ಟ್ವಿಟ್ಟರ್ ಲೋಕ

ಟ್ವಿಟ್ಟರ್ ಒಂದು ಸಾಮಾಜಿಕ ಜಾಲತಾಣ. ಜನರು ತಮ್ಮ ನಿಲುವುಗಳನ್ನು ಪುಟ್ಟ ಲೇಖನಗಳ ಮೂಲಕ ಹಂಚಿಕೊಳ್ಳುವ ವೇದಿಕೆ. ಒಂದು ವ್ಯತ್ಯಾಸವೆಂದರೆ ಟ್ವಿಟ್ಟರ್ ಅಲ್ಲಿ ಹೆಚ್ಚಾಗಿ ನಿಮ್ಮ ವಿಚಾರಗಳ ಆಧಾರದ ಮೇಲೆ ಹಿಂಬಾಲಕರು ಇರುತ್ತಾರೆ. ಹೆಚ್ಚಿನ ಹಿಂಬಾಲಕರು ಒಂದು ಸನ್ನಿವೇಶದಲ್ಲಿ ನಿಮ್ಮ ವಿಚಾರಗಳ ಪರವಾಗಿ ನಿಂತು ಹೇಗೆ ಮನಮುಟ್ಟುವಂತೆ ಬರೆಯುವಿರಿ ಎನ್ನುವ ಆಧಾರದ ಮೇಲೆ ನಿಮ್ಮನ್ನು ಹಿಂಬಾಲಿಸುತ್ತಾರೆ. ಇನ್ನು ಕೆಲವರು ನಿಮ್ಮ ವಿಚಾರಗಳ ಕಟು ವಿರೋಧಿಗಳು ಸಹ ಆಗಿರುತ್ತಾರೆ. ನಾನು ನೋಡಿರುವ ಹಾಗೆ ಸಮಾಜದಲ್ಲಿನ ಎಲ್ಲ ರೀತಿಯ ಮನಸ್ಥಿತಿಯ ಜನರು ಟ್ವಿಟ್ಟರ್ ಅಲ್ಲಿ ಇದ್ದಾರೆ. ಕೆಲವರು ಹಿಂದು ಮುಂದು ಯೋಚಿಸದೆ ಬಾಯಿಗೆ ಬಂದ ಹಾಗೆ ಬರೆಯುವವರು, ಇನ್ನು ಬಹಳಷ್ಟು ಜನರು ತಮ್ಮದೇ ವಿಚಾರಗಳನ್ನು ಒಪ್ಪುವ ಗುಂಪನ್ನು ಕಟ್ಟಿಕೊಂಡಿರುತ್ತಾರೆ. ಇದರಿಂದ ಒಂದು ರೀತಿಯಲ್ಲಿ ಒಂದೇ ಬಗೆಯ ಸುದ್ಧಿಗಳಿಗೆ, ಪ್ರಸ್ತುತ ಘಟನೆಗಳಿಗೆ ನಾವು ನಮಗೆ ಗೊತ್ತಿಲ್ಲದೆ ಬಂಧಿಸಲ್ಪಡುತ್ತೇವೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಇದು ಹಲವಾರು ಸಮಸ್ಯೆಗಳನ್ನು ಸಹ ಹುಟ್ಟುಹಾಕಿದೆ, ಸಾಕಷ್ಟು ಸಹಾಯಕವೂ ಆಗಿದೆ. ಯಾವುದೇ ಒಂದು ಸುದ್ಧಿಗೆ ತ್ವರಿತವಾಗಿ ಸ್ಪಂದಿಸುವ ಅವಕಾಶವನ್ನು ಸಾಮಾಜಿಕ ಜಾಲತಾಣ ಹುಟ್ಟುಹಾಕಿದೆ. ಇದೆ ಅನುಕೂಲ ಕೆಲವೊಮ್ಮೆ ಹಿಂಸಾತ್ಮಕ ಘಟನೆಗಳಿಗೆ ಪ್ರಚೋದನೆ ನೀಡುವ ಕೆಲಸಗಳಿಗೂ ಬಳಕೆಯಾಗುತ್ತಿರುವುದು ದುಃಖದ ಸಂಗತಿ. 

