ನಡೆದು ಬಂದ ದಾರಿ

ಯಾರಿಗಾದರೂ ತಮ್ಮ ಶಾಲಾ ದಿನಗಳನ್ನು ಅಥವಾ ಬಾಲ್ಯವನ್ನು ನೆನಪಿಸಿಕೊಂಡಾಗ ಸಂತೋಷವಾಗುತ್ತದೆ. ತಮ್ಮ ಇಂದಿನ ಬಿಡುವಿಲ್ಲದ ಜೀವನಪದ್ಧತಿ ಅಥವಾ ಚಿಂತೆಯಿಲ್ಲದ ಬಾಲ್ಯದ ದಿನಗಳೇ ಇದಕ್ಕೆ ಕಾರಣವಿರಬಹುದು. ಇದು ಹೆಚ್ಚಿನ ಜನರಿಗೆ ಅನ್ವಯಿಸುವ ಮಾತು. ಆದರೆ, ಬಡತನ ಹಾಗು ಮಧ್ಯಮವರ್ಗದ ಸಂಸಾರದಲ್ಲಿ ಬೆಳೆದ ಕೆಲವು ಮಕ್ಕಳಿಗೆ ಬಾಲ್ಯವೆಂದರೆ ತಮಗಿರುವ ಕಷ್ಟಗಳಿಂದ ಪಾರಾಗುವ ಜೀವನಶೈಲಿ. ಇದು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಪರಿಣಾಮ ಎಂದಾಕ್ಷಣ ದುಷ್ಪರಿಣಾಮವೇ ಆಗಬೇಕೆಂದೇನಿಲ್ಲ, ಒಳ್ಳೆಯ ಪರಿಣಾಮಗಳು ಆಗಿರಬಹುದು. 

ನನ್ನ ಶಾಲೆಯ ದಿನಗಳನ್ನು ನೆನೆಸಿಕೊಂಡರೆ ಅತ್ಯಂತ ಖುಷಿಯಾಗಲಿ ಅಥವಾ ದುಃಖವಾಗಲಿ ಆಗುವುದಿಲ್ಲ. ಆ ದಿನಗಳಲ್ಲಿ ನನ್ನ ಜೀವನವು ಬಹಳಷ್ಟು ಸಮತೋಲನದಲ್ಲಿದ್ದವು ಅನ್ನಿಸುತ್ತದೆ. ನಮ್ಮ ಮನೆಯಿಂದ ಶಾಲೆ ಸುಮಾರು ಹದಿನೈದು ಕಿಲೋಮೀಟರ್ಗಳಷ್ಟು ದೂರವಿತ್ತು. ಶಾಲೆಗೆ ಹೋಗಲು ಬಸ್ಸಿನ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬಾಡಿಗೆ ಓಮಿನಿ ವಾಹನದಲ್ಲಿ ಇತರರೊಂದಿಗೆ ಹೋಗಿ ಬರುತ್ತಿದ್ದೆ. ಒಂದು ಓಮಿನಿಯಲ್ಲಿ ಎಷ್ಟು ಮಕ್ಕಳು ಹಿಡಿಸಬಹುದು? , ಅದು ಡ್ರೈವರ್ಗೆ ಬಿಟ್ಟ ವಿಷಯ. ನಮ್ಮ ಪುಟ್ಟ ವಾಹನದಲ್ಲಿ ಸುಮಾರು ಇಪ್ಪತೈದು ಮಕ್ಕಳು ಶಾಲೆಗೆ ಹೋಗಿ ಬರುತ್ತಿದ್ದರು. ಅಷ್ಟು ಜನರನ್ನು ಹಿಡಿಸುವ ಸಲುವಾಗಿ ಬ್ಯಾಗ್ಗಳನ್ನು ಕಾರಿನ ಮೇಲೆ ಜೋಡಿಸಲಾಗುತಿತ್ತು, ಎರಡು ಸೀಟ್ ಹಿಂದಕ್ಕೆ ಕೂರಿಸಲಾಗಿತ್ತು. ಒಬ್ಬರ ಕಾಲಿನ ಮೇಲೆ ಒಬ್ಬರು. ಒಂದು ರೀತಿಯ ಉಸಿರುಗಟ್ಟುವ ವಾತಾವರಣವೇ ಸರಿ ! ಇದು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದಲೂ ಬಹಳ ಅಪಾಯಕಾರಿ. ಆದರೆ ಏನು ಮಾಡುವುದು, ಕನ್ನಡದಲ್ಲೇ ಒಂದು ಮಾತಿದೆಯಲ್ಲಾ ' ಅವರಿಗೆ ಮತಿ ಇಲ್ಲ, ನಮಗೆ ಗತಿ ಇಲ್ಲ'. ಶಾಲೆಯಲ್ಲಿ ಕಲಿಯುವುದಕ್ಕಿಂತ ಸಮಯಕ್ಕೆ ಸರಿಯಾಗಿ ಹೋಗಿ ಬರುವುದೇ ಒಂದು ದೊಡ್ಡ ಸವಾಲಾಗಿತ್ತು. 



