ನಮ್ಮ ಸಮಾಜದಲ್ಲಿ ಈ ರೀತಿಯ ಅಮಾನವೀಯ ಕೃತ್ಯಗಳನ್ನು ತಡೆಯುವವರ ಸಂಖ್ಯೆಗಿಂತ ಪ್ರೋತ್ಸಾಹಿಸುವವರ ಸಂಖ್ಯೆಯೇ ಹೆಚ್ಚಾಗಿದೆ. ಜಗತ್ತಿನಲ್ಲಿ ಘೋರ ತಪ್ಪುಗಳನ್ನು ಮಾಡಿದವರು ಸಹ ಇಷ್ಟು ವೇಗವಾಗಿ ಮಾನಸಿಕ ಹಾಗು ದೈಹಿಕ ಶಿಕ್ಷೆಗೆ ಒಳಗಾಗುವುದಿಲ್ಲ ಅನ್ನಿಸುತ್ತದೆ. ಶಾಲೆಗಳು ಇರುವುದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ. ಅಲ್ಲಿ ಕಲಿಯಲು ಬರುವ ಪ್ರತಿಯೊಂದು ಮಗುವಿಗೂ ಸಮಾನ ಹಕ್ಕುಗಳಿವೆ.
ಕಲಿಕೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದ ತಕ್ಷಣ ಹೊಡೆದು ಬಡಿಯುವುದು, ಶಿಸ್ತಿನ ಹೆಸರಲ್ಲಿ ಹೊಡೆಯುವುದು, ಬರೆದಿಲ್ಲ ಓದಿಲ್ಲ ಎಂದು ಹೊಡೆಯುವುದರ ಉದ್ದೇಶ ಮೇಲ್ನೋಟಕ್ಕೆ ಒಳ್ಳೆಯದೆಂದು ಅನ್ನಿಸಿದರೂ ಅದರ ಪರಿಣಾಮ ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ದೀರ್ಘಕಾಲದಲ್ಲಿ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ತಿರುಗಿ ಶಿಕ್ಷಕರ ಮೇಲೆ ಆಕ್ರಮಣ ಮಾಡುವ ಶಕ್ತಿಯಿಲ್ಲದ ಪುಟ್ಟ ಮಕ್ಕಳಿಗೆ ಹೊಡೆಯುವುದು ಸಮಾಜಘಾತುಕರ ಲಕ್ಷಣ. ನೀವು ಅದೆಂತಹ ದೊಡ್ಡ ಶಿಕ್ಷಕರೇ ಆಗಿದ್ದರು ಸಹ ಮಕ್ಕಳನ್ನು ಹೊಡೆದು ಬಡಿದು ಹೆದರಿಸಿ ಬೆದರಿಸಿ ಶೋಷಿಸುವ ಹಕ್ಕು ಯಾರಿಗೂ ಸಹ ಇಲ್ಲ, ಅದು ಕಾನೂನಿನ ಪ್ರಕಾರ ಅಪರಾಧವೂ ಹೌದು.
ಕಲಿಯಲು ಬರುವ ಮಕ್ಕಳಿಗೆ ಇತರ ಮಕ್ಕಳ ಮುಂದಾಗುವ ಒಂದು ಸಣ್ಣ ಅವಮಾನಕರ ಘಟನೆ ಕಲಿಕೆಯ ಮೇಲಿನ ಆಸಕ್ತಿಯನ್ನೇ ಕೊಳ್ಳುವ ಸಾಧ್ಯತೆಯಿರುತ್ತದೆ. ಚಿಕ್ಕ ಮಕ್ಕಳ ಮನಸ್ಸಿನ ಮೇಲಾಗುವ ಕೆಟ್ಟ ಪರಿಣಾಮಗಳು ದೀರ್ಘ ಕಾಲದವರೆಗೆ ಪರಿಣಾಮ ಬೀರುವುದಲ್ಲದೆ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ. ಈ ರೀತಿಯ ತಲೆಬುಡವಿಲ್ಲದ ಕ್ರೂರ ಘಟನೆಗಳು ಹೆಚ್ಚಾಗಿ ನಡೆಯುವುದು ಗ್ರಾಮೀಣ ಭಾಗದ ಶಾಲೆಗಳಲ್ಲಿ ಹಾಗು ಹೆಚ್ಚಾಗಿ ಬಡ ಹಾಗು ಮಧ್ಯಮ ವರ್ಗದ ಮಕ್ಕಳು ಓದುವ ಶಾಲೆಗಳಲ್ಲಿ.
