ಕಥೆ: ದಾಸರಹಳ್ಳಿಯ ದಾಂಡಿಗರು

ದಾಸರಹಳ್ಳಿಯ ದಾಂಡಿಗರೆಂದೇ ಕುಪ್ರಸಿದ್ಧರಾಗಿದ್ದ ಸೋಮ, ಮಂಜ, ಕಿಟ್ಟಿ ತಮ್ಮ ನಿತ್ಯದ ಅಡ್ಡ ಬೇಕರಿಯಲ್ಲಿ ಭೇಟಿಯಾದರು. ಹೆಸರಿಗೆ ಪೂಜಾರಿ ಸ್ವೀಟ್ಸ್ ಅಂಡ್ ಬೇಕರಿ ಐಟಮ್ಸ್, ಆದರೆ ಅಲ್ಲಿ ಹೆಚ್ಚು ವ್ಯಾಪಾರವಾಗುತ್ತಿದ್ದಿದ್ದು ಸಿಗರೇಟು ಮತ್ತು ಕಾಫಿ ಟೀ. ಅಪರೂಪಕ್ಕೆ ಮೊಟ್ಟೆ ಪಫ್ಸ್ ವ್ಯಾಪಾರ. ಹೀಗಾಗಿ ಈ ಮೂವರು ಬೇಕರಿಯ ಮಾಲಿಕ ಅನಿಲನಿಗೆ ಚಿರಪರಿಚಿತರು. ಮೊದಲು ಬೇಕರಿಯ ಮುಂದೆ ಬಂದವರಿಗೆ ಕೂತುಕೊಳ್ಳಲು ಒಂದೆರಡು ಬೆಂಚು ಹಾಕಿದ್ದರು. ಬಂದು ಕೂತವರು, ಎದ್ದು ಹೋಗದೆ ಅಲ್ಲಿಯೇ ವಿಚಾರ ವಿನಿಮಯಗಳಲ್ಲಿ ತೊಡಗುವುದನ್ನು ಕಂಡು ಅನಿಲ ಬೆಂಚುಗಳನ್ನು ತನ್ನ ಮನೆಗೆ ಸಾಗಿಸಿದ್ದ. 


ಸೋಮ, ಮಂಜ ಹಾಗು ಕಿಟ್ಟಿ ದಾಂಡಿಗರ ಬಿರುದನ್ನು ಪಡೆಯಲು ಅಂತಹ ಸಾಹಸ ಕಾರ್ಯಗಳನ್ನು ಎಂದಿಗೂ ಮಾಡಿಲ್ಲ, ಮಾಡುವ ಯೋಚನೆಯು ಇಲ್ಲ. ಊರೆಂದ ಮೇಲೆ ಎಲ್ಲಾ ತರಹದ ವ್ಯಕ್ತಿಗಳು ಇರಬೇಕಲ್ಲವೇ, ಹಾಗಾಗಿ ಊರಿಗೆ ಊರೇ ಇವರನ್ನು ಕೆಲಸಕ್ಕೆ ಬಾರದ ದಾಂಡಿಗರೆಂದು ನಿರ್ಧರಿಸಿತ್ತು. ಮೂವರು ಅಲ್ಲಿಂದ ನೇರವಾಗಿ ಮಂಜನ ಮನೆಗೆ ಬಂದರು. ಮನೆ ಮಂಜನ ಚಿಕ್ಕಪ್ಪನಿಗೆ ಸೇರಿದ್ದು. ಚಿಕ್ಕಪ್ಪ ಈ ಮನೆಯನ್ನು ಬಿಟ್ಟು ಬೆಂಗಳೂರಿನಲ್ಲೊಂದು ಹೊಸ ಮನೆ ಮಾಡಿಕೊಂಡು ತಮ್ಮ ಸಂಸಾರದೊಂದಿಗೆ ಇದ್ದರು. ಇದ್ದ ಸ್ವಲ್ಪ ತೋಟ ಹಾಗು ಮನೆಯನ್ನು ಮಾರುವ ಮನಸ್ಸಿಲ್ಲದೆ, ಊರು ಸುತ್ತುತ್ತಿದ್ದ ಮಂಜನಿಗೆ ಮೇಲ್ವಿಚಾರಣೆಗೆ ಕೊಟ್ಟಿದ್ದರು. ಇದಕ್ಕೆ ಕಾರಣ ಇಷ್ಟೇ, ಕುಡಿಯದಿದ್ದರೂ ಕುಡಿದವರಂತೆ ಮಾತಾಡುವ ಅದ್ಭುತ ಪ್ರತಿಭೆ ಮಂಜನದು. ಕುಡುಕರಿಗೆ, ಅವರಂತೆಯೇ ತತ್ವ ಹಾಗು ಜೀವನ ಸಿದ್ಧಾಂತಗಳನ್ನು ಹೊಂದಿದವರ ಮೇಲೆ ಅಪಾರ ಪ್ರೀತಿ ಹಾಗು ಕಾಳಜಿ. 

