ಕಥೆ: ಪರಮೇಶಿ

ಫಿಲಾಸಫರ್ ಪರಮೇಶಿ ಮಲಗಿ ನಿದ್ರಿಸುತ್ತಿದ್ದಾನೆ. ಹೆಚ್ಚು ಫೀಲ್ ಆಗಿ ಸಫರ್ ಆಗುವ ಗುಣವನ್ನು ಕಂಡು ಅವನ ಗೆಳೆಯರು ಇಟ್ಟ ಹೆಸರೇ ಫಿಲಾಸಫರ್ ಪರಮೇಶಿ. ಡಿಗ್ರಿ ಮುಗಿದಿದೆ, ಪರಮೇಶಿಗೆ ಕೆಲಸವಿಲ್ಲ. ಕೆಲಸವಿದೆ, ಆದರೆ ಹೆಚ್ಚು ಸಂಬಳವಿಲ್ಲ. ಒಂದಷ್ಟು ಹಣವಿದೆ ಆದರೆ ಶ್ರೀಮಂತನಲ್ಲ. ಬೇಕಾದಾಗ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ದಿನದ ಖರ್ಚಿಗೆ ಸಂಪಾದನೆ ಮಾಡುತ್ತಾನೆ. ಈ ನಗರದಲ್ಲಿ ಅವನಿಗೆ ಹೇಳುವವರಿಲ್ಲ, ಕೇಳುವವರಿಲ್ಲ. ಪರಮೇಶಿಯ ಬೇಜವಾಬ್ದಾರಿ ಕಂಡು ಮನೆಯಿಂದಲೇ ಹೊರ ಹಾಕಿದ್ದಾರೆ. ಮನೆಯವರ ಮುದ್ದು ಕಡಿಮೆಯಾದರೆ ತಾನಾಗಿಯೇ ಜವಾಬ್ದಾರಿ ಬರುತ್ತದೆ ಎಂಬುದು ತಂದೆಯ ಲೆಕ್ಕಾಚಾರ. 

ಮನೆಯವರೇ ಹೊರ ಹಾಕಿದ ಮೇಲೆ ಇನ್ನು ಸಂಬಂಧಿಕರು ಕೈ ಹಿಡಿಯುವರೇ ? ಹೀಗಾಗಿ ಪರಮೇಶಿಗೆ ಸ್ನೇಹ ಸಂಬಂಧಗಳ ಟೊಳ್ಳು ಜೀವನದ ಸತ್ಯ ಅರಿವಾಗಿದೆ. ನಮ್ಮಲ್ಲೇ ಒಂದು ಮಾತಿದೆಯಲ್ಲ, "ಸರಿ ಸರಿ ಜನರಿಗೆ ಪರಿ ಪರಿ ನೆಂಟರು" ಅಂತ. ಈಗ ಪರಮೇಶಿ ದೂರದ ಊರಿನಲ್ಲಿ ಪುಟ್ಟ ರೂಮಿನಲ್ಲಿ ಇದ್ದುಕೊಂಡು ತನಗಿಷ್ಟ ಬಂದಂತೆ ಜೀವನ ಸಾಗಿಸುವ ಕ್ಲಿಷ್ಟ ಪರಿಸ್ಥಿತಿಯಲ್ಲಿ ಇದ್ದಾನೆ. ಆಗಾಗ ಯಾವುದಾದರು ಟ್ರಾವೆಲ್ ಏಜೆನ್ಸಿಯವರು ದೂರದ ಊರುಗಳಿಗೆ ಡ್ರೈವರ್ ಆಗಿ ಕೆಲಸಕ್ಕೆ ಕರೆಯುತ್ತಾರೆ. ದೂರದ ಊರುಗಳಿಗೆ ಪ್ರಯಾಣ ಹಾಗು ಹೊಸ ಜನಗಳ ಪರಿಚಯ ಎರಡು ಸಹ ಆಗುತ್ತದೆ ಈ ಡ್ರೈವಿಂಗ್ ಕೆಲಸದಲ್ಲಿ. ಎಲ್ಲಿಯವರೆಗೆ ಗಾಡಿಗೆ ಹಾನಿ ಮಾಡುವುದಿಲ್ಲವೋ, ಅಲ್ಲಿಯತನಕ ಯಾವುದೇ ಚಿಂತೆಯಿಲ್ಲ. ಗಾಂಚಲಿ ಮಾಡಿದರೆ ಇನ್ನೊಂದು ಕಡೆ ಕೆಲಸ.   

ದುಡಿದು ಸಂಪಾದನೆ ಮಾಡುವುದು ಎಷ್ಟು ಕಷ್ಟವೋ, ಬಂದ ಹಣದಲ್ಲಿ ಉಳಿಸುವುದು ಅದಕ್ಕಿಂತ ಕಷ್ಟ. ಮನೆಯವರು ಮನೆಯಿಂದ ಹೊರಹಾಕಿದರೇನು, ಮನದಿಂದ ಹೊರಹಾಕಲು ಸಾಧ್ಯವೇ?. ಕೆಲವರು ದೂರವಾದಾಗ ಮಾತ್ರ ಅವರ ಬೆಲೆ ತಿಳಿಯುವುದು. ಪರಮೇಶಿಗೆ ದಿನದಲ್ಲಿ ಏನು ಮಾಡಬೇಕೆಂಬ ಯೋಚನೆಗಳಿಗಿಂತ ಏನು ಮಾಡಬಾರದು ಎಂಬ ಯೋಚನೆಯೇ ಹೆಚ್ಚು. ತನ್ನ ಸ್ಥಿತಿಯ ಬಗ್ಗೆ ತನಗೆ ಜಿಗುಪ್ಸೆ ಬರುವ ದಿನಗಳನ್ನು ಪರಮೇಶಿ ಎದುರಿಸುತ್ತಿದ್ದಾನೆ. ಗೆಳೆತನದ ಮೇಲಿದ್ದ ನಂಬಿಕೆ, ಸ್ನೇಹ ಸಂಬಂಧಗಳ ಅರ್ಥ, ಜೀವನದ ಗುರಿ ಯಾವುದು ಸಹ ತಿಳಿಯದಾಗದ ಕತ್ತಲು ಜೀವನವನ್ನು ಆವರಿಸಿದೆ. ಪರಮೇಶಿಗೆ ಬೆಳಿಗ್ಗೆ ಏಳುತ್ತಲೇ ಏನೋ ಹೆದರಿಕೆ. ಯಾವ ವಿಷಯಕ್ಕೆ ಎಂಬುದು ಅವನಿಗೂ ಗೊತ್ತಿಲ್ಲ. ಹೆದರಲು ಒಂದು ನಿರ್ದಿಷ್ಟ ಕಾರಣ ಬೇಕೆಂದೇನೂ ಇಲ್ಲ. 