ಶಾಲೆಗೆ ಬಂದ ಮೇಲೆ, ಅದೊಂದು ಹೊಸ ಜಗತ್ತೇ ಸರಿ. ಅಲ್ಲಿನ ಶಿಕ್ಷಕರು, ನಾಲ್ಕು ವರ್ಷದಿಂದ ಹದಿನಾಲ್ಕು ವರ್ಷದವರೆಗಿನ ಮಕ್ಕಳು ನಮ್ಮ ಶಾಲೆಯಲ್ಲಿ ಇರುತ್ತಿದ್ದರು. ಸುಮಾರು ಆರುನೂರಕ್ಕೂ ಹೆಚ್ಚಿನ ಮಕ್ಕಳು ಒಟ್ಟಾಗಿ ಪ್ರಾರ್ಥನೆ, ನಾಡಗೀತೆ ಹೇಳುವುದು, ವಿಶೇಷ ಸಾಧಕರಿಗೆ ಚಪ್ಪಾಳೆಯ ಮೂಲಕ ಪ್ರೋತ್ಸಾಹ ನೀಡುವುದು ಮುಂತಾದ ಚಟುವಟಿಕೆಗಳ ಮೂಲಕ ದಿನ ಆರಂಭವಾಗುತ್ತಿತ್ತು. ಶಿಕ್ಷಕರು ಪಾಠ ಮಾಡುವಾಗ ತರಗತಿಗಳೇನು ಹೆಚ್ಚಿನ ಸಂವಹನದಿಂದ ಕೂಡಿರುತ್ತಿರಲಿಲ್ಲ. ತರಗತಿ ನಡೆಯುವಾಗ ಸ್ವಲ್ಪ ಸಮಯ ಪೋಲಾಗುತ್ತಾ ಇದ್ದ ಸಂದರ್ಭವೆಂದರೆ ಯಾರಾದರೂ ಹೇಳಿದ ಕೆಲಸವನ್ನು ಪೂರ್ಣಗೊಳಿಸದೆ ಬಂದಿದ್ದಾಗ ಮಾತ್ರ. 