ಸೋಮ ಮಾತಾಡಲು ಶುರು ಮಾಡಿದ, "ಇಷ್ಟು ದಿನ ಆಗಿದ್ದು ಆಗೋಯ್ತು ಮುಂದೇನಾದ್ರು ಮಾಡ್ಬೇಕಲ್ಲ"

ಮಂಜ ಹೇಳಿದ, "ಏನು ಮಾಡ್ತೀಯ ಮಾಡೋ ಸೋಮ, ನಾವು ಇದೀವಿ ಜೊತೆಗೆ"

ಸೋಮ ಬೇಸರದಿಂದ ತಲೆಯಾಡಿಸುತ್ತಾ ಹೇಳಿದ, "ಅದೇ, ಏನು ಮಾಡ್ಬೇಕು ಅಂತ ಗೊತ್ತಿಲ್ವಲ್ಲ"

ಇಲ್ಲಿಯವರೆಗೂ ಸುಮ್ಮನಿದ್ದ ಕಿಟ್ಟಿ ಈಗ ಬಾಯ್ತೆರೆದ, "ಒಂದು ಒಳ್ಳೆ ಪಿಕ್ಚರ್ ಮಾಡೋಣ "

ಮಂಜ ತಟ್ಟನೆ ಹೇಳಿದ, "ಲೋ ಗುಳ್ಡು, ಪಿಕ್ಚರ್ ಅಲ್ಲ ಅದು ಸಿನೆಮಾ ಅನ್ನು ಇಲ್ಲ ಮೂವಿ ಅನ್ನು"

ಸೋಮ ಮುಗುಳ್ನಕ್ಕ. 

ಕಿಟ್ಟಿ ಕಿಡಿಕಾರಿದ, "ಬಂದ್ಬಿಟ್ಟ ಹೇಳಕ್ಕೆ, ಕನ್ನಡದಲ್ಲೇ ಅಲ್ವೇನೋ ಇವ್ನು ಫೇಲ್ ಆಗಿದ್ದು"

ಮಂಜನಿಗೆ ತನ್ನ ಇತಿಹಾಸ ಕೆದಕಿದ್ದಕ್ಕೆ ಸ್ವಲ್ಪ ಇರುಸು ಮುರುಸಾಯಿತು, "ಫೇಲ್ ಆದೋರು ಯಾರು ಉದ್ಧಾರ ಆಗಿಲ್ವ, ಮತ್ತೆ ಕಟ್ಟಿ ಪಾಸ್ ಮಾಡಿಲ್ವೇನೋ ?"

ಸೋಮ ಮಧ್ಯಪ್ರವೇಶಿಸಿದ, "ಲೋ, ಹಳೆ ಕತೆ ಎಲ್ಲಾ ಯಾಕೀಗ. ಮುಂದಿಂದು ಯೋಚನೆ ಮಾಡಣ"

ಮಂಜ ನುಡಿದ, "ಏನೋ ಮುಂದಿಂದು ಯೋಚ್ನೆ ಮಾಡೋದು ? ಏನು ಕಿಸಿಯಕ್ಕೆ ಆಗಲ್ಲ ಈ ಕಿಟ್ಟಿಯಂತೋರ್ ಜೊತೆಗಿದ್ರೆ"

ಕಿಟ್ಟಿ ಹೇಳಿದ, "ತಗಳಪ್ಪ, ಇದೊಳ್ಳೆ ಕತೆ ಆಯ್ತು. ನಾನು ನಿಮ್ಮ ಜೊತೆಗಿರೋದಕ್ಕೆ ಊರಲ್ಲಿ ಜನ ಸ್ವಲ್ಪ ಆದ್ರೂ  ಮರ್ಯಾದೆ ಕೊಡೋದು."

ಮಂಜ ಮರುಮಾತಾಡಿದ, "ಯಾಕೆ ಹೇಳೋದು ಮರ್ಯಾದೆ ಅಂದ್ರೆ. ನಾವೇನು ಅವ್ರಪ್ಪನ ಮನೆ ಆಸ್ತಿ ತಿಂದಿದೀವ, ಅಲ್ಲಾ ಅವರ ಮನೆ ಮಕ್ಳು ಊರಿಗೆ ಏನು ಮಾಡಿದರೆ ?. ಏನೋ ವಯಸ್ಸಲ್ಲಿ ಒಂದಷ್ಟು ಪೋಲಿ ತಿರ್ಗಿದಿವಿ ಅಂತ ಹೀಗಾ ಚಾಡಿ ಹೇಳೋದು ಚಿಕ್ಕಪನ ಹತ್ರ !. ಮುಂದಿನ ಸರಿ ಬಂದಾಗ ಇಂತಹ ವಿಷ್ಯ ಏನಾದ್ರು ಕಿವಿಗೆ ಬಿದ್ರೆ, ಮನೆ ಕಾಲಿ ಮಾಡುಸ್ತೀನಿ ಅಂದವ್ನೆ ಚಿಕ್ಕಪ್ಪ."

ಸೋಮ ಕೇಳಿದ, "ಏನಂತ ಹೇಳಿದರೋ ?"

ಮಂಜ ನಿರಾಸೆಯಿಂದ ನುಡಿದ, "ಏನಿಲ್ಲ ಬಿಡು ಮಗ. ಇಂತದ್ದು ಎಷ್ಟು ನೋಡಿಲ್ಲ. ಯಾವನು ಏನು ಕಿತ್ಕಳಕ್ಕೆ ಆಗಲ್ಲ"

ಕಿಟ್ಟಿ ಕಿವಿಗುಟ್ಟಿದ, "ಕಿತ್ಕಳಕ್ಕೆ ಏನದೆ ಅಂತ ಬೇಕಲ್ಲ"

ಸೋಮ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಮನಗಂಡು, "ಲೇ ಕಿಟ್ಟಿ, ಫ್ರೆಂಡ್ ಶಿಪ್ ಅಂದ್ಮೇಲೆ ಜಗಳ ಇದ್ದಿದ್ದೇ, ನೀನು ಜಗಳ ಮಾಡಕ್ಕೆ ಫ್ರೆಂಡ್ಶಿಪ್ ಮಾಡಿದಂಗೆ ಆಡ್ತಿಯಲ್ಲೋ. ಸ್ವಲ್ಪ ಸಮಾಧಾನ ಮಾಡ್ಕೋ"

