ನನ್ನ ಲೇಖನಗಳ ಸ್ವವಿಮರ್ಶೆ

ಒಂದಾನೊಂದು ಕಾಲದಲ್ಲಿ ನಾನು ಯಾರಿಗಿಂತಲೂ ಕಡಿಮೆಯಿಲ್ಲ ಎಂದು ಆರಂಭಿಸಿದ ಬರವಣಿಗೆ ನೂರು ಪೋಸ್ಟ್ಗಳನ್ನು ತಲುಪಿದೆ. ನಾನು ನಿಜ ಜೀವನದಲ್ಲಿ ಇರುವುದಕ್ಕೂ ಇಲ್ಲಿ ಬರೆಯುವುದಕ್ಕೂ ಬಹಳ ವ್ಯತ್ಯಾಸ ಕಂಡುಬರುತ್ತಿದೆ. ಇದಕ್ಕೆ ಒಂದು ಕಾರಣವೆಂದರೆ ನನ್ನನ್ನು ನಾನು ಬರವಣಿಗೆಯ ಮೂಲಕ ವ್ಯಕ್ತಪಡಿಸುವ ಉದ್ದೇಶದಿಂದ ಆರಂಭಿಸಿದ್ದು. ನಾನು ಹೆಚ್ಚಾಗಿ ಸುಮ್ಮನಿದ್ದು, ಸಂದರ್ಭಕ್ಕೆ ಅನುಸಾರವಾಗಿ ಅದಕ್ಕೆ ಹಾಸ್ಯ ರೀತಿಯ ಪ್ರತಿಕ್ರಿಯೆ ನೀಡುವ ಅಭ್ಯಾಸವಿರುವವನು. ಆದರೆ, ಬರೆಯಲು ಕುಳಿತಾಗ ಆ ಹಾಸ್ಯವೆಲ್ಲ ಬತ್ತಿ ಹೋಗಿ, ಗಂಭೀರವಾಗಿ ಬೇಸರ ತರಿಸುವ ಲೇಖನಗಳನ್ನೇ ಬರೆದಿದ್ದೇನೆ. ಸಮಯ ಹೋದಂತೆ ಇದು ಸರಿ ಹೋಗಬಹುದು ಅನ್ನಿಸುತ್ತದೆ. 

ಇಂತಹುದೇ ಹಲವಾರು ಬ್ಲಾಗ್ಗಳನ್ನು ನಾನು ಇಂಗ್ಲಿಷ್ ಹಾಗು ಇತರ ಭಾಷೆಗಳಲ್ಲಿ ನೋಡಿದ್ದೇನೆ. ಅಲ್ಲಿರುವ ಓದುಗರು ನೀಡುವ ಪ್ರೋತ್ಸಾಹ ಹಾಗು ಆಸಕ್ತಿಯಿಂದ ಭಾಗವಹಿಸಿದಷ್ಟು ನಮ್ಮ ಓದುಗರು ಪಾಲ್ಗೊಳ್ಳುವುದಿಲ್ಲ. ಇದಕ್ಕೆ ಕಾರಣ ನನ್ನ ಬರಹಗಳ ನೀರವ ಮೌನವು ಇರಬಹುದು. ಒಂದು ಸ್ಪಷ್ಟ ನಿರ್ಧಾರವಾಗಲಿ ಅಥವಾ ಅನಿಸಿಕೆಯಾಗಲಿ ನನ್ನ ಬರಹಗಳಲ್ಲಿ ಕಂಡುಬರುತ್ತಿಲ್ಲ. ಇದಕ್ಕೆ ನನ್ನ ವ್ಯಕ್ತಿತ್ವವೂ ಕಾರಣವಿರಬಹುದು. ಎಲ್ಲವನ್ನು ನಂಬಿ ಯಾವುದೊ ಒಂದು ಕಾಲಕ್ಕೆ ಮೋಸ ಹೋಗುವುದು ಹೊಸತೇನಲ್ಲ. ಈ ಅನಿಶ್ಚಿತತೆಯೇ ಒಂದು ರೀತಿಯ ತೊಡಕಾಗಿದೆ. ನನ್ನ ಬರಹಗಳು ಇಬ್ಬನಿಯಿಂದ ಮುಸುಕಿದ ದಾರಿಯಲ್ಲಿ ಕಷ್ಟಪಟ್ಟು ವಾಹನ ಚಲಾಯಿಸಿದಂತಿವೆ.
 

