡುತ್ತಿದ್ದವರು ಹರಿಗಾಗಿ ಜೀವ ಕೊಡಲು ಸಹ ಲೆಕ್ಕಿಸದ ಶಿವನಂತಹ ಜನರು. ಶಿವನ ಅಂತ್ಯವಾದ ನಂತರ ಹರಿ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ, ಶಿವನಿಂದಲೇ ಹರಿ ಬೆಳೆದಿದ್ದು, ಹರಿಗಾಗಿಯೇ ಶಿವ ಎಲ್ಲವನ್ನು ಮಾಡಿದ್ದು. ಇದನ್ನು ಅರ್ಥ ಮಾಡಿಕೊಳ್ಳದ ಹರಿ ಶಿವನ ಅಂತ್ಯ ಕಾಣಿಸಿ, ತನ್ನ ತಾನೇ ಅಂತ್ಯವಾಗಿಸಿಕೊಂಡ. 

ಚಿತ್ರದಲ್ಲಿ ನಟನೆ, ಸಂಭಾಷಣೆ ಹಾಗೂ ಕೊಂದವರ ಚಪ್ಪಲಿ ಹಾಕಿಕೊಂಡು ಓಡಾಡುವ ಸನ್ನಿವೇಶಗಳು ಬಹಳ ಚೆನ್ನಾಗಿ ಮೂಡಿಬಂದಿವೆ. ಹುಲಿಕುಣಿತದ ದೃಶ್ಯಗಳು ಬಹಳ ಚೆನ್ನಾಗಿ ಮೂಡಿಬಂದಿವೆ. ಒಂದಷ್ಟು ಕುತೂಹಲ ಮತ್ತು ಮುಂದೇನಾಗುತ್ತದೆ ಎನ್ನುವ ಚಿಂತೆ ನೋಡುಗರನ್ನು ಹಿಡಿದಿಡುತ್ತದೆ. ಕ್ರೌರ್ಯವನ್ನು ಏನೂ ಸಹ ಅಲ್ಲವೆಂಬಂತೆ ಉಲ್ಲಾಸಕರ ಹಿನ್ನಲೆ ಸಂಗೀತದ ಮೂಲಕ ತೋರಿಸಲಾಗಿದೆ. ಮಕ್ಕಳನ್ನು ಹಲವಾರು ದೃಶ್ಯಗಳಲ್ಲಿ ಬಳಸಿದ್ದು ಸ್ವಲ್ಪ ಸರಿ ಅನ್ನಿಸಲಿಲ್ಲ, ಆದರೆ ಕತೆಯ ವಿಶೇಷತೆಗೆ ಅದು ಅಗತ್ಯವಾಗಿತ್ತು ಎಂದೂ ಸಹ ಕೆಲವೊಮ್ಮೆ ಅನ್ನಿಸುತ್ತದೆ. ಪೊಲೀಸ್ ಅವರು ರೌಡಿಗಳನ್ನು ಮಟ್ಟ ಹಾಕಬೇಕೆಂದು ನಿರ್ಧರಿಸಿದರೆ, ತಮಗಿರುವ ತಂತ್ರಜ್ಞಾನದ ಸಹಾಯ ಮತ್ತು ಬುದ್ಧಿವಂತಿಕೆ ಸಾಕು ಎನ್ನುವ ಸಂದೇಶ ಕೂಡ ಸಿನೆಮಾ ನೀಡಿದೆ. ದೇಹಕ್ಕಾದ ಗಾಯ ಸುಲಭವಾಗಿ ಎಲ್ಲರಿಗೂ ಕಾಣುತ್ತದೆ, ಅದನ್ನು ಸರಿಪಡಿಸುವುದು ಕೂಡ ಬಹಳ ಸುಲಭ. ಮನಸ್ಸಿಗೆ ಆದ ಆಘಾತ, ಸರಿಯಾದ ಸಮಯಕ್ಕೆ ಸರಿಪಡಿಸದೆ ಹೋದರೆ ಅದು ಮತ್ತೊಂದು ರೂಪ ಪಡೆದು ವ್ಯಕ್ತಿಯೊಂದಿಗೆ ಬೆಳೆದುಬಿಡುತ್ತದೆ. 
                ***                  

ಕಾಮೆಂಟ್‌ಗಳು

- Follow us on

- Google Search