ಬೆಂಗಳೂರಿಗೆ ಪಯಣ

ಕಳೆದ ವಾರ ಭಾನುವಾರ ರಾತ್ರಿ ಹೊರಟು ಬೆಂಗಳೂರಿಗೆ ಹೋಗೋಣ ಎಂದು ನಿರ್ಧರಿಸಿದೆ. ಶುಕ್ರವಾರ ಬಸ್ಸಿಗಾಗಿ ಆನ್ಲೈನ್ ಅಲ್ಲಿ ಹುಡುಕಾಟ ಆರಂಭಿಸಿದೆ. ಮಾಮೂಲಿ ಹೋಗುತ್ತಿದ್ದ ಸುಗಮ ಟ್ರಾವೆಲ್ಸ್ ಬಸ್ಸು ಇರಲಿಲ್ಲ. ಅದನ್ನು ಬಿಟ್ಟರೆ ಸರ್ಕಾರಿ ಬಸ್ಸುಗಳೇ ಗತಿ. ವೆಬ್ಸೈಟ್ ಅಲ್ಲಿ ನೋಡಿದಾಗ ಐರಾವತ ಬಸ್ಸು ಬುಕಿಂಗ್ ಮಾಡಲು ಅವಕಾಶ ಇತ್ತು. ಹೆಚ್ಚಿನ ಸೀಟುಗಳು ಖಾಲಿಯೇ ಇದ್ದವು. ಒಂದು ಕಿಟಕಿ ಬದಿಯ ಆಸನವನ್ನು ಕಾಯ್ದಿರಿಸಿದೆ. ಭಾನುವಾರ ರಾತ್ರಿ ಹತ್ತೂವರೆಗೆ ಕಳಸದಿಂದ ಹೊರಟು ಬೆಳಿಗ್ಗೆ ಐದೂವರೆಗೆ ಬೆಂಗಳೂರು ತಲುಪುತ್ತದೆ ಎಂಬ ವಿಚಾರ ಮೊದಲೇ ನನಗೆ ತಿಳಿದಿತ್ತು. ಈ ವಿಷಯವನ್ನು ಮನೆಯವರಿಗೆ ಹೇಳಿದೆ. ಭಾನುವಾರ ರಾತ್ರಿ ಬೆಂಗಳೂರಿಗೆ ಹೋಗುವ ಬಸ್ಸಿಗೆ ಹೋಗುತ್ತೇನೆ ಎಂದು.


ಇವತ್ತು ಶನಿವಾರ, ಹೇಗೂ ನಾಳೆ ಸಂಜೆಯವರೆಗೆ ಸಮಯಾವಕಾಶ ಇದೆ. ನಾಳೆ ಬೆಳಿಗ್ಗೆ ಬೇಕಾದ ವಸ್ತುಗಳನ್ನು ಬ್ಯಾಗ್ಗೆ ತುಂಬಿಸಿದರಾಯಿತು ಎಂದುಕೊಂಡು ಹಾಗೆ ಕಾಲ ಕಳೆಯುತ್ತಿದ್ದೆ. ಶನಿವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಬುಕ್ ಮಾಡಿದ್ದ ಟಿಕೆಟ್ ಕ್ಯಾನ್ಸಲ್ ಆದ ಸಂದೇಶಗಳು ಮೊಬೈಲ್ ತಲುಪಿದವು. ಸ್ವಲ್ಪ ಚಿಂತೆಯಾಯಿತು. ಆದರೂ ಸೀಟ್ ಬುಕ್ ಮಾಡುವ ಸಂದರ್ಭದಲ್ಲಿ ಇನ್ನೂ ಎರಡು KSRTC ಬಸ್ಸುಗಳು ಇದ್ದಿದ್ದು ನನ್ನ ನೆನಪಿಗೆ ಬಂತು. ಕೂಡಲೇ ಮತ್ತೊಮ್ಮೆ ವೆಬ್ಸೈಟ್ಗೆ ಹೋಗಿ ಒಂಬತ್ತುವರೆಗೆ ಹೊರಡುವ ಬಸ್ಸಿನಲ್ಲಿ ಮತ್ತೊಂದು ಕಿಟಕಿ ಬದಿಯ ಆಸನವನ್ನು ಕಾಯ್ದಿರಿಸಿದೆ. ಇದಾದ ನಂತರ ಮನೆಯವರಿಗೆ ಶನಿವಾರ ಮಧ್ಯಾಹ್ನ ವಿಷಯ ತಿಳಿಸಿದೆ. ಹತ್ತೂವರೆಗೆ ಹೋಗುವ ಬಸ್ಸು ಕ್ಯಾನ್ಸಲ್ ಆಯಿತು, ಒಂಬತ್ತುವರೆಗೆ ಹೊರಡುವ ಕೆಂಪು ಬಸ್ಸಿಗೆ ಹೋಗ್ತೀನಿ ಎಂದು. ಶನಿವಾರ ಏನು ಪ್ಯಾಕ್ ಮಾಡದೇ ಹಾಗೆ ಮಲಗಿದೆ. ರಾತ್ರಿ ಮಲಗಿದಾಗ ನಾಳೆ ಇಷ್ಟು ಹೊತ್ತಿಗೆ  ಬಸ್ಸಲ್ಲಿ ಕೂತಿರಬೇಕಲ್ಲ ಎಂಬ ವಿಚಾರ ಹೊಳೆದು ಸ್ವಲ್ಪ ಬೇಜಾರಾಯಿತು. ನನಗೆ ಬಸ್ಸಿನಲ್ಲಿ ಪ್ರಯಾಣ ಮಾಡುವುದು ಇಶ್ಟವಾಗುವುದಿಲ್ಲ. ಹಾಗೆಯೆ ನಿದ್ದೆ ಆವರಿಸಿತು. 

