ಅಫ್ಘಾನಿಸ್ತಾನದ ಬಗ್ಗೆ ಒಂದಿಷ್ಟು ವಿಷಯಗಳು

ಇತ್ತೀಚಿಗೆ ಕನ್ನಡ ನ್ಯೂಸ್ ಚಾನೆಲ್ ಹಾಕಿದರೆ ಸಾಕು, ತಾಲಿಬಾನಿಗರ ಅಟ್ಟಹಾಸ, ಕ್ರೌರ್ಯ, ಚಿತ್ರಹಿಂಸೆ, ನರಕ ದರ್ಶನ ಹೀಗೆ ಭಯ ಹುಟ್ಟಿಸುವ ಅಮಾನವೀಯ ಸುದ್ಧಿಗಳನ್ನೇ ನೋಡಬಹುದು. ಕರ್ನಾಟಕದ ಸುದ್ಧಿಗಳಿಗಿಂತ ದೂರದ ಅಫ್ಘಾನಿಸ್ತಾನದ ಚಿಂತೆ ನಮ್ಮ ಕನ್ನಡ ಮಾಧ್ಯಮಗಳಿಗೆ. ಅದೇನೇ ಇರಲಿ, ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ನನಗೆ ತಿಳಿದ ಚೂರುಪಾರು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. 

ಅಮೇರಿಕಾ ಹಾಗು ರಷ್ಯಾದ ನಡುವೆ ಶೀತಲ ಸಮರ ಎಂದರೆ ಕೋಲ್ಡ್ ವಾರ್ ನಡೆಯುತ್ತಿದ್ದ ಸಮಯವದು. ಸೋವಿಯತ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲು ಮುಂದಾದಾಗ ಅಫ್ಘಾನಿಗರು ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಮೇರಿಕಾ ಅಫ್ಘಾನಿಸ್ತಾನಕ್ಕೆ ಸಹಾಯ ನೀಡಿದ್ದಲ್ಲದೆ ಸೋವಿಯತ್ ಆರ್ಮಿಯನ್ನು ಹಿಂದಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿತ್ತು. ಅಫ್ಘಾನಿಸ್ತಾನದಲ್ಲಿ ಅಮೆರಿಕಾದೊಂದಿಗೆ ಸೇರಿ ಸೋವಿಯತ್ ಮೇಲೆ ಹೋರಾಡಿದ್ದ ಹಲವು ಸಂಘಟನೆಗಳು ಭಯೋತ್ಪಾದನೆಯಲ್ಲೂ ಪಾಲುದಾರಿಕೆ ಹೊಂದಿದ್ದವು. ಬಿನ್ ಲಾಡೆನ್ ಆ ಸಂದರ್ಭದಲ್ಲಿ ಅಲ್ಕೈದಾ ಸ್ಥಾಪಿಸಿದ್ದು. ಬಿನ್ ಲಾಡೆನ್ಗೆ ಸೋವಿಯತ್ ಅರ್ಮಿಗೂ ಹಾಗು ಈ ಅಮೆರಿಕಾದ ಅರ್ಮಿಗೂ ಯಾವುದೇ ವ್ಯತ್ಯಾಸ ಕಾಣಲಿಲ್ಲ. ಬಿನ್ ಲಾಡೆನ್ ಪ್ರಕಾರ ಅವರ ಜನರ ರಾಷ್ಟ್ರಗಳ ಸಂಪತ್ತಿನ ಮೇಲೆ ಕಣ್ಣುಬಿದ್ದಿರುವುದರಿಂದಲೇ ಅಮೇರಿಕಾ ಸಹ ಹೊಂಚು ಹಾಕುತ್ತಿರುವಂತೆ ಕಾಣುತಿತ್ತು. ಕಚ್ಚಾತೈಲ ಪೆಟ್ರೋಲಿಯಂ ಹಾಗು ಇಂಧನ ಉತ್ಪನ್ನಗಳಿಂದ  ದೊರೆಯುವ ಸಂಪತ್ತಿನ ಅರಿವು ಹೊಂದಿದ್ದ ಅಮೆರಿಕಾದಂತಹ ರಾಷ್ಟ್ರಗಳು  ಯಾವುದೇ ಕಾರಣ ಸಿಕ್ಕರೂ ಸಹ ಆ ದೇಶಗಳಿಗೆ ತನ್ನ ಸೈನ್ಯವನ್ನು ಕಳುಹಿಸಿ ಹೋರಾಡುವ ಬುದ್ಧಿಯನ್ನು ಅಮೇರಿಕಾ ಬೆಳೆಸಿಕೊಂಡಿತ್ತು. ಇದಕ್ಕೆಲ್ಲ ತಕ್ಕ ಉತ್ತರವಾಗಿ ಅಮೇರಿಕಾದ ಮೇಲೆ ಭಯೋತ್ಪಾದನೆಗೆ ಕುಮ್ಮಕ್ಕು ಸಿಕ್ಕಿತು.  

