ಮೀಸಲಾತಿ

'ಮೀಸಲಾತಿ' ಎನ್ನುವ ಪದ ಕೇಳಿದಾಕ್ಷಣ ಹಲವರ ಮನಸ್ಸಿನಲ್ಲಿ ಒಂದೆರಡು ಕ್ಷಣಗಳ ಕಾಲ ತಳಮಳ ಉಂಟಾಗಬಹುದು. ಮೀಸಲಾತಿಯ ಫಲಾನುಭವಿಗಳು ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ದೇಶದಲ್ಲಿ ಇದ್ದಾರೆ. ಬಹಳಷ್ಟು ಜನರು ಇದು ತಪ್ಪು, ಪ್ರತಿಭೆಗಳನ್ನು ಹೊಸಕಿ ಹಾಕುವ ವ್ಯವಸ್ಥೆ ಎಂದೆಲ್ಲ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇರುವರು. ಮೀಸಲಾತಿ ತಪ್ಪೆಂದು ವಾದಿಸುವ ಬಹಳಷ್ಟು ಜನರಿಗೆ ತಮ್ಮ ಸಂಪೂರ್ಣ ಕುಟುಂಬ ಸಾವಿರಾರು ವರ್ಷಗಳ ಕಾಲ ಮೀಸಲಾತಿಯ ಪ್ರಯೋಜನ ಪಡೆದಿದೆ  ಎನ್ನುವ ಅರಿವು ಇಲ್ಲವೆಂದು ಅನ್ನಿಸುತ್ತದೆ. ಇದೇನು ಹೀಗೆ ಹೇಳುತ್ತಿರುವೆ ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಮೂಡುವುದು ಸಹಜ. ಹೌದು, ಇಂದು ಹೆಚ್ಚು ಆಸ್ತಿ, ಸಂಪತ್ತು, ವಿದ್ಯೆ ಹೊಂದಿರುವ ಸಾಕಷ್ಟು ಮೇಲ್ಜಾತಿಗಳಿಗೆ ಸೇರಿದ ಜನರಿಗೆ ಸಮಾಜದಲ್ಲಿದ್ದ ಜಾತಿವ್ಯವಸ್ಥೆಯಿಂದ ಮೀಸಲಾತಿ ನೂರಾರು ವರ್ಷಗಳವರೆಗೆ ದೊರೆತಿದೆ. 


ನಮ್ಮ ದೇಶದಲ್ಲಿ ಹಿಂದುಳಿದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಲ್ಲೆಗಳು ಕಡಿಮೆ ಆಗಿವಿಯೇ ? ಅದು ಕೂಡ ಇಲ್ಲ. ೨೦೧೯ರಲ್ಲಿ ಸುಮಾರು ೪೯೦೦೦ +  ಕೇಸುಗಳು ಒಂದು ವರ್ಷಕ್ಕೆ ದಾಖಲಾಗಿವೆ(ವರದಿ) ಎಂದರೆ ನಮ್ಮ ಸಮಾಜ ಹೇಗಿದೆ ಎನ್ನುವ ಸ್ವಲ್ಪ ಅರಿವು ಮೂಡುತ್ತದೆ. ಎಷ್ಟೋ ಸಣ್ಣ ಪುಟ್ಟ ಕೇಸುಗಳು ದಾಖಲು ಆಗದೆ ಹೋಗುತ್ತವೆ. ಇಂತಹ ನಂಬಲು ಅಸಾಧ್ಯವಾದ ಎಷ್ಟೋ ಅಮಾನವೀಯ ಕ್ರೂರ ಘಟನೆಗಳು ಪ್ರತಿದಿನ ನಮ್ಮ ದೇಶದಲ್ಲಿ ನಡೆಯುತ್ತಿರುತ್ತವೆ. ಇವುಗಳು ಮಾಧ್ಯಮದಲ್ಲಿ ಹೆಚ್ಚು ವರದಿ ಆಗುವುದೇ ಇಲ್ಲ. ಏಕೆಂದರೆ ಹೆಚ್ಚಿನ ಪ್ರಖ್ಯಾತ ಮಾಧ್ಯಮಗಳು ಮೇಲ್ಜಾತಿಯವರ ಒಡೆತನದಲ್ಲಿ ಇವೆ. ಇವುಗಳನ್ನು ಜನರಿಗೆ ಹೆಚ್ಚು ತೋರಿಸಿದರೆ ಜಾತಿಯಿಂದ ಎಷ್ಟೆಲ್ಲಾ ಅನ್ಯಾಯ ನಡೆಯುತ್ತಿದೆ ಎನ್ನುವ ಸತ್ಯ ಗಮನಕ್ಕೆ ಬಂದು ಜಾತಿಯ ವಿರುದ್ಧ ಸಮಾಜವೇ ಸಮರ ಸಾರಬಹುದು. ಇದರೊಂದಿಗೆ ಕಾನೂನಿನ ಪ್ರಕಾರ ತಪ್ಪು ಎಂದು ಹೇಳಿದ್ದರು ಸಹ ಶೌಚಗುಂಡಿಗಳಿಗೆ ಮನುಷ್ಯರನ್ನು ಇಳಿಸಿ ಸ್ವಚ್ಛ ಮಾಡುವ ಕೆಲಸಗಳಲ್ಲಿ ವರ್ಷಕ್ಕೆ ಸಾವಿರಾರು ಹಿಂದುಳಿದ ಜಾತಿಗೆ ಸೇರಿದ ಜನರು ಇದ್ದಾರೆ (ವರದಿ). ಇಂತಹ ಅಮಾನವೀಯ ಆಚರಣೆಗಳನ್ನು ಸಮಾಜ ನೋಡಿಕೊಂಡು ಏಕೆ ಮೌನವಾಗಿದೆ ಎನ್ನುವ ಪ್ರಶ್ನೆ ನಾವು ನಮಗೆ ಕೇಳಿಕೊಳ್ಳಬೇಕು. 

