ಕಥೆ: ಸುಬ್ಬಿ

ಮಕ್ಳುನ್ನ ಶಾಲಿಗೆ ಕಳ್ಸ ಅಂದ್ರೆ ಗೊಬ್ರ ಹೊರುಕೆ ಹಾಕುಂಡಿಯ, ಹೆಡ್ ಮಾಷ್ಟ್ರುಗೆ ಗೊತ್ತಾದ್ರೆ ಈ ಕಳ್ ಮುಂಡೆಗಂಡನ್ ಯದೆ ಮೇಲೆ ವದಿತಾರೆ.

ಕಳ್ಸುದ್ರೆ ಆತು ಬಿಡೆ, ಶಾಲೆ ಯೇನು ಎಲ್ಲಿಗೂ ವೋಡಿ ಹೋಗಲ್ಲ. ನಿನ್ನಪ್ಪ ಬತ್ತಾನಾ ಮತ್ತೆ ಗೊಬ್ರ ಹೊರಕ್ಕೆ. 

ನನ್ನ ಗೇಯ್ಸ್ಕುಂಡು ತಿಂದುದಲ್ದೆಯ ನಮ್ಮ ಅಪ್ಪನು ಬಂದು ಗೇಯ್ಲಿ ಅಂತ ನೋಡ್ತಿಯೇನ. ಜೀವನ ಪೂರ್ತಿ ಇದೆ ಆತಲ್ಲ, ಈಗ ಮಕ್ಳಿಗು ಇದೆ ಹಡಬೆ ಬುದ್ಧಿ ಕಲ್ಸು. ಇದ್ಯೆ ಕಲ್ತಿರೋನ್ಗೆ ಗೊತ್ತು ಅದರ ಬೆಲೆ ಏನಂತ, ನಿನ್ನಂತ ಊರುಹಾಳು ಮುಂಡೆಗಂಡ್ರಿಗ್ ಎಲ್ಲಿ ಗೊತ್ತಾಗ್ಬಕು ಅವೆಲ್ಲ.  

ಕೆಲ್ಸ ಆಗ್ಬಕು ಅಂದ್ರೆ ಮನೇಲಿ ಕೂತ್ರೆ ಆತದ ?, ನಮ್ಮನೆ ಕೆಲ್ಸ ನಮ್ಮನೆ ಮಕ್ಳು ಮಾಡ್ದೆ ನೆರೆಮನಿಯೋರು ಬತ್ತರ. ನಾನೇನು ಸಾಲಿಗೆ ಹೋಗ್ಬಡಿ ಅನ್ಲ, ಎದೆ ಬಗ್ಸಿ ಗೆಯ್ದ್ರೆ ಅವ್ಕು ನಮ್ ಕಷ್ಟ ಏನಂತ ಅರ್ಥ ಆತದೆ. ಇಲ್ಲ ಅಂದ್ರೆ ಮನೇಲಿ ಟಿವಿ ನೋಡ್ಕುಂಡು ಮೊಬೈಲ್ ಆಡ್ಕುಂಡು ಬಿದ್ದಿರ್ತವೆ. 

ಇಷ್ಟು ಹೊತ್ತಿಗೆ ಮಳೆಯಲ್ಲಿ ನೆನೆದು, ಚಳಿಗೆ ನಡಗುತ್ತಾ ಪರಮಶಿವ ಮೇಷ್ಟ್ರು ಬಂದರು. 

ನಮಸ್ಕಾರ ಮೇಷ್ಟ್ರೇ, ಈ ಮಳೆಕೋಟು ಹೆಲ್ಮೆಟ್ಟು ಎಲ್ಲಾ ಹಾಕುಂಡು ಬಂದ್ರೆ ಮನುಶ್ರು ಗುರ್ತೇ ಸಿಗಲ್ಲ. ನಿಮ್ಮ ಬೈಕ್ ನೋಡಿ ಅಂದಾಜಾತು. 

ನಮಸ್ಕಾರ ಇರ್ಲಿ, ಏನ ಸುಬ್ಬ, ಮಕ್ಳುನ್ನ ಶಾಲಿಗೆ ಸೇರ್ಸುಕ್ಕೆ ಯಾವಾಗ ಬರೋದು?

ಬತ್ತೀನಿ, ಇವಾಗ ಚೂರು ಕೆಲ್ಸ ಅದೆ. 

