ಮನಸ್ಸೆಂಬ ಮಾಯಾಜಾಲ

ಜಗತ್ತಿನಲ್ಲಿ ಬಹಳ ಕಷ್ಟದ ಕೆಲಸ ಏನೆಂದರೆ ಇನ್ನೊಬ್ಬರೊಂದಿಗೆ ಸದಾಕಾಲ ಹೊಂದಾಣಿಕೆ ಮಾಡಿಕೊಂಡು ಜೀವನ ಸಾಗಿಸುವುದು. ಅದಕ್ಕಿಂತ ದೊಡ್ಡ ಕಷ್ಟದ ಕೆಲಸವೆಂದರೆ ನಮಗೆ ಸರಿಹೊಂದುವ ಗುಣವಿರುವ ಜನರ ಹುಡುಕಾಟ. ಮನುಷ್ಯನ ನಡವಳಿಕೆ ಬಹಳ ನಿಗೂಢ. ಒಂದು ಕಾಲಕ್ಕೆ ಪ್ರೀತಿ, ಮತ್ತೊಂದು ಸಂದರ್ಭದಲ್ಲಿ ದ್ವೇಷ, ಸಾಕಷ್ಟು ಬಾರಿ ಹಾಳಾಗಿ ಹೋಗಲಿ ಎಂಬ ನಿರಾಸೆ, ಕೆಲವೊಮ್ಮೆ ಬೇಕೇ ಬೇಕು ಎಂದು ಹಠ ಹಿಡಿಯುವ ಮನಸ್ಸನ್ನು ಒಮ್ಮೆ ಅವಲೋಕಿಸಿದರೆ ತನ್ನನ್ನು ಮೀರಿದ ಪ್ರಜ್ಞೆಯೊಂದು ಕೆಲಸ ಮಾಡುತ್ತಿರುವುದು ನಮ್ಮ ಗಮನಕ್ಕೆ ಬರುತ್ತದೆ. 

ಮಾನವನ ವಿಕಾಸ ಹಂತದಲ್ಲಿ ಈ ಮನಸ್ಸು, ಆಲೋಚನೆಗಳು ಹಾಗು ಭಾವನೆಗಳು ಹೇಗೆ ಅಭಿವೃದ್ಧಿ ಹೊಂದಿರಬಹುದು ಎಂಬುದನ್ನು ಊಹಿಸಲು ಕೂಡ ಸಾಧ್ಯವಿಲ್ಲ. ನಮ್ಮ ಮನಸ್ಸಿನ ಕುರಿತಾಗಿಯೇ ಯೋಚಿಸಿದರೆ ನಮಗೆ ಭಯವಾಗುತ್ತದೆ. ಮನುಷ್ಯನ ಪಂಚೇಂದ್ರಿಯಗಳು ಗ್ರಹಿಸಲಾರದ ಅದೆಷ್ಟೋ ಸಂಗತಿಗಳು ಮನಸ್ಸಿಗೆ ಹೇಗೋ ತಿಳಿದುಬಿಡುತ್ತವೆ. ಅದೆಷ್ಟೋ ಅನುಭವಗಳನ್ನು ಜೀರ್ಣಿಸಿಕೊಂಡು, ಹೊಸ ಅನುಭವಗಳನ್ನು ತನ್ನೆಡೆಗೆ ಸೆಳೆಯುವ ಮನಸ್ಸಿನ ಅಗಾಧ ಶಕ್ತಿಯ ಪರಿಚಯ ನಿಮಗಾದಾಗಲೇ ಅದರ ಮಹತ್ವ ತಿಳಿಯುವುದು. 