ಮೊಬೈಲ್ ತೆಗೆದು ನೆಟ್ ಆನ್ ಮಾಡಿದರೆ ಐವತ್ತು ಇನ್ಸ್ಟಾಗ್ರಾಮ್ ನೋಟಿಫಿಕೇಶನ್ಗಳು. ಮೊದಲೇ ಭಯಗೊಳ್ಳಲು ಕಾರಣ ಹುಡುಕುತ್ತಿದ್ದ ಮನಕ್ಕೆ ಇದೊಂದು ಸಾಕಾಯ್ತು. ಏನು ಅಂತ ತೆಗೆದು ನೋಡಿದರೆ ಕಾಲೇಜಿನಲ್ಲಿ ತನ್ನ ಗೆಳೆಯರು ಹೆಸರು ಹೇಳಿ ರೇಗಿಸುತಿದ್ದ ಹುಡುಗಿಯೊಬ್ಬಳು ಯಾರಿಗೋ ಯೆಸ್ ಎಂದು ಹೇಳಿ ಜೊತೆಯಾಗಿರಲು ಒಪ್ಪಿದ್ದಾಳೆ. ಅಸಲಿಗೆ ಅವಳ ಮೇಲೆ ಪ್ರೀತಿಯಾಗಲಿ ಅಥವಾ ಅವಳನ್ನು ಮಾತನಾಡಿಸುವ ಧೈರ್ಯವಾಗಲಿ ಪರಮೇಶಿಗೆ ಇಲ್ಲ. ಹೀಗೆ ಇದನ್ನೆಲ್ಲಾ ಯೋಚಿಸುತ್ತಿದ್ದ ಪರಮೇಶಿಗೆ ಆ ಕಾಲೇಜು ಹುಡುಗಿಯ ನೆನಪಾಯಿತು. ಎಲ್ಲೋ ಒಂದೆರಡು ಬಾರಿ ಅವಳಾಗಿಯೇ ಮಾತನಾಡಿಸಿದಾಗ ಮಾತನಾಡಿರಬಹುದು ಅಷ್ಟೇ, ಅದು ಕೂಡ ಸರಿಯಾಗಿ ನೆನಪಿಲ್ಲ. ಈ ಗೆಳೆಯರ ಕಾಟ ಮಾತ್ರ ಕಾಲೇಜು ಬಿಟ್ಟು ಮೂರ್ನಾಲ್ಕು ವರ್ಷವಾದರೂ ನಿಂತಿಲ್ಲ. ಇವತ್ತು ಅವಳ ವಿಷಯ ಸಿಕ್ಕಿದೆ ಅಷ್ಟೇ. 

ಪ್ರತಿದಿನ ಈ ರೀತಿಯ ಸಂಬಂಧವಿಲ್ಲದ ಪೋಸ್ಟ್ಗಳಿಗೆ ತನ್ನ ಅಕೌಂಟ್ ಟ್ಯಾಗ್ ಮಾಡಿದರು ಸಹ ಅದನ್ನು ತಡೆಯಲು ಪರಮೇಶಿ ಯಾವ ಪ್ರಯತ್ನವನ್ನು ಸಹ ಮಾಡಿಲ್ಲ. ಒಂದು ವೇಳೆ ಮಾಡಿದರು ಸಹ ಪುಕ್ಕಲು ಪರಮೇಶಿ ಹೆದರಿ ಓಡಿ ಹೋದ ಎಂಬುದಷ್ಟೇ ಮತ್ತೆ ಚರ್ಚೆಯ ವಿಷಯವಾಗುತ್ತದೆ. ಅದರ ಬದಲು ಅವಕ್ಕೆಲ್ಲ ಗಮನವೇ ಕೊಡದೆ ಸುಮ್ಮನೆ ಇದ್ದರೆ ಸ್ವಲ್ಪ ಸಮಯದ ನಂತರ ಅವರಿಗೆ ಬೇಸರ ಬಂದು ಆ ಕೆಲಸ ನಿಲ್ಲಿಸಿಬಿಡುತ್ತಾರೆ. ಇಂತಹ ಗೆಳೆಯರನ್ನು ಸಂಬಾಳಿಸುವುದು ಬಹಳ ಕಷ್ಟ. ಒಬ್ಬ ವ್ಯಕ್ತಿಯ ಬಗ್ಗೆ ಏನೂ ಯೋಚಿಸದೆ ತಮ್ಮ ಮನಸ್ಸಿಗೆ ಬಂದಂತೆ ನಿರ್ಧರಿಸಿಬಿಡುವ ವಿಚಿತ್ರ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳನ್ನು ಗೆಳೆಯರಾಗಿ ಹೊಂದಿದ್ದರೆ ಅದು ಕಾಲಿಗೆ ಕಡೆಗುಂಡು ಕಟ್ಟಿಕೊಂಡಂತೆ ಎಂಬ ವಿಚಾರ ಪರಮೇಶಿಗೆ ಮನದಟ್ಟಾಗಿದೆ. ಜೀವನದ ಇಂತಹ ಅರ್ಥವಿಲ್ಲದ ಸಮಸ್ಯೆಗಳ ಬಗ್ಗೆ ಜಗಳವಾಡುತ್ತ ಕೂರಬೇಕೋ ಅಥವಾ ತನ್ನ ಜೀವನಕ್ಕೆ ನೆರವಾಗುವ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಸಮಯ ವ್ಯಯ ಮಾಡಬೇಕೋ ಎಂಬುದೇ ಪರಮೇಶಿಗೆ ಒಂದು ರೀತಿಯ ಗೊಂದಲ. ಕೆಲವೊಮ್ಮೆ ಅದೆಷ್ಟೇ ತಾಳ್ಮೆಯಿಂದ ಇದ್ದರು ಸಹ ಕೆಲವೊಮ್ಮೆ ಇಂತಹ ವ್ಯಕ್ತಿಗಳಿಂದ ಸಹಿಸಲಾರದ ಕೋಪ ಉಕ್ಕಿ ಬರುತ್ತದೆ. ಹುಟ್ಟುಗುಣ ಸುಟ್ಟರು ಹೋಗಲ್ಲ ಎಂಬಂತೆ ಬದುಕುವವರು ಇವರು.

