ಸಿದ್ಲಿಂಗು ಬೆಳಿಗ್ಗೆ ಎದ್ದು ಶಾಲೆಗೆ ಹೊರಡಲು ತಯಾರಾಗುತ್ತಿದ್ದ. ನೀರುದೋಸೆ ಮೀನುಸಾರು ತಿಂದು, ಮತ್ತೊಮ್ಮೆ ಹಲ್ಲುಜ್ಜಿ, ಬಾಚಿದ್ದ ತಲೆಯನ್ನೇ ಮತ್ತೊಮ್ಮೆ ಬಾಚುತ್ತಿದ್ದಾಗ "ಬಸ್ಸಿಗೆ ದುಡ್ಡು ತಕೊಂಡು ಹೋಗು" ಅನ್ನುವ ಅಮ್ಮನ ಮಾತು ಕೇಳಿಸಿತು. ಅದೆಷ್ಟೇ ಬಾಚಿದರು ಸಹ ಹಿಂದಲೆಯ ಒಂದಷ್ಟು ಕೂದಲುಗಳು ಗುಪ್ಪೆಯಾಗಿ ಕಾಣುತ್ತಿದ್ದವು. ಅಮ್ಮನಿಗೆ ಹೇಳಿ ಶಾಲೆಗೆ ಹೊರಟ. ಈಗ ಪೇಟೆಗೆ ಹೋಗುವ ಜೀಪೊಂದನ್ನು ಹತ್ತಿ ಶಾಲೆಗೆ ಹೋಗುತ್ತಾನೆ. ಸ್ಪೆಷಲ್ ಕ್ಲಾಸು ಇದ್ದರೆ ಬರುವಾಗ ಸ್ವಲ್ಪ ದೂರ ಬಸ್ಸಿಗೆ ಬಂದು ನಂತರ ಕಾಲ್ನಡಿಗೆ ಸ್ಪೆಷಲ್ ಕ್ಲಾಸು ಇಲ್ಲವೆಂದರೆ ಸಂಜೆ ಕೂಡ ಇದೆ ಜೀಪು ಸಿಗುತ್ತದೆ. ಇವತ್ತು ಅವನ ಜೊತೆ ನಡೆಯಲು ಯಾರು ಸಹ ಇಲ್ಲ. ಏಕೆಂದರೆ, ಇಡೀ ಶಾಲೆಯಲ್ಲಿ ಅವನ ತರಗತಿಗೆ ಮಾತ್ರ ಸ್ಪೆಷಲ್ ಕ್ಲಾಸು. ಇವತ್ತು ಶನಿವಾರ ಬೇರೆ. ಟಿವಿಯಲ್ಲಿ ಸಂಜೆ ದರ್ಶನ್ ಅಭಿನಯದ ಸಿನಿಮಾ ಬೇರೆ ಇದೆ.
