ಟಿ-ಟ್ವೆಂಟಿ ಕ್ರಿಕೆಟ್ ವಿಶ್ವಕಪ್ - ೨೦೨೧

ಕೆಲವು ವಾರಗಳ ಹಿಂದೆ ಭಾರತ ತಂಡದ ವಿಶ್ವಕಪ್ ಆಟಗಾರರ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಯಜುವೇಂದ್ರ ಚಾಹಲ್ ಹಾಗು ಶಿಕರ್ ಧವನ್ ತಂಡದಿಂದ ಕೈಬಿಟ್ಟಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಉಳಿದಂತೆ ನಟರಾಜನ್, ಶುಭಮನ್ ಗಿಲ್, ಸಂಜು ಸ್ಯಾಮ್ಸನ್, ಮನೀಶ್ ಪಾಂಡೆ, ಮಾಯಾಂಕ್ ಅಗರ್ವಾಲ್, ಮಹಮ್ಮದ್ ಸಿರಾಜ್, ಪೃಥ್ವಿ ಷಾ ಅವರನ್ನು ಸಹ ವಿಶ್ವಕಪ್ ಟೂರ್ನಿಯಿಂದ ಕೈಬಿಡಲಾಗಿದೆ. ಒಂದೆಡೆ ಭಾರತ ತಂಡಕ್ಕೆ ಆಡಲು ಸಿದ್ಧವಿರುವ ಹಾಗು ಈಗಾಗಲೇ ಸಾಕಷ್ಟು ಸಾಧನೆ ಮಾಡಿರುವ ಪ್ರತಿಭಾವಂತ ಆಟಗಾರರಿಗೆ ಅವಕಾಶ ಸಿಕ್ಕಿದೆ, ಇನ್ನೊಂದೆಡೆ ಅವರಂತೆಯೇ ಪ್ರತಿಭಾವಂತರಾಗಿದ್ದರು ಸಹ ಸಧ್ಯದ ಸ್ಥಿತಿಯಲ್ಲಿ ಫಾರ್ಮ್ ಕಳೆದುಕೊಂಡಿರುವ ಉದ್ದೇಶಕ್ಕೆ ಅವಕಾಶ ವಂಚಿತರಾಗಿದ್ದಾರೆ. ಇವೆಲ್ಲ ಸುದ್ಧಿಗಳ ನಡುವೆ ಕೊಹ್ಲಿ ಟಿ ಟ್ವೆಂಟಿ ಪಂದ್ಯಗಳ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವುದು ಸಾಕಷ್ಟು ಸುದ್ಧಿಯಾಗಿದೆ. 

ಈ ವಾರದಲ್ಲಿ ಐಪಿಎಲ್ ಕೂಡ ಆರಂಭವಾಗಿರುವುದರಿಂದ ಪ್ರತಿಯೊಬ್ಬ ಆಟಗಾರನಿಗೂ ತನ್ನದೇ ಆದ ಜವಾಬ್ದಾರಿಗಳಿವೆ. ತಂಡಕ್ಕೆ ಆಯ್ಕೆಯಾಗಿರುವ ಆಟಗಾರರು ಸ್ವಲ್ಪ ನಿರಾಳರಾಗಿದ್ದರು ಸಹ ಅವರಿಂದ ಉತ್ತಮ ಆಟವನ್ನು ನಿರೀಕ್ಷೆ ಮಾಡಲಾಗುತ್ತಿದೆ. ಐಪಿಎಲ್ ಅಲ್ಲಿ ಕಳಪೆ ಪ್ರದರ್ಶನ ತೋರಿದರೆ ಅದು ಮತ್ತೊಂದು ಐಪಿಎಲ್ ಅಲ್ಲಿ ಉತ್ತಮ ಪ್ರದರ್ಶನ ನೀಡುವ ತನಕ ತಂಡದ ಆಯ್ಕೆಯ ಸಂದರ್ಭದಲ್ಲಿ ಅಡ್ಡಗಾಲು ಹಾಕುವ ಸಾಧ್ಯತೆಯಿರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಕುಲದೀಪ್ ಯಾದವ್ ಹಾಗು ಮನೀಶ್ ಪಾಂಡೆ. ಮತ್ತೊಂದು ಚಿಂತೆಯೆಂದರೆ  ಐಪಿಎಲ್ ವೇಳೆ ಆಟಗಾರರು ಇಂಜುರಿಗೆ ಒಳಗಾದರೆ ಭಾರತ ತಂಡದ ಸಮತೋಲನವೇ ಕಳೆದುಹೋಗುವ ಸಂಭವನೀಯತೆ ಇದೆ. ವೇಗದ ಬೌಲರ್ಗಳಾದ ಮಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಅಥವಾ ದೀಪಕ್ ಚಹರ್ ವಿಶ್ವಕಪ್ ಸರಣಿಗೆ ಅಲಭ್ಯರಾದರೆ ಭಾರತ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. 

