ಹಿಜಾಬ್ ವಿವಾದ

ಕಳೆದ ಕೆಲವು ದಿನಗಳಿಂದ ಸಾಕಷ್ಟು ಸುದ್ಧಿಯಾಗಿರುವ ವಿಷಯ ಇದು. ಒಂದು ಕಾಲೇಜಿನಲ್ಲಿ ಹಿಜಾಬ್ ಧರಿಸಿದವರನ್ನು ತರಗತಿಯಿಂದ ಹೊರಹಾಕುವ ಮೂಲಕ ಶುರುವಾದ ವಿವಾದ ಕಾಲಕ್ರಮೇಣ ಎಲ್ಲೆಡೆ ಹಬ್ಬಿತು. ಹಿಂದೂ ಪರ ಸಂಘಟನೆಗಳು ಹಿಜಾಬ್ ವಿರೋಧಿಸಿ ಕೇಸರಿ ಶಾಲು ಹಾಕಿ ಕಾಲೇಜುಗಳಿಗೆ ಬರಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಆರಂಭಿಸಿದರು. ಹಲವೆಡೆ ಹೋರಾಟಗಳು ನಡೆದು ಶಾಲಾ ಕಾಲೇಜುಗಳಿಗೆ ರಜೆ ನೀಡಬೇಕಾದ ಪರಿಸ್ಥಿತಿಗೆ ಕರ್ನಾಟಕ ತಲುಪಿತು. ವಿವಾದ ಚಿಕ್ಕದೇ ಆಗಿದ್ದರು ಸಹ ಅದನ್ನು ಸರಿಯಾದ ಸಮಯಕ್ಕೆ ಪರಿಹರಿಸದೆ ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಬಿಟ್ಟಿದ್ದು ಬಹಳ ಬೇಸರದ ಸಂಗತಿ. ಹಿಜಾಬ್ ಧರಿಸುವುದು ಅಥವಾ ಧರಿಸದೇ ಇರುವುದು ಹೆಣ್ಣು ಮಕ್ಕಳ ಆಯ್ಕೆಗೆ ಬಿಟ್ಟ ವಿಚಾರ.

ಹಿಜಾಬ್ ಧರಿಸಿ ಕಾಲೇಜಿಗೆ ಬಂದವರನ್ನು ಗೇಟಿನ ಹೊರಗೆ ನಿಲ್ಲಿಸಿದ್ದು ಸಾಕಷ್ಟು ಜನರ ಗಮನ ಸೆಳೆಯಿತು. ಇಷ್ಟು ವರ್ಷಗಳ ಕಾಲ ಶಾಂತಿಯುತವಾಗಿ ನಡೆಯುತ್ತಿದ್ದ ಶಾಲೆ ಕಾಲೇಜುಗಳು ಧರ್ಮದ ಹೆಸರಿನಲ್ಲಿ ತಮ್ಮ ಸಹಪಾಠಿಗಳ ವಿರುದ್ಧ ಹೋರಾಟ ನಡೆಸುವುದಕ್ಕೆ ಸಾಕ್ಷಿಯಾಗಿದ್ದು ನೆನಪಿಸಿಕೊಂಡರು ಸಹ ರಾಜಕೀಯದ ಆಟಗಳಿಗೆ ಯುವಜನತೆ ಬೆಲೆ ತೆರುವುದನ್ನು ಕಂಡಂತಾಗುತ್ತದೆ. ಹಲವಾರು ವರ್ಷಗಳಿಂದ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಬೇರೆ ಧರ್ಮದ ಜನರ ಮೇಲೆ ದ್ವೇಷ ಬೆಳೆಯುವಂತೆ ಮಾಡಿದ ಕೆಲಸಗಳಿಗೆ ಈ ಹೋರಾಟಗಳು ಸಾಕ್ಷಿಯಾದವು. ಶ್ರೀಮಂತರ ರಾಜಕೀಯ ಪ್ರೇರಿತ ದ್ವೇಷದ ಭಾಷಣಗಳಿಗೆ ಸಮಯ ಕೊಟ್ಟ ಸಾಮಾನ್ಯ ಜನರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಯಿತು. ಇದು ಬಹಳ ಆತಂಕಕಾರಿ ಬೆಳವಣಿಗೆ. ಹಣಬಲವಿದ್ದರೆ ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡು ಜನರ ಅಭಿಪ್ರಾಯವನ್ನು ಮತ್ತು ನಿಲುವನ್ನು ರೂಪಿಸುವ ತಂತ್ರ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ನಡೆದಿದೆ.  

