ಬಹುಷಃ ಬಾಲ್ಯ ಕಳೆದು ಸ್ವಲ್ಪ ಬುದ್ಧಿ ಬರುತ್ತಿದಂತೆ ಸಮಸ್ಯೆಗಳು ನಮ್ಮ ಅರಿವಿಗೆ ಬರತೊಡಗುತ್ತವೆ. ನಮ್ಮ ಜೀವನ ಇತರರ ಜೀವನಕ್ಕಿಂತ ಹೇಗೆ ಭಿನ್ನವೋ, ಹಾಗೆಯೆ ನಮ್ಮ ಸಮಸ್ಯೆಗಳು ಕೂಡ. ಸಮಸ್ಯೆಗಳು ಒಂದೇ ಆಗಿದ್ದರು ಸಹ, ಅವುಗಳಿಂದ ನಮ್ಮ ಜೀವನದಲ್ಲಾಗುವ ಪರಿಣಾಮ ನಮ್ಮ ವ್ಯಕ್ತಿತ್ವ ಮತ್ತು ನಮ್ಮೊಂದಿಗೆ ಇರುವ ಪರಿಸರದ ಮೇಲೆ ಅವಲಂಬಿತವಾಗಿರುತ್ತವೆ. ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಎಂಬಂತೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಕಷ್ಟಗಳನ್ನು ಎದುರಿಸುತ್ತಲೇ ಇರುತ್ತಾರೆ.
ಕೆಲವೊಂದು ಸಮಸ್ಯೆಗಳು ನಮ್ಮನ್ನು ನೇರವಾಗಿ ಪೀಡಿಸುತ್ತವೆ. ಹಸಿವು, ಬಡತನ, ಶೋಷಣೆ, ತಾರತಮ್ಯ ಮುಂತಾದವುಗಳು. ಇನ್ನು ಕೆಲವು ಸಮಸ್ಯೆಗಳು ನಮ್ಮ ಜೀವನದ ಭಾಗವಾಗಿರುತ್ತವೆ. ಇವುಗಳು ನಮ್ಮನ್ನು ನೇರವಾಗಿ ಪೀಡಿಸದೆ ಹೋದರು ಸಹ ಅದರ ಪರಿಣಾಮಗಳು ನಮ್ಮ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರುತ್ತವೆ. ಉದಾಹರಣೆಗೆ ಭ್ರಷ್ಟಾಚಾರ, ಯೋಗ್ಯತೆಯಿಲ್ಲದ ರಾಜಕಾರಣಿಗಳು, ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುವವರು ಇತ್ಯಾದಿ.
ಕೆಲವು ಸಮಸ್ಯೆಗಳು ಇಂದೋ ನಿನ್ನೆಯೋ ಆರಂಭವಾಗಿಲ್ಲ. ಹಲವಾರು ವರ್ಷಗಳಿಂದ ಬೆಳೆದುಕೊಂಡು ಬಂದಿವೆ. ಈ ಸಮಸ್ಯೆಗಳು ಬಗೆಹರಿಯುವ ಹೊತ್ತಿಗೆ ಹೊಸ ರೂಪ ಪಡೆದುಕೊಂಡು ಮತ್ತೊಮ್ಮೆ ಜನ್ಮವೆತ್ತಿ ಬರುತ್ತವೆ. ಈ ದಿನನಿತ್ಯದ ಜೀವನದ ಜಂಜಾಟದಲ್ಲಿ ನಾವು ಪ್ರಕೃತಿಯ ಒಂದು ಭಾಗ ಎಂಬುದನ್ನೇ ಮರೆತಂತಿದೆ. ಹುಟ್ಟಿದ ಪ್ರತಿ ಮಗು, ಜೀವನದಲ್ಲಿ ಏನು ಮಾಡುತ್ತದೆ ಎಂಬುದರ ಅರಿವು ನಮಗಿಲ್ಲದೆ ಇರಬಹುದು, ಆದರೆ ಅದು ಒಂದು ದಿನ ಸಾಯುತ್ತದೆ ಎಂಬ ಕಟುಸತ್ಯ ಪ್ರಕೃತಿ ನಿರ್ಧರಿಸಿದೆ.
