ಐಪಿಎಲ್ ೨೦೨೧: ಚೆನ್ನೈ ಸೂಪರ್ ಕಿಂಗ್ಸ್

ಹೋದ ವರ್ಷದ ಐಪಿಎಲ್ ಅಲ್ಲಿ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ವರ್ಷದ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿದೆ. ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಉತ್ತಮ ಸಾಧನಗೆಳ ದಾಖಲೆ ಬರೆದಿರುವ ತಂಡವೊಂದು ಕಳೆದ ವರ್ಷದ ಕಳಪೆ ಪ್ರದರ್ಶನದ ನಂತರ ಈ ವರ್ಷ ಇಷ್ಟು ಸಲೀಸಾಗಿ ಪಂದ್ಯಗಳನ್ನು ಗೆಲ್ಲುತ್ತದೆ ಎಂಬ ಆಶಯ ಹೆಚ್ಚಿನ ಜನರಿಗೆ ಇರಲಿಲ್ಲ. ಹೀಗಾಗಿ ಐಪಿಎಲ್ ಪಂದ್ಯಗಳಿಗೆ ವೀಕ್ಷಕ ವಿವರಣೆ ನಡೆಸಿಕೊಡುವ ಬಹಳಷ್ಟು ಜನರು ಚೆನ್ನೈ ತಂಡ ಪ್ಲೇ ಆಫ್ ಹಂತಕ್ಕೆ ತಲುಪುವುದೇ ಇಲ್ಲ ಎಂಬ ಭವಿಷ್ಯ ನುಡಿದಿದ್ದರು. 


ಚೆನ್ನೈ ತಂಡ ಇಷ್ಟು ವರ್ಷಗಳ ಕಾಲ ಸಾಕಷ್ಟು ಯಶಸ್ಸು ಸಾಧಿಸಲು ಅವರು ತಂಡವನ್ನು ಕಟ್ಟುವ ಕಲೆ ಕೂಡ ಬಹಳ ಪ್ರಮುಖ ಕಾರಣ. ಕಳೆದ ವರ್ಷ ಟೂರ್ನಿಯ ಕೊನೆಯ ಪಂದ್ಯಗಳಲ್ಲಿ ಋತುರಾಜ್ ಆಡಿದ್ದ ಆಟಕ್ಕೆ ಈ ವರ್ಷ ಆರಂಭಿಕನಾಗಿ ಆಡುವ ಅವಕಾಶ ತಂಡದಲ್ಲಿ ಸಿಕ್ಕಿತು. ಸಿಕ್ಕ ಅವಕಾಶಗಳನ್ನು ಬಹಳ ಚೆನ್ನಾಗಿ ಉಪಯೋಗಿಸಿಕೊಂಡು, ಡುಪ್ಲೆಸ್ಸಿಸ್ ಅನುಭವದೊಂದಿಗೆ ಹೆಚ್ಚಿನ ಪಂದ್ಯಗಳಲ್ಲಿ ಉತ್ತಮ ಆರಂಭಿಕ ಜೊತೆಯಾಟ ನೀಡುವ ಮೂಲಕ ಮಧ್ಯಮ ಕ್ರಮಾಂಕದ ಜವಾಬ್ದಾರಿ ಕಡಿಮೆ ಆಗುವಂತೆ ಆಡಿದ್ದು ಋತುರಾಜ್ ಗಾಯಕ್ವಾಡ್. ಕಳೆದ ವರ್ಷಕ್ಕೆ ಹೋಲಿಸಿದರೆ ಆರಂಭಿಕ ಆಟಗಾರರು ನೀಡಿದ ಅಮೋಘ ಜೊತೆಯಾಟಕ್ಕೆ ತಕ್ಕ ಗೆಲುವು ತಂಡಕ್ಕೆ ಲಭಿಸಿದೆ. ಟೂರ್ನಿಯುದ್ದಕ್ಕೂ ಉತ್ತಮ ಫಾರ್ಮ್ ಕಾಪಾಡಿಕೊಂಡಿರುವ ಋತುರಾಜ್ ಆರೆಂಜ್ ಕ್ಯಾಪ್ ಪಡೆಯುವ ಸಾಧ್ಯತೆ ಹೊಂದಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ಬೌನ್ಸರ್ ಪುಲ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದ್ದು, ನಿಧಾನಗತಿಯ ಆರಂಭ ಪಡೆದು ನಂತರ ಹೆಚ್ಚು ಆಕ್ರಮಣಕಾರಿ ಆಟ ಆಡುತ್ತಾರೆ. 

