ವಿಚಾರ ಕ್ರಾಂತಿಗೆ ಆಹ್ವಾನ ಪುಸ್ತಕ ಮತ್ತೊಮ್ಮೆ ಓದಿದೆ.

ವಿಚಾರ ಕ್ರಾಂತಿಗೆ ಆಹ್ವಾನ ಪುಸ್ತಕವನ್ನು ಯಾಕೋ ಮತ್ತೊಮ್ಮೆ ಓದುವ ಮನಸ್ಸಾಯಿತು. ಹಿಂದೊಮ್ಮೆ ಓದಿದ್ದರು ಸಹ ಬಹಳ ಕಡಿಮೆ ಪುಟಗಳಿರುವ ಆದರೆ ಸಾಕಷ್ಟು ಕ್ಲಿಷ್ಟ ವಿಚಾರಗಳ ಬಗ್ಗೆ ಕುವೆಂಪು ಅವರ ನಿಲುವುಗಳನ್ನು ಓದುಗರಿಗೆ ತಿಳಿಸುವ ಪುಸ್ತಕ ಇದಾಗಿದೆ. ಈ ಪುಸ್ತಕ ಓದಿದಾಗ ನನಗೆ ತಿಳಿದ ವಿಚಾರಗಳ ಬಗ್ಗೆ ಬರೆದಿರುವ ಲೇಖನ ಇದಾಗಿದೆ. ಇದರೊಂದಿಗೆ ಪುಸ್ತಕದಿಂದ ಆಯ್ದ ಸಾಲುಗಳನ್ನು ಸಹ ದಪ್ಪ ಅಕ್ಷರಗಳಲ್ಲಿ ಹಾಕಿದ್ದೇನೆ. ಕುವೆಂಪು ಅವರ ವಿಚಾರ ಮತ್ತು ನಿಲುವುಗಳನ್ನು ಹೆಚ್ಚು ಜನರಿಗೆ ಸುಲಭವಾಗಿ ಅರ್ಥವಾಗುವಂತೆ ನನ್ನ ಮಾತುಗಳಲ್ಲಿ ಬರೆಯುವ ಪ್ರಯತ್ನ ಇದು. 

ವಿಚಾರ ಕ್ರಾಂತಿಗೆ ಆಹ್ವಾನ. 

ಪುಸ್ತಕದ ಮೊದಲ ಅಧ್ಯಾಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಹೇಗೆ ಬಡತನ ಮತ್ತು ಅನಕ್ಷರತೆ ನಿಜವಾದ ಪ್ರಜಾಪ್ರಭುತ್ವ ಭಾರತದಲ್ಲಿ ಯಶಸ್ವಿಯಾಗಲು ತೊಡಕಾಯಿತು ಎನ್ನುವ ಬಗ್ಗೆ ಕುವೆಂಪು ಅವರು ಮಾತನಾಡಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳೊಡನೆ ಕೈಗಾರಿಕೆ, ಉದ್ಯಮ ಮುಂತಾದವುಗಳ ಬಗ್ಗೆ ಪೈಪೋಟಿಗೆ ಭಾರತ ಇಳಿದರೂ ಸಹ ಇಲ್ಲಿನ ಗ್ರಾಮೀಣ ಭಾಗದ ಬಡ ಜನರಿಗೆ ಮತ್ತು ರೈತರಿಗೆ ಅವಶ್ಯಕವಾಗಿ ಬೇಕಾಗಿದ್ದ ಸರ್ಕಾರದ ಸೌಲಭ್ಯಗಳು ಮತ್ತು ಯೋಜನೆಗಳು ನಮ್ಮ ದೇಶದಲ್ಲಿ ಹಲವಾರು ಕಾರಣಗಳಿಂದ ಸಿಗದೆ ನಗರದ ಶ್ರೀಮಂತರ ಬೊಕ್ಕಸ ತುಂಬಿಸುವ ಮತ್ತು ಅವರಿಗೆ ಆಹಾರ ಉತ್ಪನ್ನಗಳನ್ನು ಒದಗಿಸುವ ಹೆಚ್ಚು ಲಾಭವಿಲ್ಲದ ದುಡಿಮೆಗಾರರಾಗಿ ಬದುಕುವಂತಾಯಿತು ಎನ್ನುವ ಭಾವನೆ ಮೂಡಿಸುವ ಭಾಷಣ ಅದು ಅನ್ನಿಸಿತು. ದೆಹಲಿಯ ಮೇಲೆ ಅತಿಯಾದ ಅಧಿಕಾರದ ಕೇಂದ್ರೀಕರಣದಿಂದ ಹಳ್ಳಿಗಳ ಅಭಿವೃದ್ಧಿ ಕಡೆಗಣನೆಗೆ ಒಳಗಾಗುವಂತಾಯಿತು. ಇದಕ್ಕೆ ಇಲ್ಲಿನ ಜನರ ಅನಕ್ಷರತೆ ಮತ್ತು ಬಡತನ ಕೂಡ ಅವರನ್ನು ಮತ್ತಷ್ಟು ತುಳಿಯುವಲ್ಲಿ ಸದ್ದಿಲ್ಲದೆ ಸಹಾಯ ಮಾಡುವಂತೆ ಆಯಿತು.