ಅಭಿವೃದ್ಧಿಯ ಭರದಲ್ಲಿ ಪ್ರಕೃತಿಗೆ ವಿರುದ್ಧವಾಗಿ ಸೆಣಸಾಡಲು ನಿಂತರೆ, ಆರಂಭದಲ್ಲಿ ಗೆಲುವಿನ ಖುಷಿಯಾದರು ಸಹ ಮುಂದೊಂದು ದಿನ ನಮ್ಮ ತಪ್ಪಿನ ಅರಿವು ನಮಗಾಗದೆ ಹೋದರು ಅದಕ್ಕೆ ತಕ್ಕ ಪ್ರತಿಫಲ ಜೀವಿಗಳಿಗೆ ಸಿಗುತ್ತದೆ. ಸೂಕ್ಷ್ಮವಾಗಿ ನಮ್ಮ ಸಮಾಜ ಹಾಗು ವಿವಿಧ ದೇಶಗಳ ಜನರ ಜೀವನವನ್ನು ಅವಲೋಕಿಸಿದರೆ ಕಾಡಿನ ನಿಯಮಗಳೇ ನಾಗರಿಕತೆಯ ಮೂಲಕ ವಿವಿಧ ರೂಪಗಳಲ್ಲಿ ಆಚರಣೆಗೆ ಬಂದಿರುವುದು ಅರ್ಥವಾಗುತ್ತದೆ.
ಮಾನವರು ತಮ್ಮ ಸಂಘಟನಾ ಶಕ್ತಿ ಹಾಗು ಸಾಮಾಜಿಕ ಜೀವನದ ಲಾಭಗಳನ್ನು ಉಪಯೋಗಿಸಿಕೊಂಡು ಎಗ್ಗಿಲ್ಲದೆ ಬೆಳೆದಿದ್ದಾರೆ. ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಅತ್ಯಾಚಾರವಾಗುತ್ತಿದೆ. ನಮ್ಮ ದುರಾಸೆಗಳೇ ಇಂದು ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ ಕಂಡು ಕೇಳರಿಯದ ರೋಗಗಳಿಗೆ ದಾರಿ ಮಾಡಿಕೊಟ್ಟಿವೆ.
ಪ್ರಕೃತಿಯಲ್ಲಿನ ಪ್ರತಿಯೊಂದು ಜೀವಿಯು ಇತರ ಜೀವಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುತ್ತದೆ. ಈ ಸಮತೋಲನವನ್ನು ಹೋಗಲಾಡಿಸಿದರೆ ಅದರ ಪರಿಣಾಮಗಳು ಗಂಭೀರವಾಗಿರುತ್ತವೆ ಹಾಗು ಮಾನವನ ಬುದ್ಧಿಯಾಗಲಿ ಅಥವಾ ಆಧುನಿಕ ವಿಜ್ಞಾನದಿಂದಾಗಲಿ ಸರಿಪಡಿಸಲು ಸಾಧ್ಯವಿಲ್ಲ. ನಿಸರ್ಗದತ್ತವಾಗಿ ನಡೆಯುವ ಕೆಲಸಗಳು ಹಾಗೆಯೆ ನಡೆದುಕೊಂಡು ಹೋದರೆ ಮಾತ್ರ ಅವು ನಿರಂತರವಾಗಿ ಉಳಿಯುತ್ತವೆ. ನಿರಂತರವಾಗಿ ಉಳಿಯದ ಯಾವುದನ್ನೇ ಅವಲಂಬಿಸಿ ಜೀವನ ಕಟ್ಟಿಕೊಂಡರು ಸಹ ಕಾಲ ಅದಕ್ಕೆ ತಕ್ಕ ಉತ್ತರ ನೀಡುತ್ತದೆ.
ಈ ಎಲ್ಲ ಸಮಸ್ಯೆಗಳ ಕೂಪದಲ್ಲಿ ಶಾಂತಿ, ಪ್ರೀತಿ, ನಂಬಿಕೆ ಹಾಗು ವಿಶ್ವಾಸಗಳಿಂದ ಕೂಡಿದ ಬದುಕನ್ನು ಕಟ್ಟಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮುಂದೇನಾಗುತ್ತದೆ ಎಂಬ ಸಣ್ಣ ಸುಳಿವು ಸಹ ಇಲ್ಲದ ಜೀವನದಲ್ಲಿ ಉಪಯೋಗವಿಲ್ಲದ ವಿಷಯಗಳಿಗೆ ಸಮಯ ಹಾಳು ಮಾಡುವುದಕ್ಕಿಂತ ನಮ್ಮ ಮನಸ್ಸಿಗೆ ಸಂತೋಷ ಹಾಗು ನೆಮ್ಮದಿ ನೀಡುವ ಕೆಲಸಗಳಿಗೆ ಸಮಯ ಮೀಸಲಿಡೋಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