ಮಾತಿನ ಶಕ್ತಿ.

ನಮ್ಮ ಮಾತಿಗೆ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿಯಿದೆ. ಹೀಗಾಗಿ ನಾವೇನು ಮಾತನಾಡುತ್ತೇವೆ ಎಂಬ ಪ್ರಜ್ಞೆ ನಮ್ಮಲ್ಲಿ ಇರಬೇಕು. ನಮಗೆ ಬಹಳ ಹತ್ತಿರ ಇರುವವರ ಜೊತೆಗೆ ನಾವು ಹೆಚ್ಚು ಮಾತನಾಡುವುದರಿಂದ ನಮ್ಮ ಬೇಜವಾಬ್ದಾರಿಯುತ ಮಾತುಗಳು ಅವರ ಮನಸ್ಸಿಗೆ ಎಷ್ಟು ನೋವು ಕೊಡಬಹದು ಎನ್ನುವ ಕಲ್ಪನೆ ನಮಗೆ ಇರುವುದಿಲ್ಲ. ಒಂದು ದಿನದ ಕೆಟ್ಟ ಮಾತುಗಳಿಗೆ ಉತ್ತಮ ಗೆಳೆಯರನ್ನೊ ಅಥವಾ ನಮಗೆ ತೀರ ಹತ್ತಿರ ಆದವರನ್ನೋ ದೂರ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ನಮ್ಮ ಮಾತಿನ ಪರಿಣಾಮಗಳು ನಮಗೆ ಸಾಕಷ್ಟು ನೋವು ಕೊಡುವ ಹಾಗೂ ಕೆಲವೊಮ್ಮೆ ಜೀವನಪೂರ್ತಿ ಕೊರಗಾಗಿ ಉಳಿಯುವ ಘಟನೆಗಳಿಗೆ ಕಾರಣವಾಗಬಹುದು. ನಮ್ಮ ಮಾತುಗಳು ಇನ್ನೊಬ್ಬರಿಗೆ ಕೇಳುತ್ತವೆಯೇ ಹೊರತು ಆ ಮಾತಿನ ಹಿಂದಿನ ನಮ್ಮ ಮನಸ್ಥಿತಿ ಅವರಿಗೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ. ನಮ್ಮ ಮಾತಿನ ಉದ್ದೇಶ ಸಂಪೂರ್ಣ ಬೇರೆಯದೇ ಆಗಿದ್ದರು ಸಹ ಅದನ್ನು ಕೇಳುವವರ ದೃಷ್ಟಿಕೋನ ಸರಿಯಾಗಿ ಇಲ್ಲದೆ ಹೋದರೂ ಸಹ ಅದು ಜೀವನದಲ್ಲಿ ಮರೆಯಲಾಗದ ಅಹಿತಕರ ಘಟನೆಗಳಿಗೆ ಕಾರಣವಾಗುತ್ತದೆ. 

