ನನಗೆ ಬಾಲ್ಯದಿಂದ ಬಹಳ ಸುಲಭವಾಗಿ ಅರ್ಥವಾಗುತಿದ್ದ ಒಂದೇ ವಿಷಯವೆಂದರೆ ಗಣಿತ. ಇತರ ವಿಷಯಗಳಲ್ಲಿ ಉತ್ತಮ ಅಂಕಗಳು ಪರೀಕ್ಷೆಯಲ್ಲಿ ಬರುತ್ತಿದ್ದವಾದರೂ ಅವುಗಳಲ್ಲಿ ಹೆಚ್ಚು ಅಂಕ ಗಳಿಸಲು ಅಷ್ಟೇ ಪರಿಶ್ರಮವೂ ಬೇಕಿತ್ತು. ಗಣಿತ ಹಾಗಿರುತ್ತಿರಲಿಲ್ಲ, ಒಮ್ಮೆ ಸರಿಯಾಗಿ ಅರ್ಥ ಆಯಿತೆಂದರೆ ಗಣಿತದ ಮಜವೇ ಬೇರೆ.
೧. ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನದೇ ಆಸಕ್ತಿ ಹಾಗು ವಿಶೇಷ ಬುದ್ಧಿ ಸಾಮರ್ಥ್ಯಗಳಿರುತ್ತವೆ.
ನನ್ನ ಮನಸ್ಸಿನಲ್ಲಿ ಇತರರು ಸಹ ಹೀಗೆ ಗಣಿತವನ್ನು ಇಷ್ಟಪಡುತ್ತಾರೆ ಎಂದುಕೊಂಡಿದ್ದೆ. ಆದರೆ, ಮುಂದಿನ ತರಗತಿಗಳಿಗೆ ಹೋದಂತೆಲ್ಲ ಗಣಿತದ ಮೇಲೆ ನಿಜವಾಗಿ ಒಲವಿರುವ ಒಂದೆರಡು ಸ್ನೇಹಿತರು ಸಿಗುವುದು ಕೂಡ ಕಷ್ಟವಾಯಿತು. ಇದು ನಾನು ಗಣಿತದಿಂದ ಕಲಿತ ಮೊದಲ ಜೀವನದ ಪಾಠ. ತನಗೆ ಯಾವ ವಿಷಯ ಬಹಳ ಸುಲಭ ಹಾಗು ಆಸಕ್ತಿದಾಯಕ ಎಂಬುದನ್ನು ವಿದ್ಯಾರ್ಥಿಗಳು ಎಷ್ಟು ಬೇಗ ತಿಳಿದುಕೊಳ್ಳುತ್ತಾರೆ ಅಷ್ಟು ಒಳ್ಳೆಯದು.
೨. ಕಲಿಯುವ ಆಸಕ್ತಿ ಮನಸ್ಸಿನಿಂದ ಮೂಡಬೇಕು
ಯಾವುದೇ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಮ್ಮ ಮನಸ್ಸಿನಲ್ಲಿ ಅದಕ್ಕೆ ಸಿದ್ಧತೆಯಿರಬೇಕು. ಮನಸ್ಸಿನಲ್ಲಿ ಕಲಿಯುವ ಆಸಕ್ತಿಯಿಲ್ಲದೆ ಯಾರದೋ ಒತ್ತಾಯಕ್ಕೆ ಅಥವಾ ಮೆಚ್ಚಿಸುವ ಸಲುವಾಗಿ ಪ್ರಯತ್ನ ಮಾಡಿದರೆ ಅದು ಖಂಡಿತವಾಗಿಯೂ ವ್ಯರ್ಥ. ಮಗುವಿನ ವಯಸ್ಸಿನಿಂದ ಕಲಿಕೆಯನ್ನು ಜೀವಂತವಾಗಿಸುವ ಏಕೈಕ ಗುಣ ಕುತೂಹಲ. ಕುತೂಹಲವಿರುವ ಮನಸ್ಸು ಬೆಟ್ಟದಷ್ಟು ಮಾಹಿತಿಯನ್ನು ಅರ್ಥ ಮಾಡಿಕೊಳ್ಳುತ್ತದೆ. ಕಲಿಕೆಯಲ್ಲಿ ಆಸಕ್ತಿ ಹಾಗು ಕುತೂಹಲ ಮೂಡಿಸುವ ನಿಟ್ಟಿನಲ್ಲಿ ಅಗತ್ಯ ಬದಲಾವಣೆಗಳನ್ನು ಶಿಕ್ಷಣ ವ್ಯವಸ್ಥೆ ಅಳವಡಿಸಿಕೊಂಡರೆ ಸಾಕಷ್ಟು ಮಕ್ಕಳ ಜೀವನವನ್ನೇ ಬದಲಾಯಿಸಬಹುದು.