ನನ್ನ ಅನಿಸಿಕೆಯ ಪ್ರಕಾರ ಭಾರತದ ಪ್ಲೇಯಿಂಗ್ ೧೧ ಹೀಗಿರುತ್ತದೆ 

೧. ರೋಹಿತ್ ಶರ್ಮ
೨. ರಾಹುಲ್  
೩. ಇಶಾನ್ ಕಿಶನ್ / ರಿಷಬ್ ಪಂತ್   
೪. ವಿರಾಟ್ ಕೊಹ್ಲಿ 
೫. ಸೂರ್ಯಕುಮಾರ್ ಯಾದವ್ 
೬. ಹಾರ್ದಿಕ್ ಪಾಂಡ್ಯ 
೭. ರವೀಂದ್ರ ಜಡೇಜಾ / ಅಶ್ವಿನ್  
೮. ದೀಪಕ್ ಚಹರ್ / ಶಾರ್ದುಲ್ ಠಾಕೂರ್ 
೯. ಮಹಮ್ಮದ್ ಶಮಿ 
೧೦. ಜಸ್ಪ್ರೀತ್ ಬುಮ್ರಾಹ್ 
೧೧. ವರುಣ್ ಚಕ್ರವರ್ತಿ / ಅಕ್ಸರ್ ಪಟೇಲ್  

ಇಶಾನ್ ಕಿಶನ್ ಹಾಗು ರಾಹುಲ್ ಚಹರ್ ಆಯ್ಕೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಶಾನ್ ಕಿಶನ್ ಸ್ಥಾನವನ್ನು ಸಮರ್ಥವಾಗಿ ಮಾಯಾಂಕ್ ಅಗರ್ವಾಲ್ ನಿಭಾಯಿಸಬಲ್ಲರು. ಆದರೆ, ತಂಡಕ್ಕೆ ಒಬ್ಬ ಹೆಚ್ಚಿನ ವಿಕೆಟ್ ಕೀಪರ್ ಇರಲಿ ಎಂದು ಅವರನ್ನು ಆಯ್ಕೆ ಮಾಡಿರಬಹುದು. ಅಶ್ವಿನ್ ಸಹ ಹಲವಾರು ವರ್ಷಗಳಿಂದ ಭಾರತದ ಟೀ ಟ್ವೆಂಟಿ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ, ಅಶ್ವಿನ್ ಅವರ ಅನುಭವ ಹಾಗು ಕಳೆದ ಕೆಲವು ವರ್ಷಗಳಿಂದ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಅವರು ತೋರಿಸಿರುವ ಉತ್ತಮ ಬೌಲಿಂಗ್ ಪ್ರದರ್ಶನ ಅವರ ಆಯ್ಕೆಗೆ ಕಾರಣವಾಗಿದೆ. ಈ ವಿಷಯದಲ್ಲಿ ಚಹಲ್ ಆಯ್ಕೆಯಾಗದೆ ಇರುವುದು ನನಗು ಬೇಸರ ಉಂಟುಮಾಡಿದೆ. ಚಹಲ್ಗೆ ಇರುವ ಅನುಭವ ಹಾಗು ಬ್ಯಾಟ್ಸಮನ್ಗಳು ರನ್ ಮಳೆ ಸುರಿಸುತ್ತಿರುವ ಸಂದರ್ಭದಲ್ಲಿ ವಿಕೆಟ್ ಪಡೆಯುವ ಕೌಶಲ್ಯ ಚಹಲ್ ಅವರಿಗೆ ಇದೆ. 

ರಿಷಬ್ ಪಂತ್ ಹಾಗು ಸೂರ್ಯಕುಮಾರ್ ಮೇಲೆ ಮಧ್ಯಮ ಕ್ರಮಾಂಕದ ಜವಾಬ್ದಾರಿಯಿದೆ. ರೋಹಿತ್, ರಾಹುಲ್ ಹಾಗು ಕೊಹ್ಲಿಯಿಂದ ಉತ್ತಮ ಆರಂಭ ಸಿಗುವುದು ಖಂಡಿತ. ಭಾರತ ತಂಡದ ಯಶಸ್ಸು ಮುಖ್ಯವಾಗಿ ರಿಷಬ್ ಪಂತ್ ಹಾಗು ಹಾರ್ದಿಕ್ ಪಾಂಡ್ಯ ಯಾವ ರೀತಿಯಲ್ಲಿ ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಎಂಬುದರ ಮೇಲೆ ನಿಂತಿದೆ.  ಧೋನಿಯನ್ನು ಮೆಂಟರ್ ಆಗಿ ಈ ಸರಣಿಗೆ ನೇಮಿಸಲಾಗಿದೆ. ಈ ವಿಶ್ವಕಪ್ ಮುಗಿದ ನಂತರ ರವಿಶಾಸ್ತ್ರಿ ಕೂಡ ಕೋಚ್ ಹುದ್ದೆಯಿಂದ ನಿರ್ಗಮಿಸುತ್ತಾರೆ. ಹೀಗಾಗಿ ಭಾರತ ತಂಡ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತದೆ. 