ನಾನು ಮನೆಯಲ್ಲಿದ್ದಾಗ ಸಾಧಾರಣವಾಗಿ ಒಂಭತ್ತು ಗಂಟೆಗೆ ಏಳುವ ರೂಢಿ. ಭಾನುವಾರ ಕೂಡ ಆಗಿದ್ದರಿಂದಲೋ ಅಥವಾ ರಾತ್ರಿ ಬಸ್ಸಿನಲ್ಲಿ ಹೋಗಬೇಕಲ್ಲ ಎಂಬ ಚಿಂತೆಗೋ ಏನೋ ಏಳಲು ಮನಸ್ಸೇ ಬರಲಿಲ್ಲ. ಹಲವಾರು ದಿನಗಳಿಂದ ಬೇಸಿಗೆಯಂತಾಗಿದ್ದ ಮಲೆನಾಡಿನಲ್ಲಿ ಮಳೆಗಾಲದ ಮಳೆ ಮತ್ತೆ ಚುರುಕಾಗಲು ಆರಂಭವಾಗಿತ್ತು. ಚಳಿಯೂ ಜಾಸ್ತಿಯಾಗಿತ್ತು. ಹಾಗೆ ಮುಖದ ಮೇಲೆ ಹೊದಿಕೆ ಎಳೆದು ಮಲಗಲು ಪ್ರಯತ್ನಿಸುತ್ತಿದ್ದೆ. ಮೊಬೈಲ್ ಫೋನ್ ರಿಂಗ್ ಆಯಿತು. ಯಾವುದೊ ಗೊತ್ತಿಲ್ಲದ ನಂಬರ್ ಇಂದ ಕರೆ ಬರುತಿತ್ತು, ಎತ್ತಲು ಹೋಗಲಿಲ್ಲ. truecaller ಅಲ್ಲಿ ಚೆಕ್ ಮಾಡಿದೆ. ರಮೇಶ್ ಹೊರನಾಡು ಎಂಬ ಹೆಸರು ತೋರಿಸಿತು. 

ಮತ್ತೊಮ್ಮೆ ಬೇರೆ ನಂಬರ್ ಇಂದ ಕರೆ ಬಂತು. ಎತ್ತಿ ಹಲೊ ಎಂದೆ. ಸಾರ್ ಸೀಟ್ ರೆಸೆರ್ವಶನ್ ಆಗಿದೆ ನೀವು ಎಲ್ಲಿದ್ದೀರಾ ಎಂದು ಕೇಳಿದರು. ನಾನು ರಾತ್ರಿ ಬಸ್ ಬುಕ್ ಮಾಡಿರೋದು ಈಗ ಮನೇಲಿ ಇದೀನಿ ಅಂತ ಹೇಳಿದೆ. ಇಲ್ಲ ಸಾರ್ ನಿಮ್ಮ ವಿವರ ಇವಾಗ ನಮಗೆ ಕೊಟ್ಟಿರೋ ಲಿಸ್ಟ್ ಅಲ್ಲಿ ಇದೆ, ಬರ್ತೀರಾ ಈಗ ಅಂತ ಕೇಳಿದ್ರು. ಇಲ್ಲ ಈಗ ಬರೋಕೆ ಆಗಲ್ಲ ಅಂತ ಹೇಳಿದೆ. ಕಾಲ್ ಅವರೇ ಕಟ್ ಮಾಡಿದ್ರು. ಇಷ್ಟು ಹೊತ್ತಿಗೆ ನನಗೆ ನಿದ್ರೆ ಸಂಪೂರ್ಣ ಇಳಿದುಹೋಗಿ ನಾನು ಮಾಡಿದ್ದ ತಪ್ಪಿನ ಜ್ಞಾನೋದಯ ಆಗಲು ಆರಂಭವಾಯಿತು. ಡೌನ್ಲೋಡ್ ಮಾಡಿದ್ದ ಟಿಕೆಟ್ ಓಪನ್ ಮಾಡಿ ನೋಡಿದೆ. ಸಮಯ ೯:೩೦ ಅಂತಿತ್ತು. am, pm ಅಂತ ಏನು ಇರಲಿಲ್ಲ. ಅರೆ ಹೀಗೆ ಸಮಯ ಹಾಕಿದ್ರೆ ಯಾವನಿಗೆ ಗೊತ್ತಾಗುತ್ತೆ ಅಂತ ಅನ್ಕೊಂಡು ವೆಬ್ಸೈಟ್ ಚೆಕ್ ಮಾಡಿದೆ. ಅವಾಗ ನನಗೆ ಮನವರಿಕೆ ಆಯಿತು, ರೈಲ್ವೆ ಮಾದರಿಯ ಸಮಯವನ್ನು ಇವರು ಅಳವಡಿಸ್ಕೊಂಡಿದ್ದಾರೆ ಎಂದು. ಕ್ಯಾನ್ಸಲ್ ಆಗಿದ್ದ ಐರಾವತ ಟಿಕೆಟ್ ನೋಡಿದೆ, ಅದರಲ್ಲಿ ಸಮಯ ೨೨:೩೦ ಅಂತ ಇತ್ತು.


ನನಗೆ ಹಣ ಹಾಳಾಗಿದ್ದಕ್ಕಿಂತ ಬೆಳಿಗ್ಗಿನ ಬಸ್ಸಿಗೆ ನಾಳೆ ಹೋಗಬೇಕಲ್ಲ ಎಂಬ ಚಿಂತೆಯೇ ಜೋರಾಯಿತು. ಅದಲ್ಲದೆ ಮನೆಯವರಿಗೆ ಇದನ್ನೆಲ್ಲಾ ಹೇಳಬೇಕಲ್ಲ ಎಂಬ ಯೋಚನೆಯೂ ಆಯಿತು. ಮತ್ತೆ ವೆಬ್ಸೈಟ್ಗೆ ಹೋಗಿ ನಾಳೆಗೆ ಟಿಕೆಟ್ ಬುಕ್ ಮಾಡಿದೆ. ಸುರಿಯುತ್ತಿದ್ದ ಮಳೆ ಹಾಗೆಯೇ ಸ್ವಲ್ಪ ಕಡಿಮೆಯಾಗತೊಡಗಿತು. ಹಾಸಿಗೆಯಿಂದ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಸುಮ್ಮನೆ ಕೂತೆ. ಟಿಕೆಟ್ ಅಲ್ಲಿ ಹಾಕಿದ್ದ ಸಮಯ ಬೆಳಿಗ್ಗೆಯೋ ರಾತ್ರಿಯೋ ಎಂಬ ಸಣ್ಣ ಅನುಮಾನ ನನ್ನ ಮನಸ್ಸಿನಲ್ಲಿ ಮುಂಚೆಯೇ ಮೂಡಿತ್ತಾದರೂ ಅದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡುವ ಗೋಜಿಗೆ ಹೋಗಿರಲಿಲ್ಲ. ಇದರ ಪರಿಣಾಮ ೩೬೦ ರೂಪಾಯಿಗಳ ದಂಡ. ಛೆ, ಎಂತ ಮೋಸ ಆಗಿ ಹೋಯ್ತಲ್ಲ ಎಂಬ ಯೋಚನೆಯೊಂದಿಗೆ ನನ್ನ ಮೂರ್ಖತನಕ್ಕೆ ನಗುವೂ ಬಂತು.  

