ಮಾನಸಿಕ ಆರೋಗ್ಯದ ಬಗ್ಗೆ ಯಾಕಿಷ್ಟು ಅಸಡ್ಡೆ?

ಒಬ್ಬ ಮನುಷ್ಯ ತನ್ನ ಜೀವನವನ್ನು ಸಮರ್ಪಕವಾಗಿ ನಿರ್ವಹಿಸಲು ಅರೋಗ್ಯ ಅತ್ಯವಶ್ಯಕ. ಆರೋಗ್ಯವೆಂದರೆ ಬಹಳಷ್ಟು ಜನರಿಗೆ ಮೊದಲು ತಲೆಗೆ ಹೊಳೆಯುವುದು ಕಟ್ಟುಮಸ್ತಾದ ದೇಹ ಹಾಗು ಶಕ್ತಿ. ಸಾಕಷ್ಟು ವರ್ಷಗಳಿಂದ ಮಾನಸಿಕ ಆರೋಗ್ಯವನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಹಾಗೆಂದು ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯ ಹದಗೆಟ್ಟವರು ಸಾಕಷ್ಟು ಪ್ರಮಾಣದಲ್ಲಿ ಇಲ್ಲವೆಂದಲ್ಲ. ಬೇರೆ ಅನಾರೋಗ್ಯದಂತೆ ಇದು ಕಣ್ಣಿಗೆ ಕಾಣುವುದಿಲ್ಲ.

ಮನಸ್ಸಿನಲ್ಲಿ ನರಕಯಾತನೆ ಅನುಭವಿಸುತ್ತಿರುವ ವ್ಯಕ್ತಿಯ ನೋವನ್ನು ನೋಡಿದ ತಕ್ಷಣ ಕಾಣುವುದಿಲ್ಲ. ಅದನ್ನು ಸಾಕಷ್ಟು ಜನರು ಹೇಳಿಕೊಳ್ಳುವುದು ಇಲ್ಲ. ೨೦೧೯ ರಲ್ಲಿ ಪ್ರಕಟವಾದ ವರದಿ ಪ್ರಕಾರ ೯೦೦೦೦ಕ್ಕೂ ಹೆಚ್ಚು ಯುವಜನರು ಆತ್ಮಹತ್ಯೆಗೆ ಬಲಿಯಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರತಿವರ್ಷ ಬಲಿಯಾಗುತ್ತಿದ್ದಾರೆ. ಇತ್ತೀಚಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಆತ್ಮಹತ್ಯೆ ತಡೆಗಟ್ಟಲು ಹಾಸ್ಟೆಲ್ ಅಲ್ಲಿ ಹೊಸ ರೀತಿಯ ಫ್ಯಾನ್ ಅಳವಡಿಸಿರುವ ಸುದ್ಧಿ ಓದಿದೆ. ಜೀವನವನ್ನೇ ಕಂಡಿರದ ಅಮಾಯಕ ಮುಗ್ಧ ಜೀವಗಳನ್ನು ನಮ್ಮಿಂದ ದೂರ ಮಾಡುತ್ತಿರುವ ಕಣ್ಣಿಗೆ ಕಾಣದ ಸಮಸ್ಯೆ ನಮ್ಮ ಸಮಾಜದಲ್ಲಿದೆ. 


ಇದನ್ನೆಲ್ಲಾ ಸರಿಪಡಿಸಬೇಕಾದರೆ ಒಂದು ಉಪಾಯವೆಂದರೆ ಬಾಲ್ಯದಿಂದ ಶಿಕ್ಷಣದ ಮೂಲಕ ಮಾನವೀಯ ಮೌಲ್ಯಗಳ ಬಗ್ಗೆ ಹಾಗು ಮಾನಸಿಕ ಆರೋಗ್ಯದ ಬಗ್ಗೆ ಮಕ್ಕಳಿಗೆ ತಿಳಿಸುವುದು. ಜನರೊಂದಿಗೆ ಬೆರೆಯುವುದು, ಆಟೋಟಗಳಲ್ಲಿ ಪಾಲ್ಗೊಳ್ಳುವುದು, ಸಮಸ್ಯೆಗಳನ್ನು ತಮ್ಮದೇ ಒಂದು ಗುಂಪು ರಚಿಸಿಕೊಂಡು ಬಗೆಹರಿಸುವುದು, ಏಕಾಂತದಲ್ಲಿ ಉತ್ತಮ ಆಲೋಚನೆಗಳನ್ನು ಮಾಡುವುದು, ಬೇರೆಯವರಿಗೆ ತಮಗಾದ ಸಹಾಯವನ್ನು ಮಾಡುವ ಗುಣವನ್ನು ಮಕ್ಕಳಲ್ಲಿ ಬೆಳೆಸುವ ಅವಶ್ಯಕತೆಯಿದೆ. 