ಋತುರಾಜ್ ಗಾಯಕ್ವಾಡ್ 

ಮೊದಲ ಹಂತದ ಐಪಿಎಲ್ ಅಲ್ಲಿ ಚೆನ್ನೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೊಬ್ಬ ಆಟಗಾರ ಮೊಯಿನ್ ಅಲಿ. ಚೆನ್ನೈ ತಂಡದಲ್ಲಿ ಕೆಳ ಕ್ರಮಾಂಕದಲ್ಲಿ ಆಡುವ ಹೆಚ್ಚಿನ ಆಟಗಾರರು ಉತ್ತಮ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಕಾರಣದಿಂದ ಅಲಿಗೆ ತನಗಿಷ್ಟ ಬಂದಂತೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಅವಕಾಶ ದೊರೆಯಿತು. ಬಹಳ ದೊಡ್ಡ ಇನ್ನಿಂಗ್ಸ್ ಆಡದೆ ಇದ್ದರು ಸಹ ವೇಗವಾಗಿ ರನ್ ಕಲೆಹಾಕುವ ಮೂಲಕ ಬೌಲರ್ಗಳ ಮೇಲೆ ಒತ್ತಡ ಹೇರುವಲ್ಲಿ ಅಲಿ ಯಶಸ್ವಿಯಾದರು. ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ಗಳು ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲವಾದರು ಸಹ, ಪ್ರತಿ ಓವರ್ ಅಲ್ಲಿ ಎಂಟರಿಂದ ಒಂಬತ್ತು ರನ್ ಕಲೆಹಾಕುವ ಗುರಿಯೊಂದಿಗೆ ಆಡುತ್ತಿದ್ದಾರೆ. ಜಡೇಜಾ ಕೂಡ ಧೋನಿಯ ಕಳಪೆ ಫಾರ್ಮ್ ಸರಿಹೊಂದಿಸಲು ಅಗತ್ಯ ಸಂದರ್ಭಗಳಲ್ಲಿ ಫಿನಿಶಿಂಗ್ ಚೆನ್ನಾಗಿ ಮಾಡುತ್ತಿದ್ದಾರೆ. ಫಾಫ್ ಡುಪ್ಲೆಸ್ಸಿಸ್ ಬ್ಯಾಟಿಂಗ್ ಮಾತ್ರವಲ್ಲದೆ ಕ್ಷೇತ್ರರಕ್ಷಣೆಯಲ್ಲೂ ಬಹಳಷ್ಟು ಕಷ್ಟದ ಕ್ಯಾಚ್ ಹಿಡಿದು ಪಂದ್ಯದ ಗತಿಯನ್ನು ಬದಲಿಸಿದ್ದಾರೆ. 

ಫಾಫ್ ಡುಪ್ಲೆಸ್ಸಿಸ್ 

ದೀಪಕ್ ಚಹರ್ ಕೂಡ ಮೊದಲ ಹಂತದಲ್ಲಿ ಉತ್ತಮ ಸ್ವಿಂಗ್ ಬೌಲಿಂಗ್ ಮೂಲಕ ಪವರ್ ಪ್ಲೇ ಅಲ್ಲಿ ಸಾಕಷ್ಟು ವಿಕೆಟ್ ಪಡೆದಿದ್ದರು. ಆದರೆ ಯುಎಇ ಅಲ್ಲಿ ಪವರ್ ಪ್ಲೇ ಅಲ್ಲಿ ಮೊದಲಿನಷ್ಟು ವಿಕೆಟ್ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಶಾರ್ದುಲ್ ಠಾಕೂರ್ ಅವರ ಕತೆ ಇದಕ್ಕೆ ಉಲ್ಟಾ ಆಗಿದೆ, ಯುಎಇ ಪಂದ್ಯಗಳಲ್ಲಿ ಸಾಕಷ್ಟು ವಿಕೆಟ್ ಪಡೆದಿದ್ದಾರೆ. ಬ್ರಾವೊ ಕೂಡ ತಮ್ಮ ಟಿ-ಟ್ವೆಂಟಿ ಪಂದ್ಯಗಳ ಅಗಾಧ ಅನುಭವವನ್ನು ಉಪಯೋಗಿಸಿಕೊಂಡು ಒಂದೆರಡು ಪಂದ್ಯಗಳಲ್ಲಿ ಪಂದ್ಯದ ಗತಿಯನ್ನೇ ಸಂಪೂರ್ಣವಾಗಿ ಬದಲಿಸಿದ್ದಾರೆ. ಜಡೇಜಾ ಕೂಡ ಎಂದಿನಂತೆ ಪ್ರಮುಖ ಆಟಗಾರರ ವಿಕೆಟ್ ಪಡೆಯುತ್ತಿದ್ದಾರೆ. ಜೋಶ್ ಹೇಝಲ್ವುಡ್ ಕೂಡ ಕೆಲವು ಪಂದ್ಯಗಳಲ್ಲಿ ದುಬಾರಿಯಾಗಿದ್ದರು ಸಹ, ತಮ್ಮ ಟೆಸ್ಟ್ ಬೌಲಿಂಗ್ ಅನುಭವದ ಆಧಾರದ ಮೇಲೆ ಗುಡ್ಲೆಂತ್ ಬೌಲಿಂಗ್ ಮಾಡಿ ವಿಕೆಟ್ ಪಡೆಯುತ್ತಿದ್ದಾರೆ. ಇದರೊಂದಿಗೆ ಅಗತ್ಯ ಸಂದರ್ಭಗಳಲ್ಲಿ ಬೌಲಿಂಗ್ ಮಾಡುವ ಮೊಯಿನ್ ಅಲಿ ಕೂಡ ತಂಡದ ಸಮತೋಲನವನ್ನು ಹೆಚ್ಚಿಸಿದ್ದಾರೆ. 