ಕಿಟ್ಟಿ ಕೆಂಡಾಮಂಡಲವಾದ, "ನಿಂಗೇನು ಸೋಮ, ಸಮಾಧಾನ ಹೇಳ್ತಿಯ. ಅವಾಗ ಇವಾಗ ಮುಂದಿನ ತಿಂಗಳು ಕೊಡ್ತೀನಿ ಅಂತ ಹೇಳಿ ದುಡ್ಡು ತಕ್ಕಂಡು ಅದ್ರಲ್ಲಿ ಅರ್ಧಕ್ಕರ್ಧ ನುಂಗೆ ಹಾಕಿದಾನೆ, ವಾಪಸ್ಸು ಕೇಳಿದ್ರೆ ಜೊತೆಗೆ ತಿಂದಿದ್ದು ಉಂಡಿದ್ದು ಎಲ್ಲ ಲೆಕ್ಕ ಕೊಡ್ತಾನೆ "

ಮಂಜ ಹೇಳಿದ, "ಮತ್ತೇನು ನಿಂಗೆ ಹೊರಗಡೆ ಪುಕ್ಸಟ್ಟೆ ಊಟ ಹಾಕ್ತಾರಾ ?"

ಸೋಮ ಹೇಳಿದ, "ಅದಿಕ್ಕೆ ಅವತ್ತೇ ಹೇಳ್ದೆ, ದುಡ್ಡಿನ ವ್ಯವಹಾರ ಎಲ್ಲ ನಮ್ಮ ಮಧ್ಯ ಇರ್ಲೇಬಾರ್ದು ಅಂತ. ನೀವೇ ಕೇಳಲ್ಲ ನನ್ನ ಮಾತು"

ಕಿಟ್ಟಿ ಹೇಳಿದ, "ನಿಂಗೇನು ಬಿಡು ಸೋಮ, ಮನೇಲಿ ಕೇಳ್ದಾಗ ಖರ್ಚಿಗೆ ಕಾಸು ಸಿಗ್ತದೆ. ಇವೆಲ್ಲ ನಿಂಗೆ ಅರ್ಥ ಆಗಲ್ಲ ಬಿಡು"

ಸೋಮ ಬೇಸರದಿಂದ ನುಡಿದ, "ಹೌದು, ನಂದು ರಾಜಮನೆತನ ಅಲ್ವಾ. ಬೇಕಾದಂಗೆ ಸಿಗ್ತದೆ"

ಸ್ವಲ್ಪ ಹೊತ್ತು ಸುಮ್ಮನಿದ್ದ ಮಂಜ ಹೇಳಿದ, "ಸೋಮ, ಅವನ ಬಾಕಿ ಕೊಟ್ಬಿಡು ನೀನೆ. ನಿಂಗೆ ಮುಂದಿನ ತಿಂಗಳು ಕೊಡ್ತೀನಿ"

ಸೋಮ ಹೌಹಾರಿದ, "ಈ ಕಿಟ್ಟಿ ಮಾತು ನೀನು ನಂಬ್ತಿಯಲ್ಲ, ನನ್ನ ಹತ್ರ ಅಷ್ಟು ಕಾಸಿದ್ರೆ ಕೊಡ್ತಿದ್ದೆ, ಇಲ್ಲ ನನ್ನ ಹತ್ರಾನೂ"

ಮಂಜ ಹೇಳಿದ, "ನಮ್ಮ ಸೋಮಂಗೆ ಫ್ರೆಂಡ್ಸ್ಗೆ ಕೊಡೋಕೆ ದುಡ್ಡಿರಲ್ಲ ಕಣೋ ಕಿಟ್ಟಿ, ಅವನ ಹುಡ್ಗಿಗೆ ಗಿಫ್ಟ್ ಕೊಡ್ಸೋಕೆ ಸಾಕಾಗಲ್ಲ"

ಕಿಟ್ಟಿ ಕಿಸಿಕಿಸಿ ನಗುತ್ತ ಕೇಳಿದ, "ಯಾರೋ ಸೋಮ ಅದು ಹುಡ್ಗಿ, ಹೋದ ವಾರ ಅಷ್ಟೇ ಬ್ರೇಕ್ಅಪ್ ಆಯಿತು ಅಂತ ಎಣ್ಣೆ ಹೊಡುದ್ವಲ್ಲೋ !"

ಮಂಜ ವಿವರಿಸಿದ, "ಸೋಮಂಗೆ ಸುಂಸುಮ್ನೆ ಬ್ರೇಕ್ಅಪ್ ಆಗುತ್ತೇನೋ ಕಿಟ್ಟಿ. ನಮ್ಮ ಸೋಮ ಯಾವಾಗ್ಲೂ ಎಲ್ಲಾನೂ ಪ್ಲಾನ್ ಮಾಡಿರ್ತಾನೆ. ನಮ್ಮ ದಾಸರಹಳ್ಳಿಗೆ ಡಾನ್ ಕಣೋ ಸೋಮ"

ಸೋಮ ಹೇಳಿದ, "ಸುಮ್ನೆ ಇರೋ ಮಂಜ, ಬಾಯಿಗೆ ಬಂದಾಗೆ ಮಾತಾಡ್ಬೇಡ. ಅವ್ಳು ಪರಿಚಯ ಅಷ್ಟೇ. ಏನೋ ಅರ್ಜೆಂಟ್ ಕಾಸು ಬೇಕಿತ್ತು ಅಂದ್ಲು, ಕೊಟ್ಟೆ ಅಷ್ಟೇ"

ಮಂಜ ಹೇಳಿದ, " ಕಿಟ್ಟಿ, ಬಡವರ ಬಂಧು ಕಣೋ ನಮ್ಮ ಸೋಮ. "

ಕಿಟ್ಟಿ ಗೊಳ್ಳೆಂದು ನಗಾಡಿದ. 