ನಮ್ಮ ಮನೆಯಿಂದ ಬಸ್ಸು ಹತ್ತುವ ಪಟ್ಟಣಕ್ಕೆ ಸುಮಾರು ಹದಿನೈದು ಕಿಲೋಮೀಟರ್ ದೂರವಿದೆ. ನಮ್ಮ ಊರಿಗೆ ಯಾವುದೇ ಬಸ್ಸುಗಳು ಬರುವುದಿಲ್ಲ. ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ ರಿಪೇರಿ ಮಾಡದೆ ಹಲವಾರು ದಶಕಗಳೇ ಕಳೆದಿವೆ. ಹೀಗಾಗಿ ಬಾಡಿಗೆ ಆಟೊಗಳನ್ನೇ ಜನರು ಅವಲಂಬಿಸಿದ್ದಾರೆ. ಗಡಗಡ ಶಬ್ದ ಮಾಡುತ್ತ ಮಲೆನಾಡಿನ ದುರ್ಗಮ ರಸ್ತೆಗಳ ದಾಟಿ ಊರಿಗೆ ಬರುವ ಆಟೋ ಚಾಲಕರು ತಮ್ಮ ಸಂಘದ ಮೂಲಕ ದರವನ್ನು ನಿರ್ಧರಿಸುತ್ತಾರೆ. ನಮ್ಮ ಮನೆಯಿಂದ ಪಟ್ಟಣಕ್ಕೆ ಹೋಗಲು ೩೦೦ ರೂಪಾಯಿ ತೆಗೆದುಕೊಳ್ಳುತ್ತಾರೆ. ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಆಟೋ ಬರಲು ಹೇಳಿ, ಬೇಕಾದ ವಸ್ತುಗಳನ್ನು ಪ್ಯಾಕ್ ಮಾಡಿ ಭಾನುವಾರ ಮುಗಿದುಹೋಯಿತು. ಮಲೆನಾಡಿನ ಬಸ್ಸಿಲ್ಲದ ಊರಿನಿಂದ ಸದಾ ಗಿಜಿಗುಡುವ ಬೆಂಗಳೂರಿಗೆ ಹೋಗುವುದು ಒಂದು ರೀತಿಯ ಅದ್ಭುತ ಪ್ರಯಾಣವೇ ಸರಿ. ಬೆಳಿಗ್ಗೆ ಎಂಟು ಗಂಟೆಗೆ ಮನೆಯಿಂದ ಹೊರಟರೆ ರಾತ್ರಿ ಎಂಟು ಗಂಟೆಗೆ ನನ್ನ ಬಾಡಿಗೆ ಮನೆ ತಲುಪುವ ದೀರ್ಘ ಪ್ರಯಾಣವನ್ನು ನೆನೆದು ಸ್ವಲ್ಪ ಆತಂಕ ಉಂಟಾಯಿತು.  

ಸೋಮವಾರ ಬೆಳಿಗ್ಗೆ ಏಳು ಗಂಟೆಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ತಿಂದು ಹೊರಡಲು ತಯಾರಾದೆ. ಏಳು ಮುಕ್ಕಾಲಿಗೆ ಆಟೋ ಬಂದು ಮನೆಮುಂದೆ ನಿಂತಿತು. ಮಳೆ ಜೋರಾಗಿ ಸುರಿಯಲು ಆರಂಭವಾಯಿತು. ಛತ್ರಿ ಬಿಡಿಸದೆ ಹಾಗೇಯೇ ತರಾತುರಿಯಲ್ಲಿ ಆಟೋ ಹತ್ತಿದೆ. ಆಟೋ ನಿಧಾನವಾಗಿ ಪೇಟೆಯತ್ತ ಹೋಗಲು ಆರಂಭಿಸಿತು. ಆಟೋ ಚಾಲಕ ನನಗೆ ಪರಿಚಯವಿರಲಿಲ್ಲ. ಮಾತಾಡುವಷ್ಟು ವ್ಯವಧಾನ ಅವರಿಗೂ ಇರಲಿಲ್ಲ. ಹೊಂಡ ಗುಂಡಿಗಳನ್ನು ದಾಟುತ್ತ ಬಿರುಸಾದ ಮಳೆಯೊಂದಿಗೆ ಪೇಟೆ ತಲುಪಿ ಆಯಿತು. ಸಮಯ ಎಂಟು ಕಾಲಾಗಿತ್ತು. ಆಟೋದಿಂದ ಇಳಿದು ಬಸ್ ನಿಲ್ಲಿಸುವ ಜಾಗದ ಪಕ್ಕದಲ್ಲಿದ್ದ ತರಕಾರಿ ಅಂಗಡಿ ಹತ್ತಿರ ನಿಂತು ಹೋಗಿ ಮಳೆಯಿಂದ ರಕ್ಷಣೆ ಪಡೆದೆ. 

ಬೆಳಿಗ್ಗೆ ಎಂಟುಕಾಲಾಗಿತ್ತು ಸಮಯ. ಮಳೆ ಆಟೋ ಇಳಿಯುವಾಗ ಕಡಿಮೆಯಿತ್ತು. ಒಮ್ಮೆಲೇ ಜೋರಾಗಿ ಸುರಿಯಲಾರಂಭಿಸಿತು. ನನ್ನೊಂದಿಗೆ ಇನ್ನು ಸ್ವಲ್ಪ ಜನ ಕಾಯುತ್ತಾ ನಿಂತಿದ್ದರು. ಮಳೆ ಸ್ವಲ್ಪ ಕಡಿಮೆಯಾಯಿತು. ಎಂಟೂವರೆಗೆ ಬೆಂಗಳೂರಿಗೆ ಹೋಗುವ ಕೆಂಪು ಬಸ್ಸು ಬಂದು ನಿಂತಿತು. ನನ್ನ ಜೊತೆ ನಿಂತಿದ್ದವರಲ್ಲಿ ಹಲವಾರು ಜನ ಆ ಬಸ್ಸಿಗೆ ಹತ್ತಿದರು. ನಿನ್ನೆ ಬಸ್ ಮಿಸ್ ಆಗಿಲ್ಲದೇ ಹೋಗಿದ್ದರೆ ಕಂಡಕ್ಟರ್ ಬಳಿ ಹೋಗಿ ನಾನು ಇದೆ ಬಸ್ಸಾ ಎಂದು ಕೇಳುತ್ತಿರುಲಿಲ್ಲ. ಕೇಳಿದಾಗ ಅವರು ಎಷ್ಟು ಹೊತ್ತಿಗೆ ಬಸ್ ಇರೋದು ಅಂತ ಕೇಳಿದ್ರು. ನಾನು ಬಾಯಿತಪ್ಪಿ ಎಂಟು ಇಪ್ಪತ್ತೆರಡು ಎಂದೆ. ಬಸ್ಸಿನ ಬಾಗಿಲಲ್ಲಿ ನಿಂತಿದ್ದ ಕಂಡಕ್ಟರ್  ಅನುಮಾನಾಸ್ಪದವಾಗಿ ನನ್ನತ್ತ ನೋಡಿದ. ಆಮೇಲೆ ಮತ್ತೊಮ್ಮೆ ಒಂಭತ್ತು ಇಪ್ಪತ್ತೆರಡು ಎಂದೆ. ಅವರು ಬರುತ್ತೆ ಇರಿ ಅಂತ ಹೇಳಿ ಬಸ್ಸಿನ ಬಾಗಿಲು ಹಾಕಿ ಹೊರಟರು. ನಾನು ವಾಪಸ್ಸು ಬಂದು ಅಂಗಡಿಯ ಪಕ್ಕದಲ್ಲಿ ನಿಂತೆ. 