೨೦೦೧ರಲ್ಲಿ ಸೆಪ್ಟೆಂಬರ್ ೧೧ರಂದು ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ವಿಮಾನ ಉಪಯೋಗಿಸಿ ದಾಳಿ ಮಾಡಿದ್ದು ನಮಗೆ ತಿಳಿದಿದೆ. ಸಾವಿರಾರು ಜನರು ಸ್ಥಳದಲ್ಲೇ ಮೃತಪಟ್ಟರೆ, ಇನ್ನು ಸಾಕಷ್ಟು ದಕ್ಷ ಅಧಿಕಾರಿಗಳು ನೆರವಿಗೆ ಧಾವಿಸಿ ಟವರ್ ಕುಸಿತಕ್ಕೆ ಒಳಗಾದಾಗ ಮೃತಪಟ್ಟಿದ್ದರು. ಸಾವಿರಾರು ಜನರ ಮೃತ ದೇಹವನ್ನು ಸಹ ಗುರುತಿಸಲಾಗದಷ್ಟು ಕರಾಳ ಸ್ಥಿತಿಗೆ ಅಮೇರಿಕಾ ಜನರು ಒಳಗಾಗಿದ್ದರು. ಪೆಂಟಗಾನ್ ಮೇಲೆಯೂ ಸಹ ವಿಮಾನದಲ್ಲಿ ದಾಳಿ ಮಾಡಲಾಯಿತು. ಇನ್ನೊಂದು ವಿಮಾನವನ್ನು ಸಿಬ್ಬಂದಿಗಳೇ ನೆಲಕ್ಕೆ ಉರುಳಿಸಿ ತಮ್ಮ ಪ್ರಾಣಬಿಟ್ಟು ಜನರ  ಜೀವ ಉಳಿಸಿದರು. ಈ ಭೀಕರ ಸಾವು ನೋವನ್ನು ಗಂಭೀರವಾಗಿ ಪರಿಗಣಿಸಿದ ಅಮೇರಿಕಾ ಅಧ್ಯಕ್ಷ ಬುಷ್ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದರು. 

೨೦೦೧ರ ಸಮಯದಲ್ಲಿ ಅಫ್ಘಾನಿಸ್ತಾನ ತಾಲಿಬಾನ್ ವಶದಲ್ಲಿತ್ತು. ಅಫ್ಘಾನಿಸ್ತಾನದ ಉತ್ತರ ಭಾಗದ ಹಲವು ಪ್ರದೇಶಗಳು ಮಾತ್ರ ತಾಲಿಬಾನ್ ಆಡಳಿತವನ್ನು ವಿರೋಧಿಸುತ್ತಿದ್ದರು. ಅಮೇರಿಕಾ ಸೇನೆ ಉತ್ತರ ಭಾಗದಲ್ಲಿ ಪ್ರವೇಶ ಪಡೆದು, ತಾಲಿಬಾನ್ ವಿರೋಧಿಗಳ ಸಂಪರ್ಕ ಸಾಧಿಸಿ ವಿಮಾನಗಳ ಮೂಲಕ ಸತತ ಏಳು ದಿನಗಳ ಕಾಲ ಬಾಂಬ್ ದಾಳಿ ಮಾಡಿತು. ನಂತರ ಮತ್ತಷ್ಟು ಅಮೇರಿಕಾ ಸೇನೆಯನ್ನು ಅಲ್ಲಿ ಜಮಾವಣೆ ಮಾಡಲಾಯಿತು. ಗುಂಡಿನ ದಾಳಿಯಲ್ಲಿ ಹಲವಾರು ಜನರು ಹತರಾದರು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಅಮೇರಿಕಾ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿತು. ಅಮೇರಿಕಾ ಹಾಗು ಅಲ್ಲಿನ ತಾಲಿಬಾನ್ ವಿರೋಧಿಗಳನ್ನು ಒಟ್ಟುಗೂಡಿಸಿಕೊಂಡು ಕಾಬುಲ್ ವಶಪಡಿಸಿಕೊಳ್ಳಲಾಯಿತು. 