ಸೋಮ ಕೋಪದಿಂದ ಹೇಳಿದ, "ಲೇ, ಎಂತೋರೋ ನೀವಿಬ್ರು. ಏನೋ ಸಂಧಾನ ಮಾಡಕ್ಕೆ ಬಂದ್ರೆ ನನ್ ಬುಡಕ್ಕೆ ಇಡ್ತಿರಲ್ಲೋ"

ಕಿಟ್ಟಿ ಹೇಳಿದ, "ಕೇಳೋ ಮಂಜ, ಬುಡಕ್ಕೆ ಇಟ್ವಂತೆ"

ಮತ್ತೆ ಮಂಜ, ಕಿಟ್ಟಿ ನಗಾಡಲು ಶುರು ಮಾಡಿದರು. 

ಸೋಮ ಮೆಲ್ಲನೆ ಹೇಳಿದ, "ಹೌದು, ಏನು ಊರೆಲ್ಲ ಶಾಂತವಾಗಿ ಇದ್ಯಲ್ಲ"

ಮಂಜ ಹೇಳಿದ, "ಹೌದು ಕಣೋ ಸೋಮ, ಹುಡ್ಗಿರ್ ಹಿಂದೆ ಹೋಗ್ತಿದ್ರೆ ಊರೆಲ್ಲ ಶಾಂತವಾಗಿ ಇರ್ತದೆ. ನಿನ್ನೆ ಡಿಗ್ರಿ ಕಾಲೇಜ್ ಅಲ್ಲಿ ಯಾವ್ದೋ ಲೆಕ್ಚರ್ಗೆ ಮಾಂಜವ್ರೆ ನಮ್ಮ ಹುಡುಗ್ರು. ಪೊಲೀಸ್ ಬಂದಿದ್ರಂತೆ, ನಮ್ಮ ಬಸ್ಯ ಇದ್ನಲ್ಲ, ಅವ್ನ ಸಸ್ಪೆಂಡ್ ಮಾಡಿದರಂತೆ"

ಕಿಟ್ಟಿ ಕೇಳಿದ, "ಏನಂತೆ ಗಲಾಟೆ ?"

"ಏನೋ ಹುಡುಗಿ ವಿಷ್ಯ ಗುರು, ನಮ್ಮ ಸೋಮನ ಹುಡುಗಿ ಫ್ರೆಂಡ್ ಅವ್ಳು. ಪೊಲೀಸರು ಸಿಕ್ಕಿದವರನ್ನೆಲ್ಲ ಎಳ್ಕೊಂಡು ಹೋಗಿ ತದುಕ್ತಿದಾರೆ. ಅದುಕ್ಕೆ ನಮ್ಮ  ಹುಡುಗ್ರು ಹೆದ್ರಿ ಊರು ಬಿಟ್ಟು ಹೋಗವ್ರೆ. ಲೇ ಸೋಮ, ಸ್ವಲ್ಪ ಹುಷಾರಾಗಿರು. ಯಾವಾಗ್ಲೂ ಆ ಡಿಗ್ರಿ ಕಾಲೇಜು ಹುಡುಗಿ ಜೊತೆ ಸುತ್ಬೇಡ." ಮಂಜ ವಿವರಿಸಿದ.

"ನಾನು ಅಂತದ್ದೇನು ಮಾಡಿಲ್ಲ, ಒಳ್ಳೆ ಹುಡುಗಿ ಅವಳು" ಸೋಮ ಹೇಳಿದ. 

"ನಮ್ ಸೇಫ್ಟಿಲಿ ನಾವು ಇರೋಣ. ಸುಮ್ನೆ ಯಾಕೆ ಕಿರಿಕ್ ಎಲ್ಲ" ಕಿಟ್ಟಿ ಎಚ್ಚರಿಸಿದ. 

"ಲೇ ಪುಕ್ಲ, ಹೆದ್ರಿ ಸಾಯ್ತಿಯಲ್ಲೋ ಯಾವಾಗ್ಲು. ಗಂಡಸ್ರು ತರ ಇರೋದು ಕಲಿಯೋ ಕಿಟ್ಟಿ. ನಾವು ತಪ್ಪು ಮಾಡಿಲ್ಲ ಅಂದ್ಮೇಲೆ ಯಾಕ್ರೋ ಹೆದುರ್ಬೇಕು ?" ಮಂಜ ಜೋರಾಗಿ ಹೇಳಿದ.

"ತಪ್ಪು ಮಾಡಿದಿವೊ ಇಲ್ವೋ ಅದೆಲ್ಲ ಕೋರ್ಟ್ ತೀರ್ಮಾನ ಮಾಡುತ್ತೆ. ಸುಮ್ನೆ ಬಂದು ವದ್ದು ಎಳ್ಕೊಂಡು ಹೋದ್ರೆ ನೀನು ಬರ್ತೀಯ ಬಿಡ್ಸ್ಕಂಡು ಹೋಗಕ್ಕೆ" ಕಿಟ್ಟಿ ವಿವರಿಸಿದ. 

"ಹಾಗೆಲ್ಲ ಸುಮ್ನೆ ಬಂದು ಎಳ್ಕೊಂಡು ಹೋಗಕ್ಕೆ ಕಾನೂನಿದೆ." ಸೋಮ ಧೈರ್ಯ ತುಂಬಿದ. 

