ಕತೆ: ಕಾಗದದ ದೋಣಿ

ಅದೊಂದು ಮಲೆನಾಡಿನ ಊರು, ಅತ್ತ ಹಳ್ಳಿಯು ಅಲ್ಲ, ಪೇಟೆಯೂ ಅಲ್ಲ. ಕಗ್ಗತ್ತಲ ಕಾಡು ಮರೆಯಾಗುತ್ತಾ ದಿನಕಳೆದಂತೆ ಊರು ಬದಲಾಗುತ್ತ ಹೋಗುತ್ತಿದೆ. ಯಾರು ಬದಲಾದರೇನು, ಹರಿಯುವ ಹೊಳೆ ಮಾತ್ರ ಅಂದಿನಿಂದ ಇಂದಿನವರೆಗೆ ಮನಬಂದಂತೆ ಹರಿಯುತ್ತಲೇ ಇದೆ. ಊರಿನ ಸಕಲ ಜೀವಿಗಳಿಗೆ ಜೀವ ತುಂಬಿ ಹರಿಯುತ್ತದೆ, ಮಳೆಗಾಲದ ದಿನಗಳಲ್ಲಿ ದಡವನ್ನು ಹತ್ತಿ ಅಲ್ಲೇ ಹತ್ತಿರದಲ್ಲಿರುವ ಮನೆಗಳನ್ನು ಸಹ ನೋಡಿಕೊಂಡು ಬರುತ್ತದೆ. ಈ ಹೊಳೆಯ ದಡಗಳಿಂದ ಸ್ವಲ್ಪ ದೂರದಲ್ಲಿ ಒಂದೆರಡು ಮನೆಗಳಿವೆ. ಎರಡು ಮನೆಯವರು ಸಹ ಒಂದೇ ರೀತಿಯ ಜೀವನ ನಡೆಸುವವರು. ಹೆಚ್ಚಿನ ಸಮಯ ಇರುವ ಸ್ವಲ್ಪ ಗದ್ದೆ ತೋಟದ ಕೆಲಸ ಮಾಡಿಕೊಂಡು, ತಮ್ಮಲ್ಲಿಯೇ ಸಂಘಗಳನ್ನು ಮಾಡಿಕೊಂಡು ವಾರದಲ್ಲಿ ಒಂದು ದಿನ ಒಬ್ಬರ ಮನೆಯ ಕೆಲಸ ಮಾಡಿಕೊಂಡು ಇರುವವರು. 


ಹೆಸರಿಗೆ ಮನೆಯ ಯಜಮಾನರು ನಾಗೇಶ ಮತ್ತು ಸತೀಶ. ಆದರೆ, ಮನೆಯ ನಿರ್ಧಾರಗಳೆಲ್ಲ ಈ ಗಂಡಸರು ತೆಗೆದುಕೊಳ್ಳುವಂತೆ ಇಲ್ಲ, ತಮ್ಮ ಹೆಂಡತಿ ಒಪ್ಪಿಗೆ ನೀಡದೆ ಹೋದರೆ ಯಾವ ನಿರ್ಧಾರಕ್ಕೂ ಬೆಲೆಯಿಲ್ಲ. ನಾಗೇಶರ ಹೆಂಡತಿಯ ಹೆಸರು ಸುಶೀಲ, ಸತೀಶರ ಹೆಂಡತಿಯ ಹೆಸರು ಸಾವಿತ್ರಿ. ರಮ್ಯ ಮತ್ತು ರಶ್ಮಿ ನಾಗೇಶ ಹಾಗು ಸುಶೀಲ ದಂಪತಿಯ ಇಬ್ಬರು ಹೆಣ್ಣು ಮಕ್ಕಳು. ರಶ್ಮಿ ತನ್ನ ಅಕ್ಕ ರಮ್ಯಳಿಗಿಂತ ಆರು ವರ್ಷ ಚಿಕ್ಕವಳು. ಅವಳು ಹುಟ್ಟಿದ ವರ್ಷವೇ ಪಕ್ಕದಮನೆಯ ರಾಕೇಶ್ ಹುಟ್ಟಿದ್ದು.

ಸಾವಿತ್ರಿ ಅವರು ಹೆರಿಗೆಯ ಸಂದರ್ಭದಲ್ಲಿ ಜೀವನ ಮರಣದ ಹೋರಾಟ ನಡೆಸಿ ಹೇಗೋ ಆಸ್ಪತ್ರೆಯಿಂದ ಬದುಕಿಬಂದಿದ್ದರು. ಹೀಗಾಗಿ ಒಬ್ಬನೇ ಮುದ್ದಿನ ಮಗ ಸತೀಶ ಹಾಗು ಸಾವಿತ್ರಿ ದಂಪತಿಗೆ. ಆಡುವ ಮಕ್ಕಳನ್ನು ಮನೆಯ ಗೋಡೆಗಳು ದೂರವಿಡಲು ಸಾಧ್ಯವೇ ? ರಮ್ಯ, ರಶ್ಮಿ ಹಾಗು ರಾಕೇಶ್ ಮೂವರು ಸಹ ತಮ್ಮ ಬಾಲ್ಯದ ದಿನಗಳನ್ನು ಒಟ್ಟಿಗೆ ಆಡಿ ಕಳೆದವರು. ಸ್ವಲ್ಪವೇ ದೂರದ ಬೇರೆ ಬೇರೆ ಮನೆಗಳು ಎಂಬುದನ್ನು ಬಿಟ್ಟರೆ ಅವರ ಮನೆ ಇವರ ಮನೆ ಅನ್ನುವ ಕಲ್ಪನೆ ಸಹ ಮಕ್ಕಳಲ್ಲಿ ಇರಲಿಲ್ಲ. ಎಲ್ಲಿ ಆಯಿತೋ ಅಲ್ಲಿಯೇ ಊಟ, ಕೆಲವೊಮ್ಮೆ ಅವರ ಮನೆಯಲ್ಲಿಯೇ ನಿದ್ದೆ ಹೀಗೆ ಬಹಳ ಅನ್ಯೋನ್ಯವಾಗಿ ಬೆಳೆದಂತಹ ಮಕ್ಕಳು. 

ರಮ್ಯ ಹತ್ತನೇ ತರಗತಿ ಕಲಿಕೆ ಮುಗಿಯುತ್ತಿದ್ದಂತೆ ಮುಂದಿನ ವಿದ್ಯಾಭ್ಯಾಸಕ್ಕೆ ಉಡುಪಿಗೆ ಹೋದಳು. ಮೊದಲ ಬಾರಿಗೆ ಮಗಳನ್ನು ದೂರ ಕಳುಹಿಸಿದ್ದ ಬೇಜಾರು ನಾಗೇಶರವರ ಮನೆಯಲ್ಲಿ ಎಲ್ಲೆಲ್ಲೂ ಕಾಣುತಿತ್ತು. ರಶ್ಮಿ ಕೂಡ ಬೇಜಾರಾಗಿದ್ದಳು. ತಾನು ಹಾಗೆಲ್ಲ ಮನೆಬಿಟ್ಟು ದೂರದ ಊರಿಗೆಲ್ಲ ಶಾಲೆಗೆ ಹೋಗುವುದಿಲ್ಲ ಎಂಬ ಯೋಚನೆಯನ್ನು ಸಹ ಅಳುತ್ತಲೇ ಹೇಳಿದ್ದಳು. ಆದರೂ ದಿನ ಕಳೆದಂತೆ ಅವಳಿಗೆ ಕಾಡಿಸಲೋ ಏನೋ ಎಲ್ಲರು ನಿನ್ನ ಬೇರೆ ಊರಿಗೆ ಕಳುಹಿಸುತ್ತೇವೆ ಅಂದು ತಮಾಷೆ ಮಾಡುತ್ತಲೇ ಇದ್ದರು. 

ಆ ತುಂಬಿ ಹರಿಯುವ ಹೊಳೆ ಮಾತ್ರ ರಾಕೇಶ್ ಹಾಗು ರಶ್ಮಿಯ ಮನ ಸೆಳೆಯುತ್ತಿತ್ತು. ಪುಟ್ಟ ಮಕ್ಕಳು ಎಂದುಕೊಂಡು ಹೊಳೆಯ ಬದಿ ಹೋಗದಂತೆ ತಡೆದಂತೆಲ್ಲ ಹೊಳೆ ಮತ್ತಷ್ಟು ಆಕರ್ಷಕವಾಗಿ ಕಾಣುತಿತ್ತು. ದಿನವಿಡೀ ಹೊಳೆಯ ಹರಿಯುವ ಶಬ್ದ ಕೇಳಿ ಕೇಳಿ ಬೇರೆಡೆಗೆ ಹೋದಾಗ ಜೀವನದಲ್ಲಿ ಏನೋ ಇಲ್ಲವೆಂಬಂತೆ ಅನ್ನಿಸುತಿತ್ತು. ಸಂಜೆಯಾದರೆ ಇಡೀ ಊರಿಗೆ ಕೇಳುವಂತೆ ಜೋರಾಗಿ ವಟಗುಟ್ಟುವ ಕಪ್ಪೆಗಳ ಕಾಟಕ್ಕೆ ಅಮ್ಮಂದಿರು ಬಯ್ಯುವುದು, ಮಳೆಗಾಲದಲ್ಲಿ ಮಳೆಗೆ ಬಯ್ಯುವುದು ಬಿಟ್ಟರೆ ಈ ಹೊಳೆಯಿಂದ ಹೆಚ್ಚೇನು ತೊಂದರೆ ಯಾರಿಗೂ ಆಗಿರಲಿಲ್ಲ. ಮೋಟರು ಕೂರಿಸಿ ಹೊಳೆಯಿಂದ ಗದ್ದೆ ತೋಟಗಳಿಗೆ ಅವಶ್ಯಕತೆಯಿದ್ದಾಗ ನೀರು ಹೊಡೆದು, ಕೂಣೆ ಹಾಕಿ ಏಡಿ, ಮೀನುಗಳನ್ನು ಹಿಡಿದು ಜೀವನ ಬಹಳ ಸುಂದರವಾಗಿ ಸಾಗುತ್ತಿತ್ತು. 

ರಾಕೇಶ ಮತ್ತು ರಶ್ಮಿ ಒಟ್ಟಿಗೆ ಒಂದೇ ಶಾಲೆಗೆ ಹೋಗಿ ಬರುತ್ತಿದ್ದರು. ಮೊದಲು ಶಾಲೆ ಮನೆಯ ಹತ್ತಿರವೇ ಇತ್ತು, ಈಗ ಆರು ಕಿಲೋಮೀಟರು ದೂರವಿರುವ ಶಾಲೆಗೆ ಹೋಗಬೇಕಾಗಿದೆ. ಮನೆಯ ಹತ್ತಿರದ ಬಸ್ಸಿನ ನಿಲ್ದಾಣದವರೆಗೆ ನಡೆದು ಅಲ್ಲಿ ಬಸ್ಸು ಹತ್ತಿ ದೂರದ ಶಾಲೆಗೆ ಹೋಗುತ್ತಾರೆ. ಇಬ್ಬರು ಈಗ ಐದನೇ ತರಗತಿ. ಓದುವುದರಲ್ಲಿ ರಶ್ಮಿ ರಾಕೇಶನಿಗಿಂತ ಚುರುಕು ಎಂದು ಟೀಚರ್ಗಳೆಲ್ಲ ಹೇಳುತ್ತಾರೆ. ರಾಕೇಶನಿಗೆ ಶಾಲೆಯ ಆಟದ ಬಯಲನ್ನು ಬಿಟ್ಟರೆ ಶಾಲೆಯಲ್ಲಿ ಆಕರ್ಷಕವಾಗಿರುವುದು ಏನು ಸಹ ಇಲ್ಲ. ಒಂದಷ್ಟು ಬರೆಯುವುದು, ಗೊತ್ತಾಗಲಿಲ್ಲ ಎಂದರೆ ಹೇಗೂ ರಶ್ಮಿಯ ಪುಸ್ತಕ ತೆಗೆದುಕೊಂಡು ಬರೆದರೆ ಆಯಿತು. ಕೆಲವೊಮ್ಮೆ ಅಮ್ಮ ರಾಕೇಶನಿಗೆ ಬಯ್ಯುವುದು ಇದೆ, ನೋಡಿ ಕಲಿ ಆ ಹುಡುಗಿಯನ್ನ ಎಷ್ಟು ಚಂದ ಓದಿ ಬರೆಯುತ್ತಾಳೆ, ನೀನು ಹೀಗೆ ಓದಿದ್ರೆ ದನ ಕಾಯಬೇಕು ಅಷ್ಟೇ ಎಂದು. ಇದೆಲ್ಲ ರಾಕೇಶ ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ. 

ರಾಕೇಶ ಹಾಗು ರಶ್ಮಿ ಇಬ್ಬರು ಸಹ ಕಾಗದದ ದೋಣಿ ಮಾಡುವುದನ್ನು ಕಲಿತ ನಂತರವಂತೂ, ಮನೆಯ ಅಟ್ಟದ ಮೂಲೆಯಲ್ಲಿ ಬಿದ್ದಿದ ಹಾಳೆಗಳನ್ನೆಲ್ಲ ದೋಣಿ ಮಾಡಿ ಹೊಳೆಗೆ ಬಿಟ್ಟಿದ್ದರು. ಬಂಡೆಯ ಮೇಲೆ ಕೂರುವುದು, ದೋಣಿ ಮಾಡಿ ಹೊಳೆಗೆ ಬಿಡುವುದು. ಆ ದೋಣಿ ನೀರಿನ ರಭಸಕ್ಕೆ ಅಂಕು ಡೊಂಕಾಗಿ ಹೋಗಿ ಮುಳುಗಿ ಹೋಗುತಿತ್ತು, ಆದರೂ ಚಿಂತಿಸದೆ ತಂದ ಹಳೆಯ ನೋಟು ಪುಸ್ತಕದ ಹಾಳೆಗಳೆಲ್ಲ ಖಾಲಿಯಾಗುವ ತನಕವೂ ಇಬ್ಬರಿಗೂ ಅದೇ ಕೆಲಸ. ಆದರೆ ಆರನೇ ತರಗತಿಗೆ ಬಂದ ನಂತರ ಹುಡುಗರೇ ಬೇರೆ ಕಡೆ, ಹುಡುಗಿಯರನ್ನೇ ಬೇರೆ ಕಡೆ ಕೂರಿಸಲು ಆರಂಭಿಸಿದ್ದಾರೆ. ಇದೇನೋ ಒಂದು ರೀತಿಯ ಹೊಸ ನಿಯಮ, ಹೀಗಾಗಿ ಒಂದಷ್ಟು ಹೊಸ ಗೆಳೆಯರನ್ನು ಮಾಡಿಕೊಳ್ಳುವ ಅವಶ್ಯಕತೆ ಇದೆ. ಶಾಲೆಯಲ್ಲಿ ಹೊಸ ಗೆಳೆಯರಾಗುವುದು, ಮಾತು ಬಿಡುವುದು ಎಲ್ಲವೂ ಮಕ್ಕಳಾಟವಿದ್ದಂತೆ. ಆದರೂ ಒಂದೇ ದಾರಿಯಲ್ಲಿ ಬಸ್ಸಿನ ನಿಲ್ದಾಣಕ್ಕೆ ನಡೆದುಕೊಂಡು ಬರುವಾಗ ಮೊದಲಿನಂತೆ ಹೆಚ್ಚು ಮಾತುಕತೆಯಿಲ್ಲ. 

ಏಳನೇ ತರಗತಿಗೆ ಬರುತ್ತಿದ್ದಂತೆ ರಾಕೇಶ ಓದಿನಲ್ಲಿ ಮೊದಲಿಗೆ ಹೋಲಿಸಿದರೆ ಸ್ವಲ್ಪ ಚುರುಕಾದ, ಆದರೂ ರಶ್ಮಿಯನ್ನು ಮೀರಿಸುವ ಅಂಕಗಳು ಬರುತ್ತಿರಲಿಲ್ಲ. ಅದರ ಚಿಂತೆ ಅವರಿಬ್ಬರಿಗೂ ಇರಲಿಲ್ಲ. ಯಾವಾಗಲೋ ಒಮ್ಮೊಮ್ಮೆ ಅಮ್ಮನೋ ಅಪ್ಪನೋ ನೆನಪಿಸಿದಾಗ ಸ್ವಲ್ಪ ಸುಮ್ಮನಿರಬೇಕಾದ ಸಂದರ್ಭ ಎದುರಾಗುತಿತ್ತೇ ಹೊರತು ಊರು ಮುಳುಗಿಸುವಂತಹ ಚಿಂತೆಯೇನು ಶಾಲೆ ಕೊಡುತ್ತಿರಲಿಲ್ಲ. ಆದರೆ ಇತ್ತೀಚಿಗೆ, ಕೆಲವು ಗೆಳೆಯರು ರಶ್ಮಿಯ ಹೆಸರು ಹೇಳಿ ರಾಕೇಶನಿಗೆ ಚಾಳಿಸಲು ಆರಂಭಿಸಿದ್ದಾರೆ. ಅವರಿಗೆಲ್ಲ ಎದುರು ಬೈದರು ಸಹ ರಾಕೇಶನಿಗೆ ರಶ್ಮಿಯ ಬಗ್ಗೆ ಒಲವು ಮೂಡಿದೆ. ಅದು ಪ್ರೀತಿಯೋ, ಸ್ನೇಹವೋ ಅಥವಾ ಒಟ್ಟಿಗೆ ಆಡಿ ಬೆಳೆದ ಸಲಿಗೆಯೋ ಎಂದು ಗೊತ್ತಿಲ್ಲ. ಆಟದ ಮೈದಾನವನ್ನು ಬಿಟ್ಟರೆ, ರಾಕೇಶನಿಗೆ ಶಾಲೆಯಲ್ಲಿ ಇಷ್ಟವಾಗಿದ್ದು ರಶ್ಮಿ ಅನ್ನಿಸುತ್ತದೆ. ಆದರೆ ರಶ್ಮಿ ಶಾಲೆಗೆ ಮಾತ್ರ ಸೀಮಿತವಾಗಿಲ್ಲ, ತನ್ನ ಜೀವನದ ಒಂದು ಭಾಗವೇ ಆಗಿದ್ದಾಳೆ.  

ರಶ್ಮಿ ಕೇವಲ ಓದಿನಲ್ಲಿ ಮಾತ್ರವಲ್ಲದೆ, ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿಶೇಷ ಆಸಕ್ತಿ. ನೃತ್ಯದಲ್ಲೂ ಸೇರಿಕೊಳ್ಳುತ್ತಿದ್ದಳು. ಜಾನಪದ ಹಾಡುಗಳಿಗೆ ನೃತ್ಯ ಮಾಡುವ ಸ್ಪರ್ಧೆಯಲ್ಲಿ ಆಕೆಯ ತಂಡಕ್ಕೆ ಹಲವಾರು ಬಾರಿ ಬಹುಮಾನಗಳು ಬಂದಿವೆ. ಈ ರಾಕೇಶ ಹಾಗಲ್ಲ, ಶಾಲೆಯಲ್ಲಿ ಏನಾದರು ಸಾಂಸ್ಕೃತಿಕ ಕಾರ್ಯಕ್ರಮಗಳು ಇವೆ ಅಂದರೆ ಅವನ ಗೆಳೆಯರೊಂದಿಗೆ ಮೈದಾನ ಸ್ವಚ್ಛ ಮಾಡುವುದು, ವೇದಿಕೆಯನ್ನು ಅಲಂಕಾರ ಮಾಡುವುದು, ಪೇಟೆ ಸುತ್ತಿ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಬರುವುದು ಇಂತಹುದೇ ಕೆಲಸಗಳು. ಆದರೂ ಒಂದು ಕಣ್ಣು ರಶ್ಮಿಯ ಮೇಲೆ ಇದ್ದೆ ಇರುತ್ತದೆ. ಹಾಗೆಯೆ ಶಾಲೆಯಲ್ಲಿ ಊಟ ಮುಗಿದ ನಂತರ ಎಲ್ಲರು ತಮಗಿಷ್ಟ ಬಂದ ಕೆಲಸಗಳಲ್ಲಿ ತೊಡಗಿದ್ದರು. ರಶ್ಮಿ ಯಾವುದೊ ಹುಡುಗನೊಂದಿಗೆ ಕೂತಿರುವುದು ಅವನ ಗಮನಕ್ಕೆ ಬಂತು. ಮನಸ್ಸು ಏಕೋ ಆ ಸತ್ಯವನ್ನು ಒಪ್ಪಿಕೊಳ್ಳಲು ತಯ್ಯಾರಿರಲಿಲ್ಲ. ದೂರದಿಂದ ನೋಡಿದಾಗ ಕೈ ಹಿಡಿಕೊಂಡು ಕೂತಿರುವಂತೆ ಕಾಣುತ್ತಿತ್ತು. ಆದರೂ ನೋಡಿಯೇ ಬಿಡೋಣ ಏನೆಂದು ಅಂತ ಅವರು ಕೂತಿದ್ದ ಸ್ಥಳಕ್ಕೆ ಹೋದ. ರಶ್ಮಿ ತನ್ನೊಂದಿಗೆ ನೃತ್ಯ ಮಾಡುವ ಒಬ್ಬನಿಗೆ ಮದರಂಗಿ ಇಡಿಸುತ್ತಿದಳು. ರಾಕೇಶನಿಗೆ ಒಂದು ಕ್ಷಣ ತಲೆ ತಿರುಗಿದಂತೆ ಅನ್ನಿಸಿತು, ಏನು ಮಾಡಬೇಕೆಂದು ಅವನ ಮನಸ್ಸಿಗೆ ತೋಚಲೇ ಇಲ್ಲ. ಒಂದಷ್ಟು ಹೊತ್ತು ಮೈದಾನದಲ್ಲಿ ಕಾಲ ಕಳೆದು, ಬ್ಯಾಗು ಹಾಕಿಕೊಂಡು ಮನೆಗೆ ಹೊರಟ. ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದ ಅವನಿಗೆ ಯಾಕೋ ರಶ್ಮಿಯದೇ ಯೋಚನೆಯಾಯಿತು. ಇವನು ಬೇಗ ಬಂದರೆ, ಆ ಸಮಯಕ್ಕೆ ಬಸ್ಸು ಬರುವುದೇ ? ಹಾಗೆಯೆ ಬಸ್ಸಿನ ನಿಲ್ದಾಣದಲ್ಲಿ ಸುಮ್ಮನೆ ನಿಂತಿದ್ದ. 

ರಾಕೇಶನ ಮನಸ್ಸಿನಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದ ಘಟನೆ ಸಹ ನೆನಪಿಗೆ ಬಂತು. ರಶ್ಮಿಯ ಮನೆಗೆ ಹೋಗಿ, ಏನೋ ನೋಟ್ಸ್ ಕೇಳಿದಾಗಲೂ ಸಹ ನಾನು ಬರೆದಿಲ್ಲ ಎಂದು ಹೇಳಿ ವಾಪಸ್ಸು ಕಳುಹಿಸಿದ್ದಳು. ಮಾರನೇ ದಿನ ಇವನನ್ನು ಮಾತು ಸಹ ಆಡಿಸದೆ ಮೌನವಾಗಿ ಇದ್ದಳು. ರಾಕೇಶನಿಗೆ ಇದು ರಶ್ಮಿ ತನ್ನ ಗೆಳತಿಯರ ಕಾಟಕ್ಕೆ ಬೇಜಾರಾಗಿ ಹೀಗೆ ಆಡುತ್ತಿರಬಹುದು ಎಂದು ಅನ್ನಿಸಿತ್ತು. ಆದರೆ ರಶ್ಮಿ ಇತ್ತೀಚಿಗೆ ಇವನನ್ನು ಕಂಡರೂ ಕಾಣದಂತೆ ಇರುತ್ತಾಳೆ, ಮಾತನಾಡಿಸಿದರು ಸಹ ಪರಿಚಯವೇ ಇಲ್ಲವೆಂಬಂತೆ ಬೇಗ ಮಾತನಾಡಿಸಿ ಮುಗಿಸುತ್ತಾಳೆ. ಪ್ರೀತಿ ಆರಂಭವಾಗುವುದಕ್ಕೂ ಮುಂಚೆಯೇ ಬ್ರೇಕಪ್ ಆದಂತೆ ಆಗಿದೆ ರಾಕೇಶನ ಜೀವನ. ಅಷ್ಟಕ್ಕೂ ರಾಕೇಶ ಮಾಡಿದ ತಪ್ಪಾದರೂ ಏನು ? ವಯೋಸಹಜವಾಗಿ ಮೂಡಿದ ಒಲವಿಗೆ ಈ ರೀತಿಯ ಶಿಕ್ಷೆಯೆಂದರೆ ಯಾವ ನ್ಯಾಯ ಎಂಬಂತಹ ಹಲವಾರು ಯೋಚನೆಗಳು ರಾಕೇಶನ ಮನಸ್ಸಿನಲ್ಲಿ ಮೂಡುತ್ತಿದ್ದವು. ಅಷ್ಟು ಹೊತ್ತಿಗಾಗಲೇ ರಶ್ಮಿ ಹಾಗು ಇನ್ನಿತರ ಗೆಳೆಯರು ಬಸ್ಸಿನ ನಿಲ್ದಾಣದತ್ತ ಬರುತ್ತಿದ್ದರು. ರಾಕೇಶ ಸುಮ್ಮನೆ ನಿಂತಿದ್ದ, ಯಾರೋ ಒಬ್ಬ ಯಾಕೋ ಬೇಗ ಬಂದಿದ್ಯಲ್ಲ ಅಂತ ಕೇಳಿದ, ರಾಕೇಶ ಸುಮ್ಮನೆ ಎಂದಷ್ಟೇ ಉತ್ತರಿಸಿದ. ಅದೇಕೋ ರಶ್ಮಿಯ ಕಡೆ ತಿರುಗಿ ನೋಡುವ ಮನಸ್ಸು ಸಹ ಆಗಲಿಲ್ಲ. ಬಸ್ಸು ಬಂತು, ಎಲ್ಲರು ಹತ್ತಿ ಊರು ಬಂದಾಗ ಇಳಿದರು. ರಾಕೇಶ ಮತ್ತು ರಶ್ಮಿ ಇಬ್ಬರು ಇಳಿದು ದಿನ ನಡೆಯುವ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದರು. ಅವಳ ಕೈಯ್ಯಲ್ಲಿ ಇಟ್ಟುಕೊಂಡಿದ್ದ ಮದರಂಗಿ ನೋಡಿದರು ನೋಡದಂತೆ ರಾಕೇಶ ಸುಮ್ಮನೆ ನಡೆಯುತ್ತಿದ್ದ. ಇಬ್ಬರು ತಮ್ಮ ತಮ್ಮ ಮನೆಗಳಿಗೆ ಸೇರಿದರು.

