ಹೆಸರಾಂತ ಟಿವಿ ಸರಣಿ: Peaky Blinders

ಸಾಕಷ್ಟು ಜನಮನ್ನಣೆ ಗಳಿಸಿರುವ ಹೆಸರಾಂತ ಟಿವಿ ಸರಣಿಗಳ ಪಟ್ಟಿಯಲ್ಲಿ Peaky Blinders ಕೂಡ ಸೇರಿರುತ್ತದೆ. ಈ ಸರಣಿ ಇತಿಹಾಸವನ್ನು ಮರುಸೃಷ್ಟಿ ಮಾಡುವುದರೊಂದಿಗೆ ತನ್ನದೇ ಸೃಜನಾತ್ಮಕ ಶೈಲಿಯನ್ನು ಹೊಂದಿದೆ. ಫ್ರಾನ್ಸ್ ದೇಶಕ್ಕೆ ಯುದ್ಧಕ್ಕೆ ಹೋಗಿ ವಾಪಸ್ಸಾದರೂ, ಯುದ್ಧದ ಕರಾಳ ಅನುಭವಗಳು ಅಣ್ಣ ತಮ್ಮಂದಿರ ಮನದಾಳದಲ್ಲಿ ತೊಳಲಾಡುತ್ತಿರುತ್ತವೆ. ಸರಣಿಯ ಪ್ರಮುಖ ಪಾತ್ರ ತೋಮಸ್ ಶೆಲ್ಬಿ. ಟಾಮಿ ಎಂದು ತನ್ನವರಿಂದ ಕರೆಯಲ್ಪಡುವ ತೋಮಸ್ ಶೆಲ್ಬಿ ಒಬ್ಬ ಕೊಲೆಗಾರ, ದರೋಡೆಕೋರ, ಯುದ್ಧದಲ್ಲಿ ಹೋರಾಡಿ ಪದಕಗಳನ್ನು ಪಡೆದ ವೀರ. ತನ್ನ ಉದ್ಯಮವನ್ನು ಬೆಳೆಸಲು ಯಾವ ಸವಾಲಿಗೂ ಎದೆಯೊಡ್ಡಿ ಮುನ್ನುಗ್ಗುವ ಅದ್ಭುತ ಶಕ್ತಿ ಥಾಮಸ್ ಶೆಲ್ಬಿಯದು. 
  

ಸರಣಿಯ ದೃಶ್ಯಗಳ ಚಿತ್ರೀಕರಣ ಅಮೋಘವಾಗಿದೆ. ಬಹಳ ನಿಧಾನಕ್ಕೆ ಸಾಗುವ ಕಥೆಯಲ್ಲಿ ಬರುವ ಸಂಭಾಷಣೆಗಳು ಕೂಡ ಬಹಳ ಚೆನ್ನಾಗಿ ಮೂಡಿಬಂದಿವೆ. ಹೋದ ವರ್ಷ ನೋಡಲು ಆರಂಭಿಸಿ, ಒಂದು ಸೀಸನ್ಗೆ ನಿಲ್ಲಿಸಿ ಮತ್ತೆ ನೋಡುವ ಗೋಜಿಗೆ ಹೋಗಿರಲಿಲ್ಲ. ಈಗ ಸಾಕಷ್ಟು ಸಮಯ ದೊರಕ್ಕಿದ್ದರಿಂದ ಮತ್ತೊಮ್ಮೆ ಹೊಸತಾಗಿ ಶುರು ಮಾಡಿ ಮೂರು ಸೀಸನ್ ನೋಡಿ ಮುಗಿಸಿದೆ. ಕಥೆಯ ನೈಜತೆಯೇ ಒಂದು ರೀತಿಯ ಭಯವನ್ನು ಮನಸ್ಸಿನಲ್ಲಿ ಉಂಟುಮಾಡುತ್ತದೆ. ನಟನೆ ಅದ್ಭುತವಾಗಿದ್ದು, ಬೇರೆ ಸರಣಿಯ ದೃಶ್ಯಗಳಂತೆ ಕಂಡುಬಂದರೂ ಸಹ ಮನಸ್ಸಿಗೆ ನಾಟುವಂತೆ ನಿರ್ದೇಶನ ಮಾಡಲಾಗಿದೆ. ಕೆಲವೊಂದಷ್ಟು ಡೈಲಾಗ್ ಮಾತ್ರ ಎಂದಿಗೂ ಮರೆಯಲು ಸಾಧ್ಯವಿಲ್ಲ. 


ಥಾಮಸ್ ಶೆಲ್ಬಿಗೆ ಬೇಕಾದ ಸಹಾಯವನ್ನು ಪಡೆಯಲು ಯಾವಾಗಲು ಹೋರಾಟದ ದಾರಿಯನ್ನೇ ಹಿಡಿಯಬೇಕಾಗುತ್ತದೆ. ಯಾರೊಂದಿಗೆ ವಿರುದ್ಧವಾಗಿ ನಿಲ್ಲಬೇಕು ಎಂಬುದಷ್ಟೇ ಟಾಮಿಗೆ ಬಿಟ್ಟಿರುವ ನಿರ್ಧಾರ. ಮೇಲ್ನೋಟಕ್ಕೆ ಕ್ಲಾಸ್ ಆಗಿ ಕಾಣುವ ಥಾಮಸ್ ಶೆಲ್ಬಿ, ಪರಿಸ್ಥಿತಿ ಬಿಗಡಾಯಿಸಿದಾಗ ಬರಿಗೈಯಲ್ಲಿ ಶತ್ರುಗಳ ಪ್ರಾಣವನ್ನು ತೆಗೆಯಲು ಸಹ ಸಿದ್ಧನಾಗಿರುತ್ತಾನೆ. ಇಂಥದ್ದೊಂದು ಪಾತ್ರ ಕಥೆಯಲ್ಲಿದ್ದಾಗ, ಪ್ರತಿಯೊಂದು ಸನ್ನಿವೇಶವು ಜೀವ ಪಡೆಯುತ್ತದೆ. ಸಾಕಷ್ಟು ಸಮಯವಿದ್ದು, ಇಂಗ್ಲಿಷ್ ಟಿವಿ ಸರಣಿಗಳನ್ನು ನೋಡುವ ಆಸಕ್ತಿಯಿದ್ದಲ್ಲಿ ಈ ಸರಣಿಯನ್ನು ನೋಡಿ, ನಿಮಗೂ ಇಷ್ಟವಾಗಬಹುದು.  

ಕಾಮೆಂಟ್‌ಗಳು

- Follow us on

- Google Search