ಗಣಪತಿ ಹಬ್ಬ

ಬಹಳ ಹಿಂದಿನ ನೆನಪುಗಳೆಂದರೆ ಇದ್ದಕ್ಕಿದಂತೆ ನಮ್ಮ ಹಳ್ಳಿಯಲ್ಲಿ ಜೋರಾಗಿ ಹಾಡು ಹಾಕುತ್ತಿದ್ದ ದಿನಗಳು. ಗಣೇಶನ ಹಬ್ಬ ಬಂತೆಂದರೆ ಅಂಗನವಾಡಿ ಪಕ್ಕದಲ್ಲಿಯೇ ಶಾಮಿಯಾನ ಹಾಕಿ ನಮ್ಮ ಊರಿನಲ್ಲಿ ಗಣಪತಿ ಕೂರಿಸುತ್ತಿದ್ದರು. ಊರಿನಲ್ಲಿ ಬಹಳ ಸಂಭ್ರಮ, ಎಲ್ಲರು ಒಂದಲ್ಲ ಒಂದು ರೀತಿಯ ಕೆಲಸದಲ್ಲಿ ಮಗ್ನರಾಗುತ್ತಿದ್ದರು. ಪೂಜೆಯೊಂದಿಗೆ ಕಬ್ಬಡಿ ಆಡಿಸುವುದು, ಜಾರುಕಂಬ ಹತ್ತುವ ಸ್ಪರ್ಧೆ ಹೀಗೆ ಹಲವಾರು ಆಟೋಟಗಳು ಸಹ ಇರುತ್ತಿದ್ದವು. ಎಲ್ಲದಕ್ಕಿಂತ ನಗು ತರಿಸುವ ವಿಷಯವೆಂದರೆ ನಮಗೆ ಗೊತ್ತಿರುವ ಮಾಮೂಲಿ ವ್ಯಕ್ತಿಗಳೇ ತಮಗೆ ತಾವೇ ವಿಶೇಷ ಜವಾಬ್ದಾರಿಗಳನ್ನು ವಹಿಸಿಕೊಂಡು ಗತ್ತಿನಿಂದ ಓಡಾಡುವ ದೃಶ್ಯ. ಬಾಲ್ಯದ ಸವಿನೆನಪುಗಳನ್ನು ಮೆಲಕು ಹಾಕಿಸುವ ಯಾವುದೇ ಹಬ್ಬವಾದರೂ ನನಗೆ ಬಹಳ ಇಷ್ಟ. 

ಪೇಟೆಯಲ್ಲಿನ ಗಣೇಶ ಮೂರ್ತಿಗಳಿಗೆ ಮೊದಲು ಪೂಜೆ ಮಾಡಿ ನಂತರ ಗಡಿಬಿಡಿಯಿಂದ ತಡವಾಗಿ ಆಫೀಸಿನ ಗಣಪನ ಪೂಜೆಗೆ ಬರುವ ಅರ್ಚರಕರನ್ನು ಕಂಡರೆ ಕೆಲವರಿಗೆ ಸ್ವಲ್ಪ ಅಸಮಾಧಾನ. ಬೆಳಿಗ್ಗೆಯೇ ಎದ್ದು ಸುತ್ತ ಮುತ್ತ ಸ್ವಚ್ಛಗೊಳಿಸಿ, ಬೇಕಾದ ವಸ್ತುಗಳ ಸಿದ್ಧತೆ ಮಾಡಿ, ಗಣಪನ ಪುಟ್ಟ ಗುಡಿಯನ್ನು ಅಲಂಕೃತಗೊಳಿಸಿ  ಅರ್ಚಕರಿಗೆ ಕಾಯುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ನಿನ್ನೆಯೂ ಹೀಗೆ ಆಯಿತು. ಯಾರೋ ಒಬ್ಬರು ಭಟ್ರು ಬಂದ ತಕ್ಷಣ ಜೋರಾಗಿ ಹೇಳೇ ಬಿಟ್ಟರು, "ಸ್ವಲ್ಪ ಬೇಗ ಬಂದಿದ್ರೆ ಬಹಳ ಚೆನ್ನಾಗಿರುತಿತ್ತು" ಎಂದು. ಪಾಪ ಆ ಭಟ್ರು ನಮಸ್ಕಾರವನ್ನು ಸ್ವಾಗತದ ರೂಪದಲ್ಲಿ ನಿರೀಕ್ಷಣೆ ಮಾಡುತ್ತಿದ್ದರೇನೋ. ಒಂದೆರಡು ಕ್ಷಣ ಸುಮ್ಮನಿದ್ದು, "ಪೇಟೆಯವರು ಹೇಳಿದ ಸಮಯಕ್ಕೆ ತಯಾರಿ ಮಾಡಿರಲಿಲ್ಲ, ಅಲ್ಲೇ ಕಾದು ಮುಕ್ಕಾಲು ಗಂಟೆ ಹೋಯ್ತು" ಎಂಬ ಉತ್ತರ ನೀಡಿದರು. 