ಹಾಗೆಯೆ ಸ್ವಲ್ಪ ದೂರದಲ್ಲಿದ್ದ ಹೋಟೆಲ್ಗೆ ತಿಂಡಿ ತಿನ್ನಲು ಪರಮೇಶಿ ಹೋಗುತ್ತಾನೆ. ದಿನದಲ್ಲಿ ಹೆಚ್ಚು ಜನ ಸೇರುವ ಸಮಯವನ್ನು ತಪ್ಪಿಸಿ ಬೇರೆ ಸಮಯಕ್ಕೆ ಹೋಗಿ ಆದಷ್ಟು ಹೊತ್ತು ಅಲ್ಲಿಯೇ ಕಳೆದು ಬರುತ್ತಾನೆ ಪರಮೇಶಿ. ಹೋಟೆಲ್ ಅವರಿಗೆ ಇವನು ಪರಿಚಯವಾದರು ಸಹ ಒಂದು ಬಾರಿ ಹರಿದ ನೋಟಿನ ವಿಚಾರವಾಗಿ ಮಾತಿಗೆ ಮಾತಿನ ಎದುರೇಟುಗಳು ಬಿದ್ದು ಮೊದಲಿದ್ದ ಸಲಿಗೆ ಈಗಿಲ್ಲ. ಹೀಗೆಯೇ ಮೊಬೈಲ್ ತೆಗೆದು ವಾಟ್ಸಪ್ಪ್ ಸ್ಟೇಟಸ್ ನೋಡಲು ಆರಂಭಿಸಿದ ಪರಮೇಶಿ. ಒಂದಷ್ಟು ಭಕ್ತಿಗೀತೆಗಳ ತುಣುಕು, ಸಿನಿಮಾ ನಟರ ದೃಶ್ಯಗಳು, ರಾಜಕಾರಣಿಗಳ ಬೆಂಬಲಿಗರ ಜೈಕಾರಗಳು, ಶುಭದಿನ ಕೋರುವ ಹೂವಿನ ಚಿತ್ರಗಳು, ಹೊಸತಾಗಿ ಬಂದ ನಿಯಮಗಳಿಗೆ ವಿರೋಧಗಳು, ಯಾರಿಗೋ ಶ್ರದ್ಧಾಂಜಲಿ, ಇನ್ನು ಕೆಲವರಿಗೆ ಹುಟ್ಟುಹಬ್ಬದ ಶುಭಾಶಯಗಳು, ಒಂದಷ್ಟು ನಗು ತರಿಸುವ ವಿಡಿಯೋಗಳು, ಚಿತ್ರ ವಿಚಿತ್ರವಾಗಿ ತೆಗೆದ ಫೋಟೋಗಳು, ಹೀಗೆ ನೂರಾರು ರೀತಿಯ ಹುಚ್ಚರ ಸಂತೆಯನ್ನೇ ಕಂಡಂತೆ ಆಯಿತು ಪರಮೇಶಿಗೆ. ಪ್ರತಿದಿನ ಈ ಹುಚ್ಚಾಟಗಳನ್ನು ನೋಡಿ ನೋಡಿ ಸಾಧಾರಣವಾಗಿ ಎಲ್ಲರಿಗು ಅಭ್ಯಾಸವಾಗಿಬಿಟ್ಟಿದೆ. ಅದೇನೇ ಇರಲಿ, ಸಾರ್ವಜನಿಕ ಸ್ಥಳಗಳಲ್ಲಿ ಇಯರ್ಫೋನ್ಸ್ ಇಲ್ಲದೆ ಗೆಳೆಯರು ಹಾಕಿರುವ ಏನನ್ನೇ ನೋಡಲು ಸಹ ಹೆದರಿಕೆಯಾಗುತ್ತದೆ. ಹೀಗಾಗಿ ಒಂದು ಕಡೆ ಕೇಳದೆ ಇದ್ದರು ಸಹ ಹೊರಗಡೆಯಿರುವ ಸಂದರ್ಭದಲ್ಲಿ ಇಯರ್ಫೋನ್ಸ್ ಕಡ್ಡಾಯ. ಇದು ಮೊಬೈಲ್ ಕಳ್ಳತನವನ್ನು ತಡೆಗಟ್ಟುವಲ್ಲಿ ಸಹ ಬಹಳ ಪ್ರಮುಖ ಪಾತ್ರ ವಹಿಸಿದೆ. ಆದರೂ ಹೀಗೆ ಒಮ್ಮೆ ಪರಮೇಶಿ ಹಾಡು ಕೇಳುತ್ತಿದ್ದಾಗ ಹಾಡು ಕೇಳುವುದು ನಿಂತಾಗ, ಇಯರ್ಫೋನ್ಸ್ ಸಂಪೂರ್ಣವಾಗಿ ಹಾಳಾಯಿತೆಂದು ಯೋಚಿಸಿದ್ದನೆ ಹೊರತು ತನ್ನ ಮೊಬೈಲ್ ಕದ್ದಿರಬಹುದು ಎಂಬ ಆಲೋಚನೆ ಬಂದಿರಲಿಲ್ಲ. 

ತಿಂಡಿ ತಿಂದು ಹೋಟೆಲಿನಿಂದ ಹೊರಬಂದ ಪರಮೇಶಿಗೆ ಎತ್ತ ಹೋಗಬೇಕೆನ್ನುವ ನಿರ್ಧಾರ ಮಾಡಲು ಬಹಳ ಕಷ್ಟವಾಯಿತು. ಹೀಗೆಯೇ ಸ್ವಲ್ಪ ದೂರ ಸುತ್ತಾಡಿ ಬರುವ ಮನಸ್ಸಾಯಿತು. ಈ ನಗರದ ಇಕ್ಕಟ್ಟಾದ ರಸ್ತೆಗಳಲ್ಲಿ, ಅಲ್ಲಲ್ಲಿ ಉಗುಳಿರುವ, ಚಿಕ್ಕ ಮಕ್ಕಳನ್ನು ಹೊತ್ತುಕೊಂಡು ಭಿಕ್ಷೆ ಬೇಡುವ ನಾಟಕ ಆಡುವವರನ್ನು ಕಂಡರೆ ಅದೇನೋ ಒಂದು ರೀತಿಯ ಬೇಸರ. ಸರ್ಕಾರ ಉಚಿತವಾಗಿ ಶಿಕ್ಷಣ ಕೊಡುತ್ತಿರುವಾಗ ಮಕ್ಕಳನ್ನು ಕಂಡವರು ಹಣ ನೀಡಿಯೇ ನೀಡುತ್ತಾರೆ ಎಂಬ ಕುತಂತ್ರದ ಮೂಲಕ ಭಿಕ್ಷೆ ಬೇಡಲು ಇಳಿಸುವ ಹೀನ ಮನಸ್ಥಿತಿಯ ಜನರು ಜಗದಲ್ಲಿ ಇದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಸಹ ಸಾಧ್ಯವಿಲ್ಲ. 