ಅದೇನು ಬಸ್ಸಿನ ನಿಲ್ದಾಣವಲ್ಲ. ಹೊರನಾಡಿನಿಂದ ನೇರವಾಗಿ ಬಂದು ಒಂದೆಡೆ ನಿಲ್ಲಿಸುತ್ತಾರೆ ಅಷ್ಟೇ. ಇದನ್ನೆಲ್ಲಾ ಗಮನಿಸುತ್ತಿದ್ದ ಅಂಗಡಿಯ ಮಾಲೀಕ ಬಂದು ನೀವು ಯಾವ ಊರಿಗೆ ಹೋಗೋರು ಎಂದು ಕೇಳಿದರು. ಬೆಂಗಳೂರಿಗೆ ಹೋಗ್ಬೇಕಿತ್ತು, ರಿಸರ್ವೇಶನ್ ಮಾಡಿದೀನಿ ಎಂದೆ. ಒಂಭತ್ತು ಗಂಟೆ ಹತ್ರ ಆಗುತ್ತೆ ಆ ಬಸ್ಸು ಬರೋಕೆ ಇಲ್ಲೇ ನಿಂತಿರಿ ಎಂದು ಹೇಳಿ ತಮ್ಮ ಕೆಲಸಗಳಲ್ಲಿ ನಿರತರಾದರು. ತರಕಾರಿ ಅಂಗಡಿ ಬಾಗಿಲು ತೆಗೆದು ಒಂದೆರಡು ನಿಮಿಷಗಳ ನಂತರ ಒಂದು ಎತ್ತಿನಗುಡ್ಡ ಬಂದು ಅವರು ಕೊಟ್ಟಿದ್ದನ್ನು ತಿಂದು, ಅವರು ಎಬ್ಬಿದ ನಂತರ ವಾಪಸ್ಸು ಹೋಯಿತು. ಹಾಗೆಯೆ ಒಂದೊಂದಾಗಿ ಮೂರ್ನಾಲ್ಕು ದನಗಳು ಬಂದು ಹೋದವು. ಕೆಲವು ಬುಟ್ಟಿಯಲ್ಲಿ ಇಟ್ಟಿದ್ದ ತರಕಾರಿ, ಬಾಳೆಕಾಯಿ ತಿನ್ನಲು ಪ್ರಯತ್ನಿಸುತ್ತಿದ್ದವು. ಜನರು ಕೂಡ ಒಬ್ಬೊಬ್ಬರಾಗಿ ಬಂದು ನಿತ್ಯ ಉಪಯೋಗಕ್ಕೆ ಬೇಕಾದ ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಕೊರೊನ ಲಸಿಕೆಯ ಎರಡನೇ ಡೋಸು ಲಸಿಕೆ ಪಡೆದ ವಿಷಯವನ್ನು ತರಕಾರಿ ಅಂಗಡಿಯವರು ಎಲ್ಲರಿಗು ಹೇಳುತ್ತಿದ್ದರು. ನಾನು ಇದನ್ನೆಲ್ಲಾ ನೋಡುತ್ತಾ ನಿಂತಿದ್ದೆ. ನಿಂತ ಜಾಗದಿಂದ ಕಾಣುತ್ತಿದ್ದ ಗುಡ್ಡದಲ್ಲಿನ ಮಂಜು ನಿಧಾನವಾಗಿ ಆವಿಯಾಗುತ್ತ ಇರುವುದನ್ನು ನೋಡುತ್ತಿದ್ದೆ. ಅಷ್ಟರ ಹೊತ್ತಿಗೆ ಒಂದು ಮುದ್ದಾದ ಗಂಡುಕರು ಅಂಗಡಿ ಬಳಿಗೆ ಬಂತು. ಅದಕ್ಕೆ ಅಂಗಡಿಯವರು ಒಂದಷ್ಟು ಬೀನ್ಸ್ ತಿನ್ನಲು ಕೊಟ್ಟರು. ಅದರ ಕೊರಳಿಗೆ ಯಾರೋ ಗೆಜ್ಜೆಯಂತಹ ಸರವನ್ನು ಹಾಕಿದ್ದರು. ಅದರ ಫೋಟೋ ತೆಗೆಯಲು ಸರಿ ಮಾಡುವುದರೊಳಗೆ ಅದನ್ನು ಓಡಿಸಿದರು. 


