ಕಥೆ: ಮಣ್ಣಾದ ರಹಸ್ಯ

ಸುರೇಶನಿಗೆ ಹೊಸತೇನನ್ನು ಕಂಡರೂ ಒಂದು ರೀತಿಯ ಅಸಮಾಧಾನ. ಅವನ ಪ್ರಕಾರ ಈ ಹೊಸತಾಗಿ ಬರುವುದೆಲ್ಲವು ಒಂದು ರೀತಿಯ ಗೋಮುಖ ವ್ಯಾಘ್ರ. ಅವನ ಅಪ್ಪ, ಅಜ್ಜ, ಮುತ್ತಜ್ಜ ಮುಂತಾದ ಹಿರಿಯರೆಲ್ಲರೂ ಇವೆಲ್ಲ ಇಲ್ಲದೆ ಬದುಕು ಸಾಗಿಸಿದವರು. ಯಾವತ್ತೂ ಸಹ ಕರೆಂಟ್ ಇಲ್ಲವೆಂದು ಗೊಣಗಿಲ್ಲ, ಗೊಣಗಲು ವಿದ್ಯುತ್ ಸಂಪರ್ಕ ಇದ್ದರೆ ತಾನೇ. ಈ ಆಧುನಿಕತೆಯೇ ನಮ್ಮ ಇಂದಿನ ಜೀವನವನ್ನು ಸಂತೋಷವಿಲ್ಲದೆ ಮಾಡಿರುವುದು ಎಂಬುದನ್ನು ಬಲವಾಗಿ ನಂಬಿದ್ದ ಸುರೇಶ. ಅವನೊಬ್ಬ ನಂಬಿದ್ದರೆ ಅದರಿಂದ ಏನೂ ತೊಂದರೆಯಾಗುತ್ತಿರಲಿಲ್ಲವೇನೋ, ಆದರೆ ಅದನ್ನು ಎಲ್ಲರಿಗು ವಿವರಿಸಲು ಹೋಗಿ ಊರಿನವರಿಂದ ಇವನೊಬ್ಬ ಅರೆಹುಚ್ಚ ಎಂದು ತಿರಸ್ಕರಿಸಲ್ಪಟ್ಟಿದ್ದ. ಹಾಗಾಗಿ ಸುರೇಶ ಏನೇ ಹೇಳಿದರು, ಒಂದು ರೀತಿಯ ಕನಿಕರದಿಂದ ಅದನ್ನು ಆಲಿಸುತ್ತಿದ್ದರೆ ಹೊರತು ಅವನ ಮಾತನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. 

ಸುರೇಶನ ಹೆಂಡತಿ ಕಮಲ. ಸುರೇಶ ಊರಿನವರೊಂದಿಗೆ ಏನೇ ವಾದವಿವಾದ ಮಾಡಿದರೂ ಕಮಲನ ಮುಂದೆ ಎಷ್ಟು ಬೇಕೋ ಅಷ್ಟೇ ಮಾತು. ಹಿಂದೊಮ್ಮೆ ಈ ಗ್ಯಾಸ್ ಸ್ಟವ್ ಬಂದಮೇಲೆ ಹೇಗೆ ಹೆಂಗಸರೆಲ್ಲ ಸೋಮಾರಿಯಾಗಿದ್ದಾರೆ ಎಂಬುದನ್ನು ವಿವರಿಸಲು ಹೋಗಿ ಕಮಲೆಯ ಪಿತ್ತ ನೆತ್ತಿಗೇರಿ ಸಾರಿನ ಸೌಟಿನಲ್ಲಿ ಮಂಡೆ ಮೇಲೆ ಬಾರಿಸಿದ್ದ ನೆನಪು ಸುರೇಶನಿಗೆ ಈಗಲೂ ಹಚ್ಚಹಸುರಾಗಿದೆ. ಸುರೇಶನ ವಾದವೇನೋ ಚೆನ್ನಾಗಿಯೇ ಇರುತ್ತದೆ, ಆದರೆ ಅವನ ವಾದ ಕೊನೆಗೊಳ್ಳುವ ಹೊತ್ತಿಗೆ ಅದು  ಮತ್ತೊಂದು ವಾದಕ್ಕೆ ಮುನ್ನುಡಿಯಾಗಿರುತ್ತದೆ ಅಷ್ಟೇ. ಹೀಗಾಗಿ, ದಿನವಿಡೀ ಮಾತಾಡಲು ಸಿದ್ಧವಿರುವ ಜನರು ಮಾತ್ರ ಸುರೇಶನೊಂದಿಗೆ ವಾದಕ್ಕೆ ಇಳಿಯಬಲ್ಲರು. ಹೆಚ್ಚಿನ ಜನರಿಗೆ ಇವನ ಮಾತೆಂದರೆ ಕಿರಿಕಿರಿ. ಕೆಲವರು ಸುರೇಶನನ್ನು ಒಳ್ಳೆಯ ಮಾನಸಿಕ ಆಸ್ಪತ್ರೆಗೆ ತೋರಿಸಿದರೆ ಸರಿ ಹೋಗಬಹುದು ಎಂಬ ಸಲಹೆಯನ್ನು ಕಮಲಳಿಗೆ ನೀಡಿದ್ದರು. ಆ ವಿಷಯವನ್ನು ಸುರೇಶನಿಗೆ ಹೇಳಿದರೆ, ಹೇಗೆ ಮಾನಸಿಕ ಆರೋಗ್ಯವನ್ನು ಬಂಡವಾಳ ಮಾಡಿಕೊಂಡು ಕೋಟ್ಯಂತರ ರೂಪಾಯಿಗಳ ಆಸ್ತಿ ಮಾಡುತ್ತಿದ್ದಾರೆ ಹಾಗು ಮಾನಸಿಕ ಆರೋಗ್ಯವೆಂಬುದು ಒಂದು ರೀತಿಯ ರಿಲೇಟಿವ್ ಕಾನ್ಸೆಪ್ಟ್ ಎಂಬುದಾಗಿ ದಿನವಿಡೀ ವಿವರಿಸಿ ಕಮಲಳ ಮಾನಸಿಕ ಆರೋಗ್ಯವನ್ನೇ ಏರುಪೇರು ಮಾಡಿದ ಮಹಾನುಭಾವ ಸುರೇಶ. 

ಸುರೇಶನನ್ನು ಊರಿನವರು ಆತನ ಹಿಂದೆ ಏನೇ ಮಾತಾಡಿದರು ಸಹ ಊರಿನಲ್ಲಿ ನಡೆಯುವ ಎಲ್ಲ ರೀತಿಯ ಕಾರ್ಯಗಳಿಗೂ ಬರಹೇಳುತ್ತಿದ್ದರು. ಅವನೇನೇ ಅಂದರು ಸಹ ಗಂಭೀರವಾಗಿ ಪರಿಗಣಿಸದೆ ಇರುವುದು ಒಂದು ಹೊಸ ಬಗೆ ಮಾತಿನ ಸ್ವಾತಂತ್ರ್ಯವನ್ನು ಆತನಿಗೆ ನೀಡಿತ್ತು. ಸುರೇಶನ ಮಕ್ಕಳಿಬ್ಬರು ಸಹ ದೂರದ ಊರಿನಲ್ಲಿ ಹಾಸ್ಟೆಲ್ ಅಲ್ಲಿ ಉಳಿದುಕೊಂಡು ಕಾಲೇಜಿಗೆ ಹೋಗಿಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು. ಹಿರಿಯರು ಮಾಡಿಟ್ಟಿದ್ದ ಚೂರುಪಾರು ಕಾಫಿ ಹಾಗು ಅಡಿಕೆ ತೋಟದ ಆದಾಯವೇ ಅವರ ಸಂಸಾರ ನಿರ್ವಹಣೆಗೆ ಸಾಕಾಗಿತ್ತು. ಕೆಲವೊಮ್ಮೆ ದುಡ್ಡಿನ ಅವಶ್ಯಕತೆ ಎದುರಾದಾಗ ಅಲ್ಲಿ ಇಲ್ಲಿ ಸಾಲ ಮಾಡಿ ಸರಿಹೊಂದಿಸುತ್ತಿದ್ದರು. ಕಾಫಿ ಅಡಿಕೆ ಮಾರಿದ ನಂತರ ಸಾಲ ತೀರಿಸಿ, ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಮುಂದಿನ ಕೆಲಸಕ್ಕೆ ಕೈ ಹಾಕುತ್ತಿದ್ದರು. ಅಲ್ಲಿಂದಲ್ಲಿಗೆ ಜೀವನ ನಡೆಯುತಿತ್ತು. ಇದು ಸುರೇಶನ ಜೀವನದ ಮಂತ್ರ, ಎಷ್ಟು ಬೇಕೋ ಅಷ್ಟೇ ಸಾಕು ನಮ್ಮ ಬಾಳಿಗೆ. ಸ್ವಾರ್ಥ ಹಾಗು ದುರಾಸೆಯಿಂದ ಗಳಿಸಿದ ಸಂಪತ್ತು ಎಂದಿಗೂ ನಮ್ಮಲ್ಲಿ ಉಳಿಯುವುದಿಲ್ಲ ಎಂಬುದೇ ಅವರ ಜೀವನದ ಧ್ಯೇಯವಾಕ್ಯ. 