ರಾಕೇಶ ಬಟ್ಟೆ ಬದಲಾಯಿಸಿ ಕಾಫಿ ಕುಡಿದು ಅಮ್ಮನಿಗೆ ಹೇಳಿ ಹೊಳೆಯ ಹತ್ತಿರ ಹೋದ. ಸಂಜೆಯ ಹೊತ್ತಾಗಿತ್ತು, ತಂಪಾದ ವಾತಾವರಣ ಇತ್ತು. ಸುಮ್ಮನೆ ಒಂದು ಬಂಡೆಯ ಮೇಲೆ ಕೂತು ಹರಿಯುವ ಹೊಳೆಯನ್ನೇ ನೋಡುತ್ತಿದ್ದ. ಸಲ್ಪ ಸಮಯ ಕಳೆದ ನಂತರ ಕಾಗದದ ದೋಣಿ ಮಾಡಿ ಬಿಡುತ್ತಿದ್ದ ನೆನಪುಗಳೆಲ್ಲ ಅವನಿಗೆ ಬರಲಾರಂಭಿಸಿದವು. ಒಂದೆರಡು ಕಣ್ಣೀರ ಹನಿಗಳು ಆ ಹೊಳೆಗೆ ಸೇರಿಯೇ ಬಿಟ್ಟವು. ಮನಸ್ಸು ಸ್ವಲ್ಪ ಹಗುರವಾದಂತಾಯಿತು, ಏನೋ ದೊಡ್ಡ ಸಮಸ್ಯೆಯೇ ಪರಿಹಾರವಾದಂತಾಯಿತು. ಅಮ್ಮ ದೂರದಲ್ಲಿ ಅವನ ಹೆಸರು ಕೂಗುತ್ತಿರುವುದು ಕೇಳುತ್ತಿದ್ದಂತೆ ಮನೆ ಕಡೆಗೆ ಹೊರಟ. ರಶ್ಮಿಯ ಅಮ್ಮ ಅವನನ್ನು ಕಂಡು ಕತ್ತಲೆ ಹೊತ್ತಲ್ಲಿ ಏನು ಮಾಡುವುದು ಹೊಳೆ ಬದಿಯಲ್ಲಿ ಎಂದು ಕೇಳಿದಾಗ ಏನಿಲ್ಲ ಸುಮ್ಮನೆ ಎಂದು ಹೇಳಿ ಮನೆಗೆ ಹೋದ. 

ಇಷ್ಟು ದಿನ ಬಾಕಿ ಉಳಿಸಿಕೊಂಡಿದ್ದ ನೋಟ್ಸ್ ಎಲ್ಲವನ್ನು ಪುಸ್ತಕದಿಂದ ನೋಡಿಕೊಂಡು ಬರೆಯುವ ಕೆಲಸಕ್ಕೆ ರಾಕೇಶ ಕೂತ. ಮಗ ಕಷ್ಟ ಪಡುವುದನ್ನು ಕಂಡು ಇನ್ನೊಂದು ಲೋಟ ಕಾಫಿ ಅಮ್ಮ ತಂದುಕೊಟ್ಟರು. ಜೊತೆಗೆ ಮನೆಯಲ್ಲಿ ಮಾಡಿದ್ದ ಹಲಸಿನ ಚಿಪ್ಸ್ ಕೂಡ ತಿನ್ನಲು ಕೊಟ್ಟರು. ಒಂದಷ್ಟು ಹೊತ್ತು ಪುಸ್ತಕದಲ್ಲಿ ಹುಡುಕಿ ಹುಡುಕಿ ಬರೆದು ತಾಳ್ಮೆ ಕಡಿಮೆಯಾಗುತ್ತಿದ್ದಂತೆ ರಶ್ಮಿಯ ಮನೆಗೆ ಹೋಗಿ ಅವಳ ಪುಸ್ತಕ ಕೇಳಿ ತರುವ ಮನಸ್ಸಾಯಿತು. ಆದರೂ ಯಾಕೋ ಮನಸ್ಸಿಗೆ ಸರಿ ಅನ್ನಿಸಲಿಲ್ಲ. ಒಂದು ಗಂಟೆಯಲ್ಲಿ ನೋಡಿಕೊಂಡು ಬರೆದು ಮುಗಿಸಬೇಕಾಗಿದ್ದ ಕೆಲಸ ಮೂರು ಗಂಟೆ ಹಿಡಿಯಿತು. ಮಗ ಶಾಲೆಯಲ್ಲಿ ಪಾಠ ನಡೆಯದ ದಿನಗಳಲ್ಲಿಯೂ ಇಷ್ಟು ಬರೆಯುವುದನ್ನು ಕಂಡು ರಾಕೇಶನ ಅಪ್ಪ ಅಮ್ಮ ಆಶ್ಚರ್ಯಗೊಂಡರು. ಶಾಲೆಯ ಮೈದಾನದಲ್ಲಿ ಕೆಲಸ ಮಾಡಿ ಬಂದು ಹಾಗೆಯೆ ಬೇರೆ ಬಟ್ಟೆ ಹಾಕಿಕೊಂಡಿದ್ದಕ್ಕೆ ಅಮ್ಮ ಬೈದು ಮತ್ತೊಮ್ಮೆ ಸ್ನಾನ ಮಾಡಿ ಬರುವಂತೆ ಹೇಳಿದರು. ಚಳಿಯ ಹೊತ್ತಿನಲ್ಲಿ ಹಂಡೆಯ ಬಿಸಿ ನೀರಿನ ಸ್ನಾನ ಕೊಡುವ ಸುಖವೇ ಬೇರೆ. ರಾಕೇಶ ಹೋಗಿ ಸ್ನಾನ ಮಾಡಿಕೊಂಡು ಬಂದ. ಅಪ್ಪ ಅಮ್ಮನೊಂದಿಗೆ ಕೂತು ಏಡಿ ಸಾರಿನ ಊಟ ಮಾಡಿದ. ಗದ್ದೆಯಲ್ಲಿ ಸಿಗುವ ಸಣ್ಣ ಬೆಳ್ಳೇಡಿಗಳಲ್ಲ, ಹೊಳೆಯಲ್ಲಿ ಸಿಗುವ ದೊಡ್ಡ ಕಾರೇಡಿಗಳು. ರಾಕೇಶನಿಗೆ ಕಾರೇಡಿಗಳ ಕೊಂಬೆಂದರೆ ಬಹಳ ಇಶ್ಟ. ಸರಿಯಾಗಿ ಹೊಟ್ಟೆ ತುಂಬ ಊಟ ಮಾಡಿ ಸ್ವಲ್ಪ ಹೊತ್ತು ಟಿವಿ ನೋಡಿ ಎಲ್ಲರು ಮಲಗಲು ಸಿದ್ಧರಾದರು. 
 
ಮಲಗಿದ್ದೊಂದೇ ಗೊತ್ತು, ಅಪರೂಪಕ್ಕೆ ದಿನವಿಡೀ ಕೆಲಸ ಮಾಡಿದ್ದರಿಂದಲೋ ಏನೋ ನಿದ್ದೆ ಬಂದು ಹೋಯಿತು. ಬೆಳಿಗ್ಗೆ ಅಮ್ಮ ಏಳಿಸಿದಾಗಲೇ ಎಚ್ಚರವಾಯಿತು ರಾಕೇಶನಿಗೆ. ಎದ್ದು ಮುಖ ತೊಳೆದು ಹಲ್ಲುಜ್ಜಿ ದೈನಂದಿನ ಕೆಲಸ ಕಾರ್ಯಗಳನ್ನು ಮುಗಿಸಿ ಶಾಲೆಗೆ ಹೊರಡಲು ತಯಾರಾದ. ನಿನ್ನೆ ರಾತ್ರಿ ಮಾಡಿದ್ದ ಏಡಿ ಸಾರಿನೊಂದಿಗೆ ನೀರುದೋಸೆ ಅಮ್ಮ ಮಾಡಿದ್ದರು. ಬಿಸಿ ಬಿಸಿ ನೀರುದೋಸೆ  ರುಚಿಕರವಾದ ಪಲ್ಯ ಅಥವಾ ಸಾರಿನೊಂದಿಗೆ ತಿನ್ನಲು ಆರಂಭಿಸಿದರೆ ಎಷ್ಟು ತಿಂದೆವೆಂಬುದೇ ತಲೆಯಲ್ಲಿ ನೆನಪಿರುವುದಿಲ್ಲ. ರಾಕೇಶನು ಸಹ ಹೊಟ್ಟೆತುಂಬ ತಿಂದ. ಶಾಲೆಯಲ್ಲಿ ಕೆಲಸ ಮಾಡುವಾಗ ಜಾಗೃತೆಯಾಗಿ ಇರಬೇಕೆಂದು ಅಮ್ಮ ಹೇಳಿದ್ದು ಸಹ ಕಿವಿಯೊಳಗೆ ಹೋಗದಷ್ಟು ನೀರುದೋಸೆ ತಿನ್ನುವುದರಲ್ಲಿ ಮಗ್ನನಾಗಿದ್ದ ರಾಕೇಶ. ಅಪ್ಪ ಸಂಘದ ಕೆಲಸಕ್ಕೆ ಪಕ್ಕದ ಮನೆಗೆ ಹೋದರು. ರಾಕೇಶ ಶಾಲೆಗೆ ಹೊರಟ, ರಶ್ಮಿ ಹೋಗಿ ಸ್ವಲ್ಪ ಹೊತ್ತಾಯಿತು ಅಂದರು ದಾರಿಯಲ್ಲಿ ಸಿಕ್ಕಿದ ರಶ್ಮಿಯ ಅಮ್ಮ. ಬಹುಷಃ ನಿನ್ನೆ ನಾನು ಮಾಡಿದ್ದಕ್ಕೆ ಹೀಗೆ ಮಾಡಿರಬಹುದೆಂದು ಅಂದುಕೊಂಡು ಬೇಗಬೇಗನೆ ಹೆಜ್ಜೆ ಹಾಕಿದ. ಬೇಕೋ ಬೇಡವೋ ಎಂಬಂತೆ ರಶ್ಮಿ ಹೆಜ್ಜೆ ಹಾಕುತ್ತಾ ಆಮೆಗತಿಯಲ್ಲಿ ನಡೆಯುತ್ತಾ ಇರುವುದು ರಾಕೇಶನಿಗೆ ಕಾಣಿಸಿತು. ಇನ್ನು ಜೋರಾಗಿ ನಡೆದು ರಶ್ಮಿಯ ಹತ್ತಿರವಾದಾಗ ಬುಸು ಬುಸು ಏದುಸಿರು ಬಿಡುತ್ತಾ ನಡೆಯತೊಡಗಿದ. ಇಬ್ಬರು ಸಹ ಏನನ್ನು ಮಾತನಾಡಲಿಲ್ಲ. ಬಸ್ಸಿನ ನಿಲ್ದಾಣಕ್ಕೆ ಬಂದು, ಬಸ್ಸು ಹತ್ತಿ ಶಾಲೆ ತಲುಪಿದರು. ಇವತ್ತು ಶಾಲೆಯಲ್ಲಿ ಹೆಚ್ಚಿನ ಕೆಲಸವೇನು ಇರಲಿಲ್ಲ. ಎರಡು ದಿನದ ಕಾರ್ಯಕ್ರಮಕ್ಕೆ ಎರಡು ವಾರಗಳಿಂದ ಸಿದ್ಧತೆ ಮಾಡಿದರೆ ಕೆಲಸಗಳೆಲ್ಲ ಮುಗಿಯದೆ ಇರುತ್ತವೆಯೇ. ಶಿಕ್ಷಕರು ಹಣಕಾಸಿನ ಲೆಕ್ಕಾಚಾರ, ಅತಿಥಿಗಳ ಬಗ್ಗೆ, ನಾಳೆ ಮಾಡಬೇಕಾದ ಭಾಷಣಗಳ ಬಗ್ಗೆ ತಯಾರಿಯಲ್ಲಿ ನಿರತರಾಗಿದ್ದರು. 

ಆಟದ ಮೈದಾನದ ಮರದ ನೆರಳಿನಲ್ಲಿ ಕೂತಿದ್ದಾಗ ರಾಕೇಶನಿಗೆ ಉಪಾಯವೊಂದು ಹೊಳೆಯಿತು. ಒಂದು ಪತ್ರದಲ್ಲಿ ಎಲ್ಲವನ್ನು ಬರೆದು ರಶ್ಮಿ ಒಬ್ಬಳೇ ಇರುವಾಗ ಕೊಟ್ಟರೆ ಆಯಿತು. ಎಲ್ಲಿ ಕೊಡುವುದು ಯಾವಾಗ ಕೊಡುವುದು ಎಂದು ಬಹಳಷ್ಟು ಯೋಚಿಸಿದ ನಂತರ ಹೊಳೆಯ ಹತ್ತಿರ ಕರೆದು ಕೊಡುವುದೇ ಒಳ್ಳೆಯದೆನಿಸಿತ್ತು. ಹಾಗಾಗಿ ಮನೆಗೆ ಹೋದವನೇ ಮೂರ್ನಾಲ್ಕು ಪುಟಗಳ ದೊಡ್ಡ ಪತ್ರಗಳನ್ನು ಬರೆದು ಕೊನೆಗೆ ಇದು ಯಾಕೋ ಅತಿಯಾಯಿತೆಂದು ನಾಲ್ಕೇ ಸಾಲುಗಳ ಪತ್ರವೊಂದನ್ನು ಬರೆದ. ಹೀಗೆಯೇ ಆ ಪತ್ರಗಳ ಬಗ್ಗೆಯೇ ಯೋಚಿಸುತ್ತ ಒಂದೆರಡು ದಿನಗಳನ್ನು ಕಳೆದ. 

ಭಾನುವಾರ ಬಂತು, ಎರಡು ಮನೆಯ ಗಂಡಸರು ಸಂತೆಗೆ ಹೋಗಿದ್ದರು. ರಶ್ಮಿ ಹೊಳೆಯ ಬದಿಯಲ್ಲಿ ಬಟ್ಟೆ ತೊಳೆಯಲು ಬರುತ್ತಾಳೆ ಎಂಬುದು ರಾಕೇಶನಿಗೆ ಗೊತ್ತು. ಇದಕ್ಕಿಂತ ಒಳ್ಳೆಯ ಸಮಯ ಬೇರೆ ಸಿಗುವುದಿಲ್ಲ ಎಂದು ಲೆಕ್ಕಾಚಾರ ಹಾಕಿದ ರಾಕೇಶ ರಶ್ಮಿಯ ಬಳಿ ಹೋಗಿ ಹೆದರುತ್ತಲೇ ಇದನ್ನು ಓದಿ ನಿನ್ನ ಅನಿಸಿಕೆ ಹೇಳು ಎಂದು ಬರೆದ ಪತ್ರವನ್ನು ನೀಡಿದ. ರಶ್ಮಿ ಸೋಪು ಹಿಡಿದಿದ್ದ ಕೈ ನೀರಿನಲ್ಲಿ ತೊಳೆದುಕೊಂಡು ಯಾಕೋ ಅನುಮಾನದಿಂದಲೇ ಪತ್ರವನ್ನು ಓದಲು ಶುರು ಮಾಡಿದಳು. ಓದಿ ಮುಗಿಸಿದವಳೇ ಇನ್ನೊಮ್ಮೆ ಈ ರೀತಿಯ ಯಾವುದೇ ಕೆಲಸ ಮಾಡಿದರೆ ಅಮ್ಮ ಅಪ್ಪನಿಗೆ ಹೇಳುತ್ತೇನೆಂದು ಬೈದು ಸಿಟ್ಟಿನಿಂದ ಕೊಟ್ಟಿದ್ದ ಪತ್ರವನ್ನು ಹರಿಯುವ ಹೊಳೆಗೆ ಎಸೆದಳು. 

ರಾಕೇಶನಿಗೆ ವಿಪರೀತ ಬೇಜಾರಾದರು ಸಹ ದೊಡ್ಡ ಜವಾಬ್ದಾರಿಯನ್ನೇ ನಿಭಾಯಿಸಿದಂತೆ ಆಯಿತು. ಮನೆಗೆ ಬಂದು ಕೂತವನಿಗೆ  ಏನೋ ತಪ್ಪು ಮಾಡಿದ ಭಾವನೇ ಮನಸ್ಸಿನಲ್ಲಿ ಆವರಿಸಿತು. ರಶ್ಮಿಗೆ ಇನ್ನೊಂದಷ್ಟು ಕಾಲಾವಕಾಶ ಕೊಡಬೇಕಿತ್ತೋ ಏನೋ ಎಂದೆಲ್ಲ ಯೋಚಿಸಿದರು ಸಹ, ಕಾಲ ಕಳೆದಂತೆ ಎಲ್ಲ ಸ್ನೇಹ ಸಂಬಂಧಗಳು ಸಹ ಜಟಿಲವಾಗುತ್ತ ಹೋಗುತ್ತವೆ. ಈಗಲೇ ಹೇಳಿದ್ದು ಒಳ್ಳೆಯದೇ ಆಯಿತು ಎಂದು ಒಮ್ಮೆ ಮನಸ್ಸಿಗೆ ಅನ್ನಿಸಿದರೆ ಇನ್ನೊಮ್ಮೆ ಛೆ ದುಡುಕಿ ಬಿಟ್ಟೆ ಎಂದು ಮತ್ತೊಮ್ಮೆ ಅನ್ನಿಸಲು ಶುರುವಾಯಿತು. ರಾಕೇಶನಿಗೆ ದಿನ ಹೇಗೆ ಕಳೆಯಿತು ಎಂಬುದೇ ತಿಳಿಯಲಿಲ್ಲ. ಅಷ್ಟೊಂದು ಯೋಚಿಸಿ ಬರೆದ ಪತ್ರವನ್ನು ಹೊಳೆಗೆ ಎಸೆದು ಹೋಗುವುದು ಅಹಂಕಾರದ ವರ್ತನೆ ಎಂದೇ ಅವನಿಗೆ ಅನ್ನಿಸಿತು. 

ರಶ್ಮಿಯ ಮನಸ್ಸು ಮಾತ್ರ ಕೋಪ ದುಃಖದಿಂದ ಕುದಿಯುತ್ತಿದೆ. ಅಮ್ಮನ ಮೇಲೆ ಸಹ ಸಣ್ಣ ಪುಟ್ಟ ಕಾರಣಗಳಿಗೆ ಮನೆಗೆ ಬಂದು ರೇಗಾಡಿದಳು. ರಾಕೇಶನ ಹೆಸರು ಹೇಳಿ ಚಾಳಿಸುವ ತನ್ನ ಗೆಳತಿಯರ ಮಾತುಗಳು, ಅದಕ್ಕೆ ಸರಿಯಾಗಿ ರಾಕೇಶನ ನಡವಳಿಕೆ ಎಲ್ಲವೂ ಸಹ ದೊಡ್ಡ ತಲೆನೋವಾಗಿ ರಶ್ಮಿಗೆ ಕಾಡಲಾರಂಭಿಸಿತು. ಇನ್ನೊಂದು ಮೂರು ವರ್ಷ ಈ ಊರಿನಲ್ಲಿ ಓದುವುದು, ಮುಂದೆ ತಾನು ಸಹ ತನ್ನ ಅಕ್ಕ ರಮ್ಯಳಂತೆ ಬೇರೆ ಊರಿಗೆ ಓದಲು ಹೋದರಾಯಿತು. ಈ ಊರಿನ ಗೆಳೆತಿಯರು ಇರದ ಕಾಲೇಜಿಗೆ ಸೇರಿದರೆ ಬಹಳ ಒಳ್ಳೆಯದು ಎಂದೆಲ್ಲ ಯೋಚಿಸಿದಳು. ಏನೇ ಯೋಚಿಸಿದರು ಸಹ ರಾಕೇಶನ ಮೇಲಿನ ಸಿಟ್ಟು ಮಾತ್ರ ಏರುತ್ತಲೇ ಹೋಯಿತು. ಅಂದಿನಿಂದ ರಾಕೇಶ ಹಾಗು ರಶ್ಮಿಯ ನಡುವೆ ಮಾತುಕತೆಯೇ ಬಹಳ ಕಡಿಮೆ. 

ಒಂದೆರಡು ತಿಂಗಳು ಇದನ್ನೆಲ್ಲಾ ಗಮನಿಸಿದ ರಾಕೇಶನಿಗೆ ರಶ್ಮಿಯ ಮನಸ್ಸು ಬದಲಾಗುವ ಯಾವ ಲಕ್ಷಣವೂ ಕಾಣಲಿಲ್ಲ. ಅದರ ಬದಲಾಗಿ ದಿನದಿಂದ ದಿನಕ್ಕೆ ದೊಡ್ಡದಾದ ಮೌನದ ಬೆಟ್ಟವೊಂದು ಬೆಳೆಯುತ್ತಾ ಹೋಯಿತು. ಎಲ್ಲೋ ಅಪರೂಪಕ್ಕೆ ಅವಶ್ಯಕತೆಯಿದ್ದಾಗ ಒಂದೆರಡು ಮಾತುಗಳು. ಇವರಿಬ್ಬರ ನಡುವೆ ಏನೇ ಆದರೂ ಆ ಎರಡು ಮನೆಯವರು ಮೊದಲಿನಿಂದ ಅನ್ಯೋನ್ಯವಾಗಿದ್ದವರು. ಒಬ್ಬರ ಮನೆಯ ದನ ಹಾಲು ಕೊಡದಿದ್ದಾಗ ಇನ್ನೊಬ್ಬರ ಮನೆಯಲ್ಲಿ ತೆಗೆದುಕೊಳ್ಳುವುದು, ಒಬ್ಬರ ಮನೆಯಲ್ಲಿ ಕೋಳಿ ಕುಯ್ದಾಗ ಮನೆಯ ಮಕ್ಕಳನ್ನು ಊಟ ತಿಂಡಿಗೆ ಕರೆಯುವುದು, ಹೊಳೆಯಲ್ಲಿ ಮೀನು ಏಡಿ ಜಾಸ್ತಿ ಸಿಕ್ಕಿದಾಗ ಹಂಚಿಕೊಳ್ಳುವುದು, ಶಿಕಾರಿ ಆದ ಮಾಂಸ ಸಿಕ್ಕಿದಾಗ ಇನ್ನೊಬ್ಬರ ಮನೆಗೂ ಕೊಡುವುದು ಹೀಗೆ ಒಂದು ರೀತಿಯ ಸಂಬಂಧಗಳನ್ನು ಮೀರಿದ ಬದುಕು ಅವರ ಮನೆಗಳದು. 

ಹತ್ತನೇ ತರಗತಿ ಮುಗಿಯುತ್ತಿದ್ದಂತೆ ರಶ್ಮಿ ಅಕ್ಕ ಸೇರಿದ್ದ ಉಡುಪಿಯ ಕಾಲೇಜಿಗೆ ಸೇರಿಕೊಂಡಳು. ಅಷ್ಟರಲ್ಲಿ ರಶ್ಮಿಯ ಅಕ್ಕ ರಮ್ಯ ಡಿಗ್ರಿ ಮುಗಿಸಿ ಮನೆಗೆ ಬಂದಿದ್ದಳು. ರಮ್ಯ ಇನ್ನು ಮೂರು ತಿಂಗಳು ಬಿಟ್ಟು ಮಾಸ್ಟರ್ ಡಿಗ್ರಿ ಮಾಡಲು ಮೈಸೂರಿಗೆ ಹೋಗುವ ಯೋಜನೆಯಲ್ಲಿದ್ದಾಳೆ. ರಾಕೇಶನ ಮನೆಯಲ್ಲಿ ಮಾತ್ರ ಇರುವ ಒಬ್ಬ ಮಗನನ್ನು ಮನೆ ಬಿಟ್ಟು ದೂರ ಕಳುಹಿಸಲು ಪೋಷಕರು ತಯಾರಿಲ್ಲ. ಅವನು ಓದುವ ಚಂದಕ್ಕೆ ನಮ್ಮೂರ ಕಾಲೇಜು ಹೇಳಿ ಮಾಡಿಸಿದ ಹಾಗಿದೆ ಎಂಬುದು ಅಪ್ಪನ ಅಭಿಪ್ರಾಯವಾದರೆ, ಮನೆಯ ಒಬ್ಬನೇ ಮಗ ಮನೆಬಿಟ್ಟು ಇರುವುದು ಏನು ಚಂದ ಎನ್ನುವುದು ಅಮ್ಮನ ವಾದ. 