ಇನ್ನು ಏನು ನೋಡಲು ಸಿಗುತ್ತದೆ ರಸ್ತೆಗಳಲ್ಲಿ, ಅಲ್ಲಲ್ಲಿ ತಮ್ಮ ಪ್ರೀತಿಯನ್ನು ಜಗತ್ತಿಗೆ ತೋರಿಸುತ್ತ ತಿರುಗುವ ಪ್ರೇಮಿಗಳ ಜೋಡಿಗಳು, ಕಾಲೇಜು ವಿದ್ಯಾರ್ಥಿಗಳ ಗುಂಪು, ಕಸ ತೆಗೆದುಕೊಂಡು ಹೋಗಲು ಬರುವವರ ಗಾಡಿಗಳು, ಎಗ್ಗಿಲ್ಲದೆ ನುಗ್ಗಿ ಬರುವ ವಾಹನಗಳು, ಸಾಕಷ್ಟು ಬಗೆಯ ತಿಂಡಿ ತಿನಿಸುಗಳು, ಧೂಳು, ಹೊಗೆ, ದನಗಳು, ದಡೂತಿ ನಾಯಿಗಳು, ಜನರ ಕಿರುಚಾಟ ಇವೆಲ್ಲದರ ನಡುವೆ ಮನಸ್ಸು ಬಿರುಗಾಳಿಗೆ ಸಿಲುಕಿದ ಗಾಳಿಪಟದಂತಾಗುತ್ತದೆ. ಹಳ್ಳಿಯ ಕಡೆಯಲ್ಲಿ ಇರುವ ದನಗಳಿಗೆ ಕುಡಿಯಲು ಒಳ್ಳೆಯ ನೀರು, ಉಸಿರಾಡಲು ಶುದ್ಧ ಗಾಳಿ, ನಿಸರ್ಗದತ್ತವಾಗಿ ಸೊಂಪಾಗಿ ಬೆಳೆದ ಹಸಿರುಹುಲ್ಲು ದೊರೆಯುತ್ತದೆ. ಈ ನಗರಗಳಲ್ಲಿ ಹಣ ಕೊಟ್ಟರು ಸಹ ಮನುಷ್ಯರಿಗೆ ಇವೆಲ್ಲ ಸಿಗದೇ ಇರುವಾಗ ಇನ್ನು ಇತರ ಜೀವಿಗಳ ಬಗ್ಗೆ ಆಲೋಚಿಸುವುದು ಕೂಡ ಪರಮೇಶಿಗೆ ಭಯ ಹುಟ್ಟಿಸುತ್ತದೆ.   

ಪರಮೇಶಿಗೆ ಇದು ಪ್ರತಿದಿನದ ಅನುಭವ, ಮನುಷ್ಯನನ್ನು ಒಂದಷ್ಟು ದಿನ ನರಕಕ್ಕೆ ಬಿಟ್ಟರು ಸಹ ಅಲ್ಲಿಯೇ ತನ್ನ ಜೀವನ ಕಟ್ಟಿಕೊಳ್ಳುವ ಸಾಮರ್ಥ್ಯ ಇರುವವನು, ಅಂತಹದರಲ್ಲಿ ಇವೆಲ್ಲ ಯಾವ ಲೆಕ್ಕ. ಪರಮೇಶಿ ಸೀದಾ ಹೋಗಿ ಒಂದೆರಡು ದಿನಪತ್ರಿಕೆಗಳನ್ನು ಮತ್ತು ಜಗತ್ತಿನ ವಿದ್ಯಮಾನಗಳ ಬಗ್ಗೆ ಬಣ್ಣಿಸುವ ಸಾಪ್ತಾಹಿಕ ಪತ್ರಿಕೆಗಳನ್ನು ತೆಗೆದುಕೊಂಡು ಬಂದ. ಪರಮೇಶಿಗೆ ಪುರುಸೊತ್ತು ಇದ್ದಾಗ ಏನೋ ಒಂದಷ್ಟು ಓದದಿದ್ದರೆ ಸಮಾಧಾನವಿಲ್ಲ. ಅವನಿಗೆ ಓದಿನಿಂದ ಏನೂ ಸಹ ಆಗಬೇಕಿಲ್ಲ, ಓದಿನ ಸುಮಧುರ ಅನುಭವಕ್ಕೆ ಓದುವುದಷ್ಟೇ. ಮೊದಲೆಲ್ಲ ಅಲ್ಲಿ ಇಲ್ಲಿ ಹುಡುಕಿ ಚಿಲ್ಲರೆ ಒಟ್ಟುಮಾಡಿ ಪೇಪರ್ ಮಾರುವವರಿಗೆ ಕೊಡಬೇಕಿತ್ತು, ಆದರೆ ಈಗ ಎಲ್ಲವು ಮೊಬೈಲ್ ಅಲ್ಲೇ ನಡೆದುಹೋಗುತ್ತದೆ. ಕೆಲವೊಮ್ಮೆ ಸರ್ವರ್ ಕೈ ಕೊಟ್ಟಾಗ ಮಾತ್ರ ಕೈಯಲ್ಲಿ ಹಣವು ಇಲ್ಲದೆ ಕೊಂಡಿದ್ದನ್ನು ವಾಪಸ್ಸು ಕೊಟ್ಟು ಬರಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿಯೇ ಪರಮೇಶಿ ಹೋಟೆಲ್ ಮುಂತಾದ ಸ್ಥಳಗಳಿಗೆ ಏನಾದರು ತಿನ್ನಲು ಹೋದಾಗ ಜೇಬಿನಲ್ಲಿ ನೋಟುಗಳಿಲ್ಲದೆ ಹೋಗುವುದಿಲ್ಲ. ತಿಂದಿದ್ದನ್ನು ವಾಪಸ್ಸು ಕೊಡುವುದಾದರೂ ಹೇಗೆ ? ಇದಕ್ಕೂ ಹೆಚ್ಚಾಗಿ ಹೋಟೆಲು ಕೆಲಸಗಾರರ ನಡವಳಿಕೆ ಹೋಟೆಲಿನಲ್ಲಿರುವ ಗ್ರಾಹಕರ ಸಂಖ್ಯೆಯ ಮೇಲೆ ಹೆಚ್ಚು  ಅವಲಂಬಿತವಾಗಿರುತ್ತದೆ.  

