ಹೊಲಸು ರಾಜಕೀಯ

ದಿನದಿಂದ ದಿನಕ್ಕೆ ರಾಜಕೀಯ ಎಂಬುದು ಜನರ ಸಮಸ್ಯೆಗಳನ್ನು ಪರಿಹರಿಸಿ, ಉತ್ತಮ ಆಡಳಿತವನ್ನು ಪ್ರಜೆಗಳಿಗೆ ನೀಡುವ ಬದಲು ಪ್ರಜೆಗಳ ಗಮನವನ್ನು ಉಪಯೋಗವಿಲ್ಲದ ವಿಚಾರಗಳ ಕಡೆಗೆ ಸೆಳೆದು ನಿರಂತರವಾಗಿ ತೆರಿಗೆಯ ಹಣವನ್ನು ಲೂಟಿ ಮಾಡುವ ವಿಧಾನವಾಗಿ ಮಾರ್ಪಾಡಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಕೇವಲ ತನ್ನ ಸ್ವಂತ ಯೋಚನೆ ಮತ್ತು ಉತ್ತಮ ವಿಚಾರಗಳ ಮೂಲಕ ಪ್ರಚಾರ ಪಡೆದು ಆಯ್ಕೆಯಾಗುವುದು ಆಶ್ಚರ್ಯಕರ ಸಂಗತಿಯಾಗಿದೆ. ಹಣಬೆಂಬಲ ಇಲ್ಲದೆ ಹೋದರೆ, ಎಂತಹ ಉತ್ತಮ ಯೋಚನೆಗಳನ್ನು ಹೊಂದಿದ ಅಥವಾ ಊರಿನ ಜನರಿಗಾಗಿ ದುಡಿದವನು ಚುನಾವಣೆಯಲ್ಲಿ ಸೋಲುವ ಕೆಟ್ಟ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ. ಕೆಲವು ವರ್ಷಗಳ ಹಿಂದೆ ಪುಡಿ ರೌಡಿಗಳಾಗಿ ಬೀದಿ ಸುತ್ತುತ್ತಿದ್ದ ಜನರು ಇಂದು ದೇಶಾದ್ಯಂತ ಹಲವಾರು ಪ್ರಮುಖ ಹುದ್ದೆಗಳನ್ನು ಪಡೆದಿದ್ದಾರೆ. ಇದು ವ್ಯವಸ್ಥೆಯಲ್ಲಿನ ಕುಂದು ಕೊರತೆಗಳನ್ನು ಎತ್ತಿ ತೋರಿಸುತ್ತಿದೆ. ಯಾವಾಗ ಇಂತಹ ಜನರು ರಾಜಕೀಯವಾಗಿ ಪ್ರಬಲರಾಗುತ್ತ ಸಾಗುವರೊ ಅಲ್ಲಿಯ ತನಕ ಒಳ್ಳೆಯತನಕ್ಕೆ ಬೆಲೆಯಿಲ್ಲದಂತಾಗುತ್ತದೆ. ತಮಗೆ ತೊಡಕಾಗುವ ಎಲ್ಲ ರೀತಿಯ ಕಾನೂನುಗಳನ್ನು ತಮ್ಮ ಅಧಿಕಾರದ ಬಲ ಉಪಯೋಗಿಸಿ ಶಕ್ತಿಯಿಲ್ಲದಂತೆ ಮಾಡುವ ಅಥವಾ ಅದು ತಮಗೆ ಮುಂದೆ ಎಂದು ಸಹ ತೊಂದರೆ ಕೊಡದಂತೆ ಕಸದ ಬುಟ್ಟಿಗೆ ಸೇರಿಸಿ ಜನರ ಕಣ್ಣಿಗೆ ಮಣ್ಣೆರೆಚುವ ಹಲವಾರು ಬಗೆಯ ಕುತಂತ್ರಗಳನ್ನು ರಾಜಕೀಯ ಅನುಸರಿಸುತ್ತಿದೆ. 