ಹಿಂದುಳಿದವರು ಸಂಪತ್ತಿನ ಹಂಚಿಕೆಯಲ್ಲಿ ಸಹ ಹಿಂದುಳಿದಿದ್ದಾರೆ. ಉತ್ತಮ ಕೆಲಸಗಳಿಂದ ಹಿಡಿದು ವ್ಯಾಪಾರ ವಹಿವಾಟು ನಡೆಸುವ ಸಂಸ್ಥೆಗಳ ಮಾಲಿಕತ್ವದಲ್ಲಿ ಕೂಡ ಅಜಗಜಾಂತರ ವ್ಯತ್ಯಾಸವಿದೆ. ಈ ವರದಿಯನ್ನು ನೀವು ಖಂಡಿತ ಓದಬೇಕು (The many shades of caste inequality in India). ಕಣ್ಣಿಗೆ ಕಾಣುವಂತೆಯೇ ಇಷ್ಟೊಂದು ಅಸಮಾನತೆ, ಬಡತನ, ತಾರತಮ್ಯ ಸಮಾಜದಲ್ಲಿ ಇರುವಾಗ ಜಾತಿಪದ್ಧತಿ ಈಗ ಇಲ್ಲ ಎಂದು ಹೇಳುವುದು ನಮಗೆ ನಾವೇ ಹೇಳಿಕೊಳ್ಳುವ ದೊಡ್ಡ ಸುಳ್ಳು. ಅದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುವ ಬದಲು ಬೇರೆ ರೂಪದಲ್ಲಿ ಹೆಚ್ಚುತ್ತಲೇ ಹೋಗುತ್ತಿರುವುದು ಬಹಳ ದುಃಖದ ಸಂಗತಿ ಮಾತ್ರವಲ್ಲ ನಮ್ಮ ದೇಶಕ್ಕೆ ಇದು ಮಾರಕ. ಏಕೆಂದರೆ ನಮ್ಮ ದೇಶದ ಹೆಚ್ಚಿನ ಜನರು  ಹಿಂದುಳಿದವರು, ಅವರ ಅಭಿವೃದ್ಧಿ ಆಗದೆ ದೇಶ ಮುಂದುವರೆಯಲು ಸಾಧ್ಯವಿಲ್ಲ. ಉದ್ಯೋಗ, ಶಿಕ್ಷಣ, ವೈದ್ಯಕೀಯ, ಆಡಳಿತ  ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಹಿಂದುಳಿದ ಜನರು ಮುನ್ನೆಲೆಗೆ ಬರುವ ತನಕ ದೇಶ ಅಭಿವೃದ್ಧಿ ಕಾಣುವುದು ಕನಸಾಗಿಯೇ ಇರುತ್ತದೆ. 

ಇನ್ನು ಸಹ ನಿಮಗೆ ನಂಬಲು ಅಸಾಧ್ಯ ಅನ್ನಿಸಿದರೆ ನಿಮ್ಮ ಈ ದಿನಗಳ ಉತ್ತಮ ಜೀವನಕ್ಕೆ ನಿಮ್ಮ ಕುಟುಂಬದ ಆರ್ಥಿಕ ಸ್ಥಿತಿ ಎಷ್ಟರಮಟ್ಟಿಗೆ ಸಹಾಯ ಮಾಡಿದೆ ಎಂಬುದನ್ನು ಅವಲೋಕನ ಮಾಡಿಕೊಳ್ಳಿ. ಒಂದು ಕುಟುಂಬದ ಈಗಿನ ಆರ್ಥಿಕ ಸ್ಥಿತಿ ಹಿಂದಿನ ಕಾಲದವರಿಗೆ ತಮ್ಮ ಜಾತಿಯ ಆಧಾರದ ಮೇಲೆ ಸಮಾಜದಲ್ಲಿ ಸಿಗುತ್ತಿದ್ದ ಮನ್ನಣೆ ಮತ್ತು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಇವುಗಳ ಮೇಲೆ ಅವಲಂಬಿಸಿದೆ. 