೩. ಪ್ರಶ್ನಿಸುವುದು ಕಲಿಕೆಯ ಪ್ರಮುಖ ಲಕ್ಷಣ
ಕಲಿಯುವಾಗ ಗೊತ್ತಾಗದ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಗೊತ್ತಿದ್ದವರಿಗೆ ಕೇಳುವುದು ಉತ್ತಮ ಹವ್ಯಾಸ. ಹೆಚ್ಚು ಹೆಚ್ಚು ಪ್ರಶ್ನೆ ಕೇಳಿದಂತೆ ಕಲಿಕೆಯ ಗುಣಮಟ್ಟ ಕೂಡ ಹೆಚ್ಚುತ್ತದೆ. ನಮ್ಮ ಜೀವನದಲ್ಲಿಯೂ ಸಹ ಅಷ್ಟೇ, ಎಷ್ಟೋ ಗೊಂದಲ ಹಾಗು ಸಮಸ್ಯೆಗಳನ್ನು ಈಗಾಗಲೇ ಎದುರಿಸಿರುವ ಸಾಕಷ್ಟು ಜನರು ನಮ್ಮೊಂದಿಗೆ ಇರುತ್ತಾರೆ. ಗೊತ್ತಿಲ್ಲದ ವಿಚಾರಗಳನ್ನು ಕಲಿಯುವ ಉದ್ದೇಶದಿಂದ ಪ್ರಶ್ನಿಸುವುದು ಬಹಳ ಉತ್ತಮ ಗುಣ. ಇದು ಕೇವಲ ಗಣಿತಕ್ಕೆ ಮಾತ್ರ ಸೀಮಿತವಾಗಿಲ್ಲ, ಕೆಲಸ ಮಾಡುವ ಸಂದರ್ಭಗಳಲ್ಲಿಯೂ ನಮಗೆ ಅರ್ಥವಾಗದ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೆಲವರು ಕ್ಷಣಾರ್ಧದಲ್ಲಿ ಗುರುತಿಸುವ ಜಾಣ್ಮೆ ಹಾಗು ಕೆಲಸದ ಅನುಭವ ಹೊಂದಿರುತ್ತಾರೆ.
೪. ಅಲ್ಪಜ್ಞಾನ ಎಂದಿಗೂ ಒಳ್ಳೆಯದಲ್ಲ
ಗಣಿತದಲ್ಲಿ ಏನೇ ಆದರೂ ಅಲ್ಪ ಸ್ವಲ್ಪ ಗೊತ್ತಿದ್ದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಪಜ್ಞಾನದಿಂದ ನಮಗೆ ಗೊತ್ತಿಲ್ಲದಂತೆ ತಪ್ಪುಗಳು ಆಗಿಬಿಡುತ್ತವೆ. ತಪ್ಪುಗಳಿಂದ ನಾವು ಎಲ್ಲಿ ಎಡವುತ್ತಿದ್ದೀವಿ ಎಂಬುದನ್ನು ಕಲಿತರೆ, ಮುಂದಿನ ಬಾರಿ ಅಂತಹುದೇ ಪರಿಸ್ಥಿತಿ ಎದುರಾದಾಗ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಕಷ್ಟು ಸಹಾಯಕ. ಜೀವನದಲ್ಲಿ ಸಮಸ್ಯೆಗಳನ್ನು ಸರಿಯಾಗಿ ಗುರುತಿಸುವುದು ಬಹಳ ಮುಖ್ಯ, ನಂತರ ಸಮಸ್ಯೆಗೆ ಕಾರಣಗಳು ಹಾಗು ಮೂಲವನ್ನು ಹುಡುಕಿದ ನಂತರ ಉತ್ತಮ ಪರಿಹಾರವನ್ನು ಕಂಡುಕೊಳ್ಳಬೇಕು.