ಇಂದು ಸಮಾಜದಲ್ಲಿ ಕಡಿಮೆ ಸಂಬಳದ ಒಂದು ಸರ್ಕಾರಿ ಉದ್ಯೋಗ ಪಡೆಯುವುದಕ್ಕೆ ಕೇಳುವ ಪದವಿಗಳು, ಹತ್ತಾರು ಬಗೆಯ ಪರೀಕ್ಷೆಗಳು, ವಿವಿಧ ಬಗೆಯ ಸಂದರ್ಶನಗಳು ಹೇಗೆ ಒಂದಕ್ಕಿಂದ ಒಂದು ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಪರ್ವತವನ್ನೇ ಕಾಣುತ್ತೇವೆ. ಅದೇ ನಮ್ಮ ರಾಜಕಾರಣಿಗಳನ್ನು ನೋಡಿ. ವಿದ್ಯಾಭ್ಯಾಸ ಇಲ್ಲದಿದ್ದರೂ, ಓದು ಬರಹ ತಿಳಿಯದಿದ್ದರು, ಹತ್ತಾರು ಕೇಸುಗಳು ದಾಖಲಾಗಿದ್ದರು ಸಹ ರಾಜಾರೋಷವಾಗಿ ಆಡಳಿತ ನಡೆಸುತ್ತಾರೆ. ಇಂತಹವರ ಮುಂದೆ ಉತ್ತಮ ವ್ಯಕ್ತಿಗಳು ಸ್ಪರ್ಧಿಸಲು ಸಹ ಸಾಧ್ಯವಾಗದಷ್ಟು ಅಪಾಯಕಾರಿ ಪರಿಸ್ಥಿತಿಯನ್ನು ಸಾಮಾನ್ಯ ಜನರು ಎದುರಿಸುತ್ತಿದ್ದಾರೆ. ಈ ವ್ಯವಸ್ಥೆ ಖಂಡಿತ ಬದಲಾಗಬೇಕು. ಇದು ಬದಲಾಗದಿದ್ದರೆ ಬಹಳ ಕಷ್ಟ ಇದೆ ನಮ್ಮ ದೇಶ ಅಭಿವೃದ್ಧಿ ಕಾಣುವುದು. ಸಾಮಾನ್ಯ ಜನರ ಜೀವನವನ್ನು ಕೇಂದ್ರವಾಗಿರಿಸಿಕೊಂಡು ಕಾನೂನು ಮತ್ತು ಯೋಜನೆಗಳನ್ನು ಜಾರಿಗೆ ತರುವ ಬದಲು ಉದ್ಯಮಿಗಳ ಕೇಂದ್ರಿತ ಆಡಳಿತ ಮುಂದುವರೆಸಿದ್ದೆ ಆದಲ್ಲಿ ಭಾರತದಲ್ಲಿ ಮುಂದಿನ ಹಲವು ವರ್ಷಗಳಲ್ಲಿ ಸಂಪತ್ತಿನ ಹಂಚಿಕೆಯಲ್ಲಿನ ಅಸಮಾನತೆ ಇನ್ನಷ್ಟು ಹೆಚ್ಚುತ್ತದೆ.