ಈ ರೀತಿಯ ಕಠಿಣ ಪರಿಸ್ಥಿತಿಗಳಲ್ಲಿ ಹುಡುಗರು ಬಹಳ ಚಾಲಾಕಿಯಾಗಿ ವರ್ತಿಸುತ್ತಾರೆ. ರಾಕೇಶ ಅದೇ ಊರಿನಲ್ಲಿ ರಶ್ಮಿ ಓದಲು ತೆಗೆದುಕೊಂಡ ವಿಷಯಗಳನ್ನೇ ತೆಗೆದುಕೊಂಡು ಕಾಲೇಜಿಗೆ ಸೇರಿದ. ದೂರದ ಊರಿಗೆ ಕಾಲೇಜಿಗೆ ಹೇಗೂ ಸೇರಿಸಿಲ್ಲ ಬೈಕ್ ಆದರೂ ಕೊಡಿಸಿ ಎಂಬ ಬೇಡಿಕೆಯಿಟ್ಟ. ಅದಕ್ಕೆ ಪೋಷಕರು ಒಪ್ಪದಿದ್ದಾಗ, ಹದಿನೈದು ಸಾವಿರ ರೂಪಾಯಿ ಪಡೆದು ಓದಿಗಾಗಿ ಮೊಬೈಲ್ ಕೊಂಡುಕೊಂಡ. ಪ್ರಿಯತಮೆ ಜೀವನದ ಜೊತೆ ಇಲ್ಲದಿದ್ದರೇನು, ಬೇಕಾದಷ್ಟು ಗೆಳೆಯರು ಕಾಲೇಜಿನಲ್ಲಿ ರಾಕೇಶನಿಗೆ ಇದ್ದರು. ಪರೀಕ್ಷೆಯ ಸಂದರ್ಭಗಳಲ್ಲಿ ಓದಿದ್ದು ಬಿಟ್ಟರೆ ಪಿಯುಸಿ ಎರಡು ವರ್ಷದಲ್ಲಿ ಮುಗಿದು ಹೋಗಿದ್ದೆ ಗೊತ್ತಾಗಲಿಲ್ಲ. ಹತ್ತನೇ ತರಗತಿಯಲ್ಲಿ ಸೊಂಟ ನೋವು ಬರುವಷ್ಟು ಕೂತು ಬರೆದಿದ್ದರು ಬಂದಿದ್ದು ೫೫%, ಆದರೆ ಈ ವರ್ಷ ಏನೋ ಮ್ಯಾಜಿಕ್ ಎಂಬಂತೆ ೭೦% ಅಂಕಗಳು ಅವನಿಗೆ ಬಂದಿವೆ. ಅದರಲ್ಲೂ ಬಯಾಲಜಿ ಹಾಗು ಕೆಮಿಸ್ಟ್ರಿ ಅಲ್ಲಿ ನೂರಕ್ಕೆ ೮೫ ಅಂಕಗಳು ಬಂದಿವೆ. ಒಟ್ಟಿನಲ್ಲಿ ಆ ಊರಿನ ಎಲ್ಲರಿಗು ರಾಕೇಶ ಫಸ್ಟ್ ಕ್ಲಾಸಿನಲ್ಲಿ ಪಾಸ್ ಆಗಿದ್ದಾನೆ ಎಂಬುದೇ ಹೆಮ್ಮೆ. ಅಪ್ಪ ಅಮ್ಮನಿಗಂತೂ ಮನೆ ದೇವರಿಗೆ, ಊರಿನ ಭೂತರಾಯನಿಗೆ ಎಷ್ಟು ಕೈ ಮುಗಿದರು ಸಾಲದು. ರಶ್ಮಿ ಏನು ಕಡಿಮೆ ಅಂಕ ತೆಗೆದಿಲ್ಲ, ೯೦% ತೆಗೆದಿದ್ದಾಳೆ. ತನ್ನ ಅಕ್ಕನಂತೆಯೇ ಮೈಸೂರಿಗೆ ಹೋಗುವ ಯೋಚನೆ ಅವಳದು. ರಜೆಗೆ ಮನೆಗೆ ಬಂದಾಗ ರಶ್ಮಿ ರಾಕೇಶನ ಅಮ್ಮನಿಂದ ಹೊಗಳಿಕೆಯ ಮಾತುಗಳನ್ನು ಕೇಳಿ ನಕ್ಕಿದ್ದಳು. "ಹುಡುಗ ಓದೋದು ಕಮ್ಮಿ, ಆದರೆ ಕೆಲಸದಲ್ಲಿ ಭಾರಿ ಚುರುಕು" ಎನ್ನುವುದೇ ರಾಕೇಶನ ಅಮ್ಮನ ಗುಣಗಾನದ ಮುಖ್ಯಾಂಶ. ರಾಕೇಶ ಕೂಡ ರಶ್ಮಿಯನ್ನು ಮಾತನಾಡಿಸಿದ, ತನ್ನ ಹೊಸ ಮೊಬೈಲ್ ಅವಳಿಗೆ ತೋರಿಸಿದ, ಮುಂದೆ ಎಲ್ಲಿ ಕಾಲೇಜಿಗೆ ಸೇರುತ್ತೀಯ ಎಂದೆಲ್ಲ ಕೇಳಿದ. ರಶ್ಮಿಯು ಸಹ ಹಿಂದೆ ಏನು ನಡೆದೇ ಇಲ್ಲವೆಂಬಂತೆ ಮಾತನಾಡಿದಳು. ರಾಕೇಶನಿಗೂ ಖುಷಿ ಆಯಿತು, ಹೀಗೆ ಗೆಳೆತನವನ್ನಾದರೂ ಮುಂದುವರೆಸಿದರೆ ಭಯಂಕರ ಮೌನಕ್ಕಿಂತ ಲೇಸು ಎನ್ನುವುದು ಮನಸ್ಸಿಗೆ ಅನ್ನಿಸಿತು. 

ಹಳೆಯ ಪುಸ್ತಕಗಳನ್ನೆಲ್ಲ ಒಟ್ಟುಮಾಡಿ ಗುಜುರಿಗೆ ಹಾಕಲು ರಾಕೇಶ ಕೆಲಸ ಮಾಡುತ್ತಿರುವಾಗ ಬರೆದಿದ್ದ ಪ್ರೇಮ ಪತ್ರಗಳು ಸಿಕ್ಕಿದವು. ಅವುಗಳನ್ನು ಓದಲು ಮನಸ್ಸಾಗದೆ ನಾಲ್ಕು ದೋಣಿ ಮಾಡಿ, ಹೊಳೆಗೆ ಬಂಡೆಯ ಮೇಲೆ ಕೂತು ಬಿಡಲು ಹೋದ. ಹೊಳೆಯಲ್ಲಿ ದೂರದಿಂದಲೇ ರಾಕೇಶನ ಮಂಗಾಟಗಳನ್ನು ನೋಡಿದ ರಶ್ಮಿ ಅವನು ಇದ್ದಲ್ಲಿಗೆ ಬಂದಳು. ಗೊತ್ತಿದ್ದರೂ ಸಹ ಏನು ಮಾಡುತ್ತಿದ್ದೀಯ ಎಂದು ಕೇಳಿದಾಗ ರಾಕೇಶ ಏನಿಲ್ಲ ಸುಮ್ಮನೆ ಬಂದೆ ಎಂದು ಹೇಳಿ ಹೆಚ್ಚು ಮಾತನಾಡದೆ ಮನೆಯ ಕಡೆಗೆ ಹೊರಟ. ಮತ್ತೆ ಏನೋ ನೆನಪಾದಂತಾಗಿ ಹಿಂತಿರುಗಿ ಬಂದು ಸುಮ್ಮನೆ ಹೊಳೆಯ ಬದಿಯ ನೀರು ನಿಲ್ಲುವ ಮಣ್ಣಿನ ಗುಂಡಿಗಳ ಒಳಗೆಲ್ಲ ಕೈಯ್ಯಾಡಿಸಿ ಒಂದೆರಡು  ಏಡಿಗಳನ್ನು ಹಿಡಿದು ಕೊಂಬು ಮುರಿದು ರಶ್ಮಿಯನ್ನು ಕರೆದು ಬಾಳೆಯ ಎಲೆ ತರುವಂತೆ ಕೇಳಿದ. ರಶ್ಮಿ "ಪರವಾಗಿಲ್ಲ, ತಿನ್ನೋದು ಮಾತ್ರ ಬರುತ್ತೆ ಅನ್ಕೊಂಡಿದ್ದೆ ನಿನಗೆ" ಎಂದು ಕುಹಾಸ್ಯ ಮಾಡಿದ್ದಕ್ಕೆ ರಾಕೇಶ "ಹೌದು, ಪೇಟೆ ಜನರಿಗೆ ಇವೆಲ್ಲ ಬಹಳ ಇಷ್ಟ ಇವೆಲ್ಲ" ಎಂದು ತಿರುಗಿ ಹೇಳಿದ. ಏಡಿ ಹಿಡಿಯುವುದು ಬಹಳ ಸುಲಭದ ಕೆಲಸವಲ್ಲ. ಒಂದೆರಡು ಸೆಕೆಂಡು ಯಾಮಾರಿದರೆ ತನ್ನ ಹರಿತವಾದ ಕೊಂಬುಗಳಿಂದ ಕಚ್ಚಿ ಹಿಡಿಯಿತೆಂದರೆ ನೋವು ಗೊತ್ತಿಲ್ಲದವರಾದರೆ ಉಚ್ಚೆ ಹುಯ್ದುಕೊಳ್ಳಬೇಕಷ್ಟೆ. ಎಂತಹ ಘಟಾನುಘಟಿ ಆದರೂ ಸಹ ಒಂದೆರಡು ಕ್ಷಣ ಜೀವ ಹೋಗುವಂತೆ ಕೂಗುವಷ್ಟು ಗಟ್ಟಿಯಾಗಿ ಕಚ್ಚುತ್ತವೆ ಕಾರೇಡಿಗಳು. ಇದರಿಂದಲೇ ಸಾಕಷ್ಟು ಜನ ಕೂಣೆಯೊಳಗೆ ಮೀನು ಕೋಳಿಯ ಪಚ್ಚಿ ಹಾಕಿ ನಿಧಾನ ನೀರು ಹರಿಯುವ ಜಾಗದಲ್ಲಿ ಮುಳುಗಿ ಹಾಕಿ ಅವಾಗಿಯೇ ಒಳ ಪ್ರವೇಶಿಸಿ ಹೊರಹೋಗಲಾರದೆ ಸಿಕ್ಕಿ ಬೀಳಲು ಕಾಯುತ್ತಿರುತ್ತಾರೆ. ರಾಕೇಶ ಹಿಡಿದ ಏಳೆಂಟು ಏಡಿಗಳಲ್ಲಿ ನಾಲ್ಕನ್ನು ರಶ್ಮಿಯ ಮನೆಗೆ ಕೊಟ್ಟು ಉಳಿದವನ್ನು ತನ್ನ ಮನೆಗೆ ತೆಗೆದುಕೊಂಡು ಹೋದ. 

ರಾತ್ರಿ ಊಟ ಮಾಡಿ ಮಲಗಿದ ನಂತರವಂತೂ ರಶ್ಮಿಯದೇ ಚಿಂತೆ. ಏನೋ ಒಂದು ರೀತಿಯ ಚಂದ ಅವಳಿಗೆ ಬಂದಂತಾಗಿದೆ. ಅವಳಿಲ್ಲದಿದ್ದರೂ ಜೀವನ ಸಾಗುತ್ತದೆ ಎಂದೆಲ್ಲ ಒಮ್ಮೊಮ್ಮೆ ಬರುತ್ತಿದ್ದ ಆಲೋಚನೆ ಅವಳಿಲ್ಲದೆ ಹೇಗೆ ಜೀವನ ಎನ್ನುವಂತೆ ಆಗಿದೆ. ರಾತ್ರಿಯ ತಂಗಾಳಿ, ಚಂದ್ರನ ಬೆಳದಿಂಗಳ ಚೆಲುವನ್ನು ಮರೆತು ರಶ್ಮಿಯ ಆಲೋಚನೆಗಳಲ್ಲಿ ರಾಕೇಶನ ಮನಸ್ಸು ಮುಳುಗಿದೆ. ಪ್ರೀತಿಯಿದ್ದ ಮೇಲೆ ಅದನ್ನು ಪಡೆಯಲು ಪ್ರಯತ್ನ ಮಾಡಲೇಬೇಕು. ಹೀಗಾಗಿ ರಶ್ಮಿಯ ಮನಸ್ಸಿಗೆ ಹತ್ತಿರವಾಗುವ ಒಂದೊಳ್ಳೆ ಯೋಜನೆ ತಯಾರಿಸಲೇ ಬೇಕು. ಒಂದಲ್ಲ ಒಂದು ದಿನ ಪ್ರೀತಿ ಅವಳಿಗೂ ಅರ್ಥವಾಗಿ ಒಪ್ಪಬಹುದು, ಒಪ್ಪದೇ ಇದ್ದರು ಸಹ ನನ್ನಿಂದ ಪ್ರಯತ್ನದ ಕೊರತೆಯಾಗಬಾರದು ಎಂಬ ದಿಟ್ಟ ನಿಲುವೊಂದು ಮನಸ್ಸಿನಲ್ಲಿ ಮೂಡಿತು. ಹಾಗೆಯೆ ಎದ್ದುಕೂತು ಕಿಟಕಿ ಬಾಗಿಲು ತೆರೆದು ಅಂಗಳದಲ್ಲಿ ಹಾಲಿನಂತೆ ಚೆಲ್ಲಿದ್ದ ಬೆಳದಿಂಗಳ ಚೆಲುವನ್ನು ತಂಗಾಳಿಯನ್ನು ನೋಡುತ್ತಾ ಕೂತ. ಅಷ್ಟರಲ್ಲಿ ಒಂದೆರಡು ಸೊಳ್ಳೆಗಳು ಕಿವಿ ಹತ್ತಿರ ಹಾಡು ಹೇಳಲು ಶುರು ಮಾಡಿದಾಗ ಕಿರಿಕಿರಿಯಾಗಿ ಕಿಟಕಿಯ ಬಾಗಿಲು ಮುಚ್ಚಿ ಮುಖವನ್ನು ಸೇರಿಸಿ ಹೊದಿಕೆ ಹೊದ್ದುಕೊಂಡು ಮಲಗಿದ. ಬೆಳಿಗ್ಗೆ ಎದ್ದು ಸಹ ಅದನ್ನೇ ಯೋಚಿಸುತ್ತಿದ್ದ, ಡಿಗ್ರಿ ಕಾಲೇಜು ಸೇರುವ ಮೊದಲು ಒಂದೆರಡು ತಿಂಗಳ ರಜೆ ಹೇಗೂ ಇದೆ. ಒಂದಷ್ಟು ದಿನ ನೆಂಟರ ಮನೆಗಳಲ್ಲಿ ಇರುವ ಮದುವೆಮನೆಗಳಿಗೆ, ಮನೆಯೊಕ್ಕಲು ಸಮಾರಂಭಗಳಿಗೆ ಹೋಗಿಬಂದ. ರಶ್ಮಿ ಎಲ್ಲಿಗೂ ಹೋಗದೆ ಅವಳ ಮನೆಯಲ್ಲೇ ಇರುವ ವಿಷಯ ಅಮ್ಮನಿಂದ ಗೊತ್ತಾಯ್ತು. ರಶ್ಮಿಯೊಂದಿಗೆ ಹೇಗಾದರೂ ಮಾಡಿ ಉತ್ತಮ ಗೆಳೆತನ ಬೆಳೆಸುವುದು ರಾಕೇಶನ ಮುಂದಿನ ಗುರಿ. ಯಾವುದನ್ನು ಸಹ ಅತಿಯಾಗಿ ರೇಜಿಗೆ ಬರುವಂತೆ ಮಾಡುವಂತಿಲ್ಲ, ಎಷ್ಟು ಬೇಕೋ ಅಷ್ಟೇ. ನೋಡಿಯೇ ಬಿಡೋಣ ಅದೇನು ಆಗುತ್ತದೋ ಆಗಿಯೇ ಹೋಗಲಿ ಎಂದು ನಿರ್ಧರಿಸಿದ. 

ಇದೆಲ್ಲ ಯೋಚನೆ ಮಾಡುವಾಗ ಸುಲಭವೇ ಹೊರತು ಕಾರ್ಯರೂಪಕ್ಕೆ ತರುವುದು ಬಹಳ ಕಷ್ಟ. ಪ್ರೀತಿಸುವ ಹುಡುಗಿ ನೋಡಿದಾಗ ಹುಡುಗರ ಮನಸ್ಸಿನಲ್ಲಿ ಆಗುವ ತಳಮಳವನ್ನು ಅದೆಷ್ಟೇ ಮುಚ್ಚಿಡಲು ಪ್ರಯತ್ನಿಸಿದರೂ ಸಹ ನೋಟದಲ್ಲಿ, ಮಾತಿನಲ್ಲಿ, ಧ್ವನಿ ಹಾಗೂ ಉಸಿರಾಟದ ಏರಿಳಿತದಲ್ಲಿ ಹೊಸತೊಂದು ಲೋಕವೇ ಸೃಷ್ಟಿಯಾಗುತ್ತದೆ. ಆದರೂ ಅದನ್ನೆಲ್ಲ ಅದುಮಿಟ್ಟು ಬಹಳ ಸಹಜವಾಗಿ ಇರುವಂತೆ ನಟಿಸುವುದು ಬಹಳ ದೊಡ್ಡ ಕಲೆಯೇ ಸರಿ. ರಜೆಯಲ್ಲಿ ರಶ್ಮಿ ಊರಲ್ಲಿ ಇದ್ದಷ್ಟು ದಿನ ಹಿಂದೆ ಏನು ನಡೆದೇ ಇಲ್ಲವೇನೋ ಎಂಬಂತೆ ಇದ್ದು ರಶ್ಮಿಯ ಗೆಳೆತನ ಸಂಪಾದಿಸುವ ಪ್ರಯತ್ನ ರಾಕೇಶ ಮಾಡಿದ. ಈ ಸಂದರ್ಭದಲ್ಲಿ ರಶ್ಮಿ ಕೂಡ ತನ್ನ ಅಕ್ಕನ ಹಳೆಯ ಮೊಬೈಲ್ ಬೇಡವೆಂದು ಹಠ ಹಿಡಿದು ಹೊಸ ಮೊಬೈಲ್ ಕೊಂಡಳು. ರಾಕೇಶನೊಂದಿಗೆ ನಂಬರ್ ಕೂಡ ಹಂಚಿಕೊಂಡಳು. ರಾಕೇಶ ನಗುತರಿಸುವ ಮೀಮ್ಗಳು, ಟ್ರಾಲ್ ವಿಡಿಯೋಗಳು ಹೀಗೆ ದಿನಕ್ಕೆ ಆರಿಸಿ ಒಂದೋ ಎರಡೋ ದಿನವೂ ಕಳುಹಿಸುತ್ತಿದ್ದ. ಇದಕ್ಕೆ ಸರಿಯಾಗಿ ಅವಳು ಸಹ ಇಂತಹ ಹಾಸ್ಯಭರಿತ ಸಂದೇಶಗಳನ್ನು ರಾಕೇಶನಿಗೆ ಕಳುಹಿಸುತಿದ್ದಳು. ಹೀಗೆ ರಜೆಯೆಲ್ಲ ಮುಗಿದು ರಶ್ಮಿ ಮೈಸೂರಿಗೆ ಡಿಗ್ರಿ ಕಾಲೇಜಿಗೆ ಹೋದಳು. ರಾಕೇಶನಿಗೂ ಊರಿನ ಡಿಗ್ರಿ ಕಾಲೇಜು ಶುರುವಾಯಿತು. 

ಡಿಗ್ರಿ ಕಾಲೇಜುಗಳೇ ಒಂದು ವಿಸ್ಮಯ. ಯಾವುದೋ ಊರು ತಲುಪಬೇಕಾದವರು ಬೇರೆ ಯಾವುದೊ ಬಸ್ಸು ಹತ್ತಿ ಎಲ್ಲೋ ಒಂದು ಕಡೆ ಇಳಿದು ತಮ್ಮಂತೆ ಗುಣವಿರುವ ಜನರ ಹುಡುಕಾಟದಲ್ಲಿ ಒಂದಷ್ಟು ಸಮಯ ಕಳೆದುಹೋಗುತ್ತದೆ. ಹೊಸತೊಂದು ಜಗತ್ತಿಗೆ ಪ್ರವೇಶಿಸಿದಂತೆ ಆಗುತ್ತದೆ. ಮೊದಲು ಗೆಳೆಯರಾದವರು ವರ್ಷಗಳ ನಂತರ ಅಪರಿಚಿತರಾಗಿ ಇರುವ ಸಾಧ್ಯತೆಯೂ ಇದೆ, ಆಕಸ್ಮಿಕವಾಗಿ ಪರಿಚಯ ಆದವರು ಜೀವನದುದ್ದಕ್ಕೂ ಗೆಳೆಯರಾಗಿ ಇರುವ ಸಾಧ್ಯತೆಯೂ ಇದೆ. ಕಾಲೇಜುಗಳ ಬಗ್ಗೆ ಒಂದಂತೂ ನಿಜ, ನಾವು ಕೇಳಿಯೇ ಇರದ ಹಾಗೆ ಗೊತ್ತೇ ಇರದ ಸಾಕಷ್ಟು ಬಗೆಯ ಹೊಸ ವ್ಯಕ್ತಿಗಳು ಮತ್ತು ವಿಚಾರ ಹೊಂದಿರುವ ಜನರು ಅಲ್ಲಿ ನೋಡಲು ಸಿಗುತ್ತಾರೆ. ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಈ ವೈವಿಧ್ಯತೆ ಕಾಣಲು ಸಿಗುವುದು ಸ್ವಲ್ಪ ಕಡಿಮೆ. ಈ ಹೊಸತನದ ಜೀವನ ಪ್ರವಾಹದಲ್ಲಿ ತೇಲಿ ಬರುವ ನಮಗಿಷ್ಟವಾಗುವ ಒಂದಷ್ಟನ್ನು ನಮ್ಮೊಂದಿಗೆ ಇಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ರಶ್ಮಿ ಬಹಳ ಖುಷಿಯಾಗಿದ್ದಳು. ಕಾಲೇಜಿನ ಬಗ್ಗೆ, ಅಲ್ಲಿ ಓದಿ ಸಾಧನೆ ಮಾಡಿರುವವರ ಬಗ್ಗೆ, ಊರಿನ ಬಗ್ಗೆ, ರಜೆಯ ದಿನಗಳಲ್ಲಿ ಹೋದ ಜಾಗಗಳ ಬಗ್ಗೆ ಎಷ್ಟು ಕೊಚ್ಚಿಕೊಂಡರು ಸಾಲುತ್ತಲೇ ಇರಲಿಲ್ಲ ಅವಳಿಗೆ. ರಾಕೇಶನ ಲೋಕವೇ ಬೇರೆ, ವಾರಕ್ಕೊಂದು ಹೋರಾಟ ಮಾಡುವುದು, ಕ್ರಿಕೆಟ್ ಟೂರ್ನಿ ಆಯೋಜಿಸುವುದು, ಪರೀಕ್ಷೆಯ ಸಮಯದಲ್ಲಿ ಒಂದಷ್ಟು ಓದುವುದು, ತೋಟ ಗದ್ದೆಗಳಲ್ಲಿ ಒಂದಷ್ಟು ಕೆಲಸ, ಬಿಡುವಿದ್ದಾಗ ಹೊಳೆಯ ಬಂಡೆಯ ಮೇಲೆ ಕೂತು ಕಾಲ ಕಳೆಯುವುದು.

ರಶ್ಮಿ ಊರಿನ ಕಡೆ ಬರುವುದೇ ಕಡಿಮೆ, ರಜೆ ಸಿಕ್ಕಿದಾಗಲೆಲ್ಲ ಗೆಳೆಯರೊಂದಿಗೆ ಪ್ರವಾಸಕ್ಕೆ ಹೋಗುತ್ತಿದ್ದಳು. ಇತ್ತೀಚಿಗೆ ರಾಕೇಶನೊಂದಿಗೆ ಮೊದಲಿನಂತೆ ಸಂದೇಶ ಕಳುಹಿಸಿದ ತಕ್ಷಣ ಪ್ರತ್ಯುತ್ತರ ಕೂಡ ಬರುವುದಿಲ್ಲ, ರಾತ್ರಿ ಆನ್ಲೈನ್ ಇದ್ದರು ಸಹ ರಿಪ್ಲೈ ಬರುವುದಿಲ್ಲ. ರಾಕೇಶ ರಶ್ಮಿಯ ಗೆಳೆಯರೊಂದಿಗೆ ಇರುವ ಫೋಟೋಗಳನ್ನೇ ನೋಡಿ ಸುಮ್ಮನಾಗಬೇಕಾಗುತ್ತದೆ. ಜಾಸ್ತಿ ಪ್ರಶ್ನೆ ಮಾಡಲು ಹೋದರೆ ಬ್ಲಾಕ್ ಭಾಗ್ಯ ಸಿಗುತ್ತದೆ. ಹೀಗಾಗಿ, ಏನು ಮಾಡಲು ಅಥವಾ ಹೇಳಲು ಸಹ ಸಾಧ್ಯವಿಲ್ಲದೆ ರಾಕೇಶ ಒದ್ದಾಡುವುದೇ ಜೀವನವಾಗಿದೆ. ಹೀಗೆ ಗೆಳೆಯರೊಂದಿಗೆ ಹಾಕಿದ ಫೋಟೋಗಳಲ್ಲಿ ಹುಡುಗರ ಜೊತೆ ಮೈಕೈ ತಾಗುವಂತೆ ನಿಂತಿದ್ದರೆಂತು ರಾಕೇಶನಿಗೆ ಮೈಯೆಲ್ಲಾ ಉರಿಯುತ್ತದೆ. ಛೆ, ಗುರುತು ಪರಿಚಯವಿಲ್ಲದ ಯಾರೊಂದಿಗೋ ಇಷ್ಟು ಸಲಿಗೆಯಿಂದ ಇರುತ್ತಾಳೆ, ನಾನು ನೋಡಿದರೆ ಇಲ್ಲಿ ಒಂಟಿ ಗೂಬೆಯಂತೆ ದಿನವಿಡೀ ಮನದಲ್ಲಿ ಅವಳ ಜಪ ಮಾಡುತ್ತಿದ್ದೇನೆ. ಅದರಲ್ಲಿಯೂ ಯಾರೋ ಹುಡುಗರು ಅವಳ ಅಕೌಂಟ್ ಯಾವುದಾದರು ತಮಾಷೆಯ ಪೋಸ್ಟ್ಗಳಿಗೆ ಟ್ಯಾಗ್ ಮಾಡಿದರೆ ಅವರು ಯಾರು ಏನು ಎಂದು ತಿಳಿದುಕೊಳ್ಳುವ ಕೆಲಸ ಬೇರೆ ಶುರುವಾಗಿದೆ ರಾಕೇಶನಿಗೆ.  

ಅವಳದೂ ತಪ್ಪಿಲ್ಲ, ನನ್ನದು ತಪ್ಪಿಲ್ಲ. ಪ್ರೀತಿಸಿದ ತಪ್ಪಿಗೆ ನೋವೊಂದೇ ಸಿಗುವುದೆಂದರೆ ಯಾವ ನ್ಯಾಯ ಎಂಬಂತಹ ನೂರಾರು ಯೋಚನೆಗಳು ರಾಕೇಶನಿಗೆ ಬಂದರು ಸಹ ಎಲ್ಲವು ರಶ್ಮಿಯ ಕೈಯಲ್ಲೇ ಇರುವುದು ಎಂಬ ಸತ್ಯ ರಾಕೇಶನಿಗೆ ಗೊತ್ತಿದೆ. ಇದೆ ದಾರಿಯಲ್ಲಿ ಸಾಗಿದರೆ ಪ್ರೀತಿಯು ಸಿಗಲ್ಲ ಮಣ್ಣು ಸಿಗಲ್ಲ ಎನ್ನುವ ಕಹಿ ಸತ್ಯವೊಂದು ಆಗಾಗ ನೆನಪಾಗುತ್ತದೆ. ತನ್ನ ಮೊಬೈಲಿನಲ್ಲಿ ಒಂದು ಫೋಲ್ಡರ್ ಪೂರ್ತಿ ಅವಳ ಫೋಟೋಗಳು, ವಿಡಿಯೋಗಳು ಹೀಗೆ ಇವೆ ತುಂಬಿವೆ. ಅದರಲ್ಲಿ ಇದ್ದ ಹುಡುಗರ ಮೂತಿಗಳೆಲ್ಲ ಕ್ರಾಪ್ ಮಾಡಿ ತೆಗೆದಾಗಿದೆ. ರಶ್ಮಿಯ ಮೊಬೈಲ್ ಬಿಟ್ಟರೆ ಅವಳ ಹೆಚ್ಚು ಫೋಟೋಗಳು ಇರುವುದು ಇವನ ಮೊಬೈಲ್ ಅಲ್ಲಿಯೇ ಅನ್ನಿಸುತ್ತದೆ. ಹೀಗಾಗಿ ಬೇರೆಯವರಿಗೆ ತನ್ನ ಮೊಬೈಲ್ ಕೊಡುವುದೇ ಇಲ್ಲ. ಇದೆಲ್ಲ ಹೇಗೋ ಸಹಿಸಿಕೊಳ್ಳಬಹುದು, ಹುಟ್ಟಿದದಿನದ ನೋಟಿಫಿಕೇಶನ್ ಫೇಸ್ಬುಕ್ ಅಲ್ಲಿ ಬಂದರು ಸಹ ಒಂದು ಸ್ಟೇಟಸ್ ಕೂಡ ಹಾಕದೆ ಇರುತ್ತಾಳಲ್ಲ. ನಿನ್ನೆ ಮೊನ್ನೆ ಪರಿಚಯವಾದ ಯಾರೋ ಪೋಲಿ ಹುಡುಗರಿಗೆ ಬೆಸ್ಟಿ ಅಂತೆಲ್ಲ ಇನ್ಸ್ಟಾಗ್ರಾಮ್ ಸ್ಟೋರಿ ಬೇರೆ ಕೇಡು. ಇದು ಯಾಕೋ ವಿಮಾನ ನಿಲ್ದಾಣದಲ್ಲಿ ಸಹಕಾರ ಸಾರಿಗೆ ಬಸ್ಸಿಗೆ ಕಾಯುವಂತೆ ತನ್ನ ಜೀವನ ಆಗಿದೆಯಲ್ಲ ಎಂಬಂತಹ ಯೋಚನೆಗಳು ಸಹ ಬರುತ್ತವೆ. ಆದರೆ ಈ ಸಿನೆಮಾಗಳಲ್ಲಿ ಯಾವುದೊ ಒಂದು ದಿನ ಇದ್ದಕ್ಕಿದಂತೆ ನಟಿಯ ಮನಸ್ಸು ಬದಲಾವಣೆಯಾಗಿ ನಟನ ಮೇಲೆ ಪ್ರೀತಿ ಉಕ್ಕಿ ಹರಿಯುವಂತೆ ತನ್ನ ಜೀವನದಲ್ಲಿಯೂ ಆಗಬಹುದು ಎಂಬ ನಂಬಿಕೆ ರಾಕೇಶನಿಗೆ. 

