ಬಂಡವಾಳಶಾಹಿಗಳು ನನಗಿಷ್ಟವಿಲ್ಲ

ಯಾರಿದು ಬಂಡವಾಳಶಾಹಿಗಳು? ಬಂಡವಾಳಶಾಹಿಗಳೆಂದರೆ ಸಾಕಷ್ಟು ಬಂಡವಾಳ ಸುರಿದು ಉದ್ಯಮವನ್ನು ಬೆಳೆಸಿ ಲಾಭ ಪಡೆಯುವವರು. ಇದರಲ್ಲೇನು ತಪ್ಪಿದೆ? ಅವರು ಉದ್ಯೋಗ ಕೊಡದೆ ಹೋದರೆ ನಮ್ಮ ಜೀವನ ನಡೆಯುವುದಾದರೂ ಹೇಗೆ ಎಂಬುದು ಹಲವರ ಚಿಂತೆ. ಅದೇ ಅವರ ಬಂಡವಾಳ. ತಮ್ಮ ಉದ್ಯಮಕ್ಕೆ ಅಗತ್ಯವಿರುವ ಕಡಿಮೆ ಸಂಬಳಕ್ಕೆ ದುಡಿಯುವ ಜನಾಂಗವನ್ನು ಸೃಷ್ಟಿಸುವುದು. ಬಹುಷಃ ಇದೇ ಕಾರಣಕ್ಕಾಗಿಯೇ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸಾರ್ವಜನಿಕರಿಗೆ ಉಚಿತ ಹಾಗು ಗುಣಮಟ್ಟದ ಶಿಕ್ಷಣ ಸಿಗದೇ ಬಡವರು ಬಡವರಾಗಿಯೇ ಉಳಿದಿರುವುದು. ನಮ್ಮ ಸಮಾಜದ ಹೆಚ್ಚಿನ ಸಮಸ್ಯೆಗಳು ಉತ್ತಮ ವಿದ್ಯಾಭ್ಯಾಸದ ಮೂಲಕ ಪರಿಹರಿಸಬಹುದು ಎಂದೇನಿಲ್ಲ, ಆದರೆ ಜಗತ್ತನ್ನು ಎದುರಿಸಲು ಒಂದು ಸಮಾನ ವೇದಿಕೆಯನ್ನು ಇದು ನೀಡಬಲ್ಲದು. 

ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ರೂಪಾಯಿಗಳ ಆಸ್ತಿ ಹೊಂದಿದವರು ಕೇವಲ ಪ್ರಚಾರಕ್ಕಾಗಿ ಅಥವಾ ತಮ್ಮ ತಪ್ಪುಗಳಿಂದ ಉಂಟಾಗುವ ಅಪರಾಧಿ ಭಾವವನ್ನು ಹತ್ತಿಕ್ಕಲು ಅಳಿಲು ಸೇವೆಯಲ್ಲಿ ತೊಡಗಿಕೊಳ್ಳುವುದು ನೋಡಲು ಹೇಸಿಗೆಯಾಗುತ್ತದೆ. ಒಮ್ಮೊಮ್ಮೆ, ಹಣ ಸಂಪಾದನೆಗೆ ಬೇರೆ ದಾರಿಯೇ ಇಲ್ಲವೇನೋ ಅನ್ನಿಸುತ್ತದೆ. ನಮ್ಮ ದುರಾದೃಷ್ಟ ಏನೆಂದರೆ ಸರ್ಕಾರಗಳು ಸಹ ಇವರೊಂದಿಗೆ ಕೈ ಜೋಡಿಸಿರುವುದು. ಮನುಷ್ಯ ತನ್ನ ಜೀವನಕ್ಕಾಗಿ ಎಂತಹ ಕೀಳುಮಟ್ಟಕೆ ಬೇಕಾದರೂ ಇಳಿಯಬಹುದು ಎಂಬುದಕ್ಕೆ ಇಂತವರನ್ನು ಕಂಡರೆ ನೆನಪಾಗುತ್ತದೆ. ಸಂಪತ್ತಿನ ಅಸಮಾನ ಹಂಚಿಕೆಯೇ ಸಾಕಷ್ಟು ಸಮಸ್ಯೆಗಳ ಮೂಲವಾಗಿದೆ. 

