ಪ್ರಯತ್ನ

ಕೆಲವೊಂದು ಯೋಚನೆಗಳು ಮನಸ್ಸಿಗೆ ಬಂದಾಗ ಮನಸ್ಸು ಒಂದಷ್ಟು ಕ್ಷಣ ನಡೆಯುತ್ತಿರುವುದೆಲ್ಲವನು ಮರೆತು ಕಲ್ಪನೆಯ ಲೋಕದಲ್ಲಿ ಕಾಲ ಕಳೆಯುತ್ತದೆ. ಒಂದಷ್ಟು ಮಾಡಬೇಕೆಂದಿರುವ ಕೆಲಸಗಳು, ಇನ್ನೊಂದಷ್ಟು ಎಂದು ಸಹ ಸಾಧ್ಯವಾಗದ ಯೋಚನೆಗಳು ಹೀಗೆ ನಮ್ಮ ಮನಸ್ಸಿನ ಯೋಚನೆ ಮತ್ತು ಕಲ್ಪನೆಗೆ ಮಿತಿಯಿಲ್ಲ. ಮನಸ್ಸಿಗೆ ಇಷ್ಟವಾಗುವ ಚಿಕ್ಕ ವಿಷಯ ಕೂಡ ಮತ್ತೆ ಮತ್ತೆ ವಿವಿಧ ರೂಪದಲ್ಲಿ ನಿಜ ಜೀವನದಲ್ಲಿ ಮರಳಿ ಮನಸ್ಸಿಗೆ ಬರುತ್ತದೆ. ಕೆಲವೊಮ್ಮೆ ನಮ್ಮ ನಿಜ ಜೀವನಕ್ಕೂ, ಕಲ್ಪನೆಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ, ಆ ಕಲ್ಪನೆಯ ಲೋಕವೇ ನೆಮ್ಮದಿಯ ಮನೆಯಾಗುತ್ತದೆ. ನಾವು ಯಾರೇ ಆಗಿದ್ದರು, ಜೀವನದಲ್ಲಿ ಅದೇನೇ ಮಾಡುತ್ತಿದ್ದರು ಸಹ ಒಂದಷ್ಟು ಆಸೆಗಳು ನಾವಿರುವ ತನಕ ನಮ್ಮಲ್ಲಿ ಜೀವಂತವಾಗಿರುತ್ತವೆ. ಆಸೆಗಳಿಗೆ ಮಿತಿ ಇರಬಹುದು ಆದರೆ ಕೊನೆಯಿಲ್ಲ. ಹೀಗೆ ನಮಗೆ ಏನೋ ಬಹಳ ಇಷ್ಟವಾಗುವ ಯಾವುದರ ಬಗ್ಗೆಯೋ ಯೋಚಿಸುತ್ತ ಮನಸ್ಸಿಗೆ ಅದನ್ನು ಒಂದು ಕ್ಷಣವೂ ಮರೆಯಲಾಗದಷ್ಟು ಹತ್ತಿರವಾಗುತ್ತವೆ. ಆಗಲೇ ನಿಜವಾದ ಸವಾಲುಗಳು ಶುರುವಾಗುವುದು.
ಮನಸ್ಸಿಗೆ ಬುದ್ಧಿಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯ ಇದೆ. ಒಂದು ಬಾರಿ ಮನಸ್ಸಿನಲ್ಲಿ ದೃಢವಾಗಿ ನಂಬಿಕೆಗಳು ಬೇರೂರಿದರೆ ಅವುಗಳನ್ನು ನಾಶಪಡಿಸುವುದು ದೊಡ್ಡ ಸಮಯ ತೆಗೆದುಕೊಳ್ಳುವ ಕೆಲಸವೇ ಸರಿ. ಮರೆತರು ಸಹ, ಹಳೆಬೇರು ಹೊಸಚಿಗುರು ಎಂಬಂತೆ ಪುನಃ ಆ ವಿಷಯಕ್ಕೆ ಸಂಬಂಧಿಸಿದ ಯೋಚನೆಗಳು ಮೂಡುತ್ತವೆ. ಹಿಂದೆ ಅವುಗಳಿಂದ ನಮ್ಮ ಜೀವನಕ್ಕೆ ಅದೆಷ್ಟೇ ಹಾನಿಯಾಗಿರಲಿ ಅಥವಾ ಮಾನಸಿಕ ಆರೋಗ್ಯವೇ ಕೆಟ್ಟು ಹೋಗಿರಲಿ, ಮನಸ್ಸು ಮಾತ್ರ ಆ ಯೋಚನೆಗಳನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಅದೇ ನಮ್ಮ ಮನಸ್ಸಿಗೂ ಬುದ್ಧಿಗೂ ಇರುವ ವ್ಯತ್ಯಾಸ ಅನ್ನಿಸುತ್ತದೆ. ಬುದ್ಧಿ ಉಪಯೋಗಿಸಿ ಎಷ್ಟೋ ಮಾಹಿತಿಯನ್ನು ತಿಳಿದುಕೊಂಡಿರುತ್ತೇವೆ, ಆದರೆ ಕಾಲ ಕಳೆದಂತೆ ಮಾಹಿತಿಯನ್ನು ಪುನರಾವರ್ತನೆ ಮಾಡಿ ಕಲಿಯದಿದ್ದರೆ ಸ್ವಲ್ಪ ಸಮಯದ ನಂತರ ಮರೆತುಬಿಡುತ್ತೇವೆ. ಆದರೆ, ಅದನ್ನು ಕಲಿಯುವಾಗ ಮೂಡಿದ ಭಾವನೆಗಳು ನಮ್ಮ ಮನಸ್ಸಿನಲ್ಲಿ ಯೋಚಿಸಿದರು ಸಹ ಮತ್ತೊಮ್ಮೆ ಮನಸ್ಸನ್ನು ತುಂಬಿಬಿಡುತ್ತವೆ. 