ಬಹಳ ಸುಲಭವಾಗಿ ಅರ್ಥ ಆಗುವಂತೆ ಹೇಳಬೇಕೆಂದರೆ, ಹಿಂದುಳಿದವರನ್ನು ಶಿಕ್ಷಣ, ಸಂಪತ್ತು, ಅಧಿಕಾರದಿಂದ ನೂರಾರು ವರ್ಷ ಸಮಾಜ ಜಾತಿಯ ಕಾರಣ ಹೇಳಿ ಹಿಂದುಳಿಯುವಂತೆ ಮಾಡಿದೆ. ಇದು ನೂರಾರು ವರ್ಷಗಳವರೆಗೆ ನಡೆದಿರುವ ಅನ್ಯಾಯ. ಇದರಿಂದಾಗಿ ಇಂದಿಗೂ ದಿನಗೂಲಿ ಕೆಲಸ ಮಾಡಿ ಜೀವನ ಸಾಗಿಸುವ ಸ್ಥಿತಿಯಲ್ಲಿ ಹಿಂದುಳಿದವರು ಕೋಟ್ಯಂತರ ಸಂಖ್ಯೆಯಲ್ಲಿ ಇದ್ದಾರೆ. ಇಂತಹ ಜನರಿಗೆ ಆದ ಅನ್ಯಾಯಕ್ಕೆ ನ್ಯಾಯ ದೊರಕಿಸುವ ಪ್ರಯತ್ನವೇ ಮೀಸಲಾತಿ. ಟ್ಯಾಲೆಂಟ್, ಮೆರಿಟ್ ಅನ್ನುವುದು ಕೇವಲ ಪರೀಕ್ಷೆಗಳಿಂದ ಅಳೆಯಲು ಸಾಧ್ಯವಿಲ್ಲ. ಪರೀಕ್ಷೆಯಲ್ಲಿನ ಅಂಕಗಳು ಕೇವಲ ಕನಿಷ್ಠ ಅರ್ಹತೆ, ನಾವು ವಿದ್ಯಾಭ್ಯಾಸ ಮುಗಿಸಿದ ನಂತರ ನಮ್ಮ ಕ್ಷೇತ್ರದಲ್ಲಿ ಮಾಡುವ ಕೆಲಸಗಳು ನಮ್ಮ ಪ್ರತಿಭೆ ಏನೆಂಬುದನ್ನು ಜಗತ್ತಿಗೆ ಸಾರುತ್ತವೆ. 

ಮೆರಿಟ್ ಅಥವಾ ಪ್ರತಿಭೆ ಎನ್ನುವುದನ್ನು ಪರೀಕ್ಷೆಗಳಿಂದ ಅಳೆಯಲು ಸಾಧ್ಯವೇ ? ಯಾರು ಚೆನ್ನಾಗಿ ಸಮಯ ಕೊಟ್ಟು ಉತ್ತಮ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿರುವರೋ ಅಂತಹ ಅಭ್ಯರ್ಥಿಗಳಿಗೆ ಉತ್ತಮ ಅಂಕಗಳು ಬರುವ ಸಾಧ್ಯತೆ ಹೆಚ್ಚು. ವಿದ್ಯಾರ್ಥಿಯ ಪ್ರತಿಭೆ ಎಷ್ಟು ಮುಖ್ಯವೋ, ಪರೀಕ್ಷೆಯ ತಯಾರಿಗೆ ದೊರಕುವ ಸೌಲಭ್ಯಗಳು ಸಹ ಅಷ್ಟೇ ಮುಖ್ಯ. ಪರೀಕ್ಷೆಗಳು ಕೇವಲ ಅರ್ಹ ಅಭ್ಯರ್ಥಿಗಳನ್ನು ಹುಡುಕಲು ಮಾಡುವ ಪ್ರಯತ್ನವೇ ಹೊರತು ಅಭ್ಯರ್ಥಿಯ ಜ್ಞಾನ ಮತ್ತು ಕೌಶಲ್ಯವನ್ನು ಬೆಳೆಸುವುದು ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಗಳಲ್ಲಿ ಒಂದಾಗಿದೆ. 

