ದೂರದ ಬೆಟ್ಟ ನುಣ್ಣಗೆ

ಜೀವನದಲ್ಲಿ ಯಾವುದು ಸಹ  ಉಚಿತವಾಗಿ ಸಿಗುವುದಿಲ್ಲ. ನಾನು ಕೇವಲ ಹಣದ ಬಗ್ಗೆ ಮಾತಾಡುತ್ತಿಲ್ಲ. ಹಣದಿಂದ ಕೊಂಡುಕೊಳ್ಳಲಾಗದ ಹಲವಾರು ಅಂಶಗಳು ನಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತವೆ. ಕೆಲವು ಸಂದರ್ಭಗಳಲ್ಲಿ ನಮ್ಮ ಸಮಯ ಹಣಕ್ಕಿಂತ ಬಹಳ ಅಮೂಲ್ಯವಾಗಿರುತ್ತದೆ. ಹಣ ಸಂಪಾದನೆ ಇಲ್ಲದೆ ಜೀವನ ನಿರ್ವಹಣೆ ಅಸಾಧ್ಯ. ಇದನ್ನು ಮೀರಿದ ಜೀವನಶೈಲಿಯನ್ನು ರೂಪಿಸಿಕೊಳ್ಳುವ ಅವಶ್ಯಕತೆ ನಮಗಿದೆ. ಹಿತ ಮಿತದ ಜೀವನಶೈಲಿಯನ್ನು ರೂಪಿಸಿಕೊಳ್ಳುವತ್ತ ನಮ್ಮ ಆಲೋಚನೆಗಳು ಇರಬೇಕಾಗಿದೆ. 

ಕೆಲವೊಂದು ಬಾರಿ ನಾವೆಷ್ಟೇ ಜಾಗೃತರಾಗಿದ್ದರೂ ತಪ್ಪು ಆಗಿಬಿಡುತ್ತದೆ. ಹಾಗೆಂದ ಮಾತ್ರಕ್ಕೆ ನಾವು ಇಷ್ಟು ದಿನ ನಂಬಿಕೊಂಡು ಬಂದ ಮೌಲ್ಯಗಳನ್ನು ಕಿತ್ತೆಸೆಯುವ ಅವಶ್ಯಕತೆಯಿಲ್ಲ. ಬೇಕಾದಷ್ಟು ವಿರಾಮ ತೆಗೆದುಕೊಂಡು ನಮ್ಮ ಆಲೋಚನೆ ಮತ್ತು ಜೀವನ ಮೌಲ್ಯಗಳ ಬಗ್ಗೆ ಒಮ್ಮೆ ಸಿಂಹಾವಲೋಕನ ಮಾಡಿದರೆ ಮನಸ್ಸಿನ ಗೊಂದಲಗಳಿಗೆ ಅಂತ್ಯ ಹಾಡಬಹುದು. ಈ ರೀತಿಯಾಗಿ ಸ್ವಲ್ಪ ಸಮಯ ದಿನದಲ್ಲಿ ತೆಗೆದಿಡುವುದು ಮಾನಸಿಕ ನೆಮ್ಮದಿಗೆ ಬಹಳ ಅವಶ್ಯಕ. 