ಇಷ್ಟೆಲ್ಲಾ ಆದರೂ ಸಹ, ಸಂಪೂರ್ಣವಾಗಿ ತಾಲಿಬಾನ್ ಮಣಿಸಲು ಅಮೆರಿಕಕ್ಕೆ ಸಾಧ್ಯವಾಗಲಿಲ್ಲ. ಅಫ್ಘಾನಿಸ್ತಾನದ ಭೌಗೋಳಿಕ ಲಕ್ಷಣಗಳು ಹಾಗು ಅಲ್ಲಿನ ಮುಗ್ಧ ಜನರ ಮೇಲೆ ದಾಳಿಯನ್ನು ತಪ್ಪಿಸುವ ಸಲುವಾಗಿ ಅಮೇರಿಕಾ ಸೇನೆಗೆ ಬಹಳ ಹಿನ್ನಡೆಯನ್ನು ಉಂಟುಮಾಡಿದವು. ನೆಲದಲ್ಲಿ ಬಾಂಬ್ ಹುಗಿದು ನೀರು ಹಾಕಿ ಮುಚ್ಚಿಬಿಟ್ಟರೆ ಅಲ್ಲಿನ ಬಿಸಿಲಿಗೆ ಒಣಗಿ ಹೋಗಿ ಅನುಮಾನವೇ ಬರುತ್ತಿರಲಿಲ್ಲ. ಇದರಿಂದಾಗಿ ಅಮೇರಿಕಾ ಸೈನಿಕರು ನಡೆದು ಹೋಗುತ್ತಿರುವ ಸಂದರ್ಭಗಳಲ್ಲಿ ಬಾಂಬ್ ಸಿಡಿಸಿ ಹತ್ಯೆ ಮಾಡಲು ಆರಂಭಿಸಿದರು. ಇದರಿಂದಾಗಿ ಅಮೇರಿಕಾ ಸೈನಿಕರೇ ತಾವು ನಡೆದು ಹೋಗುವ ದಾರಿಯನ್ನು ಕ್ಲಿಯರ್ ಮಾಡುವ ಸಲುವಾಗಿ ಬಾಂಬ್ ಹಾಕಿ ಸ್ಪೋಟಿಸಿ ಮುಂದೆ ಸಾಗುತ್ತಿದ್ದರು. ಇದರಿಂದಾಗಿ ಅಫ್ಘಾನಿಸ್ತಾನದ ಜನರ ಮನೆಗಳು ಹಾಗು ಅವರ ಸಂಪತ್ತಿಗೆ ದಾಳಿಗಳು ಆದವು. ಸಾಮಾನ್ಯ ಜನರ ವೇಷದಲ್ಲಿಯೇ ಬಂದು ಬಾಂಬ್ ಸ್ಪೋಟಿಸಿಕೊಂಡು ಅಮೆರಿಕಾದ ಸೈನಿಕರನ್ನು ಹತ್ಯೆ ಮಾಡಲು ಆರಂಭಿಸಿದರು. ಇದರಿಂದಾಗಿ ಎಲ್ಲರನ್ನು ಗನ್ ಪಾಯಿಂಟ್ ಅಲ್ಲೇ ಹಿಡಿದು ನೋಡುವ ಪರಿಸ್ಥಿತಿ ಅಮೇರಿಕಾ ಸೇನೆಗೆ ಎದುರಾಯಿತು. 

ಸೆಪ್ಟೆಂಬರ್ ೧೧ರ ದಾಳಿಗೆ ಸಂಬಂಧಿಸಿದಂತೆ ಹಲವಾರು ಜನರನ್ನು ಸೆರೆಹಿಡಿದು ಬಂಧಿಸಿ ಅಮೆರಿಕಕ್ಕೆ ಕಳುಹಿಸಲಾಯಿತು. ಅವರನ್ನೆಲ್ಲ ತೀವ್ರ ವಿಚಾರಣೆಗೆ ಒಳಪಡಿಸಲಾಯಿತು. ಬಾಯಿಬಿಡದೆ ಇದ್ದ ಸಂದರ್ಭಗಳಲ್ಲಿ ಇನ್ನೂ ಹೆಚ್ಚಿನ ತೀವ್ರ ವಿಚಾರಣೆಗಾಗಿ ಹೊಸ ಹೊಸ ವಿಧಾನಗಳನ್ನು ಅಳವಡಿಕೊಳ್ಳಲಾಯಿತು. ಇದೆ ಸಂದರ್ಭದಲ್ಲಿ ಇರಾಕ್ ದೇಶದಲ್ಲಿ ಸದ್ದಾಂ ಹುಸೇನ್ ಆಡಳಿತದಿಂದ ತಮ್ಮ ದೇಶಕ್ಕೆ ಅಪಾಯವಿದೆಯೆಂದು ಹಾಗು ಮಾಸ್ ಡಿಸ್ಟ್ರಕ್ಷನ್ ವೆಪನ್ ಹೊಂದಿದೆ ಎಂಬ ಕಾರಣಕ್ಕಾಗಿ ಇರಾಕ್ ಮೇಲೆ ಸಹ ಅಮೇರಿಕಾ ಯುದ್ಧ ಮಾಡಿತು. ಆದರೆ ಮಾಸ್ ಡಿಸ್ಟ್ರಕ್ಷನ್ ವೆಪನ್ ದೊರೆಯದೆ ಹೋಗಿದ್ದು ಅಮೆರಿಕಕ್ಕೆ ತೀವ್ರ ಹಿನ್ನಡೆಯಾಯಿತು. ಇರಾಕ್ ಯುದ್ಧವನ್ನು ಬರಾಕ್ ಒಬಾಮ ಕೂಡ ತೀವ್ರವಾಗಿ ಖಂಡಿಸಿದರು. ಒಬಾಮ ಅಧ್ಯಕ್ಷರಾದ ನಂತರ ಪುನಃ ಅಫ್ಘಾನಿಸ್ತಾನದ ಮೇಲೆ ಗಮನ ಹರಿಸಿದರು. 

