ಕಥೆ : ಆಫೀಸು

ಇವನು ಯಾಕೆ ಇಲ್ಲಿಗೆ ಬಂದಿದಾನೆ? ನಮ್ಮೂರ ಶಾಲೆಯಲ್ಲಿ ಕೆಲಸಕ್ಕೆ ಇದ್ನಲ್ಲ ಧರ್ಮ, ಅವನೇ ಇವನು. ಛೆ, ನೋಡೇ ಬಿಟ್ಟ ನನ್ನ. ಅರೆ, ಓಡಿಸ್ಕೊಂಡು ಬರ್ತಿದನಲ್ಲ.ಈ ಕತ್ತಲೆಯಲ್ಲಿ ಓಡೋಕೆ ಆಗ್ತಿಲ್ಲ ನಂಗೆ, ಕಾಲು ಎತ್ತಿ ಇಡೋಕು ಆಗ್ತಿಲ್ಲ, ಏನು ಇಷ್ಟು ಬೆಳಕು ಬರ್ತಿದೆ! ಓಡುತಿದ್ದ ಹಾಗೆ ಪ್ರಪಾತಕ್ಕೆ ಬಿದ್ದ ಅನುಭವವಾಗಿ ನಿದ್ದೆಯಿಂದ ಎಚ್ಚರ ಆಯಿತು ರಮೇಶನಿಗೆ. ಪಕ್ಕದ ಮೇಜಿನ ಮೇಲಿದ್ದ ಮೊಬೈಲ್ ತೆಗೆದುಕೊಂಡು ಸಮಯ ನೋಡಿದ. ಬೆಳಿಗ್ಗೆ ಏಳುವರೆ ಆಗಿತ್ತು.  


ಒಂದು ಐದು ನಿಮಿಷ ಮಲಗಿ ಏಳೋಣ ಎಂದುಕೊಂಡು, ಚಾರ್ಜರ್ ತುದಿ ಮೊಬೈಲ್ಗೆ ಸಿಕ್ಕಿಸಿ ಮಲಗಿದ. ಸ್ವಲ್ಪ ಹೊತ್ತಿನ ನಂತರ ಎಚ್ಚರವಾಯಿತು. ಸಮಯ ನೋಡಿದರೆ ಹತ್ತೂವರೆ !. ಮೊಬೈಲ್ ನೋಡಿದರೆ ಚಾರ್ಜ್ ಆಗಿಲ್ಲ, ಸ್ವಿಚ್ ಹಾಕದೆ ಹಾಗೆ ಮಲಗಿದ್ದ. ಎದ್ದು ನಿತ್ಯಕರ್ಮಗಳನ್ನು ಮುಗಿಸಿದ. ಸ್ನಾನ ಮಾಡಿದ. ನಿನ್ನೆ ತಂದಿದ್ದ ಒಂದೆರಡು ಬ್ರೆಡ್ ತಿಂದು, ಟೀ ಶರ್ಟ್ ಪ್ಯಾಂಟ್ ಹಾಕಿದ. ಆಫೀಸಿನ ಐಡಿ, ಲ್ಯಾಪ್ಟಾಪ್ ಬ್ಯಾಗ್ ತೆಗೆದುಕೊಂಡು ಮನೆಯ ಬೀಗ ಹಾಕಿ ಆಫೀಸಿಗೆ ಹೋರಾಟ. ರಮೇಶನ ಸಾಕಷ್ಟು ದಿನಗಳು ಹೀಗೆಯೇ ಆರಂಭವಾಗುತ್ತಿದ್ದವು. 

