ಬೆಂಗಳೂರಿನ ಐಟಿ ಕಂಪೆನಿಗಳು

ತನ್ನ ಇಷ್ಟ ಕಷ್ಟಗಳ ಬಗ್ಗೆ ಅರಿವಿಲ್ಲದ ಬುದ್ಧಿವಂತರು ಅನುಭವಿಸುವ ಯಾತನೆಗಳಿಗೆ ಲೆಕ್ಕವೇ ಇರುವುದಿಲ್ಲ. ಒಳ್ಳೆಯ ಸಂಬಳ ಎಷ್ಟು ದಿನ ಒಬ್ಬ ವ್ಯಕ್ತಿಯ ಮನಸ್ಸಿನ ಭಾವನೆಗಳನ್ನು ಹತ್ತಿಕ್ಕಬಲ್ಲದು? ಸೂರ್ಯನ ಕಿರಣಗಳು ತಾಗದ ಹವಾನಿಯಂತ್ರಿತ ಕೊಠಡಿಗಳಲ್ಲಿ ಬಂಧಿಸಲ್ಪಿಟ್ಟಿರುವ ಅದೆಷ್ಟೋ ಐಟಿ ಜೀವಿಗಳ ಕಥೆಯಿದು.  

ಈ ಬೆಂಗಳೂರಿನ ಐಟಿ ಕಂಪೆನಿಗಳಲ್ಲಿ ಹೆಚ್ಚಾಗಿ ಇರುವುದು ಬೇರೆ ರಾಜ್ಯದ ಜನರು. ತಮ್ಮ ಭಾಷೆಯನ್ನು ಮಾತನಾಡುವ ಜನರೊಂದಿಗೆ ಇವರು ವರ್ತಿಸುವುದಕ್ಕೂ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವವರೊಂದಿಗೆ ವರ್ತಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಕಂಪನಿಯ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳು ಇದ್ದಕ್ಕಿದಂತೆ ಜಾಗೃತವಾಗುತ್ತವೆ ನಮ್ಮಂತಹ ಕನ್ನಡಿಗರನ್ನು ಕಂಡರೆ. ಬೇರೆ ಕ್ಷೇತ್ರದಲ್ಲಿ ಇರುವಂತೆ ಜಗಳಗಳು, ಅಭಿಪ್ರಾಯಗಳ ಅಭಿವ್ಯಕ್ತಿ ಇಲ್ಲಿ ನೇರವಾಗಿ ಯಾವುದೂ ನಡೆಯುವುದಿಲ್ಲ. ಒಂದು ರೀತಿಯ Passive Aggressive Behavior ಅನ್ನು ಮ್ಯಾನೇಜರ್ಗಳು ತಮ್ಮ ಕೆಳಗಿನ ಕೆಲಸಗಾರರ ಮೇಲೆ ತೋರುತ್ತಾರೆ. ಅದೆಷ್ಟೋ ಬಾರಿ ಸರಿಯಾಗಿ ನಿರ್ದೇಶನ ನೀಡದೆ ಒಂದು ದಿನದಲ್ಲಾಗುವ ಕೆಲಸವನ್ನು ಹಲವಾರು ದಿನಗಳ ಕಾಲ ಮಾಡಿಸಿ ಮತ್ತೆ ಬುದ್ದಿವಾದ ಹೇಳುವ ಕಿಡಿಗೇಡಿತನವನ್ನು ಮ್ಯಾನೇಜರ್ ಪ್ರದರ್ಶಿಸುತ್ತಾರೆ. 


ಕನ್ನಡ ಮಾತನಾಡಲು ಬರುವವರು ಸಹ ಕೆಲಸದ ವಿಷಯಗಳಲ್ಲಿ ಇಂಗ್ಲಿಷ್ ಮೊರೆ ಹೋಗುತ್ತಾರೆ. ಸಹ ಕೆಲಸಗಾರರ ಜೊತೆಯಲ್ಲಿ ತಮಗೂ ಹಿಂದಿ ಬರುತ್ತದೆ ಎಂದು ತೋರಿಸಿಕೊಳ್ಳುವ ಹಲವರಿದ್ದಾರೆ. ಅದೆಷ್ಟೋ ಸಂದರ್ಶನಗಳಲ್ಲಿ ಕೇವಲ ಭಾಷೆಯ ಆಧಾರದ ಮೇಲೆ ಜನರನ್ನು ಆಯ್ಕೆ ಮಾಡುವ ಜನರು ನಮಗೆ ಸಮಾನತೆಯ ಪಾಠ ಮಾಡಲು ಬರುತ್ತಾರೆ. ನಮ್ಮ ನಾಡಿನಲ್ಲಿ ನೆಲೆಸಿ, ಇಲ್ಲಿನ ಅನ್ನ ನೀರು ತಿಂದು ಕನ್ನಡವನ್ನು ಕೀಳಾಗಿ ಕಾಣುವ ಇವರ ಜೊತೆ ಇರಲು ಸಾಧ್ಯವೇ ? 
ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಅದೆಷ್ಟೋ ಜನರು ಕನ್ನಡ ಓದಲು ಬರೆಯಲು ಹೆಣಗಾಡುವುದನ್ನು ಕಂಡರೆ ಸಂಕಟವಾಗುತ್ತದೆ. ನಮ್ಮ ರಾಜ್ಯದ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ನೀಡುವ ಕಾನೂನನ್ನು ಏಕೆ ಜಾರಿ ಮಾಡಿಲ್ಲ ಎಂಬಿತ್ಯಾದಿ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. 