ಹೀಗೆಯೇ ಒಂದು ಭಾನುವಾರ ಹೊಳೆಯ ಬದಿಯಲ್ಲಿ ಬಟ್ಟೆ ತೊಳೆದು, ಸ್ನಾನ ಮಾಡಿ ಸುಮ್ಮನೆ ಎಳೆ ಬಿಸಿಲಿನಲ್ಲಿ ಕೂತಿದ್ದಾಗ ಒಂದು ವಿಚಾರ ರಾಕೇಶನಿಗೆ ಹೊಳೆಯಿತು. ತಾನೆಂದು ಸಹ ಈ ಹೊಳೆಯಲ್ಲಿ ಸರಿಯಾಗಿ ಈಜುವುದು ಕಲಿತಿಲ್ಲ ಎಂಬುದು. ಇಲ್ಲಿ ಈಜಲು ಸರಿಯಾಗುವುದಿಲ್ಲ, ಬಂಡೆಗಳು ಅಲ್ಲಲ್ಲಿ ಇವೆ, ಸ್ವಲ್ಪ ಮುಂದೆ ಸಾಗಿದರೆ ಬಂಡೆಗಳಿಲ್ಲ, ಆದರೆ ಅಜ್ಜಿಯ ಕಾಲದಲ್ಲಿ ಅವರ ಅಣ್ಣ ಅಲ್ಲಿ ಈಜಲು ಹೋಗಿದ್ದವರು ಮರಳಿ ಜೀವಂತವಾಗಿ ಬರಲಿಲ್ಲ. ಆ ಸಮಯದಿಂದ ಅಲ್ಲಿ ಜಾಗ ಸರಿಯಿಲ್ಲ ಎಂಬುದು ಎಲ್ಲರ ನಂಬಿಕೆ. ಹೀಗಾಗಿ ರಾಕೇಶನ ಅಪ್ಪ ಅಮ್ಮ ಅಲ್ಲಿ ಈಜಬಾರದೆಂದು ಮೊದಲಿನಿಂದಲೂ ಹೇಳಿ ಅದೇ ತಲೆಯಲ್ಲಿ ಕೂತು ಹೋಗಿದೆ. ಬಹಳ ಚಿಕ್ಕ ವಯಸ್ಸಿನಿಂದ ಮನದಲ್ಲಿ ಕೂತ ಕೆಲವು ಭಯಗಳು ಎಷ್ಟೇ ದೊಡ್ಡವರಾದರು ಸಹ  ಅವುಗಳನ್ನು ಗೆಲ್ಲುವುದು ಬಹಳ ಕಷ್ಟ. ಕೆಲವು ಭಯಗಳು ನಮ್ಮೊಂದಿಗೆ ಒಂದಿಲ್ಲೊಂದು ರೂಪದಲ್ಲಿ ಸದಾ ಇರುತ್ತವೆ. ಪರೀಕ್ಷೆಯ ಹೊತ್ತಿನಲ್ಲಿ ಬಿಟ್ಟರೆ ಬೇರೆ ದಿನಗಳಲ್ಲಿ ಸಮಯ ಪದವಿ ತರಗತಿಗಳಲ್ಲಿ ಹೊಳೆ ಹರಿಯುವಂತೆ ಹರಿದು ಹೋಗುತ್ತದೆ. ಯಾರೇನೇ ಮಾಡಲಿ ಬಿಡಲಿ ಸಮಯವಂತು ಕಣ್ಮುಚ್ಚಿ ಬಿಡುವುದರೊಳಗೆ  ಕಾಲೇಜು ಮುಗಿದುಹೋಗಿರುತ್ತದೆ. ಒಂದಷ್ಟು ಗಲಾಟೆ, ತಲೆಹರಟೆ, ಹೊಸ ಕನಸುಗಳನ್ನು ಹೊತ್ತು ಕಾಲೇಜಿನಿಂದ ಹೊರನಡೆಯುತ್ತೇವೆ. 

ಡಿಗ್ರಿ ಮುಗಿಸಿದ ನಂತರವೇ ನಮ್ಮ ಅರಿವಿಗೆ ಬರುವುದು, ನಾವು ಇದುವರೆಗೆ ನಮಗೆ ಯಾವುದೇ ತೊಂದರೆಗಳಿಲ್ಲದೆ ದೊರೆಯುತ್ತಿದ್ದ ಉಚಿತವಾಗಿ ಸೌಲಭ್ಯಗಳು ಸರ್ವೇ ಸ್ವಾಭಾವಿಕವಾಗಿ ದೊರೆಯುವುದಲ್ಲ, ಅದಕ್ಕಾಗಿ ನಮ್ಮ ಮನೆಯ ಯಾರೋ ಒಬ್ಬರು ಬೆಲೆ ತೆರುತ್ತಿದ್ದರು ಎಂಬುದು. ರಶ್ಮಿಯ ಅಕ್ಕ ಈ ಹೊತ್ತಿಗಾಗಲೇ ಒಂದು ಪುಟ್ಟ ಸಂಸ್ಥೆಯಲ್ಲಿ ಶಾಲೆ ಹಾಗು ಕಾಲೇಜಿನ ಮಕ್ಕಳಿಗೆ ಕಲಿಯಲು ಸಹಾಯಕವಾಗುವಂತೆ ಕಂಟೆಂಟ್ ಸಿದ್ಧಪಡಿಸುವ ಕೆಲಸ. ನಗರದಲ್ಲೇ ಇದ್ದುಕೊಂಡು, ಕೆಲವೊಮ್ಮೆ ಲ್ಯಾಪ್ಟಾಪ್ ಮನೆಯಲ್ಲೇ ಇಟ್ಟುಕೊಂಡು ಮಾಡಬಹುದಾದ ಕೆಲಸ. ಅದೇ ಸಂಸ್ಥೆಯಲ್ಲಿ ಪರಿಚಯದ ಮೇಲೆ ತನ್ನ ತಂಗಿ ರಶ್ಮಿ ಹಾಗು ರಾಕೇಶ ಇಬ್ಬರಿಗೂ ರಮ್ಯ ಕೆಲಸ ಕೇಳಿ ಕೊಡಿಸಿದಳು. ಕಾಲೇಜು ಮುಗಿಸಿ ಕೆಲಸ ಸಿಗುವುದೇ ಕಷ್ಟವಾಗಿರುವ ಕಾಲದಲ್ಲಿ ಯಾರೋ ಪುಣ್ಯಾತ್ಮರು ಓದಿಗೆ ತಕ್ಕ ಕೆಲಸ ಹಾಗು ಕೆಲಸಕ್ಕೆ ತಕ್ಕ ಸಂಬಳ ನೀಡಿದರೆ ಅದು ಒಂದು ಅದ್ಭುತವೇ ಸರಿ. 

ರಾಕೇಶನಿಗೆ ಅಂತೂ ಈ ಅವಕಾಶ ಒಂದೇ ಕಲ್ಲಿನಲ್ಲಿ ನೂರಾರು ಹಕ್ಕಿಗಳ ಹೊಡೆಯುವ ಯೋಜನೆಯಂತೆ ಕಾಣಿಸಿತು. ಈ ಹಾಳು ಊರು, ಹೊಳೆ, ಕಪ್ಪೆಗಳು, ಏಡಿ, ಜಗಳ ಎಲ್ಲವೂ ಹಾಳಾಗಿ ಹೋಗಲಿ ಎಂದು ಮನದಲ್ಲೇ ಬೈದು ಬೆಂಗಳೂರಿಗೆ ಹೊರಟ. ರಮ್ಯ ಬಾಡಿಗೆಗೆ ಇದ್ದ ಪಿಜಿ ಹತ್ತಿರವೇ ರಾಕೇಶನಿಗೂ ಒಂದು ರೂಮು ಹುಡುಕಿದರು. ಕೆಲಸಕ್ಕೆ ಮೂರು ಜನ ಜನರು ಕೆಲವೊಮ್ಮೆ ಒಟ್ಟಿಗೆ ಹೋಗುತ್ತಿದ್ದರು, ಆಫೀಸಿನಲ್ಲಿಯೂ ಸಹ ಆಗಾಗ ಮಾತನಾಡಲು ಭೇಟಿಯಾಗುತ್ತಿದ್ದರು ಹೀಗೆ ಹಳೆಯ ಗೆಳೆತನ ಹೊಸ ನಗರದಲ್ಲಿ ಮತ್ತಷ್ಟು ಗಟ್ಟಿಯಾಗುತ್ತಾ ಹೋಯಿತು. ಒಂದು ಸಂದರ್ಭದಲ್ಲಿ ರಾಕೇಶನಿಗೆ ಹೀಗೆಯೇ ಗೆಳೆಯರಾಗಿ ಖುಷಿಯಿಂದ ಜೊತೆಗೆ ಇದ್ದು ಬಿಡೋಣವೆನ್ನಿಸಿತು. ಆದರೆ, ಪ್ರೀತಿಗೆ ಮೋಸ ಮಾಡಬಹುದೇ ಹೊರತು ಪೂರ್ತಿಯಾಗಿ ಮರೆತು ಮುಂದೆ ಸಾಗಲು ಸಾಧ್ಯವಿಲ್ಲ. ರಶ್ಮಿ ಚಂದದ ಉಡುಗೆಯಲ್ಲಿ ಅಲಂಕಾರ ಮಾಡಿಕೊಂಡು ಬಂದರಂತೂ ರಾಕೇಶನ ಪ್ರೀತಿ ಮತ್ತಷ್ಟು ಜೀವಂತವಾಗುತ್ತದೆ. ಆದರೆ, ಈ ಆಫೀಸಿನಲ್ಲಿ ಒಂದಷ್ಟು ಜನ ಟಸ್ಸು ಪುಸ್ಸು ಇಂಗ್ಲಿಷ್ ಮಾತನಾಡುವವರ ಮೇಲೆ ಸ್ವಲ್ಪ ಅಸಮಾಧಾನ ರಾಕೇಶನಿಗೆ, ಹಾಯ್ ಎಂದರೆ ಹಾಯ್, ಬೈ ಎಂದರೆ ಬೈ ಎನ್ನುವುದು ಬಿಟ್ಟರೆ ತನ್ನ ಕಾಲೇಜಿನಲ್ಲಿ ಯಾರೊಂದಿಗೂ ಇಂಗ್ಲಿಷ್ ಅಲ್ಲಿ ಅಪ್ಪಿ ತಪ್ಪಿಯೂ ಮಾತನಾಡುತ್ತಿರಲಿಲ್ಲ. ಕಾಲೇಜಿನ ಹೊರತಾಗಿ ಏನೋ ಒಂದಷ್ಟು ಇಂಗ್ಲಿಷ್ ಸಿನೆಮಾ ಸಬ್ಟೈಟಲ್ ಹಾಕಿಕೊಂಡು ನೋಡುವುದು ಬಿಟ್ಟರೆ ಇಂಗ್ಲಿಷ್ ಅಲ್ಲಿ ವ್ಯವಹರಿಸಿದ ಉದಾಹರಣೆಗಳು ಬಹಳ ಕಡಿಮೆಯೆಂದೇ ಹೇಳಬಹುದು. ಆದರೆ ರಶ್ಮಿ ಪಟಪಟ ಎಂದು ಮುತ್ತು ಸುರಿದಂತೆ ಇಂಗ್ಲಿಷ್ ಮಾತನಾಡುತ್ತಾಳೆ. ಅವಳು ಮಾತನಾಡುವುದು ಕೇಳಿದಾಗಲೆಲ್ಲ ಏನೋ ಹೆಮ್ಮ ರಾಕೇಶನಿಗೆ, ಯಾವ ಕಾರಣಕ್ಕೆ ಎಂಬುದು ಮಾತ್ರ ಗೊತ್ತಿಲ್ಲ. 

ಕೆಲವೊಮ್ಮೆ ವೀಕೆಂಡ್ ಅಲ್ಲಿ ಆಫೀಸಿನ ಗೆಳೆಯರೊಂದಿಗೆ ಪ್ರವಾಸ ಹೋದಾಗ ಅಲ್ಲಿನ ಪ್ರಕೃತಿ ಸೌಂದರ್ಯ ಕಂಡಾಗ ರಾಕೇಶನಿಗೆ ತನ್ನ ಊರಿನ ಹೊಳೆ ನೆನಪಾಗುತ್ತದೆ. ಅಷ್ಟೆಲ್ಲಾ ವರ್ಷ ಹೊಳೆಯ ಬದಿಯಲ್ಲಿ ಜೀವನ ಸಾಗಿಸಿದ್ದರು ಸಹ ಗದ್ದೆಗೆ ಹಾಕಿದ ಒಂದಷ್ಟು ರಾಸಾಯನಿಕಗಳು ಹೊಳೆಗೆ ಸೇರಿರಬಹುದೇ ಹೊರತು ಹೊಳೆಯ ನೀರಿಗೆ ನೇರವಾಗಿ ರಾಸಾಯನಿಕಗಳ ಮಿಶ್ರಿತ ಕೊಳಚೆ ನೀರನ್ನು ನೇರವಾಗಿ ಬಿಟ್ಟಿಲ್ಲ. ಸ್ವಲ್ಪ ಹೊತ್ತು ಮರದ ನೆರಳಿನಲ್ಲಿ ಕೂತು ವಿಶ್ರಾಂತಿ ಪಡೆಯುವಂತಿಲ್ಲ, ಬಾಯಾರಿಕೆಯಾದರೆ ಹಣ ಕೊಟ್ಟು ನೀರು ಕುಡಿಯಬೇಕು, ಮಾತನಾಡಲು ಸಹ ಯಾವುದೊ ಸಂದರ್ಭಕ್ಕಾಗಿ ಕಾಯಬೇಕಾದ ಪರಿಸ್ಥಿತಿ,  ಅಪ್ಪ ಅಮ್ಮನನ್ನು ಮೊದಲ ಬಾರಿಗೆ ಊರಿನಲ್ಲಿ  ಬಿಟ್ಟು ಬಂದ ಬೇಜಾರು ಒಂದೆಡೆ, ರಶ್ಮಿಯ ಪ್ರೀತಿ ಮಾತ್ರ ಮರೀಚಿಕೆಯಾಗಿದೆ. ಹಣ ಖರ್ಚು ಮಾಡುವ ಮೂಲಕ ಕ್ಷಣಿಕ ಸುಖ ಪಡೆಯುವ ಒಂದಷ್ಟು ದಾರಿಗಳನ್ನು ಬಿಟ್ಟರೆ ನಗರದಲ್ಲಿ ತಾನು ಏಕಾಂಗಿ ಎನ್ನುವ ನೋವು ಹಲವು ಬಾರಿ ಕಾಡುತ್ತದೆ. ಇದೆಲ್ಲ ನೋವು ದುಃಖ ಸಂಕಟ ಏನೇ ಇರಲಿ, ರಶ್ಮಿ ಒಂದೆರಡು ಮಾತುಗಳನ್ನು ನಗುನಗುತ್ತಾ ಖುಷಿಯಿಂದ ಮಾತನಾಡಿದರೆ ಸಾಕು, ಎಲ್ಲವೂ ಮರೆತು ಹೊಸ ಉತ್ಸಾಹ ಮೂಡುತ್ತದೆ. ಹೀಗೆ ದಿನಗಳು ಕಳೆಯುತ್ತಿರುವಾಗ ಒಂದು ಮಾತು ಯಾರಿಂದಲೋ ರಾಕೇಶನ ಕಿವಿಗೆ ಬಿತ್ತು. ಆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ರಶ್ಮಿಯ ಹಿಂದೆ ಬಿದ್ದಿದ್ದಾನೆ ಎನ್ನುವ ವಿಷಯ. ಇದಕ್ಕಿಂತ ಬಹಳ ಬೇಸರದ ವಿಷಯ ಎಂದರೆ ರಶ್ಮಿಗೂ ಅವನು ಇಷ್ಟ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ರಶ್ಮಿ ಕೂಡ ಅವನೊಂದಿಗೆ ಬಹಳ ಸಲಿಗೆಯಿಂದ ಮಾತನಾಡುವುದನ್ನು ರಾಕೇಶನು ಸಹ ಮೊದಲು ನೋಡಿದ್ದರು ಸಹ ಈ ಯೋಚನೆ ಅವನಿಗೆ ಬಂದಿರಲಿಲ್ಲ. 

ಅವನ ಹೆಸರು ವಿಶ್ವಾಸ, ಹೆಸರಿಗೆ ತಕ್ಕ ನಡವಳಿಕೆ. ಮೊದಲ ಬಾರಿಗೆ ರಾಕೇಶನನ್ನು ಮಾತನಾಡಿಸಿದ ಸಂದರ್ಭ ನೆನಪಿಸಿಕೊಂಡರೆ ರಾಕೇಶ ಅವನು ಮಾತನಾಡುವ ಪರಿಯನ್ನು ನೋಡಿ ಇವನೇ ಇಲ್ಲಿಗೆ ಮ್ಯಾನೇಜರ್ ಎಂದುಕೊಂಡಿದ್ದ. ಎಂತಹವರನ್ನು ಸಹ ಧೈರ್ಯದಿಂದ ಮಾತನಾಡಿಸುವ ಸ್ವಭಾವ. ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ ತಾವಿಲ್ಲದೆ ಏನಾಗುವುದಿಲ್ಲ ಎಂಬ ಗತ್ತು ತೋರಿಸುವ ಗುಣ ಹೊಂದಿರುವ ಜನರಂತೆ ಅವನು. ಮನೆಯಲ್ಲಿಯೂ ಬಹಳ ಶ್ರೀಮಂತರೆಂದು ಕಾಣುತ್ತದೆ, ಐಫೋನು, ಹಾಕುವ ಬ್ರಾಂಡೆಡ್ ಬಟ್ಟೆಗಳು, ಓಡಾಡಲು ದುಬಾರಿ ಬೈಕು, ರಜೆ ಬಂತೆಂದರೆ ಪ್ರವಾಸ ಹೋಗಿ ಹಂಚಿಕೊಳ್ಳುವ ಆತನ ಇನ್ಸ್ಟಾಗ್ರಾಮ್ ಪೋಸ್ಟು, ಸ್ಟೋರಿಗಳು ಹೀಗೆ ನಗರಕ್ಕೆ ಹೇಳಿ ಮಾಡಿಸಿದ ಜೀವನ ಶೈಲಿ. 

ರಶ್ಮಿಗೂ ರಜೆಯಲ್ಲಿ ಹಾಗೆ ಕಾಲ ಕಳೆಯುವುದೆಂದರೆ ಬಹಳ ಇಷ್ಟ. ಕೆಲವೊಮ್ಮೆ ಅವರದೇ ಐದಾರು ಜನರ ಗುಂಪು ಪ್ರವಾಸ ಹೋಗುತ್ತಾರೆ. ರಾಕೇಶ ಅಷ್ಟು ಪರಿಚಯವಿದ್ದರೂ ಸಹ ಕೆಲವೊಮ್ಮೆ ರಶ್ಮಿಯ ಅಕ್ಕ ರಮ್ಯ ಬಾಯಿಮೇಲಕ್ಕೆ ಕರೆಯಬೇಕಲ್ಲ ಎಂದು ಕರೆಯುವುದು. ಹೆಚ್ಚು ಒತ್ತಾಯಿಸದೆ ಯಾವುದಕ್ಕೂ ಹೂ ಅನ್ನುವ ಸ್ವಭಾವ ರಾಜೇಶನದಲ್ಲ. ನಗರದಲ್ಲಿ ಬೇರೆಯವರನ್ನು ಹೆಚ್ಚು ಒತ್ತಾಯಿಸಲು ಸಮಯ ಕಳೆಯುವಷ್ಟು ತಾಳ್ಮೆ ಯಾರಿಗೂ ಇರುವುದಿಲ್ಲ. ಹೀಗಾಗಿ ಒಂದೆರಡು ಟ್ರಿಪ್ ತಪ್ಪಿಸಿಕೊಂಡ ನಂತರ ಯಾರು ಸಹ ರಾಕೇಶನನ್ನು ಹೆಚ್ಚು ಒತ್ತಾಯಿಸಲು ಹೋಗುವುದಿಲ್ಲ. ಹಿಂದೊಮ್ಮೆ ಎಲ್ಲಿಗೋ ಹೋದಾಗ ಪಾರ್ಸಲ್ ತೆಗೆದುಕೊಂಡು ಹೋಗಿದ್ದ ಆಹಾರವನ್ನು ಬೆಟ್ಟದ ಮೇಲೆ ತಿಂದು, ಪ್ರವಾಸಿಗರು ಸೃಷ್ಟಿಸಿದ್ದ  ಒಂದು ತಿಪ್ಪೆಗುಂಡಿಗೆ ಉಳಿದದ್ದೆಲ್ಲ ಎಸೆದು ಬಂದಾಗ ಅಲ್ಲಿದ್ದ ಕೋತಿಗಳೆಲ್ಲ ಅದನ್ನು ತಿನ್ನಲು ಪ್ರಯತ್ನಿಸಿದ್ದು ಕಂಡು ರಾಕೇಶನ ಮನಸ್ಸೇ ಒಡೆದುಹೋಗಿತ್ತು. ಇದನ್ನೆಲ್ಲಾ ಅವರಿಗೆ ಹೇಳಲು ಹೋದರೆ "ಡೋಂಟ್ ಬಿ ಸೊ ಎಮೋಷನಲ್" ಅಂತೆಲ್ಲ ಉದ್ದ ಭಾಷಣ ಮಾಡುತ್ತಾರೆ. ಮತ್ತೆ ಇದೆ ಜನ ಇನ್ಸ್ಟಾಗ್ರಾಮ್ ಅಲ್ಲಿ ಫೋಟೋ ಹಾಕುವಾಗ "ಕಾಡು ಉಳಿಸಿ, ನಾಡು ಬೆಳೆಸಿ", "ಹಸಿರೇ ಉಸಿರು", "ನೇಚರ್ ಕ್ಯಾನ್ ಹೀಲ್ ಎವರಿಥಿಂಗ್" ಅಂತೆಲ್ಲ ಬರೆಯುತ್ತಾರೆ. ಅಸಲಿಗೆ ಹೆಚ್ಚಿನ ಜನರಿಗೆ ಎಲ್ಲರು ಮಾಡುತ್ತಿದ್ದಾರೆ ನಾವು ಸಹ ಗುಂಪಿನಲ್ಲಿ ಗೋವಿಂದ ಆಗೋಣ ಎನ್ನುವ ಆಲೋಚನೆಯೇ ಹೊರತು ನಮ್ಮ ನಾಡಿನ ನೈಸರ್ಗಿಕ ಸಂಪತ್ತನ್ನು ಉಳಿಸಿವ ಯಾವ ಕಾಳಜಿಯೂ ಇರುವುದಿಲ್ಲ, ಇದ್ದರು ಸಹ ಅದಕ್ಕೆ ಸರಿಯಾಗಿ ರಾಜಕಾರಣಿಗಳ ಬೆಂಬಲ ದೊರೆಯುವುದಿಲ್ಲ. ಹೀಗಾಗಿ ಪರಿಸರದಲ್ಲಿ ನಾವಿರುವುದು ಎನ್ನುವ ಆಲೋಚನೆ ಬಹಳಷ್ಟು ಜನರಿಗೆ ಇಲ್ಲ, ನಮ್ಮೊಂದಿಗೆ ಪರಿಸರವಿದೆ ಎನ್ನುವ ಧೋರಣೆಯ ಹಲವಾರು ಜನರನ್ನು ನಗರಗಳಲ್ಲಿ ನೋಡಬಹುದು. ಯಾಕೋ ಆ ಜೀವನಶೈಲಿಯ ತಳುಕು ಬಳುಕುಗಳು ರಾಕೇಶನಿಗೆ ಅಷ್ಟು ಹಿಡಿಸಲೇ ಇಲ್ಲ. ಊರಿನ ಒಂದಷ್ಟು ಜನ ಪರಿಚಿತರು ಬೆಂಗಳೂರಿನಲ್ಲಿ ಇದ್ದರು ಸಹ ಅವರಿಗೆಲ್ಲ ಹಣ ಪೀಕುವ ಯೋಚನೆಯೇ ಜಾಸ್ತಿ. 

