ಜಾತಿಪದ್ಧತಿ

ಜಾತಿಯ ಆಧಾರದ ಮೇಲೆ ಮನುಷ್ಯರನ್ನು ವಿಂಗಡಿಸುವ ಅಮಾನವೀಯ ಪದ್ಧತಿ ಹೇಗೆ ಹುಟ್ಟಿತು ಎಂಬುದರ ಬಗ್ಗೆ ನನಗೆ ಕುತೂಹಲವಿದೆ. ಆದರೆ, ಈ ಪದ್ಧತಿ ಶುರುವಾಗಿದ್ದು ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ಎಂದು ಇತಿಹಾಸಕಾರರು ಅಂದಾಜಿಸಿದ್ದಾರೆ. ಮೂರು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಖರಾರುವಾಕ್ಕಾಗಿ ಹೀಗೆಯೇ ಆಯಿತು ಎಂದು ಹೇಳಲು ಯಾವ ಇತಿಹಾಸಕಾರರಿಂದಲೂ ಸಾಧ್ಯವಿಲ್ಲ. ಆ ಕಾಲಕ್ಕೆ ಚಾಲ್ತಿಯಲ್ಲಿದ್ದ ವಸ್ತುಗಳ  ಅವಶೇಷಗಳು ದೊರೆತಾಗ, ಯಾವುದಾದರು ಪುಸ್ತಕಗಳು ದೊರೆತಾಗ ಹಾಗು ತಮ್ಮ ವಾದಕ್ಕೆ ಸರಿಹೊಂದುವ ಸಾಕ್ಷಿ ವಿಜ್ಞಾನದ ಮೂಲಕ ದೊರೆತಾಗ ಇತಿಹಾಸವನ್ನು ಬರೆಯಲಾಗುತ್ತದೆ. ಇತಿಹಾಸದ ಪ್ರಕಾರ ಆರ್ಯರು ಭಾರತಕ್ಕೆ ವಲಸೆ ಬಂದಿದ್ದು. ಇದನ್ನು ಒಪ್ಪದ ಇತಿಹಾಸಕಾರರು ಸಾಕಷ್ಟು ಜನರಿದ್ದಾರೆ. 


ಮಾನವಶಾಸ್ತ್ರದ ಪ್ರಕಾರ ಭಾರತದ ಅತ್ಯಂತ ಹಳೆಯ ನಿವಾಸಿಗಳು ಈಗಿನ ಆಸ್ಟ್ರೇಲಿಯಾ ಭಾಗದಲ್ಲಿ ಮೂಲನಿವಾಸಿಗಳಾಗಿರುವ  ಆಸ್ಟ್ರೋಲಾಯ್ಡ್  ಎಂಬ ಜನಾಂಗ. ಅವರ ನಂತರ ಆಫ್ರಿಕಾ ಭಾಗದಿಂದ ವಲಸೆ ಬಂದು ನೆಲೆಸಿದವರು ದ್ರಾವಿಡರು. ಸಿಂಧು ಬಯಲಿನ ಫಲವತ್ತಾದ ಮಣ್ಣಿರುವ ಪ್ರದೇಶದಲ್ಲಿ ಇವರು ನೆಲೆಸಿದ್ದರು. ಹರಪ್ಪ ಮೊಹೆಂಜೋದಾರೋ ನಾಗರಿಕತೆಯಲ್ಲಿ ಕಂಡುಬರುವ ಮಣ್ಣಿನ ಬಿಲ್ಲೆಗಳ ಬರಹಗಳು ದ್ರಾವಿಡ ಲಿಪಿಯನ್ನು ಹೋಲುತ್ತವೆ ಎಂದು ಎಸ್.ಆರ್.ರಾವ್ ಸಂಶೋಧನೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಕಂಡುಬರುವ "ಬ್ರುಹಿಇ" ಎಂಬ ಭಾಷೆಯು ದ್ರಾವಿಡ ಭಾಷೆಗಳಾದ ತಮಿಳು, ಕನ್ನಡವನ್ನು ಹೋಲುತ್ತದೆ. ಇಂದಿಗೂ ಆ ಭಾಷೆಯನ್ನು ಮಾತನಾಡುವ ಜನರು ಅಲ್ಲಿದ್ದಾರೆ. ಇದರಿಂದಾಗಿ ಆರ್ಯರ ಆಕ್ರಮಣದ ಮೊದಲೇ ಸರಳ ಜೀವನ ನಡೆಸುವ ನಾಗರಿಕತೆಯನ್ನು ದ್ರಾವಿಡರು ಕಂಡುಕೊಂಡಿದ್ದರು. 