ಭಾರತ ಸೇರಿದಂತೆ ವೆಸ್ಟ್ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗು ನ್ಯೂಜಿಲ್ಯಾಂಡ್ ತಂಡಗಳು ವಿಶ್ವಕಪ್ ಗೆಲ್ಲುವ ಸಾಧ್ಯತೆಯಿರುವ ಪ್ರಮುಖ ತಂಡಗಳಾಗಿವೆ. ಆರಂಭಿಕ ಪಂದ್ಯಗಳಲ್ಲಿ ಎಡವಿದರೆ ಟೂರ್ನಿಯಿಂದ ಹೊರಬೀಳುವ ಸಾಧ್ಯತೆಯಿರುತ್ತದೆ. ಹೀಗಾಗಿ ಆರಂಭಿಕ ಹಂತದ ಗೆಲುವು ಬಹಳ ಪ್ರತಿಯೊಂದು ತಂಡಕ್ಕೆ ಬಹಳ ಮುಖ್ಯವಾಗಿದೆ. 

ತಂಡಕ್ಕೆ ಆಯ್ಕೆಯಾಗದೆ ಇರುವ ಭಾರತದ ಆಟಗಾರರನ್ನು ಹಾಕಿಕೊಂಡು ಒಂದು ಕಾಲ್ಪನಿಕ ತಂಡ 

೧. ಮಾಯಾಂಕ್ ಅಗರ್ವಾಲ್ / ಪೃಥ್ವಿ ಷಾ 
೨. ಶಿಖರ್ ಧವನ್ 
೩. ಶುಭಮನ್ ಗಿಲ್ 
೪. ಸಂಜು ಸ್ಯಾಮ್ಸನ್ / ವೃದ್ಧಿಮಾನ್ ಸಾಹ 
೫. ಮನೀಶ್ ಪಾಂಡೆ / ದಿನೇಶ್ ಕಾರ್ತಿಕ್ 
೬. ಕ್ರುನಲ್ ಪಾಂಡ್ಯ 
೭. ನಟರಾಜನ್
೮. ಮುಹಮ್ಮದ್ ಸಿರಾಜ್ 
೯. ಯಜುವೇಂದ್ರ ಚಹಲ್
೧೦. ಉಮೇಶ್ ಯಾದವ್ / ಪ್ರಸಿದ್ ಕೃಷ್ಣ 
೧೧. ಸಂದೀಪ್ ಶರ್ಮ 

೧೨. ಕುಲದೀಪ್ ಯಾದವ್ 
೧೩. ಖಲೀಲ್ ಅಹ್ಮದ್ 
೧೪. ದೇವದತ್ ಪಡಿಕ್ಕಲ್ 
೧೫. ಋತುರಾಜ್ ಗಾಯಕ್ವಾಡ್ 


ಕೊಹ್ಲಿ ಟಿ-ಟ್ವೆಂಟಿ ನಾಯಕತ್ವದಿಂದ ಹಿಂದೆ ಸರಿದಿರುವುದು ನನಗೆ ಬಹಳ ಒಳ್ಳೆಯ ನಿರ್ಧಾರದಂತೆ ಕಾಣುತ್ತಿದೆ. ಸಚಿನ್ ಸಹ ನಾಯಕತ್ವ ಬಿಟ್ಟು ದೀರ್ಘಕಾಲ ತಂಡಕ್ಕೆ ತಮ್ಮ ಬ್ಯಾಟಿಂಗ್ ಮೂಲಕ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕೊಹ್ಲಿಯ ಕ್ರಿಕೆಟ್ ಜೀವನದಲ್ಲಿ ಇನ್ನಷ್ಟು ಪಂದ್ಯ ಗೆಲ್ಲಿಸುವ ಇನ್ನಿಂಗ್ಸ್ ಮೂಡಿಬರಲಿ.

ಕಾಮೆಂಟ್‌ಗಳು

- Follow us on

- Google Search