ಈ ರಶ್ಮಿ ಯಾಕೋ ದಿನ ಹೋದಂತೆ ಅಪರಿಚಿತಳಂತೆ ಆಡುತ್ತಿದ್ದಾಳೆ. ಇದೆ ಸಮಯದಲ್ಲಿ ರಶ್ಮಿಯ ಅಕ್ಕನಿಗೆ ಸಂದೇಶ ಎಂಬ ಹುಡುಗನ ಜೊತೆಗೆ ಮದುವೆ ನಿಶ್ಚಯ ಆಯಿತು. ದೂರದ ಸಂಬಂಧಿಯಂತೆ, ಕಾಲೇಜಿನಲ್ಲಿ ಒಟ್ಟಿಗೆ ಓದಿದವರಂತೆ, ಹೀಗೆ ಒಂದು ತರಹದ ಮದುವೆ. ರಾಕೇಶನಿಗೆ ರಶ್ಮಿಯ ಅಕ್ಕ ರಮ್ಯ ಅಷ್ಟು ಚಾಲಾಕಿ ಎನ್ನುವ ಯಾವ ಯೋಚನೆಯು ಬಂದಿರಲಿಲ್ಲ. ಸದಾ ಕೆಲಸದಲ್ಲಿ ಮುಳುಗಿರುವ, ಕೇಳಿದಾಗಲೆಲ್ಲ ಬಯ್ಯದೆ ಸಹಾಯ ಮಾಡುವ ದೇವರಂತೆ ರಮ್ಯ. ತನಗೆ ಸ್ವಂತ ಅಕ್ಕನಿಲ್ಲದೆ ಹೋದರು ಸಹ ರಮ್ಯ ರಾಕೇಶನಿಗೆ ಸಾಕಷ್ಟು ಸಹಾಯ ಮೊದಲಿನಿಂದಲೂ ಮಾಡಿದ್ದಳು. ಮೂವರು ಸಹ ಹೇಗೋ ಒಂದಷ್ಟು ದಿನ ರಜೆ ಪಡೆದು, ಮದುವೆಯ ಕೆಲಸಗಳೆಲ್ಲ ತನ್ನ ಸ್ವಂತ ಮನೆಯ ಕೆಲಸಕ್ಕಿಂತ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ರಾಕೇಶನ ಮನೆಯವರು ತಮಗಾದ ಸಹಾಯ ಮಾಡಿ ನಡೆಸಿಕೊಟ್ಟರು. 

ಆಫೀಸಿನ ಗೆಳೆಯರು ಸಹ ಬಂದಿದ್ದರು. ರಾಕೇಶನ ಊರು, ಮನೆ, ಹೊಳೆ, ಏಕಾಂತ ಮುಂತಾದ ಲಕ್ಷಣಗಳನ್ನು ಕಂಡು ಕೆಲವರಿಗಂತೂ ಇಲ್ಲೇ ಒಂದಷ್ಟು ದಿನ ಇದ್ದುಬಿಡೋಣ ಎನ್ನಿಸಿತು. ರಾಕೇಶನ ಒಂದಿಬ್ಬರು ಸಹೋದ್ಯೋಗಿ ಸ್ನೇಹಿತರು ಹುಷಾರಿಲ್ಲದ ಕಾರಣ ಹೇಳಿ ಒಂದೆರಡು ದಿನ ಜಾಸ್ತಿಯೇ ರಜೆ ಹಾಕಿ ರಾಕೇಶನ ಮನೆಯಲ್ಲಿ ಉಳಿದಿದ್ದರು. ರಾಕೇಶನ ಅಪ್ಪ ಅಮ್ಮನಿಗೂ ಬಹಳ ಖುಷಿ, ಇಬ್ಬರೇ ಮನೆಯಲ್ಲಿ ಇದ್ದು ಇದ್ದು ಬಹಳ ಬೇಸರವಾಗಿತ್ತು ಅವರಿಗೂ ಸಹ. ಆದರೆ, ರಾಕೇಶನ ಗಮನ ರಶ್ಮಿ ಹಾಗು ವಿಶ್ವಾಸರ ಮೇಲಿತ್ತು. ಅದೇನೋ ಬಹಳ ಖುಷಿಯಿಂದ ವಿಶ್ವಾಸ ಅಲ್ಲಿಲ್ಲಿ ಸುತ್ತಾಡುತ್ತಿದ್ದ, ರಾಕೇಶ ತನ್ನ ಮನೆಗೆ ಕರೆಯದಿದ್ದರೂ ಅವನಾಗಿಯೇ ಬಂದ. ಹಾಗೆ ಒಂದಷ್ಟು ಹೊತ್ತು ಮಾತನಾಡಿ ಬಂದ ದಿನವೇ ವಾಪಸ್ಸು ಹೊರಟು ಹೋದ. ರಾಕೇಶನ ಅಮ್ಮ, ರಶ್ಮಿಯ ಅಮ್ಮನೊಂದಿಗೆ ಸೇರಿ ಕಣ್ಣೀರಿಟ್ಟರು. ಇದನ್ನೆಲ್ಲಾ ನೋಡುತ್ತಿದ್ದ ರಾಕೇಶನಿಗೂ ಅಳು ಬಂದಂತಾಯಿತು. ರಶ್ಮಿಯೂ ಹೀಗೆ ಬೇರೆಯವರನ್ನು ಮದುವೆಯಾದರೆ ಆಗೇನು ಮಾಡುವುದು ಎಂಬ ಭಯ ಕೂಡ ಮನಸ್ಸಿನಲ್ಲಿ ಆಗಾಗ ಮೂಡುತ್ತಿತ್ತು. 

ರಮ್ಯ ಸಹ ಮದುವೆಯಾಗಿ ಬೆಂಗಳೂರಿಗೆ ಬಂದ ನಂತರವೂ ಅದೇ ಸಂಸ್ಥೆಯಲ್ಲಿ ಕೆಲಸ ಮುಂದುವರೆಸಿದಳು. ಈಗ ತಾನೇ ಕಾಲೇಜಿನ ಹುಡುಗರಿಗೆ ಗಣಿತದ ತರಗತಿಗಳನ್ನು ತೆಗೆದುಕೊಳ್ಳುತ್ತಾಳೆ. ವಿದ್ಯಾರ್ಥಿಗಳಿಂದ ಬರುವ ಫೀಡ್ಬ್ಯಾಕ್ ಮೂಲಕ ಪಾಠ ಮಾಡುವ ಗುಣಮಟ್ಟವನ್ನು ಅಳೆಯಲಾಗುತ್ತದೆ. ಹೀಗಾಗಿ ಎರಡು ಮೂರು ತಿಂಗಳ ಕೊನೆಯಲ್ಲಿ ಬಹಳ ಚಿಂತೆಯಿಂದ ಕೂಡಿರುತ್ತಾಳೆ. ಸಂಬಳ ಹೆಚ್ಚಾದಂತೆ ಜವಾಬ್ದಾರಿಯು ಹೆಚ್ಚು. ರಾಕೇಶ ಕೂಡ ಸಾಕಷ್ಟು ಕಲಿತಿದ್ದಾನೆ ಕೆಲಸಕ್ಕೆ ಸೇರಿದ ನಂತರ. ಕೆಲವೊಮ್ಮೆ ತನ್ನ ಊರಿನ ಹಳ್ಳಿಗಾಡಿನ ಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸವಿದ್ದರೆ ಬಹಳ ಚೆನ್ನಾಗಿರುತಿತ್ತು ಎನ್ನುವ ಆಸೆಯಾಗುತ್ತದೆ. ಆದರೆ, ಅಲ್ಲಿ ಒಂದು ಶಾಲೆಯಲ್ಲಿ ಕೆಲಸ ಸಿಕ್ಕಿದರೆ ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ಬೇರೆ ಕೆಲಸಗಳ ಮಾಡುವುದರಲ್ಲೇ ಸಮಯ ಹಾಳಾಗುತ್ತದೆ. ಆದರೆ ಇತ್ತೀಚಿಗೆ ಸಂಸ್ಥೆಯಲ್ಲಿ ಒಂದಷ್ಟು ಜನರನ್ನು ಕೆಲಸದಿಂದ ಕೈಬಿಡುವ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಯಾರಿಲ್ಲದೆ ಸರಿಯಾಗಿ ಕಾರ್ಯನಿರವಹಿಸಲು ಸಾಧ್ಯವೇ ಇಲ್ಲವೋ ಅಂತಹ ಜನರನ್ನು ಬಿಟ್ಟು ಉಳಿದವರನ್ನು ಮೊದಲು ಕೈಬಿಡುವ ಯೋಜನೆ. 

ಒಂದು ದಿನ ಶುಕ್ರವಾರ ಬೆಳಿಗ್ಗೆ ತಿಂಗಳ ಕೊನೆಯ ಕೆಲಸದ ದಿನ ಇದ್ದಕ್ಕಿದ್ದ ಹಾಗೆ ಒಂದಷ್ಟು ಜನರಿಗೆ ಇಮೇಲ್ ಬಂತು. ವಿಷಯ ಇಷ್ಟೇ, "ಅನಿವಾರ್ಯ ಕಾರಣಗಳಿಂದ ನೀವು ಕೆಲಸದಲ್ಲಿ ಮುಂದುವರೆಯಲು ಸಾಧ್ಯವಿಲ್ಲ, ಸಂಸ್ಥೆಯ ಎಲ್ಲ ವಸ್ತುಗಳನ್ನು ಹಿಂತಿರುಗಿಸಿದ ನಂತರ ಸಂಸ್ಥೆಯಿಂದ ನೀಡುವ ಎಲ್ಲ ದಾಖಲೆ ಹಾಗು ಪ್ರಮಾಣ ಪತ್ರಗಳನ್ನು ಕಳುಹಿಸಿಕೊಡಲಾಗುವುದು, ತಮ್ಮ ಕೊಡುಗೆಗೆ ಧನ್ಯವಾದಗಳು, ಮುಂದಿನ ದಿನಗಳಿಗೆ ಶುಭಾಶಯಗಳು" ಎಂದು. ಆಶ್ಚರ್ಯವೆಂಬಂತೆ ರಶ್ಮಿ ಹಾಗು ವಿಶ್ವಾಸ ಇಬ್ಬರು ಸಹ ಈ ಪಟ್ಟಿಯಲ್ಲಿ ಇದ್ದರು. ರಾಕೇಶ ಮತ್ತು ರಮ್ಯ ಅವರ ಕೆಲಸ ಹೋಗಿರಲಿಲ್ಲ. 

ರಶ್ಮಿ ಬಹಳ ಸಿಟ್ಟಿನಿಂದ ಆಫೀಸಿನಿಂದ ತನ್ನ ರೂಮಿಗೆ ಹೊರಟು ಹೋಗಿದ್ದನ್ನು ರಾಕೇಶ ದೂರದಿಂದ ನೋಡಿದ. ವಿಶ್ವಾಸ ಇದೆಲ್ಲ ಮಾಮೂಲಿ ಎಂಬಂತೆ ಏನೋ ದೊಡ್ಡ ಇಮೇಲ್ ಬರೆದು ಎಲ್ಲರಿಗು ಧನ್ಯವಾದ ತಿಳಿಸಿ ಮಧ್ಯಾಹ್ನದ ಹೊತ್ತಿಗೆ ಹೊರಟು ಹೋದ. ರಾಕೇಶ ಮಾತ್ರ ಕಂಗಾಲಾಗಿ ಹೋಗಿದ್ದ. ಇದೇನು ಹೀಗೆ ಆಯಿತಲ್ಲ ಎನ್ನುವ ಯಾರನ್ನೋ ಕಳೆದುಕೊಂಡ ಭಾವನೆ ಅವನ ಮನಸ್ಸನ್ನು ವಾರಾಂತ್ಯ ಪೂರ್ತಿ ಆವರಿಸಿತು. ರಶ್ಮಿಯನ್ನು ಭೇಟಿಯಾಗಲು ಅವಳಿರುವಲ್ಲಿಗೆ ಹೋದ. ಅವಳೋ ಮೇಲ್ನೋಟಕ್ಕೆ ಕೋಪದಿಂದ ಕುದಿಯುತ್ತಿದ್ದರು ಸಹ ಒಳಗೆ ದುಃಖದ ಸಮುದ್ರದಲ್ಲಿ ಮುಳುಗುತ್ತಿದ್ದಳು. ರಾಕೇಶನ ಮುಂದೆ ಸೋಲೊಪ್ಪುವಂತೆ ಆಗಬಾರದು ಎಂದೋ ಏನೋ ಬಹಳ ಕೃತಕವಾಗಿ ಮಾತನಾಡುತ್ತಿದ್ದಳು. ರಾಕೇಶನಿಗೆ ಹೇಗೆ ಸಮಾಧಾನ ಮಾಡಬೇಕೆಂಬ ಯಾವ ಯೋಚನೆಯೂ ಅಷ್ಟು ಸರಿಯಾಗಿ ಕಾಣಲಿಲ್ಲ, ಅಷ್ಟು ಹೊತ್ತಿಗೆ ರಶ್ಮಿಯ ಅಕ್ಕ ರಮ್ಯ ಸಹ ಬಂದಳು. ತನ್ನ ಗಂಡನ ಸಂಸ್ಥೆಯಲ್ಲಿ ಒಂದೆರಡು ಕೆಲಸಗಳು ಖಾಲಿ ಇವೆಯೆಂದು, ಸಂದರ್ಶನ ನೀಡಿದರೆ ಕೆಲಸ ಸಿಗಬಹುದೆಂದು ಸ್ವಲ್ಪ ಸಮಾಧಾನ ಮಾಡಿದಳು. ರಶ್ಮಿಯ ಕೋಪ ಮಾತ್ರ ಯಾರೇನು ಹೇಳಿದರು ಕಡಿಮೆಯಾಗಲಿಲ್ಲ, ಜೋರಾಗಿ ಅಳಲು ಶುರು ಮಾಡಿ ರಾಕೇಶನನ್ನು ಹೊರ ಹೋಗುವಂತೆ ಕೂಗಾಡಿಬಿಟ್ಟಳು. ರಮ್ಯ ಕಣ್ಣಿನ ಸನ್ನೆಯಲ್ಲೇ ರಾಕೇಶನಿಗೆ ಸೂಚಿಸಿದಳು. 

ರಾಕೇಶ ಸುಮ್ಮನೆ ಹೊರ ಬಂದು ಅಲ್ಲಿಯೇ ಹೊರಗೆ ನಿಂತು ಏನೋ ಚಿಂತಿಸುತಿರುವಂತೆ ಸುಮ್ಮನೆ ಏನೋ ನೋಡುತ್ತಾ ನಿಂತಿದ್ದ. ಏನು ಮಾಡದೇ ನನ್ನ ಮೇಲೆ ಅರಚಾಡಲು ಏನಾಗಿದೆ ಇವಳಿಗೆ ಎಂಬುದೇ ಅರ್ಥವಾಗಲಿಲ್ಲ. ಆಗಾಗ ಹೋಗುವ ಹೋಟೆಲಿಗೆ ಹೋಗಿ ಕಾಫೀ ಕುಡಿದು ಮತ್ತೆ ತನ್ನ ರೂಮಿನ ಬಳಿ ಹೋದ. ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ, ಆದರೆ ಇರುವ ಕೆಲಸ ಯಾವುದೊ ಕಾರಣಕ್ಕೆ ಕಳೆದುಕೊಳ್ಳುವುದು ಒಂದಷ್ಟು ಸಮಯ ಏನು ಮಾಡಲು ಸಹ ಯೋಚಿಸಲಾಗದ ಸ್ಥಿತಿಗೆ ವ್ಯಕ್ತಿಯನ್ನು ಕೊಂಡೊಯ್ಯುತ್ತದೆ. ಇಷ್ಟು ದಿನವಿದ್ದ ರಶ್ಮಿಯ ಮಾತುಕತೆ ಕೂಡ ಇದರಿಂದ ದೂರವಾಯಿತು. ರಾಕೇಶನಿಗೂ ಕೆಲಸದಲ್ಲಿ ಹೆಚ್ಚು ಸಮಯ ಕಳೆಯುವಂತೆ ಆಯಿತು. ಒಂದೆರಡು ತಿಂಗಳು ಕೆಲಸಕ್ಕಾಗಿ ಹುಡುಕಿ ಕೊನೆಗೆ ಒಂದು ಪುಸ್ತಕ ಪ್ರಕಾಶನ ಸಂಸ್ಥೆಯಲ್ಲಿ ರಶ್ಮಿಗೆ ಕೆಲಸ ದೊರೆಯಿತು. ಇತ್ತೀಚಿಗೆ ಅವಳು ಸಿಗುವುದೇ ಕಡಿಮೆ. ಆದರೆ ಒಂದು ದಿನ ವಿಶ್ವಾಸ ಕರೆ ಮಾಡಿ ತಾವು ಆಫೀಸಿನ ಬಳಿ ದಿನವೂ ಹೋಗುತ್ತಿದ್ದ ಹೋಟೆಲು ಒಂದರಲ್ಲಿ ಭೇಟಿಯಾಗೋಣ, ಎಲ್ಲಾ ಹಳೆಯ ಗೆಳೆಯರು ಬರುತ್ತಾರೆ ಎಂದಾಗ ರಾಕೇಶನು ಸಹ ಒಪ್ಪಿದ. ರಶ್ಮಿ ಮೊದಲೇ ಬಂದು ವಿಶ್ವಾಸನ ಪಕ್ಕದ ಕುರ್ಚಿಯಲ್ಲಿ ಕೂತಿದ್ದಳು. ಇದನ್ನು ನೋಡಿದ ರಾಕೇಶನಿಗೆ ತಲೆಯೇ ಓಡದಂತಾಯ್ತು. ಅವನೇನು ಹೇಳಿದರು ಸುಮ್ಮನೆ ಹೂ ಗುಟ್ಟುತ್ತಾ ಕಾಲ ಕಳೆದು ಬಂದ. ರಶ್ಮಿ ಆತನೊಂದಿಗೆ ಬೈಕಿನಲ್ಲಿ ಕೂತು ಹೊರಟು ಹೋದಳು. ಒಂದಷ್ಟು ದಿನ ಅವಳ ಸಹವಾಸವೇ ಬೇಡವೆಂಬಂತೆ ತನ್ನ ಸಾಮಾಜಿಕ ಜಾಲತಾಣಗಳ ಅಪ್ಲಿಕೇಶನ್ ಮೊಬೈಲ್ ಇಂದ ತೆಗೆದುಹಾಕಿದ್ದ. ಹೀಗಾಗಿ ಇವರು ಇನ್ನು ಸಹ ಹತ್ತಿರವಿರುವ ಸೂಚನೆಗಳು ರಾಕೇಶನಿಗೆ ತಲುಪಿರಲಿಲ್ಲ. 

ರೂಮಿಗೆ ಬಂದು ರಾಕೇಶ ಬಹಳ ಚಿಂತಿಸಿದ. ಹತ್ತಿರವಾಗಲು ಪ್ರಯತ್ನಿಸಿದಷ್ಟೂ ಸಹ ದೂರ ಹೋಗುತ್ತಾಳಲ್ಲ ಏನಾಗಿದೆ ಇವಳಿಗೆ ಎಂದು. ವಿಶ್ವಾಸನ ಹೆಸರನ್ನು ಬಿಟ್ಟರೆ ಆತನ ಮೇಲೆ ವಿಶ್ವಾಸ ಇಡುವಂತಹ ವ್ಯಕ್ತಿಯೇ ಅಲ್ಲ ಎಂಬುದನ್ನು ಹಲವಾರು ಸಹೋದ್ಯೋಗಿ ಹುಡುಗಿಯರೇ ಹೇಳಿದ್ದಾರೆ. ರಶ್ಮಿಗೆ ಅದನ್ನೆಲ್ಲ ಹೇಳಲು ಹೋದರೆ ನನ್ನ ಮೇಲೆಯೇ ರೇಗುತ್ತಾಳೆ. ರಮ್ಯಳಿಗೆ ಹೇಳಿದರೆ ಸ್ವಲ್ಪ ಬುದ್ಧಿ ಹೇಳಬಹುದೇನೋ ಆದರೆ ಅವಳು ಸಹ ಇತ್ತೀಚಿಗೆ ಏನೋ ಬಹಳ ಗಡಿಬಿಡಿಯಲ್ಲಿ ಇರುತ್ತಾಳೆ. ಇದೇನು ಹೊಟ್ಟೆಕಿಚ್ಚೋ ಅಥವಾ ಜಾಣಕುರುಡೋ ಏನೆಂದು ಅರ್ಥವಾಗಲಿಲ್ಲ ರಾಕೇಶನಿಗೆ. ತಾನು ರಶ್ಮಿಯ ಹಿಂದೆ ಬಿದ್ದಾಗ ಬೈದು ಬುದ್ಧಿ ಹೇಳಿದ್ದ ರಮ್ಯ ಈಗ ಎಲ್ಲವೂ ಸರಿಯಿದೆ ಎನ್ನುವಂತೆ ನಟಿಸುತ್ತಾಳೆ. ಅಥವಾ ಅವಳೇ ಪ್ರೀತಿಸಲು ಶುರು ಮಾಡಿದ ಮೇಲೆ ಅವಳ ನಿರ್ಧಾರಗಳು ಬದಲಾಗಿವೆಯೇ ಏನೆಂದು ಸಹ ಅರ್ಥವಾಗಲಿಲ್ಲ. ಈ ಮೌನದಿಂದ ಏನು ಸಹ ಸಾಧಿಸಲು ಸಾಧ್ಯವಿಲ್ಲ, ರಶ್ಮಿ ತನ್ನ ಮಾತುಗಳನ್ನು ಪೂರ್ತಿ ಕೇಳಲು ಅಥವಾ ಅರ್ಥ ಮಾಡಿಕೊಳ್ಳುವ ತಾಳ್ಮೆ ತೋರಿಸುವುದಿಲ್ಲ. ಅದರ ಬದಲು ಆಕೆಯ ಅಕ್ಕನಿಗೆ ಹೇಳಿದರೆ, ಅವಳಾದರೂ ರಶ್ಮಿಗೆ ಬುದ್ಧಿ ಹೇಳಿ ತನ್ನ ಪ್ರೀತಿಯನ್ನು ಅರ್ಥ ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಬಹುದು ಅನ್ನಿಸಿತು. 

ಕೂಡಲೇ ಮೊಬೈಲ್ ತೆಗೆದುಕೊಂಡು ವಾಟ್ಸಾಪಿನಲ್ಲಿ ಉದ್ದದ ಸಂದೇಶವೊಂದನ್ನು ಬರೆದು ರಮ್ಯಳಿಗೆ ಕಳುಹಿಸಿದ. ಆಕೆಯ ಮೊಬೈಲ್ ಇಂಟರ್ನೆಟ್ ಆಫ್ ಇತ್ತು, ಅದರಿಂದ ಇನ್ನು ಸಹ ಆಕೆ ಅದನ್ನು ನೋಡಿರಲಿಲ್ಲ. ಅದೇಕೋ ಒಂದೆರಡು ನಿಮಿಷಗಳ ನಂತರ ಇವಳು ಇನ್ಯಾರಿಗೆ ಹೇಳಿ ದೊಡ್ಡ ರಂಪಾಟ ಮಾಡುತ್ತಾಳೋ ಎನ್ನುವ ಭಯವೂ ಆಯಿತು. ಕಳುಹಿಸಿದ ಮೆಸೇಜ್ ಡಿಲೀಟ್ ಮಾಡೋಣವೆಂದರೆ ಅದು ಕೂಡ ಸೇವ್ ಆಗುವಂತಹ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡಿದ್ದಾಳೆ. ಇನ್ನು ಇಂತಹದಕ್ಕೆಲ್ಲ ಹೆದರಿ ಪ್ರಯೋಜನವಿಲ್ಲ ಎಂಬುದೊಂದೇ ಸಧ್ಯಕ್ಕೆ ಧೈರ್ಯ ತುಂಬುವ ಯೋಚನೆಯಾಗಿತ್ತು. ರಮ್ಯ ಸಂಜೆ ಹೊತ್ತಿಗೆ ಕರೆ ಮಾಡಿ ಭೇಟಿಯಾಗುವಂತೆ ಹೇಳಿದಳು. ರಶ್ಮಿ ಹಾಗು ವಿಶ್ವಾಸ ಇಬ್ಬರು ಒಬ್ಬೊರನ್ನೊಬ್ಬರು ಪ್ರೀತಿಸುತ್ತಿದ್ದಾರೆ, ಈ ಸಂದರ್ಭದಲ್ಲಿ ನನ್ನಿಂದ ಏನು ಸಹ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ವಾಪಸ್ಸು ಹೊರಟು ಹೋದಳು. ರಶ್ಮಿಯನ್ನು ಭೇಟಿಯಾಗಿ ಒಮ್ಮೆ ಇದನ್ನು ಹೇಳಿದರು ಸಹ ಬಹಳ ಹಿಂದಿನ ಉತ್ತರವನ್ನೇ ನೀಡಿದಳು. 

ಹೀಗೆ ಒಂದಷ್ಟು ತಿಂಗಳು ಕಳೆಯಿತು. ಅವರಿಬ್ಬರು ರಾಕೇಶ ಊಹಿಸಿದಂತೆ ದೂರವಾಗಲೇ ಇಲ್ಲ. ಮನೆಯಲ್ಲಿ ಅಪ್ಪ ಅಮ್ಮ ಸಹ ಊರಿನ ಹತ್ತಿರವೇ ಸಣ್ಣ ಪುಟ್ಟ ಕೆಲಸ ಹುಡುಕಿಕೊಂಡರೆ ತಮಗೂ ಸಾಕಷ್ಟು ಸಹಾಯವಾಗುತ್ತದೆ ಎಂದೆಲ್ಲ ಬಹಳಷ್ಟು ದಿನಗಳಿಂದ ಹೇಳಿದರು ಸಹ ಅದನ್ನೆಲ್ಲ ಹೆಚ್ಚು ಕಿವಿಗೆ ಹಾಕಿಕೊಂಡಿರಲಿಲ್ಲ. ಇರುವುದನ್ನು ಸರಿಯಾಗಿ ನಡೆಸಿಕೊಂಡು ಹೋದರು ಸಹ ತನ್ನ ಜೀವನಕ್ಕೆ ಸಾಕಾಗುವಷ್ಟು ಆದಾಯವಂತೂ ಖಂಡಿತ ಬರುತ್ತದೆ. ನಗರ ಜೀವನ ಯಾಕೋ ಮಂಕಾದಂತೆ ಕಾಣಿಸಿತು. ನೋಟೀಸ್ ಕೊಟ್ಟು ಎರಡು ತಿಂಗಳು ಕೆಲಸ ಮಾಡಿ ಊರಿಗೆ ವಾಪಸ್ಸಾದ. ಬರುವಾಗ ರಮ್ಯ ಹಾಗು ರಶ್ಮಿಯನ್ನು ಭೇಟಿಯಾಗಿ ಗುಡ್ ಬೈ ಹೇಳಿದ. ರಶ್ಮಿಯಂತೂ ನಗರ ಜೀವನಕ್ಕೆ ಒಗ್ಗಿ ಹೋದಳು. ಪ್ರೀತಿಯಲ್ಲಿ ಬಿದ್ದಿರುವ ಜೊತೆಗಿರುವ ಪ್ರೇಮಿಗಳಿಗೆ ಅವರ ಬೇರೊಂದು ಜಗತ್ತೇ ಇರುತ್ತದೆ, ನಗರ ಜೀವನದ ಇನ್ನೊಂದು ದೊಡ್ಡ ಆಕರ್ಷಣೆ ಅದು ನೀಡುವ ವ್ಯಕ್ತಿ ಸ್ವಾತಂತ್ರ್ಯ. ಬೇರೆಯವರಿಗೆ ತಮ್ಮ ವೈಯಕ್ತಿಕ ಜೀವನದಲ್ಲಿ ತಲೆ ಹಾಕುವ ಬುದ್ಧಿ ಸ್ವಲ್ಪ ಕಡಿಮೆ ಎಂದೇ ಹೇಳಬಹುದು.  