ಒಂದು ಚಿಕ್ಕ ಉದಾಹರಣೆ ಎಂದರೆ, ಸರ್ಕಾರಿ ಶಾಲೆ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿ JEE, NEET, KCET ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬೇರೆ ಕೋಚಿಂಗ್ ಸಹಾಯವಿಲ್ಲದೆ ಕೇವಲ ಸರ್ಕಾರ ನೀಡುವ ಪುಸ್ತಕಗಳನ್ನು ಓದಿ ಮೊದಲ ಹತ್ತರೊಳಗೆ ರಾಂಕ್ ಪಡೆಯಲು ಸಾಧ್ಯವೇ ? ಅಭ್ಯರ್ಥಿಗೆ ಪ್ರಯತ್ನ ಹಾಕುವ ಮನಸ್ಸಿದ್ದರೂ ಸಹ ಅದಕ್ಕೆ ಸೂಕ್ತ ಕಲಿಯುವ ಸೌಲಭ್ಯ ಮತ್ತು ವಾತಾವರಣ ಸಿಗದೆ ಅರ್ಹತಾ ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳು ಬರುತ್ತವೆ. ಸಮಾನವಾಗಿ ಪರೀಕ್ಷೆಗೆ ತಯಾರಾಗಲು ಅವಕಾಶ ಇಲ್ಲದೆ ಇರುವಾಗ ಅಂತಹ ಅಭ್ಯರ್ಥಿಗಳಿಗೆ ಸಹಾಯ ಮಾಡಲು ಮೀಸಲಾತಿ ಇದೆ. 

ಇಂದು ನಗರದಲ್ಲಿನ ಶ್ರೀಮಂತರ ಮಕ್ಕಳು ಹಲವಾರು ವರ್ಷಗಳಿಂದ ಇಂತಹ ಪರೀಕ್ಷೆಗಳಿಗೆ ತಯಾರಿ ಆರಂಭಿಸುತ್ತಾರೆ. ಬೆಂಗಳೂರಿನ ಹಲವು ಕೋಚಿಂಗ್ ಸೆಂಟರ್ಗಳು ಆರನೇ ತರಗತಿಯಿಂದಲೇ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಕೆಲಸ ಆರಂಭಿಸಿವೆ. ಲಕ್ಷಗಟ್ಟಲೆ ಹಣ ಸುರಿಯಲು ತಯಾರಿರುವ ಪೋಷಕರಿಗೆ ತಮ್ಮ ಮಕ್ಕಳಿಗೆ ಇಷ್ಟವಾದ ಕ್ಷೇತ್ರದಲ್ಲಿ ಬಹಳ ಎತ್ತರಕ್ಕೆ ತಲುಪಲು ಹೆದ್ದಾರಿಗಳು ಸಮಾಜದಲ್ಲಿ ಸೃಷ್ಟಿಯಾಗಿವೆ. ಇಂತಹ ಅಭ್ಯರ್ಥಿಗಳೊಂದಿಗೆ ಗ್ರಾಮೀಣ ಭಾಗದ, ಹಿಂದುಳಿದ, ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳನ್ನು ಪೈಪೋಟಿಗೆ ಬಿಟ್ಟರೆ ಅದು ಸಮಾನತೆ ಎಂದು ಹೇಳಲು ಆಗುತ್ತದೆಯೇ ? ಇದರ ಮೇಲೆಯೂ ಸಹ ಉನ್ನತ ಶಿಕ್ಷಣದಲ್ಲಿ ಮೇಲ್ಜಾತಿಯ ಜನರದ್ದೇ ಸಿಂಹಪಾಲು. ಇದನ್ನೆಲ್ಲಾ ಅರ್ಥಮಾಡಿಕೊಳ್ಳುವ ಮನಸ್ಸು ಇರಬೇಕು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸುವುದನ್ನು ವಿರೋಧಿಸುವ ಜನರು ತಮ್ಮ ಕುಟುಂಬದ ಇತಿಹಾಸವನ್ನು ಹಿಂದುಳಿದರವ ಇತಿಹಾಸದ ಜೊತೆಗೆ ಆರ್ಥಿಕ ದೃಷ್ಟಿಕೋನದಿಂದ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. 