ಬೀದಿ ಬೀದಿ ಸುತ್ತಿ, ಬಿಸಿಲಿನ ಹೊಡೆತ ತಾಳಲಾರದೆ ಕಬ್ಬಿನ ಹಾಲು ಕುಡಿದು ಮಧ್ಯಾಹ್ನದ ಹೊತ್ತಿಗೆ ಮತ್ತೆ ವಾಪಸ್ಸು ರೂಮಿಗೆ ಬಂದ ಪರಮೇಶಿ. ತುಂಬಿದ ಹೊಟ್ಟೆಗೆ ವಿರಾಮ ಸಿಕ್ಕಿದರೆ ನಿದ್ರಾದೇವಿ ಹುಡುಕಿಕೊಂಡು ಬರುತ್ತಾಳೆ. ಏಳುವುದೇ ತಡವಾದಾಗ ಮತ್ತೆ ಮಲಗಲು ಮನಸ್ಸಿಲ್ಲ. ಹಾಗೆಯೆ ದಿನ ಪತ್ರಿಕೆಗಳ ಮೇಲೆ ಕಣ್ಣಾಡಿಸಿದ. ದಿನಪತ್ರಿಕೆಯ ಅರ್ಧ ಭಾಗ ಜಾಹಿರಾತುಗಳಿಂದಲೇ ತುಂಬಿರುತ್ತವೆ. ಒಂದೆಡೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಸುದ್ಧಿಗಳಿದ್ದರೆ, ಇನ್ನೊಂದು ಪುಟದಲ್ಲಿ ದಿನಭವಿಷ್ಯ ಇರುತ್ತದೆ. ಒಂದೆಡೆ ಮಾನವ ಹಕ್ಕುಗಳ ಹಾಗು ಶಾಂತಿ ಸ್ಥಾಪನೆಗೆ ಹೋರಾಡಿದವರಿಗೆ ಪ್ರಶಸ್ತಿ ಬಂದ ಸುದ್ಧಿಗಳಿದ್ದರೆ, ಇನ್ನೊಂದೆಡೆ ಜಾತಿ ಧರ್ಮದ ಕಾರಣಕ್ಕೆ ಕೊಲೆಯಾಗಿರುವ ಸುದ್ಧಿ ಇರುತ್ತವೆ. ಒಂದೆಡೆ ಅಧಿಕಾರಗಳ ನಿಷ್ಠೆ, ಸೇವಾ ಕಾರ್ಯಗಳು ಇದ್ದರೆ ಇನ್ನೊಂದೆಡೆ ಲಂಚ, ಭ್ರಷ್ಟಾಚಾರದ ಸುದ್ಧಿಗಳು. 

ಹೀಗೆ ಒಂದರಿಂದ ಇನ್ನೊಂದಕ್ಕೆ ಅಜಗಜಾಂತರ ವ್ಯತ್ಯಾಸ ಇರುವ ಸಾಕಷ್ಟು ವಿಷಯಗಳು ನಮ್ಮ ಜೀವನದ ಅಂಶಗಳಾಗಿವೆ. ಇವೆಲ್ಲ ಸುದ್ಧಿಗಳ ನಡುವೆ ಮನಸ್ಸಿಗೆ ಬಹಳ ಕಾಡುವ ಸುದ್ಧಿಗಳೆಂದರೆ ಕಾಣೆಯಾದವರ ಸುದ್ಧಿಗಳು, ಅವರ ಹತ್ತಿರದವರು ಅನುಭವಿಸುವ ಮಾನಸಿಕ ಯಾತನೆ ಯಾಕೋ ಪರಮೇಶಿಯನ್ನು ಪ್ರತಿ ಬಾರಿ ತೀವ್ರ ಯೋಚನೆಗೆ ತಳ್ಳುತ್ತವೆ. ಪರಮೇಶಿಯ ಜೀವನವು ಹಾಗೆಯೆ ಆಗಿದೆ, ತನ್ನದೆಂದು ಅಂದುಕೊಂಡಿದ್ದ ಸಾಕಷ್ಟು ಗುಣ ಹಾಗು ವ್ಯಕ್ತಿಗಳು ಜೀವನದಿಂದ ಕಾಣೆಯಾಗಿದ್ದಾರೆ. ಆ ನೋವು ಬಹಳ ಪೀಡಿಸುತ್ತದೆ ಪರಮೇಶಿಯನ್ನು. ಕಳೆದು ಹೋದವರನ್ನು ಹುಡುಕುವುದು ಸುಲಭ, ಕದ್ದು ಕೂತವರನ್ನು ಹುಡುಕುವುದು ಕಷ್ಟ. ಮತ್ತೊಂದಷ್ಟು ಕ್ರೀಡಾ ಸುದ್ಧಿಗಳು, ತೀರಿ ಹೋದವರ ಫೋಟೋಗಳು ಹೀಗೆ ಒಟ್ಟಿನಲ್ಲಿ ಹೆಚ್ಚು ಜನರ ಗಮನ ಸೆಳೆಯುವ ಮತ್ತು ಹೆಚ್ಚು ಹಣ ಮಾಡುವ ಉದ್ದೇಶ ಈ ಸುದ್ಧಿವಾಹಿನಿಗಳದ್ದು ಎಂದೆಲ್ಲಾ ಯೋಚಿಸುತ್ತಿದ್ದ ಪರಮೇಶಿಗೆ ಜಗತ್ತು ನಡೆಯುತ್ತಿರುವುದೇ ಹೀಗೆ ಎನ್ನುವ ಹತಾಶೆ ಮೂಡುತ್ತದೆ. 