ನನಗೆ ಇವೆಲ್ಲದರಿಂದ ಏನೂ ಹೆಚ್ಚು ತೊಂದರೆಯಾಗುತ್ತಿರಲಿಲ್ಲ, ಎಲ್ಲವನ್ನು ಬರೆದುಕೊಂಡು ಹೋಗುವುದರಲ್ಲಿ ನನಗೆ ಬಹಳ ಆಸಕ್ತಿಯಿತ್ತು. ಶಾಲೆಯ ತರಗತಿಯಲ್ಲಿ ಪಾಠ ಕೇಳುವಾಗ ಅಷ್ಟೊಂದು ಆಸಕ್ತಿಯಾಗಲಿ ಅಥವಾ ಕುತೂಹಲವಾಗಲಿ ನನ್ನಲ್ಲಿ ಇರುತ್ತಿರಲಿಲ್ಲ. ಮನೆಗೆ ಬಂದು ಎಲ್ಲವನ್ನು ಬರೆದು ಮುಗಿಸಿದ ನಂತರ ಓದಲು ಕುಳಿತಾಗ ಮಾತ್ರ ಎಲ್ಲಿಲ್ಲದ ಶ್ರದ್ಧೆ ಆಸಕ್ತಿ ಮೂಡುತಿತ್ತು. ಏಳನೇ ತರಗತಿಯವರೆಗೆ ಬೇಕಾಬಿಟ್ಟಿ ಓದುತಿದ್ದ ನನಗೆ ಪರೀಕ್ಷೆಗಳಲ್ಲಿ ಇತರ ಟಾಪ್ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಹೆಚ್ಚಿನ ಸಾಧನೆಯನ್ನೇನು ಮಾಡಲು ಆಗಿರಲಿಲ್ಲ. ಎಂಟನೇ ತರಗತಿಯ ಅಂತ್ಯದ ಹೊತ್ತಿಗೆ ನಾನು ಸ್ವಲ್ಪ ಸರಿಯಾಗಿ ಪ್ರತಿದಿನ ಸಮಯ ಕೊಟ್ಟು ಓದಲು ಆರಂಭಿಸಿದ್ದು. 

ಗಣಿತ ಎಂದರೆ ಬಹಳ ಇಷ್ಟ ನನಗೆ. ದಿನವಿಡೀ ಹೊಸ ಹೊಸ ಸಮಸ್ಯೆಗಳನ್ನು ಬಿಡಿಸಲು ತಯಾರಿರುತ್ತಿದ್ದೆ ನಾನು. ನಮ್ಮದು ಆವಾಗಿನ ಸ್ಟೇಟ್ ಸಿಲ್ಲಬಸ್(೨೦೧೪) ಆಗಿದ್ದರಿಂದ ಪರೀಕ್ಷೆಗೆ ಎಷ್ಟು ಬೇಕೋ ಅಷ್ಟೇ ಇರುತಿತ್ತು. ಇಡೀ ವಿಜ್ಞಾನದ ಪುಸ್ತಕವನ್ನು ಹುಡುಕಿದರೂ, ಒಂದೆರಡು ಲೆಕ್ಕಗಳು ಇದ್ದವೇನೋ !. ಆದರೆ, ನಮ್ಮ ಹಿಂದಿನ ಬ್ಯಾಚ್ಗೆ ಸಿಲ್ಲಬಸ್ ಬದಲಾಗಿ CBSE ಪಠ್ಯಪುಸ್ತಕಗಳನ್ನೇ ಸ್ವಲ್ಪ ಬದಲಾಯಿಸಿ ಕೊಟ್ಟಿದ್ದರು. ಆ ಪುಸ್ತಕಗಳು ಬಹಳ ವಿವರವಾಗಿದ್ದವು, ಮಾತ್ರವಲ್ಲದೆ ನಮ್ಮ ಪಠ್ಯಕ್ರಮದಲ್ಲಿ ಇಲ್ಲದೆ ಇದ್ದ ಸಾಕಷ್ಟು ವಿಷಯಗಳು ಅದರಲ್ಲಿದ್ದವು. ವಿಜ್ಞಾನವೂ ಸಹ ಗಣಿತದಂತೆಯೇ ಎನ್ನುವುದು ನನಗೆ ಮನದಟ್ಟಾಗಿದ್ದು ಆ ಪುಸ್ತಕಗಳನ್ನು ನೋಡಿದಾಗ! ಬಹುಷಃ ಆ ದಿನಗಳಲ್ಲೇ ನನ್ನ ಮನಸ್ಸು ವಿಜ್ಞಾನವನ್ನೇ ಮುಂದಿನ ಹಂತಗಳಲ್ಲಿ ಆಯ್ದುಕೊಳ್ಳಬೇಕು ಎಂದು ತೀರ್ಮಾನಿಸಿದ್ದು. 