"ನಿಂಗೆ ಅರ್ಥ ಆಗಲ್ಲ ಗುರು, ಆ ಕಾಲೇಜು ಹುಡುಗ್ರು ಚೈಲ್ಡ್ ನನ್ ಮಕ್ಳು. ನಾಕು ವದೆ ಬಿದ್ರೆ ಬಾಯಿಗೆ ಬಂದಂಗೆ ವದ್ರಿಬಿಡ್ತಾರೆ. ಸುಮ್ನೆ ಯಾವನೋ ಒಬ್ಬ ನಮ್ಮ ಹೆಸರು ಹೇಳಿದ್ರೆ ಸಾಕಲ್ಲ" ಕಿಟ್ಟಿ ಮತ್ತೊಮ್ಮೆ ವಿವರಿಸುವ ಪ್ರಯತ್ನ ಮಾಡಿದ. 

ಇದೆ ಸಮಯಕ್ಕೆ ಹೊರಗಡೆ ವಾಹನವೊಂದು ಬಂದ ಸದ್ದಾಯಿತು. ಕಿಟ್ಟಿ ಎದ್ದು ಹೋಗಿ, ಬಾಗಿಲ ಬಳಿಯ ಕಿಟಕಿಯಿಂದ ನೋಡಿದ. ಅವನ ಕಣ್ಣುಗಳು ಮಂಜಾದಂತೆ ಅನ್ನಿಸಿತು, ಅದು ಪೊಲೀಸು ವಾಹನವಾಗಿತ್ತು. ಒಬ್ಬ ಖಡಕ್ ಅಧಿಕಾರಿಯೊಂದಿಗೆ ಇಬ್ಬರು ಕಾನ್ಸ್ಟೇಬಲ್ ಇಳಿದು ಅವರ ಮನೆಯತ್ತ ಬರುತ್ತಿದ್ದರು. 

ಕಿಟ್ಟಿ ಓಡಿ ಬಂದು ಸ್ನೇಹಿತರಿಗೆ ವಿಷಯ ತಿಳಿಸಿದ. ಇದುವರೆಗೆ ಧೈರ್ಯದ ಮಾತಾಡುತ್ತಿದ್ದ ಗೆಳೆಯರಿಬ್ಬರು ಶಾಂತವಾದರು. ಮನೆಯ ಬಾಗಿಲು ತಟ್ಟುವ ಸದ್ಧಾಯಿತು. ಹೃದಯ ಬಡಿತ ಒಳಗೊಳಗೇ ಹೆಚ್ಚಾಗುತ್ತಾ ಇತ್ತು ಮೂವರಿಗು. ಮಂಜ ಧೈರ್ಯ ತಂದುಕೊಂಡು ಹೋಗಿ ಬಾಗಿಲು ತೆರೆದ. 

ಪೊಲೀಸು ಅಧಿಕಾರಿ ಭೀಮು ಪಾಟೀಲ್ ಮೇಲಿನಿಂದ ಕೆಳಕ್ಕೆ ಮಂಜನನ್ನು ಒಮ್ಮೆ ಅವಲೋಕಿಸಿ ಕಾನ್ಸ್ಟೇಬಲ್ ಕಡೆ ನೋಡಿ ನೋಡಿ ಮಂದಹಾಸ ಬೀರಿದ. 

"ನಮಸ್ಕಾರ ಸಾರ್, ಏನು ಈ ಕಡೆ ಬಂದಿದ್ದು?", ಮಂಜ ಕೇಳಿದ. 

"ಮನೇಲಿ ಯಾರು ಇಲ್ವಾ ?", ಪೊಲೀಸ್ ಕಾನ್ಸ್ಟೇಬಲ್ ಸುಧಾಕರ ಕೇಳಿದರು.

"ಇದಾರೆ ಸಾರ್, ಫ್ರೆಂಡ್ಸ್ "

ಪೊಲೀಸರು ಮಂಜನನ್ನು ಬದಿ ಸರಿಸಿ ಮನೆ ಒಳಗೆ ಬಂದರು. ಸೋಮ ಹಾಗು ಕಿಟ್ಟಿ ಕೂತಿದ್ದ ಜಾಗದಲ್ಲೇ ಎದ್ದು ನಿಂತರು. 

"ಏನು ನಿಮ್ಮಿಬ್ರು ಹೆಸ್ರು ?", ಭೀಮು ಸಾಹೇಬರು ಕೇಳಿದರು. 

ಸೋಮನಾಥ್, ಕೃಷ್ಣ 

"ಎಷ್ಟು ವರ್ಷದಿಂದ ಪರಿಚಯ ನಿಮಗೆ ಇವನು ?", ಕಿಟ್ಟಿಯತ್ತ ನೋಡುತ್ತಾ ಕೇಳಿದರು. 

"ಕಾಲೇಜಲ್ಲಿ ಪರಿಚಯ ಆಗಿದ್ದು ಸಾರ್, ಯಾಕೆ ಇದುನ್ನೆಲ್ಲ ಕೇಳ್ತಿದೀರಾ ?"

"ಹೇಳ್ತಿವಿ ಇರಪ್ಪ ಸ್ವಲ್ಪ"

ಕಾನ್ಸ್ಟೇಬಲ್  ಸುಧಾಕರ ಮತ್ತು ಗಿರೀಶನನ್ನು ಮನೆ ಒಂದು ರೌಂಡ್ ನೋಡುವಂತೆ ಆಜ್ಞಾಪಿಸಿದರು. 