ಕುವೆಂಪು ಅವರು ಪ್ರಜಾಪ್ರಭುತ್ವದ ಚುನಾವಣೆಯ ಪ್ರಕ್ರಿಯೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚುನಾವಣೆ ಗೆಲ್ಲಲು ಬಹಳ ಮುಖ್ಯವಾಗಿ ಬೇಕಾಗಿರುವುದು ಹಣ ಎನ್ನುವ ವಿಷಯ ನಮಗೆಲ್ಲರಿಗೂ ತಿಳಿದಿದೆ. ಯಾರೋ ಒಂದಷ್ಟು ಜನ ಖದೀಮರು ಹೇಗೋ ವಿವಿಧ ಕಳ್ಳ ಮಾರ್ಗದಿಂದ ಸಾಕಷ್ಟು ಹಣ ಒಟ್ಟುಮಾಡಿ ಹಣ, ಹೆಂಡ, ಜಾತಿ, ಧರ್ಮ, ಪಂಗಡ ಮುಂತಾದ ವಿಷಯಗಳನ್ನು ಉಪಯೋಗಿಸಿ ಅಧಿಕಾರ ಹಿಡಿದರೆ ಮುಗಿಯಿತು. ನಂತರ ತಮ್ಮ ಅಧಿಕಾರದ ಬಲ ಉಪಯೋಗಿಸಿ ಎಲ್ಲ ಬಗೆಯ ಪ್ರಚಾರ ಪಡೆದು ತಮ್ಮ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಚುನಾವಣೆ ಗೆದ್ದ ಮೇಲೆ ಪ್ರತಿಭಟನೆ ಮಾಡಿದರು ಸಹ ಅದನ್ನು ಪೊಲೀಸ್ ಅಥವಾ ಸೈನ್ಯವನ್ನು ಬಳಸಿ ಹತ್ತಿಕ್ಕುವ ಅಧಿಕಾರ ಸರ್ಕಾರಕ್ಕೆ ಇದೆ. ಹೀಗಾಗಿ ಕೆಟ್ಟವರು ಒಂದು ಬಾರಿ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದರೆ ವ್ಯವಸ್ಥೆಯನ್ನು ಪುನಃ ಸರಿಪಡಿಸಲು ಮತ್ತಷ್ಟು ಸಮಯ ಹಾಳಾಗುವುದು ಖಂಡಿತ. ಅಷ್ಟರಲ್ಲಿ ಇಂತಹ ಮತ್ತೆಷ್ಟು ಭ್ರಷ್ಟಾಚಾರದ ಘಟನೆಗಳು ನಡೆದಿರುತ್ತವೋ ಯಾರಿಗೆ ಗೊತ್ತು. ಹೀಗಾಗಿ ಚುನಾವಣೆ ಎನ್ನುವುದು ಹಣವಂತರ ಆಟವಾಗಿದೆ. ಚುನಾವಣೆ ಗೆಲ್ಲಲು ಯಾವ ದಾರಿ ಬೇಕಾದರೂ ದುಷ್ಟರು ಹಿಡಿದು ಮುಂದುವರೆಯಲು ಹೇಸುವುದಿಲ್ಲ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಬೇಕು. ಹಣದ ಆಧಾರದ ಮೇಲೆ ಚುನಾವಣೆ ಗೆಲ್ಲುವ ಪದ್ಧತಿಯನ್ನು ಜನರು ಬದಲಾಯಿಸದೆ ಹೋದರೆ ಭ್ರಷ್ಟಾಚಾರವನ್ನು ಕೊನೆಗಾಣಿಸುವುದು ಸಾಧ್ಯವಿಲ್ಲ.


"ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆಲ್ಲುವ ಯಾವ ಪಕ್ಷವಾಗಲಿ, ಯಾವ ವ್ಯಕ್ತಿಯಾಗಲಿ ಭ್ರಷ್ಟಾಚಾರಕ್ಕೆ ಬಲಿಯಾಗದೆ ಇರಲು ಸಾಧ್ಯವಿಲ್ಲ."

ಕುವೆಂಪು ಅವರು ನಂತರ ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವ ಹಾನಿಯ ಬಗ್ಗೆ ಮಾತನಾಡಿದ್ದಾರೆ. ಆಧ್ಯಾತ್ಮವನ್ನು ಉಳಿಸಿಕೊಂಡು ಮತಭ್ರಾಂತಿಯಿಂದ ನಾವು ಪಾರಾಗದೆ ಹೋದರೆ ಅದರಿಂದ ಪ್ರಜಾಪ್ರಭುತ್ವದ ಆಶಯಗಳಿಗೆ ಇನ್ನಷ್ಟು ಹಾನಿಯಾಗುತ್ತದೆ ಎಂಬ ಅಭಿಪ್ರಾಯವನ್ನು ಕುವೆಂಪು ಅವರು ತಿಳಿಸಿದ್ದಾರೆ. ಆದರೆ, ಇದನ್ನು ಗುರುತಿಸುವುದು ಕೂಡ ಜನರಿಗೆ ಸಾಕಷ್ಟು ಕಷ್ಟವಾಗಿದೆ. ಏಕೆಂದರೆ ಮತ ಎಂಬುದು ವಿವಿಧ ವೇಷಗಳಲ್ಲಿ ನಮ್ಮ ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ಬೇರೂರಿದೆ. ಜಾತಿಪದ್ಧತಿ ಸಂಪೂರ್ಣವಾಗಿ ನಾಶವಾಗದೆ ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಜಾರಿಗೆ ಬರುವುದು ಸಾಧ್ಯವಿಲ್ಲ. ಹೀಗಾಗಿ ಯುವಜನರು ಜಾತಿಪದ್ಧತಿಯನ್ನು ಸಮಾಜದಿಂದ ತೊಡೆದು ಹಾಕಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲು ಮುಂದಾಗಬೇಕು. ವೈಜ್ಞಾನಿಕ ದೃಷ್ಟಿ ಮತ್ತು ವೈಚಾರಿಕ ಬುದ್ಧಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 

ಬರೆಯ ಬಯಸುವವರಿಗೆ ಒಂದು ಎಚ್ಚರಿಕೆ. 