ಸುರೇಶ ಒಂದು ದಿನ ಸುಮ್ಮನೆ ಸಂಜೆ ತನ್ನ ಮನೆಯಲ್ಲಿ ಕೂತು ತನ್ನ ಮನಸ್ಸಿನಲ್ಲಿ ಮೂಡುತ್ತಿರುವ ಆಲೋಚನೆಗಳ ಬಗ್ಗೆ ಯೋಚಿಸುತ್ತಿದ್ದಾನೆ. ಅವನ ಮನಸ್ಸಿನಲ್ಲಿ ಈಗ ಮೂಡುತ್ತಿರುವುದು ಒಬ್ಬ ಗೆಳೆಯನ ನೆನಪು. ಅವನ ಹೆಸರು ಸಂಜೀವ. ಅವನು ಸಹ ಸುರೇಶನಂತೆಯೇ ಜೀವನ ಕಳೆದವನು. ಒಂದು ದಿನ ತೋಟದಲ್ಲಿ ಮಣ್ಣು ಅಗೆಯುವಾಗ ಸಿಕ್ಕ ಚಿನ್ನದ ಒಡವೆಗಳ ಪೆಟ್ಟಿಗೆಯಿಂದ ಸಾಕಷ್ಟು ಆಸ್ತಿ ಮಾಡಿಕೊಂಡು ಬಿಂದಾಸ್ ಆಗಿ ಜೀವನ ಕಳೆದು ಮರಣ ಹೊಂದಿದವನು ಸಂಜೀವ. ಆದರೆ ಸಂಜೀವ ಎಲ್ಲರಂತಲ್ಲ. ಸಿಕ್ಕ ಚಿನ್ನದ ಒಡವೆಗಳಲ್ಲಿ ಅರ್ಧ ಭಾಗ ಮಾತ್ರ ತೆಗೆದುಕೊಂಡು ಉಳಿದಿದ್ದನ್ನು ಯಾರಿಗೂ ತಿಳಿಯದೆ ಇರುವ ಸ್ಥಳದಲ್ಲಿ ಬಚ್ಚಿಟ್ಟಿರುವುದಾಗಿ ಒಮ್ಮೆ ಸುರೇಶನಿಗೆ ಹೇಳಿದ್ದ. ಆ ಮಾತು ಹೇಳಿ ಇಂದಿಗೆ ಚಿನ್ನದ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಈಗ ಅದನ್ನು ಹುಡುಕಿದರೆ ಅವನಿಗೆ ದೊರಕ್ಕಿದ್ದಕ್ಕಿಂತ ಮೂರು ಪಟ್ಟು ಸಂಪತ್ತು ತನಗೆ ಸಿಗುತ್ತದೆ ಎಂಬ ಆಲೋಚನೆಯೇ ಸುರೇಶನ ನಿದ್ಧೆಗೆಡಿಸಿತ್ತು. ಸಂಜೀವ ಯಾಕೆ ಹಾಗೆ ಮಾಡಿದ್ದ ಎನ್ನುವುದಕ್ಕೆ ಕಾರಣ ಇಷ್ಟೇ, ಸಂಜೀವನೇ ಹೇಳಿದಂತೆ "ಕಷ್ಟಪಟ್ಟು ಕೆಲಸ ಮಾಡುವವರಿಗೆ ಅದು ದೊರೆಯಬೇಕೆ ಹೊರತು ಬೇರೆಯವರಿಗಲ್ಲ. ಸೋಮಾರಿಗಳಿಗೆ ಅದು ಅವರ ಕಣ್ಮುಂದೆಯೇ ಇದ್ದರು ಸಹ ಅದು ಸಿಗುವುದಿಲ್ಲ". 