ಸುರೇಶ್ ರೈನಾ ಹಾಗು ಧೋನಿ ಉತ್ತಮ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ರಾಯುಡು ಹಾಗು ಜಡೇಜಾ ಮೇಲೆ ಸ್ವಲ್ಪ ಒತ್ತಡ ಸೃಷ್ಟಿಯಾಗಿದೆ. ರೈನಾ ಬದಲಿಗೆ ಆಡಿದ್ದ ಉತ್ತಪ್ಪ ತಮ್ಮ ಹಳೆಯ ಕ್ರಿಕೆಟ್ ದಿನಗಳು ನೆನಪಿಗೆ ತರಿಸುವಂತೆ ಆಡಿದ ಆಟ ಚೆನ್ನೈ ತಂಡ ಮೊದಲ ಕ್ವಾಲಿಫೈರ್ ಪಂದ್ಯ ಗೆದ್ದು ಫೈನಲ್ ಪ್ರವೇಶ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿತು. ಟೂರ್ನಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾಗಿದ್ದ ಧೋನಿ, ಜಡೇಜಾ ಬದಲು ಬ್ಯಾಟಿಂಗ್ ಮಾಡಲು ಬಂದು ಪಂದ್ಯದ ಅಂತಿಮ ಹಂತದಲ್ಲಿ ಬೇಕಾಗಿದ್ದ ಅಬ್ಬರದ ಚುಟುಕು ಇನ್ನಿಂಗ್ಸ್ ಆಡಿ ಪಂದ್ಯ ಗೆಲ್ಲಿಸಿದ್ದು ವಿಶ್ವದೆಲ್ಲೆಡೆ ಧೋನಿ ಅಭಿಮಾನಿಗಳನ್ನು ಖುಷಿಪಡಿಸಿದೆ. 