ಇಪ್ಪತ್ತನೇ ಶತಮಾನದ ಮೊದಲ ಅರ್ಧದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಜಗತ್ತಿನಲ್ಲಿ ಎಂದು ಸಹ ಕಾಣದ ವೇಗದಲ್ಲಿ ಸಾಕಷ್ಟು ಬೆಳವಣಿಗೆಗಳು ಆದವು. ಸಾಕಷ್ಟು ಸಾವು ನೋವು ಹಾಗು ಸಾಧನೆಗಳನ್ನು ಕಂಡ ಕಾಲಘಟ್ಟ ಅದು. ರಷ್ಯಾದ ಸಾಹಿತಿಗಳು ಹೇಗೆ ತಮ್ಮ ಮುಂದಿನ ಪೀಳಿಗೆಗೆ ಮನಮುಟ್ಟುವಂತೆ ತಮ್ಮ ಸಾಹಿತ್ಯದಲ್ಲಿ ಇತಿಹಾಸದ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ ಎನ್ನುವುದರ ಬಗ್ಗೆ ಕುವೆಂಪು ಅವರು ಸಂತಸ ವ್ಯಕ್ತಪಡಿಸುತ್ತಾರೆ. ಆ ಕೆಲಸ ನಮ್ಮ ಬರಹಗಾರರು ಸಹ ಮಾಡಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ. ಕೇವಲ ಬರೆಯುವ ಚಟಕ್ಕೆ ನೂರಾರು ಕಾದಂಬರಿಗಳನ್ನು ಬರೆಯುವ ಬದಲು ಸಾಕಷ್ಟು ಶ್ರಮ ಹಾಕಿ ದೈತ್ಯ ಕಾದಂಬರಿಗಳನ್ನು ಜೀವಮಾನದಲ್ಲಿ ಬರೆದರೆ ಅದು ಬಹಳ ದೊಡ್ಡ ಕೊಡುಗೆ ಎಂಬುದಾಗಿ ಕುವೆಂಪು ಹೇಳಿದ್ದಾರೆ. ಟಾಲ್ಸ್ಟಾಯ್ ಮುಂತಾದ ರಷ್ಯಾದ ಮಹಾನ್ ಬರಹಗಾರರನ್ನು ಹೆಸರಿಸಿದ್ದಾರೆ. ನಮ್ಮಲ್ಲಿ ಸಹ ಅವರಂತಹ ಸಾಕಷ್ಟು ಸಾಹಿತಿಗಳು ಇದ್ದಾರೆ, ಆದರೆ ಆಗಬೇಕಾದ ಕೆಲಸಗಳು ಇನ್ನು ಸಾಕಷ್ಟಿವೆ ಎನ್ನುವ ಮಾತನ್ನು ಕುವೆಂಪು ಹೇಳಿದ್ದಾರೆ. ಅಂತಹ ದೈತ್ಯ ಕಾದಂಬರಿಗಳನ್ನು ಬರೆಯುವುದಕ್ಕೆ ಸಾಕಷ್ಟು ಸಮಯ ಮತ್ತು ಪರಿಶ್ರಮದ ಅವಶ್ಯಕತೆ ಇದೆ ಎಂಬುದಾಗಿ ಕುವೆಂಪು ಹೇಳಿದ್ದಾರೆ. 

ವಿಮರ್ಶೆಯಲ್ಲಿ ಒಬ್ಬ ಸಾಹಿತಿಯನ್ನು ಅತಿಯಾಗಿ ಹೊಗಳುವ ಅಥವಾ ತೆಗಳುವ ಕೆಲಸದಲ್ಲಿ ಹೆಚ್ಚು ಕಾಲ ಕಳೆಯದೆ ಸಾಧ್ಯವಾದಷ್ಟು ಪ್ರೋತ್ಸಾಹದ ಮಾತುಗಳನ್ನು ಹೇಳಿದರೆ ಅದು ಬರೆಯುವವರಿಗೂ ಪ್ರೋತ್ಸಾಹ ನೀಡುತ್ತದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾಡಬೇಕಾದ ಕೆಲಸಗಳೇ ಸಾಕಷ್ಟು ಬಾಕಿ ಉಳಿದಿರುವಾಗ ಸಾಹಿತಿಗಳನ್ನು ಕಟುವಾಗಿ ಟೀಕಿಸಿ ಅವರ ಉತ್ಸಾಹ ಕುಗ್ಗಿಸಿದರೆ ಅದು ಕೆಟ್ಟ ಕೆಲಸವಾಗುತ್ತದೆ. ವಿಮರ್ಶೆ ಎನ್ನುವುದು ಒಬ್ಬರ ವೈಯಕ್ತಿಕ ಅನುಭವ, ಹೀಗಾಗಿ ಎಲ್ಲರಿಗು ಹಾಗೆಯೆ ಅನ್ನಿಸಬೇಕು ಎನ್ನುವ ನಿಯಮವಿಲ್ಲ. ಮನಸ್ಸಿನ ಪೂರ್ವಾಗ್ರಹ ಮನಸ್ಥಿತಿಯಿಂದ ಹೊರಬಂದು ವಿಮರ್ಶೆ ಬರೆಯುವುದು ಸಹ ಸ್ವಲ್ಪ ಕಷ್ಟದ ಕೆಲಸವೇ. ಹೀಗಾಗಿ ನಮ್ಮ ವಿಮರ್ಶೆ ನಮ್ಮ ಮನಸ್ಸಿನ ಆಲೋಚನೆಗಳ ಶಕ್ತಿಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. 