ಈ ಹೊತ್ತಿಗಾಗಲೇ ಅಮೇರಿಕಾ ಕೋಟ್ಯಾಂತರ ಡಾಲರ್ ಸಂಪತ್ತನ್ನು ಅಫ್ಘಾನಿಸ್ತಾನದಲ್ಲಿ ವ್ಯಯಿಸಿತ್ತು. ಇನ್ನೊಂದೆಡೆ ಮಾನವ ಹಕ್ಕುಗಳ ಸಂಸ್ಥೆಗಳು ಅಫ್ಘಾನಿಸ್ತಾನದಲ್ಲಿ ಸೆರೆ ಹಿಡಿದವರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಅಮೆರಿಕಾದ ಜನರ ಪ್ರೈವಸಿ ಹಾಗು ಹಕ್ಕುಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಸಂಸ್ಥೆಗಳ ವಿರುದ್ಧವೂ ಜನರು ಕೆಂಡಾಮಂಡಲವಾಗಿದ್ದರು. ಇಷ್ಟೆಲ್ಲಾ ಆಗುತ್ತಿದ್ದರು ಸಹ ಒಸಾಮಾ ಬಿನ್ ಲಾಡೆನ್ ಮಾತ್ರ ಚಳ್ಳೆಹಣ್ಣು ತಿನ್ನಿಸಿ ಅಡುಗುತಾಣಕ್ಕೆ ಸೇರಿಕೊಂಡಿದ್ದನು. ಇದು ಒಬಾಮ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. 

ಅಫ್ಘಾನಿಸ್ತಾನದಲ್ಲಿ ಅಮೆರಿಕಾದೊಂದಿಗೆ ಸೇರಿಕೊಂಡಿದ್ದ ಸರ್ಕಾರದ ಸಾಕಷ್ಟು ಜನರು ಭ್ರಷ್ಟರಾಗಿದ್ದರು. ಅಲ್ಲಿನ ಜನರನ್ನು ಶೋಷಣೆ ಮಾಡುತ್ತಿದ್ದ ಹಲವರು ಸಾಕಷ್ಟು ಸಂಪತ್ತು ಲೂಟಿ ಹೊಡೆಯುತ್ತಿದ್ದರು. ಅಮೇರಿಕಾ ತಯಾರಿಸುತ್ತಿದ್ದ ಅಫ್ಘಾನ್ ಸೇನೆಗೆ ಸೇರಿಕೊಂಡವರಲ್ಲೂ ಸಹ ಹಲವರು ಶಿಸ್ತಿಲ್ಲದೆ ಜಗಳ ಮಾಡುವುದು, ತನ್ನೊಂದಿಗೆ ಕೆಲಸ ಮಾಡುವವರನ್ನು ಹತ್ಯೆ ಮಾಡುವುದು ಈ ರೀತಿಯ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಸಾಕ್ಷರತಾ ಪ್ರಮಾಣ ಬಹಳ ಕಡಿಮೆಯಿದ್ದ ಅಫ್ಘಾನಿಸ್ತಾನದಲ್ಲಿ ಸೇನೆಯನ್ನು ತಯಾರು ಮಾಡುವುದಕ್ಕೆ ತರಬೇತಿ ನೀಡುವುದು ಅಮೇರಿಕಾ ಅಧಿಕಾರಿಗಳಿಗೆ ಬಹಳ ಕಷ್ಟದ ಕೆಲಸವಾಗಿತ್ತು. ಈ ಎಲ್ಲಾ ಕಾರಣಗಳಿಂದ ಬೇಸತ್ತು ಅಫ್ಘಾನಿಸ್ತಾನದಿಂದ ಹಿಂತಿರುಗುವ ಯೋಜನೆಯನ್ನು ಒಬಾಮ ಸಿದ್ಧಪಡಿಸಲು ಆದೇಶ ನೀಡಿದರು. 