ಮಳೆಗಾಲ ಮುಗಿಯುತ್ತ ಬಂದಿದ್ದರು ಹಲವೇ ನಿಮಿಷಗಳಲ್ಲಿ ಆಕಾಶ ಕರಿ ಮೋಡಗಳಿಂದ ಕತ್ತಲಾಗಿ ಧೋ ಎಂದು ಮಳೆ ಸುರಿಯಲು ಆರಂಭಿಸುತ್ತದೆ. ಈ ವರ್ಷಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕಗಳು ಸಿದ್ಲಿಂಗುವಿನ ಬ್ಯಾಗ್ ಒಳಗಿವೆ. ಸರಿಯಾಗಿ ಹುಡುಕಿದರೆ ಆ ಬ್ಯಾಗಿನಲ್ಲಿ ಕಳೆದ ವರ್ಷದ ಒಂದೆರಡು ಪುಸ್ತಕಗಳು ಸಹ ಸಿಗಬಹುದು. ಏನಾದರು ಬರೆದಿಲ್ಲವೆಂದು ತರಗತಿಯಿಂದ ಹೊರಹಾಕಿದರೆ ಬರೆಯಬೇಕಾದ ಪುಸ್ತಕವೂ ಇಲ್ಲದೆ ಹೋದರೆ ಮತ್ತೆರಡು ಏಟು ಜಾಸ್ತಿ ಬೀಳುತ್ತವೆ ಎಂಬ ಕಹಿಸತ್ಯದ ಪರಿಣಾಮವೇ ಅಡಿಕೆ ಮೂಟೆಯಷ್ಟು ಭಾರವಿರುವ ಶಾಲೆಯ ಬ್ಯಾಗು. ಸಿದ್ಲಿಂಗು ಮನಸ್ಸು ಮಾತ್ರ ಸಂಜೆ ಯಾರನ್ನೋ ನೋಡಲು ಹಾತೊರೆಯುತ್ತಿದೆ. ಮೊದಲ ಪ್ರೀತಿಯ ಅನುಭವವೇ ಹಾಗೆ. ಪ್ರಿಯತಮೆಯನ್ನು ಕಂಡಾಗ ಜಗತ್ತಿನ ಸಮಸ್ಯೆಗಳನ್ನು ಮರೆತು ದೇವರು ಪ್ರತ್ಯಕ್ಷವಾದಂತೆ ತಲ್ಲೀನವಾಗಿ ಎಂದು ಅನುಭವಿಸದ ಶಾಂತಸ್ಥಿತಿ ಮನದಲ್ಲಿ ಆವರಿಸುವುದು ಜಗತ್ತಿನ ಅದ್ಭುತಗಳಲ್ಲಿ ಒಂದು.
ಬೇರೆ ಶಾಲೆಯ ಶಿಕ್ಷಕರಾದರು ಸಹ ಸತೀಶ್ ಅವರು ತಮ್ಮದೇ ಶಾಲೆಯ ಶಿಕ್ಷಕರಿಗಿಂತ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದರು. ಈ ಹೆಚ್ಚಿನ ಜವಾಬ್ದಾರಿಯ ಲಾಭ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದ್ದರೂ ಸಹ ಇದರಿಂದ ಸಿದ್ಲಿಂಗುಗೆ ಮಾತ್ರ ಮೈ ಪರಚಿಕೊಳ್ಳುವಂತೆ ಆಗುತಿತ್ತು. ಆ ಅಣು, ಪರಮಾಣು, ಅಕ್ಷ, ಧಾತು, ಕಾಂತಕ್ಷೇತ್ರ, ಪ್ರಭಾವಲಯ, ಅಯೋಡೈಡು ಇಂತವೆಲ್ಲ ಕೇಳಿ ಕೇಳಿ ಗಣಿತದಂತೆಯೇ ವಿಜ್ಞಾನವು ಹೇಸಿಗೆಯಂತಹ ವಿಷಯ ಎಂಬ ಸಿದ್ಲಿಂಗನ ಮನದಾಳದ ಅನುಮಾನವೊಂದು ನಿಜವಾಗಿತ್ತು. ಆದರೆ ಸಿದ್ಲಿಂಗು ಮನಸ್ಸಿನಲ್ಲಿ ಸತೀಶ್ ಅವರು ಪಾಠ ಮಾಡುವಾಗ ಅದೇನನ್ನೋ ಪಿಯುಸಿ ಪಠ್ಯಪುಸ್ತಕದಲ್ಲಿ ಓದಿದ್ದ 'ಬನಾನಾ ಬಾಂಡ್' ಎಂಬ ಪದ ಹೇಳಿದ್ದು ಸಿದ್ಲಿಂಗು ಕಿವಿಗೆ ಬಿದ್ದೊಡನೆ ಅವನ ಯೋಚನೆ ಬೇರೆಡೆಗೆ ಹೊರಳಿತು.