ಹೀಗೆಯೇ ಕೂತಿದ್ದ ಪರಮೇಶಿಯ ಮೊಬೈಲ್ ಸದ್ಧಾಯಿತು. ಏನೆಂದು ತೆಗೆದು ನೋಡಿದಾಗ ಇತ್ತೀಚಿಗೆ ಪರಿಚಯವಾದ ಹುಡುಗಿಯ ಸಂದೇಶ. ಆ ಆನ್ಲೈನ್ ಜಗತ್ತಿನಲ್ಲಿ ಪರಿಚಯವಿಲ್ಲದ ಹುಡುಗಿಯರೊಡನೆ ಮಾತನಾಡುವಾಗ ಬಹಳ ಎಚ್ಚರದಿಂದ ಇರಬೇಕು, ಚಂದದ ಮಾತುಗಳಿಂದ ಸ್ನೇಹಗಳಿಸಿ, ಸಲಿಗೆ ಬೆಳೆಸಿಕೊಂಡು ಕೊನೆಗೆ ಅದನ್ನೇ ಉಪಯೋಗಿಸಿಕೊಂಡು ಹಣಕ್ಕೆ ಬೇಡಿಕೆಯಿಡುವ ಜಾಲದ ಬಗ್ಗೆ ಪರಮೇಶಿ ತನ್ನ ಗೆಳೆಯರ ಜೀವನದ ಘಟನೆಗಳನ್ನು ನೋಡಿ ಕಲಿತಿದ್ದಾನೆ. ಹೇಳಿದ್ದನ್ನು ನಂಬಿಬಿಡುವ ಜನರು ಇರುವ ತನಕ ವಿವಿಧ ಊಹಿಸಿಕೊಳ್ಳಲಾಗದ ರೀತಿಯಲ್ಲಿ ಜನರಿಗೆ ಮೋಸ ಮಾಡುವವರು ಸಹ ಇರುತ್ತಾರೆ. ಹೀಗಾಗಿ ಪರಮೇಶಿಗೆ ಗುರುತು ಪರಿಚಯವಿಲ್ಲದ ಜನರೊಂದಿಗೆ ವ್ಯವಹರಿಸಲು ಸ್ವಲ್ಪ ಅಂಜಿಕೆ. ಹೀಗೆಯೇ ಏನೋ ಒಂದು ಕಾಮೆಂಟ್ ಅಲ್ಲಿ ಜಗಳದೊಂದಿಗೆ ಶುರುವಾದ ಮಾತುಕತೆ ನಂತರ ಗೆಳೆತನವಾಗಿ ಬದಲಾಗಿತ್ತು.

 ಆನ್ಲೈನ್ ಜಗತ್ತೇ ಹಾಗೆ, ಗುರುತು ಪರಿಚಯ ಇಲ್ಲದವರು ನೋವು ಪ್ರೀತಿ ಹಂಚಲು ಹಿಂದೆ ಮುಂದೆ ನೋಡುವುದಿಲ್ಲ. ಗುರುತು ಪರಿಚಯವಿಲ್ಲದವರ ಪ್ರೀತಿ ಅಭಿಮಾನ ಆನ್ಲೈನ್ ಜಗತ್ತಿನಲ್ಲಿ ಮುಂದುವರೆಯುವುದಕ್ಕೆ ಶಕ್ತಿ ತುಂಬುವುದಂತೂ ನಿಜ. ಹೀಗಾಗಿ ಪರಮೇಶಿಗೆ ಕೆಲವೊಮ್ಮೆ ಇದು ಮೋಸ ಮಾಡುವ ಯೋಜನೆ ಎಂಬ ಅನುಮಾನವಿದ್ದರೂ ಸಹ ತನ್ನ ಜಾಗೃತೆಯಲ್ಲಿ ತಾನಿರುತ್ತಾನೆ. ಮೆಸೇಜ್ ಏನೆಂದು ತೆರೆದು ನೋಡಿದಾಗ ತನಗೆ ಮದುವೆ ಫಿಕ್ಸ್ ಆಗಿದೆಯೆಂದು ಕಳಿಸಿದ್ದಳು. ಶುಭವಾಗಲಿ ಎಂದು ಪ್ರತಿಕ್ರಿಯೆ ನೀಡಿದ. ಮತ್ತೆ ಒಂದು ಮೆಸೇಜ್ ಬಂತು, "ನಿಮಗೆಲ್ಲ ಟೈಮ್ ಪಾಸ್ ಅಷ್ಟೇ ಅಲ್ವ ಇದೆಲ್ಲ, ಬೈ" ಅಂತ. ಹಾಗಲ್ಲ ಅಂತ ಏನೇನೋ ಕಳುಹಿಸಿದ, ಸಂದೇಶ ಟೈಪ್ ಮಾಡುವಷ್ಟರಲ್ಲಿ ಅವಳು ಬ್ಲಾಕ್ ಮಾಡಿ ಆಗಿತ್ತು. ಡಿಜಿಟಲ್ ಜೀವನವೇ ಹಾಗೆ, ಅತಿ ವೇಗದ ನಿರ್ಧಾರಗಳು. ಪ್ರೀತಿಯು ಹಾಗೆ ಮೂಡುತ್ತದೆ, ದ್ವೇಷವು ಸಹ ಅದಿಕ್ಕಿಂತ ವೇಗವಾಗಿ ಮೂಡುತ್ತದೆ. ಇಷ್ಟು ಹೊತ್ತಿಗಾಗಲೇ ಈ ದಿನಪತ್ರಿಕೆಗಳು ಯಾಕೆ ಇಷ್ಟು ಚಿಕ್ಕದಾಗಿ ಅಕ್ಷರಗಳನ್ನು ಬರೆಯುತ್ತವೆ ಎಂಬ ಯೋಚನೆಯು ತಲೆಗೆ ಬಂತು, ಆದರೆ ಅದರ ಬಗ್ಗೆ ಹೆಚ್ಚು ಚಿಂತಿಸುವ ಮನಸ್ಥಿತಿಯಲ್ಲಿ ಪರಮೇಶಿ ಇರಲಿಲ್ಲ.   

ಹಾಗೆಯೆ ಎದ್ದು ಹೊರಗಡೆ ಏನಾದರು ತಿಂದು ಬರುವ ಮನಸ್ಸಾಯಿತು, ಸಮಯ ಈಗಾಗಲೇ ಸಂಜೆ ನಾಲ್ಕರ ಹತ್ತಿರವಾಗಿತ್ತು. ರೂಮಿನ ಬದಿಯಲ್ಲಿದ್ದ ಎಗ್ ರೋಲ್ಸ್ ಮಾರುವ ಗೂಡಂಗಡಿ ಇದೆ. ಇಬ್ಬರು ನಿಲ್ಲಲು ಇರುವ ಜಾಗದಲ್ಲಿ ನಿಂತುಕೊಂಡು, ಒಂದು ಗ್ಯಾಸ್ ಸ್ಟವ್ ಹಾಗು ಬೇಕಾದ ಪಾತ್ರೆ ಸಾಮಾನುಗಳೊಂದಿಗೆ ನಿಂತುಕೊಂಡೆ ಹಲವಾರು ಗಂಟೆಗಳಲ್ಲಿ ಸಾವಿರಾರು ರೂಪಾಯಿ ಸಂಪಾದನೆ ಮಾಡುವ ಕೆಲಸ ಈ ನಗರದ ತಿಂಡಿಪೋತರನ್ನೇ ನಂಬಿ ಆರಂಭಿಸಿರುವ ಉದ್ಯೋಗ. ಎಲ್ಲಿಂದಲೋ ಬಂದು, ಯಾರ ಸಹಾಯವು ಬೇಡದೆ ತಮ್ಮ ಪಾಡಿಗೆ ತಾವು ಹಣ ಸಂಪಾದನೆಗೆ ಇಳಿಯುವ ಗುಣ ನಿರುದ್ಯೋಗ ಹಾಗು ಕಡಿಮೆ ಸಂಬಳ ನೀಡುವ ಉದ್ಯಮಗಳು ಹೆಚ್ಚಾಗಿರುವ ರಾಜ್ಯಗಳಿಂದ ಬರುವ ಜನರಲ್ಲಿ ಕಂಡುಬರುತ್ತದೆ.