ಈ ವೈವಿಧ್ಯತೆಯಿಂದ ಕೂಡಿದ ವ್ಯಕ್ತಿತ್ವ ಬಾಲ್ಯದಲ್ಲಿ ಬೆಳೆಸಿಕೊಂಡರೆ, ಜೀವನದಲ್ಲಿ ಮುಂದೆ ಸಾಗಿದಂತೆ ಜೀವನವನ್ನು ಎದುರಿಸುವ ಧೈರ್ಯ ಮೂಡುತ್ತದೆ. ನಮ್ಮಂತೆಯೇ ಕಷ್ಟ ಪಡುತ್ತಿರುವ ಲಕ್ಷಾಂತರ ಜನರು ಭೂಮಿಯ ಮೇಲೆ ಜೀವನ ಕಟ್ಟಿಕೊಂಡಿದ್ದಾರೆ ಎಂಬ ಕನಿಷ್ಠ ಅರಿವು ಜನರಿಗೆ ಇರಬೇಕು. ಸಮಸ್ಯೆಗೆ ಪರಿಹಾರದ ಬಗ್ಗೆ ಚಿಂತಸಬೇಕೇ ಹೊರತು ಈ ಸಮಸ್ಯೆ ನನಗೇಕೆ ಬಂತು ಎಂದು ಬೇಜಾರು ಮಾಡಿಕೊಂಡು ಸುಮ್ಮನಿದ್ದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಬೇಜಾರು, ದುಃಖ ಯಾವುದು ಕೂಡ ತಪ್ಪಲ್ಲ. ಮನಸ್ಸಿಗಾದ ನೋವನ್ನು ಮರೆತು ಹೊಸ ಸಂತೋಷದಾಯಕ ಜೀವನದತ್ತ ಆಲೋಚನೆಗಳು ಮೂಡುವಂತೆ ಸಮಯ ಕಳೆಯಬೇಕು. 

ತನ್ನ ಸಂಸ್ಥೆಯ ಕೆಲಸಗಾರರು ಕಷ್ಟಪಟ್ಟು ಕೆಲಸ ಮಾಡಬೇಕಾಗಿರುವುದು ಎಲ್ಲಾ ಉದ್ಯಮಿಗಳ ಉದ್ದೇಶ. ಆ ಕೆಲಸದ ಭಾಗವಾಗಿ ಒಬ್ಬ ಮನುಷ್ಯ ಅನುಭವಿಸುವ ಮಾನಸಿಕ ಯಾತನೆಯನ್ನು ಅಳೆಯುವ ಯಾವುದೇ ವೈದ್ಯಕೀಯ ಪರೀಕ್ಷೆಗಳು ಇನ್ನು ಸಹ ಬಂದಿಲ್ಲ. ಹೀಗಾಗಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಾನಸಿಕ ಹಿಂಸೆ ಎಗ್ಗಿಲ್ಲದೆ ನಡೆದುಕೊಂಡು ಬರುತ್ತಿದೆ. ಈ ಮಾತನ್ನು ಹಲವಾರು ಮಂದಿ ಒಪ್ಪದೇ ಇರಬಹುದು, ಆದರೆ ತಿಂಗಳಿಗೆ ಲಕ್ಷಾಂತರ ರೂಪಾಯಿಗಳ ಸಂಬಳ ಪಡೆಯುವ ಸಾಫ್ಟ್ವೇರ್ ಇಂಜಿನಿಯರ್ಗಳ ಮಟ್ಟಿಗೆ ಇದು ಸತ್ಯದ ಮಾತಾಗಿದೆ. ನೇರವಾಗಿ ಮಾನಸಿಕ ಹಿಂಸೆಯನ್ನು ಯಾರು ಸಹ ಸಹಿಸುವುದಿಲ್ಲ ಆದರೆ ಕೆಲಸದ ರೂಪದಲ್ಲಿ ನಡೆಯುವ ಮಾನಸಿಕ ಹಿಂಸೆಗೆ ಯಾವುದೇ ನಿರ್ದಿಷ್ಟ ಕಾನೂನುಗಳಿಲ್ಲ. ಮಾನವನ ದುರಾಸೆ ಇಂದು ಅವನ ಜೀವನವನ್ನು ಸಂತೃಪ್ತಿಯಿಲ್ಲದ ಬದುಕಿಗೆ ಆಹ್ವಾನ ನೀಡಿದೆ.

