ಜಗಳ

ನಮ್ಮ ಮನಸ್ಸಿಗೆ ಬೇಜಾರಾದಾಗ ಆ ನೋವನ್ನು ನೋವುಂಟು ಮಾಡಿದವರಿಗೆ ಅರ್ಥ ಮಾಡಿಸುವುದೇ ಸಾಕಷ್ಟು ಜಗಳಗಳ ಮೂಲ ಉದ್ದೇಶ. ಯಾರ ಮೇಲಾದರೂ ಆಕ್ರಮಣ ಮಾಡಲು ಮುಂದಾದಾಗ ಯಾರೇ ಆದರು ಸಹ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುಂದಾಗುತ್ತಾರೆ. ಈ ಉದಾಹರಣೆ ಮಾತಿನ ಜಗಳಕ್ಕೂ ಅನ್ವಯಿಸುತ್ತದೆ. 


ಯಾರೇ ತಪ್ಪು ಮಾಡಿದ್ದರು ಸಹ ಅವರ ತಪ್ಪನ್ನು ಅವರಿಗೆ ಅರ್ಥ ಮಾಡಿಸುವ ಭರದಲ್ಲಿ ಬಾಯಿಗೆ ಬಂದಂತೆ ಬೈಯ್ಯಲು ಆರಂಭಿಸಿದರೆ ನಮ್ಮ ಮಾತುಗಳ ಉದ್ದೇಶಕ್ಕಿಂತ ನಾವೇನು ಬೈಯ್ಯುತ್ತಿದ್ದೇವೆ ಎಂಬುದರ ಮೇಲೆಯೇ ಅವರ ಗಮನವೆಲ್ಲ ಕೇಂದ್ರೀಕೃತವಾಗುತ್ತದೆ. ಅವರ ತಪ್ಪಿನ ಅರಿವು ಮೂಡಿಸಲು ಹೋಗಿ ನಮಗೇ ಗೊತ್ತಿಲ್ಲದೇ ಮತ್ತೊಂದು ತಪ್ಪನ್ನು ನಾವು ಮಾಡಿರುತ್ತೇವೆ. ಕೆಲವೊಂದು ಬಾರಿ ಈ ಜಗಳಗಳ ಕಟು ಮಾತಿನ ಪ್ರಯೋಗಗಳಿಂದಾಗಿ ಒಬ್ಬರು ಉತ್ತಮ ಗೆಳೆಯ ಗೆಳತಿಯರನ್ನೋ ಅಥವಾ ನಮಗೆ ಒಳಿತನ್ನು ಬಯಸುವ ಜನರನ್ನು ದೂರ ಮಾಡಿಕೊಳ್ಳುವ ಸನ್ನಿವೇಶಗಳು ಜೀವನದಲ್ಲಿ ಎದುರಾಗುತ್ತವೆ. 

ಬೇರೇನು ಮಾಡಲು ಸಾಧ್ಯ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ. ನಮಗಾದ ನೋವನ್ನು ಹಾಗು ಸಂಕಟವನ್ನು ಮನಸ್ಫೂರ್ತಿಯಾಗಿ ವ್ಯಕ್ತಪಡಿಸಿದ್ದೇ ಆದಲ್ಲಿ ಅದನ್ನು ಖಂಡಿತವಾಗಿಯೂ ಇನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಇದು ಉತ್ತಮ ಬಾಂಧವ್ಯಗಳ ಬೆಳವಣಿಗೆಗೆ ಅಡಿಪಾಯವು ಹೌದು. ಅದೆಷ್ಟೋ ಕೋಪ ಮನಸ್ತಾಪಗಳು ಆರಂಭವಾಗುವುದೇ ನಮ್ಮ ಭಾವನೆಗಳ ಸರಿಯಾದ ಅಭಿವ್ಯಕ್ತಿಯ ಕೊರತೆಯಿಂದ. 

ಜೀವನದಲ್ಲಿ ನಮಗೆ ನಿಜವಾಗಿಯೂ ಒಳಿತನ್ನು ಬಯಸುವವರು ಸಿಗುವುದೇ ಅಪರೂಪವಾಗಿರುವಾಗ, ಅರ್ಥವಿಲ್ಲದ ಜಗಳಗಳಿಂದ ಅವರನ್ನು ದೂರ ಮಾಡಿಕೊಳ್ಳುವುದು ಎಷ್ಟು ಸರಿ ಎಂಬುದು ನನಗೆ ಅರ್ಥವಾಗುವುದಿಲ್ಲ. ಎಲ್ಲರನ್ನು ಖುಷಿಪಡಿಸುವ ವ್ಯಕ್ತಿತ್ವ ನಮ್ಮದಾಗಬೇಕಿಲ್ಲ, ಆದರೆ ನಮ್ಮ ಜೀವನದ ಅದೆಷ್ಟೋ ಸಮಸ್ಯೆಗಳನ್ನು ಎದುರಿಸಲು ನಮ್ಮೊಂದಿಗೆ ಜೊತೆಯಾಗಿ ನಿಂತವರಿಗೆ ಒಂದೆರಡು ಹೆಚ್ಚಿಗೆ ಅವಕಾಶ ನೀಡುವುದರಲ್ಲಿ ತಪ್ಪೇನಿಲ್ಲ. ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡು ಸರಿ ಮಾಡಿಕೊಳ್ಳುವ ಮನಸ್ಥಿತಿಯಿರುವ ಜನರು ಸಿಗುವುದೇ ಬಹಳ ಕಷ್ಟವಾಗಿದೆ ಈ ಕಾಲದಲ್ಲಿ. 

ದ್ವೇಷ ಕಾರುವ ಜನರಿಂದ ಹಾಗು ಅವಕಾಶ ಸಿಕ್ಕಿದಾಗ ನೋವುಂಟುಮಾಡುವ ಜನರಿಂದ ಜಗತ್ತು ತುಂಬಿ ತುಳುಕುತ್ತಿದೆ. ಹೆಚ್ಚಿನ ಜನರು ನಮ್ಮ ಜೀವನಕ್ಕೆ ಬೇಕಾಗಿಲ್ಲದೆ ಹೋದರು ಸಹ ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳು ನಮ್ಮ ಮನಸ್ಸಿನ ಮೂಲೆಯಲ್ಲಿ ಕಹಿ ನೆನಪುಗಳಾಗಿ ಕೂತಿರುತ್ತವೆ. ಈ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟು, ಜೀವನ ಸಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಉತ್ತಮ ಬದಲಾವಣೆಗಳನ್ನು ಹಂತ ಹಂತವಾಗಿ ನಮ್ಮ ಜೀವನದಲ್ಲಿ ಅಳವಸಿಕೊಂಡು ಅದರಿಂದ ಇತರರು ಸಹ ಪ್ರೇರಣೆಗೊಳ್ಳುವಂತೆ ಬದುಕಿ ಬಾಳುವ ಅವಶ್ಯಕತೆ ಪ್ರಸ್ತುತ ಸಮಾಜಕ್ಕಿದೆ. 

ಕಾಮೆಂಟ್‌ಗಳು

- Follow us on

- Google Search