ತಾನಿರುವ ಏರಿಯಾ ಅಷ್ಟು ಸುಂದರವಾಗಿಲ್ಲದಿದ್ದರು, ಆಫೀಸಿಗೆ ಹತ್ತಿರ ಇದೆ ಎಂಬ ಕಾರಣಕ್ಕಾಗಿ ಅಲ್ಲಿಯೇ ಬಾಡಿಗೆ ಮನೆ ಹುಡುಕಿದ್ದು. ಆಫೀಸಿಗೆ ನಡೆದು ಹೋಗುವ ದಾರಿಯಲ್ಲಿ ದಪ್ಪನೆಯ ನಾಯಿಗಳು, ಭಿಕ್ಷೆ ಬೇಡುವ ಹೆಂಗಸರು ಮಕ್ಕಳು ಹಾಗು ತಮ್ಮ ದಿನನಿತ್ಯದ ಕೆಲಸಕ್ಕೆ ಹೋಗುವವರು ಎದುರಾಗುತ್ತಾರೆ. ಹೆಚ್ಚು ವೇಗವಾಗಿ ಸಾಗದ ಎಲೆಕ್ಟ್ರಿಕ್ ಬೈಸಿಕಲ್ಗಳು ಬೆಂಗಳೂರಿಗೆ ಕಾಲಿರಿಸಿವೆ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳ ಸೋಮಾರಿತನವನ್ನೇ ಬಂಡವಾಳ ಮಾಡಿಕೊಂಡು ಎಷ್ಟೊಂದು ಹೊಸ ಕಂಪನಿಗಳು ಆರಂಭಗೊಂಡು ಯಶಸ್ವಿಯಾಗುತ್ತವೆ ಎನ್ನುವುದಕ್ಕೆ ಇದೊಂದು ಚಿಕ್ಕ ಉದಾಹರಣೆ ಅಷ್ಟೇ. ಇದನ್ನೆಲ್ಲಾ ಆಲೋಚಿಸಿಕೊಂಡು  ನಡೆಯುತ್ತಾ ಕಂಪನಿಯ ಹತ್ತಿರಕ್ಕೆ ರಮೇಶ ಬಂದ. ಸಣ್ಣ ವಯಸ್ಸಿಂದಲೂ ಈ ರೀತಿಯ ಒಂದು ಒಳ್ಳೆಯ ಕೆಲಸ ಗಿಟ್ಟಿಸಿ, ತನ್ನ ಖರ್ಚನ್ನು ತಾನು ನೋಡಿಕೊಂಡು, ಮನೆಯವರಿಗೆ ಆದಷ್ಟು ಸಹಾಯ ಮಾಡಬೇಕೆನ್ನುವುದು ರಮೇಶನ ಕನಸ್ಸಾಗಿತ್ತು. 

ಕೆಲವೊಂದು ಕನಸುಗಳು ನನಸಾದ ಮೇಲೆ ತಮ್ಮ ಮಹತ್ವ ಕಳೆದುಕೊಳ್ಳುತ್ತವೆ. ಹಾಗೆಯೆ ರಮೇಶನ ಜೀವನ. ಹೇಳುವುದಕ್ಕೆ ಒಂದು ಕೆಲಸ, ಬೇರೆಯವರ ಕಣ್ಣಿಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವ ಜೀವನ. ಪ್ರವೇಶದ್ವಾರದಲ್ಲಿ ನಿಂತಿದ್ದ ಕಾವಲುಗಾರ ರಮೇಶನನ್ನು ಆಗಂತುಕನಂತೆ ನೋಡಿದ. ಇವನು ಅವನನ್ನು ನೋಡಿ ಸಣ್ಣ ನಗು ಬೀರಿದ. ಮಾಸ್ಕ್ ಹಾಕಿದ್ದರಿಂದ ನಗು ಅವನಿಗೆ ಕಾಣಲಿಲ್ಲ. ಹತ್ತಿರ ಬರುತ್ತಿದಂತೆ ಐಡಿ ತೆಗೆದು ಕೊರಳಿಗೆ ಧರಿಸಿದ. ಒಳಗೆ ಹೋಗಿ ಲಿಫ್ಟ್ ಬರಲು ಕಾಯುತ್ತ ನಿಂತ. ಕೊರೊನ ಹಾವಳಿಯಿಂದಾಗಿ ಒಂದು ಬಾರಿಗೆ ಒಬ್ಬರೇ ಹೋಗಬೇಕೆನ್ನುವ ನಿಯಮವನ್ನು ಎಲ್ಲ ಲಿಫ್ಟ್ ಹತ್ತುವ ಸ್ಥಳಗಳಲ್ಲಿ ಅಂಟಿಸಿದ್ದರು. ಒಂದೆರಡು ನಿಮಿಷ ಕಾದ ನಂತರ ಲಿಫ್ಟ್ ಬಾಗಿಲು ತೆರೆಯಿತು. ಅದರಲ್ಲಿ ಮೂರು ಜನರಿದ್ದರು. ಇವನೂ ಹೋಗಿ ಸೇರಿಕೊಂಡ. ಏಕೆಂದರೆ ಈಗಾಗಲೇ ಸಮಯ ಹನ್ನೊಂದುವರೆಯಾಗಿತ್ತು. ಮೂರನೇ ಫ್ಲೋರ್ಗೆ ಬಂದ ನಂತರ, ಅಲ್ಲಿದ್ದ ಸೆಕ್ಯೂರಿಟಿ ದೇಹದ ತಾಪಮಾನ ದಾಖಲಿಸಿ, ಅರೋಗ್ಯ ಸೇತು ಅಪ್ಲಿಕೇಶನ್ ಅಲ್ಲಿ ಸೇಫ್ ಎಂದು ತೋರಿಸಿದ ನಂತರ ತನ್ನ ಸ್ಥಳಕ್ಕೆ ಹೋಗಿ ಕೂತ.  