ಬಹಳ ಚಿಕ್ಕವನಿದ್ದಾಗ ನನಗೆ ಗಣಪತಿಯ ಮೂರ್ತಿಯನ್ನು ನೀರಿಗೆ ಬಿಡುವ ವಿಷಯ ಗೊತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿ ಪೂಜೆ ಮುಗಿದ ನಂತರ ಹಾಗೆಯೆ ಇಟ್ಟಿರುತ್ತಾರೆ, ಮುಂದಿನ ವರ್ಷ ಈ ಸಮಯ ಬಂದಾಗ ಮತ್ತೆ ತಂದಿಡುತ್ತಾರೆ ಎಂಬುದಾಗಿಯೇ ದೃಢವಾಗಿ ನಂಬಿದ್ದೆ. ಯಾರೋ ಹೀಗೆ ಗಣಪತಿ ಇದೆ ಟ್ಯಾಂಕಿಗೆ ಬಿಡುತ್ತಾರೆ ಎಂದಾಗ ನನಗೆ ಅರ್ಥವೇ ಆಗಿರಲಿಲ್ಲ. ಯಾವಾಗ ಅಂತ ಕೇಳಿದ್ದೆ? ಅವನು ಹೇಳಿದಾಗ ಮತ್ತೆ ಯಾವಾಗ ವಾಪಸ್ಸು ತಗೊಂಡು ಹೋಗುತ್ತಾರೆ ಅಂತ ಕೇಳಿದ್ದೆ. ಅವನು ಅದುನ್ನ ತಗೊಂಡು ಹೋಗಲ್ಲ ಅಲ್ಲೇ ಇರುತ್ತೆ ಅಂದಿದ್ದ. ನಾನು ಹಾಗಾದ್ರೆ ಆ ನೀರಿನ ಟ್ಯಾಂಕಿಯಲ್ಲಿ ತುಂಬಾ ಗಣಪತಿಗಳು ಇರುತ್ತವೆ ಅಲ್ವ ಅಂತ ಕೇಳಿದಾಗ ಅವನು ಹೌದು ಇರ್ತವೆ ಅಂದಿದ್ದ. ನಮ್ಮಿಬ್ಬರಿಗೂ ನೀರಿನಲ್ಲಿ ಆ ಮೂರ್ತಿಗಳು ಕರಗುವ ವಿಷಯ ಗೊತ್ತಿರಲಿಲ್ಲ. ಆ ಸಮಯದಲ್ಲಿ ಒಂದು ಗಣಪತಿ ಈ ಟ್ಯಾಂಕಿಯಿಂದ ನಮ್ಮನೆಗೆ ತೆಗೆಂದುಕೊಂಡು ಹೋಗುವ ವಿಚಾರವು ಹೊಳೆದಿತ್ತು. ಆದರೆ, ಅದನ್ನು ಕಾರ್ಯಗತಗೊಳಿಸುವ ಯಾವುದೇ ಸಂದರ್ಭ ಕೂಡಿಬರಲಿಲ್ಲ. 

