ನಾವೆಷ್ಟು ದುರ್ಬಲರು!

'ನಾವೆಷ್ಟು ದುರ್ಬಲರು' ಹೀಗೊಂದು ಯೋಚನೆ ಅವಾಗವಾಗ ನನ್ನ ಮನಸ್ಸಿಗೆ ಬರುತ್ತಿರುತ್ತದೆ. ನಿಜಕ್ಕೂ ನಮಗೆ ಸಮಾಜದಲ್ಲಿ ನಡೆಯುವ ಅನ್ಯಾಯಗಳನ್ನು ತಡೆಯುವ ಶಕ್ತಿ ಇದೆಯೇ ?. ಇದೆ ಎಂದಾದರೆ ನೀವು ತಡೆಗಟ್ಟಿದ ಅನ್ಯಾಯಗಳನ್ನು ಪಟ್ಟಿಮಾಡಿ. ಸಂಪೂರ್ಣವಾಗಿ ಒಬ್ಬರಿಂದಲೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ ಬಿಡಿ. ಇತ್ತೀಚಿನ ದಿನಗಳಲ್ಲಿ ಹೋರಾಟ, ತತ್ವ ಸಿದ್ಧಾಂತಗಳು ಯುವಜನರ ತಲೆ ಕೆಡಿಸಿರುವಷ್ಟು ಹಿಂದೆಂದೂ ನಾನು ಕಂಡಿಲ್ಲ. 

ಕೆಲವೊಮ್ಮೆ ಮೂರ್ಖರಂತೆ ಪೋಸ್ಟ್ಗಳನ್ನು ಹಾಕುವವರೊಂದಿಗೆ ಕಾಲುಕೆರೆದು ಜಗಳಕ್ಕೆ ಇಳಿಯುವಂತಾಗುತ್ತದೆ. ಆದರೆ, ಒಮ್ಮೆ ಆ ಕೆಲಸಕ್ಕೆ ಇಳಿದರೆ, ದಿನವೂ ಸಾಮಾಜಿಕ ಜಾಲತಾಣದಲ್ಲಿ ಅದೇ ಕೆಲಸವಾಗಬಹುದು. ಕೋಪದಲ್ಲಿ ಏನು ಮಾಡುತ್ತೇವೆ ಎನ್ನುವ ಪ್ರಜ್ಞೆ ನಮಗೆ ಇರುವುದಿಲ್ಲ, ಕೋಪವೆಲ್ಲ ತಣ್ಣಗಾದ ಮೇಲೆ ಕೋಪದಲ್ಲಿ ಮಾಡಿದ ತಪ್ಪಿನ ಅರಿವಾಗುತ್ತದೆ. ಅಷ್ಟರಲ್ಲಿ ಮೂರ್ಖರ ಪೂರ್ತಿ ಸೈನ್ಯವೇ ನಮಗೆ ಬಾಯಿಗೆ ಬಂದಹಾಗೆ ಬೈಯ್ಯಲು ಒಟ್ಟಾಗಿರುತ್ತದೆ. 


ಕೆಲವೊಂದು ಬಾರಿ ನಾವು ಆನ್ಲೈನ್ ಅಲ್ಲಿ ಬೇಕಾದ ಹಾಗೆ ಜಗಳ ಆಡುವುದನ್ನು ನೋಡಿರುತ್ತೇವೆ. ಅದೇ ಧೈರ್ಯದ ಮೇಲೆ ನಮಗೆ ಗೊತ್ತಿಲ್ಲದವರ ಮೇಲೆ ರೇಗಾಡಿದರೆ ಅದರ ಕಥೆಯೇ ಬೇರಾಗಬಹುದು. ಒಂದು ಟ್ವೀಟ್ ಧರ್ಮಗಳ ನಡುವೆ ಘರ್ಷಣೆ ಹುಟ್ಟಿಸಬಹುದು. ನಮ್ಮ ಉದ್ದೇಶ ಏನೇ ಆಗಿರಲಿ, ಅದರ ಪರಿಣಾಮಗಳು ಎಲ್ಲೆ ಮೀರಿದಾಗ ಕಾನೂನಿನ ಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಶ್ರೀಮಂತರೋ ಅಥವಾ ಪ್ರಭಾವಿ ವ್ಯಕ್ತಿಗಳಾದರೆ ತೊಂದರೆಯಿಲ್ಲ, ಹೇಗೋ ಜಗತ್ತಿಗೆ ಏನಾಗುತ್ತಿದೆ ಎಂಬ ವಿಷಯವಾದರೂ ತಿಳಿಯುತ್ತದೆ. ಬಡವರನ್ನು ದೇವರೇ ಕಾಪಾಡಬೇಕಷ್ಟೆ. 

