ಹುಟ್ಟುಹಬ್ಬ

ಹುಟ್ಟುಹಬ್ಬದ ಕಲ್ಪನೆ 

ನಮ್ಮ ಶಾಲೆಯಲ್ಲಿ ಇತರ ಮಕ್ಕಳು ಯುನಿಫಾರ್ಮ್ ಹಾಕಬೇಕಾದ ದಿನ ಬಣ್ಣ ಬಣ್ಣದ ಬಟ್ಟೆ ಹಾಕಿಕೊಂಡು ಬಂದರು ಎಂದರೆ ಇವತ್ತು ಅವರ ಹುಟ್ಟುಹಬ್ಬ ಎಂದು ಮೊದಲ ಬಾರಿಗೆ ತಿಳುವಳಿಕೆಗೆ ಬಂತು. ಮಳೆಗಾಲದ ದಿನಗಳಲ್ಲಿ ಸಮವಸ್ತ್ರ ಒಣಗದೆ ಬೇರೆ ಬಟ್ಟೆ ಹಾಕಿಕೊಂಡು ಬಂದವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿರುವ ಘಟನೆಗಳು ನಡೆದಿವೆ. 


ಸ್ವಲ್ಪ ದೊಡ್ಡವರಾದ ನಂತರ, ಅಂದರೆ ಕ್ಯಾಲೆಂಡರ್ ಅಲ್ಲಿ ದಿನಗಳನ್ನು ಗುರುತಿಸುವುದು ತಿಳಿದ ಮೇಲೆ ಸರಿಯಾಗಿ ಅರ್ಥವಾಯ್ತು. ಒಂದು ನಿರ್ದಿಷ್ಟ ದಿನಾಂಕವನ್ನು ತಮ್ಮ ಹುಟ್ಟುಹಬ್ಬವನ್ನಾಗಿ ಆಚರಿಸುತ್ತಾರೆ ಹಾಗು ಹೊಸ ಬಟ್ಟೆ ಹಾಕಿಕೊಂಡು ಶಾಲೆಗೆ ಬರುತ್ತಾರೆ ಹಾಗು ಸಹಪಾಠಿಗಳಿಗೆ ಸಿಹಿಯನ್ನು ಹಂಚುತ್ತಾರೆ. 

ಶಾಲೆಯಲ್ಲಿ ಹುಟ್ಟುಹಬ್ಬದ ಆಚರಣೆ 

ನಾನು ಹತ್ತನೇ ತರಗತಿಯವರೆಗೆ ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ. ಬೆಳಿಗ್ಗೆ ಶಾಲೆಗೆ ಬಂದು ಪ್ರಾರ್ಥನೆ ಮುಗಿಸಿ ತರಗತಿಗೆ ಬಂದ ನಂತರ ಮೊದಲ ಟೀಚರ್ ಪಾಠ ಆರಂಭಿಸುವ ಮುಂಚೆ ಎಲ್ಲರ ಮುಂದೆ ಹೋಗಿ ನಿಲ್ಲಬೇಕು. "ಹುಟ್ಟು ಹಬ್ಬದ ಶುಭಾಶಯಗಳು" ಎಂದು ಮೂರು ಬಾರಿ ರಾಗವಾಗಿ ಹೇಳಿ ಚಪ್ಪಾಳೆ ಹೊಡೆದು ಮುಗಿಸಿದ ನಂತರ ಟೀಚರ್ಗೆ ಸಿಹಿ ತಿನಿಸು ನೀಡಿದ ನಂತರ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕಿತ್ತು. 

ಇದರ ನಂತರ ತನ್ನ ಆತ್ಮೀಯ ಸ್ನೇಹಿತನೊಂದಿಗೆ ಶಾಲೆಯ ಇತರ ತರಗತಿಗಳಿಗೆ ತೆರಳಿ ಇದೇ ಕೆಲಸ ಮುಂದುವರಿಸಬೇಕಿತ್ತು. ನಮ್ಮ ಶಾಲೆ LKG ಇಂದ ಆರಂಭವಾಗಿ ಹತ್ತನೇ ತರಗತಿಯ ತನಕ ಇತ್ತು. ಎಲ್ಲಾ ತರಗತಿಗಳಿಗೆ ಹೋಗಿ ಬರಬೇಕಾದರೆ ಬೆಳಗ್ಗಿನ ಮೊದಲ ತರಗತಿ ಮುಗಿದಿರುತಿತ್ತು. 

