ರಾಜಕೀಯ ಆಸಕ್ತಿ

ಕೆಲವು ವರ್ಷಗಳ ಹಿಂದೆ ಹೋದರೆ ನನಗೆ ಈಗಿನ ಪ್ರಧಾನಮಂತ್ರಿ ಯಾರು, ಆ ಮಂತ್ರಿ ಯಾರು, ಈ ಮಂತ್ರಿ ಯಾರು ಇಂತದ್ದನ್ನೆಲ್ಲ ಬಾಯಿಪಾಠ ಮಾಡುವ ಚಟವೊಂದಿತ್ತು. ಅದನ್ನು ಹೊರತುಪಡಿಸಿದರೆ ಹೆಚ್ಚಿನ ಆಸಕ್ತಿಯೇನು ರಾಜಕೀಯ ವಿಷಯಗಳಲ್ಲಿ ಇರಲಿಲ್ಲ. ಅಂದಿನ ನನ್ನ ನಂಬಿಕೆಯ ಪ್ರಕಾರ, ರಾಜಕೀಯಕ್ಕೂ ನನ್ನ ಜೀವನಕ್ಕೂ ಏನು ಸಂಬಂಧವಿಲ್ಲ ಎಂಬುದೇ ಆಗಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ನನಗೆ ಸ್ವಲ್ಪ ತಿಳುವಳಿಕೆ ಬಂದಿದುರ ಪರಿಣಾಮವಾಗಿ ಅರ್ಥವಾಗಿರುವುದೇನೆಂದರೆ, ನಮ್ಮ ಜೀವನವನ್ನು ರೂಪಿಸುವಲ್ಲಿ ಸರ್ಕಾರಗಳು ನಮಗೆ ತಿಳಿದೋ ತಿಳಿಯದೆಯೋ ಪ್ರಮುಖ ಪಾತ್ರ ವಹಿಸುತ್ತವೆ. ಇವತ್ತು ನಾವೇನೇ ಆಗಿದ್ದರು ಸಹ ಅದರಲ್ಲಿ ಸಂವಿಧಾನದ ಪಾತ್ರ ಬಹಳ ಮುಖ್ಯವಾಗಿದೆ. 

ಸಾಮಾಜಿಕ ಜಾಲತಾಣಗಳು ಅದೆಷ್ಟೇ ತೊಂದರೆಗಳನ್ನು ಯುವಜನಾಂಗಕ್ಕೆ ನೀಡಿದ್ದರು ತಮ್ಮದೇ ಆದ ಉಪಯೋಗಗಳನ್ನು ಹೊಂದಿವೆ. ಒಂದು ಕಾಲದಲ್ಲಿ ಸುದ್ಧಿ ತಿಳಿಯಲು ನಾಳಿನ ದಿನಪತ್ರಿಕೆಗಾಗಿ ಅಥವಾ ರೇಡಿಯೋ ವಾರ್ತೆಗಾಗಿ ಕಾಯಬೇಕಾಗಿದ್ದ ದಿನಗಳು ಕಳೆದುಹೋಗಿವೆ. ಮಿಂಚು ಬಡಿದಂತೆ ಘಟನೆ ನಡೆದ ಕೆಲವೇ ಸೆಕೆಂಡುಗಳಲ್ಲಿ ಸುದ್ಧಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಆಸಕ್ತ ಓದುಗರಿಗೆ ತಲುಪುತ್ತಿವೆ. ಸುಳ್ಳು ಸುದ್ಧಿಗಳನ್ನು ಸಹ ಹರಡಲು ಕಿಡಿಗೇಡಿಗಳು ಸದಾ ತಯಾರಿರುತ್ತಾರೆ. ರಾಜಕೀಯ ವಿಷಯಗಳ ಕುರಿತ ಸುದ್ಧಿಗಳನ್ನು ಪಡೆಯಲು ನಾನು ಹೆಚ್ಚಾಗಿ ಬಳಸುವುದು ಟ್ವಿಟ್ಟರ್. 

ವಿವಿಧ ರಾಜಕೀಯ ಪಕ್ಷ ಸಿದ್ಧಾಂತಗಳ ಮೇಲೆ ಒಲವಿರುವ ಹಲವಾರು ಬಗೆಯ ಖಾತೆಯನ್ನು ಟ್ವಿಟ್ಟರ್ ಅಲ್ಲಿ ಹಿಂಬಾಲಿಸುತ್ತೇನೆ. ಇದರಿಂದ ಆಗುವ ಪ್ರಯೋಜನವೆಂದರೆ, ಅವರ ದೃಷ್ಟಿಕೋನದಿಂದ ಸಹ ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಲು ಆಗುತ್ತದೆ. ಕೆಲವೊಮ್ಮೆ ಅವರ ಮೂರ್ಖತನವೂ ಎದ್ದು ಕಾಣುತ್ತದೆ. ಕೆಲವೊಂದಷ್ಟು ಜನ ಕನ್ನಡ ಕರ್ನಾಟಕದ ಹಿತ ದೃಷ್ಟಿಯಿಂದ ಎಲ್ಲವನ್ನು ಅವಲೋಕಿಸಿದರೆ, ಇನ್ನು ಕೆಲವರು ತಮ್ಮ ಜಾತಿ ಧರ್ಮ ಸಿದ್ಧಾಂತಗಳಿಂದ, ಇನ್ನು ಕೆಲವರು ಪರಿಸರದ ದೃಷ್ಟಿಯಿಂದ ಸುದ್ಧಿಯನ್ನು ಅವಲೋಕನ ಮಾಡುವ ಪ್ರಕ್ರಿಯೆ ನನಗೆ ತುಂಬಾ ಇಷ್ಟವಾಗುತ್ತದೆ. 