ಒಮ್ಮೆ ಹೀಗೆಯೇ ರಾತ್ರಿ ಒಬ್ಬರೊಂದಿಗೆ ಗಣಪತಿ ನೋಡಲು ನಡೆದುಕೊಂಡು ಹೋಗುತ್ತಿದ್ದಾಗ ನಾನು ಚಂದ್ರನನ್ನು ನೋಡಿ, ಅವರಿಗೂ ಅಲ್ನೋಡಿ ಚಂದ್ರ ಎಂದು ಹೇಳಿ ಅವರೂ ಸಹ ನೋಡಿದ ಮೇಲೆ ನನಗೆ ಬೈದಿದ್ದರು. ಹಬ್ಬದ ದಿನ ಚಂದ್ರ ನೋಡಬಾರದೆಂದು. ಇನ್ನೊಮ್ಮೆ ಕಾಲೇಜಿನಲ್ಲಿ ವಿಚಿತ್ರ ಆಸಾಮಿಯೊಬ್ಬ ದಿನವೂ ಚಂದ್ರ ನೋಡುತ್ತಿದ್ದ. ಯಾಕೆಂದು ಕೇಳಿದಾಗ, ಗಣಪತಿ ಹಬ್ಬದ ದಿನ ಚಂದ್ರ ನೋಡಿದ್ದೇ, ಅದಕ್ಕೆ ಪರಿಹಾರವಾಗಿ ಯಾವುದೊ ಒಂದು ನಿರ್ದಿಷ್ಟ ದಿನ ಚಂದ್ರನನ್ನು ನೋಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ಹೇಳಿದ್ದ. ಆ ನಿರ್ದಿಷ್ಟ ದೋಷ ನಿವಾರಣೆಯಾಗುವ ದಿನದ ಸರಿಯಾದ ಮಾಹಿತಿ ಇಲ್ಲವಾದ್ದರಿಂದ ಪ್ರತಿದಿನ ಚಂದ್ರನನ್ನು ನೋಡುವ ಯೋಜನೆ ಕೈಗೊಂಡಿದ್ದ ಅವನು!


ನಮ್ಮ ಪೇಟೆಯಲ್ಲಿಯೂ ಬಹಳ ದೊಡ್ಡ ಗಣಪತಿ ಇಡುತ್ತಿದ್ದರು. ಮೊದಲು ಅದನ್ನೊಂದು ವೆಂಕಟೇಶ್ವರ ದೇವಸ್ಥಾನದಲ್ಲಿ ಇಡುತ್ತಿದ್ದರು. ನಂತರ ಅದನ್ನು ನಮ್ಮ ಶಾಲೆಯಲ್ಲಿ ಇಡಲು ಆರಂಭಿಸಿದರು. ಅಷ್ಟು ದೊಡ್ಡ ಗಣಪತಿಯನ್ನು ಮೊದಲು ನಮ್ಮ ಶಾಲೆಯಲ್ಲೇ ನೋಡಿದ್ದು. ಆನೆಯ ಎತ್ತರವಿರುವ ಈ ಗಣಪತಿಯನ್ನು ಯಾವ ಟ್ಯಾಂಕಿಗೆ ಬಿಡುತ್ತಾರೆ ಅಂತ ಯಾರಿಗೋ ಕೇಳಿದಾಗ, ಇದನ್ನು ಭದ್ರಾನದಿಗೆ ಬಿಡುತ್ತಾರೆ ಎಂದಾಗ ಸ್ವಲ್ಪ ಆಶ್ಚರ್ಯವಾಗಿತ್ತು. ಆ ಗಣಪತಿಯ ಮುಖದಲ್ಲಿ ಕಾಣುವ ಕಾಂತಿ, ಸೌಂದರ್ಯ ಹಾಗು ಗಂಭೀರತೆ ಅವನನ್ನು ತೆಗೆದುಕೊಂಡು ಹೋಗಿ ಆ ತುಂಬಿ ಹರಿಯುವ ಭದ್ರಾ ನದಿಗೆ ಬಿಡುತ್ತಾರೆಂಬ ವಿಷಯ ತಿಳಿದರೆ ಇರುತ್ತದೆಯೇ ಎಂಬ ಅನುಮಾನವೂ ಸಹ ಕೆಲವೊಮ್ಮೆ ಮೂಡುತ್ತದೆ. 