ಫೈನಲ್ ಪ್ರವೇಶಿಸಿದ ಸಂದರ್ಭ 

ಫೈನಲ್ ಪಂದ್ಯ ಆಡುವ ಮುನ್ನ ಸಾಕಷ್ಟು ವಿಶ್ರಾಂತಿ ದೊರೆಯುತ್ತಿರುವುದು ಕೂಡ ತಂಡಕ್ಕೆ ಬಹಳ ಒಳ್ಳೆಯ ವಿಷಯವಾಗಿದೆ. ಬಹಳಷ್ಟು ಹಿರಿಯ ಆಟಗಾರರಿಂದ ತುಂಬಿರುವ ತಂಡಕ್ಕೆ ಪಂದ್ಯಗಳ ನಡುವೆ ಹೆಚ್ಚಿನ ಸಮಯ ಸಿಕ್ಕಿದಾಗ ಹೆಚ್ಚು ಪರಿಣಾಮಕಾರಿಯಾಗಿ ಆಡಬಲ್ಲರು. ಏಳೆಂಟರ ಕೆಳ ಕ್ರಮಾಂಕದವರೆಗೂ ಬ್ಯಾಟಿಂಗ್ ಮಾಡಬಲ್ಲ ಆಟಗಾರರು ತಂಡದಲ್ಲಿ ಇರುವಾಗ ಉತ್ತಮ ಆರಂಭ ಒದಗಿಸಿದರೆ ಅರ್ಧ ಪಂದ್ಯ ಗೆದ್ದಂತೆ. ಯುಎಇ ಪಂದ್ಯಗಳಲ್ಲಿ  ಆರಂಭಿಕ ಓವರ್ಗಳಲ್ಲಿ ವಿಕೆಟ್ ಪಡೆಯುವ ಕೆಲಸ ದೀಪಕ್ ಚಹರ್ ಮಾಡಿದರೆ ಪಂದ್ಯ ಗೆಲ್ಲುವುದು ಸುಲಭವಾಗುತ್ತದೆ. ಚೆನ್ನೈ ತಂಡದ ಬೌಲಿಂಗ್ ಅಲ್ಲಿ ಹೆಚ್ಚು ಬದಲಾವಣೆ ಕಂಡುಬರುತ್ತಿಲ್ಲ, ಪ್ರತಿ ಪಂದ್ಯದಲ್ಲಿ ಅದೇ ಜವಾಬ್ದಾರಿಯನ್ನು ನಿಭಾಯಿಸಿದರೆ ಬೌಲರ್ಗಳಿಗೆ ಹೆಚ್ಚು ಸಹಾಯಕವಾಗುತ್ತದೆ ಎಂಬ ಉದ್ದೇಶ ಇರಬಹುದು. ಆದರೆ, ಇದು ಚೆನ್ನೈ ವಿರುದ್ಧ ಆಡುವ ತಂಡಗಳಿಗೂ ಸಹಾಯಕವಾಗುತ್ತಿದೆ. ಯಾವ ಬೌಲರ್ ನಿರ್ದಿಷ್ಟ ಓವರ್ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ಮೊದಲೇ ಅರ್ಥ ಮಾಡಿಕೊಳ್ಳುವ ಮೂಲಕ ಅದಕ್ಕೆ ಸರಿಯಾಗಿ ಬ್ಯಾಟಿಂಗ್ ಮಾಡಲು ಬರುತ್ತಿದ್ದಾರೆ. 


ಕಳೆದ ವರ್ಷ ಟೂರ್ನಿಯಿಂದ ಹೊರಬಿದ್ದಾಗ ಧೋನಿ ಹೇಳಿದಂತೆ ಈ ವರ್ಷ ಉತ್ತಮ ಆಟ ಪ್ರದರ್ಶಿಸುವ ಮೂಲಕ ಫೈನಲ್ಗೆ ಲಗ್ಗೆ ಇಟ್ಟಿರುವುದು ಚೆನ್ನೈ ತಂಡದ ಅಭಿಮಾನಿಗಳಿಗೆ ಸಾಕಷ್ಟು ಸಂತಸ ತಂದಿದೆ. ಸೋಲು ಗೆಲುವು ಏನೇ ಆಗಲಿ ಆಡಿರುವ ೧೨ ಟೂರ್ನಿಗಳಲ್ಲಿ ೯ ಬಾರಿ ಫೈನಲ್ ಪ್ರವೇಶ ಮಾಡಿರುವ ಹಾಗು ಈಗಾಗಲೇ ಮೂರು ಬಾರಿ ಟ್ರೋಫಿ ಗೆದ್ದಿರುವ ಸಾಧನೆ ಮಾಡಿರುವ ತಂಡವನ್ನು ಮುನ್ನಡೆಸಿದ ಧೋನಿಯ ಸಾಧನೆ ಸರಿಗಟ್ಟಲು ಬಹಳ ವರ್ಷಗಳೇ ಬೇಕಾಗಬಹುದು. ಧೋನಿಯ ಕೊನೆಯ ಐಪಿಎಲ್ ಇದಾಗಿದ್ದರೆ, ಟ್ರೋಫಿ ಗೆದ್ದರೆ ಇನ್ನಷ್ಟು ಖುಷಿಯಾಗುತ್ತದೆ. ಋತುರಾಜ್ ಗಾಯಕ್ವಾಡ್, ದೀಪಕ್ ಚಹರ್, ಶಾರ್ದುಲ್ ಠಾಕೂರ್ ಮುಂದಿನ ವರ್ಷಗಳಲ್ಲಿ ಭಾರತ ತಂಡದ ಪರವಾಗಿಯೂ ಆಡಿ ಸಾಕಷ್ಟು ಸಾಧನೆ ಮಾಡಲಿ. ಜಡೇಜಾ ಬ್ಯಾಟಿಂಗ್ ಅಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದು ಕೂಡ ಟಿ ಟ್ವೆಂಟಿ ವಿಶ್ವಕಪ್ ಪಂದ್ಯಗಳಲ್ಲಿ ನೆರವಿಗೆ ಬರುವ ಸಂಭನೀಯತೆ ಹೆಚ್ಚಿದೆ. 

ಕಾಮೆಂಟ್‌ಗಳು

- Follow us on

- Google Search