ಬಹಳಷ್ಟು ಜನರು ಹೇಳುವ ಮಾತೆಂದರೆ, ಜಾತಿಯೆಲ್ಲ ಬಹಳ ಹಿಂದೆ ಇತ್ತು, ನಾವು ಅದನ್ನೆಲ್ಲ ಆಚರಿಸುವುದೇ ಇಲ್ಲ. ನಮ್ಮ ಮಕ್ಕಳಿಗೆ ಜಾತಿ ಎಂದರೆ ಏನೆಂಬುದೇ ಗೊತ್ತಿಲ್ಲ ಎಂದು. ಈ ಮಾತುಗಳು  ಹೆಚ್ಚಾಗಿ ಜಾತಿಯ ಆಧಾರದ ಮೇಲೆ ಇಂದಿನ ಸಮಾಜದಲ್ಲಿ ತಾರತಮ್ಯ ಎದುರಿಸದ ಮೇಲ್ಜಾತಿಯ ಜನರೇ ಹೇಳುವುದು. ಇಂದಿಗೂ ಜಾತಿಯನ್ನು ಬಹಳ  ಜೀವಂತವಾಗಿ ಇಟ್ಟಿರುವುದು ತಮ್ಮ ಜಾತಿಯೊಳಗೇ ಮದುವೆಯಾಗುವ ಪದ್ಧತಿ. ಜಾತಿಪದ್ಧತಿಯ ಬಗ್ಗೆ ಉದ್ದ ಭಾಷಣಗಳನ್ನು ಮಾಡುವ ಜನರು ಮದುವೆಯಾಗುವಾಗ ಮಾತ್ರ ಜಾತಿಯನ್ನೇ  ಮೊದಲು ನೋಡುತ್ತಾರೆ. ಜಾತಿಪದ್ಧತಿ ಒಂದು ಶ್ರೇಣೀಕೃತ ವ್ಯವಸ್ಥೆ. ಪ್ರತಿಯೊಂದು ಜಾತಿಗೆ ಸೇರಿದವರು ಸಹ ತಮ್ಮದೇ ರೀತಿಯಲ್ಲಿ ಜಾತಿಪದ್ಧತಿಯನ್ನು ಅನುಸರಿಸುತ್ತಾರೆ. ಬೇಕಾದರೆ ನೀವೇ ನೋಡಿ, ನಮ್ಮ ಸಮಾಜದಲ್ಲಿ ಸಾವಿರಾರು ಜಾತಿಗಳಿವೆ. ಅಲ್ಲಿರುವ ಪ್ರತಿಯೊಂದು ಜಾತಿಗೂ ಮೇಲ್ಜಾತಿ ಮತ್ತು ಕೆಳಜಾತಿ ಎನ್ನುವ ಯೋಚನೆ ಜನರ ಮನಸ್ಸಿನಲ್ಲಿ ಇದೆ. ಒಂದು ಜಾತಿಗೆ ಸರಿ ಸಮಾನವಾಗಿ ಇರುವ ಇನ್ನೊಂದು ಜಾತಿ ಸಿಗುವುದಿಲ್ಲ. ಈ ಕೆಟ್ಟ ಮನಸ್ಥಿತಿ ನಿಜವಾಗಿಯೂ ನಮ್ಮ ಸಮಾಜದಿಂದ ಹೋಗಬೇಕು. ಇದಕ್ಕೆ ಬಹಳ ಸುಲಭ ಉಪಾಯವೆಂದರೆ ಅಂತರ್ಜಾತಿ ವಿವಾಹ. ಮದುವೆ ಯಾರದೋ ಒತ್ತಾಯಕ್ಕೆ  ನಡೆಯಲು ಸಾಧ್ಯವಿಲ್ಲ, ಪ್ರೀತಿಯಿಂದ ಇಂತಹ ಮದುವೆಗಳು ನಡೆದು ಅವರು ಚೆನ್ನಾಗಿ ಬದುಕಿ ಬಾಳಿದರೆ ಸಮಾಜಕ್ಕೆ ದೊಡ್ಡ ಸಂದೇಶವನ್ನಂತೂ ಕೊಡುವುದು ನಿಜ.    

ಮೀಸಲಾತಿ ಕೇವಲ ಬಡತನ ನಿವಾರಣೆಗಾಗಿ ಜಾರಿಗೆ ಬಂದಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಹಿಂದುಳಿದವರಿಗೆ ಸಮಾನ ಪ್ರಾತಿನಿಧ್ಯ ಕಲ್ಪಿಸುವುದು ಸಹ ಇದರ ಉದ್ದೇಶವಾಗಿದೆ. ನಮ್ಮ ದೇಶದಲ್ಲಿನ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೆ ಅದರಲ್ಲಿ ಹಿಂದುಳಿದವರ ಸಂಖ್ಯೆ ಇತರರಿಗೆ ಹೋಲಿಸಿದರೆ ಬಹಳ ಕಡಿಮೆ. ಮುಂದುವರೆದ ಮೇಲ್ಜಾತಿಗಳಿಗೆ ಸೇರಿದವರ ಜನಸಂಖ್ಯೆ ಬಹಳ ಕಡಿಮೆಯಿದ್ದರೂ ಸಹ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಅವರೇ ತುಂಬಿದ್ದಾರೆ. ಅದರ ಶೇಕಡಾವಾರು ಅಂಕೆ ಸಂಖ್ಯೆಗಳನ್ನು ಹಿಂದುಳಿದವರ ಜನಸಂಖ್ಯೆಗೆ ಹೋಲಿಸಿದರೆ ಈಗ ನೀಡಿರುವ ಮೀಸಲಾತಿ ಬಹಳ ಕಡಿಮೆಯೆಂದೇ ಹೇಳಬಹುದು. ಹಿಂದೆಲ್ಲ ನೇರವಾಗಿ ಅವಾಚ್ಯ ಶಬ್ದಗಳಿಂದ ಬೈದು ಹೀಯಾಳಿಸುತ್ತಿದ್ದ ಮುಂದುವರೆದ ಜನರು ಇಂದು ಕೇಸು ಬೀಳುವ ಹೆದರಿಕೆಯಿಂದಲೋ ಏನೋ ಮೀಸಲಾತಿ ವಿರೋಧಿಸುವ,  ಬಡವರಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಹೀಯಾಳಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ. ಇದು ಪ್ರತಿಯೊಬ್ಬ ಮನುಷ್ಯನ ಮನದಲ್ಲಿ ಜಾತಿ ಎಂಬುದು ಇನ್ನು ಹೇಗೆ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿ. 

