ಧೋನಿ: ನಾನು ಕಂಡಂತೆ

ಕ್ರಿಕೆಟ್ ಟಿವಿಯಲ್ಲಿ ನೋಡುವ ಮುಂಚೆ ಊರಿನ ಹುಡುಗರೊಂದಿಗೆ ಆಡುವುದನ್ನು ಅಭ್ಯಾಸ ಮಾಡಿಕೊಂಡವನು ನಾನು. ಊರಿನಲ್ಲಿ ಎಲ್ಲರು ಸೇರಿ ಆಡುತ್ತಿದ್ದಾಗ ಅವರೊಂದಿಗೆ ಹೋಗಿ ಸೇರುವುದೇ ಒಂದು ಖುಷಿಯ ವಿಚಾರವಾಗಿತ್ತು. ಚಿಕ್ಕವನಿದ್ದಾಗ ಊರಿನ ಹುಡುಗರ ತಂಡದಲ್ಲಿ ಬ್ಯಾಟಿಂಗ್ ಮಾಡಿದ್ದಕ್ಕಿಂತ ಬಾಲ್ ಹೆರುಕಿದ್ದೇ ಹೆಚ್ಚು. ಆದರೂ ಟಿವಿಯಲ್ಲಿ ಕ್ರಿಕೆಟ್ ನೋಡುವುದೆಂದರೆ ಅದೇನೋ ಬೇಸರ ಆ ಕಾಲದಲ್ಲಿ. ಒಂದೇ ಸಮನೆ ಒಬ್ಬರಾದ ನಂತರ ಮತ್ತೊಬ್ಬರು ಬಾಲ್ ಹಾಕುತ್ತಲೇ ಇರುತ್ತಾರೆ, ದಾಂಡಿಗರು ಚೆಂಡನ್ನು ಹೊಡೆಯುತ್ತಲೇ ಇರುತ್ತಾರೆ. ಊರಿನ ಕ್ರಿಕೆಟ್ ಅಂತೆ ಪ್ರತಿ ಬಾಲಿನ ನಂತರ ಜಗಳವಾಗಲಿ ಅಥವಾ ಮ್ಯಾಚ್ ಸೋತಾಗ ಹೊಡೆದಾಟವಾಗಲಿ ನೋಡಲು ಸಿಗುತ್ತಿರಲಿಲ್ಲ. ನಾನು ಚಿಕ್ಕವನಿದ್ದಾಗ ಹೆಚ್ಚಿನ ಜನರು ಸಚಿನ್ ಅಭಿಮಾನಿಗಳಾಗಿದ್ದರೆ ಇನ್ನು ಕೆಲವರು ದ್ರಾವಿಡ್ ಅಭಿಮಾನಿ. ಒಟ್ಟಿನಲ್ಲಿ ಕ್ರಿಕೆಟ್ ಅಂದರೆ ಏನೋ ಒಂದು ಹುಚ್ಚು. ನಾನು ಹೆಚ್ಚಾಗಿ ಕ್ರಿಕೆಟ್ ಟಿವಿಯಲ್ಲಿ ನೋಡಲು ಆರಂಭಿಸಿದ್ದು ೨೦೦೭ರ ಸುಮಾರಿಗೆ. 


ಕೆಲವು ವರ್ಷಗಳ ಹಿಂದೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಭಾರತ ತಂಡವನ್ನು ಟಿ-ಟ್ವೆಂಟಿ ವಿಶ್ವಕಪ್ ಅಲ್ಲಿ ಮುನ್ನಡೆಸುವ ಸುದ್ಧಿಯನ್ನು ತಿಳಿದಾಗ ಊರಲ್ಲಿ ಬಹಳಷ್ಟು ಹುಡುಗರು ಇದನ್ನೇ ಮಾತಾಡುತ್ತಿದ್ದರು. ಇದಕ್ಕಿಂತ ದೊಡ್ಡ ಚಿಂತೆಯೆಂದರೆ ಸಚಿನ್ ಹಾಗು ದ್ರಾವಿಡ್ ತಂಡದಲ್ಲಿ ಇಲ್ಲದೇ ಇದ್ದ ಸಮಾಚಾರ. ನಾವೆಲ್ಲ ಯಾವತ್ತೂ ಸಚಿನ್ ದ್ರಾವಿಡ್ ಅವರನ್ನು ಹೊರತುಪಡಿಸಿ ಭಾರತ ತಂಡವನ್ನು ಕಲ್ಪಿಸಿಕೊಂಡಿರಲಿಲ್ಲ. ಹೀಗಾಗಿ ಅದೇನೋ ಒಂದು ರೀತಿಯ ಅಸಮಾಧಾನ ಸಾಕಷ್ಟು ಭಾರತೀಯ ಅಭಿಮಾನಿಗಳಿಗೆ ಇತ್ತು ಅನಿಸುತ್ತದೆ.