ಇಷ್ಟು ಹೊತ್ತು ನಿಧಾನವಾಗಿದ್ದ ಮಳೆ ಮತ್ತೊಮ್ಮೆ ಜೋರಾಗಿ ಸುರಿಯಲು ಆರಂಭಿಸಿತು. ಬಸ್ಸು ಬರುವ ಸಮಯಕ್ಕೆ ಹೀಗೆ ಮಳೆ ಬರಬೇಕೆ ಎಂದು ಯೋಚನೆ ಮಾಡುತ್ತಿದ್ದೆ. ತಲೆಗೆ ಟೊಪ್ಪಿ ಹಾಗು ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ನನ್ನನ್ನು ಗುರುತು ಹಿಡಿಯುವುದು ಸ್ವಲ್ಪ ಕಷ್ಟವಿತ್ತು. ನನ್ನ ಶಾಲೆಯ ಶಿಕ್ಷಕಿಯಾಗಿದ್ದವರು ತಮ್ಮ ಮಗಳೊಂದಿಗೆ ನನ್ನ ಮುಂದೆಯೇ ನಡೆದು ಹೋಗಿದ್ದನ್ನು ಗಮನಿಸಿದೆ. ಮಳೆ ಬಂದಿದ್ದರಿಂದಲೋ ಏನೋ ಬಸ್ಸು ಬರುವುದು ಸ್ವಲ್ಪ ತಡವಾಯ್ತು. ಒಂಭತ್ತುವರೆಗೆ ಬಸ್ಸು ಬಂತು. ಯಾರ್ರೀ ರೆಸೆರ್ವಶನ್ ಮಾಡಿರೋದು ಅಂತ ಕೇಳಿದ್ರು. ನಾನೇ ನಾನೇ ಎಂದೆ. ಬಹಳಷ್ಟು ಜನ ರೆಸೆರ್ವಶನ್ ಮಾಡಿರಲಿಲ್ಲ ಅಷ್ಟೇ, ಬಸ್ಸಿನಲ್ಲಿ ಸಾಕಷ್ಟು ಜನರಿದ್ದರು. ನನ್ನ ಆಸನದಲ್ಲಿ ಆಗಲೇ ಯಾರೋ ಕುಳಿತಿದ್ದರು. ಅವರ ಬಳಿ ಹೋಗಿ ರೆಸೆರ್ವಶನ್ ಆಗಿದೆ ಸೀಟ್ಗೆ ಎಂದಾಗ ಎದ್ದು ಬೇರೆ ಕಡೆ ಹೋಗಿ ಕೂತರು. ನಾನು ಆ ಸೀಟಿನಲ್ಲಿ ಕೂತೆ. ಬಸ್ ಡ್ರೈವರ್ ಕೂಡ ಹೊರಡುವ ಮುನ್ನ ರೆಸೆರ್ವಶನ್ ಸೀಟ್ ಬಂದ್ರ ಅಂತ ಕೇಳಿದ್ರು. ಬಸ್ಸು ಹೊರಟಿತು. ಸ್ವಲ್ಪ ದೂರದವರೆಗೆ ನಮ್ಮ ಮನೆಗೆ ಹೋಗುವ ದಾರಿಯಲ್ಲೇ ಬಸ್ಸು ಹೋಗುತ್ತದೆ. ಆದರೆ ಅಲ್ಲಿ ಕೆಲವು ಬಾರಿ ಬಸ್ಸು ನಿಲ್ಲಿಸದೆ ಹಾಗೆ ಹೋಗಿಬಿಡುತ್ತಾರೆ. 

ಬಸ್ಸುಗಳು ಸ್ವಲ್ಪ ಮಟ್ಟಿಗೆ ಸ್ವಚ್ಛತೆ ಕಾಪಾಡಿಕೊಂಡಿದ್ದರೂ ನನ್ನ ದುರಾದೃಷ್ಟಕ್ಕೆ ಅದು ಅಷ್ಟು ಸ್ವಚ್ಛವಾಗಿರಲಿಲ್ಲ. ಕಿಟಕಿ ಬಳಿ ಯಾರೋ ವಾಂತಿ ಮಾಡಿ ಗಲೀಜು ಮಾಡಿದ್ದರು. ನನಗೆ ಹೇಸಿಗೆಯಾಯಿತು. ಬಸ್ಸಿನ ಪ್ರಯಾಣ ಇಷ್ಟವಾಗದೇ ಇರಲು ಇದು ಕೂಡ ಕಾರಣ. ನನಗೂ ಸಹ ಮಲೆನಾಡಿನ ಅಂಕುಡೊಂಕಿನ ರಸ್ತೆಗಳಲ್ಲಿ ಪ್ರಯಾಣ ಮಾಡುವ ತಲೆಸುತ್ತಿ ವಾಂತಿಯಾಗುತ್ತದೆ. ವಾಹನದಲ್ಲಿ ಎದುರುಗಡೆ ಕಿಟಕಿ ಬದಿಯಲ್ಲಿ ಕೂರದೆ ಹೋದರೆ ಬಹಳ ಕಷ್ಟಪಡಬೇಕಾಗುತ್ತದೆ. ಮಳೆ ಸುರಿಯುತ್ತಲೇ ಇತ್ತು. ಕಿಟಕಿಯನ್ನು ತೆಗೆದಾಗ ನುಗ್ಗಿದ ತಂಪಾದ ಗಾಳಿ ಸ್ವಲ್ಪ ಮಟ್ಟಿಗೆ ಸುಖವನ್ನು ನೀಡಿತು. ಚಳಿ ಕೂಡ ಆಗಲು ಆರಂಭವಾಯಿತು. ಅದನ್ನೆಲ್ಲಾ ಲೆಕ್ಕಿಸದೆ ಕಿಟಕಿಯನ್ನು ತೆಗೆದೇ ಕುಳಿತುಕೊಂಡೆ. ಬಸ್ಸು ತಿರುವುಗಳಲ್ಲಿ ತಿರುಗಿದಂತೆ ಕಾಲಿನ ಬಳಿಯಿಟ್ಟಿದ್ದ ಬ್ಯಾಗ್ ಅತ್ತಿತ್ತ ಹೋಗುವುದನ್ನು ಕಾಲಿನಿಂದ ತಡೆಯುತ್ತಿದ್ದೆ. ಮಳೆಯೂ ಸುರಿಯುತ್ತಿತ್ತು, ರಸ್ತೆಯ ಅಗಲವೂ ಕಡಿಮೆ, ಹೀಗಾಗಿ ಬಸ್ಸು ಸ್ವಲ್ಪ ನಿಧಾನವಾಗಿಯೇ ಚಲಿಸುತ್ತಿತ್ತು. 


ನಾನು ನಮ್ಮೂರಿಂದ ಬೆಂಗಳೂರಿಗೆ ಹಲವಾರು ಬಾರಿ ಪ್ರಯಾಣ ಮಾಡಿದ್ದೇನಾದರೂ, ಅವೆಲ್ಲ ಹೆಚ್ಚಾಗಿ ರಾತ್ರಿ ಆರಂಭವಾಗುತ್ತವೆ. ಆದರೆ ಇದು ಒಂದು ರೀತಿಯ ದೀರ್ಘ ಪ್ರಯಾಣ. ಅಲ್ಲಲ್ಲಿ ನಿಲ್ಲಿಸಿ, ಜನರನ್ನು ಹತ್ತಿಸಿಕೊಂಡು ಸಾಗುವ ಬಸ್ಸಿನಲ್ಲಿ ಪ್ರಯಾಣ ಬೆಳೆಸುವುದು ಅನಿವಾರ್ಯವಾಗಿತ್ತು ಅಷ್ಟೇ. ಶಾಲೆಯಲ್ಲಿ ಓದುತ್ತಿದ್ದಾಗ ಹಲವಾರು ಬಾರಿ ಮೂಡಿಗೆರೆ  ಚಿಕ್ಕಮಗಳೂರಿಗೆ ನಮ್ಮೂರಿಂದ ಪ್ರಯಾಣ ಮಾಡಿದ್ದೆ. ರಸ್ತೆಯಲ್ಲಿ ಕಡಿದಾದ ತಿರುವುಗಳು, ಮಣ್ಣು ಕುಸಿದಿರುವುದು, ಚಿಕ್ಕ ಝರಿಗಳು, ಪ್ರಪಾತದಂತೆ ಕಾಣುವ ದೃಶ್ಯಗಳು ಸರ್ವೇ ಸಾಮಾನ್ಯ. 