ಮೊದಲೆಲ್ಲ ನಗರಗಳಲ್ಲಿನ ಜನರಿಗೆ ಹೆಚ್ಚು ಇಂಟರ್ನೆಟ್ ಸೌಲಭ್ಯ ಇರುತ್ತಿದ್ದ ಕಾರಣ ಗ್ರಾಮೀಣ ಭಾಗದ ಜನರು ಇಷ್ಟು ಸಕ್ರಿಯವಾಗಿ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ನಗರಗಳ ಜನರೇ ತಮ್ಮ ಜೀವನದ ಬಗ್ಗೆ ಹಂಚಿಕೊಂಡು ಅವರದೇ ಒಂದಷ್ಟು ವಿಚಾರಗಳು ಪ್ರಾಮುಖ್ಯತೆ ಪಡೆಯುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಹೆಚ್ಚಿನ ಜನ ರಾಜಕಾರಣಿಗಳ ಸುಳ್ಳು ಪ್ರಚಾರಗಳಿಗೆ ಮಾರುಹೋದರು ಸಹ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಯಾರಾದರೂ ಅರ್ಥವಿಲ್ಲದ್ದನ್ನು ಬರೆದರೆ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಸೂಕ್ತ ಪ್ರಶ್ನೆಗಳನ್ನು ಕೇಳುತ್ತಾರೆ, ಟ್ವೀಟ್ ಅಲ್ಲಿ ಬರೆದಿರುವುದು ಸುಳ್ಳಾದರೆ ಅದನ್ನು ಆಧಾರ ಸಹಿತವಾಗಿ ಸಾಬೀತುಪಡಿಸುತ್ತಾರೆ. ಸಾಮಾಜಿಕ ಜಾಲತಾಣಗಳ ಈ ಪ್ರಕ್ರಿಯೆ ಸಮಾಜದ ಬೆಳವಣಿಗೆಗೆ ಬಹಳ ಸಹಾಯಕ. ಇಬ್ಬರು ಗೌರವಯುತವಾಗಿ ತಮ್ಮ ವಾದವನ್ನು ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆಯುವ ಮೂಲಕ ಇನ್ನಷ್ಟು ಜನರ ಮನಸ್ಸನ್ನು ಆ ವಿಚಾರಗಳಿಗೆ ಪರಿಚಯಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ನಮ್ಮ ಮನಸ್ಸಿನಲ್ಲಿ ಎಲ್ಲಿಯೋ ಒಂದು ಕಡೆ ಕೂತಿರುತ್ತವೆ, ದಿನನಿತ್ಯದ ಜೀವನದಲ್ಲಿ ಇವಕ್ಕೆ ಸಂಬಂಧಿಸಿದ ಘಟನೆಗಳನ್ನು ಕಂಡಾಗ ಏಕೆ ಹೀಗಾಗುತ್ತಿದೆ ಎನ್ನುವ ಅನುಮಾನಗಳಿಗೆ ಇವು ಆಹಾರವಾಗುತ್ತವೆ. 

ಟ್ವಿಟ್ಟರ್ ಕೇವಲ ಜನರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ವೇದಿಕೆಯಲ್ಲ, ಅದು ಇತ್ತೀಚಿಗೆ ಜನರ ನಿಲುವನ್ನು ರೂಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದೆ. ಟ್ವಿಟ್ಟರ್ ಜಾಲತಾಣ ಒಂದು ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರೀಕ್ಷೆ ನಡೆಯುವ ಸ್ಥಳ. ಕೆಲವೊಮ್ಮೆ ಕೀಳುಮಟ್ಟದ ಬೈಗುಳಗಳನ್ನು ಓದಿದಾಗ ಇವುಗಳು ಏಕೆ ಇಲ್ಲಿರಬೇಕು ಎಂದೆಲ್ಲ ಅನ್ನಿಸುತ್ತದೆ. ನಿಜ ಜೀವನದಲ್ಲಿ ಕಡಿಮೆಯೆಂದರೆ ತಮ್ಮ ಮನಸ್ಸಿನಲ್ಲಿಯಾದರು ಬೈಗುಳ ಬಳಸದೆ ಇರುವವರು ಇಲ್ಲವೆಂದೇ ಅನ್ನಿಸುತ್ತದೆ. ಹಾಗಿರುವಾಗ ಇಲ್ಲೇಕೆ ಬಳಸಬಾರದು ಎಂದೆಲ್ಲ ಯೋಚನೆಯು ಬರುತ್ತದೆ,  ಬಹುಷಃ ಟ್ವಿಟ್ಟರ್ ಕೂಡ ಬೈಗುಳಗಳನ್ನು ಒಳಗೊಂಡ ಟ್ವೀಟ್ಗಳನ್ನು ಗುರುತಿಸಿ ಬೇಡವೆಂದವರಿಗೆ ತೋರಿಸದೆ ಹೋದರೆ ಬಹಳ ಅನುಕೂಲ ಆಗಬಹುದೇನೋ ಗೊತ್ತಿಲ್ಲ. ಆದರೆ ಬೈಗುಳ ಒಂದು ಅಸಹಾಯಕ ಸ್ಥಿತಿಯನ್ನು ತೋರ್ಪಡಿಸುತ್ತದೆ. ತಮ್ಮ ವಿಚಾರಗಳ ಪರವಾಗಿ ನಿಂತು ವಾದಿಸಲು ಶಕ್ತಿಯಿಲ್ಲದೆ ಸುಮ್ಮನೆ ಕೋಪದಿಂದ ಒಂದಷ್ಟು ಬೈದು ವಾದಗಳ ದಿಕ್ಕನ್ನೇ ಬದಲಿಸುವ ನಡವಳಿಕೆ ಅದು. 