ಸಾಕಷ್ಟು ಹೊಸಬರೇ ತಂಡದಲ್ಲಿ ಇದ್ದ ಕಾರಣದಿಂದ ಅಷ್ಟೇನೂ ಪ್ರಾಮುಖ್ಯತೆ ಈ ಸರಣಿಗೆ ಇದೆ ಎಂದು ನನಗೆ ಅನ್ನಿಸಿರಲಿಲ್ಲ. ಆದರೂ ಭಾರತ ತಂಡ ಗೆದ್ದಾಗ ಆಗುವ ಸಂತೋಷವಿದೆಯಲ್ಲ, ಅದು ಎಲ್ಲರನ್ನು ಒಂದುಗೂಡಿಸುವ ಶಕ್ತಿಯನ್ನು ಹೊಂದಿದೆ. ಆಗಿನ ಕಾಲದಲ್ಲಿ ಮೊಬೈಲ್ ಆಗಲಿ ಟಿವಿಯಾಗಲಿ ನಮ್ಮ ಮನೆಯಲ್ಲಿ ಇರಲಿಲ್ಲ. ಹೀಗಾಗಿ ದಿನಪತ್ರಿಕೆಗಳ ಕ್ರೀಡಾ ಸುದ್ಧಿಯೇ ನಮಗೆ ಸರ್ವಸ್ವವಾಗಿತ್ತು. ೨೦೦೭ರ ಮೊದಲ ಟಿಟ್ವೆಂಟಿ ವಿಶ್ವಕಪ್ ಗೆಲುವು ಕೆಲವೇ ಸ್ಟಾರ್ ಆಟಗಾರರನ್ನು ಇಟ್ಟುಕೊಂಡು ಒಬ್ಬ ಉತ್ತಮ ನಾಯಕನ ಮಾರ್ಗದರ್ಶನದಲ್ಲಿ ವಿಶ್ವವನ್ನೇ ಗೆಲ್ಲಬಹುದು ಎಂಬುದನ್ನು ವಿಶ್ವಕ್ಕೆ ತೋರಿಸಿಕೊಟ್ಟಿತ್ತು. ಈ ವಿಶ್ವಕಪ್ ಗೆಲುವು ಧೋನಿಯನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿತು. 


ಕ್ರಿಕೆಟ್ ಒಂದು ತಂಡವಾಗಿ ಆಡುವ ಆಟ. ಹಾಗಾಗಿ ಧೋನಿಯಿಂದಲೇ ಕಪ್ ಗೆದ್ದೆವು ಅನ್ನುವುದು ಸರಿಯಲ್ಲ. ತಂಡ ಗೆದ್ದಾಗ ಅಥವಾ ಸೋತಾಗ ತಂಡದ ನಾಯಕನನ್ನು ಹೊಣೆ ಮಾಡುವುದು ಕ್ರಿಕೆಟ್ ಅಲ್ಲಿ ನಡೆದುಕೊಂಡು ಬಂದಿದೆ. ಯುವರಾಜ್ ಸಿಂಗ್ ಹಾಗು ಗೌತಮ್ ಗಂಭೀರ್ ಕೂಡ ಪ್ರಮುಖ ಪಾತ್ರವನ್ನು ಭಾರತದ ಗೆಲುವಿನಲ್ಲಿ ವಹಿಸಿದ್ದರು. ತಂಡ ಸೋತರೂ ಸಹ ಆಟಗಾರರಿಗೆ ಹೆಚ್ಚಿನ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಧೋನಿಯನ್ನು ನಾಯಕನಾಗಿ ನೇಮಿಸಲಾಗಿತ್ತು. ಆ ಅವಕಾಶವನ್ನೇ ಚೆನ್ನಾಗಿ ಉಪಯೋಗಿಸಿಕೊಂಡು, ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಸಂತಸ ನೀಡಿದ್ದು ಮಾತ್ರ ಧೋನಿಗೆ ಸಾಕಷ್ಟು ಮನ್ನಣೆ ನೀಡಿತ್ತು. 