ಶಿಕ್ಷಕರಿಗೆ ಬೇಕಾದಷ್ಟು ಸಿಹಿ ತಿನಿಸನ್ನು ಮೊದಲೇ ಲೆಕ್ಕ ಹಾಕಿ ಅದಕ್ಕೆ ಐದನ್ನು ಸೇರಿಸಿ ಇಟ್ಟುಕೊಳ್ಳುತಿದ್ದೆ. ಕೆಲವು ಶಿಕ್ಷಕರು ತಮ್ಮ ಪ್ರೀತಿಯನ್ನು ೨-೩ ಸ್ವೀಟ್ ತಿನ್ನುವ ಮೂಲಕವೂ ತೋರಿಸುತ್ತಿದ್ದರು. ಎಲ್ಲಾ ತರಗತಿಗಳಿಗೆ ಹೋಗಿ ವಾಪಸ್ಸು ಬರುವ ಸಂದರ್ಭದಲ್ಲಿ ಇನ್ನು ಉಳಿದಿದ್ದರೆ ನನ್ನ ಜೊತೆ ಬಂದಂತಹ ಗೆಳೆಯನಿಗೆ ಸ್ವಲ್ಪ ಕೊಡುತ್ತಿದ್ದೆ. 

ನಮ್ಮ ಶಾಲೆಯಲ್ಲಿ ಸಾಮೂಹಿಕವಾಗಿ ಹುಟ್ಟುಹಬ್ಬವನ್ನು ಆಚರಿಸಿ, ಕಥೆ ಹೇಳಿ, ಸಿಹಿ ಹಂಚಿ ಒಂದು ಸುಂದರ ಸಂದೇಶದೊಂದಿಗೆ ಸರ್ಟಿಫಿಕೇಟ್ ಕೊಟ್ಟು ಕಳುಹಿಸುತ್ತಿದ್ದರು. ಇದು ಆ ದಿನಗಳಲ್ಲಿ ನನಗೆ ಅಷ್ಟೇನೂ ದೊಡ್ಡದು ಅನ್ನಿಸುತ್ತಿರಲಿಲ್ಲ, ಇವತ್ತು ನೆನಪಿಸಿಕೊಂಡರೆ ಶಾಲೆಯ ಬಗ್ಗೆ ಅಭಿಮಾನ ಹೆಚ್ಚಾಗುತ್ತದೆ. 

ಸಮಸ್ಯೆ - ಪರಿಹಾರ 

ಹುಟ್ಟಿದಹಬ್ಬದ ದಿನ ಸಿಹಿತಿನಿಸು ಹಿಡಿದುಕೊಂಡು ಇತರ ತರಗತಿಗಳಿಗೆ ನನ್ನ ಜೊತೆ ಬರಲು ಒಬ್ಬ ಸ್ನೇಹಿತ ಬೇಕಲ್ಲ, ಅದು ಯಾರು ಎಂದು ನಿರ್ಧರಿಸಿರಲಿಲ್ಲ. ಏಕೆಂದರೆ, ನನಗೆ ಒಂದಷ್ಟು ಜನ ಗೆಳೆಯರಿದ್ದರು, ಅವರೆಲ್ಲರೂ ಬೇರೆಯವರ ಜೊತೆ ಹೋಗುತ್ತಿದ್ದರು. ಹೀಗಾಗಿ ನಿಶಾಂತ್ ಎಂಬುವವನು ನನಗೆ ಈ ರೀತಿಯಾಗಿ ಗೆಳೆಯನಾದ. ಅವನ ಹುಟ್ಟಿದಹಬ್ಬದ ದಿನ ನನ್ನನ್ನು ಜೊತೆಗೆ ಕರೆಯುತ್ತಿದ್ದ ನನ್ನ ಹುಟ್ಟಿದಹಬ್ಬದ ದಿನ ಅವನನ್ನು ಕರೆಯುತ್ತಿದ್ದೆ. ಇದೇ ತಂತ್ರವನ್ನು ಸಾಮಾನ್ಯವಾಗಿ ಎಲ್ಲರೂ ಆಚರಿಸುತ್ತಿದ್ದರು. ಇಂದಿಗೂ ನಮ್ಮ ಊರಿನ ಬೇಕರಿಯಲ್ಲಿ ನಿಶಾಂತ್ ಕಾಣಸಿಕ್ಕಾಗ ಹಳೆಯ ನೆನಪುಗಳು ಮನಸ್ಸಿನಲ್ಲಿ  ಮೂಡಿಬರುತ್ತವೆ. 