ಒಂದೇ ಸುದ್ಧಿಗೆ ಅಥವಾ ನಿರ್ಧಾರಕ್ಕೆ ವಿವಿಧ ಗುಂಪುಗಳು ಪ್ರತಿಕ್ರಿಯಿಸುವ ರೀತಿ, ವಯಕ್ತಿಕ ನಿಂದನೆ ಮುಂತಾದವುಗಳನ್ನು ಟ್ವಿಟ್ಟರ್ ಅಲ್ಲಿ ಪ್ರತಿನಿತ್ಯ ಕಾಣುತ್ತೇನೆ. ಸರಿಯೋ ತಪ್ಪೋ ಎಂದು ತಿಳಿದು ಏನಾಗಬೇಕು ? ಸ್ವಲ್ಪ ಕಾಲಹರಣ ಮಾಡಲು ಸಹಕಾರಿ ಇವೆಲ್ಲ. ರಾಜಕೀಯ ವಿಷಯಗಳ ಬಗ್ಗೆ ಜಾಗೃತಿಯನ್ನು ಹೊಂದುವುದು ನಮ್ಮೆಲ್ಲರ ಕರ್ತವ್ಯ. ಕೆಲವೊಂದಷ್ಟು ನಿರ್ಧಾರಗಳು ನಮ್ಮ ಜೀವನ ಮಾತ್ರವಲ್ಲದೆ ಮುಂದಿನ ಪೀಳಿಗೆಯ ಮೇಲು ಅಪಾರ ಪರಿಣಾಮ ಬೀರುತ್ತವೆ.

ಅಭಿವೃದ್ಧಿಯ ಹೆಸರಲ್ಲಿ ಹೀಗೆಯೇ ಅರಣ್ಯನಾಶ ಮುಂದುವರೆದರೆ ಮುಂದೊಂದು ದಿನ ಎಂದು ಕಾಣದ ಅಪಾಯವನ್ನು ಕಾಣಬೇಕಾಗುತ್ತದೆ. ಪ್ರಕೃತಿಯಲ್ಲಿ ನಾವೆಲ್ಲರೂ ಇತರ ಜೀವಿಗಳಂತೆ ಎಂಬುದನ್ನು ಮರೆತು, ಪ್ರಕೃತಿದತ್ತವಾದ ಸಂಪನ್ಮೂಲಗಳನ್ನೆಲ್ಲ ನುಂಗಿ ನೀರು ಕುಡಿಯುತ್ತಿದ್ದೇವೆ. ಈಗಲೇ ಪ್ರತಿ ವರ್ಷ ಅತಿವೃಷ್ಟಿ, ಅನಾವೃಷ್ಟಿಯಿಂದ ಕಂಗೆಟ್ಟಿರುವುದನ್ನು ಸಹ ಲೆಕ್ಕಿಸದೆ ಕಾಡನ್ನು ನಿರ್ನಾಮ ಮಾಡಿ ಅಣೆಕಟ್ಟುಗಳನ್ನು ಕಟ್ಟಲು ಮುಂದಾಗುತ್ತಿರುವುದು ದುರಂತಕ್ಕೆ ನಾಂದಿ ಹಾಡಿದಂತಿದೆ. 

ನಮ್ಮಿಂದ ಈ ಪ್ರಕೃತಿಗೆ ಏನನ್ನು ನೀಡಲು ಸಾಧ್ಯವಿಲ್ಲ, ಮಣ್ಣಲ್ಲಿ ಮಣ್ಣಾಗುವ ನಾವು ಮುಂದಿನ ದಿನಗಳ ಬಗ್ಗೆ ಯೋಚಿಸದೆ ಕಾಡುಗಳನ್ನು ಕಡಿದು, ನದಿಗಳನ್ನು ಮಲಿನಗೊಳಿಸಿ, ಮಣ್ಣಿಗೆ ಕಲುಷಿತ ಪದಾರ್ಥಗಳನ್ನು ಸೇರಿಸಿ ಮಾಡುವ ಅಭಿವೃದ್ಧಿ ನಮ್ಮೊಂದಿಗೆ ಅಂತ್ಯವಾಗುತ್ತದೆ ಅಷ್ಟೇ. ಬಹುಷಃ ಮನುಷ್ಯರ ಸ್ವಾರ್ಥವನ್ನು ಕಡಿಮೆಗೊಳಿಸುವ ತನಕ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎನಿಸುತ್ತದೆ. 

ಕಾಮೆಂಟ್‌ಗಳು

- Follow us on

- Google Search