ಐಪಿಎಲ್ ಸಿಕ್ಸರ್ ಪಟ್ಟಿ 

ಆ ಉದ್ದ ಕೂದಲಿನ ಕೇಶವಿನ್ಯಾಸ ಕೂಡ ಹಲವರ ಗಮನ ಸೆಳೆದಿತ್ತು. ಭಾರತೀಯ ಕ್ರಿಕೆಟ್ಗೆ ಒಂದು ಹೊಸ ಆಕರ್ಷಣೆ ಮೂಡಿತ್ತು. ಆ  ಆಕರ್ಷಣೆಯ ಕೇಂದ್ರಬಿಂದುವಾಗಿ ಸಿಕ್ಕ ಅವಕಾಶಗಳನ್ನು ಉಪಯೋಗಿಸುಕೊಳ್ಳುತ್ತ ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಸಾಮರ್ಥ್ಯವನ್ನು ಧೋನಿ ತೋರಿಸಿದ್ದರು. ಇದು ತಂಡದ ಆಯ್ಕೆ ಮಾಡುವ ಮಂಡಳಿಗೂ ಸಾಕಷ್ಟು ನಿರಾಳತೆ ಉಂಟುಮಾಡಿತ್ತು. ನಾಯಕತ್ವದ ಜವಾಬ್ದಾರಿಯಿಲ್ಲದೆ ಉತ್ತಮ ಪ್ರದರ್ಶನ ನೀಡಬಲ್ಲ ಘಟಾನುಘಟಿ ಆಟಗಾರರು ಭಾರತ ತಂಡದಲ್ಲಿದ್ದರು. ಪ್ರತಿ ಬಾರಿ ತಂಡ ಸೋತಾಗ ಅಭಿಮಾನಿಗಳ ಟೀಕೆಗೆ ಒಳಗಾಗುತ್ತಿದ್ದ ಸಂದರ್ಭಗಳಲ್ಲಿ ಇದು ಅವರ ವೈಯಕ್ತಿಕ ಸಾಧನೆಯ ಮೇಲೆ ಪರಿಣಾಮ ಬೀರುತಿತ್ತು. ಈ ಎಲ್ಲ ಕ್ಲಿಷ್ಟ ಸಮಸ್ಯೆಗಳಿಗೆ ಒಂದು ತಾತ್ಕಾಲಿಕ ಪರಿಹಾರವಾಗಿ ಧೋನಿ ಸಮಯಕ್ಕೆ ಸರಿಯಾಗಿ ಸಿಕ್ಕಿದರು. 


ಆಸ್ಟ್ರೇಲಿಯಾ ಸರಣಿಗಳಲ್ಲಿ ಗೆದ್ದಾಗ ಹೆಚ್ಚು ಸಂಭ್ರಮಿಸದಂತೆ ಮಾಡಿದ ಮೈಂಡ್ ಗೇಮ್, ಮಿಚೆಲ್ ಜಾನ್ಸನ್ ಎಗರಾಡಿದಾಗ ಅಲ್ಲೇ ಡ್ರಾ ಅಲ್ಲೇ ಬಹುಮಾನ ಮಾಡಿದ್ದು, ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಕೊನೆಯ ಸಿಕ್ಸರ್, ಏಕದಿನ ಪಂದ್ಯಗಳಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು ೫೦+ ಅವ್ರೇಜ್, ತಂಡದ ಬಲಿಷ್ಠ ಬ್ಯಾಟಿಂಗ್ ಪಡೆ ಅಚಾನಕ್ ಕುಸಿತಕ್ಕೆ ಒಳಗಾದಾಗ ಸಮಯೋಚಿತ ಆಟವಾಡಿ ತಂಡವನ್ನು ಅವಮಾನದಿಂದ ಪಾರುಮಾಡಿದ್ದು, ಅದೆಷ್ಟೋ ಪಂದ್ಯಗಳಲ್ಲಿ ಇನ್ನೊಂದು ಎಂಡ್ ಅಲ್ಲಿ ಸಿಗಬೇಕಾದ ಜೊತೆಯಾಟ ಸಿಗದೇ ಹೋದರು ಏಕಾಂಗಿಯಾಗಿ ಹೋರಾಡಿದ ಅದೆಷ್ಟೋ ಪಂದ್ಯಗಳು ನೆನಪಿಗೆ ಬರುತ್ತವೆ.    