ಸುರೇಶನಿಗೆ ಸುಮ್ಮನೆ ತಲೆಕೆಡಿಸಲು ಅವನು ಹಾಗೆ ಹೇಳಿರಬಹುದು ಅಥವಾ ಸುರೇಶ ಅದನ್ನು ಯಾರಿಗೆ ಹೇಳಿದರು ಅದನ್ನು ನಂಬಲು ಸಿದ್ಧವಿಲ್ಲದೆ ಇರುವ ಊರಿನವರ ಮನಸ್ಥಿತಿಯನ್ನು ಅರಿತು ಹಾಗೆ ಹೇಳಿರಬಹುದು. ಆದರೆ, ಸುರೇಶನಿಗೆ ಮಾತ್ರ ಸಂಜೀವನ ಮಾತಿನಲ್ಲಿ ಸತ್ಯವಿರುವುದು ಕಂಡಿತ್ತು. ಆದರೆ ಅದನ್ನು ಹುಡುಕುವುದಾದರೂ ಹೇಗೆ ? ಆ ಐದು ಎಕರೆ ತೋಟದಲ್ಲಿ ಹೋಗಿ ಅಗೆಯಲು ಶುರು ಮಾಡಿದರೆ ಅವರ ಮನೆಯವರಿಗೂ ಅನುಮಾನ ಬರುತ್ತದೆ. ಅವನಿಗೆ ಚಿನ್ನ ದೊರೆತ ನಂತರ ಸ್ವಲ್ಪ ದಿನಗಳ ಕಾಲ ಊರಿನ ಗಂಡಸು ಹೆಂಗಸರೆಲ್ಲ ಹಾರೆ, ಗುದ್ದಲಿ, ಪಿಕಾಸಿ, ಸಬ್ಬಲ್ಗಳನ್ನು ಹಿಡಿದುಕೊಂಡು ತಮಗಿಷ್ಟ ಬಂದಲ್ಲೆಲ್ಲ ಮಣ್ಣು ಅಗೆಯಲು ಶುರು ಮಾಡಿದ್ದರು. ಅದ್ಯಾರೋ ಸ್ವಾಮೀಜಿ ಮಂತ್ರಿಸಿ ತೆಂಗಿನಕಾಯಿ ಕೊಡುತ್ತಾರೆಂದು ಹಾಗು ಅದನ್ನು ತಂದು ಪ್ರಾರ್ಥನೆ ಮಾಡಿ ನೆಲದ ಮೇಲೆ ಗಿರಗಿರ ತಿರುಗಿಸಿ ಬಿಟ್ಟರೆ ಆ ಕಾಯಿ ನಿಧಿಯಿದ್ದ ದಿಕ್ಕನ್ನು ತೋರಿಸುತ್ತದೆ ಎಂಬ ಸುದ್ಧಿಗಳು ಎಲ್ಲರ ಬಾಯಲ್ಲಿ ಹರಡುತ್ತಿದ್ದವು. ಊರಿನಲ್ಲಿ ತೆಂಗಿನಕಾಯಿಗೆ ಬೇಡಿಕೆ ಹೆಚ್ಚಿ ಬೇರೆಯವರ ತೋಟದಲ್ಲೆಲ್ಲ ಕದಿಯಲು ಆರಂಭಿಸಿದ್ದರು. ಕಾಫಿ ಅಡಿಕೆ ತೋಟದಲ್ಲಿ ಸಹ ಈ ಮಂತ್ರಿಸಿರುವ ತೆಂಗಿನಕಾಯಿಗಳು ಅನಾಥವಾಗಿ ಬಿದ್ದು ಹೊರಳಾಡುತ್ತಿದ್ದವು. ಮಂತ್ರಿಸಿದ ತೆಂಗಿನಕಾಯಿ ಅಡುಗೆಗೆ ಉಪಯೋಗಿಸುವಷ್ಟು ಧೈರ್ಯ ಯಾರಿಗೆ ಬರುತ್ತದೆ ? ಈ ಎಲ್ಲ ನಾಟಕಗಳು ದಿನ ಕಳೆದಂತೆ ನಿಂತು ಹೋದವು. ಒಂದಷ್ಟು ಯಾವುದೊ ಕಾಲದಲ್ಲಿ ಹುಗಿದಿದ್ದ ಸತ್ತ ಪ್ರಾಣಿಗಳ ತಲೆಬುರುಡೆ ಬಿಟ್ಟರೆ ಯಾರಿಗೂ ಏನು ಸಹ ಸಿಕ್ಕಿರಲಿಲ್ಲ. ಏನಾದರು ಸಿಕ್ಕಿದ್ದರು ಸಹ ಅದನ್ನು ಯಾರಿಗೂ ಹೇಳುವಂತಿರಲಿಲ್ಲ. ಯಾರೇ ಶ್ರೀಮಂತರಾದರು ಸಹ ತೆಂಗಿನಕಾಯಿಯ ಮಹಿಮೆಯೇ ಎಂಬ ಮೂಢನಂಬಿಕೆಗಳು ಜನರಲ್ಲಿ ಬೇರೂರಿದ್ದವು. 