ಒಂದು ಚಿಕ್ಕ ಉದಾಹರಣೆ ಎಂದರೆ, ನಿಮ್ಮ ಶಾಲೆ ಅಥವಾ ಕಾಲೇಜು ದಿನಗಳಲ್ಲಿ ಬಹಳ ಕಷ್ಟದಿಂದ ಪಾಸು ಮಾಡಿದ ಪರೀಕ್ಷೆಯನ್ನು ನೆನಪಿಸಿಕೊಳ್ಳಿ. ನಿಮ್ಮ ಬುದ್ಧಿಗೆ ಅಲ್ಲಿದ್ದ ಪ್ರಶ್ನೆಗಳು ಅಥವಾ ನೀವು ಕಲಿತಿದ್ದು ನೆನಪಿಗೆ ಬರದೇ ಇರಬಹುದು ಆದರೆ ನೀವು ಪಟ್ಟ ಕಷ್ಟ ಹೇಗಿತ್ತು ನಿಮ್ಮ ಮನಸ್ಥಿತಿ ಹೇಗಿತ್ತು ಎನ್ನುವುದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದರೆ ಅದರ ಅರ್ಧದಷ್ಟು ಭಾವನೆಗಳಾದರೂ ಮನಸ್ಸಿನಲ್ಲಿ ಹಾಗೆಯೆ ಮೂಡುತ್ತವೆ. ಹೀಗಾಗಿ ಭಾವನೆಗಳಿಗೆ ತನ್ನದೇ ಶಕ್ತಿಯಿದೆ, ಅದು ಯಾವ ರೀತಿಯ ಭಾವನೆಗಳೇ ಆಗಿರಲಿ. ಒಬ್ಬ ಮನುಷ್ಯನ ನಡವಳಿಕೆಯನ್ನು ನಿರ್ಧರಿಸುವುದು ಆ ಸಮಯ ಸಂದರ್ಭದಲ್ಲಿ ಮನಸ್ಸಿನಲ್ಲಿ ಮೂಡುವ ಭಾವನೆಗಳ ಆಧಾರದ ಮೇಲೆ. ಮನಸ್ಸು ಶಾಂತಿಯುತವಾಗಿ ಸಂತೋಷದಿಂದ ಇದ್ದಾಗ ಅದೆಷ್ಟೋ ಸಂಗತಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅದೇ, ಮನಸ್ಸು ಬಹಳ ಬೇಸರ ಅಥವಾ ಕೋಪದಿಂದ ಕೂಡಿರುವಾಗ ಸಣ್ಣ ಪುಟ್ಟ ಸಂಗತಿಗಳು ಸಹ ನಮ್ಮನ್ನು ಬುಡಮೇಲು ಮಾಡುತ್ತವೆ. ನಾವು ಯಾರೆಂಬುದನ್ನು ನಿರ್ಧರಿಸುವುದೇ ನಮ್ಮ ಬುದ್ಧಿ, ಮನಸ್ಸು, ಯೋಚನೆಗಳು ಮತ್ತು ಭಾವನೆಗಳು. ಹೀಗಾಗಿ ನಮ್ಮ ಬಗ್ಗೆ ನಮಗೆ ತಿಳಿದುಕೊಳ್ಳುವ ಅಪಾರ ಕಾಳಜಿ ಇಂದಿನ ಜೀವನದಲ್ಲಿ ಬಹಳ ಅವಶ್ಯಕವಾಗಿದೆ. ಇಲ್ಲದೆ ಹೋದರೆ, ತಲೆ ತಿರುಗಿದಾಗ ಹೇಗೆ ದೇಹ ಸಮತೋಲನ ಕಳೆದುಕೊಳ್ಳುತ್ತದೋ ಹಾಗೆಯೆ ಬುದ್ಧಿ, ಮನಸ್ಸು, ಯೋಚನೆ ಅಥವಾ ಭಾವನೆಗಳು ಏರುಪೇರಾದರೆ ಬದುಕು ಸಮತೋಲನ ಕಳೆದುಕೊಳ್ಳುತ್ತದೆ.