ಇದೆ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಟ್ಟ ಒಬ್ಬ ಒಸಾಮಾ ಬಿನ್ ಲಾಡೆನ್ಗೆ ಕೊರಿಯರ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬನ ಬಗ್ಗೆ ಸುಳಿವು ನೀಡುತ್ತಾನೆ. ಮಿಲಿಟರಿ ಪಡೆಗಳಿಂದ ಸುತ್ತುವರೆದಿರುವ ಹಾಗು ಅಧಿಕಾರಿಗಳೇ ವಾಸಿಸುವ ಸ್ವಲ್ಪ ನಿರ್ಜನ ಪ್ರದೇಶದಲ್ಲಿ ಒಂದು ವಾಹನ ನಿಗದಿತ ಸಮಯಕ್ಕೆ ಸಂಚರಿಸುವುದು ಗಮನಕ್ಕೆ ಬರುತ್ತದೆ. ಆ ವಾಹನ ಹೋಗಿ ತಲುಪುತ್ತಿದ್ದ ಮನೆಯ ಮೇಲೆ ದೂರದಿಂದಲೇ ಹದ್ದಿನ ಕಣ್ಣಿಡಲಾಗುತ್ತದೆ. ಬಿನ್ ಲಾಡೆನ್ ಸುಳಿವಿಗಾಗಿ ವೈದ್ಯರ ವೇಷದಲ್ಲಿ ಹಾಗು ಲಸಿಕೆ ನೀಡಲು ಸರ್ವೇ ಮಾಡುವ ನೆಪದಲ್ಲಿ ಮನೆಯ ಸಮೀಪ ಹೋಗಿ ನೋಡಲು ಪ್ರಯತ್ನ ಮಾಡಲಾಗುತ್ತದೆ. 

ಏನೇ ಕಷ್ಟ ಪಟ್ಟರು ಖಡಾ ಖಂಡಿತವಾಗಿ ಲಾಡೆನ್ ಅದೇ ಮನೆಯಲ್ಲಿದ್ದಾನೆ ಎಂದು ಸಾಧಿಸಲು ಸಾಕ್ಷಿ ಸಿಗಲಿಲ್ಲ. ಆದರೂ ಇಂಟೆಲಿಜೆನ್ಸ್ ಮೂಲಕ ೫೦:೫೦ ಚಾನ್ಸ್ ಇದೆ ಎಂದು ಸುಳಿವು ಸಿಗುತ್ತದೆ. ಪಾಕಿಸ್ತಾನದ ಪ್ರದೇಶವಾಗಿದ್ದರೂ ಸಹ ಯೋಜನೆಯನ್ನು ರೂಪಿಸಿ ಹೆಲಿಕ್ಯಾಪ್ಟರ್ ಮೂಲಕ ಕಾಂಪೌಂಡ್ ಪ್ರವೇಶಿಸಲಾಗುತ್ತದೆ. ಈ ಸಂದರ್ಭದಲ್ಲಿ ಒಂದು ಹೆಲಿಕ್ಯಾಪ್ಟರ್ ಕ್ರ್ಯಾಶ್ ಲ್ಯಾಂಡಿಂಗ್ ಆದರೂ ಸಹ ಕಾರ್ಯಾಚರಣೆ ಮುಂದುವರೆಸಿ ಬಿನ್ ಲಾಡೆನ್ ಅನ್ನು ಮನೆಯಲ್ಲೇ ಗುಂಡಿಕ್ಕಿ ಕೊಲ್ಲಲಾಗುತ್ತದೆ. ಈ ರಹಸ್ಯ ಕಾರ್ಯಾಚರಣೆ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಇರಲಿಲ್ಲ ಹಾಗು ಕಾರ್ಯಾಚರಣೆಯ ಸಂದರ್ಭದಲ್ಲಿ ಪಾಕಿಸ್ತಾನ ಪ್ರತಿರೋಧ ಒಡ್ಡಿದರೆ ಅದಕ್ಕೂ ಅಮೇರಿಕಾ ಪಡೆ ಸಿದ್ಧವಾಗಿತ್ತು. ಬಿನ್ ಲಾಡೆನ್ ಹತ್ಯೆಯ ಸುದ್ಧಿ ಕೇಳಿ ಅಮೇರಿಕಾದಲ್ಲಿ ಹರ್ಷೋದ್ಘಾರ ಮಾಡಿದರು.  