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಸರಿಯಾಗಿ ಇದ್ದಾರೆಯೇ ? ಪಾಠಗಳ ಗುಣಮಟ್ಟ ಹೇಗಿದೆ ? ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ಸೌಲಭ್ಯಗಳು ಇವೆಯೇ ? ಶಿಕ್ಷಣ ಮುಗಿದ ನಂತರ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯವನ್ನು ಕಾಲೇಜುಗಳು ಬೆಳೆಸುತ್ತಿವೆಯೇ ? ಖಾಸಗಿ ಕೋಚಿಂಗ್ ಹಾವಳಿಯಿಂದ ಬಡವರ ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಅರಿವು ಸರ್ಕಾರಕ್ಕೆ ಇದೆಯೇ ? ಇಂತಹ ಸಾಕಷ್ಟು ಜ್ವಲಂತ ಸಮಸ್ಯೆಗಳನ್ನು ನಮ್ಮ ಶಿಕ್ಷಣ ವ್ಯವಸ್ಥೆ ಎದುರಿಸುತ್ತಿರುವ ಸಂದರ್ಭದಲ್ಲಿ ತಮ್ಮ ಆಡಳಿತದ ವೈಫಲ್ಯಗಳನ್ನು ಮರೆಯುವಂತೆ ಮಾಡಲು ಮತ್ತು ಜನರನ್ನು ಅನ್ಯ ಧರ್ಮದ ದ್ವೇಷದ ಮೂಲಕ ಒಂದುಗೂಡಿಸಿ ಚುನಾವಣೆಯಲ್ಲಿ ಮತ ಪಡೆಯಲು ಈ ಮಟ್ಟಕ್ಕೆ ರಾಜಕಾರಣಿಗಳು ಇಳಿದಿರುವುದು ಬಹಳ ಆಘಾತಕಾರಿ ಬೆಳವಣಿಗೆ. ಬೆಳೆಯುವ ಮಕ್ಕಳ ಮನಸ್ಸಿನಲ್ಲಿ ದ್ವೇಷ ತುಂಬುವುದು ಸಮಾಜಕ್ಕೆ ಮಾರಕ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ದೇಶ ನಮ್ಮ ಭಾರತ, ಇತ್ತೀಚಿನ ವರ್ಷಗಳಲ್ಲಿ ದ್ವೇಷ ಭಾಷಣಗಳು ದಿನದಿಂದ ದಿನಕ್ಕೆ ಹೆಚ್ಚು ಜನರನ್ನು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ತಲುಪುತ್ತಿರುವುದನ್ನು ತಡೆಯಬೇಕಾಗಿದೆ. 

ಕೋರ್ಟಿನಲ್ಲಿ ಸಹ ಹಲವಾರು ದಿನಗಳಿಂದ ವಿಚಾರಣೆ ಮುಂದುವರೆಯುತ್ತಿದೆ. ಹಿಂದೂ ವಿದ್ಯಾರ್ಥಿಗಳು ಮುಸ್ಲಿಂ ವಿದ್ಯಾರ್ಥಿಗಳ ಕೈ ಹಿಡಿದು ಒಂದಾಗಿ ಕಾಲೇಜುಗಳಿಗೆ ತೆರಳುತ್ತಿರುವ ದೃಶ್ಯ ಮನಸ್ಸಿಗೆ ನೆಮ್ಮದಿ ನೀಡಿದೆ. ಇದು ನಮ್ಮ ಭಾರತ. ಎಲ್ಲ ಧರ್ಮಗಳನ್ನು ಗೌರವಿಸುವ ಮತ್ತು ಎಲ್ಲರನ್ನು ಸಮಾನವಾಗಿ ಕಾಣುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ನಿಮ್ಮಂತೆಯೇ ಅವರು ಸಹ ಕಲಿಯಲು ಬರುವ ಮಕ್ಕಳು, ಹುಟ್ಟಿನ ಆಧಾರದ ಮೇಲೆ ಯಾವುದೇ ವ್ಯಕ್ತಿಯನ್ನು ಬೇರೆಯಾಗಿ ಕಾಣಬಾರದು. ನಮ್ಮ ಸಂವಿಧಾನದಲ್ಲಿರುವ ಆಶಯಗಳನ್ನು ಓದಿ ಅರ್ಥ ಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜನರು ಯಾವಾಗಲೂ ಒಂದಾಗಿ ಸರ್ಕಾರವನ್ನು ಪ್ರಶ್ನಿಸಬೇಕು, ನಮ್ಮ ನಮ್ಮಲ್ಲಿಯೇ ಗುಂಪುಗಳನ್ನು ಮಾಡಿಕೊಂಡು ದ್ವೇಷ ಕಾರುತ್ತಾ ಸಮಯ ಕಳೆದರೆ ರಾಜಕಾರಣಿಗಳು ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಾರೆ. ವಿದ್ಯಾರ್ಥಿಗಳು ಸಾಕಷ್ಟು ಓದಿ ಜೀವನ ರೂಪಿಸಿಕೊಳ್ಳಬೇಕಾದ ಜವಾಬ್ದಾರಿ ಹೊಂದಿದವರು. ಅವರನ್ನು ಯಾವುದೇ ಕಾರಣಕ್ಕೆ ಶಿಕ್ಷಣದಿಂದ ದೂರವಿಟ್ಟರೆ ಅದು ಅವರ ಜೀವನ ಹಾಳುಮಾಡಿದಂತೆ. ಉತ್ತಮ ಶಿಕ್ಷಣ ಮಾತ್ರ ಧರ್ಮಾಂಧತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.  

ಕಾಮೆಂಟ್‌ಗಳು

- Follow us on

- Google Search