ಕೆಲವೊಮ್ಮೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿಬಿಡುತ್ತಾರೆ, ಅದು ಬಹಳ ಖುಷಿ ಕೊಡುವ ವಿಷಯ. ನಂಬಲು ಅಸಾಧ್ಯವಾದ ಅಹಿತಕರ ಘಟನೆಗಳು ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳ ಮೂಲಕ ಬೆಳಕಿಗೆ ಬರುತ್ತವೆ. ಅದೆಷ್ಟೋ ಘಟನೆಗಳು ಮಾಧ್ಯಮದವರ ಸಮಾಜಕ್ಕೆ ಸ್ಪಂದಿಸದ ಧೋರಣೆಯಿಂದ ವರದಿ ಆಗುವುದೇ ಇಲ್ಲ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ದಲಿತರ ಮೇಲೆ ಆಗುವ ಅನ್ಯಾಯಗಳು. ಹೆಚ್ಚಿನ ಮಾಧ್ಯಮಗಳನ್ನು ಮೇಲ್ಜಾತಿಯವರೇ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಸಾವಿರ ಅನ್ಯಾಯಗಳಲ್ಲಿ ಒಂದೋ ಎರಡೋ ವರದಿಯಾಗುತ್ತವೆ. ನಮ್ಮ ದೇಶದಲ್ಲಿ ವರ್ಷಕ್ಕೆ ನಡೆಯುವ ಅಪರಾಧಗಳ ಅಂಕೆ ಸಂಖ್ಯೆಗಳನ್ನು ನೋಡಿದರೆ ಈ ವಿಷಯ ನಮ್ಮ ಅರಿವಿಗೆ ಬರುತ್ತದೆ. ಹೀಗಾಗಿ ಯಾವುದೇ ವಿಷಯವನ್ನು ಜನರಿಗೆ ತಿಳಿಸಬಯಸುವ ಆಸೆಯಿರುವ ಜನರಿಗೆ ಒಂದು ಸಮಾನ ಅವಕಾಶವನ್ನು ಸಾಮಾಜಿಕ ಜಾಲತಾಣಗಳು ನೀಡಿವೆ. 