ಅಫ್ಘಾನಿಸ್ತಾನದಲ್ಲಿ ಮಿಲಿಟರಿ ಕಾರ್ಯಾಚರಣೆ ತೀವ್ರವಾಯಿತು. ಡ್ರೋನ್ ಉಪಯೋಗಿಸಿ ಅನುಮಾನಾಸ್ಪದ ಸ್ಥಳಗಳ ಮೇಲೆ ದಾಳಿ ಮಾಡಲಾಯಿತು. ಈ ದಾಳಿಗಳಲ್ಲಿ ಅಮಾಯಕರು ಸಹ ಮರಣ ಹೊಂದಿದ ಉದಾಹರಣೆಗಳಿವೆ. ಇದನ್ನೆಲ್ಲಾ ಗಮನಿಸುತ್ತಿದ್ದ ಅಲ್ಲಿನ ಸಾಕಷ್ಟು ಜನರು ತಮ್ಮವರ ಉಳಿವಿಗಾಗಿ ತಾಲಿಬಾನ್ ಸೇರಲು ಆರಂಭಿಸಿದರು. ಯಾವುದೇ ನಿರ್ದಿಷ್ಟ ಗುರಿಯಿಲ್ಲದೆ, ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಟ ಹಾಕಲು ಮಾಡಿದ ಕಾರ್ಯಾಚರಣೆಗಳು ಅಮೇರಿಕಾ ಮೇಲೆಯೇ ದುಷ್ಪರಿಣಾಮ ಬೀರಲು ಆರಂಭಿಸಿದವು. ಅಮೇರಿಕಾ ಸೇನೆ ಹಲವು ವರ್ಷಗಳ ನಂತರ ಅಫ್ಘಾನಿಸ್ತಾನ ಬಿಟ್ಟು ಹೋಗುತ್ತದೆ ಎಂಬುದನ್ನು ತಿಳಿದ ತಾಲಿಬಾನ್, ಹಂತ ಹಂತವಾಗಿ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತ ಹೋಯಿತು. ಪಾಕಿಸ್ತಾನ ಕೂಡ ತೆರೆ ಮರೆಯಲ್ಲಿ ತಾಲಿಬಾನಿಗರಿಗೆ ಸಹಾಯಹಸ್ತ ನೀಡಲು ಆರಂಭಿಸಿದ್ದು ಅಮೇರಿಕಾ ಹೋರಾಟಕ್ಕೆ ತೀವ್ರ ಹಿನ್ನಡೆಯನ್ನು ಉಂಟುಮಾಡಿತು. 

ಟ್ರಂಪ್ ಅಧ್ಯಕ್ಷತೆಯಲ್ಲಿ ಅಫ್ಘಾನಿಸ್ತಾನದ ಆಂತರಿಕ ವಿಷಯಗಳ ಮೇಲೆ ರಷ್ಯಾ, ಪಾಕಿಸ್ತಾನ, ಭಾರತ ಮುಂತಾದ ನೆರೆ ರಾಷ್ಟ್ರಗಳೇ ತಲೆ ಕೆಡಿಸಿಕೊಳ್ಳದಿರುವಾಗ ಅಮೇರಿಕಾದಿಂದ ೬೦೦೦ ಮೈಲಿಯಷ್ಟು ದೂರದಲ್ಲಿರುವ ದೇಶದ ಬಗ್ಗೆ ನಾವ್ಯಾಕೆ ಚಿಂತೆ ಮಾಡಬೇಕು ಎಂಬ ವಾದಮಂಡನೆ ಆರಂಭವಾಯಿತು. ಜಿನೇವಾ ಒಪ್ಪಂದದ ಪ್ರಕಾರ ಯುದ್ಧಕೈದಿಗಳನ್ನು ನಡೆಸಿಕೊಳ್ಳವುದನ್ನು ಸಹ ಅಮೇರಿಕಾ ಪಾಲಿಸಲಿಲ್ಲ, ಏಕೆಂದರೆ ಅಮೇರಿಕಾ ಯಾವುದೇ ದೇಶದ ಮೇಲೆ ಯುದ್ಧ ಮಾಡಲಿಲ್ಲ. ಬದಲಾಗಿ ಭಯೋತ್ಪಾದನೆಯ ನಂಟಿರುವ ಹಾಗು ಅಮೆರಿಕಾದ ಮೇಲೆ ಮತ್ತೊಂದು ೯/೧೧ ಅಂತಹ ದಾಳಿ ಆಗದಂತೆ ತಡೆಗಟ್ಟುವ ಸಲುವಾಗಿ ಯುದ್ಧ ಸಾರಿತ್ತು. ನಿರ್ದಿಷ್ಟ ಗುರಿಯಿಲ್ಲದೆ ಹಣ ಹಾಗು ಆಧುನಿಕ ಶಸ್ತ್ರಾಸ್ತ್ರಗಳ ಮೂಲಕ ಉಗ್ರರನ್ನು ನಿರ್ನಾಮ ಮಾಡುವುದಷ್ಟೇ ತನ್ನ ಗುರಿಯಾಗಿತ್ತು. ಇದು ಹಲವಾರು ಗೊಂದಲಗಳಿಗೆ ಹಾಗು ತಪ್ಪು ನಿರ್ಧಾರಗಳಿಗೆ ಕಾರಣವಾಯಿತು. ಅಮೇರಿಕಾ ಸೇನೆ ಹಿಂತಿರುಗಿದ ಮೇಲೆ ಮುಂದೇನು ಎಂಬ ಯೋಚನೆಯು ಸಹ ಅಮೆರಿಕಾವನ್ನು ಕಾಡಲಾರಂಭಿಸಿತು. ಈ ಹೊತ್ತಿಗಾಗಲೇ ಸುಮಾರು ಎರಡು ಟ್ರಿಲಿಯನ್ ಡಾಲರ್ ಹಣವನ್ನು ಅಫ್ಘಾನಿಸ್ತಾನದ ಯುದ್ಧಕ್ಕೆ ಅಮೇರಿಕಾ ಖರ್ಚು ಮಾಡಿತ್ತು. 