ಜಾವಳಿಗೆ ಬಂದು ಬಸ್ಸನ್ನು ನಿಲ್ಲಿಸಿ ತಿಂಡಿ ತಿನ್ನಲು ಸ್ವಲ್ಪ ಸಮಯಾವಕಾಶ ನೀಡಿದರು. ಮನೆಯಲ್ಲೇ ತಿಂದು ಬಂದಿದ್ದರಿಂದ ಸುಮ್ಮನೆ ಹಾಗೆ ಕೂತಿದ್ದೆ. ಬಸ್ಸು ಅಲ್ಲಿಂದ ಹೊರಟು ನಿಲ್ದಾಣದ ಬಳಿ ಜನರು ಹತ್ತಲು ನಿಲ್ಲಿಸಿದರು. ಆ ಸಮಯದಲ್ಲಿ ಬಸ್ಸಲ್ಲಿ ಕೂತಿದ್ದ ಯಾವನೋ ಒಬ್ಬ ಪ್ಲಾಸ್ಟಿಕ್ ಕವರ್ಗೆ ವಾಂತಿ ಮಾಡಿ ನಿಂತಿದ್ದ ಜನರ ಮುಂದೆಯೇ ಅದನ್ನು ರಸ್ತೆಗೆ ಎಸೆದ. ಅಲ್ಲಿದ್ದ ಒಂದಿಬ್ಬರು ಗಂಡಸರು ಏಯ್ ಎಂದು ಕೈತೋರಿಸಿ ಕೂಗಿದರು. ಬಸ್ಸು ಅಷ್ಟರಲ್ಲಿ ಮತ್ತೆ ಹೊರಟಿತ್ತು. ಇಲ್ಲಿಯವರೆಗೆ ನನ್ನ ಮನಸ್ಸಿಗೆ ಬರದಿದ್ದ ವಾಂತಿಯ ಯೋಚನೆ ಮತ್ತೆ ಶುರುವಾಯಿತು, ಒಂದೈದು ನಿಮಿಷ ಎನ್ನುವುದರೊಳಗೆ ಒಮ್ಮೆ ನನಗು ವಾಂತಿ ಆಯಿತು. ಬಸ್ಸಿನ ಕಿಟಕಿ ಚಿಕ್ಕದಾದರೂ ತಲೆ ಹೊರಗೆ ಹಾಕುವಷ್ಟು ಜಾಗವಿತ್ತು. ಇದರಿಂದಾಗಿ ಬಚಾವ್ ಆದೆ. ಇಲ್ಲಿಯವರೆಗೆ ಮಾಸ್ಕ್ ಹಾಕಿಯೇ ಕೂತಿದ್ದ ನಾನು ಮಾಸ್ಕ್ ತೆಗೆದು ತಣ್ಣನೆಯ ಗಾಳಿಯನ್ನು ಆಸ್ವಾದಿಸಿದೆ. ದೊಡ್ಡ ಸಮಸ್ಯೆಯೊಂದು ಪರಿಹಾರವಾದ ನಿರಾಳತೆ ನನ್ನ ಮನಸ್ಸಿನಲ್ಲಿ ಮೂಡಿತು. 

ಮತ್ತೆ ಮನಸ್ಸು ಇತ್ತೀಚಿನ ವಿಷಯಗಳಾದ KSRTC ಹೆಸರನ್ನು ಕೇರಳ ಸರ್ಕಾರ ಪಡೆದುಕೊಂಡಿದ್ದು ನೆನಪಾಯಿತು. ಅದು ಸುಳ್ಳು ಎಂದು ಹೇಳುವ ಸುದ್ಧಿ ಓದಿದ್ದು ಸಹ ನೆನಪಾಯಿತು. ಯಾವುದು ಸುಳ್ಳು ಯಾವುದು ನಿಜ ಎಂಬುವುದೇ ಅರ್ಥವಾಗದಷ್ಟು ಸುದ್ದಿಗಳು ನಮ್ಮ ಜೀವನವನ್ನು ಪ್ರತಿನಿತ್ಯ ಅಪ್ಪಳಿಸುತ್ತಿವೆ. ಮೂಡಿಗೆರೆ ಸಮೀಪಿಸುತ್ತಿದ್ದಂತೆ ಪೂರ್ಣಚಂದ್ರ ತೇಜಸ್ವಿಯವರ ನೆನಪಾಯಿತು. ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಅವರ ಮನೆಯಾದ 'ನಿರುತ್ತರ' ನೋಡಿಲ್ಲ, ನಮ್ಮ ಅಜ್ಜಿ ಮನೆಗೆ ಹೋಗುವ ದಾರಿಯಲ್ಲಿ ಸಿಗುವ ಕುಪ್ಪಳ್ಳಿಯಲ್ಲಿ ಇರುವ ಕುವೆಂಪು ಅವರ ಮನೆ ಸಹ ನೋಡಿಲ್ಲ ಎಂಬ ವಿಚಾರಗಳು ಮನಸ್ಸಿಗೆ ಬಂದವು. ಬಸ್ಸು ಹೋಗುತ್ತಲೇ ಇತ್ತು. ಸುತ್ತಲೂ ಮರ ಗಿಡಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚರಿಸುವ ಅನುಭವ ವಿಶೇಷವಾಗಿರುತ್ತದೆ. ಮೂಡಿಗೆರೆಯಲ್ಲಿ ಮೀನು ಮಾರಾಟ ಜೋರಾಗಿತ್ತು. 