ಬಹಳಷ್ಟು ಜನರ ಮನಸ್ಥಿತಿ ಹೇಗಿದೆ ಎಂದರೆ ಬಡವರಿಗೆ ಸರ್ಕಾರ ನೀಡುವ ಸೌಲಭ್ಯಗಳಿಂದ ನಮ್ಮ ತೆರಿಗೆ ಹಣ ಪೋಲಾಗುತ್ತದೆ, ಇದರಿಂದಾಗಿ ನಮ್ಮ ದೇಶ ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದಾಗಿದೆ. ಇವರಿಗೆ ಒಂದು ವಿಷಯವಂತೂ ತಿಳಿದಿರಲು ಸಾಧ್ಯವಿಲ್ಲ. ಏನೆಂದರೆ ಭಾರತದಲ್ಲಿ ಜೀವನ ನಡೆಸುವ ಪ್ರತಿಯೊಬ್ಬರೂ ದಿನನಿತ್ಯ ತೆರಿಗೆ ಪಾವತಿಸುತ್ತಾರೆ ಎನ್ನುವುದು. ತೆರಿಗೆ ಎಂದರೆ ಕೇವಲ ತಮ್ಮ ಆದಾಯದಲ್ಲಿ ಒಂದಷ್ಟನ್ನು ನೇರವಾಗಿ ಸರ್ಕಾರಕ್ಕೆ ಪಾವತಿಸುವುದಲ್ಲ. ನಮ್ಮ ದಿನನಿತ್ಯದ ಜೀವನ ನಿರ್ವಹಣೆಗೆ ಉಪಯೋಗಿಸುವ ಪ್ರತಿಯೊಂದು ವಸ್ತುವಿನ ಮೇಲೆ ತೆರಿಗೆ ಒಂದಿಲ್ಲೊಂದು ರೀತಿಯಲ್ಲಿ ಸಂಗ್ರಹವಾಗುತ್ತದೆ. ಒಬ್ಬ ಬಡವನ ದಿನದ ಖರ್ಚುಗಳನ್ನೆಲ್ಲ ಕಳೆದರೆ ಆತನಿಗೆ ಆದಾಯ ಎಂದರೆ ಒಂದು ನೂರು ರೂಪಾಯಿ ಬರಬಹುದು, ಆದರೆ ಆತ ದಿನಕ್ಕೆ ಕಡಿಮೆಯೆಂದರೂ ಐವತ್ತು ರೂಪಾಯಿ ತೆರಿಗೆ ಪಾವತಿಸುತ್ತಾನೆ. 

ಇದು ಬಹಳ ಮುಖ್ಯವಾಗಿ ನಮ್ಮ ಗಮನಕ್ಕೆ ಬರಬೇಕು 
೧. ವ್ಯಕ್ತಿಯ ಖರ್ಚೆಲ್ಲಾ ಕಳೆದು ದಿನದ ಒಟ್ಟು ಆದಾಯ ಎಷ್ಟು ?
೨. ಆ ವ್ಯಕ್ತಿ ದಿನಕ್ಕೆ ವಿವಿಧ ರೂಪದಲ್ಲಿ ಸರ್ಕಾರಕ್ಕೆ ಕಟ್ಟುವ ತೆರಿಗೆ ಎಷ್ಟು ? 