ಹರಪ್ಪ ಮೊಹೆಂಜೋದಾರೋ ಕಾಲದ ಪಟ್ಟಣ 

ಹರಪ್ಪ ಮೊಹೆಂಜೋದಾರೋ ಕಾಲದ ಸಾಮಾಜಿಕ ಜೀವನವನ್ನು ಅವಲೋಕಿಸಿದರೆ ಅವರು ಶ್ರಮ ಜೀವಿಗಳಾಗಿದ್ದು, ಅವರ ನಗರ ಯೋಜನೆಗಳು ಯಾವುದೇ ದೇವಸ್ಥಾನಗಳಾಗಲಿ ಅಥವಾ ದೇವರ ಪ್ರತಿಮೆಯನ್ನಾಗಲಿ ಹೊಂದಿರುವುದು ಕಂಡುಬಂದಿಲ್ಲ. ಎಲ್ಲ ಮನೆಗಳು ವ್ಯಾಪಾರಕ್ಕೆ ಅನುಗುಣವಾಗುವಂತೆ ದಾರಿಗೆ ಬೆನ್ನು ಮಾಡಿ ರಚಿಸಲ್ಪಟ್ಟಿವೆ. ಬದಿಯಲ್ಲಿ ಕಿಟಿಕಿಯ ರಚನೆಗಳಿವೆ. ಊರಿನ ಮಧ್ಯಭಾಗದಲ್ಲಿ ಆಹಾರ ಸಂಗ್ರಹಿಸುವ ದೊಡ್ಡ ಗುಡಾಣವಿರುವುದು ಕಂಡುಬಂದಿದೆ. ಆರ್ಯರ ಅಕ್ರಮಣದಿಂದಾಗಿ ಈ ನಾಗರೀಕತೆ ನಶಿಸಿತು ಹಾಗು ಚದುರಲ್ಪಟ್ಟಿತು. ಇದರಿಂದಾಗಿ, ಕೇವಲ ದಕ್ಷಿಣ ಭಾರತ ಮಾತ್ರವಲ್ಲದೆ ಭಾರತದ ಹಲವೆಡೆ ದ್ರಾವಿಡರು ಇಂದಿಗೂ ವಾಸವಾಗಿದ್ದಾರೆ ಆದರೆ ಕಾಲಾಂತರದಲ್ಲಿ ಅವರ ಭಾಷೆ ಹಾಗು ಸಂಸ್ಕೃತಿ ಆರ್ಯರನ್ನು ಅನುಸರಿಸುತ್ತಿವೆ.

 ವಿವಿಧ ಭಾಗಗಳಲ್ಲಿನ  ದ್ರಾವಿಡ ಭಾಷೆಗಳು 

ಆರ್ಯ ಎಂದರೆ ಶ್ರೇಷ್ಠ ಎಂದರ್ಥ. ತಮ್ಮನ್ನು ತಾವು ಶ್ರೇಷ್ಠರೆಂದು ಕರೆದುಕೊಂಡವರು ಉಳಿದವರನ್ನು ಕೀಳಾಗಿ ಕಾಣತೊಡಗಿದರು. ಆರ್ಯರು ವಲಸೆ ಬಂದಿದ್ದರಿಂದ ಅವರು ಅಲ್ಪಸಂಖ್ಯಾತರಾಗಿದ್ದರು. ಇದರಿಂದಾಗಿ ಅವರ ಮಾನವ ಸಂಪನ್ಮೂಲವನ್ನು ಅತ್ಯಂತ ವ್ಯವಸ್ಥಿತವಾಗಿ ಉಪಯೋಗಿಸುವ ಅವಶ್ಯಕತೆ ಎದುರಾಯಿತು. ಇದರಿಂದಾಗಿ ಆರ್ಯರು ತಮ್ಮಲ್ಲಿಯೇ ನಾಲ್ಕು ಮುಖ್ಯ ವಿಭಾಗಗಳಾಗಿ ಮಾಡಿಕೊಂಡರು. ಅವೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ. ಅವರು ತಮ್ಮನ್ನು ತಾವು ವಿಭಾಗ ಮಾಡಿಕೊಂಡಿದ್ದು ತಮ್ಮ ಅಭಿವೃದ್ಧಿಗಾಗಿ ಹಾಗು ಇಲ್ಲಿನ ಮೂಲ ನಿವಾಸಿಗಳಾದ ದ್ರಾವಿಡರನ್ನು ಸಮರ್ಥವಾಗಿ ಎದುರಿಸಲು. ಸಂಸ್ಕೃತ ಆರ್ಯರ ಭಾಷೆಯಾಗಿತ್ತು. ಬ್ರಹ್ಮ ಹಾಗು ವಿಷ್ಣುವನ್ನು ತಮ್ಮ ದೇವರನ್ನಾಗಿ ಪೂಜಿಸುತ್ತಿದ್ದರು. ಮುಂದಿನ ನೂರಾರು ವರ್ಷಗಳಲ್ಲಿ ದ್ರಾವಿಡರ ಪ್ರತೀಕವಾದ ಶಿವನನ್ನು ವಿನಾಶಕಾರಿಯಾಗಿ ತಮ್ಮ ಕೃತಿಗಳಲ್ಲಿ ಬಿಂಬಿಸಿರುವುದನ್ನು ನಾವು ಕಾಣಬಹುದು. ಬ್ರಹ್ಮ ಸೃಷ್ಟಿಗೆ, ವಿಷ್ಣು ಪಾಲನೆಗೆ ಹಾಗು ಶಿವ ವಿನಾಶಕ್ಕೆ ಎಂದು ಈಗಲೂ ಗ್ರಂಥಗಳಲ್ಲಿ ಉಲ್ಲೇಖವಿದೆ.