ಸಿದ್ಲಿಂಗು ಈ ತರಗತಿ ಮುಗಿದ ನಂತರ ಹೋಗುವ ಬಸ್ಸಿನಲ್ಲಿ ಇರುವ ಕಂಡಕ್ಟರ್ ಬಗ್ಗೆ ಆತನ ಯೋಚನೆ ಹೊರಳಿತು. ಸಿದ್ಲಿಂಗು ಪೇಟೆಯ ಬಸ್ಸಿನ ನಿಲ್ದಾಣದಲ್ಲಿ ಬಸ್ಸು ಹತ್ತಿ ತನ್ನ ಮನೆಯಿಂದ ಎಂಟು ಕಿಲೋಮೀಟರ್ ದೂರವಿರುವ ಬಾಳೇಕಾನ್ ಎಂಬಲ್ಲಿ ಬಸ್ಸಿನಿಂದ ಇಳಿಯುತ್ತಾನೆ. ಪ್ರತಿ ಶನಿವಾರ ಟಿಕೆಟ್ ಮಾಡಿಸುವಾಗಲು 'ಬಾಳೆಕಾನ್ ಒಂದು' ಎಂದಾಗಲೆಲ್ಲ 'ಒಂದು ಬಾಳೆಹಣ್ಣ?' ಅಂತ ಕುಹಾಸ್ಯ ಮಾಡುತ್ತಿದ್ದ ಕಂಡಕ್ಟರ್ಗೆ ಏನು ಪ್ರತ್ಯುತ್ತರ ಹೇಳಬೇಕೆಂದೆ ತಿಳಿಯುತ್ತಿರಲಿಲ್ಲ. ಅದರ ಬಗ್ಗೆ ಈ ಸ್ಪೆಷಲ್ ಕ್ಲಾಸಿನಲ್ಲಿ ಕೂತು ಚಿಂತಿಸುತ್ತಿದ್ದವನಿಗೆ ಒಂದು ತಕ್ಕ ಉತ್ತರ ಹೊಳೆಯಿತು. ಇವತ್ತು ಅವನು ಹಾಗೆ ಕೇಳಿದರೆ 'ನಿನ್ನ ಅಪ್ಪಂಗೆ ಇನ್ನೊಂದು' ಅಂತ ಹೇಳಬೇಕು ಅಂದುಕೊಂಡಿದ್ದೆ ತಡ ಆ ತರಗತಿಯ ಬೇಜಾರೆಲ್ಲ ಮಾಯವಾಗಿ ಯಾವಾಗ ಬಸ್ಸು ಹತ್ತುತ್ತೇನೆ ಎಂಬ ಆಲೋಚನೆ ಮೂಡಿತು.
ಮತ್ತೆ ಸಮಯ ನೋಡಿದರೆ ಇನ್ನೊಂದು ನಿಮಿಷವೂ ಕಳೆದಿರಲಿಲ್ಲ. ಅದೇನೋ ಎಲೆಕ್ಟ್ರಾನು ಪ್ರೋಟಾನು ನ್ಯೂಟ್ರಾನು ಅಂತೆಲ್ಲ ಏನೋ ಹೇಳುತ್ತಿದ್ದುದು ಅಸ್ಪಷ್ಟವಾಗಿ ಕಿವಿಗೆ ಬೀಳುತ್ತಿತ್ತು. ಹಾಗೆ ತರಗತಿಯಲ್ಲಿ ಕೂತಿದ್ದ ಹುಡುಗಿಯರ ಕಡೆಗೆ ಕಣ್ಣುಗಳು ಹಾದವು. ಆ ಹುಡುಗಿಯರನ್ನೆಲ್ಲ ನೋಡಿ ನೋಡಿ ಬೇಜಾರಾಗಿ ಹೋಗಿತ್ತು ಸಿದ್ಲಿಂಗುಗೆ. ತನ್ನ ಶಾಲೆ ಬಿಟ್ಟು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿದ ಹುಡುಗಿಯರ ಬಗ್ಗೆಯೂ ಒಮ್ಮೆ ಆಲೋಚಿಸಿದ. ಈ ಕನ್ನಡದಲ್ಲಿ ಪಾಠ ಹೇಳಿದ್ದೆ ನನಗೆ ತಲೆಗೆ ಹೋಗಲ್ಲ, ಅಂತದರಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಯಾಕೆ ಸೇರುತ್ತಾರೆ ಎಂಬ ಸಣ್ಣ ಪ್ರಶ್ನೆಯು ಮನಸ್ಸಿನಲ್ಲಿ ಮೂಡಿತು. ಈ ಹೊತ್ತಿಗಾಗಲೇ ಸತೀಶ್ ಮೇಷ್ಟ್ರ ವಕ್ರದೃಷ್ಟಿ ಸಿದ್ಲಿಂಗು ಮೇಲೆ ಬಿದ್ದಿರುವುದು ಅವನಿಗೆ ಅರಿವಾಯ್ತು.