ಇವನ್ನು ಅರ್ಥ ಮಾಡಿಕೊಂಡರೆ ಬಡವರು ಯಾಕೆ ವರ್ಷಗಟ್ಟಲೆ ಒಂದು ದಿನವೂ ಬಿಡದೆ ಕೆಲಸಗಳಲ್ಲಿ ತೊಡಗಿದ್ದರು ಸಹ ಶ್ರೀಮಂತರಾಗದೆ ಬಡವರಾಗಿಯೇ ಸಾಯುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಸುಳಿವು ಸಿಗುತ್ತದೆ. ಈ ರೀತಿಯ ವ್ಯವಸ್ಥೆಗಳಿಂದಲೇ ನಮ್ಮ ದೇಶದಲ್ಲಿ ಬಡವರು ದಿನದಿಂದ ದಿನಕ್ಕೆ ಬಡವರಾಗುತ್ತಾ ಹೋಗುತ್ತಿದ್ದರೆ, ಶ್ರೀಮಂತರು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಾರೆ. ಶ್ರೀಮಂತರು ಒಂದು ಕೋಟಿ ರೂಪಾಯಿಗಳ ತೆರಿಗೆ ಪಾವತಿ  ಮಾಡಿದರೆ ಅವರ ಆದಾಯ ಕನಿಷ್ಠ ಐದು  ಕೋಟಿಯಾದರು ಇರುತ್ತದೆ, ಇನ್ನು ತಮ್ಮ ಸಂಪತ್ತಿನ ಬಲದ ಮೇಲೆ ನಡೆಸುವ ಭ್ರಷ್ಟಾಚಾರವನ್ನು ಲೆಕ್ಕಕ್ಕೆ ತೆಗೆದುಕೊಂಡರಂತೂ ಅವರ ಆದಾಯ ಲೆಕ್ಕಕ್ಕೆ ಸಿಗುವುದಿಲ್ಲ. ಇದರಿಂದಾಗಿ ಒಬ್ಬ ವ್ಯಕ್ತಿ ವರ್ಷಕ್ಕೆ ಕಡಿಮೆಯೆಂದರೂ ಒಂದು ಲಕ್ಷ ರೂಪಾಯಿಗಳ ತೆರಿಗೆ ಪಾವತಿಸುತ್ತಾನೆ ಎಂಬ ವರದಿ ಪ್ರಜಾವಾಣಿಯಲ್ಲಿ ಕೆಲವು ತಿಂಗಳ ಹಿಂದೆ ಪ್ರಕಟವಾಗಿತ್ತು. ಆ ತೆರಿಗೆಯನ್ನು ಉಪಯೋಗಿಸಿಕೊಂಡೆ ಆತನಿಗೆ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ.
 
ಪ್ರಜಾವಾಣಿ ವರದಿ 

ನಮ್ಮ ದೇಶದಲ್ಲಿ  ಸಾಮಾನ್ಯ ವ್ಯಕ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು. ಇವರಿಂದಲೇ ಹೆಚ್ಚು ತೆರಿಗೆ ಸರ್ಕಾರಕ್ಕೆ ಪಾವತಿ ಆಗುತ್ತಿರುವುದು. ಈ ಸಾಮಾನ್ಯ ವ್ಯಕ್ತಿಗಳ ಜೀವನ ಮಟ್ಟವನ್ನು ಸುಧಾರಿಸುವ ಯಾವುದೇ ಯೋಜನೆ ನಮ್ಮ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ವಸ್ತುಗಳನ್ನು, ಸೇವೆಗಳನ್ನು ಕೊಳ್ಳುವ ಶಕ್ತಿ ಹೆಚ್ಚಿಸಿದಂತೆಲ್ಲ ತೆರಿಗೆಯ ಸಂಗ್ರಹ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಯಾವ ದೇಶದಲ್ಲಿ ಜನರ ಜೀವನ ಸುಧಾರಣೆಯನ್ನು ಗುರಿಯಾಗಿಸಿಕೊಂಡು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿರುವರೋ ಆ ದೇಶಗಳು ಅಭಿವೃದ್ಧಿಯ ದಾರಿ ಹಿಡಿದಿವೆ. 

ಆದರೆ ಇತ್ತೀಚಿನ ದಿನಗಳಲ್ಲಿ ಅಹಿತಕರ ಮನಸ್ಥಿತಿ ಎಲ್ಲೆಂದರಲ್ಲಿ ವಿವಿಧ ರೂಪಗಳಲ್ಲಿ ದ್ವೇಷ ಭಾಷಣಗಳ ಮೂಲಕ ಹರಡುತ್ತಿದೆ. ಬಡವರ ಮೇಲೆ, ಹಿಂದುಳಿದವರ ಮೇಲೆ ತಮ್ಮ ಹಣ ಮತ್ತು ಅಧಿಕಾರದ ಬಲದಿಂದ ಅವರನ್ನೇ ಉಪಯೋಗಿಸಿಕೊಂಡು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಯುವಕರಲ್ಲಿ ದಿನದಿಂದ ದಿನಕ್ಕೆ ಹೆಚ್ಚು ಪುಸ್ತಕಗಳನ್ನು ಓದಿ ವಿಷಯ ತಿಳಿದುಕೊಂಡು, ವಿಭಿನ್ನ ದೃಷ್ಟಿಕೋನದಿಂದ ಪ್ರಸ್ತುತ ಸಮಸ್ಯೆಗಳನ್ನು ಕಾಣುವ ಮನೋಭಾವ ಇಲ್ಲವಾಗುತ್ತಿದೆ. ಯಾವುದೇ ವಿಷಯದ ಬಗ್ಗೆ ಚಿಂತಿಸುವುದು ಮತ್ತು ಅದಕ್ಕೆ  ಸಂಬಂಧಿಸಿದ ಮಾಹಿತಿಯನ್ನು ಹಲವಾರು ಮೂಲಗಳಿಂದ ಓದಿ ಅರ್ಥೈಸಿಕೊಳ್ಳುವ ಅವಶ್ಯಕತೆ ನಮ್ಮ ಸಮಾಜಕ್ಕೆ ಇದೆ. ನಾವು ಬದಲಾದರೆ, ಸಮಾಜ ಹಂತ ಹಂತವಾಗಿ ಬದಲಾಗುತ್ತದೆ. ಸಮಾಜ ಬದಲಾದಾಗ ರಾಜಕೀಯವು ಬದಲಾಗುತ್ತದೆ. 