Photo by Glen Carrie on Unsplash

ಬಡವರನ್ನು ಬಡತನದಿಂದ ಮೇಲೆತ್ತುವ ವಿದ್ಯಾಭ್ಯಾಸ, ಆರೋಗ್ಯ ವಿಮೆ, ಉದ್ಯೋಗಾವಕಾಶ, ಸ್ವಂತ ಉದ್ಯಮಕ್ಕೆ ಪ್ರೋತ್ಸಾಹ ಯೋಜನೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಇಂತಹ ಹತ್ತು ಹಲವಾರು ಸರಳ ಯೋಜನೆಗಳನ್ನು ಒಬ್ಬ ನಾಯಕ ಮನಸ್ಸು ಮಾಡಿದರೆ ಜಾರಿಗೆ ತಂದು ಕೋಟ್ಯಂತರ ಕುಟುಂಬಗಳ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ಆದರೆ, ಇಂದು ಹೆಚ್ಚಿನ ಮತದಾರರಲ್ಲಿ ಸರ್ಕಾರ, ಆಡಳಿತ ಪಕ್ಷ, ವಿರೋಧ ಪಕ್ಷ, ಕಾನೂನು ವ್ಯವಸ್ಥೆ, ಮಾಧ್ಯಮಗಳು ಎನ್ನುವ ಕಲ್ಪನೆ ಇಲ್ಲದೆ ಇವರು ನಮ್ಮ ಪರ ಅಥವಾ ನಮ್ಮ ವಿರೋಧ ಎನ್ನುವ ಎರಡೇ ಯೋಚನೆಗಳು ತಲೆಯಲ್ಲಿ ಪ್ರಚೋದನಕಾರಿ ಭಾಷಣಗಳಿಂದ ತುಂಬಲಾಗಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದವರಿಗೆ ಸನ್ಮಾನ ಕಾರ್ಯಕ್ರಮಗಳು, ಉನ್ನತ ಹುದ್ದೆಗಳು ಸಿಗುತ್ತಿರುವುದು ಮತ್ತು ಅದನ್ನೆಲ್ಲ ಜನರು ನಿರ್ಲಕ್ಷ್ಯ ಮಾಡಿ ಮೌನವಾಗಿರುವುದು ವ್ಯವಸ್ಥೆಯನ್ನು ಇನ್ನಷ್ಟು ಹಾಳುಗೆಡವಿದೆ. ಪ್ರಜೆಗಳು ಜಾಗೃತರಾಗಬೇಕು, ನಿಮ್ಮ ಇಷ್ಟದ ಪಕ್ಷ ಯಾವುದೇ ಆಗಿರಲಿ ಅವರು ಅಧಿಕಾರದಲ್ಲಿ ಇದ್ದಾಗ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರೆ ಅವರನ್ನು ಪ್ರಶ್ನಿಸಬೇಕು, ಅವರು ಮಾಡಿರುವ ಕೆಲಸಗಳ ಆಧಾರದ ಮೇಲೆ ಸಾಧನೆಗಳನ್ನು ಅಳೆಯಬೇಕು. ಆದರೆ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮಾಧ್ಯಮಗಳು ಇತ್ತೀಚಿಗೆ ಮಾಡುತ್ತಿವೆ. 

ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಮನಸ್ಥಿತಿಗೆ ಹಲವಾರು ಜನರು ಹೋಗಿದ್ದಾರೆ. ತಮ್ಮ ಬುದ್ಧಿಯಲ್ಲಿ ಅಚ್ಚು ಹಾಕಿಸಿಕೊಂಡಿದ್ದಾರೆ, ಇವರು ಒಳ್ಳೆಯವರು ಇವರು ಕೆಟ್ಟವರು ಎಂದು. ಹೀಗಾಗಿ ಅವರ ವಿಚಾರಗಳನ್ನು ಒಪ್ಪದವರ ಮೇಲೆ ದ್ವೇಷ ಕೂಡ ಉಕ್ಕುತ್ತಿದೆ. ಇದನ್ನು ಕಡಿಮೆ ಮಾಡಬೇಕೆಂದರೆ ದ್ವೇಷ ಭಾಷಣಗಳನ್ನು ಮತ್ತು ಜನರಲ್ಲಿ ದ್ವೇಷ ಬೆಳೆಸುವ ಪ್ರಚಾರ ಕೆಲಸ ಮಾಡುವವರನ್ನು ಗುರುತಿಸುವಷ್ಟು ಜಾಣ್ಮೆ ಮತ್ತು ತಾಳ್ಮೆಯನ್ನು ಜನರು ಬೆಳೆಸಿಕೊಳ್ಳಬೇಕು. ಇದು ಖಂಡಿತ ಸಾಧ್ಯ. ಇತರ ದೇಶಗಳಲ್ಲಿ ನಡೆದಿರುವ ಇತಿಹಾಸದ ಘಟನೆಗಳನ್ನು ಮುಕ್ತ ಮನಸ್ಸಿನಿಂದ ಓದಿ ತಿಳಿದುಕೊಂಡರು ಸಹ ರಾಜಕೀಯದಲ್ಲಿ ಅಧಿಕಾರ ಪಡೆಯಲು ಎಂತಹ ಕೀಳುಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎನ್ನುವುದು ನಮಗೆ ಕಾಲ ಕಳೆದಂತೆ ಅರ್ಥವಾಗುತ್ತದೆ. 