ಪೇಟೆಯ ರಸ್ತೆಯ ಬದಿಗಳಲ್ಲಿ ಗಾಡಿಗಳನ್ನು ನಿಲ್ಲಿಸಿ, ಮಧ್ಯ ರಸ್ತೆಯಲ್ಲಿ ಓಡಾಡುವ ಜನರು ಮೂಡಿಗೆರೆಯಲ್ಲಿ ಸರ್ವೇ ಸಾಮಾನ್ಯ. ಅಲ್ಲಿಯವರೆಗೆ ಹೆಚ್ಚು ಹಾರ್ನ್ ಹೊಡೆಯದ ಚಾಲಕ ಪೇಟೆಯುದ್ದಕ್ಕೂ ಕರ್ಕಶ ಶಬ್ದ ಮಾಡುತ್ತ ಪೇಟೆ ದಾಟಿ ಹಾಸನ ರಸ್ತೆಗೆ ಇಳಿದಾಯಿತು. ನಮ್ಮೂರಲ್ಲಿ ಇದ್ದಂತೆ ಇಲ್ಲಿ ಮಳೆಯಿರಲಿಲ್ಲ, ಬಿಸಿಲಿತ್ತು. ಬಸ್ಸಿನಲ್ಲಿ ಜನರು ಹೆಚ್ಚಾದರು. ಇಲ್ಲಿಯತನಕ ನನ್ನ ಪಕ್ಕ  ಖಾಲಿಯಾಗಿದ್ದ ಸೀಟಿನಲ್ಲಿ ಒಬ್ಬ ಕಾಲೇಜು ಹುಡುಗ ಬಂದು ಕೂತ. ಹಾಸನಕ್ಕೆ ಟಿಕೆಟ್ ಮಾಡಿಸಿ, ಮೊಬೈಲ್ ತೆಗೆದು earphones ಹಾಕಿ ಸುಮ್ಮನೆ ಕೂತ. ನಾನು earphones ತೆಗೆದು ಹಾಡುಗಳನ್ನು ಕೇಳುತ್ತಾ ಕುಳಿತೆ. ಮೂಡಿಗೆರೆಯಿಂದ ಹಾಸನದವರೆಗೆ ಪ್ರಯಾಣ ಅತ್ಯಂತ ಸುಖಕರವಾಗಿತ್ತು. ಹಾಸನಕ್ಕೆ ಬಂದು ತಲುಪುವಾಗ ಸ್ವಲ್ಪ ಹಸಿವಾಗುತಿತ್ತು. ಆದರೆ, ಬಸ್ಸಿನಲ್ಲಿ ಸಂಚರಿಸುವಾಗ ನಾನು ಊಟ ಮಾಡುವುದಿಲ್ಲ. ಹಾಗೆಯೆ ಕೂತಿದ್ದೆ. ಬಸ್ಸಿನ ಚಾಲಕನನ್ನು ಗಮನಿಸಿದೆ. ಬೆಳಿಗ್ಗೆ ಅವರ ಮುಖದಲ್ಲಿದ್ದ ಉತ್ಸಾಹ ಹಾಗೆಯೇ ಇತ್ತು. ಕಣ್ಣಿನಲ್ಲಿ ಒಂದು ರೀತಿಯ ವಿಶೇಷ ಕಾಂತಿಯಿತ್ತು. ಅವರ ಮುಖವನ್ನು ನೋಡಿದಾಗ ನಾನು ಕಾಲೇಜಿನಲ್ಲಿದ್ದಾಗ ಯೋಗಾಭ್ಯಾಸ ಮಾಡಿಸುತ್ತಿದ್ದ ಶಿಕ್ಷಕರು ನೆನಪಾದರು, ಅವರ ಕಣ್ಣು ಹಾಗು ಮುಖದಲ್ಲಿ ಇದೇ ರೀತಿಯ ನಿರಾಳತೆಯಿತ್ತು. 

ಹಾಸನದಿಂದ ಬೆಂಗಳೂರಿಗೆ ಹೋಗುವ ಹೈವೇ ಸೇರಿತು ಬಸ್ಸು. ಸಾಕಷ್ಟು ನದಿಗಳು ಸೇರಿ ಸಮುದ್ರವಾಗುವಂತೆ ಬೆಂಗಳೂರು ಬೆಳೆದಿದೆ. ಬೆಂಗಳೂರು ಅದೆಷ್ಟೋ ಜನರಿಗೆ ಉದ್ಯೋಗ ಕೊಟ್ಟು ಸಾಕಿದೆ. ಗತಿಗೆಟ್ಟು ಬಂದು ಬೆಂಗಳೂರು ಸೇರಿ ಕಷ್ಟಪಟ್ಟು ದುಡಿದು ಜೀವನ ಕಟ್ಟಿಕೊಂಡವರು ಲಕ್ಷಾಂತರ ಜನರಿದ್ದಾರೆ. ನಿನ್ನೆ ಮೊನ್ನೆ ಏನೇ ಆಗಿರಲಿ, ಇವತ್ತು ದುಡಿಯಲು ತಯಾರಿದ್ದರೆ ಊಟಕ್ಕೆ ತೊಂದರೆಯಿಲ್ಲ ಎಂಬ ಕಾಲ ನಿಧಾನವಾಗಿ ಬೆಂಗಳೂರಿನಿಂದ ಮಾಯವಾಗುತ್ತಿದೆ. ಕಾರ್ಪೊರೇಟ್ ಸಂಸ್ಥೆಗಳು ಅಭಿವೃದ್ಧಿಯ ಮುಖವಾಡದಲ್ಲಿ ಬೆಂಗಳೂರನ್ನು ನುಂಗಿ ನೀರು ಕುಡಿಯುತ್ತಿವೆ. ಬಡವರಿಗಲ್ಲ ಬೆಂಗಳೂರು ಎಂಬಂತಾಗಿದೆ ಈಗಿನ ಸ್ಥಿತಿ. ಇದನ್ನೆಲ್ಲಾ ಯೋಚಿಸುತ್ತಿದ್ದ ನನಗೆ ಬೇರೆ ಸೀಟಿಗೆ ಹೋಗಿ ಕುಳಿತುಕೊಳ್ಳುವ ಬಯಕೆಯಾಯಿತು. ಆದರೆ, ನಾನು ರೆಸರ್ವಶನ್ ಮಾಡಿದ್ದ ಸೀಟಿನಿಂದ ಒಬ್ಬನನ್ನು ಏಳಿಸಿ ಬೇರೆಡೆ ಕುರಿಸಿದ್ದು ನನಗೆ ನೆನಪಾಗಿ ಸುಮ್ಮನಾದೆ. ಹಾಸನದ ಹೊಲಗಳಲ್ಲಿ ಸೊಂಪಾಗಿ ಬೆಳೆದಿದ್ದ ಜೋಳವನ್ನು ನೋಡಲು ಖುಷಿಯಾಗುತ್ತಿತ್ತು. ಸಾಕಷ್ಟು ಕಡೆ ಚೆಂಡು ಹೂವುಗಳನ್ನು ಸಹ ಹೊಲದ ತುಂಬಾ ಬೆಳೆದಿದ್ದರು. ದೂರದಲ್ಲಿ ಕಾಣುತಿದ್ದ ಬೆಟ್ಟಗಳ ಮೇಲೆ ಗಾಳಿಯಂತ್ರಗಳು ತಿರುಗುತ್ತಾ ವಿದ್ಯುತ್ ಉತ್ಪಾದನೆಯಲ್ಲಿ ನಿರತವಾಗಿದ್ದವು. 