ನಮ್ಮ ಹಿರಿಯರಿಗೂ ಈ ಮಾನಸಿಕ ಆರೋಗ್ಯದ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಇರುವುದು ಸಮಸ್ಯೆಗಳನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದೆ. ಬೇಜಾರಾಗಿರುವ ವ್ಯಕ್ತಿಗೆ ಹತ್ತಿರ ಹೋಗಿ ಬೇಜಾರು ಮಾಡ್ಕೋಬೇಡ ಅನ್ನುವುದು, ಅಳುತ್ತಿರುವವರ ಹತ್ತಿರ ಹೋಗಿ ಅಳಬೇಡ ಅನ್ನುವುದು, ಬಹಳ ಚಿಂತೆಯಲ್ಲಿ ಮುಳುಗಿರುವವರ ಹತ್ತಿರ ಹೋಗಿ ಚಿಂತೆ ಮಾಡಬೇಡ ಎಂದು ಹೇಳುವುದು ನಮಗೆ ಸರಿಯಾಗಿ ಕಂಡರೂ ಅದರ ಪರಿಣಾಮಗಳು ಅದಕ್ಕೆ ಸಂಪೂರ್ಣ ವಿರುದ್ಧವಾಗಿರುತ್ತವೆ. 

ಇದು ಹೇಗೆಂದರೆ ನಾನು ನಿಮಗೆ ಪಿಂಕ್ ಬಣ್ಣದ ನಾಯಿಯನ್ನು ಕಲ್ಪನೆ ಮಾಡಿಕೊಳ್ಳಬೇಡಿ ಎಂದಂತೆ. ಹಾಗೆಯೆ ಸಹ ಕೆಲಸಗಾರರ ಬಳಿ 'ಬಿ ಕಾಂಫಿಡೆಂಟ್' 'ಬಿ ಮೋಟಿವೆಟೆಡ್ ' ಅಂತೆಲ್ಲ ಹುರಿದುಂಬಿಸಲು ಪ್ರಯತ್ನಿಸಿದರೆ ಅದು ಹೆಚ್ಚಿನ ಸಂದರ್ಭಗಳಲ್ಲಿ ಉಲ್ಟಾ ಹೊಡೆಯುವ ಸಾಧ್ಯತೆಯೇ ಹೆಚ್ಚು. ಅದರ ಬದಲಾಗಿ ಅವರು ಮಾತನಾಡಲು ಸಿದ್ಧವಾದಾಗ ಅವರ ಕಷ್ಟ, ನೋವುಗಳು ಏನೆಂಬುದನ್ನು ಮಧ್ಯದಲ್ಲಿ ಮಾತಾಡದೆ ಕಿವಿಗೊಟ್ಟು ಆಲಿಸಿ. ನಿಮ್ಮಿಂದ ಅವರಿಗೆ ಏನು ಸಹಾಯ ಬೇಕೆಂಬುದನ್ನು ಕೇಳಿ. ಅದನ್ನು ಬಿಟ್ಟು ಅವೆಲ್ಲ ಸಮಸ್ಯೆ ಅಲ್ಲವೇ ಅಲ್ಲ, ಊಟ ಮಾಡಿ ಹಾಲು ಕುಡಿದು ಮಲ್ಕೋ ಎಂದರೆ ಎಂದಿಗೂ ನಿಮ್ಮೊಡನೆ ತಮ್ಮ ಮನಸ್ಸಿನ ತೊಳಲಾಟಗಳನ್ನು ಹೇಳಿಕೊಳ್ಳುವುದಿಲ್ಲ. 

ಮಾನಸಿಕ ಅರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಾಗಿರುವ ಸಂದರ್ಭದಲ್ಲಿ ನಾವಿದ್ದೇವೆ. ದಿನನಿತ್ಯದ ಜಂಜಾಟದಲ್ಲಿ ಕೆಲಸದ ಒತ್ತಡ ಹಾಗು ಸ್ಪರ್ಧಾತ್ಮಕ ಜಗತ್ತಿನಿಂದಾಗಿ ಸಮಯವೇ ಸಿಗದಂತಾಗಿದೆ. ಅದೆಷ್ಟೋ ಭಾವನೆಗಳನ್ನು ಅದುಮಿ ಮಣ್ಣು ಮುಚ್ಚಲಾಗುತ್ತಿದೆ. ಎಲ್ಲವು ಸರಿಯಾಗಿದೆ ಎಂಬ ಅರ್ಥವಿಲ್ಲದ ಸಮಾಧಾನಕರ ಮಾತನ್ನು ನಮಗೆ ನಾವೇ ಹೇಳಿಕೊಳ್ಳುತ್ತಿದ್ದೇವೆ. ವಾರದ ಒಂದು ಅಥವಾ ಎರಡು ದಿನದ ರಜೆಗಾಗಿ ವಾರದ ಉಳಿದೆಲ್ಲಾ ದಿನಗಳನ್ನು ಕಷ್ಟಪಟ್ಟು ತಳ್ಳುತ್ತಿದ್ದೇವೆ. ಯಾರನ್ನೋ ಮೆಚ್ಚಿಸುವ ಸಲುವಾಗಿ ಇಲ್ಲಸಲ್ಲದ ಸಾಹಸಕ್ಕೆ ಇಳಿಯುತ್ತಿದ್ದೇವೆ. 