ಹೆಚ್ಚು ಜನ ತಮ್ಮ ಬಿಡುವಿನ ವೇಳೆಯಲ್ಲಿ ಕಾಲಹರಣ ಮಾಡಲು ಇಲ್ಲಿರುತ್ತಾರೆ. ಹೀಗಾಗಿ ಇದು ಒಂದು ರೀತಿಯ ಮನರಂಜನೆಯೇ ಆಗಿದೆ ಹಲವರಿಗೆ. ರಾಜಕೀಯದಲ್ಲಿ ಆಸಕ್ತಿ ಇದ್ದರಂತೂ ದಿನವೂ ಹೊಸತೇನಾದರೂ ಒಂದು ಪರ ವಿರೋಧ ಮಾತುಕತೆಗಳು ಇಲ್ಲಿ ನಡೆಯುತ್ತಲೇ ಇರುತ್ತವೆ. ರೆಡ್ಡಿಟ್ ಕೂಡ ಇಂತಹುದೇ ಪ್ಲಾಟ್ಫಾರ್ಮ್ ಆಗಿದ್ದರು ಸಹ ಅಲ್ಲಿ ಹೆಚ್ಚಿನ ಜನ ತಮ್ಮ ಸ್ವಂತ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಮ್ಮ ಪೋಸ್ಟ್ ಹೆಚ್ಚು ಜನರಿಗೆ ತಲುಪಿಸುವುದು ಬಹಳ ಕಡಿಮೆ. ಪೋಸ್ಟ್ ಹೆಚ್ಚು ಜನರಿಗೆ ತಲುಪಿಸಲು ಹಣ ನೀಡುವ ಆಯ್ಕೆ ಕೂಡ ಬಳಕೆಯಲ್ಲಿದೆ. ಹೀಗಾಗಿ ಒಂದು ರೀತಿಯಲ್ಲಿ ಸಾಮಾಜಿಕ ಜಾಲತಾಣಗಳು ಮನಸ್ಸು ಮಾಡಿದರೆ ಯಾವ ರೀತಿಯ ಮಾಹಿತಿ ಹೆಚ್ಚು ಜನರಿಗೆ ತಲುಪುವಂತೆ ಮಾಡಬಹುದು ಎಂದು ನಿರ್ಧರಿಸಬಹುದು. ಇದು ಹೇಗೆಂದರೆ ನೀವು ಏನೇ ಪೋಸ್ಟ್ ಮಾಡಿದರು ಸಹ ಅದನ್ನು ಹೆಚ್ಚು ಜನರಿಗೆ ಹಣ ಕೊಡದೆ ತಲುಪಿಸುವ ಅಧಿಕಾರ ನಿಮಗೆ ಇಲ್ಲ. ಇದು ಅಲ್ಗಾರಿದಮ್ ಅನ್ನು ಅವಲಂಬಿಸಿರುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳು ಮನಸ್ಸು ಮಾಡಿದರೆ ಒಬ್ಬ ವ್ಯಕ್ತಿಯ ಬಗ್ಗೆ ದಿನವಿಡೀ ಜನರು ಹೊಗಳುವುದನ್ನೇ ನಿಮಗೆ ತಲುಪಿಸುವಷ್ಟು ಸಾಮರ್ಥ್ಯ ಹೊಂದಿವೆ. 

ಹೆಚ್ಚಿನ ಜನರು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವಾಗ ನಾವೇ ಅವುಗಳನ್ನು ಉಪಯೋಗಿಸುತ್ತಿದ್ದೇವೆ ಎನ್ನುವ ಅಧಿಕಾರಯುತ ಧಾಟಿಯಲ್ಲಿ ಇರುತ್ತೇವೆ, ಆದರೆ ನಿಜವೆಂದರೆ ಸಾಮಾಜಿಕ ಜಾಲತಾಣಗಳೇ ಜನರನ್ನು ಉಪಯೋಗಿಸುತ್ತಿವೆ. ಸಂಪತ್ತನ್ನು ಗಳಿಸುವುದೇ ಸಾಮಾಜಿಕ ಜಾಲತಾಣಗಳ ಮುಖ್ಯ ಉದ್ದೇಶವಾಗಿರುವಾಗ ಸರ್ಕಾರ ಅಥವಾ ಪ್ರಭಾವಿಗಳ ಒತ್ತಡಕ್ಕೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದಾಗಿ ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣಗಳು ದ್ವೇಷವನ್ನೇ ಹರಡುವ ವೇದಿಕೆಯಾಗಿ ಮಾರ್ಪಟ್ಟಿವೆ. ನಿಜವಾದ ದಿನನಿತ್ಯದ ತೊಂದರೆಗಳ ಬಗ್ಗೆ ನೇರವಾಗಿ ಪರಿಹಾರ ಒದಗಿಸುವ ಪ್ರಯತ್ನ ಮಾಡುವ ಬದಲು ರಾಜಕಾರಣಿಗಳು ತಮ್ಮ ಅಧಿಕಾರ ಉಳಿಸಿಕೊಳ್ಳಲು ನಾವು ಅವರಿಗಿಂತ ಒಳ್ಳೆಯವರು, ನಮಗೆ ಮತ ಹಾಕಿ ಎಲ್ಲವು ಬದಲಾಗುತ್ತದೆ ಎಂಬ ಸುದ್ಧಿಯನ್ನೇ ಹರಡುತ್ತಾರೆ. ಯಾವುದೇ ರಾಜಕಾರಣಿಗಳನ್ನು ಅವರ ಕೆಲಸಗಳಿಂದ ಅಳೆಯಬೇಕೆ ಹೊರತು ಎಷ್ಟು ಚಂದ ಭಾಷಣ ಮಾಡುತ್ತಾರೆ ಎಂದಲ್ಲ. 