"ಯಾಕೆ ಸಾರ್? ಸರ್ಚ್ ವಾರೆಂಟ್ ಏನಾದ್ರು ತಂದಿದಿರಾ ?" ಎಂದು ಮಂಜ ಕೇಳಿದ. 

"ಯಾಕೋ, ಏನು ಇಟ್ಟಿದೀಯ ಮನೇಲಿ ?"

"ಏನು ಇಟ್ಟಿಲ್ಲ ಸಾರ್ "

ಅಷ್ಟು ಹೊತ್ತಿಗೆ ಒಳಗಡೆ ಹೋಗಿದ್ದ ಸುಧಾಕರ ಬಂದು "ಸಾರ್, ಆ ಅಲ್ಮೇರಾ ಒಳಗೆ ಈ ಉಂಗುರ ಸಿಕ್ತು " ಎಂದು ಹೇಳಿ ಸಾಹೇಬರಿಗೆ ತೋರಿಸಿದ. 

"ಯಾರ್ದೋ ಅದು ಉಂಗುರ ?"

"ನಂದೆ ಸರ್" ಮಂಜ ಉತ್ತರಿಸಿದ. 

"ಸರಿಯಾಗಿ ನೋಡಿ ಹೇಳೋ "ಭೀಮು ಸಾಹೇಬರು ಅದನ್ನು ಅವನ ಕೈಗಿಡುವಂತೆ ನೋಡಿದರು. 

"ನಂದೇ ಅಂದ್ರೆ, ಹೀಗೆ ಒಂದು ವ್ಯವಹಾರದಲ್ಲಿ ಒಬ್ರು ಕೊಟ್ಟಿದ್ದು. ದುಡ್ಡಿಗೆ ಬದಲಾಗಿ. ಹಾಗೆಲ್ಲ ಚಿನ್ನ ತಗೋಳಲ್ಲ ಸಾರ್ ನಾನು. ಏನು ಮಾಡೋದು ಬೇರೆ ದಾರಿ ಇಲ್ದೆ ತಗೋಬೇಕಾಯ್ತು"

"ಏನು ವ್ಯವಹಾರ?" ಪೊಲೀಸ್ ಸಾಹೇಬರು ಕೇಳಿದರು. 

"ಏನಿಲ್ಲ ಸಾರ್, ಹೀಗೆ ಸ್ವಲ್ಪ ದುಡ್ಡಿನ ವ್ಯವಹಾರ. ಬಡ್ಡಿಗೆ ದುಡ್ಡು ಕೊಟ್ಟಿರ್ತಾರಲ್ಲ ಅದುನ್ನ ವಸೂಲಿ ಮಾಡೋದು ಅಷ್ಟೇಯಾ"

"ಎಷ್ಟು ವರ್ಷದಿಂದ ಮಾಡ್ತಿದೀಯ ಈ ವ್ಯವಹಾರ ?"

"ಇದೇನು ವ್ಯವಹಾರ ಅಲ್ಲ ಸಾರ್, ನಮ್ಮ ಚಿಕ್ಕಪ್ಪನಿಗೆ ಬರಬೇಕಿದ್ದ ದುಡ್ದಿದು. ನಾನು ಹೇಗೂ ಇದೆ ಊರಲ್ಲಿ ಇದ್ನಲ್ಲ, ಹೋಗಿ ಇಸ್ಕೊಂಡು ಬಂದೆ "

"ನಿಮ್ಮ ಚಿಕ್ಕಪಂದು ಅಡ್ರೆಸ್ಸ್ ಮತ್ತೆ ಈಗೇನೋ ಕತೆ ಹೇಳಿದ್ಯಲ್ಲ ಅವರ ಮನೆ ಅಡ್ರೆಸ್ಸು ತಗೋಳಿ. ಹಾಗೆ ಇವ್ರಿಬ್ರು ಅಡ್ರೆಸ್ಸು ಮೊಬೈಲ್ ನಂಬರ್ ಇಟ್ಕೊಳಿ" ಎಂದು ಸುಧಾಕರ ಹಾಗು ಗಿರೀಶರಿಗೆ ಹೇಳಿದರು. 

"ಊರು ಬಿಟ್ಟು ಹೋಗ್ಬಾರ್ದು, ಹೇಳಿ ಕಳ್ಸಿದ್ರೆ ಸ್ಟೇಷನ್ಗೆ ಬಂದು ಹೋಗ್ಬೇಕು. ಅರ್ಥ ಆಯ್ತಾ ?" ಭೀಮು ಸಾಹೇಬರು ಅಧಿಕಾರವಾಣಿಯಲ್ಲಿ ಮಂಜನಿಗೆ ಎಚ್ಚರಿಸಿದರು. 

"ಯಾಕೆ ಸಾರ್ ?" ಮಂಜ ಕೇಳಿದ. 

"ಡೀಟೇಲ್ಸ್ ಕೊಡೊ ಹಾಗಿಲ್ಲ, ತುಂಬಾ ಸೆನ್ಸಿಟಿವ್ ಮ್ಯಾಟ್ರು. ಸಾಹೇಬ್ರು ಹೇಳ್ದಷ್ಟು ಮಾಡ್ರಿ" ಗಿರೀಶ ವಿವರಿಸಿದ. 

"ಸಾರ್, ಉಂಗುರ ಯಾಕೆ ತಗಂಡು ಹೋಗ್ತಿದೀರಾ ?" ಮಂಜ ಕೇಳಿದ. 

"ಎವಿಡೆನ್ಸು ಕಣಯ್ಯಾ, ಕೇಸ್ ಮುಗುದ್ಮೇಲೆ ಬಂದು ಇಸ್ಕೊಂಡು ಹೋಗು " ಸುಧಾಕರ ತಿಳಿಸಿದ. 