ನಮ್ಮ ಶಾಲೆಯಲ್ಲಿ ಸುಮಾರು ೬೦೦ ಮಕ್ಕಳು ಓದಲು ಬರುತ್ತಿದ್ದರು. ಇದರಿಂದಾಗಿ ಕೆಲವೊಂದು ದಿನ ೩೦-೩೫ ವಿದ್ಯಾರ್ಥಿಗಳ ಹುಟ್ಟುಹಬ್ಬ ಬರುತಿತ್ತು. ಹೀಗೆ ಪಾಠ ಮಾಡುವ ಸಂದರ್ಭದಲ್ಲಿ ಒಬ್ಬಬ್ಬರೇ ಹೋದಾಗ ಪಾಠ ಮಾಡುವುದನ್ನು ಬಿಟ್ಟು ಎಲ್ಲರಿಗೂ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುವುದರಲ್ಲೇ ತರಗತಿ ಮುಗಿಯುತ್ತಿತ್ತು. ಇದು ದಿನದ ಮೊದಲ ತರಗತಿ ತೆಗೆದುಕೊಳ್ಳುತ್ತಿದ್ದ ಶಿಕ್ಷಕರಿಗೆ ಚಿಂತೆಯನ್ನು ಉಂಟುಮಾಡಿತು. ಈ ಸಮಸ್ಯೆಯನ್ನು ಬಗೆಹರಿಸಲು ಬೆಳಿಗ್ಗೆ ಪ್ರಾರ್ಥನೆ ಮುಗಿದ ಮೇಲೆ, ಹುಟ್ಟುಹಬ್ಬ ಆಚರಿಸಿಕೊಳ್ಳುವವರನ್ನು ವೇದಿಕೆಯ ಮೇಲೆ ಕರೆದು ಶುಭಾಶಯ ಕೋರಲು ಆರಂಭಿಸಿದರು. 

ಇದನ್ನು ಬಿಟ್ಟರೆ ನಮ್ಮ ಶಾಲೆಯಲ್ಲಿ ಬುಧವಾರ ಮತ್ತು ಶನಿವಾರ ಸಮವಸ್ತ್ರದ ಬದಲು ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಬರುವ ಅವಕಾಶವಿತ್ತು. ಇದರಿಂದಾಗಿ ತಮ್ಮ ಜನ್ಮದಿನ ಬುಧವಾರ ಅಥವಾ ಶನಿವಾರ ಬಂದರೆ ಸ್ವಲ್ಪ ಬೇಜಾರಾಗುತಿತ್ತು.

ಹೊಸ ಬಟ್ಟೆ ಹಾಕಿಕೊಂಡು ಬಂದರೆ ಅವತ್ತು ಅವರ ಜನ್ಮದಿನ ಎಂಬ ನಂಬಿಕೆಯಂತೂ ಎಲ್ಲರಲ್ಲೂ ಇತ್ತು. ಶಾಲೆಯ ಶಿಕ್ಷಕರು ಯಾರೇ ಹೊಸ ಬಟ್ಟೆ ಹಾಕಿಕೊಂಡು ತರಗತಿಗೆ ಬಂದರೆ ವಿದ್ಯಾರ್ಥಿಗಳಲ್ಲೆರೂ ಒಟ್ಟಾಗಿ "ಹುಟ್ಟುಹಬ್ಬದ ಶುಭಾಶಯಗಳು" ಎಂದು ಹೇಳುತ್ತಿದ್ದರು. ನಮಗೆ ಕನ್ನಡ ಪಾಠ ಮಾಡಲು ಬರುತ್ತಿದ್ದ ಒಬ್ಬ ಶಿಕ್ಷಕಿ ಹೊಸ ಸೀರೆ ಉಟ್ಟುಕೊಂಡು ಬಂದಾಗಲೆಲ್ಲ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಪ್ಪದೆ ತಿಳಿಸಿದ್ದೆವು. 
    
