ಶಿಕ್ಷಣ ವ್ಯವಸ್ಥೆ

ನನ್ನ ಪ್ರಕಾರ ಶಿಕ್ಷಣವೆಂದರೆ ನಿರಂತರ ಕಲಿಕೆ. ಜ್ಞಾನದಿಂದ ತನ್ನ ಜೀವನ ನಿರ್ವಹಣೆಗೆ ಅಗತ್ಯವಾದ ದಾರಿಯನ್ನು ಕಂಡುಕೊಂಡು ಅದಕ್ಕೆ ಬೇಕಾದ ಕುಶಲತೆಯನ್ನು ಬೆಳೆಸಿಕೊಂಡು ನಿರಂತರವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗುವುದು ಜೀವನ ಸಾಗಿಸುವ ಸುಲಭ ವಿಧಾನ. ಆದರೆ, ನಿರಂತರ ಕಲಿಕೆಯನ್ನು ಪರೀಕ್ಷೆಗಳ ಅಂಕಗಳ ಮೂಲಕ ಅಳೆಯಲು ಸಾಧ್ಯವಿಲ್ಲ. ಜೀವನ ಪರೀಕ್ಷೆಗಳನ್ನು ಮೀರಿದ್ದು, ಜೀವನದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಶಾಲೆ ಕಾಲೇಜಿನಲ್ಲಿ ಕಲಿತದ್ದು ಸಲ್ಪ ಮಟ್ಟಿಗೆ ಸಹಾಯಕಾರಿಯಾಗಬಹುದೇ ಹೊರತು ಕೇವಲ ಅದರಿಂದಲೇ ಜೀವನ ಸಾಗುವುದಿಲ್ಲ. 

ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಉದ್ಯೋಗ ಗಿಟ್ಟಿಸುವುದನ್ನು ತನ್ನ ಮುಖ್ಯ ಗುರಿಯನ್ನಾಗಿ ಹೊಂದಿವೆ. ಇದು ನಮ್ಮ ಸಮಾಜದ ದೌರ್ಭಾಗ್ಯವೂ ಹೌದು. ಉದ್ಯೋಗ ಎಂದಾಕ್ಷಣ ಸಂಬಳದ ವಿಷಯ ಬಂದೇ ಬರುತ್ತದೆ. ಹೀಗಾಗಿ ಹೆಚ್ಚು ಸಂಬಳ ಸಿಗುವ ಕೆಲಸಗಳಿಗೆ ಸಂಬಂಧಿಸಿದ ವಿಷಯಗಳನ್ನೇ ಶಿಕ್ಷಣದ ಪ್ರಮುಖ ಭಾಗವಾಗಿ ಬಿಂಬಿಸಲಾಗುತ್ತಿದೆ. ಆದರೆ ಇಲ್ಲಿ ನಿಜವಾಗಿಯೂ ನಡೆಯುತ್ತಿರುವುದಾರೂ ಏನು ? ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿ ಲಾಭ ಮಾಡಲು ಪ್ರಯತ್ನಿಸುತ್ತಿರುವ ಬಂಡವಾಳಶಾಹಿಗಳಿಗೆ ಕಡಿಮೆ ಸಂಬಳಕ್ಕೆ ದುಡಿಯುವ ನೌಕರರನ್ನು ಸುಲಭವಾಗಿ ಒದಗಿಸುತ್ತಿರುವುದು ಇಂದಿನ ಶಿಕ್ಷಣ ವ್ಯವಸ್ಥೆ. 


ಒಬ್ಬ ಇಂಜಿನಿಯರ್  ವಿದ್ಯಾಭ್ಯಾಸ ಮುಗಿಸಲು ತನ್ನ ಜೀವನದ ಅಮೂಲ್ಯ ೨೨ ವರ್ಷಗಳನ್ನು ತೆಗೆದಿಡಬೇಕು. ಇಷ್ಟು ವರ್ಷಗಳ ಕಾಲ ಅಧ್ಯಯನ ಮಾಡಿದ್ದರೂ ಕೆಲಸಕ್ಕಾಗಿ ಹೊಸತಾಗಿ ನಿರಂತರವಾಗಿ ಕಲಿಯಬೇಕು. ಕೇವಲ ಸಂಪಾದನೆಗಾಗಿ ವಿದ್ಯಾಭ್ಯಾಸ ಮಾಡುವುದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಹುದು?
ಜಗತ್ತು ನಿರಂತರವಾಗಿ ಬದಲಾಗುತ್ತಿದೆ. ಇವತ್ತಿನ ಜೀವನ ಕಟ್ಟಿಕೊಡುವ ಕೌಶಲಗಳು ಮುಂದಿನ ಐದು ಹತ್ತು ವರ್ಷಗಳಿಗೆ ಯಾವ ಉಪಯೋಗಕ್ಕೂ ಬಾರದೆ ಇರಬಹುದು. ಇದರಿಂದಾಗಿ ನಿರಂತರ ಕಲಿಕೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಬೇಕು. ಇದರೊಂದಿಗೆ ನಿರಂತರ ಕಲಿಕೆಗೆ ಅವಶ್ಯಕತೆಯಿರುವ ಮನಸ್ಥಿತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಮೂಡಿಸುವ ಜವಾಬ್ದಾರಿ ಇಂದಿನ ಶಿಕ್ಷಣ ವ್ಯವಸ್ಥೆ ಹಾಗು ನಮ್ಮ ಸಮಾಜದ ಮೇಲಿದೆ ಎಂಬುದನ್ನು ಮರೆಯಬಾರದು. 

