ಪುಸ್ತಕ ಪರಿಚಯ: ಮೋಹನಸ್ವಾಮಿ

ಇದೊಂದು ವಸುಧೇಂದ್ರ ಅವರು ಬರೆದಿರುವ ಕಥಾಸಂಕಲನ. ಮೋಹನಸ್ವಾಮಿ ಎಂಬ ಗೇ ತನ್ನ ಜೀವನವನ್ನು ಓದುಗರಿಗೆ ಮನವರಿಕೆ ಮಾಡಿಕೊಡುವ ಪಾತ್ರವಾಗಿದೆ. ಸಮಾಜ ಅದೆಷ್ಟೇ ಮುಂದುವರೆದರು, ಅಲ್ಪಸಂಖ್ಯಾತರ ಧ್ವನಿಯಾಗುವುದು ಬಹಳ ಕಡಿಮೆ. ಒಬ್ಬ ಗೇ ಆಗಿ ತಾನು ಅನುಭವಿಸುವ ಭಾವನೆಗಳು, ಸಮಾಜದ ಜನರಿಂದ ಅದನ್ನು ಮುಚ್ಚಿಡಲು ಮಾಡುವ ಪ್ರಯತ್ನ, ಇವೆಲ್ಲವನ್ನೂ ಮೀರಿ ಎಡವಟ್ಟದಾಗ ಜನರು ಅವರನ್ನು ಕಾಣುವ ರೀತಿ ಮನಕಲಕುವಂತೆ ಕಥೆಗಳ ಮೂಲಕ ಓದುಗರಿಗೆ ತಿಳಿಸಲಾಗಿದೆ. 

ಇತ್ತೀಚಿಗೆ ಯಾವುದೊ ಪುಸ್ತಕ ಓದುತ್ತಿದ್ದಾಗ ಓದಿದ ಸಾಲುಗಳು ನೆನಪಾಗುತ್ತಿವೆ "ಒಂದು ಬರಹದ ಮುಖ್ಯ ಉದ್ದೇಶ, ಭಾವನೆಗಳನ್ನು ಮೂಡಿಸುವುದು. ಯಾವುದೇ ಭಾವನೆಗಳೇ ಮೂಡದ ಬರಹ ಹೆಣವಿದ್ದಂತೆ". ಸಮಾಜ ಯಾವೆಲ್ಲ ರೀತಿಯಲ್ಲಿ ದುರ್ಬಲರನ್ನು ಹೆದರಿಸಿ ಬೆದರಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತದೆ ಎಂಬುದನ್ನು ಸಹ ಮನಗಾಣಬಹುದು. ಮೋಹನಸ್ವಾಮಿಯ ಗೇ ಕಥೆಗಳು ಕಣ್ಣಂಚಿನಲ್ಲಿ ನೀರನ್ನು ತರಿಸುತ್ತವೆ. ಕಾಲ ಇಷ್ಟು ಮುಂದುವರೆದಿರುವ ಸಂದರ್ಭಗಳಲ್ಲಿಯೂ ಅಂಥವರು ಆತ್ಮಹತ್ಯೆ ಅಥವಾ ಖಿನ್ನತೆಗೆ ಒಳಗಾಗುವುದು ಬೇಸರ ಮೂಡಿಸುತ್ತದೆ. 


ಸರಿ ತಪ್ಪು ಎಲ್ಲವು ಕಾಲ, ಆಯಾ ಪ್ರದೇಶ ಹಾಗು ಸಾಮಾಜಿಕ ವ್ಯವಸ್ಥೆಗೆ ಒಳಪಟ್ಟಿವೆ. ಬೇರೊಬ್ಬರ ಜೀವನದ ಆಯ್ಕೆಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಪುಸ್ತಕದ ಕೊನೆಯಲ್ಲಿ ಒಂದಷ್ಟು ಬೇರೆ ಕಥೆಗಳಿವೆ. ಮಹಾಭಾರತದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ವಸುಧೇಂದ್ರ ಅವರು ದ್ರೌಪದಿಯ ಮನದ ತೊಳಲಾಟವನ್ನು ಚಿತ್ರಿಸುವ ಕಥೆಯೊಂದನ್ನು ಕೊನೆಯಲ್ಲಿ ಬರೆದಿದ್ದಾರೆ. ಬಹುಷಃ ಕಾಲ ಕಳೆದಂತೆ ತಿಳುವಳಿಕೆ ಮೂಡಿ, ಇಂದಿನ ತಪ್ಪುಗಳು ಸರಿಯೆಂದು ಸಮಾಜದಿಂದ ಸ್ವೀಕರಿಸಲ್ಪಡಬಹುದೆನ್ನಿಸುತ್ತದೆ.  

ಕನ್ನಡ ಸಾಹಿತ್ಯಕ್ಕೆ ಮೋಹನಸ್ವಾಮಿ ಒಂದು ಹೊಸ ಆಯಾಮವನ್ನು ನೀಡಿದೆ. ಈ ಪುಸ್ತಕ ಪ್ರಕಟಣೆಗೊಂಡು ಹಲವಾರು ವರ್ಷಗಳು ಕಳೆದಿವೆ. ಸಮಾಜದ ಸೌಂದರ್ಯವಿರುವುದು ತನ್ನ ವಿಚಾರ ನಂಬಿಕೆ ಹಾಗು ಮೌಲ್ಯಗಳನ್ನು ಬೆಂಬಲಿಸುವ ಬಹುಜನರ ಅಟ್ಟಹಾಸದಲ್ಲಲ್ಲ, ಅದನ್ನು ಹೊರತಾಗಿಯೂ ನಮ್ಮೊಡನೆ ಬದುಕುವ ಜನರ ಮುಗುಳ್ನಗೆಯಲ್ಲಿ. ಇಂದಿನ ದಿನದ ಚರ್ಚೆಗಳು, ಪರ ವಿರೋಧಗಳು ಎಲ್ಲವೂ ಹೆಚ್ಚಿನ ಜನರನ್ನು ತಲುಪುವ ಗುರಿಯನ್ನೇ ಹೊಂದಿರುವಾಗ ಉಳಿದವರಿಗೆ ಧ್ವನಿಯಾಗುವವರು ಯಾರು ?

ಈ  ವಿಷಯಕ್ಕೆ ಸಂಬಂಧಿಸಿದ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರ ಲಿಂಕ್ ಇಲ್ಲಿದೆ ಮೋಹನಸ್ವಾಮಿ-ಎನ್ನುವ-ಮಿಥ್ಯೆಯೂ-ನಿಜವೂ

ಕಾಮೆಂಟ್‌ಗಳು

- Follow us on

- Google Search