ಇದೇನು ಸರಿಪಡಿಸಲಾಗದ ಸಮಸ್ಯೆ ಅಲ್ಲ. ನಮಗೆ ಬಹಳ ಹತ್ತಿರ ಇರುವ ಜನರೊಂದಿಗೆ ಸಮಾಲೋಚನೆ ನಡೆಸಿದರು ಸಹ ಕೆಲವೊಮ್ಮೆ ನೆರವಾಗಬಹುದು. ಆದರೆ ಎಲ್ಲ ಸಮಯದ್ಲಲಿಯೂ ನಮ್ಮ ಕತೆಗಳನ್ನು ಕೇಳುವುದಕ್ಕೆ ಅಥವಾ ನಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವುದಕ್ಕೆ ಅವರಲ್ಲಿ ಸಮಯ, ತಾಳ್ಮೆ, ಅನುಭವ ಅಥವಾ ಬೇರೆಯೇನೋ ಕೊರತೆಯಿರಬಹುದು. ಹೀಗಾಗಿ ಬಹಳ ಕ್ಲಿಷ್ಟ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ವೈದ್ಯರ ಸಹಾಯ ಪಡೆಯುವುದು ಬಹಳ ಮುಖ್ಯ ಮತ್ತು ಸರಿಯಾದ ನಡೆ ಕೂಡ. ಎಲ್ಲವೂ ಒಂದೇ ಬಾರಿಗೆ ಸರಿಯಾಗುವುದಿಲ್ಲ, ಹಂತ ಹಂತವಾಗಿ ನಿಧಾನಕ್ಕೆ ಮನಸ್ಸು, ಬದುಕು ಸರಿದಾರಿಗೆ ಬರುತ್ತದೆ. ಸಾಕಷ್ಟು ನೋವು, ಬೇಸರ, ಅವಮಾನ, ಕಳೆದುಕೊಂಡ ದುಃಖ, ಹತಾಶೆ, ನಿರಾಸೆ, ಭರವಸೆಯ ಕೊರತೆ, ಸೋಲಿನ ಭಯ ಎಲ್ಲವು ಎಲ್ಲಾ ಮನಷ್ಯರನ್ನು ಸಹ ಒಂದಲ್ಲ ಒಂದು ರೀತಿಯಲ್ಲಿ ಪೀಡಿಸುತ್ತದೆ. ಸಾಕಷ್ಟು ಜನರನ್ನು ಸೋಲಿಸಿದೆ ಕೂಡ, ಎಲ್ಲವನ್ನು ಗೆದ್ದವರು ಜಗತ್ತಿನಲ್ಲಿ ಯಾರು ಸಹ ಇಲ್ಲ ಮುಂದೆಯೂ ಸಹ ಇರುವುದಿಲ್ಲ. ನಮ್ಮ ಅಂತರಂಗವನ್ನು ಉತ್ತಮ ಯೋಚನೆಗಳಿಂದ ತುಂಬಿ ಶಾಂತಿ, ಪ್ರೀತಿ, ಕರುಣೆ, ದಯೆ, ಕ್ಷಮೆ ಮನಸ್ಸಿನಲ್ಲಿ ನೆಲೆಯೂರುವಂತೆ ಮಾಡಿ ದಿನನಿತ್ಯದ ಜೀವನದಲ್ಲಿಯೂ ಎಲ್ಲದಕ್ಕೂ ಹಿತಮಿತವಿಲ್ಲದೆ ಭಾವೋದ್ರೇಕಗೊಳ್ಳುವುದನ್ನು ನಿಯಂತ್ರಿಸುವ ಅಭ್ಯಾಸವನ್ನು ಮಾಡಿಕೊಳ್ಳುವ ಅವಶ್ಯಕತೆ ಇದೆ. 