ಆಫೀಸಿನಲ್ಲಿ ಹೆಚ್ಚಿನ ಜನರಿರಲಿಲ್ಲ. ಕೊರೊನ ಹರಡುವುದನ್ನು ತಡೆಗಟ್ಟುವ ಸಲುವಾಗಿ ಎಸಿ ಆಫ್ ಮಾಡಲಾಗಿತ್ತು. ಸಧ್ಯಕ್ಕೆ ಒಂದು ಅತ್ತಿತ್ತ ತಿರುಗುವ ಟೇಬಲ್ ಫ್ಯಾನ್ ವ್ಯವಸ್ಥೆ ಮಾಡಲಾಗಿತ್ತು. ಹೋಗಿ ತನ್ನ ಕ್ಯೂಬಿಕಲ್ ಲೈಟ್ ಸ್ವಿಚ್ ಹಾಕಿದ. ಮತ್ತೆ ಬಂದು ಕೂತು ಕೈಗಳನ್ನು ಸ್ಯಾನಿಟೈಝೆರ್ ಬಳಸಿ ಸ್ವಚ್ಛಗೊಳಿಸಿಕೊಂಡ. ಕೊರೊನ ಕಾರಣದಿಂದಾಗಿ ಕ್ಯಾಂಟೀನ್ ಅಲ್ಲಿ ಟೀ ಕಾಫಿ ಇಡುವುದನ್ನು ಸಹ ನಿಲ್ಲಿಸಿದ್ದರು. ಲ್ಯಾಪ್ಟಾಪ್ ಆನ್ ಮಾಡಿದ. ಅಷ್ಟರಲ್ಲಿ ತನ್ನ ಮ್ಯಾನೇಜರ್ ಕರೆ ಬಂತು. ಕರೆಯನ್ನು ಸ್ವೀಕರಿಸಿ ನಿನ್ನೆ ಮಾಡಿ ಮುಗಿಸಬೇಕಾಗಿದ್ದ ಕೆಲಸಗಳು ಏಕೆ ತಡವಾದವು ಎಂಬುದನ್ನು ವಿವರಿಸಿದ. ಮ್ಯಾನೇಜರ್ ಎಂದಿನಂತೆ ಕೆಲಸವನ್ನು ಬೇಗ ಮುಗಿಸಬೇಕಾದ ಪ್ರಾಮುಖ್ಯತೆಯನ್ನು ತಿಳಿಸಿದ. ಕಾಲ್ ಕಟ್ ಮಾಡಿದ ನಂತರ ರಮೇಶ ತನ್ನ ಮನಸ್ಸಿನಲ್ಲೇ ಅಂದುಕೊಂಡ "ಮನೇಲಿ ಕುತ್ಕೊಂಡು, ಮಕ್ಕಳು ಅಂಡು ತೊಳ್ಕೊಂಡು ನಂಗೆ ಬುದ್ಧಿವಾದ ಹೇಳೋಕೆ ಬರ್ತಾನೆ ಗುಳ್ಡು ನನ್ ಮಗ. ಇಂತೋರೆಲ್ಲ ಹೆಂಗೆ ಮ್ಯಾನೇಜರ್ ಆಗ್ತಾರೋ ದೇವರಿಗೆ ಗೊತ್ತು". ಅಷ್ಟರಲ್ಲಿ ಲ್ಯಾಪ್ಟಾಪ್ ಆನ್  ಆಗಿತ್ತು, ತನ್ನ ಕೆಲಸಗಳಲ್ಲಿ ರಮೇಶ ನಿರತನಾದ.