ಸುಳ್ಳು ಸುದ್ಧಿ ಮತ್ತು ಜನರನ್ನು ದಾರಿತಪ್ಪಿಸುವ ಕೆಲಸಗಳನ್ನೇ ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಜನರು ಸಹ ಇಲ್ಲಿ ಕಾಣಸಿಗುತ್ತಾರೆ. ಇವರೆಲ್ಲ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ನಡೆಸುವ ಕೆಲಸ ಮಾಡುವವರು. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳೇ ಪ್ರಭುಗಳು ಎಂದರ್ಥ, ಹೀಗಿರುವಾಗ ನಮ್ಮ ಪಕ್ಷಕ್ಕೆ ಬೆಂಬಲ ನೀಡುವವರು ಮಾತ್ರ ಪ್ರಶ್ನೆ ಮಾಡಲಿ ಎಂದರೆ ಅದು ಮೂರ್ಖತನ. ಯಾವ ರಾಜಕಾರಣಿ ಕೂಡ ಜನರಿಗಿಂತ ದೊಡ್ಡವರಲ್ಲ. ಜನರು ಕಟ್ಟುವ ತೆರಿಗೆಯಲ್ಲೇ ತಮ್ಮ ಜೀವನ ನಡೆಸುವವರು ಎಂದು ಹೇಳಬಹುದು. ಸರ್ಕಾರ ಇರುವುದು ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಒದಗಿಸಲು ಮತ್ತು ಜನರನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ದು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಅವಕಾಶ ಸೃಷ್ಟಿಸಲು. ಅದು ಬಿಟ್ಟು ನಮ್ಮೊಂದಿಗೆ ಬದುಕಿ ಬಾಳುವ ಜನರಿಂದಲೇ ನಮಗೆ ಅಪಾಯವಿದೆ ಎಂದೆಲ್ಲ ಕಲ್ಪಿತ ಸುಳ್ಳನ್ನು ಹರಡಿ ಭಯಗೊಳಿಸಿ ಸಂಪತ್ತನ್ನು ಸದ್ದಿಲ್ಲದೇ ಲೂಟಿ ಹೊಡೆಯುವುದು ನಿಲ್ಲಬೇಕಿದೆ. 

ಉದ್ಯೋಗ, ಶಿಕ್ಷಣ, ವೈದ್ಯಕೀಯ ಸೌಲಭ್ಯಗಳು, ಸಂವಿಧಾನದ ಆಶಯಗಳನ್ನು ಕಾಪಾಡುವ ವಿಚಾರಗಳು ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸಬೇಕು. ರಾಜಕೀಯ ಎಂದ ಮೇಲೆ ಅಧಿಕಾರಕ್ಕಾಗಿ ಪೈಪೋಟಿ ಇದ್ದೆ ಇರುತ್ತದೆ, ಅಧಿಕಾರ ಪಡೆಯುವ ಉದ್ದೇಶ ನಿಜವಾದ ಜನಸೇವೆ ಆಗಿರಬೇಕೇ ಹೊರತು ಈಗಾಗಲೇ ಹಾಳಾಗಿರುವ ವ್ಯವಸ್ಥೆಯನ್ನು ಇನ್ನಷ್ಟು ಹಾಳುಮಾಡುವುದಲ್ಲ. ಯಾರು ಅದೆಷ್ಟೇ ಪ್ರಚಾರ ನೀಡಿದರು ಸಹ ಜನರು ಜಾಗೃತರಾಗಿದ್ದಾರೆ, ಪ್ರತಿಯೊಂದು ರಾಜಕೀಯ ನಡೆಯನ್ನು ಗಮನಿಸುತ್ತಾ ಇರುತ್ತಾರೆ, ಅವರಿಗೂ ಅದು ತಮ್ಮ ಜೀವನದಲ್ಲಿ ಅನುಭವಕ್ಕೆ ಬರುತ್ತದೆ. ಉತ್ತಮ ನಾಯಕರನ್ನು ಗುರುತಿಸಿ ಗೆಲ್ಲಿಸುವುದು ಕರ್ನಾಟಕದಲ್ಲಿ ನಡೆಯುತ್ತಲೇ ಬಂದಿದೆ. 