ಕೇವಲ ಕೆಲವೇ ಕೆಲವು ಕೆಟ್ಟ ಮಾತುಗಳು ಹತ್ತಾರು ವರ್ಷಗಳಿಂದ ಬೆಳೆದು ಬಂದಿದ್ದ ಉತ್ತಮ ಸಂಬಂಧವನ್ನು ಒಡೆಯುವ ಸಾಮರ್ಥ್ಯ ಹೊಂದಿರುತ್ತವೆ. ನಮ್ಮ ದುಃಖ, ಹತಾಶೆ, ಬೇಸರ, ಇನ್ನೊಬ್ಬರಿಂದ ನಮಗೆ ಆಗಿರುವ ನೋವು ಯಾವುದನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿ ಕೇವಲ ನಮ್ಮ ಕೆಟ್ಟ ಮಾತುಗಳನ್ನೇ ಮುಂದಿಟ್ಟುಕೊಂಡು ನಮ್ಮ ಬಗ್ಗೆ ಒಂದು ಕೆಟ್ಟ ಚಿತ್ರಣವನ್ನು ಮನಸ್ಸಿನಲ್ಲಿ ರೂಪಿಸಿಕೊಳ್ಳುತ್ತಾರೆ. ಕೆಲವೇ ತಿಂಗಳುಗಳ ಹಿಂದೆ ಇದ್ದ ನಂಬಿಕೆ, ಪ್ರೀತಿ, ಗೌರವ ಎಲ್ಲವೂ ಕಾಣೆಯಾಗಿ ನಮ್ಮ ತಪ್ಪುಗಳನ್ನು ಮಾತ್ರ ಹುಡುಕಿ ಎತ್ತಿ ತೋರಿಸಲು ಮನಸ್ಸು ಆರಂಭಿಸುತ್ತದೆ. ಕೆಟ್ಟ ಮಾತುಗಳನ್ನು ಆಡುವುದು ಎಂದಿಗೂ ಒಳ್ಳೆಯದನ್ನು ತರಲು ಸಾಧ್ಯವೇ ಇಲ್ಲ. ಜಗಳ ನಡೆದು ಬಹಳಷ್ಟು ಸಮಯ ಕಳೆದು ಶಾಂತವಾಗಿ ಏಕಾಂಗಿಯಾಗಿ ಕೂತು ಎಲ್ಲವನ್ನು ಮತ್ತೊಮ್ಮೆ ಯೋಚಿಸಿದಾಗ ಪ್ರತಿಯೊಬ್ಬರಿಗೂ ತಾವು ಮಾಡಿರುವ ತಪ್ಪಿನ ಅರಿವಾಗುತ್ತದೆ. ಈ ಸಮಯದಲ್ಲಿ ಜಗತ್ತು ಎಷ್ಟು ಬದಲಾಗಿರುತ್ತದೆ ಎಂದರೆ ಸತ್ಯ ಒಪ್ಪಿಕೊಳ್ಳಲು ಕಷ್ಟ, ಅದನ್ನು ಇನ್ನೊಬ್ಬರಿಗೆ ಅರ್ಥ ಮಾಡಿಸುವುದು ಸಹ ಕಷ್ಟ. ಹೇಗೋ ಮನಸ್ಸಿನ ಶಕ್ತಿಯನ್ನೆಲ್ಲ ಒಟ್ಟುಮಾಡಿಕೊಂಡು ನಮ್ಮೆಲ್ಲ ತಪ್ಪುಗಳನ್ನು ಒಪ್ಪಿಕೊಂಡು ಮತ್ತೆ ಮೊದಲಿನಂತೆ ಆಗಲು ನಾವು ಪ್ರಯತ್ನ ಮಾಡಿದರೂ ಅದು ಅವರಿಗೆ ಅರ್ಥವೆ ಆಗುವುದಿಲ್ಲ. ನಮ್ಮ ಬಗ್ಗೆ ಇರುವ ತಪ್ಪು ಕಲ್ಪನೆಗಳು ದಿನದಿಂದ ದಿನಕ್ಕೆ ಇನ್ನಷ್ಟು ಹೆಚ್ಚಿರುತ್ತವೆ. ಅದು ಕೇವಲ ಅವರದೆ ಮನಸ್ಸಿನ ತಪ್ಪು ಕಲ್ಪನೆ ಆದರೆ ನಿಜವಾದ ಪರಿಸ್ಥಿತಿ ಬೇರೆಯಿದೆ ಎನ್ನುವ ಚಿಕ್ಕ ಆಲೋಚನೆ ಬಾರದಷ್ಟು ಕೆಲವರ ಬುದ್ಧಿಗೆ ಮಂಕು ಕವಿದಿರುತ್ತದೆ.    

ನಾವಾಡುವ ಪ್ರತಿಯೊಂದು ಮಾತು ನಮ್ಮ ಜೀವನದ ಮೌಲ್ಯಗಳನ್ನು ಸೂಚಿಸುವಂತೆ ಇರಬೇಕು. ಮಾತು ಸರಿಯಾಗಬೇಕಾದರೆ ಮೊದಲು ಮನಸ್ಸಿನ ಯೋಚನೆಗಳು ಸರಿಯಾಗಬೇಕು. ದಿನವೂ ಬೇಡದೆ ಇರುವುದರ ಬಗ್ಗೆಯೇ ಯೋಚಿಸಿ, ತಪ್ಪು ಕಲ್ಪನೆಗಳನ್ನೇ ನಿಜವೆಂದು ನಂಬಿ ಅವನ್ನೇ ಮನಸ್ಸಿಗೆ ತುಂಬಿಕೊಂಡರೆ ನಾವು ನೋವು ಅನುಭವಿಸುವುದರ ಜೊತೆಗೆ ನಮ್ಮವರಿಗೂ ಸಾಕಷ್ಟು ನೋವು ಕೊಡುತ್ತೇವೆ. ಹಾಗೆಂದು ಮಾತೆಂಬುದು ಕಪಟ ನಾಟಕವಾಗಬಾರದು, ಅದು ನಮ್ಮೊಳಗಿನ ಒಳ್ಳೆಯತನದಿಂದ ಬರಬೇಕು. ಪ್ರತಿಯೊಬ್ಬರಲ್ಲಿಯೂ ಒಳ್ಳೆಯದು ಕೆಟ್ಟದ್ದು ಇದ್ದೇ ಇರುತ್ತದೆ. ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿ ನಮ್ಮ ಮನಸ್ಸು ಮತ್ತು ಬುದ್ಧಿಗೆ ಇದೆ. ತಪ್ಪು ಮಾಡಿದ ಮೇಲೆ ಕ್ಷಮೆ ಕೇಳಿ, ಅಂತಹ ತಪ್ಪು ಮುಂದೆ ಆಗದಂತೆ ನಮ್ಮನ್ನು ನಾವು ತಿದ್ದಿಕೊಳ್ಳುವ ಉತ್ತಮ ವ್ಯಕ್ತಿತ್ವ ನಮ್ಮದಾಗಿರಬೇಕು. ನಾವು ಎಷ್ಟೇ ಒಳ್ಳೆಯವರಗಿದ್ದರು ಸಹ ಒಂದಷ್ಟು ತಪ್ಪುಗಳು ಕ್ಲಿಷ್ಟ ಸಮಯ ಸಂದರ್ಭಗಳಲ್ಲಿ ನಡೆದು ಹೋಗುತ್ತವೆ. ಹಾಗೆಂದ ಮಾತ್ರಕ್ಕೆ ಎಲ್ಲವೂ ನನ್ನಿಂದಲೇ ಆಯಿತು ಎನ್ನುವ ನಮ್ಮ ಆತ್ಮಶಕ್ತಿಯನ್ನು ಪಾತಾಳಕ್ಕೆ ನೂಕುವ ಯೋಚನೆಗಳನ್ನೇ ಮನಸ್ಸಿನಲ್ಲಿ ತುಂಬಿಕೊಳ್ಳುವುದು ಸರಿಯಲ್ಲ. ತಪ್ಪು ನಮಗೆ ಅರ್ಥವಾಗಿದ್ದು, ಅಂತಹ ತಪ್ಪುಗಳು ಮುಂದೆ ಆಗದಂತೆ ಜಾಗೃತಿ ಮೂಡಿದ್ದರೆ ಅದು ಜೀವನ ಸಾಗಿಸಲು ಬಹಳಷ್ಟು ಸಹಾಯ ಮಾಡುತ್ತದೆ. 