ಹಾ, ಸರಿ ಸರಿ. ಬೇಗ ಬಾರಪ್ಪ, ಕೊರೊನ ಕಾಟಕ್ಕೆ ನಮ್ಮ ಸರ್ಕಾರಿ ಶಾಲೆಗೆ ಡಿಮ್ಯಾಂಡು ಜಾಸ್ತಿ ಆಗಿದೆ. ಆಮೇಲೆ ಬಂದು ಸೀಟು ಸಿಕ್ಕಿಲ್ಲ ಅಂತ ಜಗಳಕ್ಕೆ ಬರ್ಬೇಡ ಅಷ್ಟೇಯ. ಮಕ್ಕಳೆಲ್ಲಾ ಏನು ಮಾಡ್ತಾ ಇದಾರೆ ಸುಬ್ಬಣ್ಣ ?

ಅವು ಗದ್ದಿಗೆ ಹೋಗಾವೆ. ಬತ್ತಾವೆ ಈಗ ಉಣ್ಣೋ ಹೊತ್ತಿಗೆ. ಶಾಲಿ ಒಂದು ಶುರು ಮಾಡ್ಲ ಅಂದ್ರೆ ಕಲ್ತಿರ ನಾಕ್ ಅಕ್ಷರನು ಗುಡ್ಡ ಹತ್ತವೆಯ, ಹಗ್ಲಿಡಿ ಮೊಬೈಲ್ ಆಡದು ತಲೆ ಅಡಿ ಹಾಕುಂಡು ಕೂರದು ಬಿಟ್ರೆ ಆಚೆಕಡ್ಡಿ ತಗ್ದು ಈಚಿಗೆ ಇಡಲ್ಲ. 

ಅಷ್ಟ್ರಲ್ಲಿ ಸುಬ್ಬನ ಹೆಂಡ್ತಿ ಸುಬ್ಬಮ್ಮ ಕಾಫಿ ಮಾಡಿ ತಂದು ಮೇಷ್ಟ್ರನ್ನು ಮನೆ ಒಳಗೆ ಕರೆದಳು. 

ಎಂತಾ ಮಳೆ ಮರ್ರೆ, ಹಾಳ್ಬಿದ್ದೇ ಹೋಗ್ಲಿ. ಈ ತರ ಮಳೆ ಬಂದ್ರೆ ಊರು ಉಳಿತದ?

ಮಳೆಗಾಲ ಅಲ್ವೇನಮ್ಮಾ, ಮಳೆ ಬರ್ಲೇ ಬೇಕಲ್ಲ. 

ನಿಮ್ಗೇನು ಬಿಡಿ ಮೇಷ್ಟ್ರೇ, ಒಳಗಡೆ ಕುತ್ಕಂಡು ಮಕ್ಳಿಗೆ ಪಾಠ ಹೇಳ್ತಿರಿ. ನಮ್ಮ ಕೆಲ್ಸ ಆಗ್ಬಕಲ್ಲ!

ಪರಮಶಿವ ಮೇಷ್ಟ್ರಿಗೆ ಸುಬ್ಬಮ್ಮನ ಈ ಅನಿರೀಕ್ಷಿತ ಮಾತನ್ನು ಕೇಳಿ ದಂಗಾಯಿತು. ಇನ್ನೇನೋ ಹೇಳಲು ಬಾಯಿ ತೆರೆದವರು ಸುಮ್ಮನಾದರು.  

ಶಾಲೆ ಯಾವಾಗಿಂದ ಶುರು ಮೇಷ್ಟ್ರೇ ?

ಗೊತ್ತಿಲ್ಲಮ್ಮ. ಇನ್ನೂ ಕೊರೊನ ಕಾಟ ಕಡಿಮೆಯಾಗಿಲ್ಲ ಅನ್ನಿಸ್ತದೆ. ನೀವು ಅಡ್ಮಿಶನ್ ಒಂದು ಮಾಡ್ಸಿಬಿಡಿ. ಮತ್ತೆ ಈ ವರ್ಷ ಪರೀಕ್ಷೆಯಿಲ್ಲದೆ ಪಾಸ್ ಮಾಡಿದರೆ ನಿಮಗೆ ಲಾಭ ನೋಡಿ ಎಂದು ಹೇಳಿ ನಕ್ಕರು. 

