ಬಡವರು

ಇಂದಿನ ಜಗತ್ತಿನಲ್ಲಿ ಹಸಿವಾಗಿ ಊಟವಿಲ್ಲದೆ ಇರುವವರು, ವಿದ್ಯೆಯಿದ್ದು ಕೆಲಸ ಸಿಗದೇ ಇರುವವರು, ನ್ಯಾಯ ಸಿಗದೇ ಇರುವವರನ್ನು ಕಾಣಬಹುದು. ಆದರೆ, ಹುಟ್ಟಿನಿಂದ ಜಾತಿಯೊಂದು ಬೆನ್ನು ಹತ್ತಿದ ಬೇತಾಳನಂತೆ ನಮ್ಮೊಂದಿಗಿರುತ್ತದೆ. ಕೆಲವರಿಗೆ ಅದು ಹೆಮ್ಮೆಯ ವಿಚಾರ. ಚಂದ್ರ, ಮಂಗಳನ ಅಂಗಳಕ್ಕೆ ಕಾಲಿಡುವ ಹಂತದಲ್ಲಿರುವ ಜಗತ್ತಿನಲ್ಲಿ ಧರ್ಮ ಜಾತಿಗಳ ನಡುವಿನ ದ್ವೇಷ ನಮ್ಮ ಸಮಾಜದ ಸೌಂದರ್ಯವನ್ನು ಕಿತ್ತು ತಿನ್ನುತ್ತಿರುವುದು ಮಾತ್ರ ನಮ್ಮ ದೌರ್ಭಾಗ್ಯವೇ ಸರಿ. 

ಹಿಂದುಳಿದ ರಾಷ್ಟ್ರಗಳಿಗೆ ಸ್ವತಂತ್ರ ದೊರಕಿದಾಗ ಅಲ್ಲಿನ ಜನರೇ ಆ ದೇಶದ ಜನರನ್ನು ಶೋಷಿಸುವ ಹಾಗು ಭ್ರಷ್ಟಾಚಾರದ ಮೂಲಕ ಆರ್ಥಿಕತೆಯನ್ನು ಸಂಪೂರ್ಣವಾಗಿ ಬುಡಮೇಲಾಗಿಸುವ ದುರಂತದ ಘಟನೆಗಳನ್ನು ಇತಿಹಾಸದ ಪುಟಗಳನ್ನು ತಿರುವಿದಾಗ ಕಾಣಬಹುದು. ಬಡವರು ಮಾತ್ರ ನಿರಂತರವಾಗಿ ಕಷ್ಟದಲ್ಲೇ ಜೀವನ ಕಳೆಯುವಂತಾಗಿದೆ. 

ಬಡ ಜನರ ಕನಸುಗಳು ವಿಶ್ವದ ಶ್ರೀಮಂತನಾಗುವುದೋ ಅಥವಾ ಜನರನ್ನು ಆಳುವುದೋ ಆಗಿಲ್ಲ. ಮೂರು ಹೊತ್ತಿನ ಊಟ, ಇರಲೊಂದು ಮನೆ, ತನ್ನ ಕುಟುಂಬ ನಿರ್ವಹಿಸುವಷ್ಟು ವ್ಯವಸಾಯದ ಭೂಮಿ, ಮರ್ಯಾದೆಯುತವಾದ ಜೀವನ. ಇಷ್ಟೇ ಅವರ ಕನಸುಗಳು. ಬೆಳಗ್ಗಿನಿಂದ ರಾತ್ರಿಯವರೆಗೆ ಕತ್ತೆಯಂತೆ ದುಡಿದು ಸಹ, ಬಡತನದಲ್ಲೇ ಸಾಯುವುದು ಎಂದಾದರೆ ಅದು ನಮ್ಮ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕನ್ನಡಿ. ಮನುಷ್ಯ ಸಮಾಜ ಜೀವಿ. ಸಾಮಾಜಿಕ ಜೀವನವನ್ನು ಸ್ವಾಭಾವಿಕವಾಗಿ ಬಯಸುವವ. ನಾವು ಯಾವುದೊ ಸಿದ್ಧಾಂತಕ್ಕೋ ಅಥವಾ ನಂಬಿಕೆಗಳಿಗೋ ಬೆಲೆ ಕೊಡುತ್ತೇವೆಂದರೆ ಅದರಿಂದ ನಮ್ಮ ಜೀವನಕ್ಕೆ ಅಥವಾ ಸಮಾಜಕ್ಕೆ ಒಳಿತಾಗುತ್ತದೆ ಎಂದು. 