ಸುರೇಶ ಮಾತ್ರ ಇವನ್ನೆಲ್ಲ ನಂಬಿರಲೇ ಇಲ್ಲ. ಸಂಜೀವನಿಗೂ ಈ ಬಂಗಾರದ ನಿಧಿ ಸಿಕ್ಕಿರುವುದು ಒಂದು ಕಟ್ಟು ಕತೆಯೇ ಇರಬಹುದು. ಸಂಜೀವನಿಗೆ ಈ ರೀತಿಯ ಹಗಲುಕನಸು ಕಾಣುವುದು ಒಂದು ಅಭ್ಯಾಸವಾಗಿತ್ತು. ಇವತ್ತು ಅವನ ಮನೆಯವರು ಸುಖವಾಗಿರುವುದು ಸಂಜೀವ ಹೃದಯಾಘಾತದಿಂದ ಮರಣ ಹೊಂದಿದ ಮೇಲೆ ಬಂದ ಜೀವವಿಮೆ ಹಣದಿಂದ. ಆ ಬಂಗಾರದ ನಿಧಿಯ ಕಥೆಯನ್ನು ಅವನ ಹೆಂಡತಿ ಮಕ್ಕಳೇ ಸಾರಾಸಗಟಾಗಿ ಅಲ್ಲಗಳೆದಿರುವಾಗ ಈ ಊರಿನವರಿಗೆ ಯಾಕೆ ಇಷ್ಟು ನಂಬಿಕೆ ಎಂಬುವುದೇ ಅರ್ಥವಾಗಿರಲಿಲ್ಲ. ಬಹುಷಃ ಸುರೇಶನಿಗೆ ಹೇಳಿದಂತೆ ಗೌಪ್ಯವಾಗಿ ಊರಿನ ಎಲ್ಲರಿಗು ಹೀಗೆಯೇ ಹೇಳಿರಬಹುದೇ ಎಂಬ ಅನುಮಾನವೂ ಸಹ ಸುರೇಶನ ಮನಸ್ಸಿನಲ್ಲಿ ಈ ಮೊದಲೇ ಹಲವಾರು ಬಾರಿ ಮೂಡಿದೆ. ಸಂಜೀವ ಈ ವಿಷಯ ಪ್ರಸ್ತಾಪಿಸುವಾಗ ಅವನ ಮುಖದಲ್ಲಿದ್ದ ಖುಷಿ, ಜಗತ್ತನ್ನೇ ಗೆದ್ದ ಸಂಭ್ರಮ ಇವನ್ನೆಲ್ಲ ನೆನೆಸಿಕೊಂಡರೆ ಸಂಜೀವ ಹೇಳಿದ್ದು ನಿಜವೂ ಇರಬಹುದು ಎಂದು ಸಹ ಮನಸ್ಸಿಗೆ ಅನಿಸುತ್ತದೆ. ಈ ತೊಳಲಾಟದಲ್ಲಿ ದಿನದಿಂದ ದಿನಕ್ಕೆ ಸುರೇಶ ಮೌನಿಯಾಗುತ್ತಾ ಹೋಗುತ್ತಿದ್ದಾನೆ. ಮೊದಲೆಲ್ಲ ಅವನೇ ಕರೆದು ಕಂತೆ ಪುರಾಣ ಹೇಳುತ್ತಿದ್ದವನು ಕೂತಲ್ಲಿ ನಿಂತಲ್ಲಿ ಮಂಕಾಗಿ ಏನೋ ಯೋಚಿಸುತ್ತಿರುತ್ತಾನೆ. ಜಗತ್ತೇ ಒಂದು ಬಿಡಿಸಲಾರದ ಜಗತ್ತಾಗಿ ಸುರೇಶನಿಗೆ ಭಾಸವಾಗುತ್ತಿದೆ. 