ಮೊದಲಿನಿಂದಲೂ ತತ್ವ ಸಿದ್ಧಾಂತಗಳು ಪರವಿರೋಧ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ಯಾವುದೋ ಒಂದು ತತ್ವ ಅಥವಾ ಸಿದ್ಧಾಂತಕ್ಕೆ ತಮ್ಮ ತಲೆಯನ್ನು ಮುಡಿಪಾಗಿಸಿದ್ದಾರೆ. ಬೇರೆಯವರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳುವುದಿರಲಿ, ಕೇಳುವಷ್ಟೂ ತಾಳ್ಮೆಯಿಲ್ಲದವರು ಇಂದಿನ ನಮ್ಮ ಗೆಳೆಯರು. ಬಹುಷಃ ನಾವೆಲ್ಲರೂ ಹಾಗೆಯೇ ಅನ್ನಿಸುತ್ತದೆ, ನಮ್ಮ ವಿಚಾರಗಳನ್ನು ಬೇರೆಯವರು ಕೇಳಬೇಕು, ಅವರ ಪ್ರತಿವಾದವನ್ನಾಗಲಿ ಅಥವಾ ಅವರ ಲೆಕ್ಕಾಚಾರಗಳನ್ನಾಗಲಿ ಕೇಳುವಷ್ಟರಲ್ಲಿ ನಿದ್ದೆ ಬಂದುಬಿಡುತ್ತದೆ. 


ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆ ಎಂದರೆ, ನಾನು ಅದೆಷ್ಟೋ ಬಾರಿ ಏನಾದರು ಬರೆಯಲು ಆರಂಭಿಸಿದಾಗ ಇದನ್ನು ಯಾರು ಹೇಗೆ ಅರ್ಥ ಮಾಡಿಕೊಳ್ಳುತ್ತಾರೋ ಎಂಬ ಯೋಚನೆಯೊಂದು ಮೂಡಿಬರುತ್ತದೆ. ನಾನು ಹೆಚ್ಚಾಗಿ ಬರೆಯುವುದು ನನ್ನ ಮನಸ್ಸಿನಲ್ಲಿರುವ ಅಥವಾ ತಲೆಯಲ್ಲಿರುವ ವಿಚಾರಗಳನ್ನು ನಿರ್ದಿಷ್ಟ ರೂಪದಲ್ಲಿ ದಾಖಲಿಸಲು. ಒಂದು ವಿಷಯದ ಬಗ್ಗೆ ನಮಗೆ ಗೊತ್ತಿರುವ ವಿಚಾರಗಳನ್ನು ಬರಹದ ರೂಪದಲ್ಲಿ ವ್ಯಕ್ತಪಡಿಸಿದಾಗ ನಮ್ಮನ್ನು ನಾವು ತಿಳಿದುಕೊಳ್ಳಲು ಹಾಗು ನಮಗೆ ಗೊತ್ತಿಲ್ಲದ ಹೊಸ ವಿಷಯಗಳನ್ನು ತಿಳಿದಿಕೊಳ್ಳಲು ಸಹಕಾರಿಯಾಗುತ್ತದೆ. 

ನನ್ನ ಬರವಣಿಗೆಯ ಮುಖ್ಯ ಉದ್ದೇಶ ನನ್ನನ್ನು ನಾನು ಅರ್ಥ ಮಾಡಿಕೊಳ್ಳುವುದೇ ಆಗಿರುತ್ತದೆ. ಹೀಗಾಗಿ ನನ್ನ ಇಲ್ಲಿಯವರೆಗಿನ ಹೆಚ್ಚಿನ ಬರಹಗಳು ನನ್ನ ಮನಸ್ಥಿತಿಯ ಹಾಗು ಹೊಸ ವಿಷಯಗಳ ಕಲಿಕೆಯ ಮೇಲೆ ಅವಲಂಬಿತವಾಗಿವೆ. ನನ್ನ ಮನಸ್ಸಿಗೆ ಹೊಳೆದ ಎಲ್ಲಾ ವಿಚಾರಗಳನ್ನು ಬರೆಯುವುದಿಲ್ಲ. ಎಷ್ಟು ಬೇಕೋ ಅಷ್ಟೇ ಬರೆದು, ಉಳಿದ ವಿಷಯಗಳ ಬಗ್ಗೆ ಯೋಚಿಸುತ್ತೇನೆ ಹಾಗು ವಿವಿಧ ಮೂಲಗಳಿಂದ ಕಲಿಯಲು ತೊಡಗುತ್ತೇನೆ. 

ಕಾಮೆಂಟ್‌ಗಳು

- Follow us on

- Google Search