ಜಗತ್ತಿನ ಅದೆಷ್ಟೋ ಸಾಧನೆಗಳ ಮೂಲ ಮನಸ್ಸಿನಲ್ಲಿ ಮೂಡುವ ಆಲೋಚನೆಗಳು. ಎಂದೋ ನಮ್ಮ ಮನಸ್ಸಿನ ಆಳದಲ್ಲಿ ಬೀಜದಂತೆ ಬಿದ್ದ ಆಸೆಗಳು, ಕಾಲಾಂತರದಲ್ಲಿ ಮೊಳಕೆಯೊಡೆದು ನಮ್ಮ ಜೀವನದಲ್ಲಿ ಫಲ ಕೊಡುವುದನ್ನು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಗಮನಿಸುತ್ತೇವೆ. ಮನಸ್ಸು ಪ್ರೀತಿಸಿದ ಕೆಲಸವನ್ನು ಅದೆಷ್ಟೇ ಅಡೆತಡೆಗಳು ಬಂದರು ಸಹ ಸಾಧಿಸಿಯೇ ತೀರುತ್ತೇವೆ. ಹೀಗಾಗಿ ನಮ್ಮ ಮನಸ್ಸಿಗೆ ಅಂದರೆ ನಮಗೇನು ಇಷ್ಟ ಎಂಬುದರ ಸ್ಪಷ್ಟ ಕಲ್ಪನೆ ನಮಗೆ ಇದ್ದರೆ ಜೀವನದ ಸಾಕಷ್ಟು ನಿರ್ಧಾರಗಳಿಗೆ ಒಂದು ಅರ್ಥ ಹಾಗು ಉದ್ದೇಶ ಬರುತ್ತದೆ. 

ದೇಹಕ್ಕೆ ಹೇಗೆ ವಿಶ್ರಾಂತಿಯ ಅವಶ್ಯಕತೆ ಇದೆಯೋ ಹಾಗೆಯೆ ಮನಸ್ಸಿಗೂ ಕೂಡ ವಿಶ್ರಾಂತಿ ಬೇಕು. ಮನಸ್ಸಿಗೆ ಸ್ವಲ್ಪವೂ ವಿಶ್ರಾಂತಿ ನೀಡದೆ ಒಂದೇ ಸಮನೆ ಉಪಯೋಗಿಸುತ್ತಿದ್ದರೆ ಅದು ಒಂದು ಹಂತದ ನಂತರ ಬ್ರೇಕ್ ಫೇಲ್ ಆದ ಗಾಡಿಯಂತಾಗುತ್ತದೆ. ಅತಿಯಾಗಿ ಯಾವುದೇ ಯೋಚನೆಯಾಗಲಿ ಅಥವಾ ಚಿಂತೆಯಾಗಲಿ ದೀರ್ಘಕಾಲ ಮನಸ್ಸಿನಲ್ಲಿ ಉಳಿದುಕೊಂಡರೆ ಅದು ಹೊಸ ರೂಪ ಪಡೆಯುತ್ತಾ ಹೋಗುತ್ತದೆ. ಯಾವುದೇ ಆಲೋಚನೆಗಳ ಹಾಗು ಚಿಂತನೆಗಳ ಪರಿಣಾಮವನ್ನು ಊಹಿಸಲು ನಮಗೆ ಸಾಧ್ಯವೇ ಇಲ್ಲ. ಕೆಲವೊಂದು ಘಟನೆಗಳು ನಮ್ಮ ಮನಸ್ಸಿನ ಮೇಲೆ ಶಾಶ್ವತ ಪರಿಣಾಮ ಬೀರುತ್ತವೆ. 

ನಾನು ಆರನೇ ತರಗತಿಯಲ್ಲಿದ್ದಾಗ ನಡೆದ ಘಟನೆ ಇದು. ಹೀಗೆ ಊರಿಗೆ ಹೋಗುವ ಸಲುವಾಗಿ ಬಸ್ಸಿಗೆ ಕಾಯುತ್ತ ಅಮ್ಮನೊಂದಿಗೆ ನಿಂತಿದ್ದೆ. ನನಗೆ ಅಲ್ಲಿಯವರೆಗೆ ಮುಸ್ಲಿಂ ಸಮುದಾಯದ ಜನರ ಬಗ್ಗೆ ಅಷ್ಟು ತಿಳುವಳಿಕೆಯಿರಲಿಲ್ಲ, ಆದರೆ ಮನಸ್ಸಿನಲ್ಲಿ ಅವರು ಬೇರೆ ನಾವು ಬೇರೆ ಎನ್ನುವುದಷ್ಟೆ ಇತ್ತು. ಒಬ್ಬರು ಮುಸ್ಲಿಂ ಹೆಂಗಸು ತಮ್ಮ ಪುಟ್ಟ ಹೆಣ್ಣು ಮಗಳನ್ನು ಎತ್ತಿಕೊಂಡು ನಿಂತಿದ್ದರು. ನಾನು ನೋಡಿಯೂ ನೋಡದಂತೆ ಸುಮ್ಮನೆ ಪಕ್ಕ ನಿಂತಿದ್ದೆ.