ಊಟದ ಸಮಯವಾಯ್ತು. ಆದರೂ ಮಾಡಬೇಕಾದ ಕೆಲಸಗಳು ಸಾಕಷ್ಟು ಇದ್ದಿದ್ದರಿಂದ ಊಟ ಮಾಡಲು ಹೋಗಲಿಲ್ಲ. ಹಾಗೆಯೆ ಒಂದೇ ಸಮನೆ ಕೂತು ನಾಲ್ಕು ಗಂಟೆಗೆ ನಿನ್ನೆ ಮುಗಿಸಬೇಕಾಗಿದ್ದ ಕೆಲಸಗಳನ್ನು ಮುಗಿಸಿದ. ಅಷ್ಟರಲ್ಲಿ ಮ್ಯಾನೇಜರ್ ಮತ್ತೊಮ್ಮೆ ಕರೆ ಮಾಡಿದ. ಅದನ್ನು ಎತ್ತಲು ಮನಸ್ಸಾಗಲಿಲ್ಲ, ಆದರೂ ಬೇರೆ ದಾರಿ ಕಾಣದೆ ಎತ್ತಿದ. ಮೊನ್ನೆ ಕೋಡ್ ರಿವ್ಯೂಗೆ ಹಾಕಿದ್ದ ರಿವ್ಯೂ ಮಾಡಿದ್ದಾಗಿ ತಿಳಿಸಿದ ನಂತರ, ಹೊಸದಾಗಿ ಮೂರು ಬಗ್ಸ್ ಅಸೈನ್ ಮಾಡಿರುವುದಾಗಿ ತಿಳಿಸಿದ. ಅದರಲ್ಲಿ ಒಂದನ್ನು ನಾಳೆಯೊಳಗೆ ಮುಗಿಸಬೇಕಾಗಿ ಎಚ್ಚರಿಸಿದ. ಎಲ್ಲದಕ್ಕೂ ಯಸ್ ಓಕೆ ಎಂದು ಉತ್ತರಿಸಿದ ರಮೇಶ. ಕರೆ ಮುಗಿದ ನಂತರ ರಮೇಶನಿಗೆ ಜೋರು ಹಸಿವಾಗಲು ಶುರುವಾಯ್ತು. ಬ್ಯಾಗ್ ಅಲ್ಲಿದ್ದ ಸ್ನಿಕರ್ಸ್ ಚಾಕಲೇಟ್ ತಿಂದ, ಒಂದು ಚಿಂಗಂ ತೆಗೆದು ಬಾಯಿಗೆ ಹಾಕಿಕೊಂಡ. 
ಮತ್ತೆ ತನ್ನ ಕೆಲಸದಲ್ಲಿ ರಮೇಶ ನಿರತನಾದ. 

