ಜುಲೈ ತಿಂಗಳು

ಇತ್ತೀಚಿನ ಕೆಲವು ವರ್ಷಗಳಲ್ಲಿ ಜುಲೈ ತಿಂಗಳು ಒಂದು ರೀತಿಯ ಜೀವನ ನಿರ್ಧರಿಸುವ ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕೆ ಸಾಕ್ಷಿಯಾಗಿದೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ ಒಂದಲ್ಲ ಒಂದು ವಿಷಯಕ್ಕೆ ಮಲಗಿದಾಗಲೂ ತಲೆ ಕೆಡಿಸಿಕೊಳ್ಳುವ ಸಂದಿಗ್ಧ ಪರಿಸ್ಥಿತಿಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಸಿಕ್ಕಿಹಾಕಿಕೊಳ್ಳುತ್ತೇನೆ. ಈ ಬಾರಿಯೂ ಅದೇ ಸ್ಥಿತಿ. ಕೆಲಸ ಬಿಟ್ಟು ಮುಂದೇನೋ ಮಾಡಬಹುದು ಎಂಬ ಆಶಯದೊಂದಿಗೆ ಹಲವು ನಿರ್ಧಾರಗಳನ್ನು ತೆಗೆದುಕೊಂಡ ಪರಿಣಾಮ ಇದು ಅಷ್ಟೇ. 

ಪ್ರತಿ ವರ್ಷದಂತೆ ಈ ಬಾರಿಯೂ ಅಷ್ಟೇ, ಆಗಸ್ಟ್ ತಿಂಗಳು ಮುಗಿಯುವ ಒಳಗೆ ಇವೆಲ್ಲಾ ಸಮಸ್ಯೆಗಳಿಗೆ ಒಂದು ಉತ್ತಮ ಪರಿಹಾರ ಕಂಡುಹಿಡಿದು ಆರಾಮಾಗಿ ಇರುತ್ತೇನೆ ಎಂದೆನಿಸುತ್ತದೆ. ಆಗಸ್ಟ್ ಇಂದ ಡಿಸೆಂಬರ್ವರೆಗಿನ ದಿನಗಳಲ್ಲಿ ನಾನು ಹೆಚ್ಚಾಗಿ ಯಾವುದಾದರು ಕೆಲಸಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸುವುದು ನನ್ನ ಹಿಂದಿನ ಹಲವು ವರ್ಷಗಳನ್ನು ಅವಲೋಕಿಸಿದರೆ ಅರ್ಥವಾಗುತ್ತದೆ. ನಂತರ ಹೊಸ ವರ್ಷ ಬರುತ್ತಿದ್ದಂತೆ ಇದ್ದಕ್ಕಿದ್ದಂತೆ ಜೀವನದಲ್ಲಿ ಒತ್ತಡ ಹಾಗು ತೊಂದರೆಗಳು ಕಾಣಿಸಿಗೊಳ್ಳುತ್ತವೆ. 


ಜನವರಿಯಲ್ಲಿ ಆರಂಭವಾಗುವ ಈ ಸಮಸ್ಯೆಗಳು ಮಾರ್ಚ್ ಹಾಗು ಮೇ ತಿಂಗಳ ಮುಗಿಯುವ ಸಮಯಕ್ಕೆ ಒಂದು ಕ್ಲಿಷ್ಟ ರೂಪವನ್ನು ತಾಳಿರುತ್ತವೆ. ಈ ಸಂದರ್ಭಗಳಲ್ಲಿಯೇ ನಾನು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಈ ನಿರ್ಧಾರಗಳು ಸಾಕಷ್ಟು ಜನರಿಗೆ ನೋವು ಹಾಗು ದುಃಖವನ್ನು ಉಂಟುಮಾಡುತ್ತವೆ. ಕೆಲವರಿಗೆ ನನ್ನ ಬುದ್ಧಿವಂತಿಕೆಯ ಮೇಲೆ ಅನುಮಾನ ಹುಟ್ಟಿಸುತ್ತವೆ. ಇನ್ನು ಕೆಲವರಿಗೆ ನನ್ನ ಮಾತೆ ಕೇಳುವುದಿಲ್ಲ ಇವನು ಎಂಬ ಬೇಜಾರಾಗುತ್ತದೆ. 

ಇದೆಲ್ಲವನ್ನು ನೋಡುತ್ತಾ ಕೂತುಕೊಂಡರೆ ಸ್ವಂತ ನಿರ್ಧಾರ ಕೈಗೊಳ್ಳುವುದನ್ನೇ ಬಿಟ್ಟುಬಿಡಬೇಕಾಗುತ್ತದೆ. ನನ್ನ ಮನಸ್ಸಿಗೆ ಸರಿಯೆನ್ನಿಸುವ ನಿರ್ಧಾರವನ್ನೇ ನಾನು ಯಾವಾಗಲು ಮಾಡುವುದು. ಬೇರೆಯವರ ನಿರ್ಧಾರಗಳಿಗೆ ಕಿವಿಗೊಟ್ಟು ಅನುಭವಿಸುವ ನೋವು ಚಿಕ್ಕದೇ ಆದರೂ ಅದನ್ನು ನನ್ನ ಮನಸ್ಸಿಗೆ ಸಹಿಸಲು ಸಾಧ್ಯವೇ ಇಲ್ಲ.   

ಕಾಮೆಂಟ್‌ಗಳು

- Follow us on

- Google Search