ಇಂದು ಜನಸಾಮಾನ್ಯರ ಕಷ್ಟಗಳಿಗೆ ಧ್ವನಿಯಾಗಿ ಸರ್ಕಾರವನ್ನು ಪ್ರಶ್ನಿಸುವ ಮತ್ತು ಸರ್ಕಾರದ ತಪ್ಪುಗಳನ್ನು ಜನರಿಗೆ ತೋರಿಸಿ ಚುನಾವಣೆಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಬೇಕಿದ್ದ ಮಾಧ್ಯಮಗಳು ರಾಜಕಾರಣಿಗಳ ಮತ್ತು ಉದ್ಯಮಿಗಳ ಕೈಗೊಂಬೆಯಾಗಿ ಕುಣಿಯುತ್ತಿವೆ. ಮಾಧ್ಯಮಗಳು ಮನಸ್ಸು ಮಾಡಿದರೆ ಇಲಿಯನ್ನು ಹುಲಿಯೆಂದು ತೋರಿಸಬಲ್ಲವು. ಹೀಗಾಗಿ ಪ್ರಚಾರಕ್ಕೆ ಮತ್ತು ದ್ವೇಷ ಪಸರಿಸುವ ಸುದ್ದಿಗಳಿಗೆ ಮಾರುಹೋಗದೆ ಸ್ವಂತ ಆಲೋಚನೆಯ ಮೂಲಕ ನಿರ್ಧಾರ ತೆಗೆದುಕೊಳ್ಳುವ ಸವಾಲು ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಆದರೆ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಪ್ರಚಾರ ಪಡೆದು ಅಧಿಕಾರ ಹಿಡಿಯುವುದು ಬಹಳ ಸುಲಭದ ಕೆಲಸ.

ಉತ್ತಮ ಆಡಳಿತ ನೀಡದ ಆಡಳಿತ ಪಕ್ಷವನ್ನು ಸೋಲಿಸದೆ ಹೋದರೆ ಅದು ದೇಶಕ್ಕೆ ಯಾವ ರೀತಿಯಲ್ಲಿಯೂ ನೆರವಾಗುವುದಿಲ್ಲ. ಅದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮುಖ್ಯ ಆಸ್ತಿ. ರಾಜಕೀಯದಲ್ಲಿ ದೇಶದ ಪ್ರಜೆಗಳಿಂದ  ಯಾವ ಪಕ್ಷ, ಯಾವ ವ್ಯಕ್ತಿಯ ಪೂಜೆಯೂ ಒಳ್ಳೆಯದಲ್ಲ. ರಾಜಕಾರಣಿಗಳು ಮುಂದೆಯಾದರೂ ಅಧಿಕಾರ ಪಡೆಯಲು ತಮ್ಮ ಉತ್ತಮ ಕೆಲಸ ಹಾಗೂ ಯೋಜನೆಗಳನ್ನು ಜನರ ಮುಂದಿಡುವರೋ ಅಥವಾ ಹೀಗೆಯೇ ಜಾತಿ ಧರ್ಮ ಮುಂತಾದ ಭಾವನಾತ್ಮಕ ವಿಚಾರಗಳನ್ನು ಚುನಾವಣೆಗೆ ಉಪಯೋಗಿಸಿಕೊಂಡು ಪ್ರಜೆಗಳನ್ನು ಮೂರ್ಖರನ್ನಾಗಿ ಮಾಡುವರೊ ಎಂಬುದು ನಮ್ಮ ಸಮಾಜದ ಜನರ ಮೇಲಿದೆ.

ಕಾಮೆಂಟ್‌ಗಳು

- Follow us on

- Google Search