ಈ ಕೆಲಸ ಕೇಳುವಾಗ ಎಷ್ಟು ಸುಲಭವೋ ಮಾಡಲು ಹೊರಟಾಗ ಇದರಂತಹ ಕಷ್ಟ ಬೇರೊಂದಿಲ್ಲ. ನಮಗೆ ನಾವು ಯಾರೆಂಬುದು ಅರ್ಥವಾಗುವುದಕ್ಕೆ ವರ್ಷಗಳು ಹಿಡಿಯಬಹುದು. ಇನ್ನು ಬೇಡದಿರುವ ವಿಷಯಗಳಿಗೆ ಕಾಲಹರಣ ಮಾಡದೇ ಇರುವುದನ್ನು ಕಲಿಯಲು ಪೂರ್ತಿ ಜೀವನವೇ ಬೇಕಾಗಬಹುದು. ಹಾಗಾಗಿ ಇದು ನಿರಂತರ ಪ್ರಕ್ರಿಯೆ. ನಮ್ಮನ್ನು ನಾವು ಸರಿಪಡಿಸಿಕೊಳ್ಳುವುದು ಮತ್ತು ಸರಿದಾರಿಯಲ್ಲಿ ಹೆಜ್ಜೆ ಹಾಕುವಂತೆ ಒಂದು ಅವಕಾಶವನ್ನು ಸೃಷ್ಟಿಸುವುದು ಕೂಡ ಬಹಳ ಕಷ್ಟದ ಕೆಲಸ. ಆದರೆ ಆ ಪ್ರಯತ್ನವನ್ನು ನಾವು ನಿಲ್ಲಿಸಬಾರದು. ನಿರಂತರ ಪ್ರಯತ್ನದ ಫಲಗಳು ಒಂದೇ ಬಾರಿಗೆ ನಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಮರ್ಥ್ಯ ಹೊಂದಿರುತ್ತವೆ. ಈ ಪ್ರಯತ್ನ ಹೆಚ್ಚು ಶ್ರದ್ಧೆಯಿಂದ ಮಾಡಿದಷ್ಟು ಸಹ ನಮ್ಮ ಜೀವನದ ಆಗು ಹೋಗುಗಳ ಮೇಲೆ ಒಂದು ಪಕ್ಷಿನೋಟವಾದರೂ ಸಿಗುತ್ತದೆ. ಏನು ಬೇಕು, ಏನು ಬೇಡ, ಏನು ಮಾಡಬೇಕು, ಏನು ಮಾಡಬಾರದು, ಯಾವುದು ಸರಿ, ಯಾವುದು ತಪ್ಪು, ಯಾರು ಬೇಕು, ಯಾರು ಬೇಡ, ಯಾಕೆ ಬೇಕು ಎಂಬೆಲ್ಲ ಬಹಳ ಕಷ್ಟದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಹುಡುಕುವಲ್ಲಿ ಇದು ದಾರಿದೀಪವಾಗುತ್ತದೆ.     