ಬಹಳ ಮುಖ್ಯ ಜವಾಬ್ದಾರಿ ಬಳಕೆದಾರರ ಮೇಲಿರುತ್ತದೆ, ಪ್ರಚಾರಕ್ಕೆ ಮಾರುಹೋಗದೆ ನಮ್ಮ ಸ್ವಂತ ಬುದ್ಧಿ ಉಪಯೋಗಿಸಿ ನಮ್ಮ ನಿಲುವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಇಲ್ಲದೆ ಹೋದರೆ ನಾವು ಕುರಿಮಂದೆಗಳಂತೆ ಆಗಿಬಿಡುತ್ತೇವೆ. ಹೆಚ್ಚಿನ ಸಂದರ್ಭಗಳಲ್ಲಿ ನಮಗೆ ಇದು ಅರಿವಿಗೆ ಬರುವುದಿಲ್ಲ. ಯೋಚಿಸುವ ಸ್ವಾತಂತ್ರ್ಯ ಎಲ್ಲರಿಗು ಇದೆ, ಸುಳ್ಳು ಸುದ್ಧಿಗಳನ್ನು ಮಟ್ಟಹಾಕಲು ಸಾಕಷ್ಟು ಪ್ರಯತ್ನ ಇತ್ತೀಚಿಗೆ ನಡೆಯುತ್ತಿದೆ, ಎಲ್ಲವನ್ನು ನಿರ್ಧರಿಸುವುದು ಹಣ. ಹಣವಿದ್ದರೆ ಎಂತಹ ವಿಚಾರವನ್ನು ಸಹ ಮುಚ್ಚಿಹಾಕುವ ಪ್ರಯತ್ನ ಮಾಡಬಹುದು ಆದರೆ ಹಣಕ್ಕೆ ಮಾರಿಹೋಗದ ವ್ಯಕ್ತಿಗಳು ಇರುವ ತನಕ ಬಲಿಷ್ಠ ಪ್ರತಿರೋಧವಂತೂ ಖಂಡಿತ ಇರುತ್ತದೆ.    

ಅಪರಿಚಿತರು ತೋರುವ ಪ್ರೀತಿ ಹಾಗು ಬೆಂಬಲ ಸಾಮಾಜಿಕ ಜಾಲತಾಣದಲ್ಲಿ ಮುಂದುವರೆಯಲು ಸಾಕಷ್ಟು ಜನರಿಗೆ ಶಕ್ತಿ ತುಂಬುತ್ತದೆ. ಒಂದಷ್ಟು ಹಾಸ್ಯ, ಗೊತ್ತಿಲ್ಲದೇ ಇದ್ದ ಇತಿಹಾಸದ ವಿಷಯಗಳು, ವರ್ಷಾನುಗಟ್ಟಲೆ ನಂಬಿದ್ದ ಸುಳ್ಳುಗಳು, ಬಹಳ ಖಾರವಾಗಿ ಬರುವ ಟೀಕೆಗಳು ಎಲ್ಲವು ಸಹ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಪ್ರಭಾವಿಸುವ ಶಕ್ತಿ ಹೊಂದಿವೆ. ಸಾರ್ವಜನಿಕ ವಿಚಾರ ವಿನಿಮಯ ಪ್ರಜಾಪ್ರಭುತ್ವಕ್ಕೆ ಬಹಳ ಅವಶ್ಯಕ. ಇಂತಹ ಒಳ್ಳೆಯ ವೇದಿಕೆ ಅಧಿಕಾರಕ್ಕಾಗಿ ದುರ್ಬಳಕೆ ಆಗದಂತೆ ತಡೆಯುವ ಜವಾಬ್ದಾರಿ ಸಾಮಾಜಿಕ ಜಾಲತಾಣಗಳ ಮೇಲಿದೆ. ಅದೆಷ್ಟೋ ಜನರನ್ನು ಕೇವಲ ಅವರ ಕೆಲಸ ನೋಡಿ ಬೆಳೆಸುವ ಶಕ್ತಿ ಸಾಮಾಜಿಕ ಜಾಲತಾಣಗಳಿಗೆ ಇದೆ. ಇವುಗಳನ್ನು ಉತ್ತಮ ನಿಯಮಗಳ ಮೂಲಕ ಕಾಪಾಡಿಕೊಳ್ಳುವ ಅವಶ್ಯಕತೆ ಖಂಡಿತ ಸಮಾಜಕ್ಕಿದೆ. ಇವುಗಳು ರಾಜಕಾರಣಿಗಳ ಕೈಗೊಂಬೆ ಆಗಬಾರದು. ಹಾಗೆ ಆದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗುವುದರಲ್ಲಿ ಅನುಮಾನವಿಲ್ಲ. 

***  

ಕಾಮೆಂಟ್‌ಗಳು

- Follow us on

- Google Search