ನಮ್ಮ ಸಾಕಷ್ಟು ದೇವರುಗಳು ಫಿಟ್ ಅಂಡ್ ಫೈನ್ ಆಗಿರುವ ಸಂದರ್ಭದಲ್ಲಿ ನನ್ನಂತಹ ಡೊಳ್ಳುಹೊಟ್ಟೆಯ ಜನರಿಗೆ ಗಣೇಶನೇ ಸ್ಫೂರ್ತಿ. ಬಹುಷಃ ಗಣೇಶ ಆಡಳಿತಕ್ಕೆ ಸಂಬಂಧಪಟ್ಟ ಡಿಪಾರ್ಟ್ಮೆಂಟ್ಗೆ ಹೆಡ್ ಅನ್ನಿಸುತ್ತದೆ. ಯಾವುದೇ ಕೆಲಸದ ಆರಂಭದಲ್ಲಿ ಆಡಳಿತ ವ್ಯವಸ್ಥೆಯ ಮೇಲಾಧಿಕಾರಿಯ ಒಪ್ಪಿಗೆ ಬಹಳ ಮುಖ್ಯ. ನನಗೆ ಮತ್ತೊಂದು ಬಹಳ ಇಷ್ಟವಾದ ಅಂಶವೆಂದರೆ ಹೆಚ್ಚಿನ ಕಡೆಗಳಲ್ಲಿ ಗಣೇಶ ಕೂತುಕೊಂಡಿರುತ್ತಾನೆ. ಗಣೇಶನ ಪೌರಾಣಿಕ ಕಥೆಗಳು ಏನೇ ಇರಲಿ, ಇಲಿ ತನ್ನ ವಾಹನವಾಗಿದ್ದರು ಇಂದಿಗೂ ಸಾಕಷ್ಟು ಕಾರುಗಳ ಒಳಗೆ ಪುಟ್ಟ ಗಣೇಶ ಇರುತ್ತಾನೆ. 