ಇಂದಿನ ದಿನಗಳಲ್ಲಿ ಅರ್ಧಸತ್ಯದ ಮಾತುಗಳು ಯುವಜನರ ದಿಕ್ಕೆಡಿಸುತ್ತಿವೆ. ಸಾಮಾಜಿಕ ಜಾಲತಾಣಗಳನ್ನು ಬಹಳ ವ್ಯವಸ್ಥಿತವಾಗಿ ಜನರಲ್ಲಿ ತಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯಗಳನ್ನು ಮೂಡಿಸಲು ಬಳಸಿಕೊಳ್ಳಲಾಗುತ್ತಿದೆ. ಹಣವೊಂದಿದ್ದರೆ, ಜಗತ್ತಿನ ಮೂಲೆಯಲ್ಲಿ ಕುಳಿತಿರುವ ವ್ಯಕ್ತಿಗೂ ನಿಮ್ಮ ಪೋಸ್ಟ್ ತಲುಪುತ್ತದೆ. ಅದರ ಹೊರತಾಗಿ ಜಗತ್ತಿದೆ. ಅದೆಷ್ಟೋ ವಿದ್ಯಾವಂತರು ಕೂಡ ಇಂದು ಆ ಪ್ರಚಾರದ ಅಬ್ಬರಕ್ಕೆ ಬಲಿಯಾಗಿರುವುದನ್ನು ಕಂಡರೆ ಮನ ನೋಯುತ್ತದೆ. 

ಜಾತಿಯೆಂದರೆ ವೋಟ್ ಬ್ಯಾಂಕ್ ಅಷ್ಟೇ. ನಿಮ್ಮ ಮತದ ಸಹಾಯದಿಂದ ಅಧಿಕಾರಕ್ಕೆ ಬಂದು, ಜನರ ತೆರಿಗೆಯ ಹಣವನ್ನು ನುಂಗಿ ನೀರು ಕುಡಿಯುವುದಕ್ಕೆ ಸಹಾಯ ಮಾಡುವ ಒಂದು ರಾಜಕೀಯ ಅಸ್ತ್ರವಷ್ಟೇ. ಮಾನವೀಯತೆಗಿಂತಲೂ ಮಿಗಿಲಾದ ಧರ್ಮ ಯಾವುದಾದರು ಇದೆಯೇ ? ಬೇರೆ ಮನುಷ್ಯರ ನೋವಿನಲ್ಲಿ ಸಂತಸ ಪಡುವುದಕ್ಕಿಂತ ಅಮಾನವೀಯ ಕೃತ್ಯ ಬೇರೊಂದಿದೆಯೇ ? 

ಭ್ರಷ್ಟಾಚಾರವೆಂಬ ಗೆದ್ದಲು ದೇಶದ ಆರ್ಥಿಕತೆಯನ್ನು ಒಳಗೊಳಗೇ ಕೊರೆದು ಕುಂಬಾಗಿಸಿದೆ. ದೇಶದ ಕತೆ ಅಯೋಮಯವಾದಾಗ ಶ್ರೀಮಂತರು ಗಳಿಸಿದ ಹಣದೊಂದಿಗೆ ವಿದೇಶಕ್ಕೆ ಪರಾರಿಯಾಗುತ್ತಾರೆ. ಕಿತ್ತು ತಿನ್ನುವ ಬಡತನ ಹಾಗು ಹಣದುಬ್ಬರದೊಂದಿಗೆ ಬಡವರು ನಿರ್ನಾಮವಾಗುತ್ತಾರೆ. ತಾನು ತಿಂದು, ತನ್ನ ಮುಂದಿನ ಹತ್ತು ತಲೆಮಾರು ಕೂತು ತಿನ್ನುವಷ್ಟು ಹಣ ಮಾಡಿದ ಮೇಲು ತನ್ನ ದಾಹ ತೀರದಿದ್ದರೆ ಅವನಂತಹ ನೀಚ ಬೇರೊಬ್ಬನಿರಲು ಸಾಧ್ಯವಿಲ್ಲ. ಭ್ರಷ್ಟಾಚಾರವನ್ನು ಸಮರ್ಥವಾಗಿ ನಿಗ್ರಹಿಸಲು ಇವತ್ತಿಗೂ ಸಾಧ್ಯವಾಗಿಲ್ಲ ಎಂಬುದು ಬಹಳ ದುಃಖದ ಸಂಗತಿ. ಇವತ್ತು ಕೆಲವು ಧರ್ಮಗಳ ಪ್ರಾತಿನಿಧ್ಯವನ್ನು ತಮಗೆ ತಾವೇ ಅರ್ಪಿಸಕೊಂಡಿರುವ ಸಂಘ ಸಂಸ್ಥೆಗಳು ರಾಷ್ಟ್ರಾದ್ಯಂತ ಕಚೇರಿಗಳು, ಶಾಲಾ ಕಾಲೇಜುಗಳು, ರಕ್ತದಾನ ಕೇಂದ್ರಗಳು ಹಾಗು ಪುಸ್ತಕ ಪ್ರಕಾಶನ ಸಂಸ್ಥೆಗಳು, ದಿನ ಪತ್ರಿಕೆಗಳು ಮುಂತಾದವುಗಳನ್ನು ಹೊಂದಿವೆ. 