ಸಂಜೀವನ ಮನೆಗೆ ಒಂದು ದಿನ ಸುಮ್ಮನೆ ಮಾತನಾಡಿಸಿಕೊಂಡು ಬರಲು ಸುರೇಶ ಹೋದ. ಮನೆಯ ಒಳಗೆ ಕರೆದು ಅವನ ವಿಧವೆಯಾಗಿದ್ದ ಹೆಂಡತಿ ಕಾಫಿ ಕೊಟ್ಟು ಉಪಚರಿಸಿದಳು. ವಿಮೆಯ ಹಣದಲ್ಲೇ ಹೇಗೋ ಜೀವನ ಸಾಗಿಸಿಕೊಂಡು ಹೋಗುತ್ತಿರುವುದಾಗಿ ಹೇಳಿ ಗಂಡನನ್ನು ನೆನೆದು ಭಾವುಕಳಾದಳು. ಇದನ್ನೆಲ್ಲಾ ನೋಡುತ್ತಿದ್ದ ಸುರೇಶನಿಗೆ ಒಂದು ಆಶ್ಚರ್ಯಕರ ದೃಶ್ಯವೊಂದು ಕಣ್ಣಿಗೆ ಬಿತ್ತು. ಸಂಜೀವನ ಮಗಳಾಗಿದ್ದ ಸಂಜೀವಿನಿಯ ಕಿವಿಯ ಓಲೆ. ಅಂತಹ ಡಿಸೈನ್ ಅನ್ನು ಯಾವುದೊ ಅಜ್ಜಿಯ ಕಿವಿಯಲ್ಲಿ ನೋಡಿದ ನೆನಪು ಅವನಿಗಾಯಿತು. ಕೇಳಿದಾಗ ಸಂಜೀವಿನಿ ಅದು ತನ್ನ ಅಜ್ಜಿಯೇ ತನಗೆ ಉಡುಗೊರೆ ಕೊಟ್ಟಿದ್ದಾಗಿ ಹೇಳಿದಳು. ಸುರೇಶನಿಗೆ ಸಮಾಧಾನದೊಂದಿಗೆ ಬೇಸರವೂ ಆಯಿತು. ತನ್ನ ಗೆಳೆಯನೊಂದಿಗೆ ಕಳೆದಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಮೌನವಾಗಿ ಅವನ ಮನೆಯಲ್ಲಿ ಹಾಕಿದ್ದ ಅವನ ಚಿತ್ರಪಟದೆಡೆಗೆ ಅವನ ದೃಷ್ಟಿ ಹೋಯಿತು. ನೋಡಿದಷ್ಟು ನಿಗೂಢ ಭಾವವೊಂದು ಆ ಚಿತ್ರದಲ್ಲಿ ವ್ಯಕ್ತವಾಗುತ್ತಿತ್ತು. ಇದನ್ನೆಲ್ಲಾ ಗಮನಿಸುತ್ತಿದ್ದ ಸಂಜೀವನ ಹೆಂಡತಿಗೆ ಸುರೇಶನ ಮನಸ್ಸಿನಲ್ಲಿ ಏನು ಅನುಮಾನವಿದೆ ಎಂಬ ವಿಷಯ ಮೊದಲಿಂದಲೇ ತಿಳಿದಿತ್ತು. ಹಲವಾರು ಬಾರಿ ಆ ವಿಚಾರವಾಗಿ ಮಾತನಾಡಲು ಬಾಯಿ ತೆಗೆದವಳು ಸುಮ್ಮನಾಗಿದ್ದಳು. 

