ಹತಾಶೆಯ ಹದ್ದುಬಸ್ತಿನಲ್ಲಿ ಮಾನಸಿಕ ಶಾಂತಿ

ನಮ್ಮ ಮನಸ್ಸನ್ನು ಹೆಚ್ಚು ಬದಲಾಯಿಸುವುದು ನೋವುಗಳೇ ಹೊರತು ಖುಷಿಯ ಸಂದರ್ಭಗಳಲ್ಲ. ಮನಸ್ಸಿಗೆ ಆದ ಖುಷಿ ಸ್ವಲ್ಪ ಸಮಯದ ನಂತರ ಅದರ ಹೊಳಪು ಕಳೆದುಕೊಳ್ಳುತ್ತದೆ ಆದರೆ ಮನಸ್ಸಿಗೆ ಆದ ನೋವು ಆಗಾಗ ನೆನಪಿಗೆ ಬಂದು ಕಾರ್ಮೋಡ ಆಕಾಶವನ್ನು ಆವರಿಸುವಂತೆ ಮನಸ್ಸಿಗೆ ಕತ್ತಲೆಯನ್ನು ಆವರಿಸುತ್ತದೆ. ನಮ್ಮ ಮನಸ್ಸಿನಲ್ಲಿ ಅದೆಷ್ಟೇ ಬೇಜಾರು, ಹತಾಶೆ ಅಥವಾ ದುಃಖ ಇದ್ದರು ಸಹ ಅದನ್ನು ಅದುಮಿಟ್ಟು ತನ್ನವರ ಸಂತೋಷಕ್ಕಾಗಿ ಜೀವನ ಸಾಗಿಸುವುದು ಅದೆಷ್ಟೋ ಜನರು ರೂಢಿಸಿಕೊಂಡಿದ್ದಾರೆ. 

ಮುಗುಳ್ನಗೆ ಹಿಂದಿರುವ ದುಃಖ, ಹಾಸ್ಯದ ಹಿಂದಿರುವ ಕಷ್ಟ, ಕಾಂತಿಯುತ ಕಣ್ಣುಗಳ ಹಿಂದಿರುವ ಕತ್ತಲನ್ನು ಪರಿಗಣಿಸಲು ಸಮಯವಿಲ್ಲದಷ್ಟು ಒತ್ತಡದ ಹಾಗು ಹಣಸಂಪಾದನೆಯೇ ಧ್ಯೇಯವಾಗಿರುವ ಜೀವನಶೈಲಿ ನಮ್ಮದಾಗಿದೆ. ಬೇರೆಯವರ ಕಷ್ಟಗಳು ಹಾಗಿರಲಿ, ನಮ್ಮ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ಗ್ರಹಿಸಲು ಸಹ ಸಾಧ್ಯವಾಗದಷ್ಟು ಗೊಂದಲದಲ್ಲಿ ನಮ್ಮ ಮನಸ್ಸು ಮುಳುಗಿರುತ್ತದೆ.

ಬಹುಷಃ ಇದನ್ನೆಲ್ಲಾ ದಾಟಿ ಜೀವನ ಸಾಗಿಸುವ ದಾರಿಯೆಂದರೆ, ನಮಗೆ ಬಹಳ ಇಷ್ಟವಾಗುವ ಕೆಲಸವನ್ನು ಹುಡುಕಿ ಮಾಡುವುದು. ಬಸವಣ್ಣ ಹೇಳಿದಂತೆ "ಕಾಯಕವೇ ಕೈಲಾಸ". ಕೆಲಸದಲ್ಲಿ ಸಂಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಅನುಭವ ಹಾಗು ಸಾರ್ಥಕತೆ ಇದೆಯಲ್ಲ, ಅದು ಜೀವನದ ಅಮೋಘ ಕ್ಷಣಗಳಲ್ಲಿ ಒಂದಾಗಿದೆ. 