ಒಂದೆಡೆ ಅಫ್ಘಾನಿಸ್ತಾನದಲ್ಲಿ ಅಮೇರಿಕಾ ಅಫ್ಘಾನ್ನರ ಮಿಲಿಟರಿ ಪಡೆ ಕಟ್ಟಿ ತರಬೇತಿ ನೀಡುತ್ತಿದ್ದರೆ ಇನ್ನೊಂದೆಡೆ ಅಮೇರಿಕಾ ಸರ್ಕಾರ ಹಲವಾರು ತಾಲಿಬಾನ್ ಮುಖಂಡರನ್ನು ಒಳಗೊಂಡವರೊಂದಿಗೆ ಸಭೆ ನಡೆಸಿ ಹಲವು ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿತ್ತು. ಈ ಸಭೆಯಲ್ಲಿ ಅಫ್ಘಾನಿಸ್ತಾನದ ಪ್ರಮುಖ ಮಹಿಳಾ ರಾಜಕಾರಣಿ ಹಿಂದಿನ ದಿನದ ಗುಂಡೇಟಿನಿಂದ ಭಾಗವಹಿಸಲು ಆಗಿರಲಿಲ್ಲ. ಈ ಸಭೆ ಮುಗಿದ ನಂತರ ತಾಲಿಬಾನ್ ತನ್ನ ವಿರೋಧಿಗಳನ್ನು ಒಬ್ಬಬ್ಬರಾಗಿ ಅಟ್ಟಾಡಿಸಿ ಗುಂಡು ಹೊಡೆದು ಪ್ರತೀಕಾರ ತೀರಿಸಿಕೊಳ್ಳಲು ಆರಂಭಿಸಿತು. ಬೈಡೆನ್ ಅಧಿಕಾರಕ್ಕೆ ಬಂದ ನಂತರ ಅಮೇರಿಕಾ ಸಂಪೂರ್ಣವಾಗಿ ಅಫ್ಘಾನಿಸ್ತಾನದಿಂದ ಹಿಂತಿರುಗಿತು. ಸೆಪ್ಟೆಂಬರ್ ೧೧ ೨೦೨೧ಕ್ಕೆ ಸರಿಯಾಗಿ ಇಪ್ಪತ್ತು ವರ್ಷ ಆಗುತ್ತದೆ. ಅಮೆರಿಕ ಯಾವ ಉದ್ದೇಶಗಳನ್ನು ಇಟ್ಟುಕೊಂಡು ಅಫ್ಘಾನಿಸ್ತಾನಕ್ಕೆ ಕಾಲಿಟ್ಟಿತು ಎಂಬುದನ್ನು ನೆನಪಿಸಿಕೊಂಡರೆ ಆ ಉದ್ದೇಶ ಸಂಪೂರ್ಣವಾಗಿ ಉಲ್ಟಾ ಹೊಡೆದಿರುವುದು ನಮಗೆ ಅರ್ಥವಾಗುತ್ತದೆ. ೨೦೦೧ಕ್ಕೆ ಹೋಲಿಸಿದರೆ ಜಾಗತಿಕ ಮಟ್ಟದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿವೆ. ನೆರೆ ರಾಷ್ಟ್ರಗಳಿಗೆ ಇದು ಹೆಚ್ಚಿನ ತೊಂದರೆಯನ್ನುಂಟುಮಾಡುವ ಸಾಧ್ಯತೆಯಿದೆ. 