ಧೋನಿಯ ಬಗ್ಗೆ ಮಾಧ್ಯಮಗಳು ಕ್ಯಾಪ್ಟನ್ ಕೂಲ್ ಎಂದು ಕರೆದರೂ, ಧೋನಿ ಸಹ ಒಬ್ಬ ಅಗ್ಗ್ರೆಸ್ಸಿವ್ ಆಟಗಾರ. ಯಾರ್ಕರ್ ಚೆಂಡಿಗೆ ಸಿಕ್ಸರ್ ಹೊಡೆಯುತ್ತಿದ್ದ ಪಂದ್ಯಗಳನ್ನು ನೆನೆಸಿಕೊಂಡರೆ ಇಂದಿಗೂ ಮತ್ತೊಮ್ಮೆ ನೋಡಬೇಕಿನ್ನಿಸುತ್ತದೆ. ಧೋನಿಯ ವಿಕೆಟ್ ಕೀಪಿಂಗ್ ಕೂಡ ತಂಡಕ್ಕೆ ಬಹಳಷ್ಟು ಕೊಡುಗೆ ನೀಡಿದೆ. ನಾಯಕತ್ವ, ಮಧ್ಯಮ, ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಹಾಗು ವಿಕೆಟ್ ಕೀಪಿಂಗ್ ಈ ಮೂರೂ ಜವಾಬ್ದಾರಿಗಳನ್ನು ಹಲವಾರು ವರ್ಷಗಳ ಕಾಲ ಸಮರ್ಥವಾಗಿ ನಡೆಸಿದ ಧೋನಿಯ ಕೊಡುಗೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಸಾಕಷ್ಟು ಪಂದ್ಯಗಳಲ್ಲಿ ಕಳಪೆ ಪ್ರದರ್ಶನವನ್ನು ಧೋನಿ ಮಾಡಿದ್ದರೂ, ಆಯ್ಕೆಗಾರರಿಗೆ ಧೋನಿಯ ನಾಯಕತ್ವದ ಮೇಲಿದ್ದ ನಂಬಿಕೆಯೇ ಆ ಸಂಕಷ್ಟದಿಂದ ಧೋನಿಯನ್ನು ಪಾರು ಮಾಡಿತ್ತು. ಧೋನಿ ನಾಯಕತ್ವದ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಸಹ ಐಪಿಎಲ್ ಹಾಗು ಚಾಂಪಿಯನ್ಸ್ ಲೀಗ್ ಅಲ್ಲಿ ಗೆದ್ದು ಬೀಗಿತ್ತು. 