ಇಲ್ಲಿನ ಜನಜೀವನಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ರಚಿಸುವ ಅಗತ್ಯ ಇದೆ. ವಿದೇಶಿ ಬರಹಗಾರರು ತಮ್ಮ ಕೃತಿಗಳನ್ನು ರಚಿಸಲು ಅವರ ದೇಶದಲ್ಲಿ, ಸಮಾಜದಲ್ಲಿ ನಡೆದ ಘಟನೆಗಳು ಪ್ರೇರಕವಾಗಿರುತ್ತವೆ. ಆದರೆ, ಅವುಗಳನ್ನೇ ನಾವು ಸಹ ಅನುಕರಣೆ ಮಾಡಲು ಹೊರಟರೆ ಅದನ್ನು ಓದಿದ ನಮ್ಮ ಸಮಾಜದ ಜನರಿಗೆ ಹೆಚ್ಚಿನ ಉಪಯೋಗವಾಗುವುದಿಲ್ಲ ಎನ್ನುವ ಅಭಿಪ್ರಾಯ ಕುವೆಂಪು ಅವರ ಮಾತುಗಳಲ್ಲಿ ಕಂಡುಬರುತ್ತಿದೆ. ಸಾಹಿತ್ಯ ಪ್ರಚಾರದ ಉದ್ದೇಶ ಮತ್ತು ಬರೆದಿದ್ದನ್ನು ಪ್ರಕಟಿಸುವ ವ್ಯಾಪಕ ಅವಕಾಶಗಳು ಸಾಹಿತ್ಯದ ಮೇಲೆ ಸಾಕಷ್ಟು ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತಿವೆ. ಸಾಹಿತ್ಯ ಜನಜೀವನಕ್ಕೆ ನೆರವಾಗಬೇಕು ಎನ್ನುವ ಭಾವ ಕುವೆಂಪು ಅವರ ಮಾತುಗಳಲ್ಲಿದೆ. ಹೊಸತನ್ನು ಸೃಷ್ಟಿಸುವ ಕೆಲಸ ಮಾಡುವಾಗ ಹಳೆಯದೆಲ್ಲವನ್ನು ತೆಗಳುವ ಅವಶ್ಯಕತೆ ಇಲ್ಲ. 

ಸಾಹಿತ್ಯ ಚರಿತ್ರಕಾರರಿಗೆ ಸಲಹೆಗಳು  

ಕನ್ನಡ ಸಾಹಿತ್ಯದ ಹಿರಿಮೆ ಗರಿಮೆಯೊಂದಿಗೆ ಅದರ ಪ್ರಾಚೀನತೆಯನ್ನು ತಿಳಿದುಕೊಳ್ಳುವ ಕೆಲಸ ನಮ್ಮಿಂದ ಆಗಬೇಕು. ಏಕೆಂದರೆ ಇಂಗ್ಲಿಷ್ ಕಾವ್ಯದ ಪಿತಾಮಹ ಎಂದು ಕರೆಯಲ್ಪಡುವ ಛಾಸರ್ ಕಾಲಘಟ್ಟ ಕ್ರಿ.ಶ ೧೩೪೦ - ೧೪೦೦. ಪಂಪ ಹುಟ್ಟಿದ್ದು ಕ್ರಿ.ಶ ೬೦೯ ಅಂದರೆ ನಾಲ್ಕು ಶತಮಾನಗಳಿಗೂ ಮುಂಚೆ. ಇಂಗ್ಲಿಷ್ ಸಾಹಿತ್ಯ ಇತಿಹಾಸದ ಪುರಾತನ ಕಾಲಘಟ್ಟ ಹೆಚ್ಚು-ಕಡಿಮೆ ಕನ್ನಡ ಸಾಹಿತ್ಯ ಇತಿಹಾಸದ ಮಧ್ಯಮ ಕಾಲಘಟ್ಟ. ಇದನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಾಹಿತ್ಯ ಕೇವಲ ಅತ್ಯುತ್ತಮ ಕೃತಿಗಳನ್ನು ಮಾತ್ರವಲ್ಲದೆ ದೊಡ್ಡ ಇತಿಹಾಸವನ್ನು ಸಹ ಹೊಂದಿದೆ. ಸುದ್ಧಿಯನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವೇಗವಾಗಿ ತಲುಪಿಸುವ ವ್ಯವಸ್ಥೆ ಬರುವ ಕಾಲಘಟ್ಟಕ್ಕಿಂತಲೂ ಮುಂಚೆ ಕನ್ನಡದಲ್ಲಿ ಸಾಹಿತ್ಯದ ಕೆಲಸಗಳು ನಡೆದಿವೆ. 