ನನ್ ಮಾತು ಯಾರು ಕೇಳ್ತಾರೆ ಮೇಷ್ಟ್ರೇ, ಅಪ್ಪ ಮಕ್ಳುದೆ ಆಟ ಆಗೇದೇ ಈಗಂತು. ನೀವು ಹೇಳಿದ್ರೆ ಕೇಳ್ತಾರೆ ಅಷ್ಟೇಯಾ. 

ನಾನು ಹೇಳಿದೀನಿ ಬಿಡಿ. ಕಾಫಿ ಕುಡಿದು ಮನೆಯ ಸುತ್ತ ಒಮ್ಮೆ ಕಣ್ಣಾಡಿಸಿದರು. 
ಹಾಗಾದ್ರೆ ಸರಿ ನಾನಿನ್ನು ಹೊರುಡ್ತೇನೆ. 

ಸುಬ್ಬಿಗೆ ತನ್ನ ಗಂಡನಿಗೆ ಬೈದು ಬುದ್ಧಿ ಹೇಳದೆ ಹಾಗೆ ಹೊರಟರಲ್ಲ ಎಂದು ಸ್ವಲ್ಪ ಬೇಜಾರಾಯಿತು. 

ಸುಬ್ಬಣ್ಣ ಬರದ ?

ಹಾ ಸರಿ ಎಂದು ದೂರದಿಂದ ಕೂಗಿದ. 

ಅಷ್ಟರಲ್ಲಿ ಮಕ್ಕಳಿಬ್ಬರು ಗದ್ದೆಯಿಂದ ಮನೆಗೆ ಬರುವುದನ್ನು ಕಂಡರು. ಅವರ ಬೈಕನ್ನು ದೂರದಿಂದ ಕಂಡ ಮಕ್ಕಳು ಅಲ್ಲೇ ಅಡ್ಡದಾರಿ ಹಿಡಿದು ಮಾಯವಾದರು. 

ಮಕ್ಕಳಿಗೆ ಶಿಕ್ಷಕರ ಮೇಲೆ ಭಯವಾಗಲಿ ಅಥವಾ ಅತಿಯಾದ ಗೌರವವಾಗಲಿ ಇರಲಿಲ್ಲ. ತಮ್ಮ ಸಧ್ಯದ ಪರಿಸ್ಥಿತಿಯಲ್ಲಿ ಅವರಿಗೆ ದರ್ಶನ ನೀಡಲು ನಾಚಿಕೆಯಾಗಿ ಅಲ್ಲೇ ಬೇರೆದಾರಿ ಹಿಡಿದು ಅವರು ಬೈಕು ಹತ್ತಿ ಹೋಗುವುದನ್ನೇ ಕಾಯುತ್ತಿದ್ದರು. 

ಹುಡ್ಗುರು ಇಲ್ಲೇ ಬಂದೋವು ಮಾಷ್ಟ್ರು ತಲೆ ಕಾಣಕ್ಕೂ ಪರಾರಿ ಆದ್ವಲ್ಲ. ಚರ್ಗಿ ತಗಿಲ ಅಂತ ಕಾಣ್ತದೆ, ಎಷ್ಟು ಸೊಕ್ಕು ಇರ್ಬಕು ಇವುಕ್ಕೆ. ಇವು ಇಲ್ಲೇ ಹಿಂಗೆ ಮಾಡವು, ಇನ್ನು ಶಾಲೇಲಿ ಎಷ್ಟು ಉರಿತವೇನ. ದೇವ್ರೇ ಕಾಪಾಡ್ಬಕು ಈ ಹಿಂಡುನ್ನ.  

ಮೇಷ್ಟ್ರು ಹೋಗುವುದನ್ನೇ ಕಾಯುತ್ತಿದ್ದ ಸುದರ್ಶನ ಹಾಗು ಸುದೀಪರು ಮನೆಗೆ ಬಂದರು. ಎಂತ ಹೇಳುದ್ರೆ ಮೇಷ್ಟ್ರು ಎಂದು ಸುದೀಪ ಅಮ್ಮನನ್ನು ಕೇಳಿದ. 

ಶಾಲಿಗೆ ಬಂದು ಹೆಸ್ರು ಬರುಸ್ಬಕಂತೆ. 

ಈ ವರ್ಷ ಅವ್ರು ಶಾಲೆ ತಗುದ್ರು, ನಾವು ಹೋದ್ವಿ ತಗ. 

ಟಿವಿಲಿ ಬತ್ತದಲ ಪಾಠ, ಅದುನ್ನೆಲ್ಲ ನೋಡ್ಬಕಂತೆ. 