ಕೆಲವು ವಿದ್ಯಾರ್ಥಿಗಳಂತೂ ಶಿಕ್ಷಕರಿಂದ ಹಾಗು ಪೋಷಕರಿಂದ ಒದೆ ತಿಂದು ತಿಂದು ಕಲಿಕೆಯಲ್ಲಿ ಹಿಂದುಳಿದು ಬಿಡುತ್ತಾರೆ. ಮೊದಲೇ ಗುಣಮಟ್ಟದ ಶಿಕ್ಷಣ ಹಾಗು ನಗರದ ಸೌಲಭ್ಯಗಳಿಂದ ವಂಚಿತರಾಗಿರುವ ಮಕ್ಕಳಿಗೆ ಇನ್ನಷ್ಟು ಹಿಂಸೆ ಮಾಡಿದರೆ ಅವರನ್ನು ಪಾತಾಳಕ್ಕೆ ತಳ್ಳಿದಂತೆ. ಅಂತಹ ಮಕ್ಕಳು ಬೆಳೆಯುತ್ತ ಹೋದಂತೆ ಮುಂದಿನ ಹಂತದ ವಿದ್ಯಾಭ್ಯಾಸದಲ್ಲಿ ದೊರೆಯುವ ಶಿಕ್ಷಕರೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಲ್ಲಿ ವಿಫಲರಾಗುವ ಸಾಧ್ಯತೆಯಿರುತ್ತದೆ.
ಜಗತ್ತಿನಲ್ಲಿ ಬದಲಾವಣೆ ತರಲು ಹಲವಾರು ದಾರಿಗಳಿವೆ. ಆದರೆ ಎಂದೆಂದಿಗೂ ಉಳಿಯುವ ಉತ್ತಮ ಬದಲಾವಣೆಗಳು ಪ್ರೀತಿಯಿಂದ ಮಾತ್ರ ಬರುತ್ತವೆ. ನೀವು ಮಕ್ಕಳಲ್ಲಿ ಉತ್ತಮ ಬದಲಾವಣೆಗಳನ್ನು ಕಾಣಲು ಬಯಸಿದಲ್ಲಿ, ಮೊದಲು ಅವರ ವಿಶ್ವಾಸ ಗಳಿಸುವ ಪ್ರಯತ್ನವನ್ನು ಮಾಡಿ. ಮಕ್ಕಳಿಗೆ ಪೋಷಕರು ಹಾಗು ಶಿಕ್ಷಕರು ಇರುವುದು ನಮ್ಮ ಸಹಾಯಕ್ಕಾಗಿ ಎಂಬ ಬಲವಾದ ನಂಬಿಕೆ ಮನಸ್ಸಿನಲ್ಲಿ ಮೂಡಿದರೆ ಕಲಿಕೆಯಲ್ಲಿ ಅವರಿಗೆ ಬೇಕಾದ ಸಹಾಯವನ್ನು ಕೇಳಿ ಪಡೆಯುತ್ತಾರೆ.
ಶಿಕ್ಷಣದ ಮೂಲ ಉದ್ದೇಶ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು ಹಾಗು ವಿದ್ಯಾರ್ಥಿಗಳಿಗೆ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರೆಯಲು ಅಗತ್ಯ ಮಾರ್ಗದರ್ಶನ ನೀಡುವುದು. ಇದರೊಂದಿಗೆ ಶಾಲೆಗಳಲ್ಲಿ ಸಮಾನತೆ, ಸ್ವಾತಂತ್ರ್ಯ, ಶಾಂತಿ ಹಾಗು ಸಹಬಾಳ್ವೆಯ ಪಾಠವನ್ನು ಕಲಿಸುವ ಶಿಕ್ಷಕರು ಮಕ್ಕಳು ಮಾಡಿದ ಸಣ್ಣ ತಪ್ಪಿಗೆ ಶಿಕ್ಷೆ ನೀಡಲು ಆರಂಭಿಸಿದರೆ ಮಕ್ಕಳ ಗಮನವೆಲ್ಲ ಅಲ್ಲಿಯೇ ಹೋಗುತ್ತದೆ.
ಒಬ್ಬ ಶಿಕ್ಷಕರು ವಿದ್ಯಾರ್ಥಿಗೆ ನೀಡುವ ಬೆಂಬಲ, ಪ್ರೀತಿ ಹಾಗು ಆತ್ಮವಿಶ್ವಾಸ ವಿದ್ಯಾರ್ಥಿಯ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸುವ ಶಕ್ತಿ ಹೊಂದಿವೆ. ಇದೆಲ್ಲಾ ವಿಚಾರಗಳು ಸಾಕಷ್ಟು ಜನರಿಗೆ ತಿಳಿದಿದ್ದರೂ ಸಹ ಇತರರು ಸಹ ಇದನ್ನೇ ಮಾಡುತ್ತಾರೆ ಎಂಬ ಗೊಡ್ಡು ಕಾರಣವೊಡ್ಡಿ ಸಮಾಜದಲ್ಲಿ ಮುಂದುವರಿಯುತ್ತಿದೆ. ಒಂದು ಉತ್ತಮ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ. ಈಗಾಗಲೇ ಶಿಕ್ಷಣದಿಂದ ವಂಚಿತರಾಗಿರುವ ಹಾಗು ಕಲಿಕೆಯಿಂದ ವಿಮುಖರಾಗಿರುವ ವಿದ್ಯಾರ್ಥಿಗಳ ಅಂಕೆ ಸಂಖ್ಯೆಗಳನ್ನು ನೋಡಿದರೆ ಬಹಳ ಬೇಜಾರಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