ಇದು ಹಲವಾರು ವರ್ಷಗಳ ಕಾಲ ನಡೆದು ಒಮ್ಮೆ ನಮ್ಮನ್ನು ನಾವು ಅವಲೋಕಿಸಿಕೊಂಡಾಗ ಕಳೆದುಹೋಗಿರುವ ನಮ್ಮ ಹಳೆಯ ವ್ಯಕ್ತಿತ್ವ ನೆನಪಿಗೆ ಬರುತ್ತದೆ. ಆ ಉತ್ಸಾಹ, ಧೈರ್ಯ ಸಾಹಸಗಳಿಂದ ಕೂಡಿದ ಶಾಂತಿಯುತ ಜೀವನದ ಹುಡುಕಾಟ ನಮಗೆ ತಿಳಿಯದಂತೆಯೇ ಶುರುವಾಗುತ್ತದೆ. 
ನಮ್ಮ ಯಾವುದೇ ನಿರ್ಧಾರ ಅಥವಾ ನಡವಳಿಕೆ ಯಾವಾಗಲು ನಮಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಆರಂಭವಾಗಿರುತ್ತವೆ. ಹಾಗೆಯೆ ಬೇರೆಯವರ ನಿರ್ಧಾರಗಳು ಕೂಡ. ತಪ್ಪು-ಸರಿ, ಒಳ್ಳೆಯದು-ಕೆಟ್ಟದ್ದು ಎಲ್ಲವು ಅವರವರ ದೃಷ್ಟಿಕೋನದಲ್ಲಿ ನಿಂತು ನೋಡಿದಾಗ ಬದಲಾಗುತ್ತವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಬೇರೆಯವರು ಸಹ ನಮ್ಮಂತೆಯೇ ಮನುಷ್ಯರು, ಅವರಿಗೂ ನಮ್ಮಂತೆಯೇ ಮನಸ್ಸಿದೆ ಎಂಬ ಕನಿಷ್ಠ ಪ್ರಜ್ಞೆ ನಮ್ಮಲ್ಲಿ ಇರಬೇಕು.  

ಯಾರೇ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಅವರಿಗೆ ಬೇಕಾದ ಸೂಕ್ತ ವೈದ್ಯಕೀಯ ಹಾಗು ಸಾಮಾಜಿಕ ಬೆಂಬಲವನ್ನು ನೀಡಬೇಕಾಗಿದೆ. ಬಡವರಿಗೂ ಸಹ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಸಮಸ್ಯೆಗಳನ್ನು ಎದುರಿಸಿ ಬೆಳೆಯುವ ಆತ್ಮಸ್ಥೈರ್ಯವನ್ನು ಶಿಕ್ಷಣ ನೀಡದೆ ಹೋದರೆ ಅದೆಷ್ಟು ಮುಗ್ಧ ಜೀವಗಳನ್ನು ಕಳೆದುಕೊಳ್ಳುತ್ತೇವೆಯೋ ಗೊತ್ತಿಲ್ಲ. ಮಾನಸಿಕ ಆರೋಗ್ಯದ ಬಗ್ಗೆ ಅಸಡ್ಡೆ ಬೇಡ. ಮಾನಸಿಕ ಆರೋಗ್ಯವಿಲ್ಲದೆ ಯಾವ ಸಂಪತ್ತು ಸಹ ನಮಗೆ ಸುಖ ನೀಡುವುದಿಲ್ಲ. ನಿತ್ಯದ ಬದುಕಿನಲ್ಲಿ ಮನಸ್ಸು ಹೂವಿನಂತೆ ಸುಂದರವಾಗಿ ಬೆಳೆದು ಬದುಕಿಗೆ ಹೊಸ ಆಕರ್ಷಣೆಯನ್ನು ಮೂಡಿಸಲಿ. 

ಕಾಮೆಂಟ್‌ಗಳು

- Follow us on

- Google Search