ಅದುನ್ನೆಲ್ಲ ನೋಡಿ ಕಲ್ಯದಾಗಿದ್ರೆ, ಶಾಲೆ ಯಾಕೆ ಬೇಕಿತ್ತು. 

ನಂಗೇನು ಗೊತ್ತ ಮಾರಾಯ, ನೀನಾತು ನಿನ್ ಮೇಷ್ಟ್ರಾತು. 


ನಿಂಗೆ ಅಷ್ಟೆಲ್ಲ ಸ್ವಯ ಇದ್ದಿದ್ರೆ ಏನು ಆತಿತ್ತು. 

ಏನ, ಹಲ್ಲು ಉದುರ್ಸ್ಬಕ ಹೆಂಗೆ ?

ಬೆಳಿಗ್ಗೆಯಿಂದ ಮನೇಲೆ ಹೊಕ್ಕುಂಡು ಇನ್ನು ಅಡಿಗೆ ಮಾಡ್ಲ ಏನಿಲ್ಲ. ಬಂದೋರ್ ಜೊತಿಗೆ ಊರಿನ್ ಪುರಾಣ ಎಲ್ಲ ಮಾತಾಡ್ಕುಂಡು ಕೂರ್ತಿಯ. 

ಬೆಳಿಗ್ಗೆಯಿಂದ ಅಂಗಳ ಗುಡಿಸಿ, ತಿಂಡಿ ಮಾಡಿ, ಪಾತ್ರೆ ತೊಳ್ದು, ಬಟ್ಟೆ ಒಗ್ದು, ಬಚ್ಲು ಮನೆ ತೊಳ್ದು, ಅಡಿಗೆ ಮಾಡಕ್ಕೆ ಇಟ್ಟೀನಿ. ನಂಗೆ ಯಜ್ಮಾನ್ಕಿ ಮಾಡಕ್ಕೆ ಬತ್ತಿಯೇನ !
ಎದೆಬಗ್ಗಿಸಿ ಕೆಲಸ ಮಾಡು, ಇಲ್ಲ ತಲೆ ಬಗ್ಗಿಸಿ ಓದು. ಊರೋರು ಮುಂದೆ ನಮ್ಮ ಮಾನ ಹರಾಜು ಹಾಕ್ಬೇಡ ಕಳ್ ಮುಂಡೆಗಂಡ. 

ಓದೋರೆಲ್ಲ ಊರು ಉದ್ಧಾರ ಮಾಡಾಂಗ್ಗಿದ್ದಿದ್ರೆ ನಮ್ಮ ದೇಶ ಯಾಕೆ ಹೀಗೆ ಇರ್ತಿತ್ತು ? ಎಷ್ಟು ಓದ್ಬಕು ಏನು ಮಾಡ್ಬಕು ಅಂತ ನಂಗೆ ಗೊತ್ತದೆ. ನಿಂದು ನೀನು ನೋಡ್ಕ ಸಾಕು. 

ಒಳ್ಳೇದು ಹೇಳಿದ್ರೆ ಆಗಲ್ಲ ನಿಂಗೆ. ನಿನ್ ಕಳ್ ಬುದ್ಧಿನೇ ನಿನ್ ತಮ್ಮಂಗೂ ಕಲ್ಸು. ಅಪ್ಪ ಮಕ್ಕಳು ಒಂದೇ ಜಾತಿ. ಅದೇನಂತ ಈ ಮನಿಗೆ ನನ್ನ ಮದ್ವೆ ಮಾಡ್ ಕೊಟ್ರೆನ. 

ಆಯ್ತು ಮರೆತಿ, ಕಚ್ಗುಡಿಬಡ ಯಾವಾಗ್ಲೂ. ಊಟ ಇಕ್ಕು ಮೊದ್ಲು. ಎಂತ ಸಾರು ಮಾಡಿಯೇ ಊಟಕ್ಕೆ ?

ಸಾರು, ಕುರಿ ಕಡ್ದಿವಿ ಬಾ ಉಣ್ಣಕ್ಕೆ. 

ಈಗ್ಲೇ ಏನು ನಿಂಗೆ ತಿಂದಿದ್ ನೆಣ ಅಂದ್ರೆ, ಇನ್ನು ದಿನ ಕುರಿ ಬಾಡು ಮಾಡಿದ್ರೆ ನಮ್ಮುನ್ನೆಲ್ಲ ದೇವ್ರೆ ಕಾಪಾಡ್ಬಕು. ಸರಿ ಇಕ್ಕು ಇವಾಗ ಗಂಟೆ ಮೂರಾಗ್ತಾ ಬಂತು.