ಪೊಲೀಸರು ಹೊರಬಂದು ತಮ್ಮ ವಾಹನದತ್ತ ತೆರಳಿದರು. ಸೋಮ ಮತ್ತು ಕಿಟ್ಟಿಗೆ ಪೊಲೀಸರು ಬಂದಿದ್ದಕ್ಕಿಂತ ಮಂಜ ಅವರೊಡನೆ ವ್ಯವಹರಿಸಿದ ರೀತಿಯನ್ನು ಕಂಡು ಕಂಗಾಲಾಗಿದ್ದರು. ಒಂದೆರಡು ನಿಮಿಷ ಎಲ್ಲರೂ ಮೌನವಾಗಿದ್ದರು. ವಾಹನ ಹೋದ ದಾರಿಯನ್ನೇ ಮೂವರು ನೋಡುತ್ತಿದ್ದರು. 

"ತುಂಬಾ ಒಳ್ಳೆ ಹುಡುಗ್ರು ಸಾರ್" ಸುಧಾಕರ ನುಡಿದ. 

ಭೀಮು ಪಟೇಲ್ ಏನನ್ನು ಹೇಳದೆ ತಮ್ಮದೇ ಚಿಂತೆಯಲ್ಲಿ ಮುಳುಗಿದ್ದರು. ಸುಧಾಕರನ ಮಾತು ಕೇಳಿ ಎಚ್ಚರಗೊಂಡರು. 

"ಆ ಕಿಟ್ಟಿ ಮೇಲೆ ಒಂದು ಕಣ್ಣು ಇಟ್ಟಿರಿ. ಅವನು ಎಲ್ಲಿ ಹೋಗ್ತಾನೆ ಬರ್ತಾನೆ ಅಂತ ಸ್ವಲ್ಪ ಗಮನಿಸುತ್ತಾ ಇರಿ. ಏನೋ ಅನುಮಾನ ನಂಗೆ ಆವ್ನುನ್ನ ನೋಡಿದ್ರೆ"

"ಸ್ವಲ್ಪ ಪುಕ್ಲ ಅಷ್ಟೇ ಬಿಡಿ ಸಾರ್, ಅಂತದ್ದೇನು ಇಲ್ಲ ಅನ್ಸ್ತದೆ " ಗಿರೀಶ ಹೇಳಿದ. 

"ಹೇಳ್ದಷ್ಟು ಮಾಡಯ್ಯ ಸುಮ್ನೆ" ಸಾಹೇಬರು ಗುಡುಗಿದರು. 

"ಸರಿ ಸಾರ್ " ಗಿರೀಶ ಒಪ್ಪಿಗೆಯ ಧ್ವನಿಯಲ್ಲಿ ನುಡಿದ. 

"ಸುಧಾಕರ್, ಗಾಡಿ ಸೈಡ್ಗೆ ಹಾಕಿ  ಆ ಮನೆಯೋರ್ನ ವಿಚಾರ್ಸ್ಕೊಂಡು ಬನ್ನಿ ಉಂಗುರ ಅವಂದೇನ ಅಂತ" ಭೀಮು ಪಾಟೀಲ್ ಅಪ್ಪಣೆ ಮಾಡಿದರು. 

ಸುಧಾಕರ ಮತ್ತು ಗಿರೀಶ ಗಾಡಿಯಿಂದ ಇಳಿದು ಮನೆಯತ್ತ ನಡೆದರು. ಉಂಡು ಮಲಗಿದ್ದ ದಡಿಯನನ್ನು ಲಾಠಿಯಿಂದ ಗಿರೀಶ ತಿವಿದು ಎಚ್ಚರಿಸಿದ.  ಅಚಾನಕ್ಕಾಗಿ ಪ್ರತ್ಯಕ್ಷವಾದ ಪೊಲೀಸರನ್ನು ಕಂಡು ಗಾಬರಿಗೊಂಡಿತು ಆ ಜೀವ. 

"ಏನಯ್ಯ, ನಿಂದೇನಾ ಇದು ಉಂಗುರ?" ಸುಧಾಕರ ಉಂಗುರ ತೋರಿಸುತ್ತ ಕೇಳಿದ. 

ಅದನ್ನು ಕೈಗೆ ತೆಗೆದುಕೊಂಡು ಸೂಕ್ಷ್ಮವಾಗಿ ಅವಲೋಕಿಸಿ, "ನಂದೇ ಸಾರ್, ಎಲ್ಲಿ ಸಿಕ್ತು ?"

"ಎಲ್ಲಿ ಸಿಕ್ತು ಅನ್ನೋದು ಮ್ಯಾಟರ್ ಅಲ್ಲ. ಯಾರಿಗಾದ್ರೂ ಮಾರಿದ್ಯಾ ಇದುನ್ನ?" ಸುಧಾಕರ ಪ್ರಶ್ನಿಸಿದ. 

"ಹೌದು ಸಾರ್, ಮಂಜನ್ಗೆ ಸಾಲ ತೀರುಸುವಾಗ ಕೊಟ್ಟಿದ್ದೆ. ದುಡ್ಡು ಕೊಟ್ರೆ ವಾಪಸ್ಸು ಕೊಡ್ತೀನಿ ಅಂದಿದ್ದ. ದುಡ್ಡು ಹೊಂದಿಸಕ್ಕೆ ಆಗಿಲ್ಲ" 

"ಸರಿಯಾಗಿ ನೋಡಿ ಹೇಳಯ್ಯ, ಇದುನ್ನೆಲ್ಲ ನಾವು ನಿನ್ನ ಸ್ಟೇಟ್ಮೆಂಟ್ ಅಂತ ಬರ್ಕೋತೀವಿ." ಗಿರೀಶ ಎಚ್ಚರಿಸಿದ. 