ಬೆಂಗಳೂರು ಸೇರುವುದು ಆರು ಗಂಟೆಯಾಗಬಹುದು ಎಂದು ತಿಳಿದಿತ್ತು. ಪ್ರಯಾಣ ತುಂಬಾ ಪ್ರಯಾಸದಾಯಕವಾಗಿ ಕಾಡಲಾರಂಭಿಸಿತು. ಇಲ್ಲೇ ಎಲ್ಲಾದರೂ ಇಳಿದು ಬಿಡೋಣ ಎನ್ನಿಸುವಷ್ಟು ಕಿರಿಕಿರಿ ಆಗಲಾರಂಭಿಸಿತು. ಕಣ್ಣಿನಲ್ಲಿ ಹಾಗು ಮುಖದ ಮೇಲೆ ಕೂತಿದ್ದ ಧೂಳು ರೇಜಿಗೆ ಹುಟ್ಟಿಸಿತು. ಕಣ್ಣನ್ನು ಕರವಸ್ತ್ರದಿಂದ ಸ್ವಚ್ಛಗೊಳಿಸಿದರೆ ಕಪ್ಪು ಬಣ್ಣವಾಯಿತು. ಬೆಂಗಳೂರಿಗೆ ಸಮೀಪಿಸುತ್ತಿದಂತೆ ನೆಲಮಂಗಲದ ಸ್ವಲ್ಪ ಹಿಂದೆ ಮತ್ತೊಮ್ಮೆ ಬಸ್ಸನ್ನು ನಿಲ್ಲಿಸಿ ಊಟ ತಿಂಡಿಗೆ ಅವಕಾಶ ಕೊಡಲಾಯಿತು. ಬೆಳಿಗ್ಗೆ ನನ್ನೊಂದಿಗೆ ಬಸ್ಸು ಹತ್ತಿದವರಲ್ಲಿ ಸಾಕಷ್ಟು ಜನ ಅವರ ಊರು ತಲುಪಿ ಇಳಿದು ಹೋಗಿದ್ದರು. ಕೆಲವರು ಬಸ್ಸಿನಲ್ಲೇ ಊಟ ತಂದು ತಿನ್ನಲು ಆರಂಭಿಸಿದರು. ಬಸ್ಸು ಹೊರಡಲು ಸಿದ್ಧವಾಯಿತು, ಇನ್ನು ಮೂರು ಸೀಟ್ ಬಂದಿಲ್ಲ ಎಂದು ಕಂಡಕ್ಟರ್ ಕೂಗಿದರು. ಡ್ರೈವರ್ ಐದಾರು ಬಾರಿ ಹಾರ್ನ್ ಹೊಡೆದರು. ಐದು ನಿಮಿಷವಾದರೂ ಮೂರು ಸೀಟು ಪತ್ತೆಯಿಲ್ಲ. ಇದೆ ಸಮಯದಲ್ಲಿ ಇನ್ನೂ ಇಬ್ಬರು ಡ್ರೈವರ್ಗೆ ಹೇಳಿ ಬಸ್ಸು ಇಳಿದು ಹೋದರು.  ಆ ಮೂವರು ಬಂದು ಐದು ನಿಮಿಷದ ನಂತರ ಇವರಿಬ್ಬರು ಬಂದರು. ಬಸ್ಸು ಹೊರಟಿತು, ಬಸ್ಸಿನ ಎಲ್ಲಾ ಸೀಟುಗಳು ತುಂಬುವಷ್ಟು ಜನರು ಬಸ್ಸನ್ನು ಹತ್ತಿದರು. 


ನೆಲಮಂಗಲ ತಲುಪಿ ಮುಂದೆ ಸಾಗುತ್ತಿದಂತೆ ಟ್ರಾಫಿಕ್ ಕಾಟ ಶುರುವಾಯಿತು. ಸ್ವಲ್ಪ ಮಳೆಯೂ ಬರುತ್ತಿತ್ತು. ಹಾಗೆಯೆ ಟ್ರಾಫಿಕ್ ಅಲ್ಲಿ ತೆವಳುತ್ತಾ ಬಸ್ಸು ಮೆಜೆಸ್ಟಿಕ್ ಸೇರಿತು. ಬಸ್ಸು ಇಳಿಯುತ್ತಿದಂತೆ  ಆಟೋ ಬೇಕಾ ಆಟೋ, ಎಲ್ಲಿಗೆ ಹೋಗ್ಬೇಕು, ಆಟೋ ಆಟೋ, ಸಾರ್ ಸಾರ್ ಹೀಗೆ ಆಟೋ  ಚಾಲಕರು ಸ್ವಾಗತ ಕೋರಿದರು. ಅವರೆಲ್ಲರನ್ನು ತಪ್ಪಿಸಿಕೊಂಡು ಮೆಟ್ರೋ ನಿಲ್ದಾಣದ ಹೊರಗೆ ಸ್ವಲ್ಪ ಹೊತ್ತು ಸುಮ್ಮನೆ ನಿಂತು ಸುಧಾರಿಸಿಕೊಂಡೆ. ಸಮಯ ಸಂಜೆ ಆರೂವರೆಯಾಗಿತ್ತು. ಇಲೆಕ್ಟ್ರಾನಿಕ್ ಸಿಟಿ ತಲುಪಬೇಕಾಗಿತ್ತು. ಮತ್ತೊಮ್ಮೆ ಬಸ್ಸು ಹತ್ತುವಷ್ಟು ತಾಳ್ಮೆ ಹಾಗು ಸಮಯ ನನಗೆ ಇರಲಿಲ್ಲ. uber ಬುಕ್ ಮಾಡಿದೆ. ಅಲ್ಲೇ ಕಾಯುತ್ತಿದ್ದ ಡ್ರೈವರ್ ಬಂದು ಏಳುವರೆ ಅಷ್ಟೊತ್ತಿಗೆ ನನ್ನ ಬಾಡಿಗೆ ಮನೆ ತಲುಪಿಸಿದರು. ಹಸಿವು, ಸುಸ್ತು, ನಿದ್ದೆ ನನ್ನನ್ನು ಪೀಡಿಸುತ್ತಿದ್ದವು. ಸ್ವಲ್ಪ ಊಟ ಮಾಡಿ ಮಲಗಿದಾಗಲೇ ಗೊತ್ತಿತ್ತು ನಾಳೆ ಮೈಕೈ ನೋವು, ಸೊಂಟನೋವಿನಿಂದ ನರಳುವುದು ಖಚಿತ ಎಂದು.  

ಕಾಮೆಂಟ್‌ಗಳು

- Follow us on

- Google Search