ಪ್ರಸ್ತುತ ಸಮಾಜದಲ್ಲಿ ಉದ್ಯೋಗವಿಲ್ಲದೆ ಏನನ್ನು ಸಾಧಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮಲ್ಲಿ ಬುದ್ಧಿವಂತರಿಗೇನು ಕೊರತೆ ಇಲ್ಲ. ನಮ್ಮಲ್ಲಿ ಹೆಚ್ಚಿನ ಜನರಿಗೆ ಸಮಸ್ಯೆಯಿರುವುದು, ತಮ್ಮ ನಿಜವಾದ ಶಕ್ತಿ ಸಾಮರ್ಥ್ಯಗಳ ಅರಿವಿಲ್ಲದೆ ಇರುವುದು. ತಮಗೆ ಯಾವ ಕ್ಷೇತ್ರದಲ್ಲಿ ಬಹಳ ಆಸಕ್ತಿಯಿದೆ ಆ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸುವ ಕೌಶಲವನ್ನು ಬೆಳಿಸಿಕೊಳ್ಳುವತ್ತ ನಮ್ಮ ಗುರಿಗಳು ಇರಬೇಕು. ಒಮ್ಮೆ ಒಂದು ಉತ್ತಮ ಉದ್ಯೋಗವನ್ನು ಪಡೆದು ಹಣಗಳಿಸುವ ಹಾಗು ಹಣಬೆಳೆಸುವ ದಾರಿಗಳನ್ನು ಕಂಡುಕೊಂಡರೆ ಜೀವನದ ಮುಕ್ಕಾಲು ಭಾಗ ಸಮಸ್ಯೆಗಳು ಕಣ್ಮರೆಯಾಗುತ್ತವೆ. 

ಇಷ್ಟೆಲ್ಲಾ ಹೇಳಲು ಸುಲಭವೇ ಹೊರತು ಅದನ್ನು ಕಾರ್ಯರೂಪಕ್ಕೆ ತರಲು ಹೋದವರಿಗೆ ಮಾತ್ರ ಕಷ್ಟಗಳ ಅರಿವಾಗಿರುತ್ತದೆ. ದೂರದ ಬೆಟ್ಟ ನುಣ್ಣಗೆ ಅನ್ನುವಂತೆ ಜೀವನದ ಗುರಿಗಳು. ಸೋಲುಗಳು ಸಾಮಾನ್ಯ. ಜೀವನದ ಪ್ರತಿ ಹಂತವು ತನ್ನದೇ ಆದ ವಿಶೇಷ ಸಮಸ್ಯೆಗಳನ್ನು ಒಳಗೊಂಡಿದೆ, ಅವುಗಳನ್ನು ಎದುರಿಸಲು ಹೊಸ ಹೊಸ ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ. ಕಲಿಯಬೇಕಾಗಿರುವುದು ಸಾಗರದಷ್ಟಿದೆ, ನಮ್ಮಲ್ಲಿ ಆಕಾಶದಷ್ಟು ವಿಶಾಲವಾದ ಕಲಿಯುವ ಆಸಕ್ತಿಯಿರಬೇಕು. ಇಲ್ಲದಿದ್ದರೆ, ಹಂತ ಹಂತವಾಗಿ ಕಲಿಯುವ ಸಾಮರ್ಥ್ಯವನ್ನು ಬೆಳಿಸಿಕೊಳ್ಳಬೇಕು. 

ನಮಗೆ ಬೇಕಾಗಿರುವುದನ್ನು ಜಗತ್ತಿನಿಂದ ಪಡೆಯುವ ಎಲ್ಲ ಹಕ್ಕು ಮತ್ತು ಸಾಮರ್ಥ್ಯ ನಮಗಿದೆ ಎಂಬ ಅಚಲ ನಂಬಿಕೆ ನಮ್ಮದಾಗಿರಬೇಕು. ಯಾವುದೇ ಕೆಟ್ಟ ಸೋಲುಗಳಲ್ಲಿಯೂ ಒಳ್ಳೆಯದನ್ನು ಹುಡುಕಿ ಲಾಭ ಪಡೆಯುವ ವ್ಯಾವಹಾರಿಕ ಜಾಣ್ಮೆ ಬೆಳೆಸಿಕೊಳ್ಳಬೇಕು. ನಮ್ಮ ಜೀವನವನ್ನು ಕಟ್ಟಿಕೊಡುವ ಸಂಗತಿಗಳತ್ತ ನಮ್ಮ ಶಕ್ತಿಯನ್ನು ಕೇಂದ್ರೀಕರಿಸಬೇಕು. ಆಗ ಮಾತ್ರ ನಿಜವಾದ ಸಾಧನೆ ಮಾಡಲು ಸಾಧ್ಯ . 

ಕಾಮೆಂಟ್‌ಗಳು

- Follow us on

- Google Search