ಇಂಗ್ಲಿಷ್ ಸಾಹಿತಿಗಳು ಹೆಚ್ಚು ಪ್ರಚಾರ ಪಡೆಯಲು ಸಾಧ್ಯವಾಗಿದ್ದು ಇಂಗ್ಲಿಷ್ ಸಾಮ್ರಾಜ್ಯ ಜಗತ್ತಿನ ಸಾಕಷ್ಟು ಕಡೆ ಆಡಳಿತ ನಡೆಸಿದ್ದು. ಪಂಪ ತನ್ನ ಕೃತಿ ರಚಿಸುವ ಸಮಯಕ್ಕೆ ಇಂಗ್ಲೆಂಡ್, ಫ್ರಾನ್ಸ್ ಮುಂತಾದ ಕಡೆ ಯಾವ ರೀತಿಯ ಸಾಹಿತ್ಯ ಕೆಲಸಗಳು ನಡೆಯುತ್ತಿದ್ದವು ಎಂಬುದರ ಬಗ್ಗೆಯೂ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಯಾರಾದರೂ ಪರಕೀಯರು ನಮ್ಮವರನ್ನು ಗುರುತಿಸಿ ಹೊಗಳುವ ತನಕ ನಾವು ಅವರನ್ನು ಗುರುತಿಸಿ ಗಮನ ಕೊಡುವುದೇ ಇಲ್ಲ. ಇದು ಬದಲಾಗಬೇಕು. ಟ್ಯಾಗೋರ್, ಸ್ವಾಮಿ ವಿವೇಕಾನಂದರು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಮೇಲೆ ಅವರ ಕೆಲಸಗಳ ಮೇಲೆ ಜನರಿಗೆ ಆಸಕ್ತಿ ಇನ್ನಷ್ಟು ಹೆಚ್ಚಾಯಿತು. ನಮ್ಮ ನಡುವೆಯೇ ಇರುವ ಉತ್ತಮ ಸಾಹಿತಿಗಳನ್ನು ಗುರುತಿಸದೆ ಇರುವ ಸಾಧ್ಯತೆಗಳು ಖಂಡಿತ ಇವೆ. ನಮ್ಮವರನ್ನೇ ನಾವು ಮೊದಲು ಹೊಗಳಲು ಒಂದೆರಡು ಬಾರಿ ಯೋಚಿಸುತ್ತೇವೆ ಮತ್ತು ಹಿಂದೇಟು ಹಾಕುತ್ತೇವೆ. ಜಗತ್ತಿನ ಇತರೆ ಸಾಹಿತ್ಯದ ಮೇಲೆ ಕುತೂಹಲವೂ ಇರಬೇಕು ಮತ್ತು ನಮ್ಮ ಸಾಹಿತ್ಯದ ಹಿರಿಮೆ ಗರಿಮೆಗಳ ಬಗ್ಗೆಯೂ ನಮಗೆ ತಿಳಿದಿರಬೇಕು. ಇಂಗ್ಲೀಶ್ ಭಾಷೆಯ ಸಾಹಿತಿಗಳಂತೆ ಪಂಪ ಮುಂತಾದವರ ಕೆಲಸಗಳು ಆ ಕಾಲಘಟ್ಟಕೆ ಪ್ರಚಾರ ಪಡೆದು ಹೆಚ್ಚು ಓದುಗರನ್ನು ತಲುಪಿದ್ದರೆ ಅವರಂತೆಯೇ ಜನಮನ್ನಣೆ ಪಡೆಯುವ ಸಾಧ್ಯತೆ ಇತ್ತು ಎನ್ನುವುದನ್ನು ನಾವು ಅಲ್ಲಗಳೆಯುವಂತಿಲ್ಲ. 

"ಕನ್ನಡಿಗರು ವಿನಾಯಕ್ಕಾಗಿ ಬಗ್ಗಿ ನಡೆದರೂ ರಿಕ್ತರಂತೆ ಕುಗ್ಗಿ ನಡೆಯುವುದು ಬೇಡ "

ಕೆಲವೊಮ್ಮೆ ಓದಿದ್ದನ್ನೇ ಸಾಕಷ್ಟು ಬಾರಿ ಓದಿ ನಮಗೂ ಹಳೆಯ ಕತೆ ಕವಿತೆಗಳ ಮೇಲೆ ಬೇಸರ ಬರಬಹುದು. ಆದರೆ ಅವುಗಳನ್ನು ನಮ್ಮಂತೆಯೇ ಮೊದಲ ಬಾರಿಗೆ ಓದಿ ಖುಷಿಪಡುವವರು ಇದ್ದಾರೆ ಎನ್ನುವ ಸತ್ಯವನ್ನು ಮರೆತು ಅವರ ಕೆಲಸಗಳನ್ನು ನಿಂದಿಸಲು ಮುಂದಾಗಬಾರದು. ಈ ಬಗೆಯ ಹೃದಯದಾರಿದ್ರ್ಯತನವನ್ನು ಬಿಡಬೇಕು. ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಾಹಿತ್ಯವನ್ನು ಓದಿ ಮೆಚ್ಚಿಕೊಂಡಾಗ ಖುಷಿಯಾಗುವುದು ಸಹಜ ಆದರೆ, ಅದು ನಮ್ಮ ಸಾಹಿತ್ಯದ ಗುಣಮಟ್ಟದ ಅಳತೆಗೋಲಾಗಬಾರದು. ಯಾವ ಪ್ರಶಸ್ತಿಯು ಸಹ ಸಾಹಿತ್ಯಕ್ಕೆ ಮುಖ್ಯವಲ್ಲ, ಅದನ್ನು ಓದಿದಾಗ ಓದುಗರ ಮನಸ್ಸಿನಲ್ಲಿ ಮೂಡುವ ಭಾವನೆ ಮತ್ತು ಓದುಗರಿಗೆ ಆಗುವ ಅನುಭವ ಬಹಳ ಮುಖ್ಯ. ಒಂದು ಕೃತಿಯನ್ನು ಇನ್ನೊಂದು ಕೃತಿಯೊಂದಿಗೆ ಹೋಲಿಕೆ ಮಾಡುವಾಗ ಆ ಕಾಲದ ಇತರ ಕೃತಿಗಳೊಂದಿಗೆ ಅಥವಾ ಸಾಹಿತ್ಯ ಚರಿತ್ರೆಯ ಕಾಲಘಟ್ಟವನ್ನು ಗಮನದಲ್ಲಿ ಇಟ್ಟುಕೊಂಡು ಹೋಲಿಕೆ ಮಾಡುವುದು ಸ್ವಲ್ಪ ನ್ಯಾಯಯುತವಾದುದು ಎನ್ನುವಂತಹ ವಿಚಾರಗಳನ್ನು ಬ್ರಿಟಿಷ್ ಅಧಿಕಾರಿ ರೈಸ್ ಅವರ ಹೇಳಿಕೆಗಳ ಕುರಿತು ತಮ್ಮ ನಿಲುವುಗಳನ್ನು ಹಂಚಿಕೊಂಡಿದ್ದಾರೆ.

ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ 

ಹಳೆಯ ಮಹಾನ್ ಕೃತಿಗಳನ್ನು ತ್ಯಜಿಸಿ ಮುಂದೆ ಸಾಗುವ ಬಗ್ಗೆ ಕುವೆಂಪು ಅವರು ಒಂದು ಉತ್ತಮ ಉದಾಹರಣೆ ಕೊಟ್ಟಿದ್ದಾರೆ. ಮನೆಯಲ್ಲಿರುವ ಹಿರಿಯರ ಹಳೆಯ ಚಿನ್ನದ ಆಭರಣಗಳನ್ನು ಕರಗಿಸಿ ನಮಗೆ ಬೇಕಾದಂತೆ ಹೊಸ ಬಗೆಯ ಆಭರಣಗಳನ್ನು ತಯಾರಿಸಿಕೊಂಡು ಉಪಯೋಗಿಸುವಂತೆ ಹಳೆಯ ಸಾಹಿತ್ಯದಲ್ಲಿರುವ ಉತ್ತಮ ಆದರ್ಶಗಳನ್ನು ಈ ಕಾಲಕ್ಕೆ ಹೊಂದುವಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಂಡು ಸಾಹಿತ್ಯವನ್ನು ಸೃಷ್ಟಿಸಿ ಜನರಿಗೆ ತಲುಪಿಸಿದರೆ ಅದು ಜನರಿಗೂ ಹಿಡಿಸುತ್ತದೆ. ಕೆಟ್ಟದ್ದನ್ನು ಬಿಟ್ಟು, ಒಳ್ಳೆಯದನ್ನು ಆರಿಸಿ ಇಂದಿನ ಸಮಾಜಕ್ಕೆ ಬೇಕಾದ ಚಿಂತನೆಗಳನ್ನು ಸೇರಿಸಿ ನಮ್ಮ ಸಾಹಿತ್ಯಕ್ಕೆ ನೆರವಾಗುವಂತೆ ಬಳಸಿಕೊಳ್ಳಬಹುದು.   
"ನಾನು ಯಾವ ಜಾತಿಯ ವಿರುದ್ಧವಾಗಿ ಅಥವಾ ದ್ವೇಷದಿಂದ ಯಾವ ಮಾತನ್ನೂ ಆಡಲಾರೆ. ಏಕೆಂದರೆ ನನಗೆ ಯಾವ ಜಾತಿಯೂ ಇಲ್ಲ, ಆದ್ದರಿಂದ ಜಾತಿದ್ವೇಷವೂ ಇಲ್ಲ."

ಪ್ರತಿ ಕೃತಿಯ ಹಿಂದೆ ಅದನ್ನು ಬರೆದವರು ಒಬ್ಬರು ಇರುತ್ತಾರೆ. ಆ ಕೃತಿಯಲ್ಲಿ ಒಂದು ವಿಷಯದ ಮೇಲೆ ಸಾಹಿತ್ಯವನ್ನು ಮರುಸೃಷ್ಟಿ ಮಾಡುವಾಗ ಬರೆದವರ ಆಲೋಚನೆ, ಉದ್ದೇಶ ಮತ್ತು ಮನಸ್ಥಿತಿ ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ, ಸಾಹಿತ್ಯವನ್ನು ಕಾಲಕ್ಕೆ ತಕ್ಕಂತೆ ವಿಶ್ವದ ಎಲ್ಲ ಜನರಿಗೆ ಅನ್ವಯವಾಗುವಂತಹ ವಿಚಾರಗಳನ್ನು ಒಳಗೊಂಡ ಚಿಂತನೆಗಳನ್ನು ರೂಡಿಸಿಕೊಂಡು ಬರೆಯುವ ಜವಾಬ್ದಾರಿ ಬರೆಯುವವರ ಮೇಲಿರುತ್ತದೆ. ನಮ್ಮ ವಿಚಾರಗಳು ಮತ್ತು ಯೋಚನೆಗಳು ಕೇವಲ ನಮ್ಮ ರಾಜ್ಯ, ಜಾತಿ, ದೇಶ, ಧರ್ಮ ಮುಂತಾದವುಗಳಿಗೆ ಸೀಮಿತವಾಗದೆ ಜಗತ್ತಿನ ಎಲ್ಲರಿಗೂ ಒಳಿತು ಮಾಡುವ ಸಮಾನತವಾದ ದೃಷ್ಟಿಯಿಂದ ರೂಪುಗೊಳ್ಳಬೇಕು. ಹಳೆಯದು ಎನ್ನುವ ಮಾತ್ರಕ್ಕೆ ಎಲ್ಲವನ್ನೂ ಒಪ್ಪಬೇಕೆಂದಲ್ಲ, ಇಂದಿನ ಸಮಾಜದ ಜನರಿಗೆ ಯಾವುದು ತಪ್ಪು ಯಾವುದು ಸರಿ ಎನ್ನುವುದನ್ನು ತಿಳಿಸುವ ಜವಾಬ್ದಾರಿ ಬರೆಯುವವರ ಮೇಲಿರುತ್ತದೆ. 

"ಯಾವ ಕಾಲದ ಶಾಸ್ತ್ರವೇನು ಹೇಳಿದರೇನು, ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು ?"