ಇದರ ಅರ್ಥ ಕತ್ತೆಯಂತೆ ಕೆಲಸ ಮಾಡಿ, ಶಕ್ತಿಯೆಲ್ಲ ಕಳೆದುಕೊಂಡು ಉದ್ಯಮಿಗಳ ಗುಲಾಮರಾಗುವುದಲ್ಲ. ಕೆಲಸ ಮಾಡಬೇಕಾದ ಸಮಯದಲ್ಲಿ ಕೆಲಸ, ವಿಶ್ರಾಂತಿ ಪಡೆಯಬೇಕಾದ ಸಮಯದಲ್ಲಿ ವಿಶ್ರಾಂತಿ ಹೀಗೆ ಒಂದು ಸಮತೋಲನ ಕಾಯ್ದುಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚಿನ ಕೆಲಸ ಮಾಡುವುದು ನೀಯತ್ತು ಪ್ರಾಮಾಣಿಕತೆ ಅಂತೆಲ್ಲ ಪುಂಗಿ ಊದುವ ತಪ್ಪು ಕಲ್ಪನೆ ನಮ್ಮ ಸಮಾಜದಲ್ಲಿದೆ. ಇದು ಬಂಡವಾಳಶಾಹಿಗಳ ಲೋಕ, ಇಲ್ಲಿ ಕೆಲಸಗಾರರ ಕಷ್ಟಗಳಿಗೆ ಧ್ವನಿಯಾಗುವವರು ಇಲ್ಲ, ಕಿವಿಗೊಡುವವರು ಸಹ ಇಲ್ಲ. 

ಸಾಧನೆ ಮಾಡಿದಾಗ ಎಲ್ಲರಿಗು ಒಂದಲ್ಲ ಒಂದು ರೀತಿಯಲ್ಲಿ ಇವರು ನಮ್ಮವರು ಎಂಬ ಹೆಮ್ಮಯ ಭಾವ ಮೂಡುತ್ತದೆ. ಆದರೆ ಸಾಧನೆಯ ಹಾದಿಯಲ್ಲಿ ಕಷ್ಟಪಟ್ಟು ಸಾಗುತ್ತಿರುವಾಗ ಅವರಿಗೆ ಪ್ರೋತ್ಸಾಹ ತುಂಬುವ ಕೆಲಸವಾಗಲಿ, ಸೋಲು ಕಂಡಾಗ ಧೈರ್ಯ ತುಂಬುವ ಕೆಲಸವಾಗಲಿ ಮಾಡುವ ಒಳ್ಳೆಯ ಗುಣ ಸಾಕಷ್ಟು ಜನರಿಗೆ ಇಲ್ಲ. ಮಾನವೀಯ ಮೌಲ್ಯಗಳನ್ನೇ ಮರೆತಂತೆ ಕಾಣುತ್ತದೆ ಸಮಾಜ. 

ಇನ್ನೊಂದು ದೊಡ್ಡ ತೊಡಕೆಂದರೆ ಜನರನ್ನು ಒಳ್ಳೆಯವರು ಕೆಟ್ಟವರು ಎಂಬ ಎರಡೇ ಭಾಗಗಳಾಗಿ ವಿಂಗಡಿಸಿ ನೋಡುವ ಅಭ್ಯಾಸ. ಕೆಟ್ಟವರು ಕೂಡ ತಮ್ಮನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯವಿರುವ ಮನುಷ್ಯರು ಎಂಬ ಕನಿಷ್ಠ ಅರಿವು ಸಹ ನಮ್ಮಲ್ಲಿ ಇಲ್ಲವಾಗಿದೆ. ತಪ್ಪು ಮಾಡಿದವರಿಗೆ ಸರಿಯಾದ ಶಿಕ್ಷೆ ನೀಡುವುದು ಎಷ್ಟು ಅವಶ್ಯಕವೋ, ಆ ತಪ್ಪು ಮರುಕಳಿಸದಂತೆ ವ್ಯಕ್ತಿಯನ್ನು ಸರಿದಾರಿಗೆ ತರುವುದು ಕೂಡ ವ್ಯವಸ್ಥೆಯ ಜವಾಬ್ದಾರಿ ಎನ್ನುವುದು ನನ್ನ ಅನಿಸಿಕೆ. 

ಕಾಮೆಂಟ್‌ಗಳು

- Follow us on

- Google Search