ಇಷ್ಟೆಲ್ಲಾ ತಲೆಕೆಟ್ಟು ಹೋಗುವ ವಿಚಾರಗಳ ಬಗ್ಗೆ ಅಸ್ಪಷ್ಟವಾಗಿ ಬರೆದರೂ ಇದನ್ನು ಓದುವ ಕೆಲವೇ ಕೆಲವರನ್ನು ಕಂಡರೆ ಅಭಿಮಾನವು ಹಾಗು ಮರುಕವು ಉಂಟಾಗುತ್ತದೆ. ಮುಂದಿನ ದಿನಗಳಲ್ಲಿ ಉತ್ತಮ ಬರಹಗಳನ್ನು ನನಗಿಷ್ಟ ಬಂದಂತೆ ಬರೆಯುವ ಆಲೋಚನೆ ಹೊಂದಿದ್ದೇನೆ. ಇಲ್ಲಿಯವರೆಗಿನ ಬರಹಗಳು ದಿನಪತ್ರಿಕೆಗಳಲ್ಲಿ ಬರುವ ಲೇಖನಗಳಂತೆ ಕಂಡುಬರುತ್ತಿವೆ. ಓದುಗರಿಗೆ ಖುಷಿ ಕೊಡದ ಅಥವಾ ಭಾವನೆಗಳನ್ನು ಮೂಡಿಸದ ಬರಹಗಳನ್ನು ನಾನೆ ಒಂದು ದಿನ ಕೂತು ಓದಿದಾಗ ಯಾರಪ್ಪ ಇಂತದೆಲ್ಲ ಬರೀತಾರೆ ಅನ್ಸುತ್ತೆ. ಅದು ಆ ಕ್ಷಣದ ಉತ್ಸಾಹದಲ್ಲಿ ಬರೆದಿರುವುದೇ ಹೊರತು ಅದಕ್ಕೆ ಬೇರೇನೂ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲವೆನುಸುತ್ತದೆ. 
 
ಇದನ್ನು ಹೊರತಾಗಿಯೂ ನೋಡಿದರೆ, ನನಗೆ ಯಾವುದರ ಮೇಲೂ ವಿಶೇಷ ಆಸಕ್ತಿಯಾಗಲಿ ಅಥವಾ ಹೇಳಿಕೊಳ್ಳುವಂತ ಜೀವನಶೈಲಿಯಾಗಲಿ ಇಲ್ಲ. ಕೆಲವೊಮ್ಮೆ ಏನಾದರು ಬರೆಯಬೇಕೆನಿಸುತ್ತದೆ. ಹೆಚ್ಚಿನ ಸಮಯ ಓದುವುದರಲ್ಲೇ ಕಳೆಯುವ ಅಭ್ಯಾಸ ನನ್ನದು. ಯಾವುದೊ ಬಹಳ ಚೆನ್ನಾಗಿರುವ ಪುಸ್ತಕವನ್ನು ಓದಿದಾಗ ಆ ಖುಷಿಯಲ್ಲೇ ನನ್ನ ಬರಹಗಳು ಜನ್ಮತಾಳುತ್ತವೆ. ಆದರೂ ಮುಂದಿನ ದಿನಗಳಲ್ಲಿ ನನ್ನಿಂದ ಒಂದಷ್ಟು ಓದುಗರಿಗೆ ಖುಷಿ ನೀಡುವ ಬರಹಗಳು ಮೂಡಿ ಬಂದರೆ ಬರವಣಿಗೆಯನ್ನು ಆರಂಭಿಸಿದಕ್ಕೂ ಸಾರ್ಥಕವಾಗುತ್ತದೆ. 

ಕಾಮೆಂಟ್‌ಗಳು

- Follow us on

- Google Search