ಇಲ್ಲಸಲ್ಲದ ವಿಷಯಗಳನ್ನು ಮಕ್ಕಳ ಪಠ್ಯಪುಸ್ತಕಗಳಲ್ಲಿ ತುಂಬಿ, ಅದನ್ನು ಓದಿದರೆ ಮಾತ್ರ ವಿದ್ಯಾಭ್ಯಾಸ ಎನ್ನುವ ಮೌಢ್ಯತೆ ಪೋಷಕರಲ್ಲಿ ಹೋಗಬೇಕು. ಮಕ್ಕಳಲ್ಲಿ ಸ್ವಾಭಾವಿಕವಾಗಿ ಹೊಸ ವಿಷಯ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಈ ಕುತೂಹಲವನ್ನು ಕೆರಳಿಸುವ ಕೆಲಸ ಶಿಕ್ಷಣ ವ್ಯವಸ್ಥೆ ಮಾಡಬೇಕೆ ಹೊರತು ತಮ್ಮ ಪಠ್ಯ ಪುಸ್ತಕದಲ್ಲಿ ಇರುವುದುದನ್ನು ಕಲಿತಿಲ್ಲ ಎಂದು ಮಕ್ಕಳಲ್ಲಿ ಕೀಳರಿಮೆ ಮೂಡಿಸಬಾರದು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಕೀಳಾಗಿ ಕಾಣುವುದು ಕ್ರೌರ್ಯ ಮಾತ್ರವಲ್ಲದೆ ಒಂದು ರೀತಿಯ ಅಮಾನವೀಯ ಪದ್ಧತಿ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಕೀಳರಿಮೆಯ ಹಣೆಪಟ್ಟಿ ಕಟ್ಟಿದರೆ ಅದು ಅವರ ಭವಿಷ್ಯಕ್ಕೆ ಮಾಡುವ ಆಘಾತವನ್ನು ಅಂದಾಜಿಸಲು ಸಹ ಸಾಧ್ಯವಿಲ್ಲ. 


ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕಾದರೆ ಈ ಗೊಡ್ಡು ನಂಬಿಕೆಗಳನ್ನು ಬದಿಗಿಟ್ಟು ಮಾನವೀಯತೆಯ ದೃಷ್ಟಿಯಿಂದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣವಾಗಿ ಮುಚ್ಚಬೇಕು. ಸರ್ಕಾರಿ ಶಾಲೆಗಳು ಮಾತ್ರ ಅಸ್ತಿತ್ವದಲ್ಲಿ ಇರಬೇಕು. ಆಗ ಸಮಾಜದ ವಿವಿಧ ವರ್ಗದ ಜನರಿಗೆ ಶಿಕ್ಷಣದಲ್ಲಿ ಸಮಾನ ಅವಕಾಶ ದೊರೆಯುತ್ತದೆ. ಶ್ರೀಮಂತರು ಸಹ ಸರ್ಕಾರೀ ಶಾಲೆಗಳು ಅಭಿವೃದ್ಧಿ ಆಗುವಂತಹ ಪ್ರಶ್ನೆಗಳನ್ನು ಸರ್ಕಾರದ ಮುಂದಿಡುತ್ತಾರೆ. ಈ ಬದಲಾವಣೆ ನಮ್ಮ ದೇಶದಲ್ಲಿ ಆದಾಗ ಅದೊಂದು ಸಾಮಾಜಿಕ ಕ್ರಾಂತಿಯ ಮುನ್ನುಡಿಯಾಗುತ್ತದೆ. ಶಿಕ್ಷಣವನ್ನು ಉದ್ಯೋಗವಾಗಿ ನೋಡುವ ವ್ಯವಸ್ಥೆ ಕೊನೆಗೊಳ್ಳಬೇಕು.

ಈ ವಿಷಯಕ್ಕೆ ಸಂಬಂಧಿಸಿದ ಒಂದು ಅದ್ಬುತ ವಿಡಿಯೋ ಕೆಳಗೆ ಹಾಕಿದ್ದೇನೆ ತಪ್ಪದೆ ನೋಡಿ. 


ಕಾಮೆಂಟ್‌ಗಳು

- Follow us on

- Google Search