ಎಲ್ಲವನ್ನು ಸಾಧಿಸಲು ಸಾಧ್ಯವಿಲ್ಲದಿದ್ದರೂ ಪ್ರಯತ್ನ ಹಾಕಿದ ಸಾರ್ಥಕ ಭಾವನೆ ಆದರೂ ನಮ್ಮ ಜೀವನದೊಂದಿಗೆ ಇರುತ್ತದೆ. ಸಾಕಷ್ಟು ಜನರಿಗೆ ಆತ್ಮವಿಶ್ವಾಸ ಕೊಡುವ ವಿಷಯವೇ ಇದು, ಪ್ರಾಮಾಣಿಕತೆಯಿಂದ ತಮ್ಮ ಕೈಲಾದ ಪ್ರಯತ್ನವನ್ನು ಅವರ ಜೀವನದ ಒಳಿತಿಗೆ ಮಾಡುವುದು. ಇದು ನಮ್ಮ ಒಳಗಿನಿಂದ ಬರಬೇಕು, ಬೇರೆಯವರು ನಮಗೆ ಸಹಾಯ ಮಾಡಬಹುದು ಆದರೆ ನಾವು ಮಾಡಬೇಕಾದ ಕೆಲಸವನ್ನು ಅವರು ಮಾಡಲು ಸಾಧ್ಯವಿಲ್ಲ. ಇದು ಬೇರೆಯವರಿಗಾಗಿ ಮಾಡುವ ಕೆಲಸವೂ ಅಲ್ಲ, ನಮಗಾಗಿ ಮತ್ತು ನಮ್ಮ ಒಳಿತಿಗಾಗಿ ಮಾಡುವ ಕೆಲಸ. ನಾವು ಚೆನ್ನಾಗಿದ್ದರೆ ನಮ್ಮೊಂದಿಗೆ ಇರುವವರು ಸಹ ಚೆನ್ನಾಗಿರುತ್ತಾರೆ, ಇದೊಂದು ಖುಷಿಯಿಂದ ಕೂಡಿದ ಜೀವನವನ್ನು ಕಟ್ಟುವ ಪ್ರಕ್ರಿಯೆ. ಪ್ರತಿಯೊಂದು ಸೋಲಿನಲ್ಲಿಯೂ ಪಾಠ ಕಲಿಯಬೇಕು, ನೋವು ದುಃಖ ಬೇಸರ ಇವೆಲ್ಲವನ್ನೂ ನಮ್ಮೊಂದಿಗೆ ಶಕ್ತಿಯಾಗಿ ಇಟ್ಟುಕೊಳ್ಳಬೇಕು. ಸೋಲನ್ನು ಒಪ್ಪಿಕೊಳ್ಳೋಣ, ಮತ್ತೆ ಪ್ರಯತ್ನಿಸಲು ಹಿಂಜರಿಯುವುದು ಬೇಡ.

"ಬಹುಶಃ ಮನುಷ್ಯ ಸುಖ, ಸಮೃದ್ಧಿ, ಸಂತೋಷಗಳ ನಡುವಿಗಿಂತ ಮೌನ, ಏಕಾಂತ, ಸವಾಲುಗಳ ನಡುವೆ ಮಹತ್ತಾದುದನ್ನು ಸಾಧಿಸುತ್ತಾನೇನೋ! ಅದರ ಮಹಾನ್ಮೌನದ ಏಕಾಂತದಲ್ಲಿ ಕುಳಿತು ಇಡೀ ಇಹದ ಅಂತಿಮ ಉದ್ದೇಶವನ್ನು ಚಿಂತಿಸಿ ಆಧ್ಯಾತ್ಮಿಕ ಮತ್ತು ಪಾರಮಾರ್ಥಿಕ ಸತ್ಯಾನ್ವೇಷಣೆ ಮಾಡಿದ್ದಾನೇನೋ!"
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಮುನ್ನುಡಿ, ದೇಶ ವಿದೇಶ-೧

***

ಕಾಮೆಂಟ್‌ಗಳು

- Follow us on

- Google Search