ಇಂತಹ ಸಮಸ್ಯೆಗಳು ನಾವು ಮಾಡುವ ಕೆಲಸದ ಮೇಲೆ ಅಷ್ಟೇನೂ ಪರಿಣಾಮ ಬೀರದೆ ಇರಬಹುದು. ಆದರೆ, ನಮ್ಮ ನಾಡಿನ ಭಾಷೆ ಹಾಗು ಸಂಸ್ಕೃತಿಯ ಮೇಲೆ ಎಂದಿಗೂ ಸರಿಪಡಿಸಲಾಗದ ಪರಿಣಾಮವನ್ನು ಬೀರುತ್ತವೆ. ಬೇರೆ ರಾಜ್ಯಗಳು ತಮ್ಮ ಜನರಿಗೆ ಉದ್ಯೋಗಾವಕಾಶಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿವೆ. ನಮ್ಮ ರಾಜ್ಯದ ಜನರು ಮಾತ್ರ ಒಳ್ಳೆಯ ವಿದ್ಯಾಭ್ಯಾಸವಿದ್ದರೂ ಅದಕ್ಕೆ ತಕ್ಕ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಒಂದು ಸಣ್ಣ ಪ್ರಶ್ನೆಯನ್ನು ಓದುಗರಲ್ಲಿ ಕೇಳಬಯುಸುತ್ತೇನೆ, ಕೆಲಸಕ್ಕಾಗಿ ಸಂದರ್ಶನ ನಡೆಯುವ ಸಂದರ್ಭದಲ್ಲಿ ಬೇರೆ ರಾಜ್ಯದವರೇ ಯಾಕೆ ಹೆಚ್ಚು ತೇರ್ಗಡೆಯಾಗುತ್ತಾರೆ? ಅದು ಅವರ ಪ್ರತಿಭೆ ಎಂದುಕೊಳ್ಳುವುದು ನಮ್ಮ ಮೂರ್ಖತನವೇ ಸರಿ. ಸಂದರ್ಶನ ನಡೆಸುವ ಮ್ಯಾನೇಜರ್ ಯಾವ ಭಾಷೆ ಮಾತನಾಡುತ್ತಾನೋ, ಆ ಭಾಷೆಯ ಅಥವಾ ರಾಜ್ಯದ ವ್ಯಕ್ತಿಗೆ ಕೆಲಸ ಸಿಗುವ ಅವಕಾಶ ಹೆಚ್ಚು. ಹೀಗಾಗಿ ಇವತ್ತಿನ ದಿನಗಳಲ್ಲಿ ಕಾರ್ಪೊರೇಟ್ ಕಂಪೆನಿಗಳಲ್ಲಿ ಬೇರೆ ರಾಜ್ಯದ ಜನರು ತುಂಬಿ ತುಳುಕುತ್ತಿದ್ದಾರೆ. 


ಯಾವ ಭಾಷೆಯನ್ನೇ ಮಾತಾಡಲಿ, ಅವರು ನಮ್ಮಂತೆಯೇ ಮನುಷ್ಯರು. ನಮ್ಮ ಭಾಷೆಯನ್ನು ಕೀಳಾಗಿ ಕಂಡಾಗ ಖಂಡಿಸೋಣ, ಸಾಧ್ಯವಾದಷ್ಟು ಕನ್ನಡ ಬಳಸೋಣ ಎಂಬಿತ್ಯಾದಿ ಯೋಚನೆಗಳು ಮೂಡುತ್ತವೆ. ಹೊಸದಾಗಿ ನೂರು ಜನ ಕೆಲಸಕ್ಕೆ ಸೇರಿದರೆ ೯೫ ಜನ ಬೇರೆ ಭಾಷೆಯವರೇ ಇರುತ್ತಾರೆ. ನಮ್ಮ ನಾಡಿನಲ್ಲೇ ನಮ್ಮನ್ನು ಅಲ್ಪಸಂಖ್ಯಾತರ ರೀತಿ ಈ ಐಟಿ ಸಂಸ್ಥೆಗಳು ಬಿಂಬಿಸುತ್ತವೆ. ಕೇವಲ ಕೆಲಸ ಚೆನ್ನಾಗಿ ಮಾಡುವುದರ ಬಗ್ಗೆ ಯೋಚನೆಗಳು ಇದ್ದಲ್ಲಿ ಇಂತಹ ಸಂದಿಗ್ದ ಪರಿಸ್ಥಿತಿಯಿಂದ ಪಾರಾಗಬಹುದು. ಎಷ್ಟೋ ಜನ ಇವನ್ನೆಲ್ಲಾ ತಲೆಗೆ ಹಾಕಿಕೊಳ್ಳದೆ ತಮ್ಮ ಪಾಡಿಗೆ ತಾವಿರುತ್ತಾರೆ. ಬಹುಷಃ ಆ ಮೌನವೇ ನಮ್ಮನ್ನು ಈ ರೀತಿಯ ದಬ್ಬಾಳಿಕೆಗೆ ನೂಕಿತೆ ? 

ಕಾಮೆಂಟ್‌ಗಳು

- Follow us on

- Google Search