ಸ್ವಲ್ಪ ಹೊತ್ತಿನ ನಂತರ ಮಗು ನನ್ನೆಡೆಗೆ ನೋಡುತ್ತಾ ಇದ್ದಿದ್ದು ಮಾತ್ರವಲ್ಲದೆ ನಾನು ಎತ್ತಿಕೊಳ್ಳುವಂತೆ ಅಮ್ಮನ ಕೈಯಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತಿತ್ತು. ಇದನ್ನು ಗಮನಿಸಿದ ನನಗೆ ಮೊದಲು ಹೆದರಿಕೆಯಾಯಿತು, ಈ ಹೆಂಗಸು ನನ್ನ ಕೈಗೆ ಮಗು ಕೊಟ್ಟು ಎಸ್ಕೇಪ್ ಆಗುವ ಯೋಚನೆಯಲ್ಲಿರುವಂತೆ ನನಗೆ ಅನ್ನಿಸಲಾರಂಭವಾಯಿತು. ಆಗ ಅವರೇ ಹೇಳಿದರು, ಅವರ ಮನೆಯಲ್ಲಿ ಯಾವಾಗಲು ಅಣ್ಣಂದರ ಜೊತೆ ಆಟವಾಡಿಕೊಂಡು ಇರುತ್ತಾಳೆ. ಅದಿಕ್ಕೆ ಹೀಗೆ ಮಾಡ್ತಿದಾಳೆ ಅಂತ. ನಮ್ಮಮ್ಮ ಹೇಳಿದ ನಂತರ ಆ ಪುಟ್ಟ ಮಗುವನ್ನು ಎತ್ತಿಕೊಂಡೆ. ತೊದಲು ನುಡಿಯಲ್ಲಿ ಏನೇನೋ ಹೇಳುತ್ತಾ ನಾನು ಎತ್ತಿಕೊಂಡಾಗ ಖುಷಿಯಿಂದ ಸಣ್ಣಗೆ ನಗುವೊಂದು ಮೂಡಿದ್ದನ್ನು ನೋಡಿದೆ. 

ಬಹುಷಃ ನನ್ನ ಜೀವನದಲ್ಲಿ ನಡೆದ ಈ ಸಣ್ಣ ಘಟನೆ ನನ್ನನ್ನು ಹೊಸ ಯೋಚನೆಗಳಿಗೆ ಅಹ್ವಾನ ನೀಡುತ್ತದೆ ಎಂಬುದರ ಅರಿವು ನನಗಿರಲಿಲ್ಲ. ಅವತ್ತೊಂದು ಸತ್ಯವಂತೂ ನನ್ನ ಪಾಲಿಗೆ ದರ್ಶನವಾಯ್ತು. ಮಕ್ಕಳ ಮನಸ್ಸಿನಲ್ಲಿ ಪ್ರೀತಿಯೊಂದೇ ತುಂಬಿರುತ್ತದೆ, ಬೆಳೆಯುತ್ತಿದ್ದಂತೆ ನಮ್ಮ ಕುಟುಂಬ, ಸಮಾಜ ಹಾಗು ಯೋಚನೆಗಳು ಬೇರೆಯವರು ನಮ್ಮವರು ಎಂಬ ಒಡಕನ್ನು ಸೃಷ್ಟಿಸುತ್ತವೆ. ಯಾವಾಗಲಾದರೂ ಈ ಘಟನೆ ನೆನಪಾದಾಗ ಆ ಮಗುವಿನಂತಹ ಒಳ್ಳೆಯ ಮನಸ್ಸು ನನ್ನದಾಗಲಿ ಎಂಬ ಆಸೆ ಮೂಡುತ್ತದೆ. ಮನುಷ್ಯರೆಂದ ಮೇಲೆ ಎಲ್ಲರೂ ಸಮಾನರು. ಶಾಂತಿ ಹಾಗು ಸಹಬಾಳ್ವೆಯನ್ನು ಪ್ರತಿಪಾದಿಸುವ ಎಲ್ಲ ಧರ್ಮಗಳ ಒಳ್ಳೆಯ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮನುಷ್ಯರಾಗಿ ಜೀವನ ಕಳೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ.

ಕಾಮೆಂಟ್‌ಗಳು

- Follow us on

- Google Search