ಏನೇನೋ ಯೋಚನೆಗಳು ಮೆಲ್ಲನೆ ರಮೇಶನಿಗೆ ಶುರುವಾದವು. ರಮೇಶ ಸ್ನಾನ ಮಾಡುವಾಗ ಬಿಟ್ಟರೆ ಹೆಚ್ಚು ಚಿಂತೆ ಮಾಡುವುದು ಕೆಲಸ ಮಾಡುವಾಗ ಹಾಗು ರಾತ್ರಿ ಮಲಗುವ ಸಮಯದಲ್ಲಿ. ಈ ರೀತಿ ಚಟುವಟಿಕೆಯಿಲ್ಲದ ಜೀವನಶೈಲಿಯಿಂದ ಆಗುವ ಅಪಾಯಗಳ ಬಗ್ಗೆ ಹಾಗು ತನ್ನ ವಯಸ್ಸಿನ ಇತರರು ಜೀವನವನ್ನು ಮಜಾ ಉಡಾಯಿಸುತ್ತಿರುವುದರ ಬಗ್ಗೆ ಆತನ ಯೋಚನೆಗಳು ಹೋದವು. ದುಡ್ಡಿಗೆ ಪೀಡಿಸುವ ಕೆಲವು ಪರಿಚಯದವರು ಸಹ ಅವನ ನೆನಪಿಗೆ ಬಂದರು. ಜಗತ್ತಲ್ಲಿ ಎಲ್ಲರೂ ಸಂತೋಷವಾಗಿ ದಿನ ಕಳೆಯುತ್ತಿದ್ದಾರೆ, ನಾನು ಈ ರೀತಿಯ ಕಾಂಕ್ರೀಟ್ ಕಾಡಿನಲ್ಲಿ ಬಂಧಿಸಲ್ಪಟ್ಟಿದ್ದೇನೆ ಎನ್ನಿಸಿತು. ತನ್ನ ಊರಿನ ಹಚ್ಚ ಹಸುರಿನ ಪರಿಸರ ಹಾಗು ಕೃಷಿಯ ಜೀವನಶೈಲಿ ನೆನಪಾದವು. ಮನೆಯಲ್ಲಿ ತನ್ನ ಓದಿಗಾಗಿ ಮಾಡಿರುವ ಸಾಲದ ಬಗ್ಗೆಯೂ ಯೋಚನೆಯಾಯಿತು. ಸಾಲವೇನೋ ಯಾವಾಗಲಾದರೂ ಕೆಲಸ ಮಾಡಿ ತೀರಿಸಬಹುದು ಆದರೆ ತಾನು ಕಳೆದುಕೊಳ್ಳುತ್ತಿರುವ ಯವ್ವನದ ದಿನಗಳನ್ನು ಒಂದು ಕಾರ್ಪೊರೇಟ್ ಕಂಪನಿಗೆ ಬಲಿ ಕೊಡಬೇಕೇ ಎಂದೆಲ್ಲಾ ಅನ್ನಿಸತೊಡಗಿತು. ಇದು ಅವನ ಪ್ರತಿದಿನದ ಯೋಚನೆಗಳು, ಏಳೂವರೆಯ ಸುಮಾರಿಗೆ ಆಫೀಸಿನಿಂದ ಮನೆಗೆ ಹೊರಟ. 

ಮನೆಗೆ ಬರುವ ದಾರಿಯಲ್ಲಿ ಒಂದು ಪ್ಲೇಟ್ ಎಗ್ ರೈಸ್, ಒಂದು ಪ್ಲೇಟ್ ಕಬಾಬ್ ಪಾರ್ಸಲ್  ತೆಗೆದುಕೊಂಡು ಬಂದ. ಬಹಳ ಹಸಿವಾಗಿತ್ತು. ಕೈಗಳನ್ನು ತೊಳೆದು ಬಟ್ಟೆ ಬದಲಾಯಿಸಿ ಊಟಕ್ಕೆ ಕುಳಿತುಕೊಂಡ. ಹೊಟ್ಟೆ ತುಂಬಾ ಊಟ ಹಾಗು ಕಣ್ಣು ತುಂಬಾ ನಿದ್ದೆ ಎಂತಹಾ ಸಂಕಷ್ಟದ ಸ್ಥಿತಿಯನ್ನು ಸಹ ಮಬ್ಬಾಗಿಸುತ್ತದೆ. ಊಟವಾದ ನಂತರ ಎಂದಿನಂತೆ ಪುಸ್ತಕಗಳನ್ನು ಓದಲು ಶುರು ಮಾಡಿದ. ಹಾಗೆಯೆ ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದ. ಮಲಗುವ ಮುಂಚೆ ಒಂದಷ್ಟು ರೋಚಕ ಸಿನಿಮಾಗಳನ್ನು ನೋಡಿದ. ಗಂಟೆ ರಾತ್ರಿ ೧ ದಾಟಿತ್ತು. ಆ ಸಮಯದಲ್ಲಿ ಮತ್ತೊಂದು ವಿಡಿಯೋ ನೋಡಿದ "ಬೆಳಿಗ್ಗೆ ಬೇಗ ಏಳುವುದರಿಂದ ಆಗುವ ಪರಿಣಾಮಗಳು ".

ಕಾಮೆಂಟ್‌ಗಳು

- Follow us on

- Google Search