ಆರ್ಯ ಜನಾಂಗದ ಸಂಸ್ಕೃತಿಯನ್ನು ಅನುಸರಿಸಬೇಕೆನ್ನುವ ಛಲ ದ್ರಾವಿಡರಲ್ಲಿ ಬಂದಿದ್ದು ಅವರಂತೆಯೇ ಸಾಹಿತ್ಯ ರಚನೆ ಮಾಡುವ ಹಾಗು ಸಂಸ್ಕೃತಕ್ಕೆ ಹೆಚ್ಚಿನ ಮಹತ್ವ ನೀಡುವವರನ್ನು ಹುಟ್ಟುಹಾಕಿತು. ಮಧ್ಯ ಏಷ್ಯಾದಿಂದ ಇಲ್ಲಿಗೆ ವಲಸೆ ಬಂದವರ ಮೇಲೆ ಕಾತರ ಕುತೂಹಲಗಳೊಂದಿಗೆ ಅವರ ಆಚಾರ ವಿಚಾರಗಳನ್ನು ದ್ರಾವಿಡರೂ ಅನುಸರಿಸತೊಡಗಿದರು. ಅವರಂತೆಯೇ ತಮ್ಮಲ್ಲಿ ತಾವು ಮಾಡುವ ಕೆಲಸಗಳ ಆಧಾರದ ಮೇಲೆ ವಿಂಗಡಣೆ ಮಾಡಿಕೊಳ್ಳತೊಡಗಿದರು. ಇದರಿಂದಾಗಿ ಊರಿನಿಂದ ಹೊರಗೆ  ಮಾಡಬೇಕಾದ ಕೆಲಸಗಳಾದ ಸತ್ತ ಪ್ರಾಣಿಗಳನ್ನು ಸುಡುವ ಕೆಲಸ ಮಾಡುವವರು, ಅದರ ಚರ್ಮದಿಂದ ಉತ್ಪನ್ನಗಳನ್ನು ತಯಾರು ಮಾಡುವವರು ಊರಿನ ಸ್ವಚ್ಛತೆಯ ಸಲುವಾಗಿ ಊರಿನ ಹೊರಗಡೆಯೇ ತಮ್ಮ ವಾಸ್ತವ್ಯ ಹೂಡಬೇಕಾಗಿ ಬಂದಿತು. 