ಊರಿನಲ್ಲಿ ಹಾಗೆಯೆ ಒಂದು ಸಣ್ಣ ಅಂಗಡಿಯನ್ನು ಸಹ ರಾಕೇಶ ತೆರೆದ. ಮೊಬೈಲ್, ಟಿವಿಗೆ ರಿಚಾರ್ಜ್ ಮಾಡುವುದು, ಕೆಲವೊಮ್ಮೆ ಎಳನೀರು, ಕಬ್ಬಿನಹಾಲು ಮಾರುವುದು, ಶನಿವಾರ ಭಾನುವಾರ ಸಂಜೆಯ ಹೊತ್ತು ಹೊಸತಾಗಿ ಇಂಗ್ಲೀಷ್ ಮಾಧ್ಯಮ ಶಾಲೆಗಳಿಗೆ ಸೇರಿದವರಿಗೆ ಟ್ಯೂಷನ್ ಮಾಡುವುದು ಹೀಗೆ ದಿನವೆಲ್ಲಾ ಕೆಲಸದಲ್ಲಿ ತೊಡಗಿಕೊಂಡು ಒಂದು ರೀತಿಯ ಕಾಯಕವೇ ಕೈಲಾಸ ಎನ್ನುವ ಮಾತಿಗೆ ತಕ್ಕ ಹಾಗೆ ಬದುಕಲು ಆರಂಭಿಸಿದನು. ಇತ್ತೀಚಿಗೆ ಊರಿನ ಹತ್ತಿರ ಹೊಸ ಮೊಬೈಲ್ ಟವರ್ ಕೂಡ ಹಾಕಿರುವುದರಿಂದ ಮೊದಲಿನಂತೆ ಮನೆಯ ಯಾವುದೊ ಒಂದು ನಿರ್ದಿಷ್ಟ ಜಾಗದಲ್ಲಿ ಕೂತು ಮೊಬೈಲ್ ಉಪಯೋಗಿಸುವ ಗೋಳಿಲ್ಲ. ಕೆಲಸದಲ್ಲಿ ತೊಡಗಿಕೊಂಡಾಗ ಕಾಡುವ ಏಕಾಂಗಿತನ ಕೂಡ ದೂರವಾಗುತ್ತದೆ. ಕೆಲವೊಮ್ಮೆ ರಶ್ಮಿಯ ನೆನಪುಗಳು ಬಂದರು ಸಹ ಅದರ ಮೇಲೆ ಹೆಚ್ಚು ಯೋಚಿಸುವ ಶಕ್ತಿ ಕೂಡ ಮನಸ್ಸಿನಲ್ಲಿ ಉಳಿದಿಲ್ಲ. ಹೀಗೆಯೇ ಒಂದು ವರ್ಷ ಕಳೆಯಿತೇನೋ, ರಶ್ಮಿಗೂ ಮದುವೆ ಮಾಡುವುದಾಗಿ ಮಾತನಾಡುವ ಸುದ್ಧಿಗಳು ಅಪ್ಪ ಅಮ್ಮನಿಂದ ರಾಕೇಶನ ಕಿವಿಗೆ ಬಿದ್ದವು. ತನ್ನ ಗಮನಕ್ಕೆ ಇವೆಲ್ಲ ಬಂದಿಲ್ಲವೆಂಬಂತೆ ಎಷ್ಟೇ ನಟಿಸಿದರು ಸಹ ತನ್ನ ಗಮನವೆಲ್ಲ ರಶ್ಮಿಯ ಬಗ್ಗೆ ಯಾರೇ ಮಾತನಾಡಬೇಕಾದರು ಸಹ ಅಲ್ಲಿಯೇ ಇರುತ್ತಿತ್ತು. 

ಇತ್ತೀಚಿಗೆ ಒಂದಷ್ಟು ಹೊಸ ಗೆಳತಿಯರು ಸಹ ರಾಕೇಶನಿಗೆ ಪರಿಚಯವಾಗಿದ್ದಾರೆ. ಅಪ್ಪ ಅಮ್ಮನಿಗೂ ಸಹ ಮಗ ಮನೆಯಲ್ಲಿ ಕೆಲಸಗಳ ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡುತ್ತಿರುವುದು ಸಮಾಧಾನ ತಂದಿದೆ. ನಗರದ ಬಗ್ಗೆ ಆಗಾಗ ನೆನಪಾದರು ಸಹ  ಇಲ್ಲಿ ಸಾಕಷ್ಟು ಹಣ ಉಳಿಯುತ್ತದೆ, ಎಲ್ಲದಕ್ಕಿಂತ ಹೆಚ್ಚಾಗಿ ನಗರ ಜೀವನದ ಗಡಿಬಿಡಿಯಿಲ್ಲ. ಮತ್ತೆ ಊರಿಗೆ ವಾಪಸ್ಸು ಬಂದಾಗಲೇ ಆ ಊರಿನ ಪರಿಸರ, ಹರಿಯುವ ಹೊಳೆ, ಗದ್ದೆಯ ಹತ್ತಿರ ಬರುವ ನವಿಲುಗಳು, ಆಗಾಗ ಕಾಣುವ ಕಾಡು ಮೊಲಗಳು, ಕಾಡು ಕುರಿಗಳು ಹೀಗೆ ಇವುಗಳನ್ನೆಲ್ಲ ನಗರದಲ್ಲಿ ಕಣ್ಣಿಗೆ ಕಾಣದಂತೆ ಮಾಡಿರುವ ಕ್ರೌರ್ಯ ನಗರಕ್ಕೆ ಬರುವ ಹಳ್ಳಿಗಾಡಿನ ಮಕ್ಕಳಿಗೆ ಬೇಗ ಅರಿವಿಗೆ ಬರುತ್ತದೆ. ತಮ್ಮ ತಮ್ಮ ಮನೆಯ ಕಸವನ್ನು ಸಹ ಸೂಕ್ತ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ನಗರಗಳಲ್ಲಿ ನಿರ್ಮಾಣವಾಗಿದೆ. ರಶ್ಮಿಯ ಜೊತೆಗೆ ಸಂಪರ್ಕವೆಂದರೆ ಅವಳು ಹಾಕುವ ಪೋಸ್ಟ್ಗಳಿಗೆ ಲೈಕು ಕೊಡುವುದಷ್ಟೇ. ಹುಟ್ಟುಹಬ್ಬಕ್ಕೆ ಮತ್ತೆ ಏನಾದರು ವಿಶೇಷ ಇದ್ದರೆ ಮಾತ್ರ ಅವಳಿಗೊಂದು ಶುಭಾಶಯ ಕೋರುವ ಸಂದೇಶ. ಆದರೆ ರಶ್ಮಿಯ ಪೋಸ್ಟ್ಗಳಿಗೆ ಹುಡುಗರು ಕಾಮೆಂಟ್ ಮಾಡಿದಾಗ ಯಾರಿದು ಎಂಬ ಕುತೂಹಲ ರಾಕೇಶನಿಗೆ, ಕೆಲವೊಮ್ಮೆ ಇವನು ಹಾಕುವ ಊರಿನ ಫೋಟೋಗಳಿಗೆ ಸಹ ರಶ್ಮಿಯಿಂದ ಲೈಕು ಬರುವುದೇ ಇಲ್ಲ. ಅವಳ ಎಲ್ಲ ಪೋಸ್ಟಗಳಿಗೆ ನೋಟಿಫಿಕೇಶನ್ ಆನ್ ಮಾಡಿಟ್ಟುಕೊಂಡು ಕಾಯುವ ರಾಕೇಶ ಒಂದೆಡೆಯಾದರೆ, ಇವನು ಏನೇ ಕಳುಹಿಸಿದರು ಸಹ ಪ್ರತ್ಯುತ್ತರ ನೀಡದ ರಶ್ಮಿ ಇನ್ನೊಂದು ಕಡೆ.  

ರಶ್ಮಿಯ ಅಕ್ಕ ರಮ್ಯ ಆಗಾಗ ಮನೆಗೆ ತನ್ನ ಮಗುವಿನೊಂದಿಗೆ ಬಂದಾಗಲೂ ಸಹ ಅವಳ ವಿಚಾರವಾಗಿ ಮಾತನಾಡುವ ಪ್ರಯತ್ನ ರಾಕೇಶ ಮಾಡಿದರು ಸಹ ಯಾವುದೇ ಫಲ ಕೊಡಲಿಲ್ಲ. ಮನೆಯಲ್ಲಿಯೂ ಸಹ ಅಪ್ಪ ಅಮ್ಮ ಅವಳ ಹೆಸರು ಹೇಳಿಕೊಂಡು ತಿರುಗಿ ಕೊನೆಗೆ ಏನಾದರು ಕೆಟ್ಟದ್ದಾದರೆ ಸುಮ್ಮನೆ ನಿನ್ನ ಹೆಸರೇ ಹಾಳಾಗುತ್ತದೆ ಎಂದು ಬುದ್ಧಿ ಹೇಳಿಸಿಕೊಂಡ ನಂತರವಂತೂ ತನ್ನ ಮನಸ್ಸಿನಲ್ಲಿ ಬಿಟ್ಟರೆ ಬೇರೆ ಕಡೆ ರಶ್ಮಿಯ ಹೆಸರು ಕೂಡ ತೆಗೆಯುತ್ತಿರಲಿಲ್ಲ. 

ರಶ್ಮಿ ಹಾಗು ವಿಶ್ವಾಸ ಮದುವೆಯಾಗಲು ಒಪ್ಪಿ ಮನೆಯವರನ್ನು ಸಹ ಒಪ್ಪಿಗೆ ಕೇಳಿದ್ದರು. ರಾಕೇಶನಿಗೆ ಹಳೆಯ ನೆನಪುಗಳೆಲ್ಲ ಮತ್ತೆ ಮತ್ತೆ ನೆನಪಾಗತೊಡಗಿದವು. ಜೀವನದಲ್ಲಿ ತಾನಾಗಿ ಎಲ್ಲಿಗೂ ಪ್ರವಾಸಕ್ಕೆ ಹೋಗದ ರಾಕೇಶ ರಶ್ಮಿಯ ಮದುವೆಯ ಸಂದರ್ಭದಲ್ಲಿ ಊರು ಬಿಟ್ಟು ತಾನೇ ಹೋಗದ ಕರ್ನಾಟಕದ  ಬೇರೆ ಬೇರೆ ಪ್ರವಾಸಿ ತಾಣಗಳಿಗೆ ಹೋಗಿ ಒಂದೆರಡು ವಾರಗಳ ಸಮಯ ಕಳೆದು ವಾಪಸ್ಸು ಬಂದ. ರಾಕೇಶ ಇಲ್ಲದಿದ್ದರೂ ರಶ್ಮಿಯ ಮದುವೆಗೆ ಯಾವುದೇ ವ್ಯತ್ಯಾಸ ಆಗಲಿಲ್ಲ. ಆದರೆ ಇದು ಎರಡು ಮನೆಯವರ ನಡುವೆ ಸ್ವಲ್ಪ ವೈಮನಸ್ಸು ಸೃಷ್ಟಿಸಿದಂತೂ ನಿಜ. ಪೋಷಕರ ಕೈಯಲ್ಲಿ ಮಕ್ಕಳ ಮನಸ್ಸು ಬದಲಾಯಿಸುವ ಶಕ್ತಿ ಇಲ್ಲ ನಿಜ, ಆದರೆ ರಾಕೇಶನ ಬಗ್ಗೆ ಗೊತ್ತಿದ್ದರೂ ಸಹ ಒಂದು ರೀತಿಯ ಕಡೆಗಣನೆ ಮಾಡಿದ್ದು ಯಾಕೋ ರಾಕೇಶನಿಗೆ ಸರಿಯೆಂದು ತೋರಲಿಲ್ಲ. 

ರಾಕೇಶನ ನಡವಳಿಕೆಯಲ್ಲಿ ಇಷ್ಟು ದಿನ ಇರದಿದ್ದ ಮುಂಗೋಪ, ಸಣ್ಣ ಪುಟ್ಟ ವಿಷಯಗಳಿಗೆ ಸಿಡುಕುವುದು, ಯಾರೇ ಏನೇ ಅಂದರು ಸಹ ಮುಖ ಮೂತಿ ನೋಡದೆ ಬಾಯಿಗೆ ಬಂದ ಹಾಗೆ ಬೈದು ಕಳುಹಿಸುವುದು ಮಾಡುತ್ತಿದ್ದ. ಹೀಗೆ ಒಂದು ದಿನ ಪಕ್ಕದ ಮನೆಯವರ ತೆಂಗಿನ ಮರದ ಹೆಡ್ಲು ಒಂದೆರಡು ಎಳನೀರಿನ ಜೊತೆಗೆ ತನ್ನ ಮನೆಯ ಕೊಟ್ಟಿಗೆಯ ಮೇಲೆ ಬಿದ್ದು ಒಂದೆರಡು ಹಂಚು ಒಡೆದು ಹೋಗಿದ್ದನ್ನು ನೋಡಿದ್ದೇ ಅವನಿಗೆ ಪಿತ್ತ ನೆತ್ತಿಗೆ ಏರಿ ಹಿಂದು ಮುಂದು ಯೋಚಿಸದೆ ದೋಟಿಗೆ ಕತ್ತಿ ಕಟ್ಟಿ ಅವರ ಮನೆಯ ಮರದ ಎಲ್ಲ ಎಳನೀರನ್ನು ಕೆಡವಿ, ಒಂದೆರಡು ಅಲ್ಲಿಯೇ ಕಡಿದು ಕುಡಿದು ಸೀದಾ ಹೊತ್ತುಕೊಂಡು ಅವರ ಮನೆಯ ಹಂಚಿಗೆ ಬೀಸಿ ಎಸೆದು ಬಿಟ್ಟ. 

ಒಳಗಡೆ ಬಿಸಿ ಬಿಸಿ ಅಕ್ಕಿ ರೊಟ್ಟಿ ತಿನ್ನುತ್ತಿದ್ದ ನಾಗೇಶ ಅವರು ಸದ್ದು ಕೇಳಿ ಯಾವುದೊ ಮಂಗಗಳೇ ಇರಬೇಕೆಂದು ಓಡಿಸಲು ತಿನ್ನುವುದನ್ನು ಬಿಟ್ಟು ಹೊರಬಂದರು. ಹೊರಗೆ ಬಂದು ನೋಡಿದರೆ ಕೋಪದಿಂದ ಕುದಿಯುವ ರಾಕೇಶ ಎಳೆ ಬಿಸಿಲಿಗೆ ಪಳಪಳನೆ ಹೊಳೆಯುವ ಹರಿತವಾದ ಕತ್ತಿಯೊಂದನ್ನು ಕೈಯಲ್ಲಿ ಹಿಡಿದು ನಿಂತಿದ್ದಾನೆ. ಅಷ್ಟರಲ್ಲಿ ಮನೆಯಿಂದ ಹೊರಬಂದ ಸುಶೀಲಮ್ಮ ಇದು ಯಾವುದನ್ನೂ ಸಹ ಗಮನಿಸದೆ ರಾಕೇಶ ಬಾರ ತಿಂಡಿ ತಿನ್ನು ಎಂದು ಕರೆದರು. ರಾಕೇಶನಿಗೆ ಯಾಕೋ ಕೋಪವೆಲ್ಲ ಇಳಿದು ಹೋಗಿ ತನ್ನ ಹೊಂಬತನದ ಅರಿವಾಗತೊಡಗಿತು. ಇದೆ ಮೊದಲಲ್ಲ ಅಲ್ಲಿಯ ಮರದ ಕಾಯಿ, ಹೆಡ್ಲು ಬಿದ್ದು ಹಂಚು ಒಡೆದು ಹೋಗಿರುವುದು. ಆ ತೊಂದರೆಗಾಗಿಯೇ ಒಂದಷ್ಟು ಹಂಚುಗಳು ತರಿಸಿ ಇಟ್ಟಿದ್ದಾರೆ. ರಾಕೇಶನಿಗೆ ಏನು ಮಾಡಬೇಕೆಂಬುದೇ ತೋಚದೆ, ಮಾತು ಸಹ ಆಡದೆ ಕತ್ತಿಯನ್ನು ಮನೆಯ ಕೊಟ್ಟಿಗೆಯ ಹತ್ತಿರ ಬಂದು ಇಟ್ಟು, ಹೊಳೆಯ ಹತ್ತಿರ ಹೋದ. ಹಾಗೆಯೆ ತೋಟದಲ್ಲಿ ಮುಂದೆ ಸಾಗಿ ಸ್ವಲ್ಪ ದಟ್ಟವಾದ ಕಾಡಿನೊಳಗೆ ಹೋಗಿರುವ ದಾರಿ ಹಿಡಿದು ಹೊರಟ. ಅಲ್ಲಿಗೆ ಬಹಳ ಚಿಕ್ಕವನಿದ್ದಾಗ ಹೋಗಿದ್ದನಾದರೂ ಸಹ ಆಮೇಲೆ ಹೆಚ್ಚು ಬಾರಿ ಹೋಗಿರಲಿಲ್ಲ. ಕೆಲವು ಬಾರಿ ದನ ಮೇಯಿಸುತ್ತಿದ್ದಾಗ ದನಗಳನ್ನು ಹಿಡಿದು ತಿಂದ ಚಿರತೆಯ ಬಗ್ಗೆ ಬಹಳ ಸುದ್ಧಿಯಾಗಿತ್ತು. ಹುಲಿಗವಿ ಎಂದೇ ಆ ಕಾಡಿನ ಗುಡ್ಡದ ಹೆಸರು. ಹೀಗಾಗಿ ಯಾರು ಸಹ ಅಲ್ಲಿಗೆ ಹೆಚ್ಚಾಗಿ ಹೋಗುತ್ತಲೇ ಇರಲಿಲ್ಲ. ಎಲ್ಲಿಯೂ ಕಟ್ಟಿಗೆ ಸಿಗದ ಸಮಯದಲ್ಲಿ ಮಾತ್ರ ಅಲ್ಲಿಯೇ ಸ್ವಲ್ಪ ದೂರದಲ್ಲಿ ಸಿಗುವ ಕಟ್ಟಿಗೆ ಕಡಿದು ಒಟ್ಟು ಮಾಡಿ ಮನೆಗೆ ತರುತ್ತಿದ್ದರು. ಹಿಂದೊಮ್ಮೆ ಅಪ್ಪನೊಂದಿಗೆ ಮನೆಗೆ ಬರದೆ ಇದ್ದ ದನವೊಂದನ್ನು ಹುಡುಕಲು ಬಂದಾಗಲೇ ಕಾಡೆಂದರೆ ಹೀಗೂ ಇರುತ್ತದೆ ಎಂದು ಗೊತ್ತಾಗಿತ್ತು ರಾಕೇಶನಿಗೆ. ಆ ಹೊಳೆಯೇ ಕಾಡು ಅಷ್ಟು ದಟ್ಟವಾಗಿ ಬೆಳೆಯಲು ಬಹಳ ಮುಖ್ಯ ಕಾರಣ. ಹಾಗೆಯೆ ಅರ್ಧ ಗಂಟೆ ನಡೆದು ದೂರ ಬಂದಿದ್ದು ಸಾಕೆನಿಸಿ ಒಂದಷ್ಟು ಬಂಡೆಗಳ ಗುಂಪಿದ್ದ ಜಾಗಕ್ಕೆ ಹೋಗಿ ಕೈ ಕಾಲು ಮುಖ ತೊಳೆದುಕೊಂಡು, ಬಾಯಾರಿಕೆಗೆ ಸ್ವಲ್ಪ ನೀರು ಬೊಗಸೆಯಲ್ಲಿ ಹಿಡಿದು ಕುಡಿದು ಕಾಲನ್ನು ನೀರಿನೊಳಗೆ ಬಿಟ್ಟುಕೊಂಡು ಬಂಡೆಯ ಮೇಲೆ ಇನ್ನೊಂದು ಬಂಡೆಗೆ ಒರಗಿಕೊಂಡು ಹಾಗೆಯೆ ಕೂತ. ಯಾರ ಬಗ್ಗೆಯೂ ಯಾವುದರ ಬಗ್ಗೆಯೂ ಯೋಚಿಸದಷ್ಟು ಅವನ ಮನಸ್ಸು ಹಾಳಾಗಿ ಹೋಗಿತ್ತು. 

ದಟ್ಟ ಕಾಡಿನ ಹೊಳೆ ಹರಿಯುವ ಏಕಾಂತದ ಅನುಭವದಲ್ಲಿ ಎಂತಹ ಅಹಂಕಾರಿಗಳ ಅಲ್ಪತೆ ಕೂಡ ಕಳೆದು ಹೋಗುತ್ತದೆ. ಈ ಪ್ರಕೃತಿಯ ಮುಂದೆ ನಾವೆಷ್ಟು ಚಿಕ್ಕವರು, ಆದರೂ ನಮ್ಮ ಮನದ ಕಲ್ಪನೆಯ ಲೋಕದಲ್ಲಿ ನಮಗೆ ನಾವೇ ಅದೆಷ್ಟು ಪ್ರಾಮುಖ್ಯತೆ ಕೊಟ್ಟುಕೊಂಡಿರುತ್ತೇವೆ. ಬಿಸಿಲು, ಮಳೆ, ಚಳಿಗಿರದ ಅಹಂಕಾರದ ನೋವು ನನಗೇಕೆ ಎನ್ನುವ ಯೋಚನೆಯು ಮೂಡಿತು. ಈ ಹೊಳೆ ಇಷ್ಟೆಲ್ಲಾ ಕೆಲಸ ಮಾಡಿ ಕೊನೆಗೆ ಸಮುದ್ರ ಸೇರುವ ಪ್ರಯತ್ನ ಮಾಡುವಂತೆ ತಾನು ಸಹ ಪ್ರೀತಿ ಪಡೆಯಲು ಪ್ರಯತ್ನ ಮಾಡಿದೆ, ಸಮುದ್ರ ಸೇರದಿದ್ದರೆ ಪರವಾಗಿಲ್ಲ ಇನ್ನೊಬ್ಬರ ಮನೆ ಮುಳುಗಿಸುವ ಪ್ರವಾಹ ಆಗಬಾರದು ಎಂದೆಲ್ಲ ಯಾಕೋ ಏನೇನೋ ಯೋಚನೆಗಳು ಬಂದವು. ಇದು ಯಾರ ತಪ್ಪು ಸಹ ಅಲ್ಲ, ಅವರವರ ಇಷ್ಟದಂತೆ ಅವರವರು ಇದ್ದಾರೆ, ಆದರೂ ತನಗೇನೋ ಮೋಸವಾದಂತೆ ಮನಸ್ಸು ಕಲ್ಲಾಗಿ ಹೋಗಿದೆ. ಆ ನೋವಿನ ಕಾವಿನಿಂದ ಬುದ್ಧಿಗೆ ಮಂಕು ಕವಿದಂತಾಗಿದೆ. ಇನ್ನೆಷ್ಟು ದಿನ ಹೀಗೆ ಹುಚ್ಚನಂತೆ ಬದುಕಿ ಜೀವನ ಹಾಳು ಮಾಡಿಕೊಳ್ಳುವುದು. ಆಗಿದ್ದು ಆಗಿ ಹೋಯಿತು, ನನ್ನ ಜೀವನವೂ ಏನೋ ಒಂದು ಆಗುವ ಕಾಲಕ್ಕೆ ಆಗುತ್ತದೆ. ಈ ವಯಸ್ಸಾದ ಜನರ ಮೇಲೆ ಪೌರಷ ತೋರಿಸಿ ಅವರಿಗೇಕೆ ಮನ ನೋಯಿಸುವುದು ಎಂದೆಲ್ಲ ಶಾಂತವಾಗಿ ಯೋಚಿಸಿದ. 

ಇಷ್ಟು ಹೊತ್ತು ಸುಮ್ಮನೆ ಕೂತಿದ್ದವನಿಗೆ ಮೊಬೈಲ್ ರಿಂಗಾಗುವ ಶಬ್ದ ಕೇಳಿತು. ಮನೆಯವರೆಲ್ಲ ಹೆದರಿ, ಸುಶೀಲಮ್ಮನ ಮೊಬೈಲಿನಿಂದ ಕರೆ ಮಾಡಿದ್ದರು. ಏನಿಲ್ಲ, ಸ್ವಲ್ಪ ಕೆಲಸವಿತ್ತು ಮನೆಗೆ ಬರುತ್ತೇನೆಂದು ಬೈದು ಹೇಳಿದ. ಹಾಗೆಯೆ ಒಂದೆರಡು ಫೋಟೋ ತೆಗೆದ. ಏನೋ ಸರಿಯಿಲ್ಲವೆನಿಸಿ ಮತ್ತೆ ಹತ್ತಾರು ಫೋಟೋ ತೆಗೆದ. ಒಂದೆರಡು ಫೋಟೋಗಳನ್ನು ಇನ್ಸ್ಟಾಗ್ರಾಮ್ಗೆ ಹಾಕಿದ. ಅದಕ್ಕೆ ತಕ್ಕ ವಿವರಣೆ ಕೂಡ ಬರೆದ "ಪ್ರಕೃತಿಯೇ ದೇವರು" ಎಂದು. ಹಾಗೆಯೆ ರಶ್ಮಿಯ ಇಂದಿನ ಇಸ್ಟಾಗ್ರಾಮ್ ಸ್ಟೋರಿ ನೋಡಿದ. ಹಾಗೆಯೇ ಒಂದಷ್ಟು ಪೋಸ್ಟುಗಳನ್ನು ನೋಡಿದ, ಮದುವೆ ಆದಾಗಿನಿಂದ ಯಾವುದೊ ಬೇರೆ ಬೇರೆ ರಾಜ್ಯಗಳ ಸ್ಥಳಕ್ಕೆಲ್ಲ ಹೋಗಿರುವ ಸಾಕಷ್ಟು ಫೋಟೋಗಳನ್ನು ಹಾಕಿದ್ದಾಳೆ. 