 ನಮ್ಮ ಜನ ಹಾಗಲ್ಲ, ಸಣ್ಣ ಪುಟ್ಟ ಕೆಲಸಗಳು ಆರಂಭಿಸುವ ಮುಂಚೆ ಜಗತ್ತಿನ ಬಗ್ಗೆಯೇ ಬಹಳ ಆಲೋಚಿಸಿ ಕೊನೆಗೆ ಏನು ಆಲೋಚಿಸಲು ಹೊರಟಿದ್ದೆವು ಎಂಬುದನ್ನೇ ಮರೆತುಬಿಡುತ್ತಾರೆ. ಪರಮೇಶಿ ಮನೆಯಲ್ಲಿ ಸಹ ಅಷ್ಟೇ, ಮನೆಯ ಮಗನನ್ನು ಮನೆಬಿಟ್ಟು ದೂರದ ಊರಿನಲ್ಲಿ ದುಡಿಯಲು ಯಾಕೆ ಕಳುಹಿಸಬೇಕು? ಇಲ್ಲೇ ಇದ್ದುಕೊಂಡು ಸ್ವಲ್ಪ ಸಂಪಾದನೆ ಮಾಡಿಕೊಂಡು ಜೀವನ ಸಾಗಿಸಲು ಸಾಧ್ಯವಿರುವಾಗ ಎನ್ನುವ ವಾದಗಳು ಹಲವಾರು ಬಾರಿ ಪರಮೇಶಿಯ ಜೀವನದಲ್ಲಿ ನಡೆದಿವೆ. ಅದೆಷ್ಟೋ ನಗರದಲ್ಲಿ ಜೀವನ ಕಟ್ಟಿಕೊಳ್ಳುವ ಜನರ ಜೀವನದಲ್ಲಿ ತಮ್ಮ ದೂರದ ಊರಿನ ಕಷ್ಟಗಳು ಸಹ ಪ್ರಮುಖ ಕಾರಣವಾಗಿರುತ್ತವೆ. 

ಈ ರೀತಿಯ ಸಣ್ಣ ಪುಟ್ಟ ಅಂಗಡಿಗಳ ಮುಂದೆ ನಿಂತು ತಾವು ಮಾಡುತ್ತಿರುವ ಕೆಲಸಗಳ ಬಗ್ಗೆ ಸುತ್ತಮುತ್ತ ನಿಂತಿರುವ ಜನರೆಲ್ಲರೂ ಕೇಳುವಂತೆ ಮಾತನಾಡುವುದು, ಪ್ರಿಯತಮೆಯರಿಗೆ ತಾವೇ ತಿನ್ನಿಸುವುದು, ಫೋನ್ ಪೇ ಇದ್ರೆ ಅಮೆಜಾನ್ ಪೇ ಮಾಡ್ಲಾ ಅಂತ ಕೇಳುವುದು ಮುಂತಾದ ಚಟುವಟಿಕೆಗಳ ಮೂಲಕ ಗಮನ ಸೆಳೆದು ನಾವು ಬುದ್ಧಿವಂತರು ಎಂಬ ಭಾವನೆ ಮೂಡಿಸಲು ಹೋರಾಡುವ ಜನರು, ಅವರಿಗಿಂತ ಕಡಿಮೆ ಓದಿರುವ ವ್ಯಕ್ತಿ ಸುಮಾರು ೨೦ ರೂಪಾಯಿ ಖರ್ಚಾಗುವ ಆಹಾರ ಪದಾರ್ಥವನ್ನು ೬೦ ರುಪಾಯಿಗೆ ಮಾರಿದರು ತೆಗೆದುಕೊಂಡು ತಿಂದು ಕುರಿಯಾಗುತ್ತಾರೆ. ದಡ್ಡರಂತೆ ನಟಿಸುವವರು ಯಾವುದೊ ಒಂದು ವಿಚಾರದಲ್ಲಿ ಅತಿ ಬುದ್ಧಿವಂತರಾಗಿ ಇರುತ್ತಾರೆ ಎಂಬುದಂತೂ ಸತ್ಯ. 

ಇವತ್ತು ಅಲ್ಲಿ ಹೋಗಲು ಮನಸ್ಸಿಲ್ಲದೆ ಬೇಕರಿಯಲ್ಲಿ ಟೀ ಕುಡಿಯುತ್ತಾ ನಿಂತಿದ್ದ ಪರಮೇಶಿ. ಬೀದಿ ನಾಯಿಯೊಂದು ಅವನನ್ನೇ ನೋಡುತ್ತಿತ್ತು. ಅಷ್ಟು ಹೊತ್ತಿಗೆ ಸಿಗರೇಟು ವಾಸನೆ ಮೂಗಿಗೆ ಹೊಡೆಯಿತು. ಛೆ, ಎಂತಹ ಜನ ಇವರೆಲ್ಲ. ನೋಡಲು ಒಳ್ಳೆಯ ಬಟ್ಟೆ ಹಾಕಿಕೊಂಡು ಆಫೀಸಿನಲ್ಲಿ ಕೆಲಸ ಮಾಡುವವರಂತೆ ಇದ್ದಾರೆ, ಸಾರ್ವಜನಿಕ ಸ್ಥಳಗಳಲ್ಲಿ ಇನ್ನೊಬ್ಬರು ಸಿಗರೇಟಿನ ಹೊಗೆ ಕುಡಿಯುವಂತೆ ಸೇದುವುದು ತಪ್ಪು ಎನ್ನುವ ಬುದ್ಧಿ ಸಹ ಇಲ್ಲವೇ ಇವರಿಗೆ ಅನ್ನಿಸಿತು. ಸ್ವಲ್ಪ ಹೊತ್ತು ತಡೆದುಕೊಂಡು ಸುಮ್ಮನಿದ್ದರು ಸಹ ತಿರುಗಿ ಅವನೆಡೆಗೆ ನೋಡುತ್ತಾ ನಿಂತುಬಿಟ್ಟ ಪರಮೇಶಿ. ದಿನದ ಸಿಟ್ಟನ್ನೆಲ್ಲ ಅವನ ಕಪಾಳಕ್ಕೆ ಬಾರಿಸಿ ತೀರಿಸಿಕೊಳ್ಳಬೇಕೆಂಬ ವಿಚಿತ್ರ ಆಲೋಚನೆಯೊಂದು ಶಕ್ತಿ ಪಡೆಯುತ್ತಾ ಹೋಯಿತು. ಇದನ್ನು ಗಮನಿಸಿದ ಸಿಗರೇಟು ಸೇದುತ್ತಿದ್ದ ವ್ಯಕ್ತಿ ಒಹ್, ಐ ಆಮ್ ಸಾರಿ ಅಂದು ಅಲ್ಲಿಯೇ ಎಸೆದುಬಿಟ್ಟ ಸಿಗರೇಟನ್ನು. ಪರಮೇಶಿಗೆ ಅವನನ್ನು ತದುಕುವ ಮನಸ್ಸು ಇನ್ನು ಸಹ ಇತ್ತಾದರೂ ಆ ಬಣ್ಣ ಬಣ್ಣದ ಇಂಗ್ಲಿಷ್ ಕಂಡು ಸ್ವಲ್ಪ ಮಂಕಾದ. ಬೇಕರಿಯವರಿಗೆ ದುಡ್ಡು ಕೊಟ್ಟು, ಒಂದೆರಡು ರೂಪಾಯಿಗಳ ಚಿಲ್ಲರೆ ಇಲ್ಲವೆಂದು ಹೇಳಿ ಚಾಕಲೇಟು ಕೊಟ್ಟರು ಸಹ ಸಿಟ್ಟಾಗದೆ ವಾಪಸ್ಸು ತನ್ನ ರೂಮಿಗೆ ಬಂದ ಪರಮೇಶಿ. 