ನಿನ್ನೆ ಭಟ್ರು ಪೂಜೆ ಮಾಡುವ ಸಂದರ್ಭದಲ್ಲಿ ಕೆಲವರು ಈ ಭಟ್ರು ಮೊದಲು ಬರುತ್ತಾ ಇದ್ರಲ್ಲ, ಅವರ ತರಹ ಅಲ್ಲ ಬಹಳ ಗಟ್ಟಿಯಾಗಿ ಮಂತ್ರ ಹೇಳುತ್ತಾರೆ ಎಂದು ಹೊಗಳುತ್ತಿದ್ದರು. ಪೂಜೆಗೆ ನಿಂತಿರುವ ಭಕ್ತಾದಿಗಳ ಏಕಾಗ್ರತೆ ಮಂತ್ರದ ಶಬ್ದಕ್ಕೆ ನೇರಾನುಪಾತದಲ್ಲಿರುತ್ತದೆ ಎಂಬುದನ್ನು ನಾನು ಹಲವಾರು ಬಾರಿ ಗಮನಿಸಿದ್ದೇನೆ. ಸುಮಾರು ಎಂಟು ವರ್ಷಗಳ ನಂತರ ಮನೆಯಲ್ಲಿ ಈ ಹಬ್ಬಕ್ಕೆ ಬಂದಿರುವುದು.  ಹೀಗಾಗಿ ಪರಿಚಯದವರು ಯಾರಾದರೂ ಕಂಡು ಏನಯ್ಯ ಗುರುತೇ ಸಿಗಲ್ವಲ್ಲ ನೋಡಿದ್ರೆ ಅಂತಾರೆ. ನಿನ್ನೆಯೂ ಭಟ್ರು ಜೋರಾಗಿ ಮಂತ್ರ  ಹೇಳುತ್ತಾ ಭಕ್ತಾದಿಗಳನ್ನು ಭಕ್ತಿಯಲ್ಲಿ ಮುಳುಗಿಸುವ ಸಂದರ್ಭದಲ್ಲಿ ಒಬ್ಬ ಪುಣ್ಯಾತ್ಮ ಕಾಡಿನ ನಿಶ್ಶಬ್ದಕ್ಕೆ ಕಲ್ಲು ಹೊಡೆದಂತೆ ಜೋರಾಗಿ ನನ್ನ ಬೆನ್ನು ತಟ್ಟಿ ಭಟ್ರಿಗಿಂತ ಗಟ್ಟಿ ಧ್ವನಿಯಲ್ಲಿ ಯಾವಾಗ ಬಂದಿದ್ದು ಗುರ್ತೇ ಸಿಗಲ್ಲ ಅಂದರು. ಸುತ್ತ ಮುತ್ತ ನಿಂತವರೆಲ್ಲ ನನ್ನೆಡೆಗೆ ನೋಡಿದರು. ಗುಂಪಿನಲ್ಲಿದ್ದ ಮತ್ತೊಬ್ಬರು ಹೌದು ಗುರುತೇ ಸಿಗಲ್ಲ, ಈ  ಕಡೆ ಬರಲೂ ಇಲ್ಲ ಎಂದು ಸೇರಿಸಿದರು. ನನ್ನ ಪಕ್ಕದಲ್ಲೇ ನಿಂತು ಗಟ್ಟಿಯಾಗಿ ಕೂಗಿದ ಧ್ವನಿ ಕೇಳಿ ಕಂಗಾಲಾಗಿದ್ದ ನಾನು "ಚೆನ್ನಾಗಿದ್ದೀರ ?" ಅಂತ ಕೇಳಿದೆ. ನನ್ನ ನಿಧಾನದ ಧ್ವನಿ ಕೇಳಿ, ಅವರೂ ಮೆತ್ತನೆಯ ಧ್ವನಿಯಲ್ಲಿ ಹಾ ಅರಾಮಿದ್ದಿನಿ ಎಂದರು. 

ನಮ್ಮ ಆಫೀಸಿನಲ್ಲಿರುವ ಗಣಪತಿ 

ಯಾರೋ ಪುಣ್ಯಾತ್ಮ ಜಾಗಂಟೆ ಮಾತ್ರ ತಂದು ಬಡಿಯುವ ಕೋಲನ್ನೇ ತಂದಿರಲಿಲ್ಲ. ಅಲ್ಲೇ ಇದ್ದ ಮರದ ಚಿಕ್ಕ ರೆಂಬೆಯಿಂದ ಕಡಿದು ಸಿದ್ಧಪಡಿಸಿದರು. ಆ ಕೋಲನ್ನು ಕಂಡ ಹಲವರು ಅದರ ಉದ್ದ ಹಾಗು ದಪ್ಪದ ಮೇಲೆ ಕಾಮೆಂಟ್ ಮಾಡಲು ಮುಂದಾದರು. ಇದ್ಯಾವುದನ್ನು ಲೆಕ್ಕಿಸದೆ ಜಾಗಂಟೆ ತೆಗೆದುಕೊಂಡು ಜೋರಾಗಿ ಬಡಿಯಲು ಆರಂಭಿಸಿದ ಅವನು. ಈ ಶಬ್ಧವನ್ನು ಕೇಳಿ ಕೆಲವರು ಮನೆಯಿಂದ ಹೊರಟು ಬರಲಾರಂಭಿಸಿದರು. ಹೀಗೆ ಆಫೀಸಿನ ಗಣೇಶನ ಪೂಜೆ ಮುಗಿಯಿತು. 