ಐಪಿಎಲ್ ಫೈನಲ್ ಪ್ರವೇಶಿಸಿದ ತಂಡಗಳು 

ಧೋನಿ ನಾಯಕತ್ವದ ಇನ್ನೊಂದು ಪ್ರಮುಖ ಅಂಶವೆಂದರೆ, ಒಮ್ಮೆ ಧೋನಿಗೆ ಒಬ್ಬ ಆಟಗಾರನ ಪ್ರತಿಭೆಯ ಮೇಲೆ ಭರವಸೆ ಮೂಡಿತೆಂದರೆ ಅವನಿಗೆ ಅವಕಾಶ ಸಿಗುವುದು ಖಂಡಿತ. ಇದಕ್ಕೆ ಉದಾಹರಣೆಯಾಗಿ ರೋಹಿತ್ ಶರ್ಮ, ಅಶ್ವಿನ್, ಜಡೇಜಾ, ಕೊಹ್ಲಿ, ಧವನ್, ರೈನಾ ಮುಂತಾದವರನ್ನು ನೇಮಿಸಬಹುದು. ಒಂದೆರಡು ಸರಣಿಗಳ ಕಳಪೆ ಪ್ರದರ್ಶನಕ್ಕಾಗಿ ತಂಡದಿಂದ ಯಾವುದೇ ಆಟಗಾರನನ್ನು ಕೈಬಿಟ್ಟಿಲ್ಲ. ಧೋನಿಯನ್ನು ತಂಡದಿಂದ ಕೈಬಿಟ್ಟರೆ ಆ ಸ್ಥಾನವನ್ನು ಸಮರ್ಥವಾಗಿ ತುಂಬಲು ದಿನೇಶ್ ಕಾರ್ತಿಕ್, ಸಾಹಾ, ಪಾರ್ಥಿವ್ ಪಟೇಲ್ ಅಥವಾ ಸೌರಭ್ ತಿವಾರಿ ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಇದು ಕೂಡ ಧೋನಿ ದೀರ್ಘಕಾಲ ಭಾರತ ತಂಡದಲ್ಲಿ ಉಳಿಯಲು ಪ್ರಮುಖ ಕಾರಣ. 

೨೦೧೩ ಚಾಂಪಿಯನ್ಸ್ ಟ್ರೋಫಿ 

ಸೆಹ್ವಾಗ್, ಗಂಭೀರ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ಬಹಳಷ್ಟು ಚರ್ಚೆಗೆ ಒಳಗಾದ ವಿಷಯವಾಗಿತ್ತು. ಪುಣ್ಯಕ್ಕೆ ರೋಹಿತ್ ಹಾಗು ಧವನ್ ಆರಂಭಿಕ ಜೋಡಿಯ ಯಶಸ್ಸಿನ ಮೂಲಕ ಹಾಗು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ತಕ್ಕ ಉತ್ತರವನ್ನು ಧೋನಿ ನೀಡಿದ್ದರು. ಇಷ್ಟೆಲ್ಲಾ ಗೋಜಲುಗಳ ನಡುವೆ ಚೆನ್ನೈ ಟೀಮ್ ನಿಷೇಧಕ್ಕೊಳಗಾಗಿದ್ದು ಹಾಗು ಧೋನಿಯನ್ನು ಐಪಿಎಲ್ ನಾಯಕತ್ವದಿಂದ ಕೈಬಿಟ್ಟಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನು ಮೂಡಿಸಿತ್ತು. ಎರಡು ವರ್ಷಗಳ ನಂತರ ಬಂಡ ಚೆನ್ನೈ ತಂಡ ಮತ್ತೊಮ್ಮೆ 'ಡ್ಯಾಡಿ ಆರ್ಮಿ ' ಎಂದು ಟ್ರೊಲ್ ಆದರೂ ಕಪ್ ಗೆಲ್ಲುವ ಮೂಲಕ ದಿಟ್ಟ ಉತ್ತರವನ್ನು ನೀಡಿತ್ತು. 