ಹಾಗೆಯೆ ಯಾವುದೊ ಒಂದಷ್ಟು ವೆಬ್ ಸರಣಿಗಳನ್ನು ನೋಡುತ್ತಾ ಕುಳಿತ ರಾತ್ರಿಯವರೆಗೆ. ಹಸಿವಾದಾಗ ಹೋಗಿ ಎಗ್ ರೈಸ್, ಕಬಾಬ್ ತಿನ್ಕೊಂಡು ಬಂದ. ನಾನು ಸಹ ಇಂತಹುದೇ ಒಂದು ಸಣ್ಣ ಹೋಟೆಲು ಆರಂಭಿಸಬೇಕು ಎನ್ನುವ ಅಸೆ ಪರಮೇಶಿಯ ಮನದಲ್ಲಿ ಬಹಳ ದಿನಗಳಿಂದ ಇದೆ. ಆದರೆ, ಸದಾ ಸುತ್ತಾಡಲು ಬಯಸುವ ಮತ್ತು ಒಂದು ಹೊತ್ತು ಅಡುಗೆ ಮಾಡಿಕೊಂಡು ಜೀವನ ಸಾಗಿಸಲು ಸಹ ಆಲಸ್ಯ ತೋರುವ ಪರಮೇಶಿಗೆ ಆ ಆಸೆಯ ಬಗ್ಗೆ ನಗು ಸಹ ಮೂಡಿತು. ರಾತ್ರಿಯಾದರೂ ರೂಮಿನ ಹತ್ತಿರದ ಎಗ್ ರೈಸ್ ಗೂಡಂಗಡಿಯಲ್ಲಿ ಜನರು ಕಾದು ನಿಂತಿದ್ದರು. ಸುತ್ತ ಮೂರ್ನಾಲ್ಕು ನಾಯಿಗಳು ಸಹ ನಿಂತಿದ್ದವು. ದಪ್ಪಗೆ ಇರುವ  ಆಂಟಿಗಳು ರೋಡಿನಲ್ಲಿ ಬೀದಿದೀಪದ ಬೆಳಕಿನಲ್ಲಿ ಬ್ಯಾಡ್ಮಿಂಟನ್ ಆಟ ಶುರು ಹಚ್ಚಿಕೊಂಡಿದ್ದರು. ಒಂದಷ್ಟು ಕಿಟಕಿ ಬದಿಯ ಕೋಣೆಗಳಲ್ಲಿ ಕತ್ತಲಾದರೂ ಬೆಳಕಿರಲಿಲ್ಲ, ಒಂದಷ್ಟು ಜನರು ಕಿಟಕಿ ಬದಿಯಲ್ಲಿ ನಿಂತು ಯಾರೊಂದಿಗೋ ಮಾತನಾಡುತಿದ್ದರು, ಎಣ್ಣೆ ತಿಂಡಿಗಳ ಸುವಾಸನೆ ಸುತ್ತಮುತ್ತ ಹರಡಿತ್ತು, ಹಾಗೆಯೆ ಒಂದೆರಡು ನಿಮಿಷ ಪರಮೇಶಿ ಸುಮ್ಮನೆ ನಿಂತು ಸುತ್ತಲಿನ ಜೀವನವನ್ನು ನೋಡುತ್ತಿದ್ದ, ಇಷ್ಟು ಜನರನ್ನು ಬೆಳೆಸಿರುವ ನಗರಕ್ಕೆ ನನ್ನ ಬೆಳೆಸಿ ಹರಸುವ ಶಕ್ತಿ ಮತ್ತು ಪ್ರೀತಿ ಖಂಡಿತ ಇದೆಯೆಂದು ಮತ್ತೊಮ್ಮೆ ಮನಸ್ಸಿಗೆ ಅನ್ನಿಸಿತು. ರೂಮಿಗೆ ವಾಪಸ್ಸು ಹೋಗುವ ಮುನ್ನ ಬೀದಿಯ ಬದಿಯಲ್ಲಿ ನಿಂತಿದ್ದ ಒಂದೆರಡು ಪುಟ್ಟ ಮಕ್ಕಳಿಗೆ ಜೇಬಿನಲ್ಲಿದ್ದ ಚಾಕಲೇಟು ಕೊಟ್ಟು ಹೊರಟ. ನಿದ್ದೆ ಬರುವವರೆಗೂ ಕೈಯಲ್ಲಿ ಮೊಬೈಲ್ ಹಿಡಿದು, ನಾಳೆ ಮತ್ತೆ ಇಂತಹುದೇ ಮತ್ತೊಂದು ದಿನದ ಪುನರಾವರ್ತನೆ ಒಂದಷ್ಟು ಹೊಸ ವಿಶ್ವಾಸ ಹಾಗು ನಂಬಿಕೆಗಳೊಂದಿಗೆ!

ಕಾಮೆಂಟ್‌ಗಳು

- Follow us on

- Google Search