ಹಳೆಯ ಕಾಲದ ಕೆಟ್ಟ ಆಚರಣೆಗಳನ್ನು ಬಿಟ್ಟು ನಮ್ಮ ಜೀವನವನ್ನು ಸಾಗಿಸುವ ಅವಕಾಶವನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ಹೀಗಾಗಿ ತರುಣರು ಇವುಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಯಾವುದೋ ಕಾಲದಲ್ಲಿ ಯಾರೋ ಏನೋ ಬರೆದಿಟ್ಟಿದ್ದಾರೆ ಎಂದ ಮಾತ್ರಕ್ಕೆ ನಮ್ಮ ಜೀವನ ಸಹ ಅದರಂತೆಯೇ ನಡೆಸಿಕೊಂಡು ಹೋಗುತ್ತೇವೆ ಎನ್ನುವುದು ವಿಚಾರವಂತಿಕೆಗೆ ಮೋಸ ಮಾಡಿದಂತಾಗುತ್ತದೆ. ಎಲ್ಲವನ್ನೂ ವಿಚಾರ ಮಾಡಬೇಕು, ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ತಿಳಿದು ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು. ಸಮಾಜದಲ್ಲಿ ಇರುವ ತಪ್ಪುಗಳನ್ನು ಹುಡುಕಿ ಜನರಿಗೆ ತಿಳಿಸಿ ಅರಿವು ಮೂಡಿಸಬೇಕಾದ ಮಾಧ್ಯಮಗಳು ಹಿಂದೇಟು ಹಾಕುತ್ತಿವೆ. ಎಲ್ಲ ಭಾಷೆಯ ಸಾಹಿತ್ಯದಲ್ಲಿಯೂ ಬೂಸಾ ಎನ್ನಿಸುವಂತಹ ಸಾಹಿತ್ಯ ೭೫% ಇರಬಹುದು, ಅದು ತಪ್ಪಲ್ಲ. ಉತ್ತಮ ಸಾಹಿತ್ಯ ಬರುವ ಹಾದಿಯೇ ಅದು. ಅಂತಹ ಸಾಹಿತ್ಯವನ್ನು ಮತ್ತು ಸಾಹಿತಿಗಳನ್ನು ಕೀಳಾಗಿ ಕಾಣುವುದು ತಪ್ಪು, ಅವರೆಲ್ಲರ ಕೊಡುಗೆ ಸಾಹಿತ್ಯಕ್ಕೆ ಅಪಾರವಾಗಿರುತ್ತದೆ. ಬರೆಯುವುದೆಲ್ಲವೂ ಉತ್ಕೃಷ್ಟ ಗುಣಮಟ್ಟದ ಸಾಹಿತ್ಯ ಆಗಿರಬೇಕು ಎನ್ನುವ ಯೋಚನೆ ಸರಿಯಲ್ಲ. ಹೆಚ್ಚು ಹೆಚ್ಚು ಸಾಹಿತ್ಯ ಸೃಷ್ಟಿಯಾದಂತೆ ಅವುಗಳಲ್ಲಿ ಕೆಲವಾದರೂ ಬಹಳ ಉತ್ತಮ ಕೃತಿಗಳಾಗುತ್ತವೆ. 

"ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು, ಮನುಜಮತಕ್ಕೆ ಬನ್ನಿ, ಅಲ್ಲಿಂದ ಹೊರಡಿ"

ಸಮಾಜ ಸುಧಾರಣೆ ಮಾಡಲು ಬುದ್ಧ, ಬಸವಣ್ಣ ಮುಂತಾದವರು ಬಹಳ ಹಿಂದಿನಿಂದ ಪ್ರಯತ್ನಿಸಿದ್ದಾರೆ. ಆದರೆ, ಅದನ್ನು ಹತ್ತಿಕ್ಕುವ ಕೆಲಸಗಳು ಸಹ ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಬಂದಿವೆ. ಹೀಗಾಗಿ ಮೊದಲು ನಮ್ಮ ತಲೆಯಲ್ಲಿ ತುಂಬಿರುವ ಅಜ್ಞಾನವನ್ನು ಹೊರ ಹಾಕಬೇಕು. ನಾವು ಮೊದಲು ಬದಲಾಗದೆ ನಮ್ಮ ಸಮಾಜ ಬದಲಾಗಲಿ ಎಂದರೆ ಅದು ಸಾಧ್ಯವಿಲ್ಲ. ಅಜ್ಞಾನವನ್ನು ಹುಟ್ಟುಹಾಕುವ ಜನರು ಸಂಖ್ಯೆ ಬಹಳ ಕಡಿಮೆ, ಆದರೆ ಅವುಗಳನ್ನು ಪಾಲಿಸಿ ಪ್ರಚಾರ ಕೊಟ್ಟು ಆಚರಣೆಗೆ ತರುವವರು ಬಹಳಷ್ಟು ಜನ ಇದ್ದಾರೆ. ಮೊದಲು ನಮ್ಮ ಚಿಂತನೆಗಳು ಬದಲಾಗಬೇಕು. ಜನರ ಬೆಂಬಲ ಇಲ್ಲದೆ ಕೆಟ್ಟದ್ದು ಉಳಿಯಲು ಮತ್ತು ಬೆಳೆಯಲು ಸಾಧ್ಯವಿಲ್ಲ. ಸಮಾಜದಲ್ಲಿ ಸುಧಾರಣೆ ತಂದರೆ ಅದು ಶಾಶ್ವತವಾಗಿ ಉಳಿಯುವಂತೆ ಇರಬೇಕು, ಅದಕ್ಕೆ ನಮ್ಮ ಜನರ ಬೆಂಬಲ ಮತ್ತು ವೈಚಾರಿಕ ಮನೋಭಾವ ಬಹಳ ಮುಖ್ಯ. ವೈಚಾರಿಕ ದೃಷ್ಟಿಕೋನವನ್ನು ಬಿಟ್ಟು ಕಟ್ಟು ಕತೆಗಳನ್ನು ವ್ಯಾಪಕವಾಗಿ ಬರೆದು ಪ್ರಚಾರ ಮಾಡುವ ಕೆಲಸಗಳಲ್ಲಿ ಬಹಳಷ್ಟು ಜನ ನಿರತರಾಗಿದ್ದಾರೆ. ಅದರಿಂದ ಅವರಿಗೆ ಲಾಭವಿದೆ ಆದರೆ, ಅವುಗಳನ್ನು ಓದಿದ ನಮ್ಮಲ್ಲಿ ವಿಚಾರ ಮಾಡುವ ಅಭ್ಯಾಸ ಇಲ್ಲದೆ ಹೋದರೆ ಅದು ಅಜ್ಞಾನವನ್ನು ಬೆಳೆಸುತ್ತದೆ. 