ನನಗೆ ಬಹಳ ಇಷ್ಟವಾಗುವ ಗುಣವೆಂದರೆ ಸೂಕ್ತ ಸಂದರ್ಭಕ್ಕಾಗಿ ಕಾಯುವ ತಾಳ್ಮೆ ಹಾಗು ಅವಕಾಶ ಸಿಕ್ಕಾಗ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಜಾಣ್ಮೆ. ಎಲ್ಲಾ ರೀತಿಯ ಕೆಲಸಗಳಲ್ಲಿಯೂ ನಮ್ಮಷ್ಟೇ ಸಮರ್ಥರಾದ ಹಾಗು ಕೆಲವೊಮ್ಮೆ ನಮಗಿಂತ ವಿಭಿನ್ನ ಶೈಲಿಯ ಕೆಲಸ ಮಾಡುವ ಜನರೊಂದಿಗೆ ಪೈಪೋಟಿಗೆ ಇಳಿಯಬೇಕಾಗುತ್ತದೆ. ಆಗ ಕೈಕಟ್ಟಿಕೊಂಡು ಸುಮ್ಮನಿದ್ದರೆ ನಮ್ಮನ್ನೇ ಮೂಲೆಗುಂಪು ಮಾಡಿ ಮನೆಗೆ ಅಟ್ಟಿಬಿಡುತ್ತಾರೆ. ಯಾರು ಯಾರೆಲ್ಲ ತಮಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ಧೋನಿಯ ಸ್ಥಾನಕ್ಕೆ ಕಣ್ಣು ಹಾಕಿದರೋ ಅವರೆಲ್ಲರೂ ನಿರೀಕ್ಷೆಗಿಂತ ಬೇಗ ನಿವೃತ್ತಿ ಹೊಂದುವ ಸಂದರ್ಭಗಳು ಎದುರಾದವು. ಆ ಸಂದರ್ಭದಲ್ಲಿ ಧೋನಿ ಬಿಟ್ಟುಕೊಟ್ಟಿದ್ದರೆ, ಇಷ್ಟು ವರ್ಷಗಳ ಕಾಲ ತಂಡವನ್ನು ಮುನ್ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಸರಿಯಾದ ಸಂದರ್ಭಕ್ಕೆ ವಿರಾಟ್ ಕೊಹ್ಲಿಗೆ ನಾಯಕತ್ವದ ಜವಾಬ್ದಾರಿಯನ್ನು ಬಿಟ್ಟುಕೊಟ್ಟು ವಿಕೆಟ್ ಕೀಪಿಂಗ್ ಹಾಗು ಬ್ಯಾಟಿಂಗ್ ಮೂಲಕ ಕೊಡುಗೆ ನೀಡಲು ನಿರ್ಧರಿಸಿದ್ದು ಬಹಳ ಒಳ್ಳೆಯ ನಿರ್ಧಾರವಾಗಿತ್ತು. 

ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿರುವ ಟ್ರೋಫಿಗಳು 

ಇಂದಿಗೂ ಭಾರತ ತಂಡದಲ್ಲಿ ಮಿಂಚುತ್ತಿರುವ ಸಾಕಷ್ಟು ಆಟಗಾರರು ಧೋನಿಯ ನಾಯಕತ್ವದಲ್ಲಿ ತಂಡಕ್ಕೆ ಆಡಿದವರು. ಆಟಗಾರರಲ್ಲಿ ಇರುವ ಸಾಮರಸ್ಯ ಅಭಿಮಾನಿಗಳಲ್ಲಿ ಇಲ್ಲದೆ ಇರುವುದು ದುಃಖದ ವಿಚಾರ. ಆಟವೆಂದಮೇಲೆ ಸೋಲು, ಗೆಲುವು, ಸನ್ಮಾನ, ಅವಮಾನ ಎಲ್ಲವೂ ಇದ್ದಿದ್ದೇ. ಪ್ರತಿಯೊಬ್ಬ ಆಟಗಾರನಿಗೂ ತನ್ನದೇ ಪ್ರತಿಭೆ ಹಾಗು ದೌರ್ಬಲ್ಯಗಳಿರುತ್ತವೆ. ಹಾಗೆಂದು ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡಿ ಕೆಸರೆರೆಚಾಟ ಮಾಡುತ್ತ ಕೂರುವುದು ನಮ್ಮ ವಿಭಿನ್ನ ದೃಷ್ಟಿಕೋನ ಹಾಗು ಜ್ಞಾನದ ವೈಶಾಲ್ಯತೆಯನ್ನು ಪ್ರಶ್ನಿಸಿದಂತೆ.
ಶ್ರೀಶಾಂತ್, ಮುನಾಫ್ ಪಟೇಲ್, ಉಮೇಶ್ ಯಾದವ್, ಆರ್ ಪಿ ಸಿಂಗ್, ಮೋಹಿತ್ ಶರ್ಮ, ಇಶಾಂತ್ ಶರ್ಮ, ಪ್ರವೀಣ್ ಕುಮಾರ್, ಆಶಿಶ್ ನೆಹ್ರಾ ಮುಂತಾದ ಫಾಸ್ಟ್ ಬೌಲರ್ಗಳನ್ನು ಜಾಣತನದಿಂದ ಉಪಯೋಗಿಸಿಕೊಂಡು ಪಂದ್ಯ ಗೆದ್ದಿರುವ ಉದಾಹರಣೆಗಳು ಸಾಕಷ್ಟಿವೆ. 