ಹುಟ್ಟುಹಬ್ಬ - ಮನೆಯವರು ಕಂಡಂತೆ 

ನಮ್ಮ ಮನೆಯಲ್ಲಿ ಹುಟ್ಟುಹಬ್ಬ ಎಂದರೆ ಹೊಸ ಬಟ್ಟೆ ಕೊಡಿಸುವುದು, ಏನಾದರು ಸಿಹಿಯನ್ನು ಮನೆಯಲ್ಲಿ ಮಾಡುವುದು, ಇತರರಿಗೆ ಹಂಚಲು ಚಾಕಲೇಟ್ ತರುವುದು ಹಾಗು ದೇವರಿಗೆ ಪೂಜೆ ಮಾಡುವುದು. ನಾನು ಚಿಕ್ಕವನಿದ್ದಾಗ ಹಲಸಿನ ಹಣ್ಣಿನಿಂದ ಮಾಡುವ ಕೊಟ್ಟೆಹಿಟ್ಟು ಹಾಗು ಎಣ್ಣೆಯಲ್ಲಿ ಹಿಟ್ಟನ್ನು ಕರಿದು ಮಾಡುವ ಸಿಹಿ ತಿನಿಸನ್ನು ಬಹಳ ಇಷ್ಟಪಡುತ್ತಿದ್ದೆ. ಹೀಗಾಗಿ ಒಳ್ಳೆಯ ಸಿಹಿ ಇರುವ ಹಲಸಿನ ಹಣ್ಣನ್ನು ಹುಡುಕಿ ಸಂಗ್ರಹಿಸುವ ಕೆಲಸ ಜೂನ್ ಆರಂಭದಲ್ಲಿ ನಡೆಯುತಿತ್ತು. ಹುಟ್ಟುಹಬ್ಬಕ್ಕೆ ಕೇಕ್ ತರುವುದು ರೂಢಿಯಲ್ಲಿರಲಿಲ್ಲ. ನಾನು ಇಂಜಿನಿಯರಿಂಗ್ ಓದುವ ಸಂದರ್ಭದಲ್ಲಿ ರಜೆಗೆ ಮನೆಯಲ್ಲಿ ಇರುವಾಗ ಹುಟ್ಟುಹಬ್ಬದ ದಿನ ಕೇಕ್ ತಂದು ಸಂಭ್ರಮಾಚರಣೆ ಮಾಡಿದ್ದೆವು. 

ಅದೆಷ್ಟೋ ಬಾರಿ ನನ್ನ ಹುಟ್ಟುಹಬ್ಬವನ್ನು ಎಲ್ಲರಂತೆ ಆಡಂಭರವಾಗಿ ಆಚರಿಸಿಲ್ಲ. ಅದಕ್ಕೆ ನನಗೆ ಯಾವ ರೀತಿಯ ಬೇಜಾರು ಇಲ್ಲ. ಪ್ರತಿ ವರ್ಷವೂ ಮಲೆನಾಡಿನ ಮಳೆಗಾಲದ ಆರಂಭದ ದಿನಗಳಲ್ಲಿ ಬರುವ ನನ್ನ ಹುಟ್ಟಿದಹಬ್ಬ ಏನಾದರು ಒಂದು ಸವಾಲನ್ನು ಹೊತ್ತು ತರುತ್ತದೆ. ಇಲ್ಲಿಯವರೆಗೆ ನನ್ನ ಮನಸ್ಸಿಗೆ ತೃಪ್ತಿಕರವಾಗುವ ಸಾಕಷ್ಟು ಸಾಧನೆಗಳನ್ನು ನಾನು ಮಾಡಿದ್ದೇನೆ. ಅದೆಷ್ಟೋ ತಪ್ಪುಗಳನ್ನು ಗೊತ್ತಿದ್ದೂ ಮಾಡಿದ್ದೇನೆ. ಮಧ್ಯರಾತ್ರಿ ೧೨ ಗಂಟೆಗೆ ಯಾರು ಶುಭಾಶಯ ಕೋರುವುದಿಲ್ಲ ಎಂಬ ಭರವಸೆಯೊಂದಿಗೆ ೧೦ ಗಂಟೆಗೆ ಮಲಗಿಬಿಡುತ್ತೇನೆ. ನನ್ನ ಪ್ರಕಾರ ವಯಸ್ಸಾಗುತ್ತಿದೆ ಎಂಬುದನ್ನು ನೆನಪಿಸಲು ಇದೊಂದು ದಿನವಷ್ಟೇ. ಮುಂದಿನ ವರ್ಷಕ್ಕೆ ಏನೆಲ್ಲಾ ಆಗಿರುತ್ತದೆ ಎಂದು ಕಾದು ನೋಡಬೇಕಷ್ಟೆ. 

ಕಾಮೆಂಟ್‌ಗಳು

- Follow us on

- Google Search