ಇವತ್ತು ಜಗತ್ತು ನಡೆಯುತ್ತಿರುವುದೇ ಬಂಡವಾಳಶಾಹಿಗಳ ನಿರೀಕ್ಷೆಗಳಂತೆ. ತಿನ್ನುವ ಅನ್ನದಿಂದ ಹಿಡಿದು ಬಾಹ್ಯಾಕಾಶದ ಅಂಗಳದವರೆಗೆ ಕಾಣದ ಕೈಗಳ ಕೈವಾಡವಿದೆ. ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದೊಂದೇ ಇವರ ಗುರಿ. ಸಮಾಜಕ್ಕೆ ಅಲ್ಪ ಸ್ವಲ್ಪ ಕೊಡುಗೆ ನೀಡುತ್ತರಾದರು, ಕೊಟ್ಟಿದ್ದಕ್ಕಿಂತ ಸಾವಿರಾರು ಪಟ್ಟು ಹೆಚ್ಚಿನದನ್ನು ಸಮಾಜದಿಂದ ಪಡೆಯುತ್ತಾರೆ. ಇವರ ಫೇಸ್ಬುಕ್ ಫ್ಯಾನ್ ಪೇಜುಗಳು, ಬಡವರಿಗಾಗಿ ಮಾಡುವ ಭಾಷಣಗಳು, ಇವರನ್ನು ಹೊಗಳಲೆಂದೇ ಇರುವ ನೌಕರರು ಸಮಾಜಕ್ಕೆ ಇವರೆಲ್ಲರನ್ನು ದೇವರಂತೆ ಬಿಂಬಿಸುತ್ತಾರೆ. 

ಅದೆಷ್ಟೋ ದುಡಿಯುವ ಜನ ಇವರನ್ನು ದೇವರಂತೆ ಕಾಣುತ್ತಾರೆ. ಸಂಪತ್ತಿಗಾಗಿ ದೇಶವನ್ನೇ ಲೂಟಿ ಹೊಡೆಯುವ ಇವರು ತಮ್ಮ ಮಕ್ಕಳಿಗೂ ಇದೆ ಬುದ್ಧಿ ಕಲಿಸುತ್ತಾರೆ. ತಮ್ಮ ಉದ್ಯಮಕ್ಕೆ ದುಡಿಯುವ ಜನರ ಮಕ್ಕಳು ಹಾಳಾಗಿ ಹೋದರು ಚಿಂತಿಸದೆ ತಮ್ಮ ಮಕ್ಕಳನ್ನು ಯೋಗ್ಯತೆಯಿಲ್ಲದಿದ್ದರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ದೊಡ್ಡ ದೊಡ್ಡ ಕಾಲೇಜುಗಳಿಗೆ ಸೇರಿಸುತ್ತಾರೆ. ಅದೆಷ್ಟೋ ಉದ್ಯಮಿಗಳು ರಾಜಕೀಯಕ್ಕೆ ಕಾಲಿಟ್ಟು ರಾಜಾರೋಷವಾಗಿ ತೆರಿಗೆಯ ಹಣವನ್ನು ತಮಗೆ ಬೇಕಾದ ಯೋಜನೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. 

ದುಡಿಯುವ ವರ್ಗ ಒಂದಾಗಿ ಇವರ ವಿರುದ್ಧ ಹೋರಾಡದ ಹೊರತು ನಮ್ಮ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ದುಡಿಯುವ ವರ್ಗಕ್ಕೆ ಈ  ರೀತಿಯ ಯೋಚನೆ ಸಹ ಮೂಡುವಷ್ಟು ಸಮಯ ಸಿಗುತ್ತಿಲ್ಲ. ಒಂದಾದ ಮೇಲೆ ಒಂದರಂತೆ ಹೊಸ ಕನಸುಗಳ ಬೆನ್ನುಹತ್ತಿ ಜೀವನವನ್ನೇ ಬಂಡವಾಳಶಾಹಿಗಳ ಉದ್ಧಾರಕ್ಕೆ ದುಡಿಯುವ ವರ್ಗ ಮೀಸಲಿಟ್ಟಿದೆ. ಇದು ಆಧುನಿಕ ಶೋಷಣೆಯ ಮತ್ತೊಂದು ಮುಖವಷ್ಟೇ. ಇಂತಹ ಬಂಡವಾಳಶಾಹಿಗಳು ಮಾಡುವ ಹಗರಣಗಳು ಯಾವ ರೀತಿಯಾಗಿರುತ್ತವೆ ಎಂಬುದನ್ನು ವಿವರಿಸುವ Dirty Money ಎಂಬ ಡಾಕ್ಯುಮೆಂಟರಿ Netflix ಅಲ್ಲಿದೆ. 

ಕಾಮೆಂಟ್‌ಗಳು

- Follow us on

- Google Search