ನನಗೆ ಹಲವಾರು ಜನ ಸ್ನೇಹಿತರಿದ್ದರೂ, ಅವರಲ್ಲಿ ಹೆಚ್ಚಿನ ಜನರು ಗಣಿತದ ಮೇಲೆ ವಿಶೇಷ ಆಸಕ್ತಿ ಹೊಂದಿರಲಿಲ್ಲ. ಹೀಗಾಗಿ ಗಣಿತಕ್ಕೆ ಸಂಬಂಧಪಟ್ಟ ವಿಚಾರಗಳು ನನ್ನಲ್ಲೇ ಶುರುವಾಗಿ, ನನ್ನಲ್ಲೇ ಅಂತ್ಯ ಕಾಣುತ್ತಿದ್ದವು. ಶಿಕ್ಷಕರು ನನಗೆ ಪ್ರೋತ್ಸಾಹ ನೀಡಿದರು ನಾನು ಅವರ ಬಳಿ ಹೆಚ್ಚಾಗಿ ವಿಷಯ ವಿನಿಮಯ ಮಾಡಿಕೊಳ್ಳಲು ಹೋಗುತ್ತಿರಲಿಲ್ಲ. ಇದೆ ಸಮಯದಲ್ಲಿ ನಮ್ಮ ಶಾಲೆಯ ಮುಂದಿನ ತರಗತಿಯ ವಿದ್ಯಾರ್ಥಿಯೊಬ್ಬನ ಪರಿಚಯವಾಯಿತು. ಅವನ ಬಗ್ಗೆ ಬೇರೆಯವರಿಂದ ಕೇಳಿದ್ದೆನೆ ಹೊರತು, ಎಂದಿಗೂ ಮಾತಾಡಿರಲಿಲ್ಲ. ಹೀಗೆಯೇ ಒಂದು ವಿಜ್ಞಾನ ಕ್ವಿಜ್ ಕಾರ್ಯಕ್ರಮಕ್ಕೆ ನಮ್ಮಿಬ್ಬರನ್ನು ಒಂದು ತಂಡವಾಗಿ ಕಳುಹಿಸಿಕೊಟ್ಟರು. ಅದೊಂದು ವಿಶಿಷ್ಟ ಕ್ವಿಜ್ ಕಾರ್ಯಕ್ರಮ, NCERT ವತಿಯಿಂದ ನಡೆಸುತ್ತಿದ್ದರಿಂದ ಪ್ರಶ್ನೆಪತ್ರಿಕೆ ಕೊಡುತ್ತಿದ್ದರು. ಸುಮಾರು ೧೨೦ ಪ್ರಶ್ನೆಗಳು ಗಣಿತ ಹಾಗು ವಿಜ್ಞಾನ, aptitude ವಿಷಯಕ್ಕೆ ಸಂಬಂಧಿಸಿರುತ್ತಿದ್ದವು. ಒಂದೇ ತಂಡವಾದರೂ ಇಬ್ಬರನ್ನು ಬೇರೆ ಬೇರೆಯಾಗಿ ಕೂರಿಸಿ ಪರೀಕ್ಷೆ ಬರೆಸುತ್ತಿದ್ದರು. ತಾಲೂಕು ಮಟ್ಟದಲ್ಲಿ ನಮ್ಮ ತಂಡ ಪ್ರಥಮ ಸ್ಥಾನ ಗಳಿಸಿದಾಗ, ನನಗೆ ಗೊತ್ತಿಲ್ಲದ ವಿಷಯಗಳನ್ನು ಅವನಿಗೆ ಕೇಳಲು ಆರಂಭಿಸಿದೆ. ಅವನಿಗೂ ಗಣಿತ, ವಿಜ್ಞಾನದಲ್ಲಿ ವಿಶೇಷ ಆಸಕ್ತಿಯಿತ್ತು. ಶಾಲಾ ದಿನಗಳಲ್ಲಿ ಕಲಿಕೆಯ ವಿಚಾರದಲ್ಲಿ ಹೆಚ್ಚು ಪ್ರಭಾವ ಬೀರಿದ್ದು ಬಹುಷಃ ಅವನೇ ಇರಬಹುದು. 