ಕರ್ನಾಟಕ: ಇಟ್ಟ ಹೆಸರು ಕೊಟ್ಟ ಮಂತ್ರ 

ಕರ್ನಾಟಕ ಏಕೀಕರಣ ಆದ ನಂತರ ಕುವೆಂಪು ಅವರು ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ. ಅವುಗಳಲ್ಲಿ ಪ್ರಮುಖ ವಿಷಯಗಳೆಂದರೆ ಶಿಕ್ಷಣದ ಎಲ್ಲ ಹಂತದಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವುದು ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಸಂಪೂರ್ಣವಾಗಿ ಜಾರಿಗೆ ತರುವುದು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಸಂಪೂರ್ಣವಾಗಿ ಜಾರಿಗೆ ಬಾರದೆ ಕನ್ನಡಿಗರು ಕಲಿಕೆಯಲ್ಲಿ ತೊಂದರೆ ಅನುಭವಿಸುತ್ತಾರೆ ಎನ್ನುವ ಅಭಿಪ್ರಾಯ ಹೇಳಿದ್ದಾರೆ. 

"ನುಡಿ ಬಿಟ್ಟರೆ ನಾಡು ಬಿಟ್ಟಂತೆ, ಭಾಷೆಗೇಡಿ ದೇಶಗೇಡಿಯೂ ಆಗುತ್ತಾನೆ"

"ತ್ರಿಭಾಷಾ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೇ ಆಗಿದೆ"

ತ್ರಿಭಾಷಾ ಸೂತ್ರಕ್ಕೆ ಕುವೆಂಪು ಅವರು ವಿರೋಧ ವ್ಯಕ್ತಪಡಿಸುತ್ತಾರೆ. ಅದರ ಹಿಂದಿರುವ ಅಪಾಯವನ್ನು ಕುವೆಂಪು ಅಂದೆ ಮನಗಂಡಿದ್ದರು. ತ್ರಿಭಾಷಾ ಸೂತ್ರದಿಂದ ಹಿಂದಿ ಮತ್ತು ಇಂಗ್ಲೀಶ್ ಭಾಷೆಗಳು ಬಲವಂತವಾಗಿ ಕನ್ನಡಕ್ಕೆ ಪೆಟ್ಟು ಬೀಳುತ್ತದೆ ಎಂದು ಹೇಳಿದ್ದರು. ಪ್ರಜಾಪ್ರಭುತ್ವದಲ್ಲಿ ಬಲವಂತ ಇರಕೂಡದು. ಭಾರತಕ್ಕೆ ಬೇಕಾಗಿರುವುದು ತ್ರಿಭಾಷಾ ಸೂತ್ರ ಅಲ್ಲ 'ಬಹುಭಾಷೆಗಳಲ್ಲಿ ದ್ವಿಭಾಷೆ' ಎನ್ನುವ ಸೂತ್ರ ಎಂಬ ಮಾತನ್ನು ಕುವೆಂಪು ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಆಯ್ಕೆ ಕೊಟ್ಟು ಎರಡು ಭಾಷೆಗಳನ್ನು ಆರಿಸುವಂತೆ ಅವಕಾಶ ಕೊಟ್ಟರೆ ಒಳ್ಳೆಯದು. 

"ಇಂಗ್ಲೀಷಿನ ಸ್ಥಾನದಲ್ಲಿ ಹಿಂದಿಯನ್ನು ತಂದು ಕೂರಿಸಬೇಕೆಂಬುದು ಹಿಂದಿವಾದಿಗಳ ಸಂಚು, ಇದನ್ನು ಕನ್ನಡಿಗರು ಪ್ರತಿಭಟಿಸಿ ವಿಫಲಗೊಳಿಸಬೇಕು"

"ಐವತ್ತು ಕೋಟಿ ಭಾರತೀಯರೂ ಹಿಂದಿಯನ್ನು ಕಲಿಯಬೇಕೆನ್ನುವ ವಾದದಲ್ಲಿ ಗತ ಸಾಮ್ರಾಜ್ಯಶಾಹಿಯ ಮನೋಧರ್ಮದ ವಿನಾ ಇನ್ನಾವ ಆರ್ಥವು ಇಲ್ಲ"

ಶ್ರೀಸಾಮಾನ್ಯ ಮತ್ತು ವಿಚಾರಕ್ರಾಂತಿ 

"ವರ್ಣಾಶ್ರಮ, ಜಾತಿ ಪದ್ಧತಿ, ಮೇಲು ಕೀಳು ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಜ್ಞಾನಿಕ ದೃಷ್ಟಿಯ ಅಗ್ನಿಕುಂಡದಲ್ಲಿ ಭಸ್ಮೀಕೃತವಾಗಬೇಕು"

ಲಿಪಿ ಭಾಷೆ ಮತ್ತು ಭಾವೈಕ್ಯತೆ

"ನನಗನ್ನಿಸುತ್ತದೆ: ಭಾಷೆಯೂ ಅಲ್ಲ; ಲಿಪಿಯೂ ಅಲ್ಲ; ಮತವೂ ಅಲ್ಲ; ಸರ್ವೋದಯಕ್ಕೆ ಭದ್ರವಾದ ಆಧಾರ ಮತ್ತು ಬಲಿಷ್ಠ ಅಸ್ತಿಭಾರವಿರುವುದು 'ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು' ಎಂಬ ಆರ್ಥಿಕ ಸಮತೆಯಲ್ಲಿ ಎಂದು. ಆದರೂ ಆರ್ಥಿಕ ಸಮತೆಯ ಅನಂತರ ಮತ ಲಿಪಿ ಮತ್ತು ಭಾಷೆಗಳು ಭಾವೈಕ್ಯಕ್ಕೆ ಸಹಾಯಕ ಕಾರಣಗಳಾಗುತ್ತವೆ" 

ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಪುಸ್ತಕವನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ಓದಲು ಕೆಳಗೆ ನೀಡಿರುವ ಲಿಂಕ್ ಬಳಸಿ. 
***

ಕಾಮೆಂಟ್‌ಗಳು

- Follow us on

- Google Search