ಸಂಭಾಷಣೆ

ನಮ್ಮ ಮನಸ್ಸಿನಲ್ಲಿ ಎಲ್ಲದರ ಬಗ್ಗೆಯೂ ಸ್ವಲ್ಪ ಮಾಹಿತಿಯಿರುತ್ತದೆ. ಹಲವಾರು ವ್ಯಕ್ತಿ ಹಾಗು ವಿಷಯಗಳ ಕುರಿತಾಗಿ ನಮ್ಮದೇ ಅಭಿಪ್ರಾಯಗಳಿರುತ್ತವೆ. ಒಂದು ಮಟ್ಟಿಗೆ ಇವು ಸರಿಯಾಗಿರುತ್ತವೆ, ಹಲವಾರು ಬಾರಿ ಈ ಜ್ಞಾನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳು ತಪ್ಪಾಗಿರುತ್ತವೆ. ನಮ್ಮ ಕಲ್ಪನೆ, ಊಹೆ ಹಾಗು ಹಿಂದಿನ ಅನುಭವದ ಆಧಾರದ ಮೇಲೆ ನಡವಳಿಕೆಯಿರುತ್ತದೆ. ಹೀಗಾಗಿ, ಜಗತ್ತಿನ ವ್ಯಕ್ತಿ ಹಾಗು ಹಲವಾರು ವಿಷಯಗಳ ಬಗ್ಗೆ ಒಂದು ಮಾಡೆಲ್ ಅಥವಾ ಮಾದರಿ  ನಮ್ಮ ಮನಸ್ಸಿನಲ್ಲಿ ಇರುತ್ತದೆ. ತನಗೆ ತಿಳಿಯದೆ ಇರುವ ವಿಷಯಗಳು ಮನಸ್ಸನ್ನು ಭಯಗೊಳಿಸುತ್ತವೆ, ಇದರಿಂದಾಗಿ ನಮ್ಮ ಅರಿವಿಗೆ ಬಾರದೇ ಹೋದರು ಅಪರಿಚಿತ ಸ್ಥಿತಿಯಿಂದ ಪರಿಚಿತ ಸ್ಥಿತಿಗೆ ಬದಲಾವಣೆ ನಿರಂತರವಾಗಿ ನಡೆಯುತ್ತಿರುತ್ತದೆ. 

ಈ ಪ್ರಕ್ರಿಯೆಯೇ ಮಾನವನ ಕುತೂಹಲ ಕೆರಳಿಸುವುದು. ಹೀಗಾಗಿ ನಮಗೆ ಸರಿ ಅನ್ನಿಸಿದ್ದು ಬೇರೆಯವರಿಗೆ ತಪ್ಪೆನ್ನಿಸಬಹುದು. ನಮಗೆ ಇಷ್ಟವೇ ಆಗದವರು ಕೆಲವರಿಗೆ ಪಂಚಪ್ರಾಣ. ಸಂಪೂರ್ಣವಾಗಿ ನಂಬಿ ಮೋಸ ಹೋಗುವುದು. ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದವರು ಈಗ ಅಪರಿಚಿತರಾಗಿರುವುದು. ಇವೆಲ್ಲ ಪ್ರಕ್ರಿಯೆಯನ್ನು ಒಂದುಗೂಡಿಸುವ ಕೆಲಸ ಮಾಡುವುದು ಸಂಭಾಷಣೆ. ಮಾತುಕತೆ ಹಾಗು ನಮ್ಮ ಭಾವನೆಗಳ ಮುಕ್ತ ಅಭಿವ್ಯಕ್ತಿ ಜೀವನದ ಮೇಲೆ ಅಪಾರ ಪರಿಣಾಮ ಬೀರುತ್ತದೆ. 