೫. ಆಸಕ್ತಿ ಕುತೂಹಲದೊಂದಿಗೆ ಪರಿಶ್ರಮ ಸೇರಿದಾಗ ಜೀವನ ಸುಲಭ
ನಾನು ಪಿಯುಸಿ ಓದುತ್ತಿದ್ದಾಗ ಒಬ್ಬರು ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಗಣಿತ ಶಿಕ್ಷಕರೊಂದಿಗೆ ಕಲಿಯುವ ಅವಕಾಶ ದೊರೆತಿತ್ತು. ಅರವತ್ತು ವರ್ಷದ ನಂತರವು ಸಹ ಕ್ಲಿಷ್ಟ ಗಣಿತದ ಸಮಸ್ಯೆಗಳನ್ನು ಹುಡುಕಿ ವಿದ್ಯಾರ್ಥಿಗಳಿಗೆ ದಿನನಿತ್ಯ ಬುದ್ಧಿಗೆ ಸವಾಲೊಡ್ಡುವ ಕೆಲಸ ಮಾಡುತ್ತಿದ್ದರು. ಅವರ ಮಾತಿನಂತೆ ನಾನು ಈ ವಯಸ್ಸಿನಲ್ಲಿಯೂ ಜೀವನೋತ್ಸಾಹ ಕಾಪಾಡಿಕೊಳ್ಳಲು ಪ್ರಮುಖ ಕಾರಣ ನನ್ನ ಜೀವನವನ್ನೆಲ್ಲ ಗಣಿತವನ್ನು ಕಲಿಯಲು ಹಾಗು ಕಲಿಸಲು ಬಹಳ ಶ್ರದ್ಧೆಯಿಂದ ಶ್ರಮಿಸಿದ್ದು. ನಾವು ಬಹಳ ಇಷ್ಟ ಪಡುವ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಜೀವನ ಕಟ್ಟಿಕೊಂಡರೆ ಅದು ನಮಗೆ ಮಾತ್ರವಲ್ಲದೆ, ಆ ಕ್ಷೇತ್ರಕ್ಕೂ ಸಹ ಅಗಾಧ ಕೊಡುಗೆ ನೀಡಲು ಸಹಾಯಕ.
೬. ಕಲಿಯುವುದಕ್ಕೆ ಕೊನೆಯಿಲ್ಲ
ನಾನು ವಿದ್ಯಾರ್ಥಿಯಾಗಿದ್ದಾಗ ಡಿಗ್ರಿ ಮುಗಿದ ಹೊತ್ತಿಗೆ ಎಲ್ಲವನ್ನು ಅರೆದು ಕುಡಿದಿರುತ್ತೇನೆ ಎನ್ನುವ ವಿಚಿತ್ರ ಕಲ್ಪನೆಯೊಂದು ನನ್ನ ಮನದಲ್ಲಿತ್ತು. ಆದರೆ, ಈಗ ಮನಸ್ಸಿಗೆ ಅರ್ಥವಾಗಿದೆ ಯಾವುದೇ ವಿಷಯವನ್ನು ಅದೆಷ್ಟೇ ವರ್ಷ ಅಧ್ಯಯನ ಮಾಡಿದರು ಸಹ ಇತರರಿಗೆ ಹೋಲಿಕೆ ಮಾಡಿದರೆ ನಮಗೆ ಹೆಚ್ಚು ತಿಳಿದಿದೆ ಎಂದು ಸಂತೃಪ್ತಿ ಪಡಬಹುದೇ ಹೊರತು, ಆ ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡಂತೆಲ್ಲ ನಮಗೆ ಇನ್ನು ಬಹಳಷ್ಟು ಕ್ಲಿಷ್ಟ ವಿಭಾಗಗಳ ಬಗ್ಗೆ ಗೊತ್ತಿಲ್ಲ ಎಂಬ ಸತ್ಯವೇ ಮತ್ತೆ ಮತ್ತೆ ದರ್ಶನವಾಗುತ್ತದೆ. ಹೆಚ್ಚು ಹೆಚ್ಚು ಓದಿದಂತೆ ಬರುವ ನನ್ನ ಜ್ಞಾನದ ಅಲ್ಪತೆಯ ಅರಿವು ನನ್ನನ್ನು ಸಾಕಷ್ಟು ವಿನಯವಂತನಾಗಿ ಮಾಡಿವೆ.