"ಹೌದು ಸ್ವಾಮಿ, ನಂದೆಯ ಉಂಗುರ "

"ಸರಿ ನಾವಿನ್ನು ಹೊರುಡ್ತೀವಿ. ಏನಾದ್ರು ವಿಷ್ಯ ಇದ್ರೆ ಹೇಳಿ ಕಳುಸ್ತೀವಿ. ಬರ್ಬೇಕಾಗುತ್ತೆ ಸ್ಟೇಷನ್ಗೆ" ಗಿರೀಶ ಹೇಳಿದ. 

"ಯಾಕೆ ಸ್ವಾಮಿ, ನಾನೇನು ಮಾಡಿದೀನಿ ?"

"ಅದ್ನೇಲ್ಲ ಈಗ್ಲೇ ಹೇಳಕ್ಕೆ ಆಗಲ್ಲ" ಸುಧಾಕರ ಹೇಳಿದ. ನಂತರ ಇಬ್ಬರು ಗಾಡಿಯ ಬಳಿಗೆ ಬಂದು ಸಾಹೇಬರಿಗೆ ವಿಚಾರ ತಿಳಿಸಿದರು. ಗಿರೀಶನ ಮುಖದಲ್ಲಿ ಗೆಲುವಿನ ಸಂಭ್ರಮವಿತ್ತು. "ನಾನು ಆಗ್ಲೇ ಹೇಳಿಲ್ವ ಸಾರ್, ಹುಡುಗ್ರು ಒಳ್ಳೆಯವ್ರು ಅಂತ " ಗಿರೀಶ ತಿಳಿಸಿದ. 

"ರೀ ಗಿರೀಶ್ ಅವ್ರೆ, ಇದೇನು ಸಿನಿಮಾ ಅನ್ಕೊಂಡ್ರೆನ್ರೀ ಒಳ್ಳೆಯವ್ರು ಕೆಟ್ಟವರು ಅನ್ನಕ್ಕೆ. ತಪ್ಪು ಮಾಡಿ ಸಿಕ್ಕಿ ಹಾಕೊಂಡೋರು, ಎಸ್ಕೇಪ್ ಆದೋರು ಇವೆರಡೇ ಕೆಟಗರಿ ನಮ್ಮ ಸಮಾಜದಲ್ಲಿ ಇರೋದು. ಎಲ್ಲಿ ಹೋಗ್ತಾರೆ, ಒಂದಲ್ಲ ಒಂದಿನ ಸಿಕ್ತಾರಲ್ಲ" ಭೀಮು ಪಾಟೀಲ್ ವಿವರಿಸಿದರು. 

ಸುಧಾಕರ ಹಾಗು ಗಿರೀಶ ಗಂಭೀರವಾಗಿ ಕೇಳುತ್ತಿದ್ದರು. ಭೀಮು ಪಟೇಲರು ತಮ್ಮ ಮಾತುಗಳನ್ನು ಮುಂದುವರೆಸಿದರು. 

"ನೋಡ್ರಿ, ಹೆಚ್ಚಿನ ಅಪರಾಧಗಳಲ್ಲಿ ಇಂತಹವರೇ ಸಿಕ್ಕಿ ಬೀಳೋದು. ಅಪರಾಧ ನಡೆಯೋ ತನಕ ನಾವು ಕಾಯುತ್ತ ಕೂರೋಕೆ ಆಗಲ್ಲ. ಇಂತೋರ್ ಮೇಲೆ ಒಂದು ಕಣ್ಣಿಟ್ಟಿರಬೇಕು. ನಮ್ಮ ಊರು ಅಂದ್ಮೇಲೆ ಪೂರ್ತಿ ಡೀಟೇಲ್ಸ್ ಇರ್ಬೇಕು. ಅದಿಕ್ಕೆ ಅಲ್ವ ಸರ್ಕಾರ ನಮಗೆ ಇಷ್ಟೆಲ್ಲಾ ಸವಲತ್ತು ಕೊಟ್ಟಿರೋದು. ಆ ಮಂಜ ಇನ್ನು ಫೀಲ್ಡ್ಗೆ ಇಳೀತಿದಾನೆ, ಈಗ್ಲೇ ಅವ್ನಿಗೆ ಬುದ್ಧಿ ಹೇಳುದ್ರೆ ನಾಳೆ ಮಾಡೋ ಅನಾಹುತ ತಪ್ಪಿಸಬಹುದು. ಏನ್ರಯ್ಯಾ, ಹೇಳೋದು ತಲೆಗೆ ಹೋಗ್ತಿದ್ಯ ?"

"ಯಸ್ ಸರ್ "

"ಸರಿ, ಒಳ್ಳೆ ಹೋಟೆಲ್ ಸಿಕ್ಕಿದ್ರೆ ಗಾಡಿ ಸೈಡ್ಗೆ ಹಾಕಿ. ಊಟ ಮಾಡೋಣ"

"ಸರಿ ಸರ್, ಮುಂದೆ ಎಲ್ಲಿಗೆ ಪಯಣ?"

ಮೊದ್ಲು ಊಟ ಮಾಡೋಣ, ಆಮೇಲೆ ಮುಂದಿನ ಕೆಲಸ.ಹಾಗೆ ಇನ್ನೊಂದು ರೌಂಡ್ ಹೋಗಿ ನೋಡೋಣ...

ಕಾಮೆಂಟ್‌ಗಳು

- Follow us on

- Google Search