ಸುದೀಪ, ಅಪ್ಪುನ ಊಟಕ್ಕೆ ಕರಿಯ

ಹಾ, ಬತ್ತರಂತೆ ಇಕ್ಕು

ಗದ್ದೆ ಬದಿ ಹೋದಾಗ ಅಳ್ಬಿ ಗಿಳ್ಬಿ ಸಿಕ್ತವೇನಂತ ಹುಡ್ಕಿ ತಗುಂಡ್ ಬರದಲ್ಲ. ಎದೆ ನಿಟ್ಟೆಸ್ಕುಂಡು ಹೋಗದು, ಎದೆ ನಿಟ್ಟೆಸ್ಕುಂಡು ಬರದು. ಅದ್ರಲ್ಲೆಲ್ಲ ಅಚೆ ಮನೆ ಹುಡ್ಗುರು, ಬಾರಿ ಚುರ್ಕು ಇಂತದ್ರಲ್ಲಿ. 

ಇಷ್ಟ್ ದಿನ ನೆರೆಮನೆಯೊರ್ ತಂದ್ ಹಾಕೆ ನೀನು ಅನ್ನ ಉಂಡಿದ್ದೇನ ಅಲಾ ? ಈ ನೆರೆ ಮಳೇಲಿ ಇವ್ಳಿಗೆ ಅಳ್ಬಿ ಹುಡ್ಕಿ ತರ್ಬಕಂತೆ. ಅವೆಲ್ಲ ಹೊಳೆ ಸೇರಿ ಎಷ್ಟ್ ದಿನ ಆಗ್ಯದ. 

ಯಾರಾದ್ರೂ ತಂದು ಹಾಕುದ್ರೆ ಗನಾಗೆ ನುಂಗಕ್ಕೆ ಒಂದು ಆಗಿಯ ಅಷ್ಟೆ. ಯಂತಾದ್ರು ಮಾಡು, ನೀನು ನಮ್ಗೇನು ತಂದು ಹಾಕದು ಬ್ಯಾಡ, ನಿನ್ ಜೀವ್ನ ನೀನು ನೋಡ್ಕಳಷ್ಟಾದ್ರು ಆದ್ರೆ ಸಾಕು ನಂಗೆ. 

ನಿಂಗೆ ಎಂತ ಆಗ್ಯದೆ ? ಮೊದ್ಲು ಆ ಹಾಳು ಧಾರವಾಯಿ ನೋಡೋದು ಬಿಡು. ಅವಾಗೆಲ್ಲ ಸರಿ ಆತದೆ. 

ಉಣ್ಕುಂಡು ಬಚ್ಲು ಒಲಿಗೆ ಬೆಂಕಿ ಹಾಕು ನೋಡನ. ಅದಾದ್ರು ಆತದ ಇಲ್ಲ ಅಂತ. 
ಒಬ್ಬಬ್ರಿಗೆ ಒಂದೊಂದು ಹಂಡೆ ನೀರು ಬೇಕು ಮತ್ತೆ ಸಾನ ಮಾಡಕ್ಕೆ. ತಲಿಗೆ ಎಣ್ಣೆ ಆದ್ರು ಹಾಕುಬೋದಿತ್ತು, ಏನು ಹೊಟ್ಟು ಹಾರ್ತದೆ ತಲೆ ಅಂದ್ರೆ. 

ಇನ್ನೊಂಚೂರು ಪಲ್ಲೆ ಹಾಕೇ.. 

ಇನ್ನು ನಂದು ಅಪ್ಪುಂದು ಊಟ ಆಗ್ಲ, ಚುಚೂರು ಹಾಕುಂಡು ಉಣ್ಣದು ಕಲಿ. 
ಹಾಕುಂಡಿದ್ ಅಷ್ಟು ಅನ್ನ ಉಂಡು ಕಾಲಿ ಮಾಡುದ್ರೆ ಸರಿ, ತಟ್ಟೇಲಿ ಅನ್ನ ಬಿಟ್ಟಿದು ಅಪ್ಪುಂಗೆ ಗೊತ್ತಾದ್ರೆ ಮತ್ತೇನಿಲ್ಲ. ದಿನಾ ಬಾಯಿರುಚಿ ಮಾಡಕ್ಕೆ ಎಲ್ಲಿಗೆ ಹೋಗದು ನಾನು. 