ಹಾಗೆಯೇ ಮೊಬೈಲ್ ಕೈಯಲ್ಲಿ ಇಟ್ಟುಕೊಂಡು ಸುಮ್ಮನೆ ಸ್ವಲ್ಪ ಹೊತ್ತು ಕೂತ. ಎಷ್ಟು ಚಂದದ ಜಾಗ ಇದು, ಯಾರ ಕಣ್ಣು ಸಹ ಇಲ್ಲಿಗೆ ಬೀಳದಿದ್ದರೆ ಸಾಕು. ಇದು ಅರಣ್ಯ ಇಲಾಖೆಗೆ ಸೇರಿದ ಜಾಗವೇ ಆದರೂ, ಕೋಟ್ಯಧಿಪತಿಗಳ ಕಣ್ಣು ಬಿದ್ದರೆ ಇಲ್ಲೊಂದು ವಸತಿ ನಿಲಯ ಕಟ್ಟಿಸಿ ಹಣಗಳಿಸಲು ಇಳಿಯುವುದರಲ್ಲಿ ಅನುಮಾನವೇ ಇಲ್ಲ. ಅವಶ್ಯಕತೆಯಿದ್ದಾಗ ಬಡ್ಡಿಗೆ ಒಂದಷ್ಟು ಸಾಲ ಕೊಡಲು ಅವರು ತಯಾರಿದ್ದರೆ ಆ ಊರಿನ ಜನರೇ ಕಾಡು ಕಡಿಯಲು ಕೊಡಲಿ, ಕತ್ತಿ ಹಿಡಿದು ಹೊರಡುತ್ತಾರೆ. ಆ ಕಾಡು ಎಲ್ಲಿಯವರೆಗೆ ಜೀವ ವೈವಿಧ್ಯತೆಯಿಂದ ಕಂಗೊಳಿಸುತ್ತ ಇಲ್ಲಿರುವ ಪ್ರಾಣಿಗಳಿಗೆ ಆಹಾರ ಒದಗಿಸುತ್ತದೋ ಅಲ್ಲಿಯವರೆಗೆ ಊರಿನ ಬದಿಗೆ ಇವುಗಳ ಹಾವಳಿ ಕಡಿಮೆ. ಯಾವಾಗ ಕಾಡಿನ ಆಹಾರ ಬಿಟ್ಟು ಗದ್ದೆ ತೋಟಗಳ ದಾರಿ ಹಿಡಿಯುತ್ತವೋ ಊರಿನ ಜನರಿಗೆ ಇವು ಆಹಾರವಾಗುವುದಂತೂ ಖಂಡಿತ. ಇಲ್ಲಿಯವರೆಗೆ ನನ್ನಂತೆಯೇ ಸುಮ್ಮನೆ ಕೂತಿದ್ದ ಕಾಡು, ನನ್ನ ಮನಸ್ಸಿನಂತೆಯೇ ಮಾತನಾಡಲು ಆರಂಭಿಸಿದೆ ಎನ್ನುವ ಯೋಚನೆ ರಾಕೇಶನಿಗೆ ಬಂತು. ಈ ಕಹಿ ನೆನಪುಗಳನ್ನು ಮರೆತು ಮುಂದೆ ಸಾಗದಿದ್ದರೆ ಇದು ನನ್ನನ್ನು ಮತ್ತು ನನ್ನ ಜೊತೆಗಿರುವವರನ್ನು ನೋವಿನ ಬಾವಿಗೆ ತಳ್ಳುತ್ತದೆ ಅನ್ನಿಸಿತು. ಇನ್ನು ಮನೆಗೆ ಹೋಗುವುದು ತಡ ಮಾಡಿದರೆ ಊರಿನ ತುಂಬಾ ಹೇಳುತ್ತಾ ಮನೆಯವರು ಹುಡುಕಲು ಆರಂಭಿಸುತ್ತಾರೆ ಎಂದು ಮನದಲ್ಲೇ ಹೇಳಿಕೊಳ್ಳುತ್ತಾ ಬೇಗ ಬೇಗ ಮನೆಯೆಡೆಗೆ ಹೆಜ್ಜೆ ಹಾಕಿದ. ಮನೆಯ ಹತ್ತಿರ ಬರುತ್ತಿದ್ದಂತೆ ಎರಡು ಮನೆಯವರು ಸಹ ಇವನನ್ನೇ ನೋಡಿ ಕೇಳಿದರು, ಎಲ್ಲಿಗೆ ಹೋಗಿದ್ಯಾ ಎಂದು. ಇಲ್ಲೇ ಹಾಗೆ ಕಾಡು ನೋಡಿಕೊಂಡು ಬರಲು ಎಂದೇನೋ ಹೇಳಿ ತಾನು ಸ್ವಲ್ಪ ಗಂಟೆಗಳ ಮುಂಚೆ ಮಾಡಿದ ಕೆಲಸದ ಬಗ್ಗೆ ನಾಚಿಕೆಯೂ ಆದಂತಾಗಿ ಸ್ನಾನ ಮಾಡಿ ಬರಲು ಹೋದ. ಕಾಡಿಗೆ ಹೋಗಿ ಬಂದರೆ ಮೈಯಲ್ಲಿ ಕಚ್ಚಿಕೊಳ್ಳುವ ಒಣಗುಗಳ ಕಾಟ, ಕೆಲವೊಮ್ಮೆ ಕಿವಿಯೊಳಗೆ ಹೋದರಂತೂ ಹೊರ ಬಾರದೆ ಇದ್ದರೆ ಕಿವಿನೋವಿನ ತೊಂದರೆ ಬೇರೆ. ಹೀಗಾಗಿಯೇ ರಾಕೇಶನ ಅಮ್ಮ ಹೊರಗಡೆಯ ಒಲೆಯ ಬೆಂಕಿಗೆ ದೊಡ್ಡ ಕುಂಟೆಯಿಟ್ಟು ನೀರನ್ನು ಇನ್ನು ಬಿಸಿಯಾಗಿಸುವ ಕೆಲಸದಲ್ಲಿ ತೊಡಗಿದ್ದರು. 

ಎರಡು ಮನೆಯ ಹಿರಿಯರಾದ ನಾಗೇಶ ಮತ್ತು ಸತೀಶರು ರಾಕೇಶನ ಕೆಲಸ ನೋಡಿ ಬಹಳ ಬೇಸರಗೊಂಡಿದ್ದರು. ಬೇರೆ ಯಾರೋ ಈ ಕೆಲಸ ಮಾಡಿದ್ದರೆ ಇಷ್ಟು ಹೊತ್ತಿಗೆ ಮನೆಯ ಹೆಂಗಸರು ಸಹ ಜಡೆ ಹಿಡಿದುಕೊಂಡು ಮುಂಡೆ ರಂಡೆ ಅಂತೆಲ್ಲಾ ಬೈದು ಜಗಳಕ್ಕೆ ಇಳಿಯುತ್ತಿದ್ದರೇನೋ. ಆದರೆ ಮನೆಯ ಹಿರಿಯರು ಬಹಳ ವರ್ಷಗಳಿಂದ ಸ್ನೇಹ, ಪ್ರೀತಿ, ಗೌರವ ಉಳಿಸಿಕೊಂಡು ಬಂದವರು. ಹೀಗೆ ಹಿರಿಯರು ಮಾತನಾಡುತ್ತ ಈಗಿನ ಕಾಲದ ಮಕ್ಕಳೇ ಹೀಗೆ. ಯಾರು ಏನೇ ಹೇಳಿದರು ಸಹ ಅವರಿಗೆ ಬುದ್ಧಿ ಬರುವ ತನಕ ಹೇಳಿದವರ ಬಾಯಿ ನೋವು. ನಾವು ಇದಕ್ಕೆಲ್ಲ ಬೇಜಾರು ಮಾಡಿಕೊಂಡು ದೊಡ್ಡ ವಿಷಯ ಮಾಡುವುದು ಬೇಡ, ಹೇಗೂ ಹೋದ ವರ್ಷ ತರಿಸಿ ಉಳಿದಿರುವ ಹಂಚುಗಳು ಉಳಿದಿವೆ, ಅವನ್ನೇ ಒಡೆದ ಕಡೆ ಹಾಕಿಬಿಡೋಣ ಎಂಬ ತೀರ್ಮಾನಕ್ಕೆ ಬಂದರು. ರಾಕೇಶನ ಅಪ್ಪ ಸತೀಶರಿಗೆ ಬಹಳ ಕೋಪ ಮಗನ ಮೇಲೆ ಬಂದಿತ್ತು. ಹೆಚ್ಚು ಮಾತನಾಡುವಂತೆಯೂ ಇಲ್ಲ, ಈಗಿನ ಕಾಲದ ಹುಡುಗರು, ಮನೆ ಬಿಟ್ಟು ಯಾವುದೊ ಪರವೂರಿಗೆ ಹೋಗಿ ಕೂತುಬಿಡುತ್ತಾರೆ. ಇಲ್ಲಿ ಮತ್ತೆ ಕೊರಗಬೇಕಾಗುವುದು ನಾವು ಎಂದೆಲ್ಲ ಹೆಂಡತಿಗೆ ಕೇಳುವಂತೆಯೇ ಬೈದು ತೋಟದ ಕಡೆ ಕತ್ತಿ ಹಿಡಿದು, ಹಾಳೆಕೊಟ್ಟೆ ತಲೆಗೆ ಹಾಕಿ, ಎಲೆ ಅಡಿಕೆ ಬಾಯಿಗೆ ಹಾಕಿಕೊಂಡು ತೋಟದ ಕಡೆಗೆ ಹೆಜ್ಜೆ ಹಾಕಿದರು. ಅದೇ ಹೊತ್ತಿಗೆ ಬೇಲಿಯ ಬದಿಯಲ್ಲಿ ನಿಂತು ಜಿರಾಫೆಯಂತೆ ಪ್ರಯತ್ನ ಮಾಡುತ್ತ ದಾಸವಾಳ ಹೂವು ತಿನ್ನಲು ಪ್ರಯತ್ನಿಸುತ್ತಿದ್ದ ದನಕ್ಕೆ ಎರಡು ಹೇರಿ ಕಾಡಿನ ಕಡೆಗೆ ಮೇಯಲು ಓಡಿಸಿದರು. ಸರಿಯಾದ ಬೇಲಿ ಇಲ್ಲದೆ ಹೋದರೆ ಅಡಿಕೆ ಸಸಿಗಳ ಚಿಗುರೆಲ್ಲ ದನಗಳ ಸಗಣಿ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ.   

ರಾಕೇಶ ಸ್ನಾನ ಮುಗಿಸಿ ಬಂದು ಸುಮ್ಮನೆ ಮೊಬೈಲ್ ಹಿಡಿದು ಕೂತಿದ್ದ. ಅವನ ಅಮ್ಮ ಅಣಕಿಸಲೋ ಏನೋ ಕೋಳಿಗಳು ತಲೆಯಡಿ ಹಾಕಿಕೊಂಡು ಆಹಾರ ಹುಡುಕುವಂತೆ ಎಂತ ನೋಡ್ತೀಯ ಆ ಮೊಬೈಲ್ ಅಲ್ಲಿ ಯಾವಾಗಲೂ ಅಂತ ಕೇಳಿದರು. ರಾಕೇಶ ಏನಿಲ್ಲವೆಂದು ಹೇಳಿ ಅವರ ಮನೆಯವರು ಏನೆಂದರೆಂದು ಕೇಳಿದ. ನನಗೆ ಇಷ್ಟೆಲ್ಲಾ ಆಗಿದ್ದು ಗೊತ್ತಿಲ್ಲ ಮಾರಾಯ, ಈಗಲೇ ಹೀಗೆ ಆಡಿದರೆ ವಯಸ್ಸಾದ ಕಾಲಕ್ಕೆ ಊರಿನವರೆಲ್ಲರನ್ನು ಹೊಡೆದಾಟಕ್ಕೆ ಎಳೆದು ತರುತ್ತಿಯೋ ಏನೆಂದು ಗೊತ್ತಿಲ್ಲ. ಅಪ್ಪ ಬರಲಿ ಇರು ಮನೆಗೆ ಏನಂದ್ರು ಅಂತ ಹೇಳ್ತಾರೆ ಎಂದು ಬುದ್ಧಿ ಹೇಳಲು ಪ್ರಯತ್ನಿಸಿದರು. ರಾಕೇಶ ಏನು ಆಗೇ ಇಲ್ಲವೆಂಬಂತೆ ಅಂಗಡಿಗೆ ಹೋದ. ಯಾಕೋ ಅವರ ಮನೆಯ ಬದಿಯಲ್ಲಿ ಹೋಗುವ ದಾರಿಯಲ್ಲಿ ನಡೆದು ಹೋಗಲು ಸಹ ಮನಸ್ಸಾಗಲಿಲ್ಲ. ಹೆಚ್ಚು ಬಳಸದ ಮನೆಯ ಕಾಲುದಾರಿಯಲ್ಲೇ ನಡೆದು ಅಂಗಡಿಗೆ ಹೋದ. 

ಇದಾದ ಮೇಲೆ ರಾಕೇಶನ ಮಾತುಕತೆ ಅವರ ಮನೆಯವರೊಂದಿಗೆ ಬಹಳ ಕಡಿಮೆ. ಮೊದಲಿನಂತೆ ಕರೆದಾಗಲೆಲ್ಲ ಹೋಗಿ ಊಟ ತಿಂಡಿ ಮಾಡುವ ಅಭ್ಯಾಸವಿಲ್ಲ. ಒಮ್ಮೊಮ್ಮೆ ಮನೆಯ ಬಳಿ ಇದ್ದಾಗ ಕಾಫಿ ತಂದು ಇರುವಲ್ಲಿಗೆ ತಂದು ಕೊಟ್ಟರೆ ಕುಡಿಯುವುದು. ಹೇಗೋ ಈ ಕೋಪ, ಬೇಜಾರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಹೋಯಿತು. ರಾಕೇಶ ಸಿಕ್ಕಿದಾಗಲೆಲ್ಲ ಸುಶೀಲಮ್ಮ ಕೆಲವೊಮ್ಮೆ ಎಳನೀರಿನ ವಿಷಯ ಕೇಳಿ ಹಾಸ್ಯ ಮಾಡುವುದು ಸಹ ಇದೆ. ಇತ್ತೀಚಿಗೆ ಮೊದಲಿನಂತೆ ಮತ್ತೆ ಒಂದಾಗುತ್ತಿದ್ದಾರೆ. ರಾಕೇಶನ ಮನೆಯಲ್ಲಿಯೂ ಸಹ ಹುಡುಗಿ ಹುಡುಕುವ ಕೆಲಸ ನಿಧಾನಕ್ಕೆ ಶುರುವಾಗಿದೆ. ಬಹಳ ಸಮಯದಿಂದ ರಜೆಯಿಲ್ಲದೆ ಮನೆಗೆ ಬರಲು ಸಾಧ್ಯವಾಗದ ರಶ್ಮಿ ಮತ್ತು ವಿಶ್ವಾಸ ಮೂರು ದಿನಗಳ ಸಾಲಾಗಿ ದೊರೆಯುವ ರಜೆಯೊಂದಿಗೆ ಎರಡು ದಿನಗಳ ಹೆಚ್ಚಿನ ರಜೆ ಹಾಕಿ ಬರುವುದಾಗಿ ತಿಳಿಸಿದ್ದಾರೆ. ರಶ್ಮಿಯ ಮನೆಯವರಿಗೆ ಖುಷಿಯೋ ಖುಷಿ, ರಶ್ಮಿಯ ಅಕ್ಕ ರಮ್ಯ ಕೂಡ ತನ್ನ ಗಂಡ, ಮಗುವಿನೊಂದಿಗೆ ಬರುವುದಾಗಿ ತಿಳಿಸಿದ್ದಾಳೆ. ಹೀಗಾಗಿ ಮನೆ ಮತ್ತು ಸುತ್ತಲಿನ ಜಾಗವನ್ನು ಎಷ್ಟು ಅಚ್ಚುಕಟ್ಟಾಗಿ ಇಟ್ಟುಕೊಂಡರು ಸಹ ಸಾಲದು. ಅವರು ಬಂದಾಗ ಯಾವ ಅಡುಗೆ ಮಾಡಬೇಕು, ಸುತ್ತಲಿನ ಯಾವ ದೇವಸ್ಥಾನಗಳಿಗೆ ಹೋಗಿ ಬರಲು ಹೇಳಬೇಕು, ಯಾರಿಗೆ ಯಾವ ಕೋಣೆಯಲ್ಲಿ ಮಲಗಲು ವ್ಯವಸ್ಥೆ ಮಾಡಬೇಕು, ಯಾರಿಗೆ ಏನೆಂದರೆ ಬಹಳ ಇಷ್ಟ ಎಂದೆಲ್ಲ ಚಿಂತೆ ಮಾಡಿ ಅದೆಷ್ಟು ಯೋಜನೆ ಮಾಡಿಕೊಂಡರು ಸಾಲದು ಸುಶೀಲಮ್ಮನವರಿಗೆ. ಅವರು ಮನೆಗೆ ಬರುವ ದಿನಗಳು ಹತ್ತಿರವಾದಂತೆಲ್ಲ ಮಕ್ಕಳ ಬಾಲ್ಯದ ನೆನಪುಗಳೆಲ್ಲ ಬಂದು ಎಷ್ಟು ಬೇಗ ಆಟವಾಡಿಕೊಂಡಿದ್ದ ಮಕ್ಕಳು ದೊಡ್ಡವರಾಗುತ್ತಾರೆ ಎನ್ನುವ ಆಶ್ಚರ್ಯವೂ ಜೊತೆಗೆ ಬೇಸರವೂ ಆಗುತ್ತದೆ. 

ಮನೆಗೆ ಮಕ್ಕಳು ಸಂಸಾರ ಸಹಿತವಾಗಿ ಬಂದರು. ಬರುತ್ತಿದ್ದಂತೆಯೇ ಕಾಲು ತೊಳೆಯಲು ನೀರು ಕೊಟ್ಟು ನಂತರ ಕೂರಲು ಹೇಳಿ ಕುಡಿಯಲು ನೀರು ಕೊಟ್ಟು ಪ್ರಯಾಣದ ಬಗ್ಗೆ ವಿಚಾರಿಸಿದರು. ಕಾರಿನಲ್ಲಿ ಪ್ರಯಾಣ ಮಾಡಿದ ಅನುಭವಗಳನ್ನು, ಬೆಂಗಳೂರಿನ ವಾಹನಗಳ ಜಾಲದಿಂದ ಹಸಿರು ಕಂಗೊಳಿಸುವ ಊರಿನೆಡೆಗೆ ಪ್ರಯಾಣ ಮಾಡುವ ವಿಶಿಷ್ಟ ಅನುಭವವನ್ನು ಹೇಗೆಲ್ಲ ಹೇಳಿಕೊಂಡರು ಸಾಲದು. ಈಗಷ್ಟೇ ಮನೆಗೆ ಬಂದಿದ್ದರು ಸಹ ತೋಟ ಗದ್ದೆಗೆ ಹೋಗಿ ಒಂದೆರಡು ಸುತ್ತು ಹಾಕಿಕೊಂಡು ಬಂದುಬಿಡೋಣ ಎಂದು ಗಂಡಸರು ತಯಾರಾಗುವುದನ್ನು ಕಂಡು ಮನೆಯವರು ಈಗ ಬೇಡ ಬಿಸಿಲಿನ ಹೊತ್ತಿಗೆ, ಊಟ ಮಾಡಿ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ಪಡೆದು ಸಂಜೆಯ ಇಳಿ ಬಿಸಿಲಿನ ಹೊತ್ತಿಗೆ ಹೋಗಿಬರೋಣ ಎಂದು ಸಮಾಧಾನ ಮಾಡಿದರು. ಊಟಕ್ಕೆ ಮನೆಯ ನಾಟಿ ಕೋಳಿ ಸಾರು, ಹಳ್ಳದ ಮೀನಿನ ಬತ್ತಿಸಿದ ಸಾರು ಹೀಗೆ ಎಷ್ಟು ತಿನ್ನುತ್ತಿದ್ದೇವೆ ಎನ್ನುವ ಅರಿವೇ ಇಲ್ಲದಂತೆ ಊಟ ಮಾಡಿದರು. ಎಲ್ಲರಿಗು ಸುಶೀಲಮ್ಮನ ಕೈಗುಣವೇ ಇದಕ್ಕೆಲ್ಲ ಕಾರಣ ಎಂಬಂತೆ ಹೊಗಳಿದರು. ಊಟ ಮುಗಿಸಿ ಬಟ್ಟೆ ಬದಲಾಯಿಸಿ ಮನೆಯಲ್ಲಿ ಹಾಕುವ ಉಡುಪುಗಳನ್ನು ಹಾಕಿಕೊಂಡು ಮಲಗಿದ್ದೊಂದೇ ಗೊತ್ತು. ತಣ್ಣನೆಯ ವಾತಾವರಣಕ್ಕೋ ಏನೋ ಹಾಗೆಯೆ ಪ್ರಯಾಣದಿಂದ ದಣಿದ ದೇಹ ನಿದ್ದೆಗೆ ಜಾರಿತು. ಸಂಜೆಯ ಹೊತ್ತಿಗೆ ಎದ್ದು ಕಾಫಿ ಕುಡಿದು ಜೊತೆಗೆ ಮನೆಯಲ್ಲಿಯೇ ಮಾಡಿದ್ದ ಹಲಸಿನಕಾಯಿ ಚಿಪ್ಸ್ ತಿಂದು ಎಲ್ಲರು ಹರಟೆಗೆ ಶುರು ಹಚ್ಚಿದರು. 

ತಮ್ಮ ಆಫೀಸು ಜೀವನದ ಕಷ್ಟಗಳು, ರಜೆ ಹಾಕಲು ಕೊಡುವ ಕಾರಣಗಳು, ಅಪ್ಪ ಅಮ್ಮನ ಸುಖ ಕಷ್ಟ ಹೀಗೆ ಸ್ವಲ್ಪ ಹೊತ್ತಿನ ನಂತರ ರಾಕೇಶನ ಮನೆಯ ಕಡೆಗೆ ಮಾತುಗಳು ತಿರುಗಿದವು. ಈಗ ಇಲ್ಲಿಯೇ ಅಂಗಡಿ, ಮನೆ, ತೋಟ ಎಲ್ಲವನ್ನು ನೋಡಿಕೊಂಡು ಇದ್ದಾನೆ ಎಂದೆಲ್ಲ ಸುಶೀಲಮ್ಮ ವಿವರಿಸಿದರು, ಆ ಕಹಿ ಘಟನೆಯನ್ನು ಹೇಳಿದರೆ ಇನ್ನು ಇವರು ಏನೆಂದುಕೊಳ್ಳುವರೋ ರಶ್ಮಿ ರಮ್ಯ ಇಬ್ಬರೇ ಇದ್ದಾಗ ಹೇಳಿದರಾಯಿತು ಎಂದು ಸುಮ್ಮನಾದರು. ಅಷ್ಟರಲ್ಲಿ ರಾಕೇಶನ ಅಮ್ಮ ಸಾವಿತ್ರಿ ನೆರೆಮನೆಗೆ ಬಂದ ನೆಂಟರನ್ನು ಮಾತನಾಡಿಸಿಕೊಂಡು ಬರಲು ಅವರ ಮನೆಕಡೆಗೆ ಬರುವುದು ಕಂಡಿತು. ರಮ್ಯ ರಶ್ಮಿ ಬಹಳ ಪ್ರೀತಿ ಮತ್ತು ಆದರದಿಂದ ಬರಮಾಡಿಕೊಂಡರು. ರಶ್ಮಿಯ ಗಂಡ ವಿಶ್ವಾಸ, ರಮ್ಯಾಳ ಗಂಡ ಸಂದೇಶ ತಮಗೆ ತೋಟದ ಕೆಲಸಗಳ ಬಗ್ಗೆ ಹೆಚ್ಚು ಗೊತ್ತಿಲ್ಲದೆ ಹೋದರು ಸಹ ಒಂದಷ್ಟು ಅವರ ಮನೆಯ ಕೆಲಸಗಳ ಬಗ್ಗೆ ಬಹಳ ಕುತೂಹಲದಿಂದ ವಿಚಾರಿಸಿದರು. ರಾಕೇಶನು ಸಹ ಕೆಲಸದಲ್ಲಿ ಬಹಳ ಸಮಯ ಕಳೆಯುವುದರಿಂದ ಮನೆಯ ಕಡೆ ಬರುವುದು ತಡವಾಗುತ್ತದೆ ಎಂದು ಹೇಳಿ, ತಮ್ಮ ಮನೆಗೆ ಬರುವಂತೆ ಕರೆದು, ಒಂದು ದಿನ ಊಟಕ್ಕೆ ಬರಲೇಬೇಕು ಎಂದು ಒತ್ತಾಯಿಸಿ ಮನೆಗೆ ಸಾವಿತ್ರಮ್ಮ ವಾಪಸ್ಸಾದರು. ರಮ್ಯಳ ಪುಟ್ಟ ಮಗನ ಮೇಲೆಯೇ ಎಲ್ಲರ ಕಣ್ಣು. ಹೀಗಾಗಿ ಯಾವುದಕ್ಕೂ ಇರಲಿ ಎಂದು ಸುಶೀಲಮ್ಮ ವೀಳ್ಯದೆಗೆಲೆ ಕಣ್ಣು ಬಿಡಿಸಿ, ಎಣ್ಣೆ ಸವರಿ ಮಗುವಿನ ಮುಖಕ್ಕೆ ಸುಳಿದು ಎಲೆಯನ್ನು ಬೆಂಕಿಗೆ ಹಾಕಿ ಸುಟ್ಟು ಮಸಿಯಾದ ನಂತರ ಅದನ್ನು ಮಗುವಿನ ಕೆನ್ನೆಗೆ ಇಡಿಸಿ ತಮ್ಮ ಕೈಯಿಂದ ಲಟಿಕೆ ಮುರಿದು ದೃಷ್ಟಿ ತೆಗೆದರು. ತಮಾಷೆಗೆ ರಮ್ಯ ರಶ್ಮಿ ನಮಗೆ ದೃಷ್ಟಿ ತೆಗೆಯೋದಿಲ್ವ ಎಂದು ಕೇಳಿದಾಗ, ಸುತ್ತಾಡಿಕೊಂಡು ಬನ್ನಿ ಅರಿಶಿಣ ಕುಂಕುಮದ ನೀರು ಮಾಡಿ ಅದಕ್ಕೆ ಕೆಂಡ ಬಿಟ್ಟು ಆರತಿ ತೆಗೆದು ದೃಷ್ಟಿ ತೆಗೆಯೋಣ ಎಲ್ಲರಿಗು ಸೇರಿಸಿ ಎಂದು ಬಹಳ ಗಂಭೀರವಾಗಿಯೇ ಹೇಳಿದರು. 

