ಪುಸ್ತಕ ಪರಿಚಯ - The Element: How Finding Your Passion Changes Everything

Ken Robinson ಅವರು ಬರೆದಿರುವ ಪುಸ್ತಕವಿದು. ಪುಸ್ತಕದ ಹೆಸರೇ ಹೇಳುವಂತೆ ಮನುಷ್ಯರ ಸಾಮರ್ಥ್ಯಗಳ ಮೇಲೆ ಒಂದು ಹೊಸ ದೃಷ್ಟಿಕೋನವನ್ನು ಬೀರುವ ಪ್ರಯತ್ನವನ್ನು ಮಾಡಲಾಗಿದೆ. ಈ ಪುಸ್ತಕವನ್ನು ಯಾರೇ ಓದಿದರೂ ಅದರಿಂದ ಅಪಾರ ಪ್ರಯೋಜನವಿದೆ. ಇಂದಿನ ಶಿಕ್ಷಣ ಪದ್ಧತಿ ಹಾಗು ಸಾಮಾನ್ಯ ಪ್ರವೇಶ ಪರೀಕ್ಷೆಗಳಿಂದ ಹಲವು ಸಂಸ್ಥೆಗಳಿಗೆ ಲಾಭವಾಗುತ್ತಿದೆಯೇ ಹೊರತು ಅದರಿಂದ ಲಕ್ಷಾಂತರ ಮಕ್ಕಳಿಗೆ ಹಾಗು ಮನುಕುಲಕ್ಕೆ ಹಾನಿಯಾಗುತ್ತಿದೆ. ಯಾವುದೇ ಕೆಟ್ಟ ವ್ಯವಸ್ಥೆ ಮಾನವನಿರ್ಮಿತ ಆಗಿರುವುದರಿಂದ ಮುಂದೊಂದು ದಿನ ಅದರ ಅಂತ್ಯ ಆಗಿಯೇ ಆಗುತ್ತದೆ. ಒಂದು ಕೆಟ್ಟ ವ್ಯವಸ್ಥೆಯ ಅಂತ್ಯ, ಅದೇ ವ್ಯವಸ್ಥೆಯ ಮತ್ತೊಂದು ಮುಖವಾಡ ಹಾಕಿಕೊಂಡು ಪುನರ್ಜನ್ಮ ತಾಳುತ್ತದೆ. ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುವ ಭರದಲ್ಲಿ ನಾವು ಮನುಷ್ಯರೆಂಬುದನ್ನೇ ಮರೆತುಬಿಡುತ್ತೇವೆ. 


ಬುದ್ಧಿವಂತಿಕೆ ಎಂದರೆ ಇಂದಿನ ಜಗತ್ತಿನಲ್ಲಿ ಅದನ್ನು ಯಾವುದೊ ಪರೀಕ್ಷೆಗಳ ಮೂಲಕ ಅಳೆಯಬಹುದು ಎಂಬ ತಪ್ಪು ತಿಳುವಳಿಕೆ ಬಹಳಷ್ಟು ಜನರ ಮನಸ್ಸಿನಲ್ಲಿದೆ. ಇದರಿಂದಾಗಿ ಅದೆಷ್ಟೋ ಯುವಜನರು ಈ ಪರೀಕ್ಷೆಗಳ ಸಲುವಾಗಿಯೇ ತಮ್ಮ ಬಾಲ್ಯ ಹಾಗು ಯವ್ವನವನ್ನು ಬಲಿ ಕೊಡುತ್ತಿದ್ದಾರೆ. ಇಂದು ಪರೀಕ್ಷೆಗಳನ್ನು ನಡೆಸುವ ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳ ಲಾಭವನ್ನು ಮಾಡಿಕೊಳ್ಳುತ್ತಿವೆ. ಯಾವುದೇ ಒಂದು ಕೆಟ್ಟ ಪದ್ಧತಿ ಉದ್ಯೋಗವಾಗಿ ಬೆಳೆದಾಗ ಅದನ್ನು ಸಮಾಜದಿಂದ ಅಥವಾ ಜಗತ್ತಿನಿಂದ ಹೊರನೂಕುವುದು ಬಹಳ ಕಷ್ಟದ ಕೆಲಸ. IQ ಪರೀಕ್ಷೆಗಳು ಮಾನವರ ಬುದ್ಧಿಮಟ್ಟವನ್ನು ಅಳೆಯಲು ಬಳಸುವ ಪರೀಕ್ಷೆಯಾಗಿದೆ. ಆದರೆ, ಈ ಪರೀಕ್ಷೆಯನ್ನು ಮೊಟ್ಟಮೊದಲು ಸಿದ್ಧಪಡಿಸಿದ್ದು ಬುದ್ಧಿವಂತಿಕೆಯನ್ನು ಅಳೆಯಲು ಅಲ್ಲ. ಅದನ್ನು ತಯಾರಿಸಿದ್ದು ಯಾರಿಗೆ ಆಫೀಸು ಕೆಲಸಗಳನ್ನು ನಿರ್ವಹಿಸಲು ಕಷ್ಟವಾಗುತ್ತದೆ ಎಂಬುದನ್ನು ಕಂಡುಹಿಡಿಯುವ ಸಲುವಾಗಿ. 

ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದ ವಿಶೇಷ ಸಾಮರ್ಥ್ಯಗಳಿರುತ್ತವೆ. ಈ ಸಾಮರ್ಥ್ಯಗಳನ್ನು ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಕಂಡುಕೊಳ್ಳಬೇಕು. ಈ ವಿಶೇಷ ಶಕ್ತಿ ಸಾಮರ್ಥ್ಯಗಳನ್ನು ಉಪಯೋಗಿಸಿಕೊಂಡು ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು. ಇದು ಪ್ರತಿಯೊಬ್ಬರ ಜೀವನಕ್ಕೆ ಅವಶ್ಯಕ. ಜಗತ್ತು ಹಿಂದೆಂದೂ ಕಾಣದ ವೇಗದಲ್ಲಿ ಬದಲಾಗುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಈ ಜಗತ್ತು ಹೇಗಿರುತ್ತದೆ ಎಂಬುದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ. ಇವತ್ತಿಗೆ ಜೀವನ ಕಟ್ಟಿಕೊಡುತ್ತಿರುವ ಕೌಶಲಗಳು ಮುಂದೊಂದು ದಿನ ಯಾವ ಕೆಲಸಕ್ಕೂ ಬರದೇ ಹೋಗಬಹುದು. ಹೀಗಾಗಿ ತನ್ನ ವಿಶೇಷ ಶಕ್ತಿ, ಸಾಮರ್ಥ್ಯಗಳ ಅರಿವಿದ್ದವರಿಗೆ ಮಾತ್ರ ಬದಲಾದ ಜಗತ್ತಲ್ಲಿ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳ ಮನಸ್ಸಿನ ಮೇಲೆ ಮಾಡುತ್ತಿರುವ ಹಾನಿಯನ್ನು ಅರಿತುಕೊಳ್ಳುವಲ್ಲಿ ಬಹಳಷ್ಟು ಪೋಷಕರು ಮಾತ್ರವಲ್ಲದೆ ಶಿಕ್ಷಣ ನೀತಿಗಳನ್ನು ತಯಾರಿಸುವವರು ಸಹ ವಿಫಲರಾಗುತ್ತಿದ್ದಾರೆ. 

ಹಾಗಾದರೆ ಪರೀಕ್ಷೆಗಳೇ ಇರಬಾರದೇ ?. ಪರೀಕ್ಷೆಗಳು ಇರಬೇಕು, ಆದರೆ ಪರೀಕ್ಷೆಗಳ ಫಲಿತಾಂಶ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುಳುವಾಗಬಾರದು. ಅದರ ಬದಲಾಗಿ ಪರೀಕ್ಷೆಗಳು ಶಿಕ್ಷಣ ಪದ್ಧತಿಯ ನ್ಯೂನ್ಯತೆಗಳನ್ನು ಕಂಡುಹಿಡಿದು ಸರಿಪಡಿಸುವ ಗುರಿಯನ್ನು ಹೊಂದಿರಬೇಕು. ನಮ್ಮ ಈಗಿನ ಶಿಕ್ಷಣ ಪದ್ಧತಿ industrial revolution ಸಮಯದಲ್ಲಿ ಉಧ್ಭವವಾಗಿದ್ದು. ದಿನದ ಸಮಯವನ್ನು ನಿರ್ದಿಷ್ಟ ವಿಭಾಗಗಳಲ್ಲಿ ವಿಂಗಡಿಸುವುದು, ಎಲ್ಲರನ್ನು ಒಂದೇ ರೀತಿಯ ಬಟ್ಟೆ ಹಾಕಿಸಿ ಸರತಿ ಸಾಲಿನಲ್ಲಿ ನಿಲ್ಲಿಸುವುದು, ಸಮಯವಾದಾಗ ಗಂಟೆ ಬಾರಿಸುವುದು, ಕೊಟ್ಟ ಕೆಲಸವನ್ನು ಪ್ರಶ್ನಿಸದೆ ಸಮಯಕ್ಕೆ ತಕ್ಕ ಹಾಗೆ ಮುಗಿಸುವಂತಹ ಆಚರಣೆಗಳು ನೇರವಾಗಿ ಕಾರ್ಖಾನೆಗಳಿಂದ ಆಮದು ಮಾಡಿಕೊಂಡಂತಿವೆ. 

ಇಂತಹ ಹಲವಾರು ಸೂಕ್ಷ್ಮ ವಿಚಾರಗಳ ಬಗ್ಗೆ  ಚೆಲ್ಲುವ ಲೇಖನಗಳನ್ನು ಹಾಗು ವಿವಿಧ ವಿಭಾಗಗಳಲ್ಲಿ ಅಪಾರ ಸಾಧನೆ ಮಾಡಿದವರ ಸಂದರ್ಶನಗಳನ್ನು ಈ ಪುಸ್ತಕ ಒಳಗೊಂಡಿದೆ. ಪುಸ್ತಕ ಇಬುಕ್ ರೂಪದಲ್ಲಿ ಸಹ ಲಭ್ಯವಿದೆ. ಪುಸ್ತಕದಲ್ಲಿ ಬಳಸಿರುವ ಭಾಷೆ ಸರಳವಾಗಿದ್ದು, ಸುಲಭವಾಗಿ ಮನವರಿಕೆಯಾಗುತ್ತದೆ. 

Amazon Link: The Element: How Finding Your Passion Changes Everything Kindle Edition

ಕಾಮೆಂಟ್‌ಗಳು

- Follow us on

- Google Search