ಇಷ್ಟೆಲ್ಲಾ ಹಣ ಎಲ್ಲಿಂದ ಬರುತ್ತದೆ ? ಅದು ದಾನಿಗಳ ಕೊಡುಗೆ ಆಗಿರಬಹುದು. ದಾನಿಗಳು ಯಾರು ಸಹ ಬಡವರಂತೆ ಹಗಲು ರಾತ್ರಿ ದುಡಿದು ಸಂಪಾದಿಸಿದ ಹಣವನ್ನು ಈ ರೀತಿ ದಾನ ಮಾಡುವುದಿಲ್ಲ. ಅವರಿಗೆ ದೊರೆಯುತ್ತಿರುವುದು ಜನರ ತೆರಿಗೆಯ ಹಣ. ನಮ್ಮ ದೇಶದ ಬಡ ಜನರ ದಿನನಿತ್ಯ ಉಪಯೋಗಿಸುವ ಪದಾರ್ಥಗಳ ಮೇಲೆ ಹಾಕಿರುವ ತೆರಿಗೆಗಳ ಹಣ ಎಷ್ಟು ಸೊಗಸಾಗಿ ಅವರ ಜೇಬು ಸೇರುತ್ತಿದೆ ಎಂಬುದೇ ನಮ್ಮ ವ್ಯವಸ್ಥೆ ಎಷ್ಟು ಹಾಳಾಗಿದೆ ಎಂಬುದಕ್ಕೆ ಸಾಕ್ಷಿ. "ಬಡವನ ಕೋಪ, ದವಡೆಗೆ ಮೂಲ" ಅಷ್ಟೇ. 

ಇಂದಲ್ಲ ನಾಳೆ ಜನರಿಗೆ ಎಲ್ಲವೂ ಅರ್ಥವಾಗುವ ಕಾಲ ಬಂದೇ ಬರುತ್ತದೆ. ಅಲ್ಲಿಯವರೆಗೆ ನಮ್ಮ ಬುದ್ಧಿಯನ್ನು ಸರಿಯಾಗಿಟ್ಟುಕೊಂಡು ನೀಯತ್ತಾಗಿ ಸಮಾಜದ ಶ್ರೇಯಸ್ಸಿಗೆ ದುಡಿಯುವ ಹಾಗು ನಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ಅರ್ಹ ವ್ಯಕ್ತಿಯನ್ನು ಚುನಾವಣೆಯಲ್ಲಿ ಮತ ನೀಡುವ ಮೂಲಕ ಗೆಲ್ಲಿಸಬೇಕು. ಜಾತಿ, ಧರ್ಮ ಇವುಗಳನ್ನು ನಂಬಿಕೊಂಡು ಮತ ನೀಡಿದ್ದೆ ಆದರೆ, ಪ್ರಜಾಪ್ರಭುತ್ವಕ್ಕೆ ಪ್ರಜೆಗಳೇ ಮಸಿ ಬಳಿದಂತಾಗುತ್ತದೆ. 

ಕಾಮೆಂಟ್‌ಗಳು

- Follow us on

- Google Search