ನಮ್ಮ ಆತ್ಮಸಾಕ್ಷಿ ಮತ್ತು ಮಾನವೀಯತೆಯ ಮೌಲ್ಯಗಳು ನಮ್ಮ ಜೀವನವನ್ನು ಸರಿದಾರಿಯಲ್ಲಿ ನಡೆಸುವಂತಾಗಲಿ. ನಮ್ಮನ್ನು ಪ್ರೀತಿಸುವವರು ನಮ್ಮ ಜೊತೆಗೆ ಎಂದಿಗೂ ಸಹ ಇರುತ್ತಾರೆ, ಇಲ್ಲದ ಕಾರಣಗಳನ್ನು ಹುಡುಕಿ ಮನಸ್ಸಿಗೆ ನೋವುಕೊಟ್ಟು ಬೇರೆಯವರನ್ನು ನಂಬಿ ಮೋಸ ಹೋಗುವ ಜಗತ್ತನ್ನು ನಾವು ಇಂದು ಕಣ್ಣಾರೆ ಕಾಣುತ್ತಿದ್ದೇವೆ. ನಮ್ಮ ಮನಸ್ಸಿನಲ್ಲಿ ನಾವು ಇನ್ನೊಬ್ಬರ ಬಗ್ಗೆ ಅಂದುಕೊಳ್ಳುವುದೇ ನಿಜ ಆಗಿರುವುದಿಲ್ಲ, ತಾಳ್ಮೆಯಿಂದ ಮನಸ್ಸು ಶಾಂತವಾದಾಗ ಯೋಚಿಸಿದರೆ ಎಲ್ಲವೂ ಅರ್ಥವಾಗುತ್ತದೆ. ಆ ತಾಳ್ಮೆ ಹಾಗೂ ಅರ್ಥ ಮಾಡಿಕೊಳ್ಳುವ ಮನಸ್ಸು ಇನ್ನೊಬ್ಬರಿಗೆ ಇಲ್ಲದೆ ಹೋದರೆ ಅವರಿಂದ ನಾವು ಅನುಭವಿಸುವ ನೋವಿಗೆ ಅರ್ಥವೇ ಇಲ್ಲ. ನಾವು ಸರಿಯಾಗಿದ್ದರೆ ನಮ್ಮ ಜೀವನ ಸರಿಯಾಗುತ್ತದೆ. ಭಾವನೆಗಳ ಬಿರುಗಾಳಿಯಲ್ಲಿ ಜನ್ಮ ತಾಳುವ ಜಗಳ ಮನಸ್ಸನ್ನು ಒಡೆದು ಚೂರು ಮಾಡುವ ಸಾಧ್ಯತೆ ಇರುತ್ತದೆ. ಮಾತನಾಡುವಾಗ ತಾಳ್ಮೆ ಇರಲಿ, ಭಾವನೆಗಳ ಕೈಗೆ ಬುದ್ಧಿಯನ್ನು ಕೊಡಬೇಡಿ, ಪದಪ್ರಯೋಗದ ಮೇಲೆ ಹಿಡಿತ ಇರಲಿ, ಜೀವನ ಸುಗಮವಾಗುತ್ತದೆ.         

ಕಾಮೆಂಟ್‌ಗಳು

- Follow us on

- Google Search