ಜೋಡಿ ಹಕ್ಕಿಗಳು ತನ್ನ ಮನೆಯ ತೋಟ ಗದ್ದೆಗಳಲ್ಲಿ ವಾಯುವಿಹಾರಕ್ಕೆ ಹೋದವು. ಅಲ್ಲಿ ಅಪ್ಪ ಅಮ್ಮನೊಂದಿಗೆ ಕೆಲಸ ಮಾಡಿದ ನೆನಪುಗಳು, ಅದು ಹಾಗೆ ಇದು ಹಾಗೆ ಎಂದು ವಿಶ್ವಾಸನಿಗೆ ಎಷ್ಟು ವಿವರಿಸಿದರು ಸಹ ಸಾಲದು. ವಿಶ್ವಾಸ ಎಲ್ಲದಕ್ಕೂ ಕೋಲೆ ಬಸವನಂತೆ ತಲೆಯಾಡಿಸಿ ಮುನ್ನಡೆಯುತ್ತಿದ್ದ. ಅಲ್ಲಲ್ಲಿ ಫೋಟೋ ತೆಗೆಯುವುದು, ಅದನ್ನು ಇನ್ನೊಬ್ಬರಿಗೆ ತೋರಿಸುವುದು ಹೀಗೆ ಮಾಡುತ್ತ ಕತ್ತಲಾಗುತ್ತಿದ್ದಂತೆ ವಾಪಸ್ಸು ಬಂದರು. ಮನೆಯಲ್ಲಿ ಹಾಗೆಯೆ ಧಾರವಾಹಿ ನೋಡುತ್ತಾ ಏನೇನೋ ಮಾತನಾಡುತ್ತ ರಾತ್ರಿ ಸಮಯ ಹೋಗುತ್ತಿತ್ತು. ಅಷ್ಟು ಹೊತ್ತಿಗೆ ಅಂಗಡಿ ಬಾಗಿಲು ಹಾಕಿ, ತನ್ನ ಮನೆಗೆ ಹೋಗುವ ದಾರಿಯಲ್ಲಿ ರಾಕೇಶ ನಡೆದುಕೊಂಡು ಬಂದ. ದೂರದಿಂದಲೇ ಪಕ್ಕದಮನೆಯ ಮುಂದೆ ನಿಂತಿದ್ದ ಎರಡು ಕಾರುಗಳನ್ನು ನೋಡಿ ಮನೆಗೆ ಬಂದಿದ್ದಾರೆ ಎಂಬುದು ಅರಿವಾಯಿತು. ಮಾತನಾಡಿಸಲೋ ಬೇಡವೋ ಎನ್ನುವ ಪ್ರಶ್ನೆಗೆ ತಲೆ ಮತ್ತು ಮನಸ್ಸಿನಿಂದ ಯಾವ ಉತ್ತರವೂ ಬರಲಿಲ್ಲ. ಹೊರಗಡೆಯೇ ಯಾರಾದರೂ ನೋಡಲು ಸಿಕ್ಕಿದರೆ ಮಾತನಾಡಿಸುವುದು, ಇಲ್ಲವೆಂದರೆ ಹಾಗೆಯೆ ಹೋಗಿ ಬಿಡುವುದು ಎಂದುಕೊಂಡು ನಡೆಯುತ್ತಿದ್ದ. ರಶ್ಮಿಯ ಮನೆಯ ಹತ್ತಿರ ಬರುತ್ತಿದ್ದಂತೆ ರಮ್ಯಾಳ ಮಗ ಅಳುತ್ತಿದ್ದಾನೆ ಎಂದು ಹೊರಗಡೆ ಆಡಿಸಿ ಖುಷಿ ಪಡಿಸಲು ಕರೆದುಕೊಂಡು ಬಂದಳು. 

ರಾಕೇಶ ರಮ್ಯಾಳನ್ನು ಬಹಳ ಪ್ರೀತಿಯಿಂದ ಏನು ಅಕ್ಕ, ಯಾವಾಗ ಬಂದಿರಿ, ಆರಾಮಿದಿರ ಎಂದು ಕೇಳಿದ. ರಮ್ಯ ಕೂಡ ಅದಕ್ಕೆಲ್ಲ ಉತ್ತರಿಸಿ, ನೀನು ಹೇಗಿದ್ದೀಯ ಮನೆಗೆ ಬಾ ಎಲ್ಲರು ಇದ್ದಾರೆ ಎಂದು ಕರೆದಳು. ಮನೆಗೆ ಹೋಗಿ ವಿಶ್ವಾಸ, ಸಂದೇಶ, ರಶ್ಮಿ ಹೀಗೆ ಎಲ್ಲರನ್ನು ಮಾತನಾಡಿಸಿ ಅಲ್ಲಿಯೇ ಕೂತು ಸ್ವಲ್ಪ ಹೊತ್ತು ಕಾಲ ಕಳೆದು ಬಂದ. ಹೊರಡುವಾಗ ಸುಶೀಲಮ್ಮ ನಗರದಿಂದ ನೆಂಟರು ತಂದಿದ್ದ ಒಂದಷ್ಟು ತಿಂಡಿ ತಿನಿಸುಗಳನ್ನು ಮನೆಗೆ ಕೊಂಡೊಯ್ಯುವಂತೆ ಕೊಟ್ಟರು. ಬೇಡ ಅಂದರು ಕೇಳಲೇ ಇಲ್ಲ. ನಿನ್ನ ಅಮ್ಮ ಆಗ ಬಂದಾಗ ಮಾತಿನ ಭರದಲ್ಲಿ ಇದನ್ನು ಕೊಡುವ ನೆನಪೇ ಬರಲಿಲ್ಲ ಎಂದು ಸುಶೀಲಮ್ಮ ರಾಕೇಶನಿಗೆ ಹೇಳಿದರು. ರಾಕೇಶ ರಮ್ಯಾಳ ಮಗುವನ್ನು ಎತ್ತಿಕೊಳ್ಳಲು ಪ್ರಯತ್ನ ಮಾಡಿದರು ಸಹ ಎಲ್ಲಿ ಮತ್ತೊಮ್ಮೆ ಅಳಲು ಶುರು ಮಾಡುವನೋ ಎಂದು ಹೆದರಿ ಸುಮ್ಮನಾದ. ನೆಂಟರನ್ನು ಮನೆಗೆ ಬಂದು ಹೋಗುವಂತೆ ಕರೆದು ಅವರ ಮನೆಗೆ ಹೊರಟು ಹೋದ. 

ಮನೆಗೆ ಹೋಗಿ ಊಟ ಮಾಡಿ ಮಲಗಲು ಸಿದ್ಧವಾದರೂ ಸಹ ತನ್ನ ಅಮ್ಮನ ಪಕ್ಕದ ಮನೆಗೆ ಬಂದ ನೆಂಟರುಗಳ ಬಗ್ಗೆ ಮಾತನಾಡುವುದು ಮಾತ್ರ ನಿಲ್ಲಿಸಿರಲಿಲ್ಲ. ರಾಕೇಶ ಕೇಳಿದರು ಕೇಳದಂತೆ ಸುಮ್ಮನೆ ಹೋಗಿ ತನ್ನ ಕೋಣೆಯ ಬಾಗಿಲು ಹಾಕಿಕೊಂಡು ಮಲಗಿದ. ರಾಕೇಶನಿಗೆ ರಶ್ಮಿಯನ್ನು ಕಂಡಾಗ ಮೊದಲಿನಂತೆ ಭಾವನೆಗಳ ಏರಿಳಿತವೇನು ಹೆಚ್ಚು ಆಗಿರಲಿಲ್ಲ, ಆದರೆ ವಿಶ್ವಾಸನನ್ನು ಕಂಡಾಗ ಮಾತ್ರ ಒಳಗೊಳಗೇ ಏನೋ ಸಂಕಟವಾದಂತೆ ಆಗುತ್ತಿತ್ತು. ಕೆಲವು ಜನರನ್ನು ಕಳೆದುಕೊಂಡ ಬಹಳ ಸಮಯದ ನಂತರ ಅವರನ್ನು ಕಂಡಾಗ ಯಾವ ರೀತಿಯ ಬೇಜಾರು ಸಹ ಆಗುವುದಿಲ್ಲ, ಹಿಂದೆ ಅವರನ್ನು ಎಷ್ಟೆಲ್ಲಾ ಮನಸ್ಸಿಗೆ ಹಚ್ಚಿಕೊಂಡಿದ್ದೆ ಎನ್ನುವುದನ್ನು ನೆನಪಿಸಿಕೊಂಡಾಗ ಮಾತ್ರ ಈಗಿನ ಪ್ರಸ್ತುತ ಪರಿಸ್ಥಿತಿಯ ಮೇಲೆ ಹತಾಶೆ ಮೂಡುತ್ತದೆ. ನಾಳೆ ಅಂಗಡಿಗೆ ರಜೆ, ಸ್ವಲ್ಪ ಏಡಿ ಮೀನು ಹಿಡಿಯಲು ಕೂಣೆ ಹಾಕಿ ಇಡಬೇಕು. ಜಾಸ್ತಿ ಸಿಕ್ಕಿದರೆ ಅವರ ಮನೆಗೆ ಕೊಟ್ಟರು ಆಯಿತು. ಹೇಗೂ ನೆಂಟರು ಇದ್ದಾರೆ, ಅಮ್ಮ ಕೂಡ ಒಂದು ದಿನ ಊಟಕ್ಕೆ ಬರಲು ಕರೆದಿದ್ದಾರೆ. ಮನೆಯಲ್ಲಿಯೇ ನಾಟಿ ಮೊಟ್ಟೆ ಕೋಳಿಗಳು ಇವೆ, ಅವರಿಗೂ ಇಷ್ಟವಾಗಬಹುದು. ದೊಡ್ಡದಾದ ಒಂದು ಹುಂಜ ಕೂಡ ಇದೆ, ಅದನ್ನು ದೇವರಿಗೆ ಬಿಟ್ಟಿದ್ದಾರೆ. ಹೀಗೆಯೇ ಯೋಚಿಸುತ್ತ ಮೊಬೈಲ್ ಅಲ್ಲಿ ಗೆಳೆಯರು ನೋಡು ಚೆನ್ನಾಗಿದೆ ಎಂದು ಹೇಳಿದ್ದ ಸಿನಿಮಾ ನೋಡಿ ಮುಗಿಸಿ ಮಲಗುವಷ್ಟರಲ್ಲಿ ರಾತ್ರಿ ಎರಡು ಗಂಟೆಯಾಗಿತ್ತು. 

ಬೆಳಿಗ್ಗೆ ಅಮ್ಮ ಏಳಿಸಿದಾಗ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ ತಿಂಡಿ ತಿಂದು ಹೊಳೆಯ ಕಡೆ ರಾಕೇಶ ಹೊರಟ. ಹೋಗುತ್ತಿದ್ದಂತೆಯೇ ದೂರದಲ್ಲಿ ರಶ್ಮಿ ನಿಂತಿರುವುದು ಕಂಡಿತು. ಹತ್ತಿರ ಹತ್ತಿರ ಹೋದಂತೆ ವಿಶ್ವಾಸ ಅವಳ ಫೋಟೋ ತೆಗೆಯುತ್ತಿರುವುದು ಅರಿವಿಗೆ ಬಂತು. ವಿಶ್ವಾಸ ಇವನನ್ನು ನೋಡಿದ ಕೂಡಲೇ ಕೈಬೀಸಿ ಕರೆದ. ರಾಕೇಶ ಏನಿರಬಹುದು ಎಂದುಕೊಂಡು ಹೋದ. ವಿಶ್ವಾಸ ಹೇಳಿದ, "ಒಳ್ಳೆಯ ಸಮಯಕ್ಕೆ ಬಂದೆ ರಾಕೇಶ್, ಎಷ್ಟು ಸುಂದರ ಜಾಗವಿದು. ನಾನು ಮತ್ತು ರಶ್ಮಿ ಒಟ್ಟಿಗೆ ಇರುವ ಒಂದಷ್ಟು ಫೋಟೋ ತೆಗೆದು ಒಂದು ಸಹಾಯ ಮಾಡು". ರಶ್ಮಿಗೆ ಇದೇಕೋ ಸರಿ ತೋರಲಿಲ್ಲ, ಅವನಿಗೆ ಬೇರೆ ಕೆಲಸ ಇದೆ ಅನ್ನಿಸುತ್ತದೆ, ಹೇಗೂ ಅಕ್ಕ ಭಾವ ಇಲ್ಲಿಗೆ ಬರುತ್ತಾರೆ ಸ್ವಲ್ಪ ಸಮಯದಲ್ಲಿ. ಅವರು ಫೋಟೋ ತೆಗೆಯುತ್ತಾರೆ ಎಂದು ವಿಶ್ವಾಸನಿಗೆ ರಶ್ಮಿ ಹೇಳಿದಳು. ಆದರೂ ವಿಶ್ವಾಸ ಬೇಕೆಂದೇ ಹಠ ಹಿಡಿದ, ರಾಕೇಶನ ಫೋಟೋಗ್ರಫಿ ಮುಂದೆ ಅವರೆಲ್ಲ ಯಾವ ಲೆಕ್ಕ ಎಂಬ ಕೊಂಕು ಮಾತು ಸಹ ಆಡಿದ. ವಿಶ್ವಾಸನ ಪ್ರತಿ ಪದಗಳಿಂದಲೂ ರಾಕೇಶನ ಸಹನೆ ಕಡಿಮೆಯಾಗುತ್ತ ಮನದಾಳದ ಕೋಪ ಹೆಚ್ಚಾಗುತ್ತಾ ಹೋಯಿತು. ಆದರೂ ಅಭ್ಯಾಸ ಬಲವೋ ಏನೋ, ಕೊಡು ಪರವಾಗಿಲ್ಲ ಅಂತಹ ಕೆಲಸವೇನಿಲ್ಲ ನನಗೆ ಎಂದು ಹೇಳಿ ಅವನ ಐಫೋನ್ ಪಡೆದ. ವಿಶ್ವಾಸ ರಶ್ಮಿಯ ಹತ್ತಿರ ನಿಂತು ಹೀಗೆ ಫೋಟೋ ತಗಿ, ಹಾಗೆ ತಗಿ ಎಂದೆಲ್ಲ ಹೇಳಿ ಹೇಳಿ ಸುಮಾರು ಅರ್ಧ ಗಂಟೆಯಲ್ಲಿ ಕಡಿಮೆಯೆಂದರೂ ಐವತ್ತು ಫೋಟೋ ತೆಗೆಸಿರಬಹುದು ರಾಕೇಶನ ಕೈಯಲ್ಲಿ. ನಂತರ ತುಂಬಾ ಥ್ಯಾಂಕ್ಸ್ ಎಂದೆಲ್ಲ ಹೇಳಿ ಇಲ್ಲಿ  ಮುಂದೆ ಬಂಡೆಗಳು ಕಡಿಮೆಯಿವೆ, ನದಿ ಇಷ್ಟು ಸುಂದರವಾಗಿ ಹರಿಯುತ್ತಿದೆ, ಇಲ್ಲಿ ಈಜದಿದ್ದರೆ ಮನಸ್ಸಿಗೆ ಸಮಾಧಾನ ಆಗಲ್ಲವೆಂದು ಹೇಳಿದ. ನೀನು ಇಲ್ಲಿ ಈಜಿದ್ದಿಯ ಎಂದು ರಾಕೇಶನಿಗೆ ಕೇಳಿದ. ನನಗೆ ಇಲ್ಲಿ ಈಜಲು ಮೊದಲಿನಿಂದಲೂ ಮನೆಯಲ್ಲಿ ಬೇಡವೆಂದು ಅದೇ ಅಭ್ಯಾಸವಾಗಿದೆ, ಗೆಳೆಯರು ಇಲ್ಲಿಗೆ ಬಂದಾಗ ಕೆಲವೊಮ್ಮೆ ಈಜುತ್ತಾರೆ ಎಂದು ಹೇಳಿದ. ಹಾಗಾದರೆ ನಾನು ಈಜಿ ಹೋಗುತ್ತೇನೆ, ಒಂದು ವಿಡಿಯೋ ಮಾಡಲು ಸಾಧ್ಯವೇ ಎಂದು ವಿಶ್ವಾಸ ಮತ್ತೆ ರಾಕೇಶನಿಗೆ ಕೇಳಿದ. ರಶ್ಮಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸೂಚನೆ ಸಿಕ್ಕಿತೆಂದೇ ತೋರುತ್ತದೆ, ನಾನೆ ಇಲ್ಲಿ ಬಂಡೆಯ ಮೇಲೆ ಕೂತು ವಿಡಿಯೋ ಮಾಡುತ್ತೇನೆ ಎಂದಳು. ಸರಿ ಹಾಗಾದರೆ ಎಂದು ರಶ್ಮಿಗೆ ಮೊಬೈಲ್ ಕೊಟ್ಟು ಅಲ್ಲಿಯೇ ಬಂಡೆಯ ತುದಿಯಲ್ಲಿ ರಶ್ಮಿಯ ಪಕ್ಕದಲ್ಲಿ ರಾಕೇಶ ಸಹ ಕೂತ. 

ವಿಶ್ವಾಸ ಬಹಳ ಚೆನ್ನಾಗಿ ಈಜು ಕಲಿತವನು. ಕಾಲೇಜು ದಿನಗಳಲ್ಲಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ಯಾವಾಗಲೋ ಬಹುಮಾನ ಬಂದ ಕತೆಯನ್ನು ಹಲವಾರು ಬಾರಿ ಆಫೀಸಿನಲ್ಲಿ ಹರಟೆ ಹೊಡೆಯುವಾಗ ಹೇಳಿದ್ದ. ರಶ್ಮಿ ಮೊಬೈಲ್ ಹಿಡಿದು ಈಜುವುದನ್ನು ವಿಡಿಯೋ ಮಾಡುತ್ತಿದ್ದಳು. ರಾಕೇಶನಿಗೆ ಶಾಲೆಯ ದಿನಗಳಲ್ಲಿ ರಶ್ಮಿಯೊಂದಿಗೆ ಇಲ್ಲಿಯೇ ಕೂತು ಕಾಗದದ ದೋಣಿ ಬಿಡುತ್ತಿದ್ದ ನೆನಪುಗಳು ಬಹಳ ದುಃಖದೊಂದಿಗೆ ಬರತೊಡಗಿದವು. ನಿನ್ನೆ ನೋಡಿದ್ದ ಸಿನೆಮಾವೊಂದರಲ್ಲಿ ಕೊನೆಗೆ ಅದರಲ್ಲಿನ ಹೀರೋ ನೀರಿನಲ್ಲಿ ಮುಳುಗಿ ಕೂತು, ಶತ್ರು ಅಲ್ಲಿಗೆ ಬಂದಾಗ ಮೇಲೇಳುತ್ತಲೇ ರುಂಡ ಹಾರುವಂತೆ ಖಡ್ಗ ಬೀಸುವ ದೃಶ್ಯವೇಕೋ ನೆನಪಾಗತೊಡಗಿತು. ಅಷ್ಟರಲ್ಲಿ ವಿಶ್ವಾಸ ಈಜಿಕೊಂಡು ಹಿಂತಿರುಗಿ ಬರುತ್ತಿದ್ದ. ರಾಕೇಶನಿಗೆ ಅನ್ನಿಸಿತು, ಇದೆ ಅಲ್ಲವೇ ನನಗು ವಿಶ್ವಾಸನಿಗೂ ಇರುವ ಮುಖ್ಯ ವ್ಯತ್ಯಾಸ. ರಶ್ಮಿಯನ್ನು ಮೆಚ್ಚಿಸಲು ಸಣ್ಣ ಪುಟ್ಟ ಸಾಹಸಗಳಿಗೆ ವಿಶ್ವಾಸ ಹೆದರುವುದಿಲ್ಲ, ಅವನು ಈಜಿ ಹೋಗಿ ಬಂದು ರಶ್ಮಿಗೆ ತನ್ನ ಬಲಪ್ರದರ್ಶನ ಮಾಡುತ್ತಿದ್ದರೆ ನಾನಿಲ್ಲಿ ಹೆಡ್ಡನಂತೆ ಯಾವುದೊ ಸಿನಿಮಾ ಕ್ಲೈಮಾಕ್ಸ್ ನೆನಪಿಸಿಕೊಂಡು ಕೂತಿದ್ದೇನೆ. ವಿಶ್ವಾಸ ಬಂಡೆಯ ಹತ್ತಿರ ಆಳ ಕಡಿಮೆಯಿರುವ ಜಾಗಕ್ಕೆ ಬರುತ್ತಿದ್ದಂತೆ ನಡೆದುಕೊಂಡೇ ಬಂದ. ಈ ಜಾಗ ಈಜಲು ಹೇಳಿ ಮಾಡಿಸಿದಂತಿದೆ, ಈಜುವುದು ಬಹಳ ಕಷ್ಟವು ಅಲ್ಲ, ಬಹಳ ಸುಲಭವೂ ಅಲ್ಲ. ಈ ರೀತಿ ಹರಿಯುವ ನದಿಯೊಂದಿಗೆ ಸೆಣೆಸುತ್ತಾ ಈಜುವ ಮಜವೇ ಬೇರೆ ಅಂದ. ರಾಕೇಶ ಪೆಚ್ಚು ನಗೆ ಬೀರಿದ. ವಿಶ್ವಾಸನಿಗೆ ಹೇಗೂ ಮೈ ಒದ್ದೆಯಾಗಿದೆ, ಇನ್ನೊಂದು ಸ್ವಲ್ಪ ಹೊತ್ತು ಈಜಿಯೇ ಮುಂದಿನ ಕೆಲಸ ಎಂದು ಯೋಚಿಸಿ ಮತ್ತೆ ಈಜಲು ಆರಂಭಿಸಿದ. ರಶ್ಮಿ ಕೂಡ ಸುಮ್ಮನೆ ಹರಿಯುವ ಹೊಳೆಯ ಕಡೆಗೆ ದೃಷ್ಟಿ ಇಟ್ಟುಕೊಂಡು, ಕೆಲವೊಮ್ಮೆ ಮೊಬೈಲ್ ನೋಡುತ್ತಾ ಕೂತಳು. 

ರಶ್ಮಿಗೆ ಇವನು ಎದ್ದು ತನ್ನ ಕೆಲಸಕ್ಕೆ ಹೋದರೆ ಸಾಕೆನ್ನುವ ಭಾವನೆ ಮನಸ್ಸಿನಲ್ಲಿ ಇರುವುದು ಅವಳ ನಡವಳಿಕೆಯಿಂದಲೇ ರಾಕೇಶನಿಗೆ ತಿಳಿದಿದೆ. ಆದರೆ, ರಾಕೇಶನ ಮನಸ್ಸಿನಲ್ಲಿ ಮಾತ್ರ ಪ್ರೀತಿ ಶುರುವಾದ ನೆನಪುಗಳಿಂದ ಹಿಡಿದು ಇಂದು ಪಕ್ಕ ಕೂತಿದ್ದರು ಸಹ ಮಾತನಾಡಿಸದ ದಿನಗಳವರೆಗೆ ನೆನಪಿನ ಜಲಪಾತದ ತುದಿಯಿಂದ ಧುಮುಕಿದ ಅನುಭವವಾಗುತ್ತಿದೆ. ಇದೆ ಹೊತ್ತಿಗೆ ರಶ್ಮಿ ಕಸಿವಿಸಿಯಿಂದ ಎದ್ದು ನಿಂತಳು. ಏನಾಯಿತೆಂದು ನೋಡುವಷ್ಟರಲ್ಲಿ ವಿಶ್ವಾಸ ಎಲ್ಲಿಯೂ ಕಾಣಿಸುತ್ತಿಲ್ಲ. ರಾಕೇಶ ಕೂಡ ದೂರ ನೋಡಿ ವಿಶ್ವಾಸನ ಹೆಸರು ಕೂಗಿದ. ತಡಮಾಡದೆ ರಾಕೇಶ ಸಹ ಅವನು ಈಜಲು ಹೋದ ಕಡೆಯೇ ಇವನು ಹೋದ. ಎತ್ತ ನೋಡಿದರು ಸಹ ವಿಶ್ವಾಸನ ಸುಳಿವು ಇಲ್ಲ. ಅಲ್ಲಿ ಮುಂದೆ ಸಾಗಿದಂತೆ ಈಜಲು ಸಹ ಕಷ್ಟವಾದ ಬಲವಾದ ನೀರಿನ ಹರಿವು, ಅದರೊಂದಿಗೆ ಈ ಕಂಗೆಟ್ಟ ಪರಿಸ್ಥಿತಿ. ಅಷ್ಟು ಹೊತ್ತಿಗೆ ರಶ್ಮಿ ಕೂಗುವುದನ್ನು ಕಂಡು ಮನೆಯ ಸುತ್ತಮುತ್ತ ಇರುವವರೆಲ್ಲ ಆ ಜಾಗಕ್ಕೆ ಬಂದರು. ಸುಮಾರು ಅರ್ಧ ಗಂಟೆಯಾದರೂ ಸಹ ವಿಶ್ವಾಸ ಮಾತ್ರ ಪತ್ತೆಯಿಲ್ಲ. ಊರಿನ ನಾಲ್ಕೈದು ಜನ ಏನೇ ಮಾಡಿದರು ಸಹ ಹುಡುಕಲು ಸಾಧ್ಯವೇ ಆಗಲಿಲ್ಲ. ರಾಕೇಶ ಸುಸ್ತಾಗಿ ಬಂದು ದಡದಲ್ಲಿ ಕೂತ. ಹೆಂಗಸರೆಲ್ಲ ಈಗಲೇ ಕೂಗಿ ಬೊಬ್ಬೆಯಿಟ್ಟು ಅಳಲು ಶುರು ಮಾಡಿದ್ದಾರೆ. ಪೊಲೀಸರಿಗೆ ಮಾಹಿತಿ ಕೊಟ್ಟು ಅವರು ಬೇಕಾದ ತಂಡದೊಂದಿಗೆ ಬಂದು ಹುಡುಕಾಟ ಆರಂಭಿಸಿದರು. ಎರಡು ದಿನಗಳ ಹುಡುಕಾಟದ ನಂತರ ವಿಶ್ವಾಸ ಈಜುತ್ತಿದ್ದ ಸ್ಥಳದಿಂದ ಸುಮಾರು ಎರಡು ಕಿಲೋಮೀಟರು ದೂರದಲ್ಲಿ ವಿಶ್ವಾಸನ ಮೃತದೇಹ ಪತ್ತೆಯಾಯಿತು. ಎರಡು ದಿನಗಳಿಂದ ಅನ್ನ ನೀರು ಬಿಟ್ಟು ಅತ್ತು ಕೂಗಿ ದೇಹದಲ್ಲಿ ಶಕ್ತಿಯೇ ಇಲ್ಲದಂತಾಗಿತ್ತು. ಹೊಳೆ ತನಗೇನು ಗೊತ್ತಿಲ್ಲವೆಂಬಂತೆ ತುಂಬಿ ಹರಿಯುತ್ತಲೇ ಇತ್ತು....   

***

ಕಾಮೆಂಟ್‌ಗಳು

- Follow us on

- Google Search