೭. ಹೊಸ ಅನ್ವೇಷಣೆಗಳ ಬೆಲೆ ತಿಳಿಯಲು ಹಲವು ಶತಮಾನಗಳೇ ಬೇಕಾಗಬಹುದು.
ಇದೊಂದು ಬಹಳ ಪ್ರಮುಖ ಜೀವನದ ಪಾಠ. ಹೊಸತಾಗಿ ಕಂಡುಬರುವ ಅನ್ವೇಷಣೆಗಳು ಹಲವಾರು ವರ್ಷಗಳ ಕಾಲ ಯಾವ ಉಪಯೋಗಕ್ಕೂ ಇಲ್ಲ ಎಂಬಂತೆ ಭಾಸವಾಗಬಹುದು. ಆದರೆ ಅದು ಮುಂದಿನ ಕೆಲಸಗಳಿಗೆ ಅಡಿಪಾಯವಾಗುತ್ತದೆ ಎಂಬುದನ್ನು ನಾವು ಮರೆಯಬಾರದು. ಅರ್ಥ ಮಾಡಿಕೊಳ್ಳಲು ಸುಲಭ ಅನ್ನಿಸುವ ಅದೆಷ್ಟೋ ಸರಳ ಗಣಿತದ ಸೂತ್ರಗಳು ಜಗತ್ತಿನ ಎಷ್ಟೋ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ದಾರಿದೀಪವಾಗಿವೆ. ಹೀಗಾಗಿ ಯಾವುದೇ ಹೊಸ ಪ್ರಯತ್ನಗಳನ್ನು ಕೇವಲ ವೈಜ್ಞಾನಿಕ ದೃಷ್ಟಿಯಿಂದ ನೋಡಬೇಕೆ ಹೊರತು ಇದರಿಂದ ಯಾರಿಗೆ ಯಾವುದೇ ಉಪಯೋಗವಿಲ್ಲ ಎಂಬ ನಿಲುವು ತಳೆದುಬಿಟ್ಟರೆ ಅದರಿಂದ ಆ ಕೆಲಸ ಮಾಡಿದವರಿಗೂ ನಿರಾಸೆ ಮೂಡಿಸಿದಂತಾಗುತ್ತದೆ. ಸಾಕಷ್ಟು ವಿಷಯಗಳ ಪ್ರಾಮುಖ್ಯತೆಯನ್ನು ಕಾಲ ನಿರ್ಧರಿಸುತ್ತದೆ.
೮. ಪ್ರತಿ ಸಮಸ್ಯೆಗೆ ಹಲವು ರೂಪಗಳಿರುತ್ತವೆ, ಅವುಗಳಿಗೆ ಕಡಿಮೆ ಸಮಯದಲ್ಲಿ ಪರಿಹಾರ ಕಂಡುಹಿಡಿಯಲು ವಿಭಿನ್ನ ಹಾಗು ಸೂಕ್ತ ದೃಷ್ಟಿಕೋನ ಅವಶ್ಯಕ.