ಬಹಳ ಆಸಕ್ತಿಯಿಂದ ಪಾಠ ಕೇಳುವವನಂತೆ ಸಿದ್ಲಿಂಗು ಬೋರ್ಡಿನತ್ತ ದೃಷ್ಟಿ ಹಾಯಿಸಿದ. ಆ ಸತೀಶ್ ಮೇಷ್ಟ್ರ ಪಾಠ ಮಾಡುವ ಶೈಲಿಯನ್ನು ಗಮನಿಸುತ್ತಿದಂತೆ ಸಿದ್ಲಿಂಗುಗೆ ಸ್ವಲ್ಪ ಇರುಸು ಮುರುಸು ಉಂಟಾಯಿತು. ಅವರ ಪಾಠದ ಶೈಲಿ ಪಾಠ ಮಾಡುವುದಕ್ಕಿಂತ ಹೆಚ್ಚಾಗಿ ನಾಟಕದಲ್ಲಿ ಅಭಿನಯ ಮಾಡುತ್ತಿರುವಂತೆ ಇರುತಿತ್ತು. ಆ ಕಣ್ಣುಗಳನ್ನು ದೊಡ್ಡದಾಗಿ ಬಿಟ್ಟು ನೋಡುವುದು, ಧ್ವನಿಯ ಅತಿಯಾದ ಏರಿಳಿತ, ಕುರಿಮಂದೆಗಳಂತೆ ಸುಮ್ಮನೆ ಕೂತು ಪಿಳಿಪಿಳಿ ಕಣ್ಣು ಮಿಟುಕಿಸುತ್ತ ಕೂತಿರುವ ಸ್ನೇಹಿತರನ್ನೆಲ್ಲ ಕಂಡು ಈ ಜಗತ್ತೇ ನಾಟಕರಂಗದಂತೆ ಅವನಿಗೆ ಅನ್ನಿಸಿತು. ಸಿದ್ಲಿಂಗು ಕೊನೆಯ ಬೆಂಚಿನಲ್ಲಿ ಕೂತು ಆಕಳಿಸಿ, ನಿಮಿಷಕ್ಕೆ ಮೂರ್ನಾಲ್ಕು ಬಾರಿ ಕೈಗಡಿಯಾರ ನೋಡಿ ಹಾಗೋ ಹೀಗೋ ಶನಿವಾರದ ಸ್ಪೆಷಲ್ ಕ್ಲಾಸು ಮುಗಿಯಿತು.