ಇಲ್ಲಿ ನಾವು ಯೋಚಿಸಬೇಕಾದ ವಿಚಾರವೆಂದರೆ, ಆರ್ಯರು ತಮ್ಮವರ ಏಳಿಗೆಗಾಗಿ ಮಾಡಿದ ಆಚರಣೆಗಳನ್ನು ದ್ರಾವಿಡರು ಕೇವಲ ಅವರ ಸಂಸ್ಕೃತಿಗೆ ಮಾರುಹೋಗಿ ಅವರನ್ನೇ ಅನುಸರಿಸುವ  ಭರದಲ್ಲಿ ತಮ್ಮನ್ನು ಸಾವಿರಾರು ಜಾತಿಗಳಾಗಿ ವಿಂಗಡಿಸಿಕೊಂಡರು. ದ್ರಾವಿಡರಲ್ಲಿ ಅಂತಹ ಅವಶ್ಯಕತೆ ಏನೂ ಇರಲಿಲ್ಲ. ಇದರಿಂದಾಗಿ ಈ ವಿಂಗಡಣೆ ಮೇಲು ಕೀಳೆಂಬ ಭಾವನೆ ಮೂಡಲು ಅನುವು ಮಾಡಿಕೊಟ್ಟಿತು. ಜಾತಿಪದ್ಧತಿಯ ಅತ್ಯಂತ ಕರಾಳ ಮುಖವಾದ ಅಸ್ಪೃಶ್ಯತೆ ಸಮಾಜದಲ್ಲಿ ಬೆಳೆಯತೊಡಗಿತು. ಬೇರೊಂದು ಸಂಸ್ಕೃತಿಯ ಗೊತ್ತುಗುರಿಯಿಲ್ಲದ ಅನುಕರಣೆ ಇಂತಹ ಅಮಾನವೀಯ ಪದ್ಧತಿಯನ್ನು ಅಸ್ತಿತ್ವಕ್ಕೆ ತಂದಿದ್ದು ಬಹಳ ದುಃಖದ ಸಂಗತಿ. ತಮ್ಮ ಮನೆಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಯಾವುದೇ ಆಸ್ತಿಯಿಲ್ಲದೆ ಜೀವನ ನಿರ್ವಹಿಸುತ್ತಿದ್ದವರು ಹಾಗು ಊರಿನ ಹೊರಗೆ ತಮ್ಮ ಕೆಲಸ ಮಾಡುತ್ತಿದ್ದವರನ್ನು ದ್ರಾವಿಡರೇ 'ಪಂಚಮ' ಎಂದು ಕರೆದ್ದಿರಬಹುದು. 

ನಂತರದ ಸಾವಿರಾರು ವರ್ಷಗಳ ತನಕ ನಡೆದಿದ್ದು ಆರ್ಯ ದ್ರಾವಿಡ ಸಂಸ್ಕೃತಿಯ ಸಮ್ಮಿಲನ. ಸಂಸ್ಕೃತದ ಪದಗಳು ದ್ರಾವಿಡ ಭಾಷೆಗಳಲ್ಲಿ, ದ್ರಾವಿಡ ಭಾಷೆಯ ಪದಗಳು ಸಂಸ್ಕೃತದಲ್ಲಿ ಕಾಣಸಿಗುತ್ತವೆ. ಸಾಂಸ್ಕೃತಿಕ ವಿನಿಮಯ ಎಷ್ಟೇ ನಡೆದರೂ ಜಾತಿ ಪದ್ದತಿಯ ಘೋರ ಆಚರಣೆಗಳು ಮಾತ್ರ ಕಡಿಮೆಯಾಗಲಿಲ್ಲ. ಈ ಅಸಮಾನತೆಗಳ ವಿರುದ್ಧ ಧ್ವನಿಯೆತ್ತಿದ ಮೊದಲಿಗ ಬುದ್ಧ. ಸಕಲ ಪ್ರಾಣಿಗಳಲ್ಲಿ ಸಮಾನತೆಯನ್ನು ಸಾರಿದ್ದ ಬುದ್ಧನ ತತ್ವಗಳು ಜಾತಿಪದ್ಧತಿಯನ್ನು ಕೊನೆಗಾಣಿಸುವ ಮೊದಲ ಪ್ರಯತ್ನ ಎಂದು ಹೇಳಬಹುದು. ನಂತರದಲ್ಲಿ ಸಮಾಜದಲ್ಲಿನ ಅಸಮಾನತೆಗೆ ಬೇಸತ್ತು ಧ್ವನಿಯೆತ್ತಿದ ಮಹಾಪುರುಷ ನಮ್ಮ ಬಸವಣ್ಣನವರು. ಇದಾದ ನಂತರ ಹಲವರು ತಮ್ಮ ಸಾಹಿತ್ಯದ ಮೂಲಕ ಜನರಲ್ಲಿ ಸಮಾನತೆಯನ್ನು ಸಾರಿದರು. ಕನಕದಾಸರು ಇವರಲ್ಲಿ ಪ್ರಮುಖರು. 