ದಿನ ಬಾಯಿರುಚಿ ಮಾಡಿ ನಿನ್ ಕಾಲ್ ಮೇಲಾಗಿತ್ತು. ಹೊಳೆ ಬದಿ ಹೋಗಿ ಏಡಿ ಆದ್ರೂ ಹಿಡ್ಯನ ಅಂದ್ರೆ ಈ ಹಾಳ್ಬಿದ್ದಿದ್ದು ಮಳೆ ಸಾಯ್ತದೆ. ಮೀನು ಗೀನು ಬಂದ್ರೆ ತಗ ಮರೆತಿ. 

ಮೀನು ಸಾಬಿ ಬರ್ದೇ ಸುಮಾರ್ ದಿನ ಆತು. ತಂದ್ರು ಬರಿ ಹೊಟ್ಟೆ ವಡ್ದಿರೋವ್ ಒಂದಷ್ಟು ಹೊತ್ಕುಂಡು ಬತ್ತನೆ. ರೇಟ್ ಕೇಳುದ್ರೆ ಇನ್ನೂರು ಮುನ್ನೂರು ಅಂತಾನೆ.

ಅವತ್ತು ಪ್ಯಾಟೆಗೆ ಹಾಕುಂಡು ಹೋಗಿಬಂದು ತೊಳ್ದು ಹಾಕಿದ್ದ ಅಂಗಿ ಇನ್ನು ಒಣುಗ್ಲ, ಹಂಡೆ ದಂಡೆ ಮೇಲೆ ಹಳ್ಡುದ್ರೆ ಆತಿತ್ತೆನ. ನಾಳೆ ಶಾಲಿಗೆ ಹೋಗದಾದ್ರೆ ಹಾಕುಂಡು ಹೋಗಕ್ಕೆ ಬೇಕಲ್ಲ.  

ಅಷ್ಟೊಳ್ಳೆ ಅಂಗಿ ಎಂತಕೆ ಶಾಲೆಗೆ ಹಾಕುಂಡು ಹೋತಿಯ ? ಬೇರೆ ಅಂಗಿ ಇಲ್ಲೇನು ?
ತೆಳೂದು ಯಾವಾರು ಹಾಕುಂಡು ಹೋಗು. ಚಿಬ್ಬು ಹೊಡಿತಾವೆ ಮತ್ತೆ ಬೇಗ ಒಣುಗ್ಲ ಅಂದ್ರೆ ಬಿಳಿ ಬಟ್ಟೆ. 

ಬರಿ ಇದೆ ಆತು ನಿಂದು, ಹಗ್ಲಿಡಿ ಮನೇಲಿ ಹೊಕ್ಕುಂಡು ಇರ್ತೀಯ ಒಂದು ಬಟ್ಟೆ ಓಣುಗ್ಸಕ್ಕೆ ಆಗಲ್ಲ ನಿಂಗೆ ?

ಅಪ್ಪ ಮಕ್ಳಿಗೆ ಏನಾಗ್ಬಕು, ಸಾನ ಮಾಡುದ್ರಿ ಉಣ್ಚಿಟ್ರಿ. ಬಟ್ಟೆ ತೊಳ್ಯಕ್ಕಂತೂ ಆಗಲ್ಲಲ, ಒಗ್ದು ಒಣಗ್ಸಿರೋ ಬಟ್ಟೆನ ಒಂದು ಕಡೆ ಜೋಡ್ಸಿಟ್ಕುಣಕ್ಕೂ ಜೀವಭಾರ ಅಲ್ಲೇನು. 

ಹೌದು ಮರೆತಿ, ನಿನ್ ತರ ಹಗ್ಲಿಡಿ ಮನೇಲಿ ಇದ್ರೆ ಏನೂ ಮಾಡಬೋದು. 