ಇದು ಜೀವನದ ಪ್ರತಿ ಹಂತದಲ್ಲಿ ಬಹಳ ಮುಖ್ಯ. ವಿಭಿನ್ನ ದೃಷ್ಟಿಕೋನಗಳಿಂದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು ಮನಸ್ಸಿನ ಬೇಸರವನ್ನು ಹೋಗಲಾಡಿಸುವ ಸಾಮರ್ಥ್ಯ ಹೊಂದಿದೆ. ಇದೆ ಕಾರಣಕ್ಕಾಗಿಯೇ ಹೊಸತಾಗಿ ಕೆಲಸಕ್ಕೆ ಸೇರುವವರಿಗೆ ಸಂಸ್ಥೆಗಳು ಹೆಚ್ಚು ಪ್ರಾಮುಖ್ಯತೆ ನೀಡುವುದು. ಪ್ರತಿ ಸಮಸ್ಯೆಗೆ ಹೊಸ ದೃಷ್ಟಿಕೋನದ ಬರವನ್ನು ನೀಗಿಸುವ ಜವಾಬ್ದಾರಿ ಹೊಸತಾಗಿ ಕೆಲಸಕ್ಕೆ ಸೇರಿದವರ ಮೇಲಿರುತ್ತದೆ. ಪ್ರತಿಯೊಬ್ಬರ ಅನಿಸಿಕೆ ಹಾಗು ದೃಷ್ಟಿಕೋನದ ವಿಚಾರಗಳನ್ನು ಕೇಳುವ ಸಂಯಮ ನಮ್ಮ ಜೀವನದ ಭಾಗವಾದಾಗ ಅವರಿಗೂ ನಮ್ಮ ವಿಚಾರಗಳನ್ನು ಕೇಳುವ ಅಭ್ಯಾಸವಾಗುತ್ತದೆ. ಸರಿ ತಪ್ಪು ನಿರ್ಧಾರಗಳು ಮುಂದಿನ ಹಂತವೇ ಹೊರತು, ನಿಮ್ಮ ದೃಷ್ಟಿಕೋನವೇ ನಮಗೆ ಬೇಕಾಗಿಲ್ಲ ಎನ್ನುವ ಧೋರಣೆ ಸರಿಯಲ್ಲ.
೯. ಸಮಸ್ಯೆಗಳ ಹೊರತಾಗಿ ಬೇರೊಂದು ಪ್ರಪಂಚವಿದೆ.
ನಮಗೆ ಏನಾದರು ಬಹಳ ಇಷ್ಟವಾದರೆ ಅದು ಬೇಸರ ಹುಟ್ಟಿಸುವ ತನಕ ಒಂದೇ ಸಮನೆ ಅದರಲ್ಲೇ ಮುಳುಗಿ ಬಿಡುವ ಅಭ್ಯಾಸ ಹಲವರಿಗಿದೆ. ಆದರೆ, ಸರಿಯಾದ ಸಮಯಪಾಲನೆಯೊಂದಿಗೆ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಅವಶ್ಯಕ. ಈ ಸಮತೋಲನ ಇಲ್ಲದೆ ಹೋದರೆ ಅದು ಮಾಡುವ ಕೆಲಸದಲ್ಲಿ ಮಾತ್ರವಲ್ಲದೆ ನಮ್ಮೊಂದಿಗೆ ಕೆಲಸ ಮಾಡುವವರ ಮೇಲೆಯೂ ಸಹ ದುಷ್ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಹೀಗಾಗಿ ದಿನದ ಒಂದಷ್ಟು ಸಮಯವನ್ನು ವಿಶ್ರಾಂತಿ ಹಾಗು ಮನಸ್ಸಿನ ಉಲ್ಲಾಸಕ್ಕೆ ತೆಗೆದಿಟ್ಟರೆ ಮಾಡುವ ಕೆಲಸದ ಮೇಲೆಯೂ ಹೆಚ್ಚು ಏಕಾಗ್ರತೆ ಮೂಡುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