ಕಳೆದ ಶತಮಾನದಲ್ಲಿ ಜಾತಿ ಪದ್ಧತಿ ವಿರುದ್ಧ ಪ್ರಬಲವಾಗಿ ಹೋರಾಡಿ ಜನರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಿದವರೆಂದರೆ ಅಂಬೇಡ್ಕರ್. ಗಾಂಧೀಜಿ ಅಸ್ಪೃಶ್ಯತೆ ನಿಂದಿಸಿದರು. ಇಷ್ಟೆಲ್ಲಾ ಹೋರಾಟಗಳು, ಚಳುವಳಿಗಳು ಏನೇ ನಡೆದು ಬಂದಿದ್ದರೂ ಇಂದಿಗೂ ನಮ್ಮ ಸಮಾಜದಲ್ಲಿ ಜಾತಿಪದ್ದತಿ ಜೀವಂತವಾಗಿರುವುದು ದುಃಖದ ಸಂಗತಿ. ಹುಟ್ಟಿನಿಂದಲೇ ಜಾತಿಯ ಕಟ್ಟುಪಾಡುಗಳಿಗೆ ಮಗು ತನಗೆ ಗೊತ್ತಿಲ್ಲದೆಯೇ ಒಳಗಾಗುತ್ತದೆ. ಜಾತಿಯ ಬೇರುಗಳು ಜನರ ಜೀವನದಲ್ಲಿ ಆಳವಾಗಿ ಬೇರೂರಿವೆ. ಮೇಲ್ನೋಟಕ್ಕೆ ಮೊದಲಿನಷ್ಟು ದೊಡ್ಡ ಪ್ರಮಾಣದಲ್ಲಿ ಅನ್ಯಾಯ ನಡೆಯದೇ ಇದ್ದರು ಸ್ವಲ್ಪ ಪ್ರಮಾಣದಲ್ಲಾದರೂ ಅಲ್ಲಲ್ಲಿ ಅಮಾನವೀಯ ಘಟನೆಗಳು ನಡೆಯುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. 

ಜಗತ್ತು ಅದೆಷ್ಟೇ ವೇಗವಾಗಿ ಬದಲಾಗುತ್ತಿದರು ಜಾತಿಪದ್ದತಿಯಂತಹ ಸಾಮಾಜಿಕ ಪಿಡುಗುಗಳಿಂದ ಬಿಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಶಿಕ್ಷಣಪದ್ಧತಿ ಸಮಾಜದ ಇಂದಿನ ಸಮಸ್ಯೆಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವಲ್ಲಿ ಸಾಕಷ್ಟು ಫಲಕಾರಿಯಾಗಿಲ್ಲ. ಇದರಿಂದಾಗಿ ಸಮಾಜದ ಏಳಿಗೆಯೇ ಕುಂಠಿತವಾಗುತ್ತದೆ. ನಾವೆಲ್ಲರೂ ಒಂದೇ ಜಾತಿಗೆ ಸೇರಿರುವ ಮನುಷ್ಯರು ಎಂಬ ತಿಳುವಳಿಕೆ ಪ್ರತಿಯೊಬ್ಬರಲ್ಲೂ ಬರುವವರೆಗೂ ಇದಕ್ಕೆ ಕೊನೆಯಿಲ್ಲ. ಇಂತಹ ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ಕಂಡುಹಿಡಿಯುವ ಯೋಜನೆಗಳ ಬದಲು ರಾಜಕೀಯ ಪಕ್ಷಗಳು ಜನರ ಅಜ್ಞಾನ ಹಾಗು ಜಾತಿಯನ್ನೇ ತಮ್ಮ ಗೆಲುವಿನ ಬಂಡವಾಳ ಮಾಡಿಕೊಂಡಿವೆ. ರಾಜಕಾರಣಿಗಳು ಕೇವಲ ಮತಕ್ಕಾಗಿ ಜನರಲ್ಲಿ ಬಿರುಕನ್ನು ಮೂಡಿಸುವ ಪ್ರಯತ್ನವನ್ನು ಸ್ವಯಂ ಪ್ರೇರಿತವಾಗಿ ವಿರೋಧಿಸುವ ಗುಣ ಪ್ರತಿಯೊಬ್ಬರಲ್ಲಿ ಬರಬೇಕು. ಮುಂದಿನ ಪೀಳಿಗೆಯಾದರೂ ಸರ್ವಸಮಾನತೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು, ಈ ಕ್ರೂರ ವ್ಯವಸ್ಥೆಯನ್ನು ಕೊನೆಗಾಣಿಸುತ್ತದೆಯೇ ಎಂದು ನೋಡಬೇಕು. 


***
ಗ್ರಂಥಋಣ 
ಗೊಂಚಲು, ಬರೆದವರು : ಹೊರೆಯಾಲ  ದೊರೆಸ್ವಾಮಿ 👇

ಕಾಮೆಂಟ್‌ಗಳು

- Follow us on

- Google Search