ಇಪ್ಪತ್ತು ವರ್ಷಗಳ ಹೋರಾಟದ ಫಲವಾಗಿ ದೊರೆತಿದ್ದ ಮಹಿಳೆಯರ ಹಕ್ಕುಗಳನ್ನು ತಾಲಿಬಾನ್ ಆಡಳಿತ ಬುಡಮೇಲಾಗಿಸಿದೆ. ಎಂದೂ ಕಾಣದ ಭೀಕರ ಹಾಗು ಅಮಾನವೀಯ ಘಟನೆಗಳು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿವೆ. ವಿಶ್ವಸಂಸ್ಥೆ ಹಾಗು ಇತರ ಪ್ರಬಲ ರಾಷ್ಟ್ರಗಳು ಸುಮ್ಮನೆ ಕೈಕಟ್ಟಿ ಕೂತಿವೆ. ಮಹಿಳೆಯರ ಹಾಗು ಮಕ್ಕಳ ಹಕ್ಕುಗಳ ರಕ್ಷಣೆಗೆ ಸ್ಥಾಪಿತವಾದ ಸಂಸ್ಥೆಗಳು ಸಹ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಬೇಸರದ ನೋಟವನ್ನು ಅಫ್ಘಾನಿಸ್ತಾನದತ್ತ ಬೀರುತ್ತಿವೆ. ಇದೆಲ್ಲದರ ನಡುವೆ ಅಂತಹ ಅಮಾನವೀಯ ಕೃತ್ಯಗಳನ್ನು ತೋರಿಸಿ ನಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ಜಗತ್ತಿನ ಯಾವುದೇ ಭಾಗದಲ್ಲಿ ಮಹಿಳೆಯರ ಹಕ್ಕುಗಳು ಹಾಗು ಸುರಕ್ಷತೆಗೆ ಧಕ್ಕೆಯಾದರೆ ಅದಕ್ಕೆ ಕಾರಣವಾದವರು ಇಡೀ ಜಗತ್ತಿನ ಮೇಲೆ ದುಷ್ಪರಿಣಾಮಗಳನ್ನು ಬೀರುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂಬ ಹಿಲರಿ ಕ್ಲಿಂಟನ್ ಅವರ ಮಾತು ನಿನ್ನೆ ನೋಡಿದೆ. ಮಾನವೀಯತೆ ಇಲ್ಲದ ಯಾರೇ ಅಧಿಕಾರಕ್ಕೆ ಬಂದರು ಸಹ ಅಲ್ಲಿನ ಜನರು ಅನುಭವಿಸುವ ನರಕ ಯಾತನೆಗೆ ಅಫ್ಘಾನಿಸ್ತಾನ ಜ್ವಲಂತ ಉದಾಹರಣೆಯಾಗಿದೆ.

ಪ್ರೀತಿಯಿಂದ ಮಾತ್ರ ಜಗತ್ತನ್ನು ಬದಲಾಯಿಸಲು ಸಾಧ್ಯ. ಆಧುನಿಕ ಶಸ್ತ್ರಾಸ್ತ್ರಗಳ ಮೂಲಕ ಶಾಂತಿಸ್ಥಾಪನೆ ಮಾಡಿದರೂ ಸಹ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುತ್ತದೆ. ಅಮೆರಿಕಾದಂತಹ ಬಲಿಷ್ಠ ರಾಷ್ಟ್ರವೇ ೨೦ ವರ್ಷಗಳ ದೀರ್ಘ ಯುದ್ಧದ ನಂತರ ಹಿಂತಿರುಗಿರಬೇಕಾದ ಪರಿಸ್ಥಿತಿ ಬಂತೆಂದರೆ ಅದು ಕೇವಲ ಹಣ ಹಾಗು ಯುದ್ಧಗಳಿಂದ ಎಲ್ಲವನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದೇ ಅರ್ಥ. ಭಯೋತ್ಪಾದಕರ ಮೇಲಿನ ದ್ವೇಷವು ಅಫ್ಘಾನ್ನರ ಮೇಲಿನ ಪ್ರೀತಿಗಿಂತ ಹೆಚ್ಚಾಗಿತ್ತು. ಅಲ್ಲಿನ ಜನರ ಜೀವನದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಯುದ್ಧಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದೆ ಅಮೆರಿಕಕ್ಕೆ ಹಿನ್ನಡೆಯಾಗಲು ಪ್ರಮುಖ ಕಾರಣ ಅನ್ನಿಸುತ್ತದೆ. ಅಫ್ಘಾನಿಸ್ತಾನದಲ್ಲಿ ಅರಾಜಕತೆ ಕೊನೆಗೊಂಡು ಶಾಂತಿ ಸ್ಥಾಪನೆಯಾಗಲಿ ಹಾಗು ಭಯೋತ್ಪಾದನೆಯ ವಿರುದ್ಧ ಸಂಪೂರ್ಣ ವಿಶ್ವದ ರಾಷ್ಟ್ರಗಳು ಒಂದಾಗಿ ಹೋರಾಡಬೇಕಾದ ಅವಶ್ಯಕತೆ ಸಧ್ಯಕ್ಕೆ ಇದೆ. ಭಾವನೆಗಳ ಆಧಾರದ ಮೇಲೆ  ದೊಡ್ಡ ರಾಷ್ಟ್ರಗಳು ತೆಗೆದುಕೊಳ್ಳುವ ನಿರ್ಧಾರಗಳು ಹಿಂದುಳಿದ ಹಾಗು ಮುಂದುವರೆಯುತ್ತಿರುವ ರಾಷ್ಟ್ರ್ರಗಳ ಮೇಲೆ ಬೀರುವ ಪ್ರಭಾವ ಎಂತದ್ದು ಎಂಬುದನ್ನು ಈ ಘಟನೆಗಳನ್ನು ಅವಲೋಕಿಸಿದರೆ ತಿಳಿಯುತ್ತದೆ. 

ಕಾಮೆಂಟ್‌ಗಳು

- Follow us on

- Google Search