ಇತ್ತೀಚಿಗೆ ಸ್ವಲ್ಪ ದಪ್ಪ ಆಗಿರುವುದು ಹಲವು ವಿಚಿತ್ರ ಸನ್ನಿವೇಶಗಳಿಗೆ ಎದುರುಮಾಡಿದೆ ನನ್ನನ್ನು. ಹಾಗೆಯೆ ದೂರದಿಂದ ನಡೆದುಕೊಂಡು ಬರುವಾಗಲೇ ಗುರುತು ಸಿಕ್ಕಿದರೂ ಬೇರೆಯವರೊಂದಿಗೆ ಹೇಳಿಕೊಂಡು ಕಿಸಿಕಿಸಿ ನಗುವವರನ್ನು ಕಂಡರೆ ಇಷ್ಟು ವಯಸ್ಸಾದರೂ ಚೈಲ್ಡ್ ಬುದ್ಧಿ ಬಿಟ್ಟಿಲ್ಲವಲ್ಲ ಅನ್ನಿಸುತ್ತದೆ. ಬಹುಷಃ ಈ ರೀತಿಯ ಸಾಮಾಜಿಕ ಸಮಾರಂಭಗಳಲ್ಲಿ ಎಲ್ಲರೆದುರು ತಮ್ಮ ಇರುವಿಕೆಯನ್ನು ಸಾರಿ ಹೇಳುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುತ್ತದೆ. ಇದು ಅಂತಹುದೇ ಒಂದು ಗಿಮಿಕ್ ಅಷ್ಟೇ. ನನ್ನ ಶಾಲಾದಿನದ ಗೆಳೆಯರು ಯಾರು ಸಹ ಬಂದಿರಲಿಲ್ಲ. ಗಣಪತಿ ಹಬ್ಬಕ್ಕೆ ಬಹಳ ಖುಷಿಯಾಗಲು ನಮ್ಮ ಶಾಲೆಯು ಸಹ ಕಾರಣವಾಗಿತ್ತು, ಏಕೆಂದರೆ ನಮಗೆ ಹತ್ತು ದಿನಗಳ ರಜೆ ಸಿಗುತ್ತಿತ್ತು.