ಇನ್ನಾದರೂ ಸಹ ಈ ಜಾತಿಯ ಬುದ್ಧಿಯನ್ನು ಬದಿಗಿಟ್ಟು, ಮಾನವೀಯತೆಯನ್ನು ಬೆಳೆಸಿಕೊಳ್ಳೋಣ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಯಾವುದೇ ಯೋಜನೆಗಳು ನಮ್ಮ ದೇಶವನ್ನು ಹಾಳು ಮಾಡುವುದಿಲ್ಲ. ವ್ಯವಸ್ಥೆ ಮೇಲ್ಜಾತಿ ಮತ್ತು ಮೇಲ್ವರ್ಗದ ಜನರ ಕಪಿಮುಷ್ಠಿಯಲ್ಲಿ ಇದೆ. ನಾವೆಲ್ಲರೂ ಒಗ್ಗಟ್ಟಾಗಿ ಪ್ರಯತ್ನಿಸಿದರೆ ಮಾತ್ರ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ. ನಾವೆಲ್ಲರೂ ಸಮಾನರು, ಆದರೆ ಸಮಾಜದಲ್ಲಿ ಅಸಮಾನತೆ ಇದೆ. ಇದನ್ನು ಮಟ್ಟಹಾಕುವ ಚಿಂತನೆಗಳು ಮತ್ತು ಕೆಲಸಗಳು ಹೆಚ್ಚು ನಡೆಯಲೇಬೇಕು. ಅಕ್ರಮ ಆಸ್ತಿ ಗಳಿಸುವವರು, ಭ್ರಷ್ಟ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕುವ ವ್ಯವಸ್ಥೆಯನ್ನು ರೂಪಿಸುವತ್ತ ನಾವು ಹೆಜ್ಜೆ ಹಾಕಬೇಕಿದೆ. ಅಸಮಾನತೆ ಸಮಾಜದಲ್ಲಿ ಹೆಚ್ಚಾದಷ್ಟು ಎಲ್ಲರ ಜೀವನವು ಕಷ್ಟಕರವಾಗುತ್ತದೆ. ಜಾತಿ ಮತದ ಮೌಢ್ಯದಲ್ಲಿ ಸಿಕ್ಕಿದ ಯಾವ ದೇಶವು ಶಾಂತಿ ಹಾಗು ಅಭಿವೃದ್ಧಿ ಕಂಡಿಲ್ಲ. 

"ನಿಮ್ಮ ಜೀವನದಲ್ಲಿ ಒಮ್ಮೆಯಾದರೂ ನೀವು ನಂಬಿದ ಆದರ್ಶಗಳ ಮೌಲ್ಯಗಳ ಪರವಾಗಿ ನಿಂತು ಗೊಡ್ಡು ಸಂಪ್ರದಾಯಗಳನ್ನು ಎದುರಿಸಿ. ನಾವು ನಂಬಿದ ಆದರ್ಶಗಳ ಪರವಾಗಿ ನಿಲ್ಲುವ ಅಧ್ಬುತ ಅನುಭವ, ಆನಂದ ಏನೆಂದಾದರೂ ನಿಮಗೆ ಗೊತ್ತಾಗುತ್ತದೆ.ಆದರ್ಶಗಳು ನಾವು ದಿನಾ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು."

-- ಪೂರ್ಣಚಂದ್ರ ತೇಜಸ್ವಿಯವರ "ಅಣ್ಣನ ನೆನಪು" ಪುಸ್ತಕದಲ್ಲಿ ಎಪ್ಪತ್ತರ ದಶಕದಲ್ಲಿ ಕುವೆಂಪು ಅವರು ಯುವ ಜನತೆಗೆ ನೀಡಿರುವ ಸಂದೇಶದ ಕುರಿತು.

*** 

ಕಾಮೆಂಟ್‌ಗಳು

- Follow us on

- Google Search