ತನ್ನ ಬಸ್ಸು ಬರುವುದು ಇನ್ನು ಮುಕ್ಕಾಲು ಗಂಟೆ ತಡವಾದರೂ ಶಾಲೆ ಬಿಟ್ಟ ತಕ್ಷಣ ಬಸ್ಸಿನ ನಿಲ್ದಾಣಕ್ಕೆ ಓಡಿ ಬಂದು ಹೋಗಿ ಬರುವವರನ್ನೆಲ್ಲ ನೋಡುತ್ತಾ ನಿಲ್ಲುವುದು ಸಿದ್ಲಿಂಗುವಿನ ಹವ್ಯಾಸ. ಚಿಕ್ಕಂದಿನಿಂದ ತನ್ನೊಂದಿಗೆ ಓದಿದವರು ಇಂಗ್ಲಿಷ್ ಮಾಧ್ಯಮ ಶಾಲೆ ಸೇರಿದ ನಂತರ ಅವನನ್ನು ನೋಡಿಯೂ ನೋಡದಂತೆ ಹೋಗುವವರನ್ನು ಕಂಡರೆ ಸಿದ್ಲಿಂಗುಗೆ ಮೈ ಉರಿಯುತ್ತದೆ. ನಮ್ಮ ಜನಕ್ಕೆ ಕಲಿಯುವುದಕ್ಕಿಂತ ಹೆಚ್ಚಿನ ಆಸಕ್ತಿ ತಿರ್ಪೆ ಶೋಕಿ ಮೇಲಿದೆ ಎಂಬ ಬೇಜಾರಿನ ಆಲೋಚನೆಯು ಮೂಡುತ್ತದೆ. ಆದರೂ, ಗುರುತು ಪರಿಚಯ ಇಲ್ಲದ ಜನರಿಂದ ಗಿಜಿಗಿಜಿ ಅನ್ನುವ ಪ್ರದೇಶದಲ್ಲಿ ಸಮಯ ಕಳೆಯುವ ಅನುಭವವೇ ವಿಶಿಷ್ಟವಾದುದು. ಆದರೂ ಸಿದ್ಲಿಂಗು ಕಣ್ಣುಗಳು ಯಾರನ್ನೋ ಹುಡುಕುತ್ತಿವೆ. ಊರಿನ ಮೂರು ಬಸ್ ನಿಲ್ದಾಣಗಳನ್ನು ಬಿಟ್ಟು ಅವನು ಪ್ರತಿ ವಾರ ಇದೇ ನಿಲ್ದಾಣಕ್ಕೆ ಬರುವುದಕ್ಕೂ ಒಂದು ಕಾರಣವಿದೆ.
ಆ ಕಾರಣ ಸಿದ್ಲಿಂಗುವಿನ ಪ್ರತಿದಿನದ ಕನಸ್ಸಿನ ಭಾಗವಾಗಿದ್ದ ಬೇರೆ ಶಾಲೆಯಲ್ಲಿ ಓದುತಿದ್ದ ಒಬ್ಬಳು ಹುಡುಗಿ. ಒಂದು ಕಾಲದಲ್ಲಿ ಉತ್ಸಾಹದ ಚಿಲುಮೆಯನ್ನೇ ಉಕ್ಕಿಸುತ್ತಿದ್ದ ಅವಳ ನೆನಪುಗಳು ಕಾಲಾಂತರದಲ್ಲಿ ಹತಾಶೆಯ ಶಿಖರವನ್ನೇ ಏರಿಸುತ್ತಿವೆ. ಈ ಸಿನಿಮಾಗಳಲ್ಲಿ ಹಾಗು ಕಥೆಗಳಲ್ಲಿ ಬರುವಂತೆ ಹೇಳದೇ ಬಚ್ಚಿಟ್ಟ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಅವಳಿಗಿಲ್ಲ ಎಂಬ ಕಹಿಸತ್ಯ ಅವನಿಗೆ ಅರಿವಾಗಿದೆ. ದಿನ ದಿನವೂ ಆಕೆ ಇವನಿಂದ ದೂರಾಗುತ್ತಿದ್ದರೆ, ಇವನ ಮನಸ್ಸು ಮಾತ್ರ ಎಂದೂ ನನಸಾಗದ ಕಲ್ಪನೆಗಳಿಂದ ಅವಳ ಪ್ರೀತಿಗೆ ಹಾತೊರೆಯುತ್ತಿದೆ. ಜಗತ್ತಲ್ಲಿ ನರಕ ಎಂಬುದು ಇದ್ದರೆ ಅದು ನಾವು ಅತಿಯಾಗಿ ಪ್ರೀತಿಸುವ ಜೀವದಿಂದ ದೂರವಾಗುವುದೇ ಇರಬಹುದು ಎಂಬ ಆಲೋಚನೆ ಆಗಾಗ ಸಿದ್ಲಿಂಗುವನ್ನು ಪೀಡಿಸುತ್ತಿರುತ್ತದೆ.