ಹೊರ್ಗಡೆ ಹೋಗಿ ಪದ್ವಿ ಹಚ್ಚಿದ್ದು ನೋಡಿನಲ್ಲ ನಾನು, ಅಸಿರಿ ಮಾಡಿರದು ಅಂದ್ರೆ ಅಪ್ಪ ಮಕ್ಳು ಮನೇಲಿ ಇಡಕ್ಕೆ ಜಾಗ ಇಲ್ಲ. ನಿನ್ ಅಪ್ಪುಂಗೆ ಏನು ಇನ್ನು ಉಣ್ಣಕ್ಕೆ ಟೈಮ್ ಆಗ್ಲ ಅಂತ ಕಾಣ್ತದೆ. ಹಸಿವಾಗಿ ಜೀವ ಹೋಗ್ತದೆ ನಂಗೆ. ಎಲ್ಲಿ ಇನ್ನು ಗುಜುಗ್ತಾ ನಿಂತರ, ಕರಿ ಇನ್ನೊಂದ್ಸಲ ಹೋಗಿ. ಬರ್ಬಕಂತೆ ಊಟಕ್ಕೆ, ಇಲ್ಲ ಅಂದ್ರೆ ಅನ್ನ ನಾಯಿಗೆ ಹಾಕ್ತಿನಿ ಅನ್ನು.

ನಾಯಿಗೆ ಅಷ್ಟು ಹಾಕಿ ಅದುನ್ನ ಒಂದು ಕೊಂದಾಕ್ಬಡ

ಏನು ರೋಗ ಹೊಡ್ಯದು ಇಲ್ಲ ಆ ಹಿಂಡಿಗೆ. ರಾತ್ರಿ ಏನು ಹುಯ್ಕೂತಿದ್ವು ಹಂಗ್ ಹಿಂಗೇನಲ್ಲ. ಕಣ್ಣು ಹಚ್ಚಿ ನಿದ್ದೆ ಮಾಡಂಗೇನಿಲ್ಲ. 

ಸುಮ್ನೆ ಇರು ಮರೆತಿ, ರಾತ್ರಿ ಇಡಿ ಹಂಚು ಹಾರೋಗಂಗೆ ಕೊರಿತಿದ್ದಿ, ಇವಾಗ ನಿದ್ದೇನೆ ಬರ್ಲ ಅಂತೀಯ !

ನಿಂಗೇನು ಆಗ್ಬಕು ಮಾರಾಯ, ಬೆಳಿಗ್ಗೆ ಎದ್ರೆ ರಾತ್ರಿ ಮಾಲ್ಗವರ್ಗು ಕೆಲ್ಸ ಮಾಡುದ್ರೆ ಏನಾದ್ರು ಅರ್ಥ ಅತದೆ. ಮೊಬೈಲ್ ಹಿಡ್ಕುಂಡು ಕುಟು ಕುಟು ಅನ್ಸದಲ್ಲ. ತಟ್ಟೆಗೆ ಅನ್ನ ಇಕ್ಕಿ ಎಷ್ಟ್ ಹೊತ್ತಾತು, ಮೊಬೈಲ್ ಹಿಡ್ಕುಂಡೆ ಉಣ್ಬಕೇನ, ಇಲ್ಲ ಅಂದ್ರೆ ಎದಿಗೆ ಅಡ್ಡ ಸಿಕ್ತದಲ. 

***
ಹೀಗೆ ಸುಬ್ಬಿಯ ಮಾತಿಗಾಗಲಿ, ವಾದಕ್ಕಾಗಲಿ ಕೊನೆಯೆಂಬುದಿಲ್ಲ. ಅವಳ ಮಾತಿಗೆ ಮೌನವೊಂದೇ ಸರಿಯಾದ ಪ್ರತ್ಯುತ್ತರ. ಪ್ರೀತಿ ಹಾಗು ಕಾಳಜಿಯ ಅಭಿವ್ಯಕ್ತಿ ಕೋಪದ ಹಾಗು ಬೈಗುಳಗಳ ಮೂಲಕವೂ ಆಗಬಹುದು! 
 
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಷೆಯ ಸೊಗಡನ್ನು ಹೀಯಾಳಿಸುವ ಅಥವಾ ಅದು ಕನ್ನಡವೇ ಅಲ್ಲ ಎಂಬ ವಾದ ವಿವಾದಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇನೆ. ಕನ್ನಡ ಕಥೆ ಕಾದಂಬರಿಗಳಿಂದ ಉಳಿದು ಬೆಳೆಯುವುದಿಲ್ಲ. ಕನ್ನಡ ಬೆಳೆಯುವುದು ಭಾಷೆಯನ್ನಾಡುವ ಜನರಿಂದ ಹಾಗು ದಿನನಿತ್ಯ ಜೀವನದಲ್ಲಿನ ಬಳಕೆಯಿಂದ.

ಕಾಮೆಂಟ್‌ಗಳು

- Follow us on

- Google Search