ಬಹಳ ಕಷ್ಟಕರವಾದ ಸಮಸ್ಯೆಗಳನ್ನು ಹುಡುಕುವುದು, ಅವುಗಳನ್ನು ಪರಿಹರಿಸುವುದು ಒಂದು ರೀತಿಯ ಚಟವಾಗಿ ಹೋಗಿತ್ತು. ಅವನ ಮನೆಯಲ್ಲಿ ಕಂಪ್ಯೂಟರ್ ಹಾಗು ಇಂಟರ್ನೆಟ್ ಸೌಲಭ್ಯ ಇದ್ದಿದ್ದರಿಂದ ಅವನು ಹೇಗೋ ಮಾಡಿ ಉತ್ತರ ಹುಡುಕಿ ತರುತ್ತಿದ್ದ. ಗಣಿತ ಹಾಗು ವಿಜ್ಞಾನದ ವಿಶೇಷತೆಯೇ ಅದು, ನಾವೆಷ್ಟೇ ಬುದ್ಧಿವಂತರಾದರು ಸಹ ನಮಗೆ ಹೊಸತೆನ್ನಿಸುವ ಓದಿ ಕಲಿತು ಮುಗಿಸಲಾಗದಷ್ಟು ವೈವಿಧ್ಯಮಯವಾಗಿರುವ ನಿಗೂಢ ವಿಚಾರಗಳನ್ನು ಅವು ಒಳಗೊಂಡಿರುತ್ತವೆ. 

ನಾನೆಷ್ಟೇ ಸುಮ್ಮನೆ ನನ್ನ ಪಾಡಿಗೆ ನಾನಿದ್ದರೂ, ನನ್ನನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದ್ದು ನನ್ನ ಶಾಲೆಯ ಹಲವು ಶಿಕ್ಷಕರು. ನೀನ್ಯಾಕೆ ಅದರಲ್ಲಿ ಭಾಗವಹಿಸಬಾರದು, ಇದರಲ್ಲಿ ಭಾಗವಹಿಸಬಾರದು ಎಂದೆಲ್ಲ ಸಾಕಷ್ಟು ಬಾರಿ ಕೇಳಿದವರಿಗೆ "ನಮ್ಮ ಮನೆ ದೂರ ಇದೆ, ಹೋಗಿ ಬರೋಕೆ ಕಷ್ಟ ಆಗುತ್ತೆ. ಬಸ್ಸಿಲ್ಲ, ಕಾಡಿನ ದಾರಿಯಲ್ಲಿ ನಡ್ಕೊಂಡು ಹೋಗ್ಬೇಕು" ಅಂತೆಲ್ಲ ಕಾರಣ ಹೇಳಿ ನಿರಾಸೆ ಮೂಡಿಸಿದ್ದುಂಟು. ಇವೆಲ್ಲವನ್ನೂ ಮನಸ್ಸಿಗೆ ಹಾಕಿಕೊಳ್ಳದೆ, ನನ್ನನ್ನು ಇಷ್ಟಪಟ್ಟು ಪ್ರೋತ್ಸಾಹ ನೀಡಿದವರಿಗೆ ನಾನು ಚಿರಋಣಿ. 

ಕಾಮೆಂಟ್‌ಗಳು

- Follow us on

- Google Search