ಇಷ್ಟು ಹೊತ್ತು ಕಾದರು ಅವಳು ಕಾಣಿಸದೆ ಇರುವುದನ್ನು ಕಂಡು ಹತಾಶೆಯ ಸಾಗರದಲ್ಲಿ ಅವನ ಮನಸ್ಸು ಮುಳುಗುತ್ತಿದೆ. ತನ್ನ ಅಸಹಾಯಕತೆಯ ಅರ್ಥವಾಗಲಿ ಅಥವಾ ತನ್ನ ಆಸೆಗಳ ಉದ್ದೇಶವಾಗಲಿ ಅವನಿಗೆ ತಿಳಿದಿಲ್ಲ. ಬಸ್ಸು ಬರುವ ಹೊತ್ತಿಗೆ ಜನ ಸೇರಲು ಆರಂಭಿಸಿದರು. ಎಲ್ಲಿ ಜೋರಾಗಿ ಅಲ್ಲೇ ಅಳಲು ಆರಂಭಿಸುತ್ತೇನೋ ಎಂಬ ಭಯವು ಮನಸ್ಸಿನಲ್ಲಿ ಮೂಡುತ್ತಿದೆ. ಆಕಾಶದಲ್ಲಿ ಮೋಡ ಕವಿಯುತ್ತ ಕತ್ತಲು ಆವರಿಸುತ್ತಿದೆ. ತನ್ನೆಲ್ಲ ಗೆಳೆಯರು ಆಗಲೇ ಬೇರೆ ಬಸ್ಸಿಗೆ ಹೋಗಿದ್ದಾರೆ. ತಾನು ಮಾತ್ರ ಈ ಅರ್ಥವಿಲ್ಲದ ಪ್ರೀತಿಯ ಹೋರಾಟದಲ್ಲಿ ಏಕಾಂಗಿಯಾಗಿ ಕಾಯುತ್ತಿರುವ ಅನುಭವದ ನೋವು ಮನಸ್ಸನ್ನು ಸುಡುತ್ತಿದೆ. ಪ್ರೀತಿಸಿದ ಹುಡುಗಿಯ ಮನಸ್ಸನ್ನು ಗೆಲ್ಲಲಾಗದ ಈ ವಿದ್ಯೆಯಿಂದ ಏನನ್ನು ಸಂಪಾದಿಸಿ ಏನು ಪ್ರಯೋಜನವಿದೆ ಎಂಬ ಯೋಚನೆ ಸಂಪೂರ್ಣ ವ್ಯವಸ್ಥೆಯನ್ನೇ ಅರ್ಥಹೀನವಾಗಿಸುತ್ತದೆ. ಕಾಲವೇ ಅವನ ತಳಮಳಗೊಂಡಿರುವ ಮನಸ್ಸನ್ನು ಶಾಂತಗೊಳಿಸಬಹುದು. ಈ ಸ್ಪೆಷಲ್ ಕ್ಲಾಸಿನಂತೆ ಸ್ಪೆಷಲ್ ಪ್ರೀತಿಯೂ ಸಿಕ್ಕಿದ್ದರೆ ಪ್ರತಿಯೊಬ್ಬರ ಜಗತ್ತು ಅದೆಷ್ಟು ಸುಂದರವಾಗಿರುತ್ತದೆ.
ಕತೆ ಬಹಳ ಸೊಗಸಾಗಿ ಇದೆ.
ಪ್ರತ್ಯುತ್ತರಅಳಿಸಿಧನ್ಯವಾದಗಳು ಶ್ರೀಪತಿ ಅವರೆ. ನಿಮ್ಮ ಮೆಚ್ಚುಗೆಯ ಮಾತುಗಳು ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡುತ್ತವೆ.
ಅಳಿಸಿ