ನಂತರ ನಮ್ಮ ಹಳ್ಳಿಯ ಗಣಪತಿ ಇಡುವ ಸ್ಥಳಕ್ಕೆ ಹೋದೆ. ನಮ್ಮ ಊರಿನ ಜನರೆಲ್ಲರೂ ಒಟ್ಟಾಗಿ ಸೇರುವ ಹಬ್ಬವೆಂದರೆ ಇದೊಂದೇ. ಹಿಂದೆ ಇದ್ದ ಅಂಗನವಾಡಿಗೆ ಹಾಕಿದ್ದ ಶೀಟ್ಗಳು ಗಾಳಿಗೆ ಹಾರಿ ಹೋಗಿ ನಮ್ಮ ತೋಟದಲ್ಲಿ ಬಂದು ಬಿದ್ದಿವೆ. ಮಳೆಗೆ ಗೋಡೆ ಕುಸಿದು ಹೋಗಿದೆ. ಪಕ್ಕದಲ್ಲಿಯೇ ಗಣಪತಿ ಮಂಟಪವಿದೆ. ಹೊಸದಾಗಿ ಒಂದು ದೊಡ್ಡ ಸಭಾಮಂಟಪವನ್ನು ಕಟ್ಟಲಾಗಿದೆ. ಗಣೇಶನ ಮಂಟಪದ ಎದುರಿಗೆ ದೊಡ್ಡದಾದ ಸುಂದರ ರಂಗೋಲಿಯನ್ನು ಹಾಕಿದ್ದರು. ಎಂದಿನಂತೆ ಮೈಕ್ ಹಿಡಿದು ಭಕ್ತಾದಿಗಳಿಗೆ ಸೂಚನೆ ಕೊಡುತ್ತಿದ್ದರು. ಎಲ್ಲರೂ ತಮಗೆ ಬಹಳ ಮುಖ್ಯವಾದ ಕೆಲಸವಿದೆಯೆಂದೂ, ಒಂದು ದಿನದ ಮಟ್ಟಿಗೆ ಸಮಯ ಮಾಡಿಕೊಂಡು ಗಣಪತಿ ನೋಡಲು ಬಂದಿದ್ದೇವೆಂದು ತಾವು ಮಾಡುವ ಕೆಲಸದ ಮಹತ್ವವನ್ನು ಕೆಲವರಿಗೆ ತಿಳಿಸುತ್ತಿದ್ದರು. ಬೇರೆ ದಿನಗಳಲ್ಲಿ ಮನೆಯ ಬಳಿ ಓಡಾಡುವಾಗ ನೋಡಿದರು ನೋಡದಂತೆ ಹೋಗುವವರು ಗೌರವದಿಂದ ಸ್ವಾಗತ ಮಾಡುವುದನ್ನು ಕಂಡರೆ ಆಶ್ಚರ್ಯವೂ ಸ್ವಲ್ಪ ಅಂಜಿಕೆಯೂ ಆಗುತ್ತದೆ. 

ನಮ್ಮ ಊರಿನ ವಿದ್ಯಾಗಣಪತಿ 

ಬಾಲ್ಯದಲ್ಲಿ ಕಂಡಂತೆ ಅಲ್ಲಿದ್ದ ಹಲವರಲ್ಲಿ ಅತ್ಯಂತ ಉತ್ಸಾಹವಾಗಲಿ ಅಥವಾ ಸಂತೃಪ್ತಿಯಾಗಲಿ ಕಾಣಲಿಲ್ಲ. ಎಲ್ಲರು ತಮ್ಮ ಜೀವನದ ಯಾವುದೊ ಸಮಸ್ಯೆಗಳಲ್ಲಿ ಸಿಕ್ಕಿ ಹಾಕಿಕೊಂಡು ಅದರ ಬಗ್ಗೆ ದೀರ್ಘಚಿಂತನೆ ನಡೆಸುವವರಂತೆ ಕಾಣುತ್ತಿದ್ದರು. ಆಗ ಕಾಲೇಜು ಹುಡುಗರಾಗಿದ್ದವರು ಇಂದು ಮಕ್ಕಳನ್ನು ಎತ್ತಿಕೊಂಡು ಅವಕ್ಕೆ ಕುಂಕುಮ ಇಡಿಸುತ್ತಿದ್ದರು. ಒಂದೇ ದಿನದಲ್ಲಿ ಗಣಪತಿ ನೀರಿಗೆ ಬಿಡುವ ಯೋಚನೆಯು ಹಲವರನ್ನು ಚಿಂತೆಗೆ ದೂಡಿತ್ತು. ಸಭಾಮಂಟಪದ ವೇದಿಕೆಯಲ್ಲಿ ಊರಿನ ಮಕ್ಕಳೆಲ್ಲ ತಮ್ಮ ಆಟ ಶುರು ಮಾಡಿಕೊಂಡಿದ್ದರು. ಭಟ್ಟರ ಮಂತ್ರಕ್ಕಿಂತಲೂ ಜೋರಾಗಿ ಆಡುವ ಮಕ್ಕಳು ಕೇಕೆ ಹಾಕುತ್ತಿದ್ದರು. ಗಣೇಶ ಮಾತ್ರ ನಸುನಗುತ್ತಾ ಕೂತಿದ್ದ. 

ಕಾಮೆಂಟ್‌ಗಳು

- Follow us on

- Google Search