ಕನ್ನಡದಲ್ಲಿ ಒಂದು ಗಾದೆಯಿದೆ, "ಮಾತು ಬಲ್ಲವನು ಬರಗಾಲದಲ್ಲೂ ಬದುಕಿದನಂತೆ ". ಮಾತು ಜೀವನದಲ್ಲಿ ಅಷ್ಟು ಮುಖ್ಯ. ಮಾತನಾಡದೆ ಇರಬೇಕಾದ ಸಂದರ್ಭದಲ್ಲಿ ಮೌನವಾಗಿರುವುದು ಎಷ್ಟು ಮುಖ್ಯವೋ ಮಾತನಾಡಲೇಬೇಕಾದ ಸಂದರ್ಭದಲ್ಲಿ ಸರಿಯಾಗಿ ಮಾತನಾಡುವುದು ಕೂಡ ಅಷ್ಟೇ ಅವಶ್ಯಕ. ನಮ್ಮ ಮಾತನ್ನು ಒಪ್ಪದವರ ಮೇಲೆ ಸಿಟ್ಟು ಬರುವುದು ಸಹಜ, ಆದರೆ ಕೋಪದ ಕೈಗೆ ಬುದ್ಧಿ ಕೊಟ್ಟು ಜಗಳಕ್ಕೆ ನಿಂತರೆ ಒಬ್ಬ ಒಳ್ಳೆಯ ಮನುಷ್ಯನನ್ನು ಜೀವನದಿಂದ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ. 

ನಮ್ಮ ಮನಸ್ಸಿನಲ್ಲಿ ಏನಿದೆ ಎಂಬ ನೋವನ್ನು ಇನ್ನೊಬ್ಬರಿಗೆ ಅರ್ಥವಾಗುವಂತೆ ವಿವರಿಸಬೇಕೇ ಹೊರತು ಜಗಳ ಆರಂಭಿಸಿದರೆ ನಮ್ಮ ಯಾವ ಮಾತನ್ನು ಸಹ ಇನ್ನೊಬ್ಬರು ಅರ್ಥ ಮಾಡಿಕೊಳ್ಳುವುದಿಲ್ಲ. ನಮಗೆ ಏನೋ ಬೇಜಾರಾಗಿ ನೋವುಂಟಾದಾಗ ಜಗಳ ಮಾಡಬೇಕೆನ್ನಿಸುತ್ತದೆ. ಈ ಬೇಜಾರು ಹಾಗು ಅದಕ್ಕೆ ಕಾರಣ ಹಾಗು ಅದರಿಂದ ನಮಗುಂಟಾದ ನೋವನ್ನು ಇನ್ನೊಬ್ಬರಿಗೆ ಅರ್ಥ ಮಾಡಿಸಬೇಕೇ ಹೊರತು ಜಗಳಕ್ಕೆ ಮುಂದಾಗಬಾರದು. ಕೋಪ ಬಂದಾಗ  ಸ್ವಲ್ಪ ವಿರಾಮ ತೆಗೆದುಕೊಂಡು, ಮನಸ್ಸು ಶಾಂತವಾದಾಗ ಮಾತಾಡುವುದು ಒಳ್ಳೆಯದು. 

ಉತ್ತಮ ಸಂಬಂಧಗಳು ಹಾಗು ಗೆಳೆತನ ನಿಂತಿರುವುದೇ  ಸಂಭಾಷಣೆಯ ಗುಣಮಟ್ಟದ ಮೇಲೆ. ಆಫೀಸಿನಲ್ಲಿ ಕೆಲಸಗಳ ಸುಗಮತೆ ನಿಂತಿರುವುದು ಸಹ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ. ನಮ್ಮನ್ನು ನಾವು ಹೆಚ್ಚು ಅರ್ಥ ಮಾಡಿಕೊಂಡು ಬೇರೆಯವರಿಗೆ ನಮ್ಮ ವಿಚಾರಗಳನ್ನು ತಿಳಿಸಿದಾಗ ಅವರು ಕೂಡ ತಮಗೆ ತಿಳಿದಿದ್ದನ್ನು ಹೇಳುತ್ತಾರೆ. ನಮ್ಮ ಪಾಡಿಗೆ ನೋವು ಕೋಪ, ದುಃಖ ಹಾಗು ಬೇಜಾರಿನಿಂದ ಬಳಲಿದರೆ ನಮ್ಮ ಮಾನಸಿಕ ಅರೋಗ್ಯ ಕೆಡುತ್ತದೆ. ಎಂತಹ ಕ್ಲಿಷ್ಟ ಸಂದರ್ಭವಾದರೂ ಸರಿ, ಬೇರೆಯವರ ಮಾತಿಗೆ ಕಿವಿಗೊಟ್ಟು ನಮ್ಮ ಅನಿಸಿಕೆಯನ್ನು ತಾಳ್ಮೆಯಿಂದ ಇತರರಿಗೆ ವಿವರಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳುವುದು ಇಂದಿನ ಜೀವನಕ್ಕೆ ಅತ್ಯಗತ್ಯ. 

ಕಾಮೆಂಟ್‌ಗಳು

- Follow us on

- Google Search