ಸುಮಾರು ೩೦ ವರ್ಷಗಳ ಕಾಲ ಒಟ್ಟಿಗೆ ಬಾಳಿದ್ದರು ಸಂಜೀವಿನಿಗೂ ಸಂಜೀವನನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳಲು ಆಗಿರಲಿಲ್ಲ. ತಾನು ಚಿನ್ನವನ್ನು ಎಲ್ಲಿಯೋ ಅಡಗಿಸಿ ಇಟ್ಟಿರುವ ಕಥೆಯನ್ನು ಅವಳು ಸಹ ಕೇಳಿದ್ದಳು. ಆದರೆ ಅದನ್ನೆಲ್ಲ ನಂಬಿಕೊಂಡು ಹೋದರೆ ಮಾಡಬೇಕಾದ ಕೆಲಸಗಳು ಹಾಳುಬಿದ್ದು ತಿನ್ನುವ ಅನ್ನಕ್ಕೂ ಗತಿಯಿಲ್ಲದ ಸ್ಥಿತಿ ಬರುತ್ತದೆ ಎಂಬುದನ್ನು ಚೆನ್ನಾಗಿ ಅರಿತಿದ್ದಳು. ಜೀವನದ ಎಲ್ಲ ಕಷ್ಟಗಳಿಂದ ಆ ಸಂಪತ್ತು ನಮ್ಮನ್ನು ಪಾರು ಮಾಡಬಹುದು ಎಂಬ ಆಲೋಚನೆಯೇ ಅಷ್ಟೆಲ್ಲ ಹುಡುಕಾಟಗಳಿಗೆ ಕಾರಣವಾಗಿತ್ತು. ಜೀವನವೆಂಬುದೇ ಒಂದು ನಿರಂತರ ಹುಡುಕಾಟ. ಪ್ರತಿಯೊಬ್ಬರೂ ತಮಗೆ ಬೇಕಾದ ಏನನ್ನೋ ನಿರಂತರವಾಗಿ ಹುಡುಕುತ್ತಲೇ ಇರುತ್ತಾರೆ. ಬೇಕಾದುದ್ದು ಸಿಕ್ಕಿದ ನಂತರ ಬೇರೇನೋ ಬೇಕೆನ್ನಿಸುತ್ತದೆ, ಮತ್ತದೇ ಹುಡುಕಾಟದ ಆರಂಭ. ಕಾಲಚಕ್ರದಲ್ಲಿ ನಿರಂತರವಾಗಿ ಚಲಿಸುತ್ತಿರುವ ಜೀವನವೆಂಬ ದಾರಿಯ ಉದ್ದೇಶವೇನೆಂಬುದು ಯಾರಿಗೂ ತಿಳಿದಿಲ್ಲ. ಹೀಗಿರುವಾಗ  ಈ ಹುಚ್ಚನಂತಾಗಿರುವ ಗಂಡನ ಸ್ನೇಹಿತನನ್ನು ಕಂಡರೆ ಅವನಿಗೆ ಹೇಗೆ ಬುದ್ಧಿ ಹೇಳಬೇಕೆಂದು ಸಂಜೀವಿನಿಗೆ ತಿಳಿಯುವುದಿಲ್ಲ. ಸುರೇಶನಿಗೆ ಮಾತ್ರ ನಿಧಿಯ ಬಗ್ಗೆ ಅವನ ಮನಸ್ಸಿನಲ್ಲಿದ್ದ ಯೋಚನೆಯನ್ನು ಹೌದೆಂದು ಸಂಜೀವಿನಿ ಒಪ್ಪಿಕೊಂಡರೆ ಮನಸ್ಸು ಶಾಂತವಾಗುತ್ತದೆ. ಒಪ್ಪಿಕೊಂಡಿದ್ದೆ ಆದಲ್ಲಿ ಸಂಜೀವಿನಿಯ ಸಂಸಾರದ ಮೇಲೆ ಅದರ ಪರಿಣಾಮವನ್ನು ಊಹಿಸಲು ಸಾಧ್ಯವಿಲ್ಲ. ಯಾರಿಗೂ ಏನೆಂದು ಅರ್ಥವಾಗದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಸಿದ್ದ ಸಂಜೀವ ಮಾತ್ರ ನೆಗೆದುಬಿದ್ದು ನಲ್ಲಿಕಾಯಿಯಾಗಿದ್ದ. ನಿಧಿಯ ಕಥೆ  ಹಾಗು ಅದಕ್ಕೆ ಸಂಬಂಧಿಸಿದ ರಹಸ್ಯ ಸಂಜೀವನೊಂದಿಗೆ ಮಣ್ಣಾಗಿದ್ದವು. 

ಕಾಮೆಂಟ್‌ಗಳು

- Follow us on

- Google Search