 
ಏಕದಿನ ಬ್ಯಾಟಿಂಗ್ ಪಟ್ಟಿಯಲ್ಲಿ ಕೇವಲ ೪೩ ಇನ್ನಿಂಗ್ಸ್ಗಳಲ್ಲಿ ಮೊದಲ ಸ್ಥಾನಕ್ಕೆ ಏರಿದ್ದು ಇಂದಿಗೂ ದಾಖಲೆಯಾಗಿ ಉಳಿದಿದೆ. ತಂಡದ ಅವಶ್ಯಕತೆಗೆ ಅನುಗುಣವಾಗಿ ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸಿಕೊಂಡು ಶತಕ ಸಿಡಿಸಿರುವ ಸಾಧನೆ ಎಷ್ಟು ಜನರಿಗೆ ಮಾಡಲು ಸಾಧ್ಯವೋ ಗೊತ್ತಿಲ್ಲ. ಧೋನಿ ನಾಯಕನಾಗಿದ್ದ ಸಂದರ್ಭದಲ್ಲಿ ತಂಡಕ್ಕಿದ್ದ ಒಂದು ಮುಖ್ಯ ಕೊರತೆಯೆಂದರೆ ವಿಕೆಟ್ ಪಡೆದು ಪಂದ್ಯದ ಗತಿ ಬದಲಿಸುವ ಫಾಸ್ಟ್ ಬೌಲರ್ಗಳು ಹಾಗು ಫಾಸ್ಟ್ ಬೌಲಿಂಗ್ ಅಲ್ಲ್ರೌಂಡರ್ಗಳ ಕೊರತೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರೂ ಸಹ ಉತ್ತಮ ಬ್ಯಾಟಿಂಗ್ ಆವರೇಜ್ ಹಾಗು ಸಾಕಷ್ಟು ಸಿಕ್ಸರ್ಗಳು ಸಿಡಿದಿವೆ. 

ಧೋನಿ ತಂಡ ಬಿಡುವ ಸಂದರ್ಭಕ್ಕೆ ಸರಿಯಾಗಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳ ಒಂದು ಯುವ ಬಳಗವೇ ಅವಕಾಶಕ್ಕಾಗಿ ಕಾದು ನಿಂತಿದೆ. ರಿಷಬ್ ಪಂತ್, ಕೆ ಎಲ್ ರಾಹುಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಇವರಲ್ಲಿ ಪ್ರಮುಖರು. ತಂಡವನ್ನು ಮುನ್ನಡೆಸಲು ಕೊಹ್ಲಿ ಹಾಗು ರೋಹಿತ್ ಶರ್ಮ ತಯಾರಿದ್ದಾರೆ. 

ಐಪಿಎಲ್ ಬೆಸ್ಟ್ ಬ್ಯಾಟಿಂಗ್ ಆವರೇಜ್ 

ನನ್ನ ಅನಿಸಿಕೆಯ ಪ್ರಕಾರ ಧೋನಿಯ ಕೊನೆಯ ಐಪಿಎಲ್ ಇದು ಅನ್ನಿಸುತ್ತದೆ. ಹಲವಾರು ವರ್ಷಗಳ ಕಾಲ ತಮ್ಮ ಆಟದ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆ ಒದಗಿಸಿದಕ್ಕೆ ಧನ್ಯವಾದಗಳು. ಧೋನಿಯೇ ಹೇಳಿದಂತೆ ಧೋನಿಗಿಂತ ಶ್ರೇಷ್ಠ ಆಟಗಾರರು ಈ ಮೊದಲು ಸಹ ಇದ್ದರು, ಮುಂದೆಯೂ ಸಹ ಬರುತ್ತಾರೆ. ಅವಕಾಶ ದೊರೆತಾಗ ಅದರ ಸದುಪಯೋಗ ಮಾಡಿಕೊಂಡು ದೇಶಕ್ಕೆ ಹಾಗು ಕ್ರೀಡೆಗೆ ಕೊಡುಗೆ ನೀಡುವುದೇ ಒಬ್ಬ ಆಟಗಾರನ ಕರ್ತವ್ಯ. ಆ ಕರ್ತವ್ಯವನ್ನು ಧೋನಿ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂಬುದು ನನ್ನ ನಂಬಿಕೆ. 

